Blog

  • ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) – 57ನೇ ಸಂಸ್ಥಾಪನಾ ದಿನ | ಮಿನ್ಯೂಟ್‌ಮ್ಯಾನ್ III (Minuteman III) ಕ್ಷಿಪಣಿ | ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (NIIF) | ಕ್ಷುದ್ರಗ್ರಹ 2024 YR4

    ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) – 57ನೇ ಸಂಸ್ಥಾಪನಾ ದಿನ

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) 57ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.

    ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಯ ಬಗ್ಗೆ:

    • ಅರೆಸೇನಾ ಪಡೆಯಾಗಿದೆ:- ಇದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಕಾಯ್ದೆ, 1968ರ ಅಡಿಯಲ್ಲಿ 1969ರಲ್ಲಿ ಸ್ಥಾಪಿಸಲಾದ ಅರೆಸೇನಾ ಪಡೆಯಾಗಿದೆ.
    • ಪ್ರತಿ ವರ್ಷ ಮಾರ್ಚ್ 10ರಂದು ಸಿಐಎಸ್ಎಫ್ (CISF) ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ.
    • ಕಾರ್ಯನಿರ್ವಹಣೆ:- ಭಾರತ ಸರ್ಕಾರದ ಗೃಹ ಸಚಿವಾಲಯ
    • ಕಾರ್ಯಗಳು:- ಈ ಕೆಳಗಿನ ಕಾರ್ಯತಂತ್ರದ ಸಂಸ್ಥೆಗಳಿಗೆ ಮತ್ತು ಭಾರತದ ಆರ್ಥಿಕತೆಯ ಮೂಲಭೂತ ಕ್ಷೇತ್ರಗಳಿಗೆ ಭದ್ರತೆ ಮತ್ತು ರಕ್ಷಣೆಯನ್ನು ಒದಗಿಸುತ್ತದೆ.
    1. ಬಾಹ್ಯಾಕಾಶ ಇಲಾಖೆ
    2. ಪರಮಾಣು ಶಕ್ತಿ ಇಲಾಖೆ
    3. ವಿಮಾನ ನಿಲ್ದಾಣಗಳು
    4. ದೆಹಲಿ ಮೆಟ್ರೋ ಮತ್ತು ಬಂದರುಗಳು
    5. ರಾಷ್ಟ್ರದ ಐತಿಹಾಸಿಕ ಸ್ಮಾರಕಗಳು
    6. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಿದ್ಯುತ್, ಕಲ್ಲಿದ್ದಲು, ಉಕ್ಕು ಮತ್ತು ಗಣಿಗಾರಿಕೆ.

    ಮಿನ್ಯೂಟ್‌ಮ್ಯಾನ್ III (Minuteman III) ಕ್ಷಿಪಣಿ

    ಅಂತರರಾಷ್ಟ್ರೀಯ

    ಇದೀಗ ಸುದ್ದಿಯಲ್ಲಿದೆ:

    • ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕವು ತನ್ನ ಮಿನ್ಯೂಟ್‌ಮ್ಯಾನ್ III ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ.

    ಮಿನ್ಯೂಟ್‌ಮ್ಯಾನ್ III ಕ್ಷಿಪಣಿಯ ಬಗ್ಗೆ:

    • ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ (ICBM):- ‘ಡೂಮ್ಸ್‌ಡೇ’ ಕ್ಷಿಪಣಿ ಎಂದು ಅಡ್ಡಹೆಸರಿನಿಂದ ಕರೆಯಲ್ಪಡುವ ಇದು, ಅತ್ಯಂತ ಶಕ್ತಿಶಾಲಿ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ (ICBM).
    • ಸಾಮರ್ಥ್ಯ:- ಇದು ಮ್ಯಾಕ್ 23ರ ಗರಿಷ್ಠ ವೇಗವನ್ನು ತಲುಪಬಲ್ಲದು. ಅಂದರೆ ಇದು ಗಂಟೆಗೆ ಸರಿಸುಮಾರು 28,400 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ ಮತ್ತು 9,600 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.
    • ಅಭಿವೃದ್ಧಿಪಡಿಸಿದವರು:- 1950ರ ದಶಕದಲ್ಲಿ ಬೋಯಿಂಗ್ ಕಂಪನಿ.
    • ಉದ್ದೇಶ:- ಅಮೆರಿಕದ ಪ್ರದೇಶಗಳ ರಕ್ಷಣೆಯನ್ನು ಬಲಪಡಿಸುವ ದೃಷ್ಟಿಯಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ.
    • ಉಡಾವಣೆ ವ್ಯವಸ್ಥೆ:- ಶತ್ರುಗಳ ದಾಳಿಯಿಂದ ಕ್ಷಿಪಣಿಯನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ‘ಸೈಲೊ’ ಎಂಬ ಭದ್ರಪಡಿಸಿದ ಭೂಗತ ಬಂಕರ್‌ಗಳಿಂದ ಮಿನ್ಯೂಟ್‌ಮ್ಯಾನ್ III ಕ್ಷಿಪಣಿಯನ್ನು ಸಂಗ್ರಹಿಸಿ ಉಡಾವಣೆ ಮಾಡಲಾಗುತ್ತದೆ.
    • ಗಮನಾರ್ಹ ಸಂಗತಿಯೆಂದರೆ, ಮಿನ್ಯೂಟ್‌ಮ್ಯಾನ್ III ಕ್ಷಿಪಣಿಯನ್ನು ಇದುವರೆಗೆ ಯಾವುದೇ ನೈಜ ಯುದ್ಧದಲ್ಲಿ ಬಳಸಲಾಗಿಲ್ಲ. ಇದು ಯುದ್ಧದಲ್ಲಿ ಬಳಕೆಯಾಗದ ವಿಶ್ವದ ಅತ್ಯಂತ ಶಕ್ತಿಶಾಲಿ ಅಸ್ತ್ರಗಳಲ್ಲಿ ಒಂದಾಗಿದೆ.
    • ನಿಮಗಿದು ಗೊತ್ತೆ? ಮಿನ್ಯೂಟ್‌ಮ್ಯಾನ್ III ಕ್ಷಿಪಣಿಯನ್ನು 2030ರ ದಶಕದಲ್ಲಿ ಬದಲಾಯಿಸಲು ನಿರ್ಧರಿಸಲಾಗಿತ್ತು. ಆದರೆ, ಹೊಸ ಸೆಂಟಿನೆಲ್ ಐಸಿಬಿಎಂ (ICBM) ಅಭಿವೃದ್ಧಿಯಲ್ಲಿನ ವಿಳಂಬದಿಂದಾಗಿ, ಈ ಹಳೆಯ ಕ್ಷಿಪಣಿಯನ್ನೇ 2050ರವರೆಗೆ ಸೇವೆಗೆ ಬಳಸಲು ಅಧಿಕಾರಿಗಳು ಚಿಂತಿಸುತ್ತಿದ್ದಾರೆ.

    ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (NIIF)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ‘ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ’ಯು (NIIF) ತನ್ನ ‘ಎರಡನೇ ಖಾಸಗಿ ಮಾರುಕಟ್ಟೆ ನಿಧಿ’ಗಾಗಿ (PMF-II) $ 750 ದಶಲಕ್ಷ ಡಾಲರ್‌ಗಳ ಬಂಡವಾಳವನ್ನು ಯಶಸ್ವಿಯಾಗಿ ಸಂಗ್ರಹಿಸಿದೆ.

    ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (NIIF)ಯ ಬಗ್ಗೆ:

    • ಈ ಸಂಸ್ಥೆಯನ್ನು 2015 ರಲ್ಲಿ ಭಾರತದ ‘ಸಾರ್ವಭೌಮ ಸಂಪತ್ತು ನಿಧಿ’ಯಾಗಿ ಸ್ಥಾಪಿಸಲಾಯಿತು.
    • ಪ್ರಮುಖ ಉದ್ದೇಶ:- ದೇಶದ ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ದೀರ್ಘಾವಧಿಯ ಬಂಡವಾಳವನ್ನು ಒದಗಿಸುವುದು.
    • ಹೂಡಿಕೆದಾರರ ಒಡೆತನದ ನಿಧಿ ನಿರ್ವಾಹಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ:- ಇದರಲ್ಲಿ ಭಾರತ ಸರ್ಕಾರವು ಶೇಕಡಾ 49 ರಷ್ಟು ಪಾಲುದಾರಿಕೆ ಹೊಂದಿದ್ದು, ಪ್ರಮುಖ ಜಾಗತಿಕ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರು ಉಳಿದ ಶೇಕಡಾ 51 ರಷ್ಟು ಪಾಲನ್ನು ಹೊಂದಿದ್ದಾರೆ.

    ಕ್ಷುದ್ರಗ್ರಹ 2024 YR4

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದ ವೀಕ್ಷಣೆಗಳ ಆಧಾರದ ಮೇಲೆ, 2024 YR4 ಕ್ಷುದ್ರಗ್ರಹವು 2032 ರಲ್ಲಿ ಚಂದ್ರನಿಗೆ ಅಪ್ಪಳಿಸುವ ಯಾವುದೇ ಅಪಾಯವನ್ನು ಹೊಂದಿಲ್ಲ ಎಂಬುದನ್ನು ನಾಸಾ (NASA) ಖಚಿತಪಡಿಸಿದೆ.
    • 2024 YR4 ಕ್ಷುದ್ರಗ್ರಹವನ್ನು ಭೂ-ಸಮೀಪದ ಕ್ಷುದ್ರಗ್ರಹ (NEA) ಎಂದು ವರ್ಗೀಕರಿಸಲಾಗಿದೆ. ಅಂದರೆ, ಇದರ ಕಕ್ಷೆಯು ಭೂಮಿಯ ಕಕ್ಷೆಯ ಮಾರ್ಗಕ್ಕೆ ಬಹುಸಮೀಪದಲ್ಲಿ ಹಾದುಹೋಗುತ್ತದೆ.

    ಕ್ಷುದ್ರಗ್ರಹ, ಉಲ್ಕಾಖಂಡ, ಉಲ್ಕೆ ಮತ್ತು ಉಲ್ಕಾಪಿಂಡಗಳ ನಡುವಿನ ವ್ಯತ್ಯಾಸ:

    • ಕ್ಷುದ್ರಗ್ರಹ (Asteroid):- ಇದು ಸೂರ್ಯನ ಸುತ್ತ ಪರಿಭ್ರಮಿಸುವ ಸಣ್ಣ, ಕಲ್ಲಿನಿಂದ ಕೂಡಿದ ಆಕಾಶಕಾಯವಾಗಿದೆ.
    • ಉಲ್ಕಾಖಂಡ/ಉಲ್ಕಾಶಿಲೆ  (Meteoroid):- ಇದು ಬಾಹ್ಯಾಕಾಶದಲ್ಲಿ ಸೂರ್ಯನ ಸುತ್ತ ಸುತ್ತುವಾಗ ಕ್ಷುದ್ರಗ್ರಹ ಅಥವಾ ಧೂಮಕೇತುವಿನಿಂದ ಬೇರ್ಪಟ್ಟ ಸಣ್ಣ ಕಣ ಅಥವಾ ಚೂರು ಆಗಿದೆ.
    • ಉಲ್ಕೆ (Meteor):- ಉಲ್ಕಾಖಂಡವು ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ, ಗಾಳಿಯ ಘರ್ಷಣೆಯಿಂದಾಗಿ ಸುಟ್ಟುಹೋಗುವಾಗ ಕಾಣಿಸಿಕೊಳ್ಳುವ ಬೆಳಕಿನ ಗೆರೆ (ಬೀಳುವ ನಕ್ಷತ್ರ).
    • ಉಲ್ಕಾಪಿಂಡ/ಉಲ್ಕಾಶಿಲೆ  (Meteorite):- ಭೂಮಿಯ ವಾತಾವರಣವನ್ನು ಪ್ರವೇಶಿಸಿ ಬರುವಾಗ ಸಂಪೂರ್ಣವಾಗಿ ಸುಟ್ಟುಹೋಗದೆ, ಭೂಮಿಯ ಮೇಲ್ಮೈಗೆ ಅಪ್ಪಳಿಸುವ ಉಲ್ಕೆಯ ಉಳಿಕೆ ಭಾಗ.

    ಜಾಗತಿಕ ಕ್ಷುದ್ರಗ್ರಹ ಅಧ್ಯಯನ/ಅನ್ವೇಷಣಾ ‘ಮಿಷನ್’ಗಳು:

    • ನಾಸಾದ ಡಾರ್ಟ್ (DART) ಮಿಷನ್, 2022:- ಇದು ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಗ್ರಹಕ್ಕೆ ಅಪ್ಪಳಿಸುವ ಮೂಲಕ ಅದರ ಚಲನಾ ಪಥವನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ ವಿಶ್ವದ ಮೊದಲ ಗ್ರಹಗಳ ರಕ್ಷಣಾ ಪರೀಕ್ಷೆಯಾಗಿದೆ. ಇದು ನಿರ್ದಿಷ್ಟವಾಗಿ ಡಿಡಿಮೋಸ್ ಎಂಬ ಜೋಡಿ ಕ್ಷುದ್ರಗ್ರಹವನ್ನು ಗುರಿಯಾಗಿಸಿಕೊಂಡಿತ್ತು.
    • ನಾಸಾದ ಒಸಿರಿಸ್-ರೆಕ್ಸ್ (OSIRIS-REx), 2016-2023:- ಇದು ಬೆನ್ನು (Bennu) ಕ್ಷುದ್ರಗ್ರಹದಿಂದ ಮಾದರಿಗಳನ್ನು ತರುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದು ಸೌರಮಂಡಲದ ರಚನೆಯ ಬಗ್ಗೆ ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ.
    • ಜಪಾನಿನ ಹಯಾಬುಸಾ-2 (Hayabusa2 – JAXA), 2014-2020:- ಈ ಯೋಜನೆಯು ರಿಯೂಗು (Ryugu) ಕ್ಷುದ್ರಗ್ರಹದಿಂದ ಯಶಸ್ವಿಯಾಗಿ ಮಾದರಿಗಳನ್ನು ಸಂಗ್ರಹಿಸಿದೆ. ಈ ಮಾದರಿಯು ಜೀವಿಗಳ ಉಗಮಕ್ಕೆ ಅಗತ್ಯವಾದ ಮೂಲಭೂತ ಅಂಶಗಳನ್ನು ಒಳಗೊಂಡಿದೆ.
    • ನಾಸಾದ ಲೂಸಿ (LUCY) ಮಿಷನ್, 2021-ಪ್ರಸ್ತುತ:- ಇದು ಗುರುಗ್ರಹದ ಕಕ್ಷೆಯಲ್ಲಿರುವ ಬಹುಪಾಲು ಟ್ರೋಜನ್ ಕ್ಷುದ್ರಗ್ರಹಗಳನ್ನು ಅಧ್ಯಯನ ಮಾಡಲು ಹಮ್ಮಿಕೊಂಡಿರುವ 12 ವರ್ಷಗಳ ಸುದೀರ್ಘ ಕಾರ್ಯಾಚರಣೆಯಾಗಿದೆ.
    • ಯುರೋಪಿನ ಬಾಹ್ಯಾಕಾಶ ಸಂಸ್ಥೆ (ESA)ಯ ಹೆರಾ ಮಿಷನ್, 2024:- ಡಾರ್ಟ್ (DART) ಯೋಜನೆಯು ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದಾಗ ಉಂಟಾದ ಕುಳಿಯನ್ನು ಅಧ್ಯಯನ ಮಾಡಲು ಹಾಗೂ ಅದರ ಪಥ ಬದಲಾವಣೆಯ ಯಶಸ್ಸನ್ನು ವಿಶ್ಲೇಷಿಸಲು ಈ ಮಿಷನ್ ಅನ್ನು ನಿಯೋಜಿಸಿದೆ.
    • ಚೀನಾದ ಟಿಯಾನ್‌ವೆನ್-2 (Tianwen-2), 2025:- ಇದು ಭೂ-ಸಮೀಪದ ಕ್ಷುದ್ರಗ್ರಹವಾದ ಕಾಮೊಓಲೆವಾ (Kamo’oalewa) ದಿಂದ ಮಾದರಿಯನ್ನು ಸಂಗ್ರಹಿಸಲು  ನಿಯೋಜಿತ ಯೋಜನೆಯಾಗಿದೆ.
  • ಎಂ-ವಾಹನ್ (mVahan) ಫಿಟ್‌ನೆಸ್ ಆ್ಯಪ್

    ಎಂ-ವಾಹನ್ (mVahan) ಫಿಟ್‌ನೆಸ್ ಆ್ಯಪ್

    ಇದೀಗ ಸುದ್ದಿಯಲ್ಲಿದೆ:

    • ರಾಜ್ಯದಲ್ಲಿ ನೋಂದಾಯಿತವಾಗಿರುವ ಮತ್ತು ಕಾರ್ಯಾಚರಣೆ ನಡೆಸುತ್ತಿರುವ ವಾಣಿಜ್ಯ ವಾಹನಗಳಿಗೆ ಯೋಗ್ಯತಾ ಪ್ರಮಾಣಪತ್ರಗಳನ್ನು (FC) ನೀಡುವುದರಲ್ಲಿ ಆಗುವ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ, ಕರ್ನಾಟಕ ಸಾರಿಗೆ ಇಲಾಖೆಯು ಜಿಯೋ-ಫೆನ್ಸಿಂಗ್ ಆಧಾರಿತ ಎಂ-ವಾಹನ್ (mVahan) ಫಿಟ್‌ನೆಸ್ ಮೊಬೈಲ್ ಆ್ಯಪ್ ಅನ್ನು ಎಲ್ಲಾ 66 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ಪ್ರಾರಂಭಿಸಿದೆ.

    ಎಂ-ಪರಿವಾಹನ್ (mParivahan) ಫಿಟ್‌ನೆಸ್ ಆ್ಯಪ್:

    • ಇದನ್ನು “ವಾಹನ್ ಆ್ಯಪ್” ಎಂತಲೂ ಕರೆಯಲಾಗುತ್ತದೆ. 
    • ಇದು ವಾಹನ ಮತ್ತು ಚಾಲಕ ಸೇವೆಗಳಿಗಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿದೆ.
    • ಹಿಂದೆ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTO) ಭೇಟಿ ನೀಡಿ ಪಡೆಯಬೇಕಾಗಿದ್ದ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಲು ಇದು ಸುಲಭ ವೇದಿಕೆಯನ್ನು ಒದಗಿಸುತ್ತದೆ.

    ಈ ಆ್ಯಪ್ ನ ಪ್ರಮುಖ ಲಕ್ಷಣಗಳು:

    • ಡಿಜಿಟಲ್ ದಾಖಲೆಗಳು:- ನಾಗರಿಕರು ತಮ್ಮ ಫೋನ್‌ನಲ್ಲಿ ವಾಹನ ನೋಂದಣಿ ಪ್ರಮಾಣಪತ್ರ (RC) ಮತ್ತು ಚಾಲನಾ ಪರವಾನಗಿಯ (DL) ಕಾನೂನುಬದ್ಧ ವರ್ಚುವಲ್ ಆವೃತ್ತಿಗಳನ್ನು ಸುಲಭವಾಗಿ ರಚಿಸಬಹುದು ಹಾಗೂ ಕೊಂಡೊಯ್ಯಬಹುದು.
    • ವಾಹನ ಹುಡುಕಾಟ:- ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಮಾಲೀಕರ ಹೆಸರು, ವಾಹನದ ವಯಸ್ಸು, ಇಂಧನದ ಪ್ರಕಾರ, ವಿಮೆಯ ಮಾನ್ಯತೆ ಮತ್ತು ಫಿಟ್‌ನೆಸ್ ಸ್ಥಿತಿಯಂತಹ ವಿವರಗಳನ್ನು ತಕ್ಷಣವೇ ಪಡೆಯಬಹುದಾಗಿದೆ.
    • ಚಲನ್ ಸ್ಥಿತಿ:- ಸಂಚಾರ ನಿಯಮ ಉಲ್ಲಂಘನೆಯ ದಂಡಗಳನ್ನು (eChallans) ನೇರವಾಗಿ ಆ್ಯಪ್ ಮೂಲಕ ಪರಿಶೀಲಿಸಬಹುದು ಮತ್ತು ಪಾವತಿಸಬಹುದು.

    ಸುರಕ್ಷತೆ ಮತ್ತು ಪರಿಶೀಲನೆ:- ಹಳೆಯ ವಾಹನಗಳನ್ನು ಖರೀದಿಸುವ ಮೊದಲು ಅವುಗಳ ವಿವರಗಳನ್ನು ಪರಿಶೀಲಿಸಲು ಅಥವಾ ಅಪಘಾತ ಮತ್ತು ಕಳ್ಳತನದ ಸಂದರ್ಭಗಳಲ್ಲಿ ವಾಹನಗಳನ್ನು ಗುರುತಿಸಲು ಇದನ್ನು ಬಳಸಲಾಗುತ್ತದೆ.

  • ರಕ್ಷಣಾ ಪಡೆಗಳ ದೃಷ್ಟಿಕೋನ, 2047 | ಮುಖ್ಯ ಚುನಾವಣಾ ಆಯುಕ್ತರ ವಜಾಗೊಳಿಸುವ ಪ್ರಕ್ರಿಯೆ | ರಾಷ್ಟ್ರೀಯ ಅಣೆಕಟ್ಟು ಸುರಕ್ಷತೆ ಪ್ರಾಧಿಕಾರ (NDSA)

    ರಕ್ಷಣಾ ಪಡೆಗಳ ದೃಷ್ಟಿಕೋನ, 2047

    ರಕ್ಷಣೆ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಕೇಂದ್ರ ರಕ್ಷಣಾ ಸಚಿವರು ‘ರಕ್ಷಣಾ ಪಡೆಗಳ ದೃಷ್ಟಿಕೋನ 2047: ಭವಿಷ್ಯಕ್ಕೆ ಸಜ್ಜಾದ ಭಾರತೀಯ ಸೇನೆಗಾಗಿನ ಮಾರ್ಗಸೂಚಿ’ ಎಂಬ ಮಹತ್ವದ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಈ ದಾಖಲೆಯನ್ನು ‘ಸಮಗ್ರ ರಕ್ಷಣಾ ಸಿಬ್ಬಂದಿ ಕೇಂದ್ರ ಕಚೇರಿ’ಯು ಸಿದ್ಧಪಡಿಸಿದೆ.

    ಉದ್ದೇಶಗಳು:

    • ಭವಿಷ್ಯದ ಯುದ್ಧ ಸಿದ್ಧತೆಗಳು:- ಸೈಬರ್, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ (AI) ಮತ್ತು ಮಾಹಿತಿ ಯುದ್ಧವೂ ಸೇರಿದಂತೆ ಬಹು-ಕ್ಷೇತ್ರದ ಯುದ್ಧಗಳಿಗೆ ಭಾರತೀಯ ಸೇನೆಯನ್ನು ಸಜ್ಜುಗೊಳಿಸುವುದಕ್ಕೆ ಈ ದೃಷ್ಟಿಕೋನವು ವಿಶೇಷ ಒತ್ತು ನೀಡುತ್ತದೆ.
    • ರಾಷ್ಟ್ರೀಯ ಅಭಿವೃದ್ಧಿ ಗುರಿಗಳೊಂದಿಗೆ ಸಮನ್ವಯ:- ರಕ್ಷಣಾ ಸಾಮರ್ಥ್ಯಗಳ ಈ ಸಮಗ್ರ ಪರಿವರ್ತನೆಯನ್ನು, 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ನಿರ್ಮಿಸುವ ವಿಶಾಲ ಉದ್ದೇಶದೊಂದಿಗೆ ಬೆಸೆಯಲಾಗಿದೆ.

    ಈ ಮಾರ್ಗಸೂಚಿಯ ಪ್ರಮುಖ ಲಕ್ಷಣಗಳು:

    • ಸಮಗ್ರ ಮತ್ತು ಬಹು-ಕ್ಷೇತ್ರಗಳ ಸೇನೆ:- ಭೂಮಿ, ಸಮುದ್ರ, ವಾಯು, ಸೈಬರ್ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯವುಳ್ಳ ಸಮಗ್ರ ಹಾಗೂ ಚುರುಕಾದ ಸೇನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಈ ದೃಷ್ಟಿಕೋನವು ಪ್ರಸ್ತಾಪಿಸಿದೆ.
    • ಸೇನೆಯ ದಕ್ಷತೆ ಮತ್ತು ತ್ವರಿತ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಸುಧಾರಿಸುವುದು:- ಮೂರೂ ಸೇನಾ ಪಡೆಗಳ (ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ) ನಡುವೆ ಜಂಟಿ ಕಾರ್ಯಾಚರಣೆಯ ಯೋಜನೆಗಳನ್ನು ಬಲಪಡಿಸುವುದರಿಂದ ಗಣನೀಯವಾಗಿ ಸುಧಾರಿಸಲಿದೆ.
    • ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯ ಬಲವರ್ಧನೆ:- ರಕ್ಷಣಾ ಉಪಕರಣಗಳ ಉತ್ಪಾದನೆಯಲ್ಲಿ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ‘ಆತ್ಮನಿರ್ಭರ್ ಭಾರತ್’ (ಸ್ವಾವಲಂಬಿ ಭಾರತ) ಉಪಕ್ರಮಕ್ಕೆ ಈ ಮಾರ್ಗಸೂಚಿಯು ಬಲವಾದ ಬೆಂಬಲ ನೀಡುತ್ತದೆ.
    • ತಾಂತ್ರಿಕ ಪ್ರಗತಿ:- ಕೃತಕ ಬುದ್ಧಿಮತ್ತೆ, ಸ್ವಾಯತ್ತ ವ್ಯವಸ್ಥೆಗಳು , ಸೈಬರ್ ಸಾಮರ್ಥ್ಯಗಳು ಮತ್ತು ಸುಧಾರಿತ ಕಣ್ಗಾವಲು ಸಾಧನಗಳಂತಹ ಉದಯೋನ್ಮುಖ ತಂತ್ರಜ್ಞಾನಗಳ ಹೆಚ್ಚಿನ ಬಳಕೆಗೆ ಈ ವರದಿಯು ಶಿಫಾರಸು ಮಾಡಿದೆ.

    ಮುಖ್ಯ ಚುನಾವಣಾ ಆಯುಕ್ತರ ವಜಾಗೊಳಿಸುವ ಪ್ರಕ್ರಿಯೆ

    ರಾಜಕೀಯ

    ಇದೀಗ ಸುದ್ದಿಯಲ್ಲಿದೆ: 

    • ವಿರೋಧ ಪಕ್ಷಗಳು ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾದ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸಂಸತ್ತಿನಲ್ಲಿ ಅವರನ್ನು ವಜಾಗೊಳಿಸಲು ಮಹಾಭಿಯೋಗ ನಿರ್ಣಯವನ್ನು ಮಂಡಿಸಲು ಚಿಂತನೆ ನಡೆಸುತ್ತಿವೆ.

    ‘ಸಂವಿಧಾನದ 324ನೇ ವಿಧಿ’ಯ ಬಗ್ಗೆ:

      • ಭಾರತದ ಸಂವಿಧಾನದ 324ನೇ ವಿಧಿಯ ಪ್ರಕಾರ, ಭಾರತದ ಚುನಾವಣಾ ಆಯೋಗವು (ECI) ಒಬ್ಬರು ಮುಖ್ಯ ಚುನಾವಣಾ ಆಯುಕ್ತರನ್ನು (CEC) ಹಾಗೂ ರಾಷ್ಟ್ರಪತಿಗಳು ನಿರ್ಧರಿಸುವಷ್ಟು ಸಂಖ್ಯೆಯ ಇತರ ಚುನಾವಣಾ ಆಯುಕ್ತರನ್ನು (ECs) ಒಳಗೊಂಡಿರುತ್ತದೆ.
    • ಭಾರತದ ಚುನಾವಣಾ ಆಯೋಗವು ಈ ಕೆಳಗಿನ ಜವಾಬ್ದಾರಿಗಳನ್ನು ಹೊಂದಿದೆ:
    • ಸಂಸತ್ತು, ರಾಜ್ಯ ಶಾಸಕಾಂಗಗಳು ಹಾಗೂ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ನಡೆಸುವುದು ಹಾಗೂ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು.
    • ಚುನಾವಣಾ ಆಯುಕ್ತರನ್ನು ನೇಮಕ:- ಸಂಸತ್ತಿನ ಕಾಯ್ದೆಯ ನಿಬಂಧನೆಗಳಿಗೆ ಒಳಪಟ್ಟು, ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ ಎಂದು ಸಂವಿಧಾನವು ಸ್ಪಷ್ಟಪಡಿಸುತ್ತದೆ.

    ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸುವ ಸಾಂವಿಧಾನಿಕ ನಿಬಂಧನೆಗಳು:

      • ಭಾರತದ ಸಂವಿಧಾನದ 324(5) ನೇ ವಿಧಿಯ ಅನ್ವಯ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ವಜಾಗೊಳಿಸುವ ಪ್ರಕ್ರಿಯೆಯ ರೀತಿಯಲ್ಲಿಯೇ ಮತ್ತು ಅದೇ ಆಧಾರಗಳ ಮೇರೆಗೆ ಮಾತ್ರ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ವಜಾಗೊಳಿಸಬಹುದು (ಪದಚ್ಯುತಿಗೊಳಿಸಬಹುದು).
      • ಮುಖ್ಯ ಚುನಾವಣಾ ಆಯುಕ್ತರ ವಜಾ ಕೋರುವ ನಿರ್ಣಯವನ್ನು ಸಂಸತ್ತಿನ ಯಾವುದೇ ಸದನದಲ್ಲಿ (ಲೋಕಸಭೆ ಅಥವಾ ರಾಜ್ಯಸಭೆ) ಮಂಡಿಸಬಹುದು. ಆದರೆ, ಆ ನಿರ್ಣಯದಲ್ಲಿ ವಜಾಗೊಳಿಸಲು ಇರುವ ನಿಖರವಾದ ಕಾರಣಗಳನ್ನು ಸ್ಪಷ್ಟವಾಗಿ ನಮೂದಿಸಿರಬೇಕು.
    • ಈ ನಿರ್ಣಯವನ್ನು ಮಂಡಿಸಲು ಕೆಳಕಂಡ ರೀತಿಯಲ್ಲಿ ಬೆಂಬಲ ಅಗತ್ಯವಿರುತ್ತದೆ:
        • ಲೋಕಸಭೆಯ ಕನಿಷ್ಠ 100 ಸದಸ್ಯರ ಬೆಂಬಲ, ಅಥವಾ
    • ರಾಜ್ಯಸಭೆಯ ಕನಿಷ್ಠ 50 ಸದಸ್ಯರ ಬೆಂಬಲ.
    • ಒಮ್ಮೆ ಈ ನಿರ್ಣಯವನ್ನು ಅಂಗೀಕರಿಸಿದ ನಂತರ, ಆರೋಪಗಳ ಕುರಿತು ತನಿಖೆ ನಡೆಸಲು ಲೋಕಸಭೆಯ ಸಭಾಧ್ಯಕ್ಷರು ಅಥವಾ ರಾಜ್ಯಸಭೆಯ ಸಭಾಪತಿಯವರು ಒಂದು ವಿಚಾರಣಾ ಸಮಿತಿಯನ್ನು ರಚಿಸುತ್ತಾರೆ.
    • ಒಂದು ವೇಳೆ ಈ ಸಮಿತಿಯು ಆರೋಪಗಳು ಸಾಬೀತಾಗಿವೆ ಎಂದು ವರದಿ ನೀಡಿದರೆ, ಆ ನಿರ್ಣಯವನ್ನು ಸಂಸತ್ತಿನಲ್ಲಿ ಮತದಾನಕ್ಕೆ ತೆಗೆದುಕೊಳ್ಳಲಾಗುತ್ತದೆ.
    • ನಂತರ, ಎರಡೂ ಸದನಗಳು ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಪೈಕಿ ಮೂರನೇ ಎರಡರಷ್ಟು (2/3ರಷ್ಟು) ‘ವಿಶೇಷ ಬಹುಮತ’ದೊಂದಿಗೆ ಆ ನಿರ್ಣಯವನ್ನು ಅಂಗೀಕರಿಸಬೇಕು. ಎರಡೂ ಸದನಗಳು ಈ ನಿರ್ಣಯವನ್ನು ಒಪ್ಪಿದ ನಂತರ, ಅಂತಿಮವಾಗಿ ರಾಷ್ಟ್ರಪತಿಗಳು ವಜಾಗೊಳಿಸುವ ಆದೇಶವನ್ನು ಹೊರಡಿಸುತ್ತಾರೆ.

    ರಾಷ್ಟ್ರೀಯ ಅಣೆಕಟ್ಟು ಸುರಕ್ಷತೆ ಪ್ರಾಧಿಕಾರ (NDSA)

    ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ನವದೆಹಲಿಯ ಆರ್.ಕೆ. ಪುರಂನಲ್ಲಿ ‘ರಾಷ್ಟ್ರೀಯ ಅಣೆಕಟ್ಟು ಸುರಕ್ಷತೆ ಪ್ರಾಧಿಕಾರ’ದ (NDSA) ನೂತನ ಕಚೇರಿಯನ್ನು ಇತ್ತೀಚಿಗೆ ಉದ್ಘಾಟಿಸಲಾಯಿತು.

    ರಾಷ್ಟ್ರೀಯ ಅಣೆಕಟ್ಟು ಸುರಕ್ಷತೆ ಪ್ರಾಧಿಕಾರ (NDSA)ದ ಬಗ್ಗೆ:

    • ಶಾಸನಬದ್ಧ ಸಂಸ್ಥೆಯಾಗಿದೆ:- ರಾಷ್ಟ್ರೀಯ ಅಣೆಕಟ್ಟು ಸುರಕ್ಷತೆ ಪ್ರಾಧಿಕಾರವು ‘ಅಣೆಕಟ್ಟು ಸುರಕ್ಷತಾ ಕಾಯ್ದೆ, 2021’ ರ ಅಡಿಯಲ್ಲಿ ಸ್ಥಾಪಿಸಲಾಗಿದೆ.
    • ಕಾರ್ಯಾನಿರ್ವಹಣೆ:- ಕೇಂದ್ರ ‘ಜಲಶಕ್ತಿ ಸಚಿವಾಲಯ
    • ಉದ್ದೇಶ:- ಭಾರತದಲ್ಲಿ ಅಣೆಕಟ್ಟುಗಳ ಸುರಕ್ಷತೆಯನ್ನು ಖಾತರಿಪಡಿಸುವ ‘ರಾಷ್ಟ್ರೀಯ ಮಟ್ಟದ ನಿಯಂತ್ರಕ ಸಂಸ್ಥೆ’ಯಾಗಿ ಕಾರ್ಯನಿರ್ವಹಿಸುವುದು.

    ಪ್ರಮುಖ ಡಿಜಿಟಲ್ ಉಪಕ್ರಮಗಳು:

    • ನೇತ್ರಾ (NETRA):- ಇದು ಕೃತಕ ಬುದ್ಧಿಮತ್ತೆಯನ್ನು (AI) ಬಳಸಿಕೊಂಡು ಅಣೆಕಟ್ಟುಗಳ ಮೇಲ್ವಿಚಾರಣೆ ಮತ್ತು ವಿಮರ್ಶೆ ನಡೆಸುವ ವ್ಯವಸ್ಥೆಯಾಗಿದೆ. ಈ ತಂತ್ರಜ್ಞಾನವನ್ನು ‘ಧರ್ಮ’ (DHARMA) ಎಂಬ ಅಣೆಕಟ್ಟು ಸುರಕ್ಷತಾ ದತ್ತಾಂಶ ಕೇಂದ್ರದೊಂದಿಗೆ ಸಂಯೋಜಿಸಲಾಗಿದೆ.
    • ರಾಷ್ಟ್ರೀಯ ಬಾಂಧ್ ಸುರಕ್ಷಾ ದರ್ಪಣ್ (RBSD):- ಅಣೆಕಟ್ಟು ಕುಸಿತದ ವಿಶ್ಲೇಷಣೆಯ (DBA) ಕುರಿತು ನಿಖರವಾದ ನೈಜ ಚಿತ್ರಣವನ್ನು ಒದಗಿಸಲು (ಅಥವಾ ದೃಶ್ಯರೂಪದಲ್ಲಿ ಪ್ರಸ್ತುತಪಡಿಸಲು) ಈ ಡಿಜಿಟಲ್ ವೇದಿಕೆಯನ್ನು ರೂಪಿಸಲಾಗಿದೆ. ಇದನ್ನು ‘ಸುಧಾರಿತ ಕಂಪ್ಯೂಟಿಂಗ್ ಅಭಿವೃದ್ಧಿ ಕೇಂದ್ರ’ವು (C-DAC) ಅಭಿವೃದ್ಧಿಪಡಿಸಿದೆ.
  • ಕರ್ನಾಟಕದಲ್ಲಿ ಕಾರ್ಮಿಕ ಸಂಹಿತೆ ನಿಯಮಗಳಿಗಾಗಿ ತ್ರಿಪಕ್ಷೀಯ ಸಮಿತಿಗಳು

    ಕರ್ನಾಟಕದಲ್ಲಿ ಕಾರ್ಮಿಕ ಸಂಹಿತೆ ನಿಯಮಗಳಿಗಾಗಿ ತ್ರಿಪಕ್ಷೀಯ ಸಮಿತಿಗಳು

    ಇದೀಗ ಸುದ್ದಿಯಲ್ಲಿದೆ:

    • ರಾಜ್ಯ-ನಿರ್ದಿಷ್ಟ ನಿಯಮಗಳನ್ನು ಪರಿಷ್ಕರಿಸಲು ಮತ್ತು ಅಂತಿಮಗೊಳಿಸಲು ಕರ್ನಾಟಕ ಸರ್ಕಾರವು ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ತಲಾ ಒಂದರಂತೆ ಒಟ್ಟು ನಾಲ್ಕು ತ್ರಿಪಕ್ಷೀಯ ಸಮಿತಿಗಳನ್ನು ಸ್ಥಾಪಿಸಿದೆ.
    • ಅಧಿಕಾರಿಗಳು, ಕಾರ್ಮಿಕ ಸಂಘದ ಸದಸ್ಯರು ಮತ್ತು ಉದ್ಯೋಗದಾತರ ಪ್ರತಿನಿಧಿಗಳನ್ನು ಒಳಗೊಂಡಿರುವ ಈ ಸಮಿತಿಗಳು ವೇತನ, ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕರಡು ನಿಯಮಗಳನ್ನು ಪರಿಶೀಲಿಸಲಿವೆ.
    • ಇವುಗಳನ್ನು ಏಪ್ರಿಲ್ 1, 2026 ರೊಳಗೆ ಜಾರಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದೆ.

    ಪ್ರಮುಖ ವಿವರಗಳು:

    • ಉದ್ದೇಶ:- ಸ್ವೀಕರಿಸಲಾದ ಪ್ರತಿಕ್ರಿಯೆಗಳ ಆಧಾರದ ಮೇಲೆ ರಾಜ್ಯದ ಕರಡು ನಿಯಮಗಳನ್ನು ಪರಿಷ್ಕರಿಸುವುದು. ಅಲ್ಲದೆ, ಕೆಲಸದ ಸಮಯ ಮತ್ತು ಮುಷ್ಕರಗಳ ಕುರಿತು ಕಾರ್ಮಿಕ ಸಂಘಗಳು ವ್ಯಕ್ತಪಡಿಸಿದ ಕಳವಳಗಳನ್ನು ಇವು ಪರಿಹರಿಸಲಿವೆ.
    • ನಾಲ್ಕು ಪ್ರತ್ಯೇಕ ಸಮಿತಿಗಳ ರಚನೆ:- ಕೇಂದ್ರದ ಈ ಕೆಳಗಿನ ನಾಲ್ಕು ಕಾರ್ಮಿಕ ಸಂಹಿತೆಗಳ ನಿರ್ದಿಷ್ಟ ಸೂಕ್ಷ್ಮತೆಗಳನ್ನು ಪರಿಹರಿಸಲು ರಚಿಸಲಾಗಿದೆ:
      • ವೇತನ ಸಂಹಿತೆ
      • ಕೈಗಾರಿಕಾ ಸಂಬಂಧಗಳ ಸಂಹಿತೆ
      • ಸಾಮಾಜಿಕ ಭದ್ರತಾ ಸಂಹಿತೆ
      • ವೃತ್ತಿಪರ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ
    • ಹಿನ್ನೆಲೆ:- ಈ ಕ್ರಮಗಳು ಹೊಸ ಕಾನೂನುಗಳನ್ನು ಜಾರಿಗೆ ತರುವ ಕೇಂದ್ರ ಸರ್ಕಾರದ ನಿರ್ದೇಶನಕ್ಕೆ ಅನುಗುಣವಾಗಿವೆ. ಇದು ಕಾರ್ಮಿಕ ನಿಯಮಗಳನ್ನು ಸುಗಮಗೊಳಿಸಲು ಮತ್ತು ಕಾನೂನು ಜಾರಿಗೊಳಿಸುವಿಕೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ.
    • ಪ್ರಾಮುಖ್ಯತೆ:- ಕರ್ನಾಟಕದಲ್ಲಿ ಹೊಸ ಕಾರ್ಮಿಕ ಆಡಳಿತವನ್ನು ಜಾರಿಗೆ ತರುವಲ್ಲಿ ಒಮ್ಮತದ ವಿಧಾನವನ್ನು ಅಳವಡಿಸಿಕೊಳ್ಳುವುದು ಈ ಉಪಕ್ರಮದ ಪ್ರಮುಖ ಗುರಿಯಾಗಿದೆ.
  • ಅಗತ್ಯ ಸರಕುಗಳ ಕಾಯ್ದೆ ಜಾರಿ | ಭಾರತದ ಮೊದಲ ‘ನಿಷ್ಕ್ರಿಯ ದಯಾಮರಣ’ ಪ್ರಕರಣ | ಏಕರೂಪ ನಾಗರಿಕ ಸಂಹಿತೆ (UCC)

    ಅಗತ್ಯ ಸರಕುಗಳ ಕಾಯ್ದೆ ಜಾರಿ

    ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಳಿಯ ನಂತರ ಉಂಟಾದ ತೈಲ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ, ಕೇಂದ್ರ ಸರ್ಕಾರವು ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೊಳಿಸಿದೆ.
    • ತೈಲ ಸಂಸ್ಕರಣೆಯ ಉಪ-ಉತ್ಪನ್ನಗಳಾದ ಪ್ರೊಪೇನ್ ಮತ್ತು ಬ್ಯುಟೇನ್ ಬಳಸಿ ಎಲ್‌ಪಿಜಿ (LPG) ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ಸರ್ಕಾರವು ತೈಲ ಕಂಪನಿಗಳಿಗೆ ನಿರ್ದೇಶನ ನೀಡಿದೆ.
    • ಅಷ್ಟೇ ಅಲ್ಲದೆ, ಇದನ್ನು ಕೇವಲ ದೇಶೀಯ ಗ್ರಾಹಕರಿಗೆ ಮಾತ್ರ ಪ್ರತ್ಯೇಕವಾಗಿ ಪೂರೈಸುವಂತೆ ಮತ್ತು ಈ ಸ್ಟ್ರೀಮ್‌ಗಳನ್ನು ಇತರ ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಬಳಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

    ಅಗತ್ಯ ಸರಕುಗಳ ಕಾಯ್ದೆ, 1955 ರ ಬಗ್ಗೆ:

    • ಹೆಚ್ಚುತ್ತಿರುವ ಆಹಾರ ಬೆಲೆಗಳನ್ನು ನಿಯಂತ್ರಿಸಲು, ಕಾಳಸಂತೆಯಲ್ಲಿನ ದಾಸ್ತಾನು ತಡೆಗಟ್ಟಲು ಮತ್ತು ದೇಶದಲ್ಲಿ ಆಹಾರ ಭದ್ರತೆಯನ್ನು ಕಾಯ್ದುಕೊಳ್ಳಲು ಸರ್ಕಾರವು ವರ್ಷಗಳಿಂದ ಈ ಕಾಯ್ದೆಯನ್ನು ಪ್ರಮುಖ ಅಸ್ತ್ರವಾಗಿ ಬಳಸುತ್ತಿದೆ.
    • ಅಗತ್ಯ ಸರಕುಗಳ ಪಟ್ಟಿಯಲ್ಲಿ ಈ ಕೆಳಗಿನವು ಸೇರಿವೆ:- ಔಷಧಗಳು, ರಸಗೊಬ್ಬರಗಳು, ಆಹಾರ ಪದಾರ್ಥಗಳು (ಖಾದ್ಯ ತೈಲಗಳು ಸೇರಿದಂತೆ), ಹ್ಯಾಂಕ್ ನೂಲು, ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳು, ಕಚ್ಚಾ ಸೆಣಬು ಮತ್ತು ಸೆಣಬಿನ ಜವಳಿ, ಹಾಗೂ ಹಣ್ಣುಗಳು, ತರಕಾರಿಗಳು ಮತ್ತು ದನಗಳ ಮೇವಿನ ವಿವಿಧ ರೀತಿಯ ಬೀಜಗಳು.

    ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020:

    • ಕೇವಲ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಪ್ರಮುಖ ಆಹಾರ ಪದಾರ್ಥಗಳನ್ನು ನಿಯಂತ್ರಿಸುವ ಕೇಂದ್ರದ ಅಧಿಕಾರವನ್ನು ಸೀಮಿತಗೊಳಿಸಿದೆ.
    • ಕೃಷಿ ಉತ್ಪನ್ನಗಳ ಬೆಲೆಗಳು ತೀವ್ರವಾಗಿ ಏರಿಕೆಯಾದಾಗ ಮಾತ್ರ ಕೃಷಿ ಉತ್ಪನ್ನಗಳ ಮೇಲಿನ ದಾಸ್ತಾನು ಮಿತಿಗೆ ಈ ತಿದ್ದುಪಡಿಯು ಅವಕಾಶ ಕಲ್ಪಿಸಿದೆ. ಅಂದರೆ, ತೋಟಗಾರಿಕಾ ಸರಕುಗಳ ಬೆಲೆ 100% ಮತ್ತು ಬೇಗ ಹಾಳಾಗದ ಆಹಾರ ಪದಾರ್ಥಗಳ ಬೆಲೆ 50% ಏರಿಕೆಯಾಗಿದ್ದಲ್ಲಿ ಮಾತ್ರ ದಾಸ್ತಾನು ಮಿತಿಯನ್ನು ಹೇರಲು ಅವಕಾಶವಿದೆ.

    ಭಾರತದ ಮೊದಲ ‘ನಿಷ್ಕ್ರಿಯ ದಯಾಮರಣ’ ಪ್ರಕರಣ

    ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಹರೀಶ ರಾಣಾ ಎಂಬ 32 ವರ್ಷದ ವ್ಯಕ್ತಿಗೆ ನೀಡಲಾಗುತ್ತಿದ್ದ ‘ವೈದ್ಯಕೀಯ ನೆರವಿನ ಪೋಷಣೆ ಮತ್ತು ಜಲಪೂರೈಕೆ’ಯನ್ನು (CANH) ಹಿಂಪಡೆಯಲು ಸರ್ವೋಚ್ಚ ನ್ಯಾಯಾಲಯವು  ಇತ್ತೀಚಿಗೆ ಅನುಮತಿ ನೀಡಿದೆ.
    • ಈ ತೀರ್ಪಿನ ಮೂಲಕ ದೇಶದಲ್ಲೇ ಮೊದಲ ಬಾರಿಗೆ ‘ನಿಷ್ಕ್ರಿಯ ದಯಾಮರಣ’ದ ತತ್ವಗಳನ್ನು ಪ್ರಾಯೋಗಿಕವಾಗಿ ಅನ್ವಯಿಸಲಾಗಿದೆ.
    • ಗಮನಿಸಿ:- ಸರ್ವೋಚ್ಚ ನ್ಯಾಯಾಲಯದ ಈ ನಿರ್ದೇಶನವನ್ನು ಜಾರಿಗೊಳಿಸಿದ ರಾಜ್ಯಗಳ ಪೈಕಿ, ಕೇರಳದ ನಂತರ ಕರ್ನಾಟಕವು ಎರಡನೇ ರಾಜ್ಯವಾಗಿ ಹೊರಹೊಮ್ಮಿದೆ.

    ಸರ್ವೋಚ್ಚ ನ್ಯಾಯಾಲಯದ ತೀರ್ಪು:

    • ‘ಕಾಮನ್ ಕಾಸ್ v/s ಭಾರತ ಒಕ್ಕೂಟ’ (2018) ಪ್ರಕರಣ:- ಈ ಐತಿಹಾಸಿಕ ಪ್ರಕರಣದಲ್ಲಿ, ಸಂವಿಧಾನದ 21ನೇ ವಿಧಿಯಡಿ ‘ಘನತೆಯಿಂದ ಮರಣ ಹೊಂದುವ ಹಕ್ಕು’ ಕೂಡ ಒಂದು ಮೂಲಭೂತ ಹಕ್ಕು ಎಂದು ಸರ್ವೋಚ್ಚ ನ್ಯಾಯಾಲಯವು ಮಾನ್ಯ ಮಾಡಿದೆ. ಅಲ್ಲದೆ, ಷರತ್ತುಬದ್ಧವಾಗಿ ‘ನಿಷ್ಕ್ರಿಯ ದಯಾಮರಣ’ಕ್ಕೆ ಕಾನೂನಿನ ಮಾನ್ಯತೆಯನ್ನು ಒದಗಿಸಿದೆ.
    • ದಯಾಮರಣದ ವ್ಯಾಖ್ಯಾನ:- ತೀವ್ರವಾದ ನೋವು, ಗುಣಪಡಿಸಲಾಗದ ಕಾಯಿಲೆ ಅಥವಾ ಅಸ್ವಸ್ಥತೆಯಿಂದ ನರಳುತ್ತಿರುವ ವ್ಯಕ್ತಿಯನ್ನು ಆ ಯಾತನೆಯಿಂದ ಮುಕ್ತಗೊಳಿಸುವ ಏಕೈಕ ಉದ್ದೇಶದಿಂದ, ಆತನ ಜೀವವನ್ನು ಉದ್ದೇಶಪೂರ್ವಕವಾಗಿ ಅಂತ್ಯಗೊಳಿಸುವ ಪ್ರಕ್ರಿಯೆಯನ್ನು ‘ದಯಾಮರಣ’ ಎಂದು ಕರೆಯಲಾಗುತ್ತದೆ.

    ನಿಷ್ಕ್ರಿಯ ದಯಾಮರಣದ v/s ಸಕ್ರಿಯ ದಯಾಮರಣದ:

    • ನಿಷ್ಕ್ರಿಯ ದಯಾಮರಣ (Passive Euthanasia):- ಗುಣಮುಖರಾಗುವ ಯಾವುದೇ ಭರವಸೆ ಇಲ್ಲದ, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿರುವ ಹಾಗೂ ದೀರ್ಘಕಾಲಿಕ ಯಾತನೆ ಅನುಭವಿಸುತ್ತಿರುವ ಮಾರಣಾಂತಿಕ ಕಾಯಿಲೆಯ ರೋಗಿಗಳಿಗೆ, ನೀಡಲಾಗುತ್ತಿರುವ ‘ಜೀವ ರಕ್ಷಕ ಚಿಕಿತ್ಸೆ’ಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯುವುದು ಅಥವಾ ಹಿಂಪಡೆಯುವುದನ್ನು ‘ನಿಷ್ಕ್ರಿಯ ದಯಾಮರಣ’ ಎನ್ನಲಾಗುತ್ತದೆ.
    • ಸಕ್ರಿಯ ದಯಾಮರಣ (Active Euthanasia):- ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಯ ಸ್ವಯಂಪ್ರೇರಿತ ಕೋರಿಕೆಯ ಮೇರೆಗೆ, ಬಾಹ್ಯ ವೈದ್ಯಕೀಯ ಮಧ್ಯಪ್ರವೇಶದ ಮೂಲಕ (ಉದಾಹರಣೆಗೆ: ಪ್ರಾಣಾಂತಿಕ ಚುಚ್ಚುಮದ್ದು ನೀಡುವುದು) ಉದ್ದೇಶಪೂರ್ವಕವಾಗಿ ಅವರ ಜೀವ ತೆಗೆಯುವ ಪ್ರಕ್ರಿಯೆಯನ್ನು ‘ಸಕ್ರಿಯ ದಯಾಮರಣ’ ಎಂದು ಕರೆಯಲಾಗುತ್ತದೆ. 
    • ಭಾರತದಲ್ಲಿ ಪ್ರಸ್ತುತ ಈ ವಿಧಾನವು ಸಂಪೂರ್ಣ ಕಾನೂನುಬಾಹಿರವಾಗಿದೆ.

    ಏಕರೂಪ ನಾಗರಿಕ ಸಂಹಿತೆ (UCC)

    ರಾಜ್ಯಶಾಸ್ತ್ರ ಹಾಗೂ ಆಡಳಿತ

    ಇದೀಗ ಸುದ್ದಿಯಲ್ಲಿದೆ: 

    • ಭಾರತದ ಸರ್ವೋಚ್ಚ ನ್ಯಾಯಾಲಯವು ‘ಏಕರೂಪ ನಾಗರಿಕ ಸಂಹಿತೆ’ಯ (UCC) ಪರವಾಗಿ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ.
    • ವಿವಿಧ ಸಮುದಾಯಗಳಲ್ಲಿ ವಿವಾಹ, ವಿಚ್ಛೇದನ ಮತ್ತು ಆಸ್ತಿ ಹಂಚಿಕೆಯಂತಹ (ಉತ್ತರಾಧಿಕಾರ) ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ವೈಯಕ್ತಿಕ ಕಾನೂನುಗಳಿಂದ ಉಂಟಾಗುವ ಸಂಕೀರ್ಣತೆಗಳನ್ನು ನಿವಾರಿಸಲು, ‘ಸಾಮಾನ್ಯ ನಾಗರಿಕ ಕಾನೂನು ಚೌಕಟ್ಟು’ ಅತ್ಯಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ಸರ್ವೋಚ್ಚ ನ್ಯಾಯಾಲಯದ ಅವಲೋಕನಗಳು:

    • ಅರ್ಜಿಯ ಹಿನ್ನೆಲೆ:- 1937ರ ಮುಸ್ಲಿಂ ವೈಯಕ್ತಿಕ ಕಾನೂನು (ಷರಿಯತ್) ಅನ್ವಯ ಕಾಯ್ದೆಯ ಕೆಲವು ನಿಬಂಧನೆಗಳನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ಈ ಕಾಯ್ದೆಯು ಆಸ್ತಿ ಹಕ್ಕುಗಳಂತಹ ವಿಷಯಗಳಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ತಾರತಮ್ಯ ಎಸಗುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
    • ಕಾನೂನಿನ ಶೂನ್ಯತೆ ಕುರಿತು ಎಚ್ಚರಿಕೆ:- ಪ್ರಸ್ತುತ ಇರುವ ವೈಯಕ್ತಿಕ ಕಾನೂನಿನ ನಿಬಂಧನೆಗಳನ್ನು ಏಕಾಏಕಿ ರದ್ದುಗೊಳಿಸಿದರೆ, ಆಸ್ತಿ ಹಂಚಿಕೆಯ ನಿಯಮಗಳಿಗೆ ಸಂಬಂಧಿಸಿದಂತೆ ‘ಕಾನೂನಿನ ಶೂನ್ಯತೆ’ ಸೃಷ್ಟಿಯಾಗಬಹುದು ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
    • ಶಾಸಕಾಂಗದ ಕ್ರಮದ ಅಗತ್ಯತೆ:- ವೈಯಕ್ತಿಕ ಕಾನೂನುಗಳಲ್ಲಿ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ‘ಏಕರೂಪ ನಾಗರಿಕ ಸಂಹಿತೆ’ಯು ಸ್ಪಷ್ಟವಾದ ಮತ್ತು ಹೆಚ್ಚು ಸಮಗ್ರವಾದ ಪರಿಹಾರವನ್ನು ಒದಗಿಸುತ್ತದೆ ಎಂದು ನ್ಯಾಯಾಲಯ ಒತ್ತಿಹೇಳಿದೆ. ಅಲ್ಲದೆ, ಇದನ್ನು ಜಾರಿಗೊಳಿಸಲು ಕೇವಲ ನ್ಯಾಯಾಂಗದ ನಿರ್ಧಾರಗಳಷ್ಟೇ ಸಾಲದು, ಬದಲಾಗಿ ‘ಶಾಸಕಾಂಗದ ಕ್ರಮ’ವೂ ಅತ್ಯಗತ್ಯ ಎಂದು ಸ್ಪಷ್ಟಪಡಿಸಿದೆ.

    ಏಕರೂಪ ನಾಗರಿಕ ಸಂಹಿತೆ (UCC)ಯ ಬಗ್ಗೆ:

    • ಭಾರತದ ಸಂವಿಧಾನದ ‘ರಾಜ್ಯ ನೀತಿ ನಿರ್ದೇಶಕ ತತ್ವಗಳ’ (DPSP) 44ನೇ ವಿಧಿಯು, ದೇಶದಾದ್ಯಂತ ಎಲ್ಲಾ ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ತಿಳಿಸುತ್ತದೆ.
    • ಮುಖ್ಯ ಉದ್ದೇಶ:- ಭಾರತದ ಪ್ರಮುಖ ಧಾರ್ಮಿಕ ಸಮುದಾಯಗಳ ಗ್ರಂಥಗಳು ಮತ್ತು ಸಂಪ್ರದಾಯಗಳನ್ನು ಆಧರಿಸಿದ ವೈಯಕ್ತಿಕ ಕಾನೂನುಗಳನ್ನು ರದ್ದುಗೊಳಿಸಿ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅನ್ವಯವಾಗುವಂತಹ ‘ಸಾಮಾನ್ಯ ನಿಯಮಗಳನ್ನು’ ರೂಪಿಸುವುದು.
    • ಏಕರೂಪ ನಾಗರಿಕ ಸಂಹಿತೆಯಲ್ಲಿ ‘ಏಕರೂಪತೆ’/ಸಮಾನತೆ (Uniformity) ಎಂದರೆ:
      • ವಿವಿಧ ಸಮುದಾಯಗಳ ನಡುವಿನ ಕಾನೂನುಗಳಲ್ಲಿ ಏಕರೂಪತೆ ಕಾಯ್ದುಕೊಳ್ಳುವುದು.
      • ಸಮುದಾಯಗಳಲ್ಲಿ ಪುರುಷರು ಮತ್ತು ಮಹಿಳೆಯರ ಹಕ್ಕುಗಳ ನಡುವೆ ಸಮಾನತೆಯನ್ನು ಖಚಿತಪಡಿಸುವ ಮೂಲಕ ಕಾನೂನುಗಳಲ್ಲಿ ಏಕರೂಪತೆಯನ್ನು ಸಾಧಿಸುವುದು.

    ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಗಾಗಿ ನಡೆದಿರುವ ಪ್ರಯತ್ನಗಳು:

    • ವಿಶೇಷ ವಿವಾಹ ಕಾಯ್ದೆ, 1954:- ಈ ಕಾಯ್ದೆಯು ಯಾವುದೇ ಧರ್ಮವನ್ನು ಪರಿಗಣಿಸದೆ ಪ್ರತಿಯೊಬ್ಬ ನಾಗರಿಕನಿಗೂ ಸಿವಿಲ್ ವಿವಾಹಕ್ಕೆ ಅವಕಾಶ ಕಲ್ಪಿಸುತ್ತದೆ. ಈ ಮೂಲಕ ಯಾವುದೇ ಭಾರತೀಯ ಪ್ರಜೆಯು ತನ್ನ ಧಾರ್ಮಿಕ ವೈಯಕ್ತಿಕ ಕಾನೂನುಗಳ ಮಿತಿಯನ್ನು ಮೀರಿ ವಿವಾಹವಾಗಲು ಇದು ಅನುಮತಿ ನೀಡುತ್ತದೆ. 
    • ಶಾ ಬಾನೊ ಪ್ರಕರಣ, 1985:- ಈ ಐತಿಹಾಸಿಕ ಪ್ರಕರಣದಲ್ಲಿ ಶಾ ಬಾನೊ ಎಂಬುವವರಿಗೆ ಜೀವನಾಂಶದ ಹಕ್ಕನ್ನು ನಿರಾಕರಿಸಲಾಗಿತ್ತು. ಆದರೆ, ಸರ್ವೋಚ್ಚ ನ್ಯಾಯಾಲಯವು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 125 ರ ಅಡಿಯಲ್ಲಿ ಅವರ ಪರವಾಗಿ ತೀರ್ಪು ನೀಡಿತು. ಈ ನಿಬಂಧನೆಯು ಎಲ್ಲಾ ನಾಗರಿಕರಿಗೂ ಸಮಾನವಾಗಿ ಅನ್ವಯವಾಗಲಿದ್ದು, ಪತ್ನಿಯರು, ಮಕ್ಕಳು ಮತ್ತು ಪೋಷಕರ ನಿರ್ವಹಣೆಗೆ ಆದೇಶಿಸುತ್ತದೆ. 
    • ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಏಕರೂಪ ನಾಗರಿಕ ಸಂಹಿತೆಯನ್ನು ಅಂತಿಮವಾಗಿ ಜಾರಿಗೊಳಿಸಬೇಕು ಎಂದು ಇದೇ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು  ಶಿಫಾರಸು ಮಾಡಿತ್ತು.
    • ಇತರ ಪ್ರಮುಖ ತೀರ್ಪುಗಳು:- 1995ರ ‘ಸರಳಾ ಮುದ್ಗಲ್’ ತೀರ್ಪಿನಲ್ಲಿ ಹಾಗೂ 2019ರ ‘ಪಾಲೊ ಕೌಟಿನ್ಹೋ ಮತ್ತು ಮಾರಿಯಾ ಲೂಯಿಜಾ ವ್ಯಾಲೆಂಟಿನಾ ಪಿರೇರಾ’ ಪ್ರಕರಣದಲ್ಲಿಯೂ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

    ಏಕರೂಪ ನಾಗರಿಕ ಸಂಹಿತೆಯ ಪರವಾಗಿರುವ ವಾದಗಳು:

    • ಯುವಜನರ ಆಕಾಂಕ್ಷೆಗಳಿಗೆ ಮನ್ನಣೆ:- ಜಗತ್ತು ಡಿಜಿಟಲ್ ಯುಗಕ್ಕೆ ಕಾಲಿಡುತ್ತಿರುವಂತೆ, ಯುವ ಜನತೆಯ ಸಾಮಾಜಿಕ ಮನೋಭಾವ ಮತ್ತು ಆಕಾಂಕ್ಷೆಗಳು ಸಮಾನತೆ, ಮಾನವೀಯತೆ ಮತ್ತು ಆಧುನಿಕತೆಯ ಜಾಗತಿಕ ತತ್ವಗಳಿಂದ ರೂಪಿತಗೊಳ್ಳುತ್ತಿವೆ. ಹೀಗಾಗಿ, ಏಕರೂಪ ನಾಗರಿಕ ಸಂಹಿತೆಯ ಜಾರಿಯು ರಾಷ್ಟ್ರ ನಿರ್ಮಾಣದ ಕಡೆಗೆ ಅವರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ನೆರವಾಗುತ್ತದೆ.
    • ರಾಷ್ಟ್ರೀಯ ಭಾವೈಕ್ಯತೆಗೆ ಬೆಂಬಲ:- ಸಂವಿಧಾನವು ವೈಯಕ್ತಿಕ ಕಾನೂನುಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಕಾನೂನುಗಳಲ್ಲಿ ನಾಗರಿಕರಿಗೆ ಸಮಾನತೆಯನ್ನು ಖಾತರಿಪಡಿಸಿದೆ. ಯುಸಿಸಿ ಜಾರಿಯಿಂದ ಪ್ರತಿಯೊಬ್ಬರಿಗೂ ಏಕರೂಪದ ವೈಯಕ್ತಿಕ ಕಾನೂನುಗಳು ಅನ್ವಯವಾಗಲಿವೆ. ಇದು ಧಾರ್ಮಿಕ ಆಧಾರದ ಮೇಲಿನ ತಾರತಮ್ಯವನ್ನು ತಡೆಯುತ್ತದೆ. ಜೊತೆಗೆ, ಧರ್ಮದ ಹೆಸರಿನಲ್ಲಿ ವಿಶೇಷ ವಿನಾಯಿತಿಗಳನ್ನು ನೀಡಿ ರಾಜಕೀಯ ಲಾಭ ಪಡೆಯುವ ಪ್ರವೃತ್ತಿಯನ್ನು ಕೊನೆಗೊಳಿಸುತ್ತದೆ.
    • ಪಿತೃಪ್ರಧಾನ ಮನಸ್ಥಿತಿಯ ನಿರ್ಮೂಲನೆ:- ಪ್ರಸ್ತುತ ಇರುವ ಬಹುತೇಕ ಧರ್ಮಗಳ ವೈಯಕ್ತಿಕ ಕಾನೂನುಗಳು ಸಮಾಜದ ಪಿತೃಪ್ರಧಾನ ಕಲ್ಪನೆಗಳನ್ನು ಆಧರಿಸಿವೆ. ಯುಸಿಸಿ ಕ್ರೂಢೀಕರಣ ಮತ್ತು ಅನುಷ್ಠಾನವು ಈ ಪಿತೃಪ್ರಧಾನ ಸಂಪ್ರದಾಯವಾದಿ ವ್ಯವಸ್ಥೆಯನ್ನು ಅಳಿಸಿಹಾಕುತ್ತದೆ. ಇದು ಲಿಂಗ ಸಮಾನತೆಯನ್ನು ಉತ್ತೇಜಿಸುವುದರ ಜೊತೆಗೆ ಪುರುಷರು ಹಾಗೂ ಮಹಿಳೆಯರನ್ನು ಸಮಾನವಾಗಿ ಪರಿಗಣಿಸುತ್ತದೆ.
    • ನ್ಯಾಯಾಂಗ ಪ್ರಕ್ರಿಯೆಗೆ ಅನುಕೂಲಕರ:- ಪ್ರಸ್ತುತ ಹಿಂದೂ ಕೋಡ್, ಶರಿಯಾ ಕಾನೂನು ಸೇರಿದಂತೆ ಅನೇಕ ವೈಯಕ್ತಿಕ ಕಾನೂನುಗಳು ಚಾಲ್ತಿಯಲ್ಲಿವೆ. ಇಷ್ಟು ದೊಡ್ಡ ಸಂಖ್ಯೆಯ ಕಾನೂನುಗಳ ಉಪಸ್ಥಿತಿಯು ವೈಯಕ್ತಿಕ ವಿಷಯಗಳ ತೀರ್ಮಾನದಲ್ಲಿ ಗೊಂದಲ, ಸಂಕೀರ್ಣತೆ ಮತ್ತು ಅಸಂಗತತೆಗಳಿಗೆ ಕಾರಣವಾಗುತ್ತದೆ. ಯುಸಿಸಿ ಜಾರಿಯಿಂದ ನ್ಯಾಯಾಂಗವು ತ್ವರಿತವಾಗಿ ಮತ್ತು ಸಮರ್ಥವಾಗಿ ನ್ಯಾಯವನ್ನು ಒದಗಿಸಲು ಸಾಧ್ಯವಾಗುತ್ತದೆ.

    ಏಕರೂಪ ನಾಗರಿಕ ಸಂಹಿತೆಯ ವಿರುದ್ಧವಿರುವ ವಾದಗಳು:

    • 21ನೇ ಭಾರತದ ಕಾನೂನು ಆಯೋಗದ ವರದಿ:- ವೈಯಕ್ತಿಕ ಅಥವಾ ಕೌಟುಂಬಿಕ ಕಾನೂನುಗಳಲ್ಲಿನ ಘರ್ಷಣೆಗಳನ್ನು ಬಗೆಹರಿಸಲು ಏಕರೂಪ ನಾಗರಿಕ ಸಂಹಿತೆಯು ‘ಅವಶ್ಯಕವೂ ಅಲ್ಲ ಮತ್ತು ಅಪೇಕ್ಷಣೀಯವೂ ಅಲ್ಲ’ ಎಂದು ಅಭಿಪ್ರಾಯಪಟ್ಟಿದೆ.
    • ಭಿನ್ನತೆಗಳ ಅಸ್ತಿತ್ವವು ಕೇವಲ ತಾರತಮ್ಯವನ್ನು ಸೂಚಿಸುವುದಿಲ್ಲ, ಬದಲಾಗಿ ಅದು ಬಲವಾದ ಪ್ರಜಾಪ್ರಭುತ್ವದ ಸಂಕೇತವಾಗಿದೆ. 
    • ಹಾಗಾಗಿ, ವೈಯಕ್ತಿಕ ಕಾನೂನುಗಳ ನಡುವಿನ ಭಿನ್ನತೆಗಳನ್ನು ಸಂಪೂರ್ಣವಾಗಿ ತೊಡೆದುಹಾಕುವ ಬದಲು, ತಾರತಮ್ಯ ಮತ್ತು ಅಸಮಾನತೆಯನ್ನು ನಿಭಾಯಿಸಲು ಅಸ್ತಿತ್ವದಲ್ಲಿರುವ ಕೌಟುಂಬಿಕ ಕಾನೂನುಗಳಿಗೇ ತಿದ್ದುಪಡಿಗಳನ್ನು ತರಲು ಆಯೋಗವು ಸಲಹೆ ನೀಡಿದೆ.
    • ಭಾರತದ ಸಾಂಸ್ಕೃತಿಕ ವೈವಿಧ್ಯತೆಗೆ ಧಕ್ಕೆ:- ಭಾರತದಲ್ಲಿ ಧರ್ಮಗಳು, ಪಂಥಗಳು, ಜಾತಿಗಳು ಮತ್ತು ರಾಜ್ಯಗಳಾದ್ಯಂತ ಅಪಾರವಾದ ಸಾಂಸ್ಕೃತಿಕ ವೈವಿಧ್ಯತೆಯಿದೆ. ಈ ವೈವಿಧ್ಯತೆಯ ಕಾರಣದಿಂದಾಗಿ, ವಿವಾಹದಂತಹ ಸೂಕ್ಷ್ಮ ವೈಯಕ್ತಿಕ ವಿಷಯಗಳಿಗಾಗಿ ಎಲ್ಲರಿಗೂ ಅನ್ವಯವಾಗುವ ಏಕರೂಪದ ನಿಯಮಗಳನ್ನು ರೂಪಿಸುವುದು ಪ್ರಾಯೋಗಿಕವಾಗಿ ಕಷ್ಟಕರವಾಗಿದೆ.
    • ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣ:- ಭಾರತೀಯ ಸಂವಿಧಾನದ 25 ರಿಂದ 28ನೇ ವಿಧಿಗಳು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಒದಗಿಸುತ್ತವೆ. ಅನೇಕ ಸಮುದಾಯಗಳು, ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳು ಯುಸಿಸಿಯನ್ನು ತಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ (ವಿಧಿ 25) ಒಡ್ಡಿದ ಬೆದರಿಕೆ ಎಂದು ಪರಿಗಣಿಸುತ್ತವೆ. ಇದು ಬಹುಸಂಖ್ಯಾತ ಧಾರ್ಮಿಕ ಸಮುದಾಯಗಳ ನಿಯಮಗಳನ್ನು ತಮ್ಮ ಮೇಲೆ ಹೇರುತ್ತದೆ ಎಂಬುದು ಅವರ ಆತಂಕವಾಗಿದೆ.
    • ಬುಡಕಟ್ಟು ಜನಾಂಗದವರ ಸ್ಥಳೀಯ ಹಕ್ಕುಗಳಿಗೆ ಚ್ಯುತಿ:- ಯುಸಿಸಿ ಜಾರಿಯು ತಮ್ಮ ವಿಶಿಷ್ಟ ಸಂಸ್ಕೃತಿ ಮತ್ತು ಘನತೆಗೆ ಧಕ್ಕೆ ತರುತ್ತದೆ ಎಂದು ನಾಗಾ ಸಮುದಾಯವು ವಾದಿಸಿದೆ. ಬುಡಕಟ್ಟು ಜನಾಂಗದವರ ವೈಯಕ್ತಿಕ ಮತ್ತು ಸಾಮಾಜಿಕ ಜೀವನವು ದೇಶದ ಉಳಿದ ಜನರಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುವುದರಿಂದ, ಇದು ಸಾಮಾಜಿಕ ಅಸ್ಥಿರತೆಗೆ ಕಾರಣವಾಗಬಹುದು ಎನ್ನಲಾಗಿದೆ.
  • ಗ್ರಾಮೀಣ ಸ್ಮಾರ್ಟ್ ವಿಲೇಜ್ ಸೆಂಟರ್ ಯೋಜನೆ

    ಗ್ರಾಮೀಣ ಸ್ಮಾರ್ಟ್ ವಿಲೇಜ್ ಸೆಂಟರ್ ಯೋಜನೆ

    ಇದೀಗ ಸುದ್ದಿಯಲ್ಲಿದೆ:

    • GNA ಇಂಡಿಯಾ ಪ್ರೈವೇಟ್ ಲಿಮಿಟೆಡ್, BSNL ಮತ್ತು Acer ಇಂಡಿಯಾ ಸಹಯೋಗದೊಂದಿಗೆ ಉತ್ತರ ಕನ್ನಡದ ಕುಗ್ರಾಮ ಪ್ರವಾಸಿ ತಾಣಗಳಾದ ಯಾಣ, ಸಹಸ್ರಲಿಂಗ, ಸಾತೋಡಿ ಜಲಪಾತ ಮತ್ತು ಮಾಗೋಡು ಜಲಪಾತಗಳಲ್ಲಿ ಅತ್ಯಧಿಕ ವೇಗದ ವೈ-ಫೈ 7 (Wi-Fi 7) ಸಂಪರ್ಕವನ್ನು ಪ್ರಾರಂಭಿಸಲಾಗಿದೆ.

    ಗ್ರಾಮೀಣ ಸ್ಮಾರ್ಟ್ ವಿಲೇಜ್ ಸೆಂಟರ್ ಯೋಜನೆ:

    • ಈ ಉಪಕ್ರಮವು ದಟ್ಟವಾದ ಅರಣ್ಯ ಪ್ರದೇಶಗಳಲ್ಲಿನ “ಬ್ಲೈಂಡ್ ಸ್ಪಾಟ್‌ಗಳನ್ನು” (ಸಂಪರ್ಕವಿಲ್ಲದ ಪ್ರದೇಶಗಳು) ನಿವಾರಿಸುತ್ತದೆ. ಇದು ಪ್ರವಾಸಿಗರಿಗೆ ಡಿಜಿಟಲ್ ಪಾವತಿ, ಭದ್ರತೆ ಮತ್ತು ಅಂತರ್ಜಾಲ ಸಂಪರ್ಕವನ್ನು ಸುಗಮಗೊಳಿಸುತ್ತದೆ.
    • ಗುರಿ:- ಪ್ರವಾಸಿಗರ ಅನುಭವಗಳನ್ನು ಉತ್ತಮಗೊಳಿಸುವುದು, ಗ್ರಾಮೀಣ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವುದು ಮತ್ತು “ಗ್ರಾಮೀಣ ಸ್ಮಾರ್ಟ್ ವಿಲೇಜ್ ಸೆಂಟರ್ ಯೋಜನೆ”ಗೆ ಬೆಂಬಲ ನೀಡುವುದು.
    • ಉದ್ದೇಶ:- ಪಶ್ಚಿಮ ಘಟ್ಟಗಳ ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ಸಂಪರ್ಕವನ್ನು ಸುಧಾರಿಸುವುದು. ಇದು ಡಿಜಿಟಲ್ ಪಾವತಿಗಳನ್ನು ಬೆಂಬಲಿಸುತ್ತದೆ ಮತ್ತು ನೈಜ-ಸಮಯದ ಮಾಹಿತಿ ಲಭ್ಯತೆಯನ್ನು ಒದಗಿಸುತ್ತದೆ.

    ‘ಯಾಣ’ದ ಬಂಡೆಗಳು ಮತ್ತು ಗುಹೆಗಳ ಬಗ್ಗೆ:

    • ದಟ್ಟವಾದ ಸಹ್ಯಾದ್ರಿ ಅರಣ್ಯದ ನಡುವೆ ಎತ್ತರವಾಗಿ ನಿಂತಿರುವ ಎರಡು ಬೃಹತ್, ಕಪ್ಪು ಸುಣ್ಣದ ಕಲ್ಲಿನ ಏಕಶಿಲಾ ಬಂಡೆಗಳಾದ ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರಗಳಿಗೆ ಇದು ಅತ್ಯಂತ ಪ್ರಸಿದ್ಧವಾಗಿದೆ.
    • ಪ್ರಮುಖ ಅಂಶ:- ಭೈರವೇಶ್ವರ ಬಂಡೆಯ ತಳಭಾಗದಲ್ಲಿ ಶಿವನಿಗೆ ಸಮರ್ಪಿತವಾದ ಗುಹಾಂತರ ದೇವಾಲಯವು ನೆಲೆಗೊಂಡಿದೆ.

    ಸಹಸ್ರಲಿಂಗ:

    • ಇದು ಶಾಲ್ಮಲಾ ನದಿಯ ದಡದಲ್ಲಿರುವ ಒಂದು ವಿಶಿಷ್ಟವಾದ ಯಾತ್ರಾಸ್ಥಳ ಮತ್ತು ಪಾರಂಪರಿಕ ತಾಣವಾಗಿದೆ. ಇಲ್ಲಿ ನದಿಯ ಪಾತ್ರದ ಬಂಡೆಗಳ ಮೇಲೆ ಸಾವಿರಾರು ಶಿವಲಿಂಗಗಳು ಮತ್ತು ನಂದಿ ವಿಗ್ರಹಗಳನ್ನು ನೇರವಾಗಿ ಕೆತ್ತಲಾಗಿದೆ.
    • ಪ್ರಮುಖ ಅಂಶ:- ನೀರಿನ ಹರಿವು ಕಡಿಮೆಯಿರುವ ಋತುವಿನಲ್ಲಿ ಈ ಸಂಕೀರ್ಣ ಕೆತ್ತನೆಗಳು ಸಂಪೂರ್ಣವಾಗಿ ಗೋಚರಿಸುತ್ತವೆ. ಆದರೆ ಮಳೆಗಾಲದಲ್ಲಿ ಲಿಂಗಗಳ ಮೇಲೆ ನೀರು ಹರಿಯುವ ದೃಶ್ಯವು ಈ ತಾಣವನ್ನು ದಿವ್ಯವಾಗಿ ಕಾಣುವಂತೆ ಮಾಡುತ್ತದೆ.
    • ವಾತಾವರಣ:- ನದಿಗೆ ಇಳಿಯುವ ಮೆಟ್ಟಿಲುಗಳು ಮತ್ತು ಕಿರು ನಡಿಗೆಯ ಮೂಲಕ ಪ್ರವೇಶಿಸಬಹುದಾದ ಈ ತಾಣವು ಅತ್ಯಂತ ಶಾಂತ ಮತ್ತು ಆಧ್ಯಾತ್ಮಿಕ ವಾತಾವರಣವನ್ನು ಹೊಂದಿದೆ.

    ಸಾತೋಡಿ ಜಲಪಾತ:

    • “ಕರ್ನಾಟಕದ ಮಿನಿ-ನಯಾಗರಾ” ಎಂದು ಕರೆಯಲ್ಪಡುವ ಈ 15 ಮೀಟರ್ ಎತ್ತರದ ಜಲಪಾತವು ಹಲವಾರು ಸಣ್ಣ ತೊರೆಗಳಿಂದ ರೂಪುಗೊಂಡಿದೆ. ಇದು ಅಂತಿಮವಾಗಿ ಕೊಡಸಳ್ಳಿ ಅಣೆಕಟ್ಟಿನ ಹಿನ್ನೀರನ್ನು ಸೇರುತ್ತದೆ.
    • ಪ್ರಮುಖ ಅಂಶ:- ಇತರ ಅನೇಕ ಜಲಪಾತಗಳಿಗಿಂತ ಭಿನ್ನವಾಗಿ, ಇದರ ತಳಭಾಗದಲ್ಲಿರುವ ಕೊಳವು ಈಜಲು ಸಾಮಾನ್ಯವಾಗಿ ಸುರಕ್ಷಿತವಾಗಿದೆ. ಆದ್ದರಿಂದ ಇದು ಜನಪ್ರಿಯ ವಿಹಾರ ತಾಣವಾಗಿ ಹೊರಹೊಮ್ಮಿದೆ.

    ಮಾಗೋಡು ಜಲಪಾತ:

    • ಇದು ಎರಡು ಹಂತಗಳ ಅದ್ಭುತ ಜಲಪಾತವಾಗಿದೆ. ಇಲ್ಲಿ ಬೇಡ್ತಿ ನದಿಯು ಸುಮಾರು 200 ಮೀಟರ್ (650 ಅಡಿ) ಎತ್ತರದಿಂದ ಆಳವಾದ, ಕಲ್ಲಿನ ಕಣಿವೆಗೆ ಧುಮುಕುತ್ತದೆ.
    • ಪ್ರಮುಖ ಅಂಶ:- ಕಣಿವೆಯಾದ್ಯಂತ ಉತ್ತಮವಾಗಿ ನಿರ್ವಹಿಸಲಾದ ವೀಕ್ಷಣಾ ಸ್ಥಳಗಳಿಂದ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
    • ಸಮೀಪದ ಸ್ಥಳಗಳು:- ಪಶ್ಚಿಮ ಘಟ್ಟಗಳ ವಿಹಂಗಮ ಸೂರ್ಯಾಸ್ತವನ್ನು ವೀಕ್ಷಿಸಲು ಸಮೀಪದ ಜೇನುಕಲ್ಲು ಗುಡ್ಡ ವೀಕ್ಷಣಾ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ.
  • ತುಳು ಭಾಷೆಗೆ ಎರಡನೇ ಅಧಿಕೃತ ಭಾಷಾ ಸ್ಥಾನಮಾನದ ಶಿಫಾರಸು

    ತುಳು ಭಾಷೆಗೆ ಎರಡನೇ ಅಧಿಕೃತ ಭಾಷಾ ಸ್ಥಾನಮಾನದ ಶಿಫಾರಸು

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಕರ್ನಾಟಕ ಸರ್ಕಾರವು ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನವನ್ನು ನೀಡುವಂತೆ ಉನ್ನತ ಮಟ್ಟದ ಸಮಿತಿಯು ಅಧಿಕೃತವಾಗಿ ಶಿಫಾರಸು ಮಾಡಿದೆ.
    • ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಪ್ರಧಾನವಾಗಿ ನೆಲೆಸಿರುವ ತುಳು ಮಾತನಾಡುವ ಜನರ ದಶಕಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಈ ನಿರ್ಧಾರವು ಪ್ರಮುಖ ಹೆಜ್ಜೆಯಾಗಿದೆ.

    ಸ್ಥಾನಮಾನದ ಮಾನ್ಯತೆ ಪ್ರಕ್ರಿಯೆಯಲ್ಲಿನ ಪ್ರಮುಖ ಬೆಳವಣಿಗೆಗಳು:

    •  ಕೆ.ಎಂ. ಗಾಯತ್ರಿ ಸಮಿತಿಯ ಶಿಫಾರಸು:- ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ನಿರ್ದೇಶಕಿ ಕೆ.ಎಂ. ಗಾಯತ್ರಿ ನೇತೃತ್ವದ ಆರು ಸದಸ್ಯರ ಸಮಿತಿಯು ಮಾರ್ಚ್ 4, 2026 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗೆ ತನ್ನ ವರದಿಯನ್ನು ಸಲ್ಲಿಸಿದೆ.
    • ಆಂಧ್ರಪ್ರದೇಶದ ಮಾದರಿಯ ಅಳವಡಿಕೆ:- ತುಳು ಭಾಷೆಯ ಅನುಷ್ಠಾನವನ್ನು ಸುಗಮಗೊಳಿಸಲು, ಆಂಧ್ರಪ್ರದೇಶ ರಾಜ್ಯವು ಉರ್ದು ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಬಳಸಿದ ಆಡಳಿತಾತ್ಮಕ ಮತ್ತು ಕಾನೂನು ಚೌಕಟ್ಟನ್ನು ಈ ಸಮಿತಿಯು ನಿರ್ದಿಷ್ಟವಾಗಿ ಅಧ್ಯಯನ ಮಾಡಿದೆ.
    • ಸಾಂವಿಧಾನಿಕ ಆಧಾರ:- ಭಾರತದ ಸಂವಿಧಾನದ 345ನೇ ವಿಧಿಯ ಅಡಿಯಲ್ಲಿ ಈ ಸ್ಥಾನಮಾನವನ್ನು ನೀಡಲು ರಾಜ್ಯ ಸರ್ಕಾರವು ಉದ್ದೇಶಿಸಿದೆ. ಈ ವಿಧಿಯು ಅಧಿಕೃತ ಉದ್ದೇಶಗಳಿಗಾಗಿ ಒಂದು ಅಥವಾ ಹೆಚ್ಚಿನ ಭಾಷೆಗಳನ್ನು ಅಳವಡಿಸಿಕೊಳ್ಳಲು ರಾಜ್ಯ ಶಾಸಕಾಂಗಗಳಿಗೆ ಅವಕಾಶ ನೀಡುತ್ತದೆ.

    ಪ್ರಾಮುಖ್ಯತೆ ಮತ್ತು ಪ್ರಭಾವ:

    • ತುಳು ಭಾಷೆಯ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಗುರಿ:- ಈ ಭಾಷೆಯು 2,500 ರಿಂದ 3,000 ವರ್ಷಗಳ ದಾಖಲಿತ ಇತಿಹಾಸ ಮತ್ತು ತನ್ನದೇ ಆದ ವಿಶಿಷ್ಟ ಲಿಪಿಯನ್ನು ಹೊಂದಿರುವುದರಿಂದ ಈ ನಡೆಯು ಹೊಂದಿದೆ.

    ಅಧಿಕೃತ ಸ್ಥಾನಮಾನವು ಈ ಕೆಳಗಿನ ಪರಿಣಾಮಗಳನ್ನು ಉಂಟುಮಾಡಲಿದೆ:

    • ಆಡಳಿತಾತ್ಮಕ ಪ್ರವೇಶದ ಸುಧಾರಣೆ:- ಕರಾವಳಿ ಪ್ರದೇಶಗಳ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸಂಪರ್ಕಗಳು ಮತ್ತು ಶಿಕ್ಷಣದಲ್ಲಿ ತುಳು ಭಾಷೆಯ ಬಳಕೆಯನ್ನು ಇದು ಸುಗಮಗೊಳಿಸುತ್ತದೆ.
    • ಸಾಂಸ್ಕೃತಿಕ ಸಂರಕ್ಷಣೆಗೆ ಉತ್ತೇಜನ:- ತುಳು ಸಾಹಿತ್ಯ, ಸಂಶೋಧನೆ ಮತ್ತು ಅಭಿವೃದ್ಧಿಗೆ ಇದು ಹೆಚ್ಚಿನ ಸಾಂಸ್ಥಿಕ ಬೆಂಬಲವನ್ನು ಒದಗಿಸುತ್ತದೆ.
    • ಒಕ್ಕೂಟದ ಬೇಡಿಕೆಗಳಿಗೆ ಬೆಂಬಲ:- ಭಾರತೀಯ ಸಂವಿಧಾನದ 8ನೇ ಅನುಸೂಚಿಯಲ್ಲಿ ತುಳು ಭಾಷೆಯನ್ನು ಸೇರಿಸುವ ದೀರ್ಘಕಾಲದ ಒತ್ತಾಯವನ್ನು ಈ ನಿರ್ಧಾರವು ಬಲಪಡಿಸುತ್ತದೆ.

    ಪ್ರಭಾವಿತ ಪ್ರದೇಶಗಳು:

    ಈ ಮಾನ್ಯತೆಯು “ತುಳುನಾಡು” ಪ್ರದೇಶಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಇದು ಈ ಕೆಳಗಿನ ಪ್ರದೇಶಗಳನ್ನು ಒಳಗೊಂಡಿದೆ:

    • ದಕ್ಷಿಣ ಕನ್ನಡ ಜಿಲ್ಲೆ (ಕರ್ನಾಟಕ)
    • ಉಡುಪಿ ಜಿಲ್ಲೆ (ಕರ್ನಾಟಕ)
    • ಕಾಸರಗೋಡು ಜಿಲ್ಲೆ (ಉತ್ತರ ಕೇರಳ – ಇಲ್ಲಿಯೂ ತುಳು ಭಾಷೆಯನ್ನು ವ್ಯಾಪಕವಾಗಿ ಮಾತನಾಡಲಾಗುತ್ತದೆ)
  • ಭಾರತ – ಅಮೆರಿಕ ರಕ್ಷಣಾ ಸಂಬಂಧಗಳು | ಅಗತ್ಯ ಸರಕುಗಳ ಕಾಯ್ದೆ ಜಾರಿ | ಅಮೆರಿಕದ F-1 ವಿದ್ಯಾರ್ಥಿ ವೀಸಾ: ಭಾರತೀಯ ವಿದ್ಯಾರ್ಥಿಗಳಿಗೆ ಕುಸಿತ

    ಭಾರತ – ಅಮೆರಿಕ ರಕ್ಷಣಾ ಸಂಬಂಧಗಳು

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಶ್ರೀಲಂಕಾ ಜಲಸೀಮೆಯ ಬಳಿ ಇರಾನ್ ಹಡಗನ್ನು ಗುರಿಯಾಗಿಸಿ ದಾಳಿ ಮಾಡಲು ಅಮೆರಿಕಕ್ಕೆ ನೆರವು ನೀಡಲಾಗಿದೆ ಎಂಬ ವರದಿಗಳನ್ನು ಭಾರತ ಸರ್ಕಾರವು ಸ್ಪಷ್ಟವಾಗಿ ನಿರಾಕರಿಸಿದೆ.

    ಭಾರತ – ಅಮೆರಿಕ ನಡುವಿನ ಸಮರಾಭ್ಯಾಸಗಳು:

    • ಯುದ್ಧ ಅಭ್ಯಾಸ:- ಇದು ಉಭಯ ದೇಶಗಳ ಭೂಸೇನೆಗಳ ನಡುವೆ ನಡೆಯುವ ಜಂಟಿ ಸಮರಾಭ್ಯಾಸವಾಗಿದೆ.
    • ಮಲಬಾರ್:- ಇದು ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳ ಭಾಗವಹಿಸುವ ಚತುರ್ಭುಜ (ಕ್ವಾಡ್ರಿಲ್ಯಾಟರಲ್) ನೌಕಾಭ್ಯಾಸವಾಗಿದೆ.
    • ಕೋಪ್ ಇಂಡಿಯಾ:- ಇದು ಉಭಯ ದೇಶಗಳ ವಾಯುಪಡೆಗಳ ನಡುವೆ ನಡೆಯುವ ಜಂಟಿ ಸಮರಾಭ್ಯಾಸವಾಗಿದೆ.
    • ಟೈಗರ್ ಟ್ರಯಂಫ್:- ಇದು ಮೂರೂ ಸೇನಾ ಪಡೆಗಳನ್ನು ಒಳಗೊಂಡ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಕಾರ್ಯಾಚರಣೆಯಾಗಿದೆ.
    • ವಜ್ರ ಪ್ರಹಾರ್:- ಇದು ಎರಡು ದೇಶಗಳ ವಿಶೇಷ ರಕ್ಷಣಾ ಪಡೆಗಳ ನಡುವಿನ ಜಂಟಿ ಸಮರಾಭ್ಯಾಸವಾಗಿದೆ.

    ಅಗತ್ಯ ಸರಕುಗಳ ಕಾಯ್ದೆ ಜಾರಿ

    ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ದಾಳಿಯ ನಂತರ ಉಂಟಾದ ತೈಲ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ, ಕೇಂದ್ರ ಸರ್ಕಾರವು ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೊಳಿಸಿದೆ.
    • ತೈಲ ಸಂಸ್ಕರಣೆಯ ಉಪ-ಉತ್ಪನ್ನಗಳಾದ ಪ್ರೊಪೇನ್ ಮತ್ತು ಬ್ಯುಟೇನ್ ಬಳಸಿ ಎಲ್‌ಪಿಜಿ (LPG) ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ಸರ್ಕಾರವು ತೈಲ ಕಂಪನಿಗಳಿಗೆ ನಿರ್ದೇಶನ ನೀಡಿದೆ.
    • ಅಷ್ಟೇ ಅಲ್ಲದೆ, ಇದನ್ನು ಕೇವಲ ದೇಶೀಯ ಗ್ರಾಹಕರಿಗೆ ಮಾತ್ರ ಪ್ರತ್ಯೇಕವಾಗಿ ಪೂರೈಸುವಂತೆ ಮತ್ತು ಈ ಸ್ಟ್ರೀಮ್‌ಗಳನ್ನು ಇತರ ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಬಳಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

    ಅಗತ್ಯ ಸರಕುಗಳ ಕಾಯ್ದೆ, 1955 ರ ಬಗ್ಗೆ:

    • ಹೆಚ್ಚುತ್ತಿರುವ ಆಹಾರ ಬೆಲೆಗಳನ್ನು ನಿಯಂತ್ರಿಸಲು, ಕಾಳಸಂತೆಯಲ್ಲಿನ ದಾಸ್ತಾನು ತಡೆಗಟ್ಟಲು ಮತ್ತು ದೇಶದಲ್ಲಿ ಆಹಾರ ಭದ್ರತೆಯನ್ನು ಕಾಯ್ದುಕೊಳ್ಳಲು ಸರ್ಕಾರವು ವರ್ಷಗಳಿಂದ ಈ ಕಾಯ್ದೆಯನ್ನು ಪ್ರಮುಖ ಅಸ್ತ್ರವಾಗಿ ಬಳಸುತ್ತಿದೆ.
    • ಅಗತ್ಯ ಸರಕುಗಳ ಪಟ್ಟಿಯಲ್ಲಿ ಈ ಕೆಳಗಿನವು ಸೇರಿವೆ:- ಔಷಧಗಳು, ರಸಗೊಬ್ಬರಗಳು, ಆಹಾರ ಪದಾರ್ಥಗಳು (ಖಾದ್ಯ ತೈಲಗಳು ಸೇರಿದಂತೆ), ಹ್ಯಾಂಕ್ ನೂಲು, ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳು, ಕಚ್ಚಾ ಸೆಣಬು ಮತ್ತು ಸೆಣಬಿನ ಜವಳಿ, ಹಾಗೂ ಹಣ್ಣುಗಳು, ತರಕಾರಿಗಳು ಮತ್ತು ದನಗಳ ಮೇವಿನ ವಿವಿಧ ರೀತಿಯ ಬೀಜಗಳು.

    ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020:

    • ಕೇವಲ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಪ್ರಮುಖ ಆಹಾರ ಪದಾರ್ಥಗಳನ್ನು ನಿಯಂತ್ರಿಸುವ ಕೇಂದ್ರದ ಅಧಿಕಾರವನ್ನು ಸೀಮಿತಗೊಳಿಸಿದೆ.

    ಕೃಷಿ ಉತ್ಪನ್ನಗಳ ಬೆಲೆಗಳು ತೀವ್ರವಾಗಿ ಏರಿಕೆಯಾದಾಗ ಮಾತ್ರ ಕೃಷಿ ಉತ್ಪನ್ನಗಳ ಮೇಲಿನ ದಾಸ್ತಾನು ಮಿತಿಗೆ ಈ ತಿದ್ದುಪಡಿಯು ಅವಕಾಶ ಕಲ್ಪಿಸಿದೆ. ಅಂದರೆ, ತೋಟಗಾರಿಕಾ ಸರಕುಗಳ ಬೆಲೆ 100% ಮತ್ತು ಬೇಗ ಹಾಳಾಗದ ಆಹಾರ ಪದಾರ್ಥಗಳ ಬೆಲೆ 50% ಏರಿಕೆಯಾಗಿದ್ದಲ್ಲಿ ಮಾತ್ರ ದಾಸ್ತಾನು ಮಿತಿಯನ್ನು ಹೇರಲು ಅವಕಾಶವಿದೆ.

    ಅಮೆರಿಕದ F-1 ವಿದ್ಯಾರ್ಥಿ ವೀಸಾ: ಭಾರತೀಯ ವಿದ್ಯಾರ್ಥಿಗಳಿಗೆ ಕುಸಿತ

    ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • 2025ರ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾದ ಎಫ್-1 (F-1) ವೀಸಾಗಳ ಪ್ರಮಾಣವು ಶೇ 69ರಷ್ಟು ಕುಸಿದಿದೆ
    • 2024ರಲ್ಲಿ 41,336 ವೀಸಾಗಳನ್ನು ನೀಡಲಾಗಿದ್ದರೆ, 2025ರಲ್ಲಿ ಕೇವಲ 12,776 ವೀಸಾಗಳನ್ನು ಮಾತ್ರ ವಿತರಿಸಲಾಗಿದೆ.

    ಎಫ್-1 ವಿದ್ಯಾರ್ಥಿ ವೀಸಾದ ಬಗ್ಗೆ:

    • ಈ ವೀಸಾವು ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕದಲ್ಲಿ ಪೂರ್ಣಾವಧಿಯವರೆಗೆ ವ್ಯಾಸಂಗ ಮಾಡಲು ಅನುಮತಿ ನೀಡುತ್ತದೆ.
    • ಇದು ಅಮೆರಿಕಕ್ಕೆ ಪ್ರತಿಭಾವಂತರನ್ನು ಆಕರ್ಷಿಸುವ ಪ್ರಮುಖ ಮಾರ್ಗವಾಗಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿದೆ. ಇದನ್ನು 1952ರ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ಅಡಿಯಲ್ಲಿ ಜಾರಿಗೆ ತರಲಾಯಿತು.
    • ಪದವಿಯ ನಂತರ ವಿದ್ಯಾರ್ಥಿಗಳು ಅಮೆರಿಕದಲ್ಲಿ ತಾತ್ಕಾಲಿಕವಾಗಿ ಉಳಿಯಲು ಈ ವೀಸಾ ಅವಕಾಶ ಕಲ್ಪಿಸುತ್ತದೆ.
    • ಈ ವೀಸಾದ ಮೂಲಕ ಅಮೆರಿಕದ ವಿಶ್ವವಿದ್ಯಾಲಯಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳು ಜಾಗತಿಕ ಮಟ್ಟದ, ವಿಶೇಷವಾಗಿ ಭಾರತ ಮತ್ತು ಚೀನಾದ ಪ್ರತಿಭಾವಂತರನ್ನು ಆಕರ್ಷಿಸಲು ಸಾಧ್ಯವಾಗಿದೆ.

    ಎಫ್-1 (F-1) ವೀಸಾವು ಎಂ (M) ವೀಸಾಕ್ಕಿಂತ ಹೇಗೆ ಭಿನ್ನವಾಗಿದೆ?

    • ಅಮೆರಿಕವು ವಿದೇಶಿ ವಿದ್ಯಾರ್ಥಿಗಳಿಗೆ ‘ಎಫ್’ ಮತ್ತು ‘ಎಂ’ ಎಂಬ ಎರಡು ರೀತಿಯ ಅಧ್ಯಯನ ವೀಸಾಗಳನ್ನು ನೀಡುತ್ತದೆ.
    • ‘ಎಫ್’ (F) ವರ್ಗದ ವೀಸಾ:- ಇದನ್ನು ವಿಶ್ವವಿದ್ಯಾಲಯ, ಕಾಲೇಜು, ಪ್ರೌಢಶಾಲೆ, ಖಾಸಗಿ ಪ್ರಾಥಮಿಕ ಶಾಲೆ, ಭಾಷಾ ತರಬೇತಿ ಕಾರ್ಯಕ್ರಮ ಸೇರಿದಂತೆ ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಬಳಸಲಾಗುತ್ತದೆ.
    • ‘ಎಂ’ (M) ವರ್ಗದ ವೀಸಾ:- ಇದನ್ನು ಭಾಷಾ ತರಬೇತಿ ಕಾರ್ಯಕ್ರಮಗಳನ್ನು ಹೊರತುಪಡಿಸಿ, ವೃತ್ತಿಪರ ಅಥವಾ ಇತರ ಮಾನ್ಯತೆ ಪಡೆದ ಶಿಕ್ಷಣೇತರ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ನೀಡಲಾಗುತ್ತದೆ.
  • ಬೆಂಗಳೂರಿನಲ್ಲಿ ಎರಡು ಸಮಗ್ರ ಘನತ್ಯಾಜ್ಯ ನಿರ್ವಹಣಾ ಪಾರ್ಕ್‌ಗಳು

    ಬೆಂಗಳೂರಿನಲ್ಲಿ ಎರಡು ಸಮಗ್ರ ಘನತ್ಯಾಜ್ಯ ನಿರ್ವಹಣಾ ಪಾರ್ಕ್‌ಗಳು

    ಇದೀಗ ಸುದ್ದಿಯಲ್ಲಿದೆ:

    • ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತವು (BSWML) ನಗರದ ಹೊರವಲಯದಲ್ಲಿ ಎರಡು ಸಮಗ್ರ ಘನತ್ಯಾಜ್ಯ ನಿರ್ವಹಣಾ (ISWM) ಪಾರ್ಕ್‌ಗಳನ್ನು ಸ್ಥಾಪಿಸಲು 100 ಎಕರೆಗೂ ಹೆಚ್ಚು ಭೂಮಿಯನ್ನು ಅಧಿಕೃತವಾಗಿ ಗುರುತಿಸಿದೆ.
    • ಬೆಂಗಳೂರು ನಗರವು ಪ್ರತಿದಿನ ಉತ್ಪಾದಿಸುವ ಅಂದಾಜು 6,000 ಮೆಟ್ರಿಕ್ ಟನ್ ಪಾಲಿಕೆಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಈ ಘಟಕಗಳನ್ನು ವಿನ್ಯಾಸಗೊಳಿಸಲಾಗಿದೆ.

    ಘಟಕಗಳ ಸ್ಥಳಗಳು ಮತ್ತು ವಿಶೇಷತೆಗಳು:

    ತ್ಯಾಜ್ಯ ಸಾಗಾಣಿಕೆಯನ್ನು ಸುಗಮಗೊಳಿಸಲು ಈ ಎರಡು ಪಾರ್ಕ್‌ಗಳನ್ನು ಆಯಕಟ್ಟಿನ ಸ್ಥಳಗಳಾದ ಉತ್ತರ ಮತ್ತು ದಕ್ಷಿಣ ಕಾರಿಡಾರ್‌ಗಳಲ್ಲಿ ಸ್ಥಾಪಿಸಲಾಗುತ್ತಿದೆ:

    • ಗೊಲ್ಲಹಳ್ಳಿ (ಬೆಂಗಳೂರು ದಕ್ಷಿಣ):- ಈ ಘಟಕವನ್ನು ಸರ್ಕಾರಿ ಒಡೆತನದ ಭೂಮಿಯಲ್ಲಿ ನಿರ್ಮಿಸಲು ಯೋಜಿಸಲಾಗಿದೆ ಮತ್ತು ಇದು ದಿನಕ್ಕೆ ಅಂದಾಜು 2,999 ಟನ್ (TPD) ತ್ಯಾಜ್ಯ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ.
    • ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ/ಉತ್ತರ):- ಗುಂಡಲಹಳ್ಳಿ ಗ್ರಾಮದ ಟೆರ್ರಾ ಫಾರ್ಮ್ ಬಳಿ ಈ ಘಟಕಕ್ಕಾಗಿ ಜಾಗವನ್ನು ಮೀಸಲಿಡಲಾಗಿದೆ ಮತ್ತು ಇದು ಪ್ರತಿದಿನ ಅಂದಾಜು 3,073 TPD ತ್ಯಾಜ್ಯವನ್ನು ನಿಭಾಯಿಸುವ ನಿರೀಕ್ಷೆಯಿದೆ.

    ಈ ಯೋಜನೆಯ ಪ್ರಮುಖ ವಿವರಗಳು:

    • ಭೂಸ್ವಾಧೀನ:- ದೊಡ್ಡಬೆಳವಂಗಲ ಘಟಕಕ್ಕಾಗಿ 70 ಎಕರೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದ್ದು, ರೈತರಿಗೆ ಎಕರೆಗೆ ₹1.57 ಕೋಟಿ ಪರಿಹಾರವನ್ನು ನೀಡಲಾಗುತ್ತದೆ.
    • PPP ಕಾರ್ಯಾಚರಣೆ ಮಾದರಿ:- ಈ ಯೋಜನೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಡಿ ಕಾರ್ಯಗತಗೊಳಿಸಲಾಗುತ್ತಿದೆ.
    • ಪೂರಕ ಮೂಲಸೌಕರ್ಯ:- ಈ ಬೃಹತ್ ಘಟಕಗಳಿಗೆ ಪೂರಕವಾಗಿ, ರಸ್ತೆಬದಿಯ ತ್ಯಾಜ್ಯ ಸಂಗ್ರಹಣೆಯನ್ನು ತಪ್ಪಿಸಲು BSWML ನಗರದಾದ್ಯಂತ 30 ಆಧುನಿಕ ವರ್ಗಾವಣೆ ಕೇಂದ್ರಗಳನ್ನು ನಿರ್ಮಿಸುತ್ತಿದೆ.
    • ತ್ಯಾಜ್ಯದಿಂದ ಸಂಪನ್ಮೂಲಕ್ಕೆ ಆದ್ಯತೆ:- ಸಾವಯವ ತ್ಯಾಜ್ಯವನ್ನು ಜೈವಿಕ ಅನಿಲ, ಮಿಶ್ರಗೊಬ್ಬರ (ಕಾಂಪೋಸ್ಟ್) ಮತ್ತು ವಿದ್ಯುತ್ ಆಗಿ ಪರಿವರ್ತಿಸಲು ಈ ಪಾರ್ಕ್‌ಗಳು ವಿವಿಧ ತಂತ್ರಜ್ಞಾನಗಳನ್ನು ಬಳಸುತ್ತವೆ ಮತ್ತು ಒಣ ತ್ಯಾಜ್ಯವನ್ನು ತ್ಯಾಜ್ಯ ಸಂಸ್ಕರಿತ ಇಂಧನ (RDF – ರೆಫ್ಯೂಸ್ ಡಿರೈವ್ಡ್ ಫ್ಯುಯೆಲ್) ಉತ್ಪಾದನೆಗಾಗಿ ಸಂಸ್ಕರಿಸಲಾಗುತ್ತದೆ.
  • ಇರಾನಿನ ಕುರ್ಡ್ ಸಮುದಾಯ | ರೈಸಿನಾ ಡೈಲಾಗ್ (ಸಂವಾದ), 2026 | ಗುರುತ್ವಾಕರ್ಷಣ ಬಾಂಬ್ (Gravity Bomb) | ಜೈವಿಕ ವೈವಿಧ್ಯತಾ ಸಮಾವೇಶ: ಭಾರತದ 7ನೇ ವರದಿ | ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಕರ್ನಾಟಕ ಮತ್ತು ಆಂಧ್ರಪ್ರದೇಶ | ‘ಮೂನ್‌ಶಾಟ್’ ಮೆಲುಕು ಯೋಜನೆ :ಐಐಎಸ್‌ಸಿ (IISc)

    ಇರಾನಿನ ಕುರ್ಡ್ ಸಮುದಾಯ

    ಅಂತರರಾಷ್ಟ್ರೀಯ ವಿದ್ಯಮಾನಗಳು

    ಇದೀಗ ಸುದ್ದಿಯಲ್ಲಿದೆ:

    • ಪಶ್ಚಿಮ ಏಷ್ಯಾದಲ್ಲಿ ಸಂಘರ್ಷವು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ವಿರುದ್ಧ ದಾಳಿ ನಡೆಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನಿನ ಕುರ್ಡ್ ಜನಾಂಗೀಯ ಪಡೆಗಳನ್ನು ಪ್ರೋತ್ಸಾಹಿಸಿದ್ದಾರೆ.

    ಕುರ್ಡ್ ಜನಾಂಗೀಯ ಸಮುದಾಯದ ಬಗ್ಗೆ:

    • ಕುರ್ಡ್ ಜನಾಂಗವು ಮಧ್ಯಪ್ರಾಚ್ಯದ ದೇಶಗಳಲ್ಲಿ ವಾಸಿಸುತ್ತಿರುವ ಒಂದು ಜನಾಂಗೀಯ ಅಲ್ಪಸಂಖ್ಯಾತ ಸಮುದಾಯವಾಗಿದ್ದು, ಇವರಿಗೆ ತಮ್ಮದೇ ಆದ ಸ್ವತಂತ್ರ ರಾಷ್ಟ್ರವಿಲ್ಲ.
    • ವಿಶ್ವದಾದ್ಯಂತ ಇವರ ಜನಸಂಖ್ಯೆಯು 25 ರಿಂದ 45 ದಶ ಲಕ್ಷದ ನಡುವೆ ಇದೆ. ಇವರಲ್ಲಿ ಬಹುಪಾಲು ಜನರು ಪಶ್ಚಿಮ ಇರಾನ್, ಪೂರ್ವ ಟರ್ಕಿ, ಉತ್ತರ ಇರಾಕ್, ಸಿರಿಯಾ ಮತ್ತು ಅರ್ಮೇನಿಯಾದ ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
    • ಇವರು ವಿವಿಧ ಕುರ್ಡ್ ಜನಾಂಗೀಯ ಉಪಭಾಷೆಗಳನ್ನು ಮಾತನಾಡುತ್ತಾರೆ. ಈ ಭಾಷೆಗಳಿಗೆ ತುರ್ಕಿ ಅಥವಾ ಅರೇಬ್ಬೀ ಭಾಷೆಗಳೊಂದಿಗೆ ಯಾವುದೇ ಸಂಬಂಧವಿಲ್ಲ ಹಾಗೂ ಈ ಸಮುದಾಯದ ಬಹುಪಾಲು ಜನರು ಸುನ್ನಿ ಮುಸ್ಲಿಮರಾಗಿದ್ದಾರೆ.
    • ಟರ್ಕಿಯು ಸರಿಸುಮಾರು 15 ರಿಂದ 20 ದಶ ಲಕ್ಷ ಕುರ್ಡ್‌ ಜನರನ್ನು ಹೊಂದಿದ್ದು, ಇದು ವಿಶ್ವದಲ್ಲೇ ಅತಿ ಹೆಚ್ಚು ಕುರ್ಡ್ ಜನಸಂಖ್ಯೆ ಇರುವ ದೇಶವಾಗಿದೆ. ಇರಾನ್ ದೇಶದಲ್ಲಿ 8 ರಿಂದ 12 ದಶ ಲಕ್ಷ ಕುರ್ಡ್ ಜನರಿದ್ದಾರೆ.

    ಕುರ್ಡ್ ಸಮುದಾಯದ ಬಗ್ಗೆ ಕಳವಳ:

    • ಮೊದಲನೇ ಮಹಾಯುದ್ಧದ (WWI) ನಂತರ ಇವರಿಗೆ ಪ್ರತ್ಯೇಕ ರಾಷ್ಟ್ರವನ್ನು ಒದಗಿಸುವ ಭರವಸೆ ನೀಡಲಾಗಿತ್ತು, ಆದರೆ ಆ ಭರವಸೆಯನ್ನು ಇಂದಿಗೂ ಈಡೇರಿಸಿಲ್ಲ.
    • ಈ ಸಮುದಾಯವು ಅನೇಕ ಬಂಡಾಯಗಳನ್ನು ಎದುರಿಸಿದೆ ಮತ್ತು ವಿವಿಧ ಸರ್ಕಾರಗಳು ಇವರ ಭಾಷೆ ಹಾಗೂ ಸಂಸ್ಕೃತಿಯನ್ನು ಹತ್ತಿಕ್ಕುವ ದಮನಕಾರಿ ನೀತಿಯನ್ನು ಅನುಸರಿಸಿವೆ.

    ಕುರ್ಡಿಸ್ತಾನ್ ಪ್ರಾದೇಶಿಕ ಸರ್ಕಾರ (KRG):

    • ಹಲವಾರು ವರ್ಷಗಳ ಕಾಲದ ಸಂಘರ್ಷ ಮತ್ತು 1991 ರ ಕೊಲ್ಲಿ ಯುದ್ಧದ ನಂತರ, ಕುರ್ಡ್‌ ಜನರು ಇರಾಕ್‌ನಲ್ಲಿ ‘ಕುರ್ಡಿಸ್ತಾನ್ ಪ್ರಾದೇಶಿಕ ಸರ್ಕಾರ’ವನ್ನು (KRG) ಸ್ಥಾಪಿಸಿದರು. ಇದು ಪ್ರಸ್ತುತ ಇರಾಕ್‌ನ ಸಂವಿಧಾನದಿಂದ ಮಾನ್ಯತೆ ಪಡೆದ ಒಂದು ಸ್ವಾಯತ್ತ ಪ್ರದೇಶವಾಗಿದೆ.

    ರೈಸಿನಾ ಡೈಲಾಗ್ (ಸಂವಾದ), 2026

    ಅಂತರರಾಷ್ಟ್ರೀಯ ವಿದ್ಯಮಾನಗಳು

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ನವದೆಹಲಿಯಲ್ಲಿ ಜರುಗಿದ ‘ರೈಸಿನಾ ಡೈಲಾಗ್ 2026’ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು.
    • 2026 ರ ಆವೃತ್ತಿಯ ಘೋಷವಾಕ್ಯ:- “ಸಂಸ್ಕಾರ: ಪ್ರತಿಪಾದನೆ, ಸಮನ್ವಯ, ಪ್ರಗತಿ” ಎಂಬುದಾಗಿತ್ತು.

    ‘ರೈಸಿನಾ ಡೈಲಾಗ್’ (ಸಂವಾದ)ನ ಬಗ್ಗೆ:

    • ರೈಸಿನಾ ಡೈಲಾಗ್ ಎಂಬುದು ಭೌಗೋಳಿಕ-ರಾಜಕೀಯ ಮತ್ತು ಭೌಗೋಳಿಕ-ಅರ್ಥಶಾಸ್ತ್ರದ ಕುರಿತಾದ ಭಾರತದ ಪ್ರಮುಖ ಜಾಗತಿಕ ಸಮ್ಮೇಳನವಾಗಿದೆ. ಜಾಗತಿಕ ಸಮುದಾಯವು ಎದುರಿಸುತ್ತಿರುವ ಅತ್ಯಂತ ಸವಾಲಿನ ಸಮಸ್ಯೆಗಳನ್ನು ಪರಿಹರಿಸಲು ಇದು ಬದ್ಧವಾಗಿದೆ.
    • ಜಾಗತಿಕ ನಾಯಕರು, ನೀತಿ ನಿರೂಪಕರು, ರಾಜತಾಂತ್ರಿಕರು, ವಿದ್ವಾಂಸರು ಮತ್ತು ಕಾರ್ಯತಂತ್ರದ ತಜ್ಞರನ್ನು ಒಗ್ಗೂಡಿಸಿ ಪ್ರಮುಖ ಅಂತರರಾಷ್ಟ್ರೀಯ ಸವಾಲುಗಳ ಬಗ್ಗೆ ಚರ್ಚಿಸಲು ಇದು ವೇದಿಕೆ ಕಲ್ಪಿಸುತ್ತದೆ.
    • ಈ ಸಮ್ಮೇಳನದ ಮೊದಲನೇ ಆವೃತ್ತಿಯನ್ನು 2016 ರಲ್ಲಿ ಆಯೋಜಿಸಲಾಗಿತ್ತು.
    • ನವದೆಹಲಿ ಮೂಲದ ‘ಅಬ್ಸರ್ವರ್ ರಿಸರ್ಚ್ ಫೌಂಡೇಶನ್’ (ORF) ಸಂಸ್ಥೆಯು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ಈ ಸಮ್ಮೇಳನವನ್ನು ಆಯೋಜಿಸುತ್ತದೆ.

    ಗುರುತ್ವಾಕರ್ಷಣ ಬಾಂಬ್ (Gravity Bomb)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ:

    • ಇರಾನ್ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಪ್ರಮುಖ ಯುದ್ಧತಂತ್ರದ ಬದಲಾವಣೆಯನ್ನು ಮಾಡಲಾಗಿದ್ದು, ಅಮೆರಿಕವು ‘ಗುರುತ್ವಾಕರ್ಷಣಾ ಬಾಂಬ್’ಗಳ ಬಳಕೆಗೆ ಮುಂದಾಗಲಿದೆ ಎಂದು ಅಮೆರಿಕದ ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಘೋಷಿಸಿದ್ದಾರೆ.

    ಗುರುತ್ವಾಕರ್ಷಣ ಬಾಂಬ್ ಎಂದರೇನು?

    • ಗುರುತ್ವಾಕರ್ಷಣ ಬಾಂಬ್ (ಅಥವಾ ಮುಕ್ತ-ಪತನ ಬಾಂಬ್) ಎನ್ನುವುದು ವಿಮಾನದಿಂದ ಬೀಳಿಸುವ, ಇಂಧನ ಅಥವಾ ಎಂಜಿನ್ ರಹಿತವಾದ ಯುದ್ಧ ಸಾಮಗ್ರಿಯಾಗಿದೆ.
    • ‘ಟೊಮಾಹಾಕ್’ ನಂತಹ ಕ್ರೂಸ್ ಕ್ಷಿಪಣಿಗಳಿಗೆ ಹೋಲಿಸಿದರೆ, ಈ ಗುರುತ್ವಾಕರ್ಷಣಾ ಬಾಂಬ್‌ಗಳು ಯಾವುದೇ ಎಂಜಿನ್ ಅಥವಾ ನೋದನ ವ್ಯವಸ್ಥೆಯನ್ನು ಹೊಂದಿರುವುದಿಲ್ಲ. ಬದಲಾಗಿ, ಇವುಗಳನ್ನು ಬೀಳಿಸುವ ವಿಮಾನದ ವೇಗ ಮತ್ತು ಎತ್ತರವನ್ನು ಆಧರಿಸಿ, ಕೇವಲ ಭೂಮಿಯ ಗುರುತ್ವಾಕರ್ಷಣಾ ಬಲದಿಂದಲೇ ಇವು ಗುರಿಯತ್ತ ಚಲಿಸುತ್ತವೆ.
    • ‘ಜಾಯಿಂಟ್ ಡೈರೆಕ್ಟ್ ಅಟ್ಯಾಕ್ ಮ್ಯುನಿಷನ್’ (JDAM) ಕಿಟ್‌ಗಳ ಅಳವಡಿಕೆ:- ಅನೇಕ ಗುರುತ್ವಾಕರ್ಷಣಾ ಬಾಂಬ್‌ಗಳಿಗೆ ಈ ಕಿಟ್‌ಗಳನ್ನು ಅಳವಡಿಸಲಾಗುತ್ತದೆ. ಇವು ಜಿಪಿಎಸ್ (GPS) ಮತ್ತು ನಿಯಂತ್ರಿಸಬಹುದಾದ ರೆಕ್ಕೆಗಳನ್ನು ಬಳಸಿಕೊಂಡು, ನಿಖರ-ಮಾರ್ಗದರ್ಶಿ ಯುದ್ಧಸಾಮಗ್ರಿಗಳಾಗಿ ಮಾರ್ಪಡುತ್ತವೆ.
    • ಪ್ರಮುಖ ಲಕ್ಷಣ:- ಈ ಬಾಂಬ್‌ಗಳು ತುಲನಾತ್ಮಕವಾಗಿ ಅಗ್ಗವಾಗಿವೆ. ಆದರೆ, ಗುರಿಯ ಅತ್ಯಂತ ಸಮೀಪದಲ್ಲಿ ವಿಮಾನವು ಹಾರಾಟ ನಡೆಸಬೇಕಾಗಿರುವುದರಿಂದ, ವಾಯುಪ್ರದೇಶದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದಾಗ ಮಾತ್ರ ಇವು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ.

    ಜೈವಿಕ ವೈವಿಧ್ಯತಾ ಸಮಾವೇಶ: ಭಾರತದ 7ನೇ ವರದಿ

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • 2030 ರ 23 ರಾಷ್ಟ್ರೀಯ ಜೈವಿಕ ವೈವಿಧ್ಯತಾ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪ್ರಗತಿಯನ್ನು ಮೌಲ್ಯಮಾಪನ ಮಾಡಿ, ಭಾರತವು ‘ಜೈವಿಕ ವೈವಿಧ್ಯತಾ ಸಮಾವೇಶ’ಕ್ಕೆ (CBD) ತನ್ನ 7 ನೇ ವರದಿಯನ್ನು ಸಲ್ಲಿಸಿದೆ.
    • ಈ ವರದಿಯು ‘ಕುನ್ಮಿಂಗ್-ಮಾಂಟ್ರಿಯಲ್ ಜಾಗತಿಕ ಜೈವಿಕ ವೈವಿಧ್ಯತಾ ಚೌಕಟ್ಟಿಗೆ’ (KMGBF) ಅನುಗುಣವಾಗಿ 23 ‘ರಾಷ್ಟ್ರೀಯ ಜೈವಿಕ ವೈವಿಧ್ಯತಾ ಗುರಿ’ಗಳ (NBTs) ಅಡಿಯಲ್ಲಿ ಭಾರತದ ಸಾಧನೆಯನ್ನು ಮೌಲ್ಯಮಾಪನ ಮಾಡುತ್ತದೆ.

    ಜೈವಿಕ ವೈವಿಧ್ಯತಾ ಸಮಾವೇಶ (CBD)ದ ಬಗ್ಗೆ:

    • ಉಗಮ:- 1992 ರಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ (ರಿಯೋ ಭೂ ಶೃಂಗಸಭೆ) ಈ ಸಮಾವೇಶವನ್ನು ಸಹಿಗಾಗಿ ಮುಕ್ತಗೊಳಿಸಲಾಯಿತು.
    • ಜಾರಿಗೆ:- ಡಿಸೆಂಬರ್ 29, 1993
    • ಮೊದಲ ಅಧಿವೇಶನ:- 1994 ರಲ್ಲಿ ಪಕ್ಷಗಳ ಸಮ್ಮೇಳನ (COP)ದ ಮೊದಲನೇ ಅಧಿವೇಶನವನ್ನು ಬಹಾಮಾಸ್‌ನಲ್ಲಿ ಆಯೋಜಿಸಲಾಗಿತ್ತು.
    • ಕಾರ್ಯಾಲಯ:- ಕೆನಡಾದ ಮಾಂಟ್ರಿಯಲ್‌ನಲ್ಲಿದೆ.
    • 196 ರಾಷ್ಟ್ರಗಳು CBD ಯನ್ನು ಅನುಮೋದಿಸಿವೆ:- ಇದು ಅತ್ಯಂತ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಅಂತರರಾಷ್ಟ್ರೀಯ ಒಪ್ಪಂದಗಳಲ್ಲಿ ಒಂದಾಗಿದೆ. 
    • ಅಮೆರಿಕವು ಈ ಸಮಾವೇಶವನ್ನು ಅನುಮೋದಿಸದ ವಿಶ್ವಸಂಸ್ಥೆಯ ಏಕೈಕ ಸದಸ್ಯ ರಾಷ್ಟ್ರ ಎಂಬುದು ಗಮನಾರ್ಹ.
    • 3 ಪ್ರಮುಖ ಉದ್ದೇಶಗಳು:- 
    • ಜೈವಿಕ ವೈವಿಧ್ಯತೆಯ ಸಂರಕ್ಷಣೆ. 
    • ಜೈವಿಕ ವೈವಿಧ್ಯತೆಯ ಘಟಕಗಳ ಸುಸ್ಥಿರ ಬಳಕೆ
    • ಅನುವಂಶಿಕ ಸಂಪನ್ಮೂಲಗಳ ಬಳಕೆಯಿಂದ ಉಂಟಾಗುವ ಪ್ರಯೋಜನಗಳ ನ್ಯಾಯಸಮ್ಮತ ಹಾಗೂ ಸಮಾನ ಹಂಚಿಕೆ ಮಾಡುವುದು.
      • ಆಡಳಿತ ಮಂಡಳಿ:- ಪಕ್ಷಗಳ ಸಮ್ಮೇಳನ (COP), ಇದು ಪ್ರತಿ 2 ವರ್ಷಗಳಿಗೊಮ್ಮೆ ಸಭೆ ಸೇರುತ್ತದೆ.
    • ಪೂರಕ ಒಪ್ಪಂದಗಳು:-
    1. ‘ಕಾರ್ಟೇಜಿನಾ ಶಿಷ್ಟಾಚಾರ’ (ಜೈವಿಕ ಸುರಕ್ಷತೆ ಕುರಿತ).
    2. ‘ನಗೋಯಾ ಶಿಷ್ಟಾಚಾರ’ (ಲಭ್ಯತೆ ಹಾಗೂ ಪ್ರಯೋಜನ-ಹಂಚಿಕೆ ಕುರಿತ).

    ಕುನ್ಮಿಂಗ್-ಮಾಂಟ್ರಿಯಲ್ ಜಾಗತಿಕ ಜೈವಿಕ ವೈವಿಧ್ಯತಾ ಚೌಕಟ್ಟು (KMGBF):

    • 2022 ರಲ್ಲಿ ಕೆನಡಾದ ಮಾಂಟ್ರಿಯಲ್‌ನಲ್ಲಿ ನಡೆದ CBD ಯ ಪಕ್ಷಗಳ ಸಮ್ಮೇಳನ-15 (COP15) ರಲ್ಲಿ ಈ ಚೌಕಟ್ಟು ಅಂತಿಮಗೊಂಡಿತು.
    • ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಾಗಿ ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸುವ ಉದ್ದೇಶದಿಂದ, 2030 ರ ವೇಳೆಗೆ ಸಾಧಿಸಬೇಕಾದ 23 ಗುರಿಗಳನ್ನು ಮತ್ತು 2050 ರ ವೇಳೆಗೆ ಸಾಧಿಸಬೇಕಾದ 4 ಜಾಗತಿಕ ಗುರಿಗಳನ್ನು ಇದು ಒಳಗೊಂಡಿದೆ.
    • ಈ ಒಪ್ಪಂದವು ಸದಸ್ಯ ರಾಷ್ಟ್ರಗಳ ಮೇಲೆ ಕಾನೂನುಬದ್ಧವಾಗಿ ಕಡ್ಡಾಯವಲ್ಲ.

    ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಕರ್ನಾಟಕ ಮತ್ತು ಆಂಧ್ರಪ್ರದೇಶ

    ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕ ಸರ್ಕಾರವು ತನ್ನ ಇತ್ತೀಚಿನ ಬಜೆಟ್‌ನಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸುವುದಾಗಿ ಘೋಷಿಸಿದೆ. 
    • ಇದೇ ಸಂದರ್ಭದಲ್ಲಿ, ಆಂಧ್ರಪ್ರದೇಶ ಸರ್ಕಾರವು 13 ವರ್ಷದೊಳಗಿನ ಮಕ್ಕಳಿಗೆ ಈ ಸೇವೆಗಳನ್ನು ನಿರ್ಬಂಧಿಸುವ ಕ್ರಮವನ್ನು ಜಾರಿಗೆ ತರಲು ಮುಂದಾಗಿದೆ.
    • ಪ್ರಮುಖ ಉದ್ದೇಶ:- ಅಪ್ರಾಪ್ತ ವಯಸ್ಕರಿಗೆ ಸಾಮಾಜಿಕ ಜಾಲತಾಣಗಳ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ಡಿಜಿಟಲ್ ಗೀಳನ್ನು ಹೋಗಲಾಡಿಸುವುದು ಮತ್ತು ಅವರ ಮಾನಸಿಕ ಆರೋಗ್ಯವನ್ನು ಕಾಪಾಡುವುದು.

    ರಾಜ್ಯವಾರು ಉದ್ದೇಶಿತ ನಿರ್ಬಂಧಗಳು:

    • ಕರ್ನಾಟಕ:- 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ.
    • ಆಂಧ್ರಪ್ರದೇಶ:- 13 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸುವ ಗುರಿಯನ್ನು ಹೊಂದಿದೆ.

    ಪ್ರಮುಖ ಉದ್ದೇಶಗಳು ಮತ್ತು ಹಿನ್ನೆಲೆ:

    • ಆರೋಗ್ಯ ಮತ್ತು ಸುರಕ್ಷತೆ:- ಮಕ್ಕಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಚಟ, ಸೈಬರ್ ಕಿರುಕುಳ (ಸೈಬರ್‌ಬುಲ್ಲಿಂಗ್) ಹಾಗೂ ಶೈಕ್ಷಣಿಕ ಸಾಧನೆಯಲ್ಲಿನ ಕುಸಿತವು ಸರ್ಕಾರಗಳನ್ನು ಈ ನಿರ್ಧಾರ ಕೈಗೊಳ್ಳುವಂತೆ ಮಾಡಿವೆ.
    • ಜಾಗತಿಕ ನಿದರ್ಶನಗಳು:- 2025 ರ ಅಂತ್ಯದ ವೇಳೆಗೆ 16 ವರ್ಷದೊಳಗಿನ ಮಕ್ಕಳಿಗಾಗಿ ಆಸ್ಟ್ರೇಲಿಯಾ ದೇಶವು ಜಾರಿಗೆ ತಂದ ವಿಶ್ವದ ಮೊದಲ ರಾಷ್ಟ್ರವ್ಯಾಪಿ ನಿಷೇಧದಂತಹ ಅಂತರರಾಷ್ಟ್ರೀಯ ಪ್ರವೃತ್ತಿಗಳನ್ನು ಈ ಕ್ರಮಗಳು ಅನುಸರಿಸುತ್ತಿವೆ.
    • ಬೆಂಬಲ ಕ್ರಮಗಳು:- ಕರ್ನಾಟಕ ಸರ್ಕಾರವು ಈ ಪ್ರಸ್ತಾವನೆಯ ಜೊತೆಗೆ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಅಭಿಯಾನವನ್ನು ಜೋಡಿಸಿದ್ದು, ಶೈಕ್ಷಣಿಕ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಸಮಾಲೋಚಕರನ್ನು ನಿಯೋಜಿಸಲು ಯೋಜಿಸಿದೆ.

    ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಅಭಿಯಾನ:

    • ಇದು 2026 ರ ಫೆಬ್ರವರಿಯಲ್ಲಿ ಕರ್ನಾಟಕ ಸರ್ಕಾರವು ಪ್ರಾರಂಭಿಸಿದ ರಾಜ್ಯವ್ಯಾಪಿ ಅಭಿಯಾನವಾಗಿದೆ. 
    • ಶಾಲಾ ಮಕ್ಕಳಲ್ಲಿ ಮೊಬೈಲ್ ಫೋನ್ ಗೀಳನ್ನು ಕಡಿಮೆ ಮಾಡುವುದು ಮತ್ತು ಓದುವ ಹವ್ಯಾಸವನ್ನು ಹೆಚ್ಚಿಸುವುದು ಇದರ ಆಶಯವಾಗಿದೆ.
    • ಪ್ರಾಥಮಿಕ ಉದ್ದೇಶ:- 16 ವರ್ಷದೊಳಗಿನ ಮಕ್ಕಳ ಅತಿಯಾದ ಪರದೆ ಸಮಯ (ಸ್ಕ್ರೀನ್ ಟೈಮ್) ಕಡಿಮೆ ಮಾಡುವುದು ಮತ್ತು ಭೌತಿಕ ಪುಸ್ತಕಗಳು ಹಾಗೂ ಗ್ರಂಥಾಲಯಗಳ ಬಗ್ಗೆ ಒಲವು ಬೆಳೆಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸುವುದು.
    • ಗುರಿ:- ಕರ್ನಾಟಕದಾದ್ಯಂತ ಇರುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಸುಮಾರು 50 ಲಕ್ಷ ವಿದ್ಯಾರ್ಥಿಗಳನ್ನು ತಲುಪುವುದು.
    • ಅನುಷ್ಠಾನ:- ‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ’ (DSEL) ಹಾಗೂ ‘ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ’ (DSERT) ಈ ಅಭಿಯಾನದ ಮೇಲ್ವಿಚಾರಣೆಯನ್ನು ವಹಿಸಿವೆ.

    ‘ಮೂನ್‌ಶಾಟ್’ ಮೆಲುಕು ಯೋಜನೆ :ಐಐಎಸ್‌ಸಿ (IISc)

    ವಿಜ್ಞಾನ ಮತ್ತು ತಂತ್ರಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಭಾರತೀಯ ವಿಜ್ಞಾನ ಸಂಸ್ಥೆಯು (IISc) ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅಥವಾ ಮರುಸ್ಥಾಪಿಸಲು, ನ್ಯೂರೋಮಾರ್ಫಿಕ್ ಹಾರ್ಡ್‌ವೇರ್ ಮತ್ತು ಕೃತಕ ಬುದ್ಧಿಮತ್ತೆ (AI) ಅಲ್ಗಾರಿದಮ್‌ಗಳನ್ನು ಸಂಯೋಜಿಸಿ ಮೆದುಳಿನ ಸಹ-ಪ್ರಕ್ರಿಯಕ (ಕೋ-ಪ್ರೊಸೆಸರ್)ಗಳನ್ನು ಅಭಿವೃದ್ಧಿಪಡಿಸುವ ‘ಮೂನ್‌ಶಾಟ್’ ಮೆಲುಕು ಯೋಜನೆಯನ್ನು ಪ್ರಾರಂಭಿಸಿದೆ.

    ಮೆದುಳಿನ ಸಹ-ಪ್ರಕ್ರಿಯಕ (ಕೋ-ಪ್ರೊಸೆಸರ್)ಗಳ ಬಗ್ಗೆ:

    • ಮೆದುಳಿನ ಕೋ-ಪ್ರೊಸೆಸರ್‌ಗಳು ಮಾನವನ ಮೆದುಳಿನೊಂದಿಗೆ ನೇರವಾಗಿ ಸಂವಹನ ನಡೆಸಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಸಾಧನಗಳಾಗಿವೆ.
    • ಈ ಸಾಧನಗಳು ನರಕೋಶಗಳ ಸಂಕೇತಗಳನ್ನು ಬಿಡಿಸಿ ಅರ್ಥೈಸುತ್ತವೆ, ಕೃತಕ ಬುದ್ಧಿಮತ್ತೆ (AI) ಅಲ್ಗಾರಿದಮ್‌ಗಳನ್ನು ಬಳಸಿಕೊಂಡು ಅವುಗಳನ್ನು ಸಂಸ್ಕರಿಸುತ್ತವೆ ಮತ್ತು ನರಗಳ ಉದ್ದೀಪನ ಅಥವಾ ನ್ಯೂರೋಫೀಡ್‌ಬ್ಯಾಕ್ ಮೂಲಕ ಮೆದುಳಿಗೆ ಮರಳಿ ಸಂಕೇತಗಳನ್ನು ರವಾನಿಸುತ್ತವೆ.

    ವಸ್ತುಗಳನ್ನು ತಲುಪುವ ಮತ್ತು ಗ್ರಹಿಸುವಂತಹ ಸಂವೇದನಾ ಹಾಗೂ ಚಲನಾ ಸಾಮರ್ಥ್ಯಗಳನ್ನು ಕಳೆದುಕೊಂಡಿರುವ ಪಾರ್ಶ್ವವಾಯು ಪೀಡಿತರಿಗೆ ಅರಿವಿನ ಮತ್ತು ಚಲನಾ ಸಾಮರ್ಥ್ಯದ ಮರುಸ್ಥಾಪನೆಗೆ ಈ ಸಾಧನಗಳು ಅತ್ಯಂತ ಪ್ರಮುಖವಾಗಿ ನೆರವಾಗುತ್ತವೆ.