Blog

  • ಮಂಡ್ಯದಲ್ಲಿ ಎಆರ್‌ಎಐ (ARAI) ಸಂಶೋಧನಾ ಕೇಂದ್ರ ಸ್ಥಾಪನೆ

    ಮಂಡ್ಯದಲ್ಲಿ ಎಆರ್‌ಎಐ (ARAI) ಸಂಶೋಧನಾ ಕೇಂದ್ರ ಸ್ಥಾಪನೆ

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ವಿಶ್ವದರ್ಜೆಯ ‘ಭಾರತದ ಮೋಟಾರು ವಾಹನ (ಆಟೋಮೋಟಿವ್) ಸಂಶೋಧನಾ ಸಂಸ್ಥೆ’ (ARAI) ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

    ಯೋಜನೆಯ ಪ್ರಮುಖ ವಿವರಗಳು:

    • ಸ್ಥಳ:- ಮಂಡ್ಯದಿಂದ ಸುಮಾರು 30 ಕಿ.ಮೀ ಮತ್ತು ಮಂಡ್ಯ-ನಾಗಮಂಗಲ ರಾಜ್ಯ ಹೆದ್ದಾರಿಯಿಂದ 500 ಮೀಟರ್ ದೂರದಲ್ಲಿರುವ ಬಸರಾಳು ಹೋಬಳಿಯ ಮುದ್ದನಘಟ್ಟ ಮತ್ತು ಹೆಗ್ಗಡಿತಿಹಳ್ಳಿ ಗ್ರಾಮಗಳಲ್ಲಿ ಈ ಯೋಜನೆಗಾಗಿ ಕರ್ನಾಟಕ ಸರ್ಕಾರವು 105 ಎಕರೆ ಭೂಮಿಯನ್ನು ಗುರುತಿಸಿದೆ.
    • ವಿಶೇಷತೆ:- ಈ ಕೇಂದ್ರವು ವಿಶಾಲವಾದ ಮೋಟಾರು ವಾಹನೋದ್ಯಮ ವಲಯಕ್ಕೆ ಸೇವೆ ಸಲ್ಲಿಸಿದರೂ, ಇದನ್ನು ಭಾರತದ ಮೊಟ್ಟಮೊದಲ ಮೀಸಲಾದ ‘ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ’ ಎಂದು ಪ್ರಸ್ತಾಪಿಸಲಾಗಿದೆ.
    • ಪ್ರಾದೇಶಿಕ ಪ್ರಭಾವ:- ಈ ಸಂಶೋಧನಾ ಕೇಂದ್ರವು ಕರ್ನಾಟಕದಾದ್ಯಂತ ವಾಹನ ಕೈಗಾರಿಕಾ ವಲಯವನ್ನು ಉತ್ತೇಜಿಸುವ ನಿರೀಕ್ಷೆಯಿದ್ದು, ನಿರ್ದಿಷ್ಟವಾಗಿ ಮಂಡ್ಯ ಮತ್ತು ಮೈಸೂರು ಭಾಗಗಳ ಆರ್ಥಿಕತೆಗೆ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.
    • ಹೂಡಿಕೆ:- ಈ ಯೋಜನೆಯನ್ನು ಒಟ್ಟು ₹500 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು.
  • ಉಡುಪಿಯಲ್ಲಿ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ

    ಉಡುಪಿಯಲ್ಲಿ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ

    ಇದೀಗ ಸುದ್ದಿಯಲ್ಲಿದೆ:

    • ‘ಜಾಗತಿಕವಾಗಿ ಸ್ಪರ್ಧಾತ್ಮಕ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸುವ ರಾಷ್ಟ್ರೀಯ ಮಿಷನ್’ನ ಅಡಿಯಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಉಡುಪಿ ಜಿಲ್ಲೆಯ ನಾಲ್ಕು ಸ್ಥಳಗಳನ್ನು ಗುರುತಿಸಿದೆ.

    ಪ್ರಮುಖ ವಿವರಗಳು:

    • ಗುರುತಿಸಲಾದ ತಾಣಗಳು:- ಕೋಡಿ-ಕನ್ಯಾನ, ಕೋಡಿ-ಕುಂದಾಪುರ, ಬಾರ್ಕೂರು ಬಂದರು ಪ್ರದೇಶ ಮತ್ತು ತ್ರಾಸಿ-ಮರವಂತೆ. 
    • ಅಂತಿಮ ಆಯ್ಕೆ:- ಅಂತರರಾಷ್ಟ್ರೀಯ ಗುಣಮಟ್ಟವನ್ನು ಪೂರೈಸಲು ಮತ್ತು ಸಮಗ್ರ ಅಭಿವೃದ್ಧಿಗಾಗಿ ಈ ನಾಲ್ಕು ತಾಣಗಳಲ್ಲಿ ಒಂದನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.
    • ಉದ್ದೇಶ:- ನೈಸರ್ಗಿಕ ಮತ್ತು ಸಾಂಸ್ಕೃತಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಸುಸ್ಥಿರ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮದ ಮೇಲೆ ಕೇಂದ್ರೀಕರಿಸಿ, ಭಾರತದಾದ್ಯಂತ 50 ಕ್ಕೂ ಹೆಚ್ಚು ಜಾಗತಿಕ ಮಟ್ಟದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ.

    ಪ್ರಮುಖ ವೈಶಿಷ್ಟ್ಯಗಳು:- ಆಯ್ಕೆಯಾದ ಪ್ರವಾಸಿ ತಾಣಗಳು ಈ ಕೆಳಗಿನ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತವೆ:

    • ನವೀಕರಿಸಬಹುದಾದ ಇಂಧನದ ಬಳಕೆ.
    • ಜಾಗತಿಕ ಮಟ್ಟಕ್ಕೆ ಸರಿಸಮಾನವಾಗಿ ಅಭಿವೃದ್ಧಿಪಡಿಸಲಾದ ಮೂಲಸೌಕರ್ಯ.
    • ಪರಿಸರ ಸ್ನೇಹಿ ಸೌಲಭ್ಯಗಳು.
    • ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಜಾಗತಿಕ ಮಾರುಕಟ್ಟೆ ಪ್ರಚಾರಗಳು.
    • ಹಣಕಾಸು:- ಅಖಿಲ-ಭಾರತ ಮಟ್ಟದ ಈ ಯೋಜನೆಗಾಗಿ ಕೇಂದ್ರ ಸರ್ಕಾರವು ₹300 ಕೋಟಿ ಅನುದಾನವನ್ನು ಮೀಸಲಿಟ್ಟಿದೆ.
  • ಶ್ವಾಸಗತ ನೈಟ್ರಿಕ್ ಆಕ್ಸೈಡ್ (Inhaled Nitric Oxide) | ದೇಶದ ಮೊದಲ ನೀರೊಳಗಿನ ರಸ್ತೆ-ರೈಲು ಸುರಂಗ ಮಾರ್ಗ ಯೋಜನೆ | ಸ್ಟಾರ್ಟ್ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ (ನಿಧಿಗಳ ನಿಧಿ) 2.0

    ಶ್ವಾಸಗತ ನೈಟ್ರಿಕ್ ಆಕ್ಸೈಡ್ (Inhaled Nitric Oxide)

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಹೆಚ್ಚಿನ ಪ್ರಮಾಣದ ನೈಟ್ರಿಕ್ ಆಕ್ಸೈಡ್ ಅನ್ನು ಉಸಿರಾಟದ ಮೂಲಕ ಸೇವಿಸುವುದರಿಂದ (ಶ್ವಾಸಗತ), ಬಹು-ಔಷಧ ನಿರೋಧಕ ಶ್ವಾಸಕೋಶದ ಉರಿಯೂತ (ನ್ಯುಮೋನಿಯಾ) ವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

    ಪ್ರಸ್ತುತತೆ:

    • ಭಾರತವು ಸೂಕ್ಷ್ಮಾಣುಜೀವಿ ನಿರೋಧಕತೆ (AMR – ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್) ಮತ್ತು ಆಸ್ಪತ್ರೆಯಿಂದ ಹರಡುವ ಸೋಂಕುಗಳ ಹೆಚ್ಚಿನ ಹೊರೆಯನ್ನು ಎದುರಿಸುತ್ತಿದೆ. ವಿಶೇಷವಾಗಿ, ತೀವ್ರ ನಿಗಾ ಘಟಕಗಳಲ್ಲಿ (ICUs) ಔಷಧ-ನಿರೋಧಕ ನ್ಯುಮೋನಿಯಾ ಒಂದು ಗಂಭೀರ ಅಪಾಯಕಾರಿಯಾಗಿ ಪರಿಣಮಿಸಿದೆ.
    • ಇದಕ್ಕೆ ‘ಸ್ಯೂಡೋಮೊನಾಸ್ ಎರುಜಿನೋಸಾ’ (Pseudomonas aeruginosa) ಎಂಬ ಬ್ಯಾಕ್ಟೀರಿಯಾ ಪ್ರಮುಖ ಕಾರಣವಾಗಿದೆ. ಆಸ್ಪತ್ರೆಯಿಂದ ಹರಡುವ ನ್ಯುಮೋನಿಯಾ ಪ್ರಕರಣಗಳಲ್ಲಿ ಸುಮಾರು ಐದನೇ ಒಂದರಷ್ಟು (1/5) ಭಾಗಕ್ಕೆ ಈ ಬ್ಯಾಕ್ಟೀರಿಯಾವೇ ಕಾರಣವಾಗಿದೆ.

    ನೈಟ್ರಿಕ್ ಆಕ್ಸೈಡ್ ನ ಬಗ್ಗೆ: 

    • ನೈಟ್ರಿಕ್ ಆಕ್ಸೈಡ್ (NO) ಒಂದು ಬಣ್ಣರಹಿತ, ಅನಿಲ ರೂಪದ ಮುಕ್ತ/ಸ್ವತಂತ್ರ ಪ್ರತಿಕ್ರಿಯಾತ್ಮಕ ಕಣದ ಅಣುವಾಗಿದೆ.
    • ಇದು ಒಂದು ಸಾರಜನಕ ಮತ್ತು ಒಂದು ಆಮ್ಲಜನಕ ಪರಮಾಣುವಿನಿಂದ ಮಾಡಲ್ಪಟ್ಟಿದೆ.
    • ಉತ್ಪಾದನೆ:- ಇದು ‘ಎಲ್-ಆರ್ಜಿನಿನ್’ (L-arginine) ಎಂಬ ಅಮೈನೋ ಆಮ್ಲದಿಂದ ಮಾನವನ ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಅನಿಲವಾಗಿದೆ. 
    • ಸೊಪ್ಪು, ಬೀಟ್‌ರೂಟ್ ಮತ್ತು ಬೆಳ್ಳುಳ್ಳಿಯಂತಹ ನೈಟ್ರೇಟ ಭರಿತ ಆಹಾರಗಳ ಸೇವನೆಯ ಮೂಲಕ ಇದರ ಉತ್ಪಾದನಾ ಪ್ರಕ್ರಿಯೆಯನ್ನು ಹೆಚ್ಚಿಸಬಹುದು.
    • ಕಾರ್ಯಗಳು:- ಇದು ನರಸಂವಾಹಕವಾಗಿ, ರೋಗನಿರೋಧಕ ವ್ಯವಸ್ಥೆಯ ನಿಯಂತ್ರಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೊಸ ರಕ್ತನಾಳಗಳ ರಚನೆ (ಆಂಜಿಯೋಜೆನೆಸಿಸ್) ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.
    • ಪ್ರಾಮುಖ್ಯತೆ:- ಶ್ವಾಸಕೋಶದಲ್ಲಿನ ರಕ್ತನಾಳಗಳನ್ನು ವಿಸ್ತರಿಸುವ ಮೂಲಕ ಇದು ದೇಹದಲ್ಲಿ ಆಮ್ಲಜನಕದ ಪೂರೈಕೆಯನ್ನು ಸುಧಾರಿಸುತ್ತದೆ.
    • ಅಡ್ಡಪರಿಣಾಮಗಳ ಅಪಾಯ:- ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ‘ಮೆಥೆಮೊಗ್ಲೋಬಿನೆಮಿಯಾ’ ಉಂಟಾಗುವ ಅಪಾಯವಿರುತ್ತದೆ ಹಾಗೂ ಶ್ವಾಸಕೋಶದ ಹಾನಿಗೆ ಕಾರಣವಾಗುವ ಸಂಭವವಿರುತ್ತದೆ.

    ದೇಶದ ಮೊದಲ ನೀರೊಳಗಿನ ರಸ್ತೆ-ರೈಲು ಸುರಂಗ ಮಾರ್ಗ ಯೋಜನೆ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ದೇಶದ ಮೊಟ್ಟಮೊದಲ ‘ನೀರೊಳಗಿನ ಅವಳಿ ರಸ್ತೆ ಮತ್ತು ರೈಲು ಸುರಂಗ ಯೋಜನೆ’ಯ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಈ ಯೋಜನೆಯ ಅಂದಾಜು ವೆಚ್ಚ ₹ 18,662 ಕೋಟಿ ರೂಪಾಯಿಗಳಾಗಿದೆ.

    ಈ ಯೋಜನೆಯ ಬಗ್ಗೆ:

    • ಉದ್ದ:- ಇದು ಸುಮಾರು 34 ಕಿಲೋಮೀಟರ್ ಉದ್ದದ, ನಾಲ್ಕು-ಪಥದ ‘ಪ್ರವೇಶ-ನಿಯಂತ್ರಿತ ಸಂಪೂರ್ಣ ಹೊಸ ಮಾರ್ಗದ (ಗ್ರೀನ್‌ಫೀಲ್ಡ್) ಸಂಪರ್ಕ ಯೋಜನೆ’ಯಾಗಿದೆ.
    • ವೈಶಿಷ್ಟ್ಯಗಳು:- ಇದು ರಸ್ತೆ ಮತ್ತು ರೈಲು ಸಂಚಾರ ಎರಡರ ಸುಗಮ ಹಾಗೂ ಹೆಚ್ಚಿನ ಸಾಮರ್ಥ್ಯದ ಚಲನೆಯನ್ನು ಸುಗಮಗೊಳಿಸಲು ವಿನ್ಯಾಸಗೊಳಿಸಲಾದ ಎರಡು ಸಮಾನಾಂತರ ಸುರಂಗಗಳನ್ನು ಒಳಗೊಂಡಿರುತ್ತದೆ.
    • ಸಂಪರ್ಕ:- ಅಸ್ಸಾಂನ ರಾಷ್ಟ್ರೀಯ ಹೆದ್ದಾರಿ-15 ರ (NH-15) ‘ಗೊಹ್‌ಪುರ್’ ಮತ್ತು ರಾಷ್ಟ್ರೀಯ ಹೆದ್ದಾರಿ-715 ರ (NH-715) ‘ನುಮಾಲಿಗಢ’ವನ್ನು ಸಂಪರ್ಕಿಸುತ್ತದೆ. 
    • ಇದು ಅಸ್ಸಾಂನ ಈ ಎರಡು ನಗರಗಳ ನಡುವಿನ ಪ್ರಸ್ತುತ 240 ಕಿಲೋಮೀಟರ್ ದೂರವನ್ನು ಕೇವಲ 34 ಕಿಲೋಮೀಟರ್‌ಗಳಿಗೆ ತಗ್ಗಿಸುತ್ತದೆ.
    • ಇದರಿಂದ ಪ್ರಯಾಣದ ಸಮಯವು ಪ್ರಸ್ತುತ ಇರುವ ಆರು ಗಂಟೆಗಳಿಂದ ಕೇವಲ 20 ನಿಮಿಷಗಳಿಗೆ ಇಳಿಕೆಯಾಗಲಿದೆ.
    • ಪ್ರಾಮುಖ್ಯತೆ:- ಈ ಯೋಜನೆಯು ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಇತರ ಈಶಾನ್ಯ ರಾಜ್ಯಗಳಿಗೆ ಗಣನೀಯ ಪ್ರಮಾಣದಲ್ಲಿ ಪ್ರಯೋಜನವನ್ನು ಒದಗಿಸಲಿದೆ.
    • ಇದು ಸಂಪರ್ಕವನ್ನು ಹೆಚ್ಚಿಸುತ್ತದೆ, ಸಾರಿಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಅಸ್ಸಾಂ ಹಾಗೂ ಇಡೀ ಈಶಾನ್ಯ ಭಾರತದಾದ್ಯಂತ ಅಭಿವೃದ್ಧಿಯನ್ನು ಚುರುಕುಗೊಳಿಸುತ್ತದೆ.

    ಬ್ರಹ್ಮಪುತ್ರ ನದಿಯ ಬಗ್ಗೆ:

    • ಬ್ರಹ್ಮಪುತ್ರ ನದಿಯು ಏಷ್ಯಾದ ಪ್ರಮುಖ ಗಡಿಯಾಚೆಗಿನ (ಅಂತರರಾಷ್ಟ್ರೀಯ ಗಡಿಗಳನ್ನು ಹಾದುಹರಿಯುವ) ನದಿಯಾಗಿದೆ.
    • ಇದು ಟಿಬೆಟ್‌ನ ಮಾನಸ ಸರೋವರದ (ಮಪಮ್ ಯುಮ್ಕೊ) ಬಳಿಯ ‘ಚೆಮಾಯುಂಗ್‌ಡುಂಗ್’ ಹಿಮನದಿಯಿಂದ ಉಗಮಿಸುತ್ತದೆ.
    • ಈ ನದಿಯನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.
    • ಟಿಬೆಟ್‌ನಲ್ಲಿ (ನದಿಯ ಮೇಲ್ಭಾಗದ ಅತಿ ಉದ್ದದ ಹರಿವು) ‘ಯಾರ್ಲುಂಗ್ ತ್ಸಾಂಗ್ಪೋ’.
    • ಅರುಣಾಚಲ ಪ್ರದೇಶದಲ್ಲಿ ‘ಸಿಯಾಂಗ್’ ಅಥವಾ ‘ದಿಹಾಂಗ್’.
    • ಅಸ್ಸಾಂನಲ್ಲಿ ‘ಬ್ರಹ್ಮಪುತ್ರ’
    • ಬಾಂಗ್ಲಾದೇಶದಲ್ಲಿ ‘ಜಮುನಾ’.
    • ಇದು ಟಿಬೆಟ್ ಪ್ರಸ್ಥಭೂಮಿಯ ಮೂಲಕ ಪೂರ್ವಕ್ಕೆ ಹರಿದು, ಅರುಣಾಚಲ ಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸುತ್ತದೆ. ಅಸ್ಸಾಂನ ಬಯಲು ಸೀಮೆಯಲ್ಲಿ ವಿಸ್ತಾರವಾಗಿ ಹರಿಯುವ ಇದು, ಬಂಗಾಳಕೊಲ್ಲಿಯನ್ನು ಸೇರುವ ಮೊದಲು ಬಾಂಗ್ಲಾದೇಶದಲ್ಲಿ ಗಂಗಾ ನದಿಯೊಂದಿಗೆ ವಿಲೀನಗೊಳ್ಳುತ್ತದೆ.

    ಸ್ಟಾರ್ಟ್ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ (ನಿಧಿಗಳ ನಿಧಿ) 2.0

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಕೇಂದ್ರ ಸಚಿವ ಸಂಪುಟವು ₹10,000 ಕೋಟಿ ರೂ.ಗಳ ನಿಧಿಯೊಂದಿಗೆ ‘ಸ್ಟಾರ್ಟ್ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ 2.0’ (FoF 2.0) ಸ್ಥಾಪನೆಗೆ ಅನುಮೋದನೆ ನೀಡಿದೆ.
    • ಈ ನಡೆ ದೇಶದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಸ್ಟಾರ್ಟ್‌ಅಪ್ (ನವೋದ್ಯಮ) ಪರಿಸರ ವ್ಯವಸ್ಥೆಗೆ ‘ವೆಂಚರ್ ಕ್ಯಾಪಿಟಲ್’ (ಸಾಹಸೋದ್ಯಮ ಬಂಡವಾಳ) ಅನ್ನು ಕ್ರೂಢೀಕರಿಸುವ ಉದ್ದೇಶವಾಗಿದೆ.

    ವೆಂಚರ್ ಕ್ಯಾಪಿಟಲ್ (ಸಾಹಸೋದ್ಯಮ ಬಂಡವಾಳ) ನ ಬಗ್ಗೆ:

    • ವ್ಯಾಖ್ಯಾನ:- ದೀರ್ಘಾವಧಿಯ ಬೆಳವಣಿಗೆಯನ್ನು ನಿರೀಕ್ಷಿಸಿ, ಉದಯೋನ್ಮುಖ ಕಂಪನಿಗಳಿಗೆ (ನವೋದ್ಯಮಗಳಿಗೆ) ಶ್ರೀಮಂತ ವ್ಯಕ್ತಿಗಳು ಅಥವಾ ಸಾಂಸ್ಥಿಕ ಹೂಡಿಕೆದಾರರು ಒದಗಿಸುವ ಆರ್ಥಿಕ ಬೆಂಬಲ ಅಥವಾ ನಿಧಿಯನ್ನೇ  ‘ವೆಂಚರ್ ಕ್ಯಾಪಿಟಲ್’ ಎನ್ನಲಾಗುತ್ತದೆ. 
    • ಸ್ವರೂಪ:- ಇದು ಹೆಚ್ಚಿನ ಅಪಾಯದಿಂದ ಕೂಡಿದ್ದರೂ, ಹೆಚ್ಚಿನ ಲಾಭದ ಅಥವಾ ಆದಾಯದ ಸಾಮರ್ಥ್ಯವನ್ನು ಹೊಂದಿದೆ.
    • ಹೂಡಿಕೆಯ ವಿಧಾನಗಳು:- ಇದನ್ನು ಇಕ್ವಿಟಿ (ಷೇರುಪಾಲು), ಡಿಬೆಂಚರ್‌ಗಳು (ಸಾಲಪತ್ರಗಳು) ಅಥವಾ ಷರತ್ತುಬದ್ಧ ಸಾಲಗಳ ಮೂಲಕ ಒದಗಿಸಬಹುದು.

    ಸ್ಟಾರ್ಟ್ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ 2.0 (FoF 2.0) ನ ಬಗ್ಗೆ:

    • ಉದ್ದೇಶ:- ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್ಅಪ್ ವ್ಯವಸ್ಥೆಗೆ ಅಗತ್ಯವಿರುವ ಸಾಹಸೋದ್ಯಮ ಬಂಡವಾಳವನ್ನು ಒಟ್ಟುಗೂಡಿಸುವುದು ಮತ್ತು ಆರ್ಥಿಕ ಬೆಂಬಲ ನೀಡುವುದು. 

    ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮದ ಬಗ್ಗೆ:

    • ಪ್ರಾರಂಭ:- ಜನವರಿ 16, 2016.
    • ಉದ್ದೇಶ:- ದೇಶದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಹೂಡಿಕೆ-ಪ್ರೇರಿತ ಆರ್ಥಿಕ ಬೆಳವಣಿಗೆಯನ್ನು ಸಕ್ರಿಯಗೊಳಿಸುವುದು.

    ಭಾರತದ ನವೋದ್ಯಮ ಪರಿಸರ ವ್ಯವಸ್ಥೆ:

    • ಬೆಳವಣಿಗೆ:- ಭಾರತವು ವಿಶ್ವದ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ವೇಗವಾಗಿ ವಿಕಸನಗೊಂಡಿದ್ದು, 2025 ರ ಹೊತ್ತಿಗೆ 2 ಲಕ್ಷಕ್ಕೂ ಹೆಚ್ಚು ನವೋದ್ಯಮಗಳನ್ನು ಹೊಂದಿದೆ.
    • ಜಾಗತಿಕ ಸ್ಥಾನ:- ಭಾರತವು ಪ್ರಸ್ತುತ ಜಗತ್ತಿನ 3ನೇ ಅತಿದೊಡ್ಡ ನವೋದ್ಯಮ (ಸ್ಟಾರ್ಟ್ಅಪ್) ಪರಿಸರ ವ್ಯವಸ್ಥೆಯಾಗಿದೆ.
    • ಪ್ರಮುಖ ಕೇಂದ್ರಗಳು:- ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ದೆಹಲಿ-ರಾಷ್ಟ್ರ ರಾಜಧಾನಿ ಪ್ರದೇಶದಂತಹ ಪ್ರಮುಖ ಮಹಾನಗರಗಳು ಈ ಪರಿವರ್ತನೆಯ ಮುಂಚೂಣಿಯಲ್ಲಿವೆ.
    • ಯುನಿಕಾರ್ನ್‌ಗಳು:- ಭಾರತವು 120 ಕ್ಕೂ ಹೆಚ್ಚು ಯುನಿಕಾರ್ನ್‌ಗಳನ್ನು ($1 ಬಿಲಿಯನ್‌ಗೂ ಅಧಿಕ ಮೌಲ್ಯದ ನವೋದ್ಯಮಗಳು) ಇವುಗಳ ಒಟ್ಟು ಮೌಲ್ಯ $350 ಬಿಲಿಯನ್ ಡಾಲರ್‌ಗಳನ್ನು ಮೀರಿದೆ.
    • ಜಾಗತಿಕ ನಾವೀನ್ಯತಾ ಸೂಚ್ಯಂಕ (GII) 2025:- ಈ ಸೂಚ್ಯಂಕವು ಜಗತ್ತಿನ ಸುಮಾರು 140 ಆರ್ಥಿಕತೆಗಳ ನಾವೀನ್ಯತಾ ಪರಿಸರ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಅಳೆಯುತ್ತದೆ ಮತ್ತು ಶ್ರೇಯಾಂಕ ನೀಡುತ್ತದೆ.
    • ಈ ಸೂಚ್ಯಂಕದಲ್ಲಿ ಭಾರತವು ಗಣನೀಯ ಪ್ರಗತಿ ಸಾಧಿಸಿದ್ದು, 2020 ರಲ್ಲಿ 48 ನೇ ಸ್ಥಾನದಲ್ಲಿದ್ದು 2025 ರ ಹೊತ್ತಿಗೆ 38 ನೇ ಸ್ಥಾನಕ್ಕೆ ಏರಿಕೆ ಕಂಡಿದೆ.
  • ಕರ್ನಾಟಕ ಸೈಬರ್ ಅಪರಾಧಗಳ ಸಮನ್ವಯ ಕೇಂದ್ರ (K4C)

    ಕರ್ನಾಟಕ ಸೈಬರ್ ಅಪರಾಧಗಳ ಸಮನ್ವಯ ಕೇಂದ್ರ (K4C)

    ಇದೀಗ ಸುದ್ದಿಯಲ್ಲಿದೆ:

    • ಕೇಂದ್ರ ಗೃಹ ಸಚಿವಾಲಯದ ‘ಭಾರತದ ಸೈಬರ್‌ ಅಪರಾಧಗಳ ಸಮನ್ವಯ ಕೇಂದ್ರ’ದ (I4C) ಮಾದರಿಯಲ್ಲಿಯೇ, ರಾಜ್ಯ ಸರ್ಕಾರವು ‘ಕರ್ನಾಟಕ ಸೈಬರ್‌ ಅಪರಾಧಗಳ ಸಮನ್ವಯ ಕೇಂದ್ರ’ವನ್ನು (K4C) ಸ್ಥಾಪಿಸಲು ಮುಂದಾಗಿದೆ.

    ಕರ್ನಾಟಕ ಸೈಬರ್‌ ಅಪರಾಧಗಳ ಸಮನ್ವಯ ಕೇಂದ್ರದ (K4C) ಬಗ್ಗೆ:

    • ಇದು ಕರ್ನಾಟಕದಲ್ಲಿ ಡಿಜಿಟಲ್ ಅಪರಾಧಗಳನ್ನು ತಡೆಗಟ್ಟಲು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ರಾಜ್ಯ ಮಟ್ಟದ ಉಪಕ್ರಮವಾಗಿದೆ.
    • K4C ಅಡಿಯಲ್ಲಿ 4 ಪ್ರಾಥಮಿಕ ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ:
    1. ಸೈಬರ್‌ ಅಪರಾಧಗಳ ನಿಗ್ರಹ ಘಟಕ:- ಸೈಬರ್ ಅಪರಾಧಗಳ ಸಕ್ರಿಯ ತನಿಖೆ ಮತ್ತು ಪತ್ತೆಹಚ್ಚುವಿಕೆಗಾಗಿ.
    2. ಸೈಬರ್ ಭದ್ರತೆ ಮತ್ತು ಸಾಮರ್ಥ್ಯ ವೃದ್ಧಿ:- ಪೊಲೀಸ್, ಅಭಿಯೋಜಕರು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಅಗತ್ಯ ತರಬೇತಿ ನೀಡುವುದರ ಮೇಲೆ ಇದು ಗಮನಹರಿಸುತ್ತದೆ.
    3. ಮಾಹಿತಿ ಅಸ್ವಸ್ಥತೆ ನಿಗ್ರಹ ಘಟಕ:- ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡುವ ತಪ್ಪು ಮಾಹಿತಿಯನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ಮೇಲ್ವಿಚಾರಣೆ ಮಾಡಲು ಮತ್ತು ಪರಿಹರಿಸಲು.
    4. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಸ್ತು ನಿಗ್ರಹ ಘಟಕ:- ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯವಸ್ತು ಹಂಚುವಿಕೆಯನ್ನು ನಿಭಾಯಿಸಲು ಮೀಸಲಾಗಿರುವ ಘಟಕ.
    5. ಮುನ್ಸೂಚನಾ ಪೊಲೀಸಿಂಗ್:- ಸೈಬರ್ ಭದ್ರತೆಯ ದುರ್ಬಲತೆಗಳನ್ನು ಊಹಿಸಲು ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆಯನ್ನು ಬಳಸುವುದು ಹಾಗೂ 2030 ರ ವೇಳೆಗೆ ಘಟನೆಗಳಿಗೆ ಸ್ಪಂದಿಸುವ ಸಮಯವನ್ನು ಶೇ. 40 ರಷ್ಟು ಕಡಿಮೆ ಮಾಡುವುದು ಈ ಕೇಂದ್ರದ ಪ್ರಮುಖ ಗುರಿಯಾಗಿದೆ.
  • ಕೇರಳ: ‘ಬ್ಯಾಸಿಲಸ್ ಸಬ್ಟಿಲಿಸ್’ ರಾಜ್ಯ ಸೂಕ್ಷ್ಮಜೀವಿ ಎಂದು ಘೋಷಣೆ | ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್ (Quad -ಕ್ವಾಡ್) | ಆಫ್ರಿಕಾ ಒಕ್ಕೂಟ (AU) | ಸೇವಾ ತೀರ್ಥ | ಜನವರಿ 2026ರ CPI: ಹೊಸ ಆಧಾರ ವರ್ಷ (2024=100) | ಲೀಡ್ ಬ್ಯಾಂಕ್ ಯೋಜನೆ (LBS)

    ಕೇರಳ: ‘ಬ್ಯಾಸಿಲಸ್ ಸಬ್ಟಿಲಿಸ್’ ರಾಜ್ಯ ಸೂಕ್ಷ್ಮಜೀವಿ ಎಂದು ಘೋಷಣೆ

    ಆರೋಗ್ಯ/ ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಮಣ್ಣಿನಲ್ಲಿ ವಾಸಿಸುವ ಪ್ರಯೋಜನಕಾರಿ ಬ್ಯಾಕ್ಟೀರಿಯಾವಾದ ಬ್ಯಾಸಿಲಸ್ ಸಬ್ಟಿಲಿಸ್ (Bacillus subtilis) ಅನ್ನು ಅಧಿಕೃತ “ರಾಜ್ಯ ಸೂಕ್ಷ್ಮಜೀವಿ” ಎಂದು ನೇಮಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ.

    ‘ಬ್ಯಾಸಿಲಸ್ ಸಬ್ಟಿಲಿಸ್’ ನ ಬಗ್ಗೆ:

    • ಇದು ರೋಗಕಾರಕವಲ್ಲದ, ದಂಡಾಕಾರದ, ಗ್ರಾಮ್-ಧನಾತ್ಮಕ ಬ್ಯಾಕ್ಟೀರಿಯಾ ಆಗಿದೆ.
    • ಇದು ಸಾಮಾನ್ಯವಾಗಿ ಮಣ್ಣು, ನೀರು ಮತ್ತು ಮಾನವನ ಕರುಳಿನಲ್ಲಿ ಕಂಡುಬರುತ್ತದೆ.
    • ಪ್ರೋಬಯಾಟಿಕ್ (ಒಳ್ಳೆಯ ಬ್ಯಾಕ್ಟೀರಿಯಾ) ಆಗಿದೆ:- ಇದು, ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಒಂದು ಬ್ಯಾಕ್ಟೀರಿಯಾ ಆಗಿದೆ.
    • ಜೈವಿಕ ಗೊಬ್ಬರ ಮತ್ತು ಜೈವಿಕ ನಿಯಂತ್ರಣ ಕಾರಕವಾಗಿ ಬಳಕೆ:- ಬೆಳೆ ಇಳುವರಿ ಹೆಚ್ಚಿಸಲು ಮತ್ತು ಸಸ್ಯ ರೋಗಗಳನ್ನು ಹತ್ತಿಕ್ಕಲು ಇದನ್ನು ಕೃಷಿಯಲ್ಲಿ ಜೈವಿಕ ಗೊಬ್ಬರ ಮತ್ತು ಜೈವಿಕ ನಿಯಂತ್ರಣ ಕಾರಕವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.
    • ಇದು ಹೊಂದಿರುವ ಪರಿಸರ ಸಹಿಷ್ಣುತೆ ಮತ್ತು ಬೀಜಕ-ರೂಪುಗೊಳ್ಳುವ ಸಾಮರ್ಥ್ಯದಿಂದಾಗಿ, ಇದು ಗಮನಾರ್ಹವಾದ ಕೈಗಾರಿಕಾ ಮತ್ತು ಜೈವಿಕ ತಂತ್ರಜ್ಞಾನದ ಅನ್ವಯಿಕೆಗಳನ್ನು ಹೊಂದಿದೆ.

    ನಿಮಗಿದು ತಿಳಿದಿದೆಯೇ?

    ಮೈಕ್ರೋಬಯೋಮ್ ಶ್ರೇಷ್ಠತಾ ಕೇಂದ್ರ

    • ಇದನ್ನು ಕೇರಳ ಸರ್ಕಾರವು ತಿರುವನಂತಪುರಂನಲ್ಲಿ ಸ್ಥಾಪಿಸಿದೆ.
    • ಇದು ಮೈಕ್ರೋಬಯೋಮ್ (ಸೂಕ್ಷ್ಮಜೀವಿಗಳ ಸಮುದಾಯ) ಅಧ್ಯಯನಕ್ಕಾಗಿ ಮೀಸಲಾದ ಭಾರತದ ಮೊದಲ ಬಹು-ಕ್ಷೇತ್ರ ಸಂಶೋಧನಾ ಸಂಸ್ಥೆಯಾಗಿದೆ.

    ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್ (Quad -ಕ್ವಾಡ್)

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

     

    • ಇತ್ತೀಚೆಗೆ, ಅಮೆರಿಕದ ಹಿರಿಯ ಅಧಿಕಾರಿಗಳು ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್ (Quad- ಚತುರ್ಭುಜ ಭದ್ರತಾ ಸಂವಾದ) ಅನ್ನು “ಅತ್ಯಂತ ಪ್ರಮುಖ ವೇದಿಕೆ” ಎಂದು ಮತ್ತು ಭಾರತವನ್ನು ಅದರಲ್ಲಿನ “ಸಕ್ರಿಯ ಪಾಲುದಾರ” ಎಂದು ಬಣ್ಣಿಸಿದ್ದಾರೆ.

    ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್ (Quad) ನ ಬಗ್ಗೆ:

    • ಅನೌಪಚಾರಿಕ ಕಾರ್ಯತಂತ್ರದ ಸಂವಾದ ವೇದಿಕೆಯಾಗಿದೆ:- ಇದು ಭಾರತ, ಅಮೆರಿಕ (USA), ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳ ನಡುವಿನ ಒಂದು ವೇದಿಕೆಯಾಗಿದೆ.
    • ಉದ್ದೇಶ:- ಒಂದು ಸ್ವತಂತ್ರ, ಮುಕ್ತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶವನ್ನು ಖಚಿತಪಡಿಸುವುದು ಮತ್ತು ಬೆಂಬಲಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

    ಮಲಬಾರ್ ನೌಕಾಭ್ಯಾಸದ ಬಗ್ಗೆ:

    • ಪ್ರಾರಂಭ:- ಇದು 1992ರಲ್ಲಿ ಪ್ರಾರಂಭವಾದ ಬಹುಪಕ್ಷೀಯ ನೌಕಾಭ್ಯಾಸವಾಗಿದೆ. ಈ ವ್ಯಾಯಾಮವು ಆರಂಭದಲ್ಲಿ ಭಾರತ ಮತ್ತು ಅಮೆರಿಕದ ನೌಕಾಪಡೆಗಳ ನಡುವೆ ದ್ವಿಪಕ್ಷೀಯ ಸಮರಾಭ್ಯಾಸವಾಗಿ ಪ್ರಾರಂಭವಾಯಿತು.
    • ಭಾಗವಹಿಸುವ ರಾಷ್ಟ್ರಗಳು:- 2002ರಿಂದೀಚೆಗೆ, ಈ ನೌಕಾಭ್ಯಾಸವನ್ನು  ಪ್ರತಿ ವರ್ಷ ನಡೆಸಲಾಗುತ್ತಿದೆ. ಜಪಾನ್ ಮತ್ತು ಆಸ್ಟ್ರೇಲಿಯಾ ಮೊದಲ ಬಾರಿಗೆ 2007ರಲ್ಲಿ ಇದರಲ್ಲಿ ಭಾಗವಹಿಸಿದವು. 2014ರಿಂದ, ಭಾರತ, ಅಮೆರಿಕ ಮತ್ತು ಜಪಾನ್ ಇದರಲ್ಲಿ  ಭಾಗವಹಿಸುತ್ತಿವೆ. 2020ರಲ್ಲಿ ಆಸ್ಟ್ರೇಲಿಯಾ ಕೂಡ ಮಲಬಾರ್ ಸಮರಾಭ್ಯಾಸಕ್ಕೆ ಸೇರಿಕೊಂಡಿತು.
    • ಗುರಿ:- ಸ್ವತಂತ್ರ, ಮುಕ್ತ ಮತ್ತು ಸಮೃದ್ಧ ಮತ್ತು ಎಲ್ಲರನ್ನೂ ಒಳಗೊಳ್ಳುವ ಇಂಡೋ-ಪೆಸಿಫಿಕ್ ಪ್ರದೇಶವನ್ನು ಬೆಂಬಲಿಸುವುದು ಮತ್ತು ನಿಯಮಾಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಗೆ ಬದ್ಧವಾಗಿರುವುದು ಇದರ ಗುರಿಯಾಗಿದೆ.

    ಆಫ್ರಿಕಾ ಒಕ್ಕೂಟ (AU)

    ಪ್ರಾದೇಶಿಕ ಗುಂಪುಗಳು

    ಇದೀಗ ಸುದ್ದಿಯಲ್ಲಿದೆ: 

    • ಆಫ್ರಿಕಾ ಒಕ್ಕೂಟವು ವ್ಯಾಪಕವಾದ ಅಸಮಾಧಾನವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಆಫ್ರಿಕಾ ಖಂಡದ ಭವಿಷ್ಯದ ಕುರಿತು ಚರ್ಚಿಸಲು ಇಥಿಯೋಪಿಯಾದಲ್ಲಿ ತನ್ನ ವಾರ್ಷಿಕ ಶೃಂಗಸಭೆಯನ್ನು ಆಯೋಜಿಸುತ್ತಿದೆ.

    ಆಫ್ರಿಕಾ ಒಕ್ಕೂಟ (AU)ದ ಬಗ್ಗೆ:

    • ಖಂಡಾಂತರ ಸಂಸ್ಥೆಯಾಗಿದೆ:- ಇದು ಆಫ್ರಿಕಾ ಖಂಡದ 55 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಒಂದು ಖಂಡಾಂತರ ಸಂಸ್ಥೆಯಾಗಿದೆ.
    • ಆಫ್ರಿಕಾದ ಏಕತಾ ಸಂಘಟನೆಯ (OAU, 1963-1999) ಉತ್ತರವರ್ತಿ ಸಂಸ್ಥೆಯಾಗಿ ಇದು 2002ರಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು.
    • ಗುರಿ:- ಆಫ್ರಿಕಾ ಖಂಡದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು ಈ ಒಕ್ಕೂಟದ ಪ್ರಮುಖ ಗುರಿಯಾಗಿದೆ.
    • ಪ್ರಧಾನ ಕಚೇರಿ:- ಇಥಿಯೋಪಿಯಾದ ಅಡಿಸ್ ಅಬಾಬಾದಲ್ಲಿದೆ.

    ಉಪಕ್ರಮಗಳು:

    • ಆಫ್ರಿಕಾ ಖಂಡಾಂತರ ಮುಕ್ತ ವ್ಯಾಪಾರ ವಲಯ (AfCFTA) ಒಪ್ಪಂದ:- ಈ ಒಪ್ಪಂದವು ಇಡೀ ಆಫ್ರಿಕಾ ಖಂಡದಾದ್ಯಂತ ಸರಕು ಮತ್ತು ಸೇವೆಗಳಿಗೆ ಏಕರೂಪದ ಮಾರುಕಟ್ಟೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
    • ಅಜೆಂಡಾ 2063:- ಇದು ಮುಂದಿನ 50 ವರ್ಷಗಳಲ್ಲಿ ಆಫ್ರಿಕಾ ಖಂಡದ ಸಾಮಾಜಿಕ-ಆರ್ಥಿಕ ಪರಿವರ್ತನೆಗಾಗಿ ಸಿದ್ಧಪಡಿಸಲಾದ ಒಂದು ಕಾರ್ಯತಂತ್ರದ ಚೌಕಟ್ಟಾಗಿದೆ.

    ಸೇವಾ ತೀರ್ಥ

    ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಪ್ರಧಾನ ಮಂತ್ರಿಯವರು ನವದೆಹಲಿಯಲ್ಲಿ ಕರ್ತವ್ಯ ಭವನ-1 ಮತ್ತು 2 ರ ಜೊತೆಗೆ ಸೇವಾ ತೀರ್ಥ ಸಂಕೀರ್ಣವನ್ನು ಉದ್ಘಾಟಿಸಿದರು.

    ಸೇವಾ ತೀರ್ಥ ಮತ್ತು ಕರ್ತವ್ಯ ಭವನ-1 ಮತ್ತು 2 ರ ಬಗ್ಗೆ:

    • ಸೇವಾ ತೀರ್ಥ:- ಇದು ಪ್ರಧಾನ ಮಂತ್ರಿ ಕಾರ್ಯಾಲಯ (PMO), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ (NSCS) ಮತ್ತು ಕ್ಯಾಬಿನೆಟ್ ಸಚಿವಾಲಯಗಳನ್ನು ಒಳಗೊಂಡಿದೆ. ಇವು ಹಿಂದೆ ವಿವಿಧ ಸ್ಥಳಗಳಲ್ಲಿ ಹಂಚಿಹೋಗಿದ್ದವು.
    • ಇದು ಆಧುನಿಕ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಸೌಲಭ್ಯಗಳೊಂದಿಗೆ ಆಡಳಿತಾತ್ಮಕ ಕಾರ್ಯಗಳನ್ನು ಇದು ಕ್ರೂಢೀಕರಿಸುತ್ತದೆ.
    • ಕರ್ತವ್ಯ ಭವನ-1 ಮತ್ತು 2:- ಇವು ಹಣಕಾಸು ಸಚಿವಾಲಯ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಶಿಕ್ಷಣ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೇರಿದಂತೆ ಹಲವಾರು ಪ್ರಮುಖ ಸಚಿವಾಲಯಗಳಿಗೆ ಸ್ಥಳಾವಕಾಶ ಕಲ್ಪಿಸುತ್ತವೆ.
    • ಎರಡೂ ಕಟ್ಟಡ ಸಂಕೀರ್ಣಗಳು ಡಿಜಿಟಲ್ ಸಂಯೋಜಿತ ಕಚೇರಿಗಳು, ರಚನಾತ್ಮಕ ಸಾರ್ವಜನಿಕ ಸಂಪರ್ಕ ವಲಯಗಳು ಮತ್ತು ಕೇಂದ್ರೀಕೃತ ಸ್ವಾಗತ ಸೌಲಭ್ಯಗಳನ್ನು ಹೊಂದಿವೆ.

    ಮಹತ್ವ:

    • ಈ ವೈಶಿಷ್ಟ್ಯಗಳು ಸಹಯೋಗ, ದಕ್ಷತೆ, ಸುಗಮ ಆಡಳಿತ, ಸುಧಾರಿತ ನಾಗರಿಕ ಸಂಪರ್ಕ ಮತ್ತು ಉದ್ಯೋಗಿಗಳ ಯೋಗಕ್ಷೇಮವನ್ನು ಉತ್ತೇಜಿಸುತ್ತವೆ.

    ಜನವರಿ 2026ರ CPI: ಹೊಸ ಆಧಾರ ವರ್ಷ (2024=100)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು ಆಧಾರ ವರ್ಷ 2024=100 ರೊಂದಿಗೆ ತಾತ್ಕಾಲಿಕ ಗ್ರಾಹಕ ಬೆಲೆ ಸೂಚ್ಯಂಕವನ್ನು (CPI) ಬಿಡುಗಡೆ ಮಾಡಿದೆ.

    ವಿವರಗಳು:

    • 2023-24ರ ಕೌಟುಂಬಿಕ ಅನುಭೋಗ ವೆಚ್ಚದ ಸಮೀಕ್ಷೆಯನ್ನು ಬಳಸಿಕೊಂಡು ಆಧಾರ ವರ್ಷವನ್ನು 2012 ರಿಂದ 2024 ಕ್ಕೆ ಪರಿಷ್ಕರಿಸಲಾಗಿದೆ.

    ಗ್ರಾಹಕ ಬೆಲೆ ಸೂಚ್ಯಂಕ (CPI)ದ ಬಗ್ಗೆ:

    • ಚಿಲ್ಲರೆ ಹಣದುಬ್ಬರವನ್ನು ವಿಶ್ಲೇಷಿಸುತ್ತದೆ:- ಇದು ಗ್ರಾಹಕರು ಸರಕು ಮತ್ತು ಸೇವೆಗಳ ಬುಟ್ಟಿಗೆ ಗುಚ್ಛಕ್ಕೆ ಪಾವತಿಸುವ ಬೆಲೆಗಳಲ್ಲಿನ ಸರಾಸರಿ ಬದಲಾವಣೆಯನ್ನು ಅಳೆಯುತ್ತದೆ. 
    • ಇದು ಜೀವನ ವೆಚ್ಚ ಮತ್ತು ಕೊಳ್ಳುವ ಶಕ್ತಿಯಲ್ಲಿನ ಏರಿಳಿತಗಳನ್ನು ಅವಲೋಕಿಸುತ್ತದೆ.
    • ಇದು ಆಹಾರ, ವಸತಿ, ಉಡುಪು, ಸಾರಿಗೆಯಂತಹ ಪ್ರಮುಖ ಘಟಕಗಳನ್ನು ಒಳಗೊಂಡಿದೆ.
    • ಮಾಸಿಕವಾಗಿ ಪ್ರಕಟಿಸಲಾಗುತ್ತದೆ:- ಇದರ ಹಿಂದಿನ ಆಧಾರ ವರ್ಷ 2012 ಆಗಿದ್ದು, ಅದನ್ನು ಈಗ 2024ಕ್ಕೆ ಪರಿಷ್ಕರಿಸಲಾಗಿದೆ.
    • ಬಿಡುಗಡೆ ಮಾಡುವವರು:- ಇದನ್ನು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI) ಅಡಿಯಲ್ಲಿರುವ ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಛೇರಿಯು (NSO) ಬಿಡುಗಡೆ ಮಾಡುತ್ತದೆ.

    ಲೀಡ್ ಬ್ಯಾಂಕ್ ಯೋಜನೆ (LBS)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಸ್ತಾಪಿಸಿರುವ ಮಾರ್ಗಸೂಚಿಗಳು, ವಿವಿಧ ಸಮಿತಿಗಳ ರಚನೆ, ಸದಸ್ಯತ್ವ ಮತ್ತು ಪಾತ್ರಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವ ಮೂಲಕ ಲೀಡ್ ಬ್ಯಾಂಕ್ ಯೋಜನೆಯನ್ನು ಬಲಪಡಿಸುವ ಮತ್ತು ಸರಳೀಕರಿಸುವ ಗುರಿಯನ್ನು ಹೊಂದಿವೆ.

    ಲೀಡ್ ಬ್ಯಾಂಕ್ ಯೋಜನೆ (LBS)ಯ ಬಗ್ಗೆ:

    • ಸಾಂಸ್ಥಿಕ ಕಾರ್ಯವಿಧಾನವಾಗಿದೆ:- ಇದು ಡಿಸೆಂಬರ್ 1969ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪರಿಚಯಿಸಿದ ಸಾಂಸ್ಥಿಕ ಕಾರ್ಯವಿಧಾನವಾಗಿದೆ.
    • ಉದ್ದೇಶ:- ಜಿಲ್ಲಾ ಮಟ್ಟದಲ್ಲಿ ಬ್ಯಾಂಕಿಂಗ್ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಸಂಯೋಜಿಸುವುದು ಇದರ ಉದ್ದೇಶವಾಗಿದೆ.
    • ಮಹತ್ವ:- ಕೃಷಿ ಮತ್ತು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳಂತಹ (MSMEs) ಆದ್ಯತಾ ವಲಯಗಳಿಗೆ ಸಾಲದ ಹರಿವನ್ನು ಹೆಚ್ಚಿಸುವುದು, ಪ್ರಾದೇಶಿಕ ಅಸಮತೋಲನವನ್ನು ಕಡಿಮೆ ಮಾಡುವುದು ಮತ್ತು ಒಟ್ಟಾರೆ ಗ್ರಾಮೀಣಾಭಿವೃದ್ಧಿಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.
    • ಫೆಬ್ರವರಿ 2026 ರ ಹೊತ್ತಿಗೆ, ಡಿಜಿಟಲ್ ಯುಗಕ್ಕೆ ಅನುಗುಣವಾಗಿ ಕಾರ್ಯಾಚರಣೆಗಳನ್ನು ಆಧುನೀಕರಿಸಲು ಹೊಸ ಕರಡು ಮಾರ್ಗಸೂಚಿಗಳ ಮೂಲಕ ಈ ಯೋಜನೆಯ ಪ್ರಮುಖ ಪರಿಷ್ಕರಣೆಯನ್ನು RBI ಪ್ರಸ್ತಾಪಿಸಿದೆ.

    ಪ್ರಮುಖ ಉದ್ದೇಶಗಳು:

    • ಪ್ರಾದೇಶಿಕ ವಿಧಾನ:- ತೀವ್ರತರವಾದ ಬ್ಯಾಂಕಿಂಗ್ ಅಭಿವೃದ್ಧಿಗಾಗಿ ನಿರ್ದಿಷ್ಟ ಭೌಗೋಳಿಕ ಪ್ರದೇಶವನ್ನು (ಜಿಲ್ಲೆ) ಮೂಲ ಘಟಕವಾಗಿ ಅಳವಡಿಸಿಕೊಳ್ಳುವುದು.
    • ಹಣಕಾಸು ಸೇರ್ಪಡೆ:- ಬ್ಯಾಂಕಿಂಗ್ ರಹಿತ ಮತ್ತು ಕಡಿಮೆ ಬ್ಯಾಂಕಿಂಗ್ ಸೌಲಭ್ಯವಿರುವ ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶದ ಜನರಿಗೆ ಬ್ಯಾಂಕಿಂಗ್ ಸೇವೆಗಳನ್ನು ವಿಸ್ತರಿಸುವುದು.
    • ಸಂಘಟಿತ ಯೋಜನೆ:- ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRBs), ಸಹಕಾರಿ ಬ್ಯಾಂಕುಗಳು ಮತ್ತು ಸರ್ಕಾರಿ ಸಂಸ್ಥೆಗಳ ಪ್ರಯತ್ನಗಳನ್ನು ಒಗ್ಗೂಡಿಸಲು “ಒಕ್ಕೂಟದ ನಾಯಕ”ನಾಗಿ ಕಾರ್ಯನಿರ್ವಹಿಸುವುದು.
    • ಸಾಲದ ನಿಯೋಜನೆ:- ಸ್ಥಳೀಯ ಆದಾಯ ಮಟ್ಟಗಳು ಮತ್ತು ಉತ್ಪಾದಕತೆಯನ್ನು ಸುಧಾರಿಸಲು ಉತ್ಪಾದಕ ವಲಯಗಳಿಗೆ ಸಾಲ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು.
  • 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (BIFFes) ಪ್ರಶಸ್ತಿಗಳು

    17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (BIFFes) ಪ್ರಶಸ್ತಿಗಳು

    ಇದೀಗ ಸುದ್ದಿಯಲ್ಲಿದೆ:

    • ಮಹಿಳಾ ಸಬಲೀಕರಣದ ಮೇಲೆ ವಿಶೇಷ ಗಮನಹರಿಸುವ ಮೂಲಕ ಜಾಗತಿಕ ಮತ್ತು ಸ್ಥಳೀಯ ಸಿನಿಮಾಗಳನ್ನು ಆಚರಿಸಿದ 17 ನೇ ಆವೃತ್ತಿಯ ‘ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ವು (BIFFes) ಇತ್ತೀಚೆಗೆ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.

    17 ನೇ ಆವೃತ್ತಿಯ ಚಲನಚಿತ್ರೋತ್ಸವದ (BIFFes) ಮುಖ್ಯಾಂಶಗಳು:

    • ಅತ್ಯುತ್ತಮ ಭಾರತೀಯ ಚಲನಚಿತ್ರ:- ರೋಹನ್ ಪರಶುರಾಮ್ ಕಾನವಾಡೆ ನಿರ್ದೇಶನದ ಮರಾಠಿ ಚಲನಚಿತ್ರ ‘ಸಬರ್ ಬೋಂಡಾ’.
    • ಅತ್ಯುತ್ತಮ ಕನ್ನಡ ಚಲನಚಿತ್ರ:- ಬಡಿಗೇರ್ ದೇವೇಂದ್ರ ನಿರ್ದೇಶನದ ‘ವನ್ಯ’. ಕಾರ್ಪೊರೇಟ್ ಮತ್ತು ರಾಜಕೀಯ ಶೋಷಣೆಯಿಂದ ತಮ್ಮ ಕಾಡನ್ನು ರಕ್ಷಿಸಿಕೊಳ್ಳಲು ತಂದೆ ಮತ್ತು ಮಗಳು ಪಡುವ ಹೋರಾಟವನ್ನು ಈ ಚಿತ್ರವು ಮಾರ್ಮಿಕವಾಗಿ ಚಿತ್ರಿಸುತ್ತದೆ.
    • ಜೀವಮಾನ ಸಾಧನೆ ಪ್ರಶಸ್ತಿ:- ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗೀತರಚನೆಕಾರರಾದ ನಾದಬ್ರಹ್ಮ ಹಂಸಲೇಖ ಅವರನ್ನು ಈ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು.

    ಇತರ ಪ್ರಮುಖ ವಿಜೇತರು:

    • ಭಾರತೀಯ ಸಿನಿಮಾ:- ಮಲಯಾಳಂ ಚಿತ್ರಗಳಾದ ‘ಮೋಹಂ’ ಮತ್ತು ‘ಕಾಡು’ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದುಕೊಂಡಿವೆ.
    • ಕನ್ನಡ ಸಿನಿಮಾ:- ‘ನಮ್ ಸಾಲಿ’ ಎರಡನೇ ಸ್ಥಾನ ಮತ್ತು ‘ರಾವಣ ರಾಜ್ಯದಲ್ಲಿ ನವದಂಪತಿಗಳು’ ಮೂರನೇ ಸ್ಥಾನ ಪಡೆದುಕೊಂಡಿವೆ.
    • ವಿಶೇಷ ಉಲ್ಲೇಖಗಳು:- ‘ಗೊಂದಲ್’ (ಮರಾಠಿ) ಚಿತ್ರವು ಪ್ರತಿಷ್ಠಿತ ಫಿಪ್ರೆಸ್ಕಿ (FIPRESCI) ಪ್ರಶಸ್ತಿಯನ್ನು ಗೆದ್ದುಕೊಂಡರೆ; ಫಿಲಿಪೈನ್ಸ್‌ನ ‘ದಿ ರಿಪಬ್ಲಿಕ್ ಆಫ್ ಪೈಪೊಲಿಪಿನಾಸ್’ ಚಿತ್ರವು ವಿಶೇಷ ಜ್ಯೂರಿ ಉಲ್ಲೇಖವನ್ನು ಪಡೆದುಕೊಂಡಿದೆ.

    ಚಲನಚಿತ್ರೋತ್ಸವದ ಅಂಕಿ-ಅಂಶಗಳು:

    • ಅವಧಿ:- 8 ದಿನಗಳು (ಜನವರಿ 29, 2026 ರಂದು ಪ್ರಾರಂಭವಾಗಿತ್ತು).
    • ವ್ಯಾಪ್ತಿ:- 70 ದೇಶಗಳ ಸುಮಾರು 300 ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು.
    • ಹಾಜರಾತಿ:- 1 ಲಕ್ಷಕ್ಕೂ ಹೆಚ್ಚು ಸಿನಿ-ರಸಿಕರು ಭಾಗವಹಿಸಿದ್ದರು.
    • ಘೋಷವಾಕ್ಯ:- ಮಹಿಳಾ ಸಬಲೀಕರಣದ ಮೇಲೆ ಕೇಂದ್ರೀಕರಿಸಿದ “ಸ್ತ್ರೀ ಎಂದರೆ ಅಷ್ಟೇ ಸಾಕೆ?” ಎಂಬುದು ಈ ಬಾರಿಯ ಉತ್ಸವದ ಮುಖ್ಯ ವಿಷಯವಾಗಿತ್ತು.
  • ಶಾಂತಿ (SHANTI) ಕಾಯ್ದೆ 2025 | ಮಹರ್ಷಿ ದಯಾನಂದ ಸರಸ್ವತಿ | ಅಸ್ಸಾಂ ರೈಫಲ್ಸ್ : ದೇಶೀಯ ಶ್ವಾನ ತಳಿಗಳ ಸೇರ್ಪಡೆ | ಕ್ಯಾಸನೂರು ಅರಣ್ಯ ಕಾಯಿಲೆ | ರಾಜಾಜಿ ರಾಷ್ಟ್ರೀಯ ಉದ್ಯಾನವನ | ಪಂಚಶೀಲ ಒಪ್ಪಂದ

    ಶಾಂತಿ (SHANTI) ಕಾಯ್ದೆ 2025

    ಇಂಧನ

    ಇದೀಗ ಸುದ್ದಿಯಲ್ಲಿದೆ: 

    • ಶಾಂತಿ (SHANTI- ಭಾರತಕ್ಕಾಗಿ ಪರಮಾಣು ತಂತ್ರಜ್ಞಾನದ ಪ್ರಗತಿಯ ಸುಸ್ಥಿರ ಬಳಕೆ) ಕಾಯ್ದೆ 2025, ಸುರಕ್ಷತಾ ಮಾನದಂಡಗಳು, ಸಂತ್ರಸ್ತರ ಪರಿಹಾರ ಮತ್ತು ದೀರ್ಘಕಾಲೀನ ಇಂಧನ ಕಾರ್ಯತಂತ್ರದ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದೆ.
    • ಸಾಂಪ್ರದಾಯಿಕವಾಗಿ, ಭಾರತದಲ್ಲಿನ ಪರಮಾಣು ವಿದ್ಯುತ್ ಸ್ಥಾವರಗಳು ಕೇವಲ ಸರ್ಕಾರಿ ಸ್ವಾಮ್ಯದ  ಭಾರತೀಯ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL) ಮತ್ತು ಅದರ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಭಾರತೀಯ ನಾಭಿಕೀಯ ವಿದ್ಯುತ್ ನಿಗಮ (BHAVINI) ದ ಒಡೆತನ ಮತ್ತು ನಿರ್ವಹಣೆಯಲ್ಲಿವೆ.

    ಶಾಂತಿ ಕಾಯ್ದೆ, 2025 ರ ಬಗ್ಗೆ:

    • ಇದು ಡಿಸೆಂಬರ್ 2025ರಲ್ಲಿ ಅಂಗೀಕರಿಸಲ್ಪಟ್ಟಿತು.
    • ಇದು ಭಾರತದ ಪರಮಾಣು ಆಡಳಿತದ ಮಹತ್ವದ ಪರಿಷ್ಕರಣೆಯನ್ನು ಪ್ರತಿನಿಧಿಸುತ್ತದೆ.
    • ಈ ಕಾಯ್ದೆಯು ಪರಮಾಣು ಶಕ್ತಿ ಕಾಯ್ದೆ, 1962 ಮತ್ತು ನಾಗರಿಕ ಹೊಣೆಗಾರಿಕೆ ಮತ್ತು ಪರಮಾಣು ಹಾನಿ ಕಾಯ್ದೆ (CLNDA), 2010 ಅನ್ನು ರದ್ದುಗೊಳಿಸುವ ಮೂಲಕ ಈ ವಲಯದ ಕಾನೂನು ಚೌಕಟ್ಟನ್ನು ಏಕೀಕರಿಸುತ್ತದೆ.

    ಪ್ರಮುಖ ಉದ್ದೇಶಗಳು ಮತ್ತು ಆಧಾರಸ್ತಂಭಗಳು:

    • 2047ರ ವೇಳೆಗೆ 100 GW ಗುರಿ:- 2047ರ ವೇಳೆಗೆ 100 GW ಪರಮಾಣು ಸಾಮರ್ಥ್ಯದ ಭಾರತದ ಗುರಿಯನ್ನು ತಲುಪಲು ಈ ಕಾಯ್ದೆಯು ಕಾನೂನುಬದ್ಧ ತಳಹದಿಯನ್ನು ಒದಗಿಸುತ್ತದೆ.
    • ಖಾಸಗಿ ವಲಯದ ಏಕೀಕರಣ:- ಇದೇ ಮೊದಲ ಬಾರಿಗೆ, ಭಾರತೀಯ ಖಾಸಗಿ ಕಂಪನಿಗಳು ಮತ್ತು ಜಂಟಿ ಉದ್ಯಮಗಳು, ಕಟ್ಟುನಿಟ್ಟಾದ ಸರ್ಕಾರದ ಪರವಾನಗಿ ಅಡಿಯಲ್ಲಿ ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಬಹುದು, ಹೊಂದಬಹುದು ಮತ್ತು ನಿರ್ವಹಿಸಬಹುದು.
    • ನಿಯಂತ್ರಕ ಸ್ವಾತಂತ್ರ್ಯ:- ಇದು ಪರಮಾಣು ಶಕ್ತಿ ನಿಯಂತ್ರಣ ಮಂಡಳಿಗೆ (AERB) ಶಾಸನಬದ್ಧ ಮನ್ನಣೆಯನ್ನು ನೀಡುತ್ತದೆ. ಇದು ಕೇವಲ ಕಾರ್ಯಾಂಗಕ್ಕೆ ಬದಲಾಗಿ ಸಂಸತ್ತಿಗೆ ಹೆಚ್ಚು ಜವಾಬ್ದಾರಿಯುತ ಮತ್ತು ಸ್ವತಂತ್ರವಾಗಿರುವಂತೆ ಮಾಡುತ್ತದೆ.
    • ಭಾರತ ಕಿರು ಮಾಡ್ಯುಲರ್ ರಿಯಾಕ್ಟರ್‌ಗಳು (SMRs):- ಕೈಗಾರಿಕಾ ಇಂಗಾಲ ಮುಕ್ತಗೊಳಿಸುವಿಕೆ (ಡಿಕಾರ್ಬೊನೈಸೇಶನ್) ಅನ್ನು ಬೆಂಬಲಿಸಲು ಭಾರತ ಕಿರು ಮಾಡ್ಯುಲರ್ ರಿಯಾಕ್ಟರ್‌ಗಳ (BSMRs) ನಿಯೋಜನೆಗೆ ಈ ಕಾಯ್ದೆ ಅನುಕೂಲ ಮಾಡಿಕೊಡುತ್ತದೆ.

    ಪ್ರಮುಖ ನಿಬಂಧನೆಗಳು:

    • ದ್ವಿ-ಪರವಾನಗಿ ವ್ಯವಸ್ಥೆ:- ಘಟಕಗಳು ನಿರ್ಮಾಣ/ಕಾರ್ಯಾಚರಣೆಗಾಗಿ ಕೇಂದ್ರ ಸರ್ಕಾರದಿಂದ ಪರವಾನಗಿಯನ್ನು ಮತ್ತು ವಿಕಿರಣ-ಸಂಬಂಧಿತ ಚಟುವಟಿಕೆಗಳಿಗಾಗಿ AERB ನಿಂದ ಪ್ರತ್ಯೇಕ ಸುರಕ್ಷತಾ ದೃಢೀಕರಣವನ್ನು ಪಡೆಯಬೇಕು.
    • ಮೀಸಲು ಕಾರ್ಯತಂತ್ರದ ಕ್ಷೇತ್ರಗಳು:- ಯುರೇನಿಯಂ ಪುಷ್ಟೀಕರಣ, ಬಳಕೆಯಾದ ಇಂಧನ ನಿರ್ವಹಣೆ ಮತ್ತು ಭಾರಜಲ ಉತ್ಪಾದನೆ ಸೇರಿದಂತೆ ಸೂಕ್ಷ್ಮ “ಇಂಧನ ಚಕ್ರ” ಚಟುವಟಿಕೆಗಳ ಮೇಲೆ ಕೇಂದ್ರ ಸರ್ಕಾರವು ವಿಶೇಷ ನಿಯಂತ್ರಣವನ್ನು ಉಳಿಸಿಕೊಂಡಿದೆ.
    • ವಿವಾದ ಪರಿಹಾರ:- ಪರಮಾಣು ಶಕ್ತಿ ಪರಿಹಾರ ಸಲಹಾ ಮಂಡಳಿಯನ್ನು ಸ್ಥಾಪಿಸುತ್ತದೆ. ವಿದ್ಯುತ್ ಮೇಲ್ಮನವಿ ನ್ಯಾಯಮಂಡಳಿ (APTEL) ಮೇಲ್ಮನವಿ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮುಂದಿನ ಸವಾಲುಗಳನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

    ಶಾಂತಿ ಕಾಯ್ದೆಯ ಬಗ್ಗೆ ವ್ಯಕ್ತವಾದ ಕಳವಳಗಳು:

    • ಫುಕುಶಿಮಾ ಡೈಚಿ ಪರಮಾಣು ದುರಂತ:- ದುರಂತವು ರಿಯಾಕ್ಟರ್ ಸುರಕ್ಷತಾ ಕವಚ ವಿನ್ಯಾಸ ಮತ್ತು ತುರ್ತು ಸನ್ನದ್ಧತೆಯಲ್ಲಿನ ದೌರ್ಬಲ್ಯಗಳನ್ನು ಬಹಿರಂಗಪಡಿಸಿತು.
    • ಚೆರ್ನೋಬಿಲ್ ದುರಂತ:- ಈ ದುರಂತವು ಸಕಾರಾತ್ಮಕ ಶಕ್ತಿ ಗುಣಾಂಕ ಮತ್ತು ಅಸಮರ್ಪಕ ತುರ್ತು ಸ್ಥಗಿತಗೊಳಿಸುವ ವ್ಯವಸ್ಥೆಗಳು ಸೇರಿದಂತೆ ರಚನಾತ್ಮಕ ವಿನ್ಯಾಸದ ದೋಷಗಳನ್ನು ಒಳಗೊಂಡಿತ್ತು.
    • ಥ್ರೀ ಮೈಲ್ ಐಲ್ಯಾಂಡ್ ಅಪಘಾತ:- ಈ ಅಪಘಾತವು ಗಮನಾರ್ಹವಾದ ನಿಯಂತ್ರಣ ಕೊಠಡಿ ವಿನ್ಯಾಸ ವೈಫಲ್ಯಗಳು ಮತ್ತು ಪೂರೈಕೆದಾರರ ಸಂವಹನ ಲೋಪಗಳನ್ನು ಬಹಿರಂಗಪಡಿಸಿತು.

    ಮಹರ್ಷಿ ದಯಾನಂದ ಸರಸ್ವತಿ

    ಇತಿಹಾಸ

    ಇದೀಗ ಸುದ್ದಿಯಲ್ಲಿದ್ದಾರೆ:

    • ಪ್ರಧಾನ ಮಂತ್ರಿಯವರು ಮಹರ್ಷಿ ದಯಾನಂದ ಸರಸ್ವತಿ ಅವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ನಮನ ಸಲ್ಲಿಸಿದರು.

    ಮಹರ್ಷಿ ದಯಾನಂದ ಸರಸ್ವತಿ ಅವರ ಬಗ್ಗೆ:

    • ಇವರು 1824ರ ಫೆಬ್ರವರಿ 12 ರಂದು ಗುಜರಾತಿನ ಟಂಕಾರಾದಲ್ಲಿ ಜನಿಸಿದರು. ನಂತರ ಇವರು ಸ್ವಾಮಿ ವಿರಜಾನಂದರ ಶಿಷ್ಯರಾದರು.
    • ಸಾಮಾಜಿಕ ಅಸಮಾನತೆಗಳನ್ನು ಎದುರಿಸಲು ಮತ್ತು ಸಾಮಾಜಿಕ ಸುಧಾರಣೆಯನ್ನು ಉತ್ತೇಜಿಸಲು ಅವರು 1875ರಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿದರು.
    •  “ವೇದಗಳಿಗೆ ಹಿಂದಿರುಗಿ”:- ಎಂಬ ಘೋಷಣೆಯನ್ನು ನೀಡಿದರು ಮತ್ತು ಎರಡು ಪ್ರಮುಖ ವಿಚಾರಗಳಿಗೆ ಒತ್ತು ನೀಡಿದರು: ವೇದಗಳ ದೋಷಾತೀತ ಅಧಿಕಾರ ಮತ್ತು ಏಕದೇವೋಪಾಸನೆ.
    • ಅವರ ಪ್ರಮುಖ ನಂಬಿಕೆಗಳಲ್ಲಿ ಮೂರ್ತಿಪೂಜೆ ಮತ್ತು ಅತಿಯಾದ ಧಾರ್ಮಿಕ ಆಚರಣೆಗಳ ನಿರಾಕರಣೆ, ಮಹಿಳಾ ಶಿಕ್ಷಣಕ್ಕೆ ಬೆಂಬಲ, ಬಾಲ್ಯವಿವಾಹದ ಖಂಡನೆ ಮತ್ತು ಅಸ್ಪೃಶ್ಯತೆಯ ವಿರೋಧ ಸೇರಿವೆ.
    • ಅವರು ಅನ್ಯ ಧರ್ಮಗಳಿಗೆ ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳುವುದನ್ನು ಬೆಂಬಲಿಸುವ ‘ಶುದ್ಧಿ’ ಕಲ್ಪನೆಯನ್ನು ಪ್ರತಿಪಾದಿಸಿದರು.
    • ಪ್ರಕಟಣೆಗಳು:- ಸತ್ಯಾರ್ಥ ಪ್ರಕಾಶ, ಸಂಸ್ಕಾರ ವಿಧಿ ಮತ್ತು ಯಜುರ್ವೇದ ಭಾಷ್ಯಂ.
    • ಪರಂಪರೆ:- 1883ರಲ್ಲಿ ಅವರ ಮರಣದ ನಂತರ, ಅವರ ನಂಬಿಕೆಗಳು, ಬೋಧನೆಗಳು ಮತ್ತು ವಿಚಾರಗಳಿಂದ ಪ್ರೇರಿತರಾಗಿ ಅವರ ಶಿಷ್ಯರು ದಯಾನಂದ ಆಂಗ್ಲೋ ವೇದಿಕ್ (DAV) ಕಾಲೇಜು ಟ್ರಸ್ಟ್ ಮತ್ತು  ನಿರ್ವಹಣಾ ಸಂಘವನ್ನು ಸ್ಥಾಪಿಸಿದರು.

    ಅಸ್ಸಾಂ ರೈಫಲ್ಸ್ : ದೇಶೀಯ ಶ್ವಾನ ತಳಿಗಳ ಸೇರ್ಪಡೆ

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ಅಸ್ಸಾಂ ರೈಫಲ್ಸ್ ತನ್ನ ವಿಶೇಷ ಶ್ವಾನದಳಕ್ಕೆ ಎರಡು ದೇಶೀಯ ಶ್ವಾನ ತಳಿಗಳಾದ ತಂಖುಲ್ ಹುಯಿ (ಹಫಾ) ಮತ್ತು ಕೋಂಬೈ ಅನ್ನು ಸೇರ್ಪಡೆಗೊಳಿಸುತ್ತಿದೆ.
    • ಈ ಸೇರ್ಪಡೆ ಪ್ರಕ್ರಿಯೆಯನ್ನು ಅಸ್ಸಾಂನ ಜೋರ್ಹತ್‌ನಲ್ಲಿರುವ ಅಸ್ಸಾಂ ರೈಫಲ್ಸ್ ಶ್ವಾನ ತರಬೇತಿ ಕೇಂದ್ರವು (ARDTC) ನಿರ್ವಹಿಸುತ್ತಿದೆ.

    ಭಾರತೀಯ ಶ್ವಾನ ತಳಿಗಳ ಬಗ್ಗೆ:

    • ತಂಖುಲ್ ಹುಯಿ:- ಇದು ಮಣಿಪುರದ ಉಖ್ರುಲ್ ಜಿಲ್ಲೆಗೆ ಸ್ಥಳೀಯವಾಗಿದೆ. ಇದು ಅತ್ಯಂತ ಧೈರ್ಯಶಾಲಿ ಹಾಗೂ ವಿಶಿಷ್ಟವಾದ ಜಾಡು ಹಿಡಿಯುವ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದೆ. ಇದು ಆಹಾರ ಅಥವಾ ನೀರಿಲ್ಲದೆ 48 ಗಂಟೆಗಳ ಕಾಲ ಪ್ರಾಣಿಗಳನ್ನು ಹಿಂಬಾಲಿಸುವ ದೈಹಿಕ ಸಾಮರ್ಥ್ಯವನ್ನು ಹೊಂದಿದೆ. ಇದು ರೋಗ ನಿರೋಧಕ ಶಕ್ತಿ ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಹೊಂದಿಕೊಳ್ಳುವ ಗುಣಕ್ಕೂ ಹೆಸರುವಾಸಿಯಾಗಿದೆ.
    • ಕೋಂಬೈ:- ಇದು ತಮಿಳುನಾಡಿಗೆ ಸ್ಥಳೀಯವಾಗಿದೆ ಮತ್ತು ಚುರುಕುತನ, ಕಾವಲು ಕಾಯುವ ಪ್ರವೃತ್ತಿ ಮತ್ತು ನಿಷ್ಠೆಗೆ ಗುರುತಿಸಲ್ಪಟ್ಟಿದೆ.

    ಅಸ್ಸಾಂ ರೈಫಲ್ಸ್ ನ ಬಗ್ಗೆ:

    • ಸ್ಥಾಪನೆ:- 1835
    • ಎರಡೂ ಮಹಾಯುದ್ಧಗಳಲ್ಲಿ ಭಾಗವಹಿಸುವಿಕೆ:- ಇದು ಎರಡೂ ಮಹಾಯುದ್ಧಗಳಲ್ಲಿ ಹಾಗೂ 1962ರ ಚೀನಾ-ಭಾರತದ ಯುದ್ಧದಲ್ಲಿ ಭಾಗವಹಿಸಿದ ಏಕೈಕ ಅರೆಸೇನಾ ಪಡೆಯಾಗಿದೆ.
    • ಪ್ರಧಾನ ಕಚೇರಿ:- ಮೇಘಾಲಯದ ಶಿಲ್ಲಾಂಗ್‌ ಮತ್ತು ಪ್ರಸ್ತುತ 46 ಬೆಟಾಲಿಯನ್‌ಗಳನ್ನು ಒಳಗೊಂಡಿದೆ.
    • ಇದು ಏಳು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPFs) ಒಂದಾಗಿದೆ. ಇದು ಪ್ರಾಥಮಿಕವಾಗಿ ಭಾರತದ ಇಂಡೋ-ಮ್ಯಾನ್ಮಾರ್ ಗಡಿಯನ್ನು ಕಾಯುತ್ತದೆ ಮತ್ತು ಈಶಾನ್ಯ ಭಾರತದಲ್ಲಿ ಗಡಿ ಭದ್ರತೆ, ಬಂಡಾಯ ನಿಗ್ರಹ ಮತ್ತು ಕಾನೂನು ಸುವ್ಯವಸ್ಥೆಯ ಮೇಲೆ ಗಮನಹರಿಸುತ್ತದೆ.

    ಕ್ಯಾಸನೂರು ಅರಣ್ಯ ಕಾಯಿಲೆ

    ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಕ್ಯಾಸನೂರು ಅರಣ್ಯ ಕಾಯಿಲೆ (KFD) ವಿರುದ್ಧ ಸುಧಾರಿತ ಲಸಿಕೆಯನ್ನು ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಸ್ಥಿರವಾಗಿ ಮುನ್ನಡೆಯುತ್ತಿದೆ.

    ಕ್ಯಾಸನೂರು ಅರಣ್ಯ ಕಾಯಿಲೆಯ ಬಗ್ಗೆ:

    • ಮೂಲ:- ಇದನ್ನು ಮೊದಲ ಬಾರಿಗೆ 1957ರಲ್ಲಿ ಕರ್ನಾಟಕದ ಕ್ಯಾಸನೂರು ಅರಣ್ಯದಲ್ಲಿ ಗುರುತಿಸಲಾಯಿತು. 
    • ಇದನ್ನು ಸಾಮಾನ್ಯವಾಗಿ ‘ಮಂಗನ ಕಾಯಿಲೆ’ ಎಂದು ಕರೆಯಲಾಗುತ್ತದೆ.
    • ಪ್ರಕಾರ:- ಇದು ಉಣ್ಣೆಗಳಿಂದ ಹರಡುವ ರಕ್ತಸ್ರಾವಕಾರಕ ವೈರಾಣು ಜ್ವರವಾಗಿದೆ (Viral Hemorrhagic Fever) ಮತ್ತು ಇದು ಫ್ಲಾವಿವಿರಿಡೆ ಕುಟುಂಬದ ‘ಕ್ಯಾಸನೂರು ಫಾರೆಸ್ಟ್ ಡಿಸೀಸ್ ವೈರಸ್‌’ನಿಂದ ಉಂಟಾಗುತ್ತದೆ.
    • ಹರಡುವಿಕೆ:- ಇದು ಮುಖ್ಯವಾಗಿ ಉಣ್ಣೆ ಕಚ್ಚುವಿಕೆಯಿಂದ (ಮುಖ್ಯವಾಗಿ ಹೇಮಾಫಿಸಾಲಿಸ್ ಸ್ಪಿನಿಗೆರಾ) ಅಥವಾ ಸೋಂಕಿತ ಪ್ರಾಣಿಗಳ, ನಿರ್ದಿಷ್ಟವಾಗಿ ರೋಗಗ್ರಸ್ತ ಅಥವಾ ಸತ್ತ ಕೋತಿಗಳ ಸಂಪರ್ಕದಿಂದ ಮನುಷ್ಯರಿಗೆ ಹರಡುತ್ತದೆ.
      • ಗಮನಿಸಿ:– ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ.
    • ಋತುಮಾನದ ಪ್ರವೃತ್ತಿ:- ಈ ಸಾಂಕ್ರಾಮಿಕವು ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಜೂನ್‌ವರೆಗೆ ಕಂಡುಬರುತ್ತದೆ ಹಾಗೂ ಜನವರಿ ಮತ್ತು ಏಪ್ರಿಲ್ ನಡುವಿನ ಅವಧಿಯಲ್ಲಿ ಇದು ಉತ್ತುಂಗದಲ್ಲಿರುತ್ತದೆ.
    • ಲಕ್ಷಣಗಳು:- ಹಠಾತ್ ಜ್ವರ, ತಲೆನೋವು ಮತ್ತು ವಾಂತಿ; ತೀವ್ರತರವಾದ ಪ್ರಕರಣಗಳಲ್ಲಿ ರಕ್ತಸ್ರಾವ ಮತ್ತು ನರವೈಜ್ಞಾನಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
    • ಮರಣ ಪ್ರಮಾಣ:- ಈ ಕಾಯಿಲೆಯು ಸರಿಸುಮಾರು 5% ರಿಂದ 10% ರಷ್ಟು ಮರಣ ದರವನ್ನು ಹೊಂದಿದೆ.
    • ಪ್ರಸ್ತುತ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ:- ರೋಗ ನಿರ್ವಹಣೆಯು ಪ್ರಮುಖವಾಗಿ ಪೋಷಕ ಆರೈಕೆಯನ್ನು (ಜಲಸಂಚಯನ, ಆಮ್ಲಜನಕ ಪೂರೈಕೆ ಮತ್ತು ರಕ್ತದೊತ್ತಡ ನಿರ್ವಹಣೆ) ಅವಲಂಬಿಸಿದೆ.
    • ತಡೆಗಟ್ಟುವಿಕೆ:- ಇದಕ್ಕೆ ಲಸಿಕೆ ಲಭ್ಯವಿದ್ದು, ಬಾಧಿತ ಪ್ರದೇಶಗಳಲ್ಲಿ ಇದನ್ನು ಪಡೆಯುವಂತೆ ವ್ಯಾಪಕವಾಗಿ ಶಿಫಾರಸು ಮಾಡಲಾಗಿದೆ.

    ರಾಜಾಜಿ ರಾಷ್ಟ್ರೀಯ ಉದ್ಯಾನವನ

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ರಾಜಾಜಿ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುವ 11.5 ಕಿ.ಮೀ ಉದ್ದದ ಲಾಲ್ಧಾಂಗ್-ಚಿಲ್ಲರ್ಖಾಲ್ ರಸ್ತೆ ಯೋಜನೆಯ ಡಾಂಬರೀಕರಣಕ್ಕೆ ಸರ್ವೋಚ್ಛ ನ್ಯಾಯಾಲಯವು ಅನುಮತಿ ನೀಡಿದೆ.

    ‘ರಾಜಾಜಿ ರಾಷ್ಟ್ರೀಯ ಉದ್ಯಾನವನ’ದ ಬಗ್ಗೆ:

    • ರಾಜಾಜಿ, ಮೋತಿಚೂರ್ ಮತ್ತು ಚಿಲ್ಲಾ ವನ್ಯಜೀವಿ ಧಾಮಗಳನ್ನು ವಿಲೀನಗೊಳಿಸುವ ಮೂಲಕ 1983ರಲ್ಲಿ ಇದನ್ನು ಸ್ಥಾಪಿಸಲಾಯಿತು.
    • ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಮೊದಲ ಗವರ್ನರ್-ಜನರಲ್ ಸಿ. ರಾಜಗೋಪಾಲಾಚಾರಿ (ರಾಜಾಜಿ) ಅವರ ಗೌರವಾರ್ಥವಾಗಿ ಇದಕ್ಕೆ ಹೆಸರಿಡಲಾಗಿದೆ.
    • ಸ್ಥಳ:- ಇದು ಹರಿದ್ವಾರ, ಋಷಿಕೇಶ ಮತ್ತು ಡೆಹ್ರಾಡೂನ್ ಬಳಿಯ ಹಿಮಾಲಯದ ತಪ್ಪಲಿನಲ್ಲಿ ನೆಲೆಗೊಂಡಿದೆ.
    • ನದಿಗಳು:- ಇದು ವೈವಿಧ್ಯಮಯ ಸಸ್ಯವರ್ಗ ಮತ್ತು ಶ್ರೀಮಂತ ಜೀವವೈವಿಧ್ಯವನ್ನು ಒಳಗೊಂಡಿದ್ದು, ಗಂಗಾ ಮತ್ತು ಸೋನ್ ನದಿಗಳು ಇದರ ಮೂಲಕ ಹರಿಯುತ್ತವೆ.
    • ಇದು ಆನೆಗಳು, ಹುಲಿಗಳು, ಚಿರತೆಗಳು, ಜಿಂಕೆಗಳು, ಘೋರಲ್‌ಗಳು (ಬೆಟ್ಟದ ಕಾಡು ಆಡುಗಳು)  ಮತ್ತು ಹಲವಾರು ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ ಹಾಗೂ ಈ ಮೂಲಕ ಪ್ರಕೃತಿ ಪ್ರಿಯರಿಗೆ ಇದೊಂದು ಸ್ವರ್ಗವಾಗಿದೆ.

    ಪಂಚಶೀಲ ಒಪ್ಪಂದ

    ಇದೀಗ ಸುದ್ದಿಯಲ್ಲಿದೆ:

    • ಚೀನಾದ ದೃಷ್ಟಿಕೋನವು ವಿಭಿನ್ನವಾಗಿದ್ದರೂ ಸಹ, 1954ರ ಪಂಚಶೀಲ ಒಪ್ಪಂದವು ಉತ್ತರದ ಗಡಿ ಪ್ರಶ್ನೆಯನ್ನು ಪರಿಣಾಮಕಾರಿಯಾಗಿ ಇತ್ಯರ್ಥಪಡಿಸಿದೆ ಎಂಬ ನಂಬಿಕೆಯನ್ನು ಭಾರತ ಹೊಂದಿತ್ತು ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು (CDS) ಇತ್ತೀಚಿಗೆ ಉಲ್ಲೇಖಿಸಿದ್ದಾರೆ.

    ‘ಪಂಚಶೀಲ ಒಪ್ಪಂದ’ದ ಬಗ್ಗೆ:

    • 1954ರಲ್ಲಿ, ಭಾರತವು ಟಿಬೆಟ್ ಅನ್ನು ಚೀನಾದ ಭಾಗವೆಂದು ಗುರುತಿಸಿತು ಮತ್ತು ಎರಡೂ ದೇಶಗಳು ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದವು.
      • ಪಂಚಶೀಲ ಒಪ್ಪಂದವು ಈ ಕೆಳಗಿನ 5 ತತ್ವಗಳನ್ನು ಪ್ರತಿಪಾದಿಸಿತು:
    • ಪರಸ್ಪರರ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಗೌರವ.
    • ಪರಸ್ಪರ ಆಕ್ರಮಣ ಮಾಡದಿರುವುದು.
    • ಪರಸ್ಪರರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು.
    • ಸಮಾನತೆ ಮತ್ತು ಪರಸ್ಪರ ಲಾಭಕ್ಕಾಗಿ ಸಹಕಾರ.
    • ಶಾಂತಿಯುತ ಸಹಬಾಳ್ವೆ.
    • ಇದು ವ್ಯಾಪಾರ ಮತ್ತು ಸ್ನೇಹ ಸಂಬಂಧಗಳನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿತ್ತು ಮತ್ತು ದ್ವಿಪಕ್ಷೀಯ ಸಂಬಂಧಗಳಿಗೆ ಆಧಾರವಾಯಿತು.
    • ಇದರೊಂದಿಗೆ, ಭಾರತವು ತನ್ನ ಉತ್ತರದ ಗಡಿಯನ್ನು ಇತ್ಯರ್ಥಪಡಿಸಲಾಗಿದೆ ಎಂದು ಭಾವಿಸಿತ್ತು.
    • 2025ರಲ್ಲಿ ಚೀನಾದ ಅಧ್ಯಕ್ಷರು, ಪಂಚಶೀಲ ತತ್ವಗಳನ್ನು ಎರಡೂ ದೇಶಗಳು ಪಾಲಿಸಬೇಕು ಮತ್ತು ಉತ್ತೇಜಿಸಬೇಕು ಎಂದು ಒತ್ತಿಹೇಳಿದರು.
    • ಭಾರತ ಮತ್ತು ಚೀನಾ ತಮ್ಮ ಸಂಬಂಧಗಳನ್ನು ಪುನರುಜ್ಜೀವನಗೊಳಿಸುತ್ತಿರುವಾಗ ಮತ್ತು ಪ್ರಧಾನಿ ಮೋದಿಯವರು ಏಳು ವರ್ಷಗಳ ನಂತರ ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಹೇಳಿಕೆ ಬಂದಿದೆ.

    ಭಾರತ-ಚೀನಾ ಗಡಿಗಳು:

      • ಭಾರತವು ವಾಸ್ತವ ನಿಯಂತ್ರಣ ರೇಖೆಯನ್ನು (LAC) 3,488 ಕಿ.ಮೀ ಉದ್ದವೆಂದು ಪರಿಗಣಿಸಿದರೆ, ಚೀನಾ ಅದನ್ನು ಕೇವಲ 2,000 ಕಿ.ಮೀ ಎಂದು ಪರಿಗಣಿಸುತ್ತದೆ.
      • ಇದನ್ನು ಈ ಕೆಳಗಿನ 3 ವಲಯಗಳಾಗಿ ವಿಂಗಡಿಸಲಾಗಿದೆ:
    • ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವ್ಯಾಪಿಸಿರುವ ಪೂರ್ವ ವಲಯ,
    • ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿರುವ ಮಧ್ಯ ವಲಯ,
    • ಲಡಾಖ್‌ನಲ್ಲಿರುವ ಪಶ್ಚಿಮ ವಲಯ.

    ಪಶ್ಚಿಮ ವಲಯ ಅಥವಾ ಅಕ್ಸಾಯ್ ಚಿನ್ ವಲಯ:

    • ಮೂಲತಃ ಭಾರತದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿದ್ದ ಈ ಪ್ರದೇಶವನ್ನು, 1962ರ ಯುದ್ಧದ ನಂತರ ಚೀನಾ ಸರ್ಕಾರವು ಕ್ಸಿನ್ಜಿಯಾಂಗ್ (Xinjiang) ಪ್ರಾಂತ್ಯದ ಸ್ವಾಯತ್ತ ಭಾಗವೆಂದು ಹೇಳಿಕೊಳ್ಳುತ್ತಿದೆ.

    ಮಧ್ಯ ವಲಯ:

    • ಇದು ಭಾರತ-ಚೀನಾ ಗಡಿಯ ಕಡಿಮೆ ವಿವಾದಿತ ವಿಭಾಗವಾಗಿದೆ, ಆದರೆ ಇತ್ತೀಚಿನ ಡೋಕ್ಲಾಂ ಬಿಕ್ಕಟ್ಟು ಮತ್ತು ನಾಥು ಲಾ ಪಾಸ್ ವ್ಯಾಪಾರ ಸಮಸ್ಯೆಗಳು ಎಲ್ಲಾ ಹಂತಗಳಲ್ಲಿ ಸಂಕಷ್ಟವನ್ನು ತಂದೊಡ್ಡಿವೆ.

    ಪೂರ್ವ ವಲಯ ಅಥವಾ ಅರುಣಾಚಲ ಪ್ರದೇಶ:

    • ಈ ವಲಯದಲ್ಲಿ ಮೆಕ್‌ಮಹೊನ್ ರೇಖೆಯು ಭಾರತ ಮತ್ತು ಚೀನಾವನ್ನು ಪ್ರತ್ಯೇಕಿಸಿತ್ತು, ಆದರೆ 1962ರ ಯುದ್ಧದಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (PLA) 9000 ಚದರ ಕಿ.ಮೀ ಪ್ರದೇಶವನ್ನು ಆಕ್ರಮಿಸಿಕೊಂಡಿತು.
    • ಆದಾಗ್ಯೂ, ಚೀನಾ ಇಡೀ ಅರುಣಾಚಲ ಪ್ರದೇಶವನ್ನು ತನ್ನದು ಎಂದು ಹೇಳಿಕೊಳ್ಳಲು ಪ್ರಾರಂಭಿಸಿದೆ.
  • ತಪ್ಪು ಮಾಹಿತಿ ಮತ್ತು ದ್ವೇಷ ಭಾಷಣ ತಡೆಗೆ ಎಐ (AI) ಆಧಾರಿತ ತಂತ್ರಾಂಶ

    ತಪ್ಪು ಮಾಹಿತಿ ಮತ್ತು ದ್ವೇಷ ಭಾಷಣ ತಡೆಗೆ ಎಐ (AI) ಆಧಾರಿತ ತಂತ್ರಾಂಶ

    ಇದೀಗ ಸುದ್ದಿಯಲ್ಲಿದೆ:

    • ಡಿಜಿಟಲ್ ವೇದಿಕೆಗಳಲ್ಲಿ ದ್ವೇಷ ಭಾಷಣ, ಡೀಪ್‌ಫೇಕ್ ಮತ್ತು ತಪ್ಪು ಮಾಹಿತಿಯನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಸುಧಾರಿತ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಾಂಶವನ್ನು ಅಳವಡಿಸಲು ಕರ್ನಾಟಕ ಸಚಿವ ಸಂಪುಟವು ಅನುಮೋದನೆ ನೀಡಿದೆ.

    ಪ್ರಮುಖ ಅಂಶಗಳು:

    • ಯೋಜನಾ ವೆಚ್ಚ:- ಈ ಉಪಕ್ರಮವನ್ನು ಅಂದಾಜು ₹67.26 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲಾಗುವುದು.
    • ಪ್ರಾಥಮಿಕ ಉದ್ದೇಶ:- ದುರುದ್ದೇಶಪೂರಿತ ನಿರೂಪಣೆಗಳು, ಉದ್ದೇಶಪೂರ್ವಕ ಸುಳ್ಳು ಮಾಹಿತಿ ಮತ್ತು ವಿಷಯಾಧಾರಿತ ತಿರುಚುವಿಕೆಗಳನ್ನು ಪತ್ತೆಹಚ್ಚುವ ಮೂಲಕ ಸಾರ್ವಜನಿಕ ಸುರಕ್ಷತೆಯನ್ನು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಭದ್ರತೆಯನ್ನು ಸುದೃಢಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ..
  • ಕರ್ನಾಟಕ ಮಾಹಿತಿ ಆಯೋಗ (KIC)

    ಕರ್ನಾಟಕ ಮಾಹಿತಿ ಆಯೋಗ (KIC)

    ಇದೀಗ ಸುದ್ದಿಯಲ್ಲಿದೆ:

    • ಮಾಹಿತಿ ಹಕ್ಕು ಕಾಯ್ದೆ (RTI Act) ಅಡಿಯಲ್ಲಿ ಸಲ್ಲಿಕೆಯಾಗುವ ದ್ವಿತೀಯ ಮೇಲ್ಮನವಿಗಳ ವಿಲೇವಾರಿಯಲ್ಲಿ, ದೇಶದಲ್ಲೇ ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತಿರುವ ಆಯೋಗ ಎಂಬ ಹೆಗ್ಗಳಿಕೆಗೆ ‘ಕರ್ನಾಟಕ ಮಾಹಿತಿ ಆಯೋಗ’ (KIC) ಪಾತ್ರವಾಗಿದೆ.

    ಕರ್ನಾಟಕ ಮಾಹಿತಿ ಆಯೋಗದ (KIC) ಬಗ್ಗೆ:

    • ಇದು ಮಾಹಿತಿ ಹಕ್ಕು (RTI) ಕಾಯ್ದೆ, 2005 ರ ಅಡಿಯಲ್ಲಿ ಮಾರ್ಚ್ 2, 2006 ರಂದು ಸ್ಥಾಪಿಸಲಾದ ಒಂದು ಸ್ವಾಯತ್ತ ಶಾಸನಬದ್ಧ ಸಂಸ್ಥೆಯಾಗಿದೆ.
    • ಇದು ಕರ್ನಾಟಕ ರಾಜ್ಯದೊಳಗಿನ ಸಾರ್ವಜನಿಕ ಪ್ರಾಧಿಕಾರಗಳಿಂದ ಮಾಹಿತಿಯನ್ನು ಕೋರುವ ನಾಗರಿಕರಿಗೆ ಅಂತಿಮ ಮೇಲ್ಮನವಿ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.

    ಪ್ರಮುಖ ನಾಯಕತ್ವ ಮತ್ತು ರಚನೆ:

    • ರಾಜ್ಯ ಮುಖ್ಯ ಮಾಹಿತಿ ಆಯುಕ್ತರು (ಪ್ರಭಾರ):- ಡಾ. ಹೆಚ್.ಸಿ. ಸತ್ಯನ್.
    • ಪೀಠಗಳು:- ಬೆಂಗಳೂರಿನಲ್ಲಿರುವ ತನ್ನ ಪ್ರಧಾನ ಕಚೇರಿಯ ಜೊತೆಗೆ, ಆಯೋಗವು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಬೆಳಗಾವಿ ಮತ್ತು ಕಲಬುರಗಿಯಲ್ಲಿ ಪ್ರಾದೇಶಿಕ ಪೀಠಗಳನ್ನು ನಿರ್ವಹಿಸುತ್ತಿದೆ.

    ಪ್ರಮುಖ ಕಾರ್ಯಗಳು ಮತ್ತು ಅಧಿಕಾರಗಳು:

    • ನ್ಯಾಯನಿರ್ಣಯ:- ಸಾರ್ವಜನಿಕ ಮಾಹಿತಿ ಅಧಿಕಾರಿಗಳು (PIOs) ಮಾಹಿತಿ ನೀಡಲು ನಿರಾಕರಿಸಿದಾಗ ಅಥವಾ ವಿಳಂಬ ಮಾಡಿದಾಗ ಸಲ್ಲಿಕೆಯಾಗುವ ‘ಎರಡನೇ ಮೇಲ್ಮನವಿಗಳು’ ಮತ್ತು ದೂರುಗಳ ವಿಚಾರಣೆಯನ್ನು ಆಯೋಗವು ನಡೆಸುತ್ತದೆ.
    • ದಂಡ ವಿಧಿಸುವಿಕೆ:- ಮಾಹಿತಿ ಒದಗಿಸಲು ವಿಳಂಬ ಮಾಡುವ ಅಧಿಕಾರಿಗಳ ಮೇಲೆ ₹25,000 ದವರೆಗೆ ಆರ್ಥಿಕ ದಂಡವನ್ನು ವಿಧಿಸುವ ಅಧಿಕಾರವನ್ನು ಆಯೋಗ ಹೊಂದಿದೆ.

    ನ್ಯಾಯಾಂಗ ಅಧಿಕಾರ:- ಇದು ‘ನಾಗರಿಕ ನ್ಯಾಯಾಲಯದ’ ಅಧಿಕಾರಗಳನ್ನು ಹೊಂದಿದ್ದು, ಸಾಕ್ಷಿಗಳಿಗೆ ಸಮನ್ಸ್ ಜಾರಿ ಮಾಡುವುದು, ಪ್ರಮಾಣ ವಚನದ ಅಡಿಯಲ್ಲಿ ಮೌಖಿಕ ಅಥವಾ ಲಿಖಿತ ಸಾಕ್ಷ್ಯವನ್ನು ಒದಗಿಸುವಂತೆ ಕೇಳುವುದು ಮತ್ತು ಸಾರ್ವಜನಿಕ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರವನ್ನು ಒಳಗೊಂಡಿದೆ.

  • ಭಾರತದಲ್ಲಿ ಜೈವಿಕ ಸುರಕ್ಷತೆ ಅಪಾಯ | ವಂದೇ ಮಾತರಂ | ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI), 2025 | ಭಾರತದ ಮೊದಲ ಸಂಗೀತಮಯ ರಸ್ತೆ

    ಭಾರತದಲ್ಲಿ ಜೈವಿಕ ಸುರಕ್ಷತೆ ಅಪಾಯ

    ಆರೋಗ್ಯ

    ಇದೀಗ ಸುದ್ದಿಯಲ್ಲಿದೆ: 

    • 2025ರಲ್ಲಿ, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ರೈಸಿನ್ ಆಧಾರಿತ ಶಂಕಿತ ಜೈವಿಕ ಭಯೋತ್ಪಾದನಾ ಸಂಚನ್ನು ಭೇದಿಸಿತು. 
    • ಇದು ಅಂತರರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿರಬಹುದಾದ ಭಾರತದ ಮೊದಲ ಶಂಕಿತ ರೈಸಿನ್-ಸಂಬಂಧಿತ ಜೈವಿಕ ಭಯೋತ್ಪಾದನಾ ಪ್ರಕರಣವಾಗಿದೆ.

    ಜೈವಿಕ ಅಸ್ತ್ರಗಳು:

    • ವ್ಯಾಖ್ಯಾನ:- ಮನುಷ್ಯರು, ಪ್ರಾಣಿಗಳು ಅಥವಾ ಬೆಳೆಗಳಲ್ಲಿ ರೋಗ ಅಥವಾ ಸಾವನ್ನು ಉಂಟುಮಾಡಲು ರೋಗಕಾರಕಗಳನ್ನು (ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ) ಅಥವಾ ವಿಷಕಾರಿ ದ್ರವ್ಯಗಳನ್ನು (ರೈಸಿನ್, ಬೊಟುಲಿನಮ್ ಟಾಕ್ಸಿನ್) ಬಳಸುವುದೇ ಜೈವಿಕ ಅಸ್ತ್ರಗಳು.
    • ಇವುಗಳು ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟುಮಾಡುವ ಸಾಮರ್ಥ್ಯವಿರುವುದರಿಂದ ಸಾಮೂಹಿಕ ವಿನಾಶದ ಅಸ್ತ್ರಗಳು (WMDs) ಎಂದು ವರ್ಗೀಕರಿಸಲಾಗಿದೆ.

    ಭಾರತದ ಪ್ರಸ್ತುತ ಜೈವಿಕ ಸುರಕ್ಷತಾ ಚೌಕಟ್ಟು:

    • ಜೈವಿಕ ತಂತ್ರಜ್ಞಾನ ಇಲಾಖೆ:- ಇದು ಪ್ರಯೋಗಾಲಯಗಳ ಸಂಶೋಧನಾ ಆಡಳಿತ ಮತ್ತು ಸುರಕ್ಷತಾ ಚೌಕಟ್ಟುಗಳನ್ನು ನೋಡಿಕೊಳ್ಳುತ್ತದೆ.
    • ಭಾರತೀಯ ಸಸ್ಯಗಳನ್ನು ಪ್ರತ್ಯೇಕಿಸುವ ಸಂಸ್ಥೆ:- ಇದು ಕೃಷಿ ಆಮದು ಮತ್ತು ರಫ್ತುಗಳನ್ನು ನಿಯಂತ್ರಿಸುತ್ತದೆ.
    • ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA):- ಜೈವಿಕ ವಿಪತ್ತುಗಳ ನಿರ್ವಹಣೆಗಾಗಿ ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ.

    ಭಾರತದಲ್ಲಿರುವ ಪ್ರಮುಖ ಕಾನೂನು ಉಪಕ್ರಮಗಳು:

    • ಪರಿಸರ (ಸಂರಕ್ಷಣೆ) ಕಾಯ್ದೆ, 1986:- ಇದು ಅಪಾಯಕಾರಿ ಸೂಕ್ಷ್ಮಜೀವಿಗಳು ಮತ್ತು ಕುಲಾಂತರಿ (ತಳೀಯವಾಗಿ ಮಾರ್ಪಡಿಸಿದ) ಜೀವಿಗಳನ್ನು ನಿಯಂತ್ರಿಸುತ್ತದೆ.
    • ಸಾಮೂಹಿಕ ವಿನಾಶದ ಅಸ್ತ್ರಗಳು ಮತ್ತು ಅವುಗಳ ವಿತರಣಾ ವ್ಯವಸ್ಥೆಗಳ (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ಕಾಯ್ದೆ, 2005:- ಇದು ಜೈವಿಕ ಅಸ್ತ್ರಗಳನ್ನು ಅಪರಾಧವೆಂದು ಪರಿಗಣಿಸುತ್ತದೆ.
    • ಜೈವಿಕ ಸುರಕ್ಷತಾ ನಿಯಮಗಳು, 1989:- ಮತ್ತು ಮರುಸಂಯೋಜಿತ ಡಿಎನ್‌ಎ ಸಂಶೋಧನೆ ಮತ್ತು ಜೈವಿಕ ನಿಯಂತ್ರಣಕ್ಕಾಗಿ 2017ರಲ್ಲಿ ಹೊರಡಿಸಲಾದ ಮಾರ್ಗಸೂಚಿಗಳು.

    ಅಂತರರಾಷ್ಟ್ರೀಯ ಉಪಕ್ರಮಗಳು:

    ಜೈವಿಕ ಅಸ್ತ್ರಗಳ ಸಮಾವೇಶ (BWC):

    • ಇದು 1975ರಲ್ಲಿ ಜಾರಿಗೆ ಬಂದಿತು.
    • ಇದು ಜೈವಿಕ ಮತ್ತು ವಿಷಕಾರಿ ಅಸ್ತ್ರಗಳ ಅಭಿವೃದ್ಧಿ, ಉತ್ಪಾದನೆ, ಸ್ವಾಧೀನ, ವರ್ಗಾವಣೆ, ಸಂಗ್ರಹಣೆ ಮತ್ತು ಬಳಕೆಯನ್ನು ನಿಷೇಧಿಸುತ್ತದೆ.
    • ಇದು ಇಡೀ ವರ್ಗದ ಸಾಮೂಹಿಕ ವಿನಾಶದ ಅಸ್ತ್ರಗಳನ್ನು (WMD) ನಿಷೇಧಿಸಿದ ಮೊದಲ ಬಹುಪಕ್ಷೀಯ ನಿಶ್ಯಸ್ತ್ರೀಕರಣ ಒಪ್ಪಂದವಾಗಿದೆ.

    ರಾಸಾಯನಿಕ ಅಸ್ತ್ರಗಳ ಸಮಾವೇಶ (CWC):

    • ಧ್ಯೇಯೋದ್ದೇಶ:- ಇದು ರಾಸಾಯನಿಕ ಅಸ್ತ್ರಗಳು ಮತ್ತು ಅವುಗಳ ತಯಾರಿಕೆಗೆ ಬಳಸುವ ಮೂಲ ರಾಸಾಯನಿಕಗಳ ಉತ್ಪಾದನೆ, ಸಂಗ್ರಹಣೆ ಮತ್ತು ಬಳಕೆಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಒಪ್ಪಂದವಾಗಿದೆ.
    • ಅಂಗೀಕಾರ:- ಸೆಪ್ಟೆಂಬರ್ 3, 1992
    • ಜಾರಿ:- ಏಪ್ರಿಲ್ 29, 1997
    • ಸದಸ್ಯ ರಾಷ್ಟ್ರಗಳು:- 193 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
    • ಕಾನೂನುಬದ್ಧವಾಗಿ ಬದ್ಧವಾಗಿದೆ:- ಹಳೆಯ ಮತ್ತು ತ್ಯಜಿಸಿದ ರಾಸಾಯನಿಕ ಅಸ್ತ್ರಗಳನ್ನು ನಾಶಪಡಿಸುವುದನ್ನು ಇದು ಕಡ್ಡಾಯಗೊಳಿಸುತ್ತದೆ.
    • ಭಾರತದ ಅನುಮೋದನೆ ದೊರೆತಿದೆ:- ಭಾರತವು ಜನವರಿ 1993ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿತು.

    ಆಸ್ಟ್ರೇಲಿಯಾ ಗುಂಪು:

    • ಅನೌಪಚಾರಿಕ ವೇದಿಕೆಯಾಗಿದೆ:- ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳ ಪ್ರಸರಣವನ್ನು ತಡೆಯಲು ಪ್ರಯತ್ನಿಸುವ ದೇಶಗಳ ಒಂದು ಅನೌಪಚಾರಿಕ ವೇದಿಕೆಯಾಗಿದೆ.

    ವಂದೇ ಮಾತರಂ

    ರಾಜಕೀಯ ಮತ್ತು ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಹಾಡು ಎರಡನ್ನೂ ನುಡಿಸುವಾಗ, ರಾಷ್ಟ್ರಗೀತೆಗಿಂತ ಮೊದಲು ರಾಷ್ಟ್ರೀಯ ಹಾಡು ‘ವಂದೇ ಮಾತರಂ’ ಅನ್ನು ಹಾಡಬೇಕು ಅಥವಾ ನುಡಿಸಬೇಕು ಎಂದು ನಿರ್ದೇಶಿಸಿ ಕೇಂದ್ರ ಗೃಹ ಸಚಿವಾಲಯವು (MHA) ಮಾರ್ಗಸೂಚಿಗಳನ್ನು ಹೊರಡಿಸಿದೆ.

    ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಪ್ರಮುಖ ಮಾರ್ಗಸೂಚಿಗಳು:

    ಹಾಡುವ ಅಥವಾ ನುಡಿಸುವ ಸಂದರ್ಭಗಳು:

      • ಔಪಚಾರಿಕ ರಾಜ್ಯ ಸಮಾರಂಭಗಳಿಗೆ ರಾಷ್ಟ್ರಪತಿಯವರ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ.
      • ದೇಶವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡುವ ಭಾಷಣದ ಮೊದಲು ಮತ್ತು ನಂತರ.
      • ರಾಜ್ಯ ಸಮಾರಂಭಗಳಲ್ಲಿ ರಾಜ್ಯಪಾಲರ ಅಥವಾ ಉಪ- ರಾಜ್ಯಪಾಲರ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ.
    • ರಾಷ್ಟ್ರಧ್ವಜವನ್ನು ಕ್ರಮಬದ್ಧವಾದ ಮೆರವಣಿಗೆ (ಪೆರೇಡ್‌)ಗೆ ತರುವಾಗ.
    • ಭಾರತ ಸರ್ಕಾರವು ನಿರ್ದಿಷ್ಟಪಡಿಸಿದ ಇತರೆ ಸಂದರ್ಭಗಳಲ್ಲಿ.

    ಶಿಷ್ಟಾಚಾರ:

    • ಸುಮಾರು 3 ನಿಮಿಷ 10 ಸೆಕೆಂಡುಗಳ ಅಧಿಕೃತ ಆವೃತ್ತಿಯನ್ನು ಬಳಸಬೇಕು.
    • 1937ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಕೈಬಿಟ್ಟಿದ್ದ ನಾಲ್ಕು ಚರಣಗಳು ಸೇರಿದಂತೆ, ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ನುಡಿಸಬೇಕು.

    ಸಾಂವಿಧಾನಿಕ ಮತ್ತು ಕಾನೂನು ಚೌಕಟ್ಟು:

    • ರಾಷ್ಟ್ರೀಯ ಚಿಹ್ನೆಗಳ ಸ್ಥಾನಮಾನ:- 1950ರ ಜನವರಿ 24 ರಂದು, ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಭಾರತದ ರಾಷ್ಟ್ರೀಯ ಹಾಡು ಎಂದು ಅಂಗೀಕರಿಸಲಾಯಿತು.
    • ಸಂವಿಧಾನವು ಸ್ಪಷ್ಟವಾಗಿ ವ್ಯಾಖ್ಯಾನಿಸಿಲ್ಲ:- ಸಂವಿಧಾನವು “ರಾಷ್ಟ್ರೀಯ ಹಾಡು” ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸದಿದ್ದರೂ, ಅದರ ಮಾನ್ಯತೆಯು ಸಂವಿಧಾನ ರಚನಾ ಸಭೆಯ ಚರ್ಚೆಗಳು ಮತ್ತು ಕಾರ್ಯಾಂಗದ ರೂಢಿಗಳಿಂದ ಪಡೆದುಕೊಂಡಿದೆ.
    • ವಿಧಿ 51A(a) – ಮೂಲಭೂತ ಕರ್ತವ್ಯಗಳು:- ಪ್ರತಿಯೊಬ್ಬ ಪ್ರಜೆಯು ಸಂವಿಧಾನಕ್ಕೆ ಬದ್ಧರಾಗಿರಬೇಕು ಮತ್ತು ಅದರ ಆದರ್ಶಗಳು, ಸಂಸ್ಥೆಗಳು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಬೇಕು ಎಂದು ಇದು ಆದೇಶಿಸುತ್ತದೆ.
    • ಸಾಂವಿಧಾನದ ವಿಧಿಯ ಮೂಲಕ ಸ್ಪಷ್ಟ ರಕ್ಷಣೆ ಇಲ್ಲ:- ವಂದೇ ಮಾತರಂಗೆ ಯಾವುದೇ ಸಾಂವಿಧಾನಿಕ ವಿಧಿಯ ಮೂಲಕ ಸ್ಪಷ್ಟ ರಕ್ಷಣೆ ಇಲ್ಲ.

    ವಂದೇ ಮಾತರಂ ಹಾಡಿನ ಬಗ್ಗೆ:

    • ವಂದೇ ಮಾತರಂ ಅನ್ನು ಬಂಕಿಮ್ ಚಂದ್ರ ಚಟರ್ಜಿ ಅವರು ಸಂಸ್ಕೃತದಲ್ಲಿ ರಚಿಸಿದರು ಮತ್ತು ಇದು 1882ರಲ್ಲಿ ‘ಆನಂದಮಠ’ ಕಾದಂಬರಿಯಲ್ಲಿ ಮೊದಲು ಪ್ರಕಟವಾಯಿತು.
    • ಆನಂದಮಠ ಕಾದಂಬರಿಯು 1769-73ರ ಬಂಗಾಳದ ಕ್ಷಾಮ ಮತ್ತು ಸನ್ಯಾಸಿ ದಂಗೆಯ ಹಿನ್ನೆಲೆಯನ್ನು ಹೊಂದಿದೆ.
    • 1896ರ ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಠಾಗೋರ್ ಅವರು ಇದನ್ನು ಮೊದಲು ಹಾಡಿದರು, ಇದು ಇದಕ್ಕೆ ರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿತು.
    • ವಂದೇ ಮಾತರಂ ಅನ್ನು ರಾಜಕೀಯ ಘೋಷಣೆಯಾಗಿ ಮೊದಲು 1905ರ ಆಗಸ್ಟ್ 7 ರಂದು ಬಳಸಲಾಯಿತು.
    • 1905ರ ಸ್ವದೇಶಿ ಚಳುವಳಿಯ ಸಮಯದಲ್ಲಿ, ವಂದೇ ಮಾತರಂ ನಾಗರಿಕ ಪ್ರತಿರೋಧದ ಗೀತೆಯಾಗಿ ಹೊರಹೊಮ್ಮಿತು.

    ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI), 2025

    ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ 2025ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕವನ್ನು (CPI) ಪ್ರಕಟಿಸಿದೆ.

    ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI)ದ ಬಗ್ಗೆ:

    • ಪ್ರಕಟಿಸುವವರು:- ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್
    • ಉದ್ದೇಶ:- ಇದು 182 ದೇಶಗಳಲ್ಲಿನ ಸಾರ್ವಜನಿಕ ವಲಯದ ಭ್ರಷ್ಟಾಚಾರದ ಮಟ್ಟವನ್ನು ಅಳೆಯುತ್ತದೆ.
    • ವಿಧಾನ:- ಇದು 0 (ಅತ್ಯಂತ ಭ್ರಷ್ಟ) ಯಿಂದ 100 (ಅತ್ಯಂತ ಶುದ್ಧ/ಭ್ರಷ್ಟಾಚಾರ ರಹಿತ) ರವರೆಗಿನ ಮಾಪಕವನ್ನು ಬಳಸುತ್ತದೆ.
    • ಅತ್ಯುತ್ತಮ ನಿರ್ವಹಣೆ ತೋರಿದ ದೇಶಗಳು:- ಡೆನ್ಮಾರ್ಕ್ (89), ಫಿನ್ಲ್ಯಾಂಡ್ (88) ಮತ್ತು ಸಿಂಗಾಪುರ (84). 
    • ಅತ್ಯಂತ ಕಳಪೆ ನಿರ್ವಹಣೆ ತೋರಿದ ದೇಶಗಳು:- ದಕ್ಷಿಣ ಸುಡಾನ್ ಮತ್ತು ಸೊಮಾಲಿಯಾ.
    • ಭಾರತದ ನಿರ್ವಹಣೆ:- 2025ರಲ್ಲಿ, ಭಾರತವು ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ (CPI) ಜಾಗತಿಕವಾಗಿ 91ನೇ ಸ್ಥಾನ ಪಡೆದಿದ್ದು, 100ಕ್ಕೆ 39 ಅಂಕಗಳನ್ನು ಗಳಿಸಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಲ್ಪ ಸುಧಾರಣೆಯಾಗಿದೆ.

    ಭಾರತದ ಮೊದಲ ಸಂಗೀತಮಯ ರಸ್ತೆ

    ಸರ್ಕಾರದ ಉಪಕ್ರಮಗಳು

    ಇದೀಗ ಸುದ್ದಿಯಲ್ಲಿದೆ: 

    • ಮುಂಬೈನ ಕರಾವಳಿ ರಸ್ತೆಯಲ್ಲಿ ಭಾರತದ ಮೊದಲ ಸಂಗೀತಮಯ ರಸ್ತೆಯನ್ನು ಪರಿಚಯಿಸಲಾಗಿದೆ.

    ‘ಭಾರತದ ಮೊದಲ ಸಂಗೀತಮಯ ರಸ್ತೆ’ಯ ಬಗ್ಗೆ:

    • ‘ಸಂಗೀತ ಮಾರ್ಗ’:- ನಾರಿಮನ್ ಪಾಯಿಂಟ್ ಮತ್ತು ವರ್ಲಿ ನಡುವಿನ 500 ಮೀಟರ್ ಉದ್ದದ ರಸ್ತೆಗೆ ‘ಸಂಗೀತ ಮಾರ್ಗ’ ಎಂದು ಹೆಸರಿಸಲಾಗಿದೆ. ವಾಹನಗಳು ಗಂಟೆಗೆ 60–80 ಕಿ.ಮೀ ವೇಗದಲ್ಲಿ ಚಲಿಸಿದಾಗ, ಆಸ್ಕರ್ ಪ್ರಶಸ್ತಿ ವಿಜೇತ “ಜೈ ಹೋ” ಹಾಡು ಮೊಳಗುತ್ತದೆ.
    • ಈ ಪರಿಕಲ್ಪನೆಯು ನಿಗದಿತ ಅಂತರಗಳಲ್ಲಿ ಡಾಂಬರು ರಸ್ತೆಯ ಮೇಲೆ ಕೆತ್ತಲಾದ ವಿಶೇಷವಾಗಿ ವಿನ್ಯಾಸಗೊಳಿಸಿದ ಕಂಪನ ಪಟ್ಟಿಗಳನ್ನು (ರಂಬಲ್ ಸ್ಟ್ರಿಪ್) ಬಳಸುತ್ತದೆ.
    • ವಾಹನಗಳು ಈ ಪಟ್ಟಿಗಳ ಮೇಲೆ ಚಲಿಸಿದಾಗ, ಟೈರ್‌ಗಳು ಮತ್ತು ರಸ್ತೆ ಮೇಲ್ಮೈ ನಡುವಿನ ಘರ್ಷಣೆಯಿಂದ ಕಂಪನಗಳು ಉಂಟಾಗುತ್ತವೆ.
    • ಈ ಕಂಪನಗಳು ಶಬ್ದ ತರಂಗಗಳನ್ನು ಸೃಷ್ಟಿಸುತ್ತವೆ, ಇವು ಒಗ್ಗೂಡಿ ಸಂಗೀತದ ರಾಗವನ್ನು ಉತ್ಪಾದಿಸುತ್ತವೆ. ಇದನ್ನು ವಾಹನದೊಳಗಿರುವ ಪ್ರಯಾಣಿಕರು ಕೇಳಬಹುದು.
    • ಈ ಪರಿಕಲ್ಪನೆಯು ಹಂಗೇರಿಯಾದ ತಂತ್ರಜ್ಞಾನವನ್ನು ಆಧರಿಸಿದೆ ಮತ್ತು ಇದನ್ನು ಈಗಾಗಲೇ ಹಂಗೇರಿ, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ದೇಶಗಳಲ್ಲಿ ಅಳವಡಿಸಲಾಗಿದೆ.