ಇತ್ತೀಚೆಗೆ, ಭಾರತ ಸರ್ಕಾರವು ವಿದ್ಯುನ್ಮಾನ/ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಧಿಯನ್ನು (EDF) ಪ್ರಾರಂಭಿಸಿದೆ.
ವಿದ್ಯುನ್ಮಾನ/ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಧಿಯ ಬಗ್ಗೆ:
ಪ್ರಾರಂಭ: ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಗಳ ಪ್ರಮುಖ ಅಂಗವಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ 2016 ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
ಉದ್ದೇಶ : ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ವಲಯಗಳಲ್ಲಿ ನಾವೀನ್ಯತೆ, ಸಂಶೋಧನೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವುದು ಇದರ ಪ್ರಮುಖ ಗುರಿಯಾಗಿದೆ.
ಕಾರ್ಯತಂತ್ರದ ಮಹತ್ವ:
ಆಮದು ಅವಲಂಬನೆ ತಗ್ಗಿಸುವಿಕೆ: ಎಲೆಕ್ಟ್ರಾನಿಕ್ಸ್ ಸರಕುಗಳಿಗಾಗಿ ಭಾರತವು ಇತರ ದೇಶಗಳ ಆಮದಿನ ಮೇಲೆ ಹೊಂದಿರುವ ಅವಲಂಬನೆಯನ್ನು ಕಡಿಮೆ ಮಾಡುವುದು.
ದೇಶೀಯ ನಾವೀನ್ಯತೆಗೆ ಉತ್ತೇಜನ: ಸೆಮಿಕಂಡಕ್ಟರ್‌ಗಳು (ಅರೆವಾಹಕಗಳು), ಇಂಟರ್ನೆಟ್ ಆಫ್ ಥಿಂಗ್ಸ್, ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್‌ಗಳಂತಹ ನಿರ್ಣಾಯಕ ತಂತ್ರಜ್ಞಾನಗಳಲ್ಲಿ ದೇಶೀಯ ನಾವೀನ್ಯತೆಯನ್ನು ಪ್ರೋತ್ಸಾಹಿಸುವುದು.
ಜಾಗತಿಕ ತಾಣವಾಗಿ ಭಾರತ: ಎಲೆಕ್ಟ್ರಾನಿಕ್ಸ್ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸುವುದು.
ಸಾಲುಮರದ ತಿಮ್ಮಕ್ಕ
ಸಾಮಾನ್ಯ ಅಧ್ಯಯನ – 4/ ನೀತಿಶಾಸ್ತ್ರ ; ಪರಿಸರ ನೀತಿಶಾಸ್ತ್ರ
ಇದೀಗ ಸುದ್ದಿಯಲ್ಲಿ:
ನಾಡಿನ ಹಿರಿಯ ಚೇತನ, ‘ಪದ್ಮಶ್ರೀ’ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ಅಗಲುವಿಕೆಗೆ ಇಡೀ ಭಾರತವೇ ಕಂಬನಿ ಮಿಡಿದಿದೆ.
ಇವರು ಕೇವಲ ಒಬ್ಬ ಪರಿಸರವಾದಿ ಮಾತ್ರವಲ್ಲ, ಬದಲಾಗಿ ಜಾಗತಿಕ ಮಟ್ಟದಲ್ಲಿ ತಳಮಟ್ಟದ ಅರಣ್ಯೀಕರಣದ ಅಪ್ರತಿಮ ಸಂಕೇತವಾಗಿದ್ದರು.
ಸಾಲುಮರದ ತಿಮ್ಮಕ್ಕ ಅವರ ಕುರಿತು:
ಹಿನ್ನೆಲೆ: ತುಮಕೂರು ಜಿಲ್ಲೆಯಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಅವರು, ವಿವಾಹದ ನಂತರ ಹುಲಿಕಲ್ ಗ್ರಾಮದಲ್ಲಿ ನೆಲೆಸಿದರು.
ಕಾಯಕದ ಆರಂಭ: 1950 ರ ದಶಕದ ಆರಂಭದಲ್ಲಿ, ತಿಮ್ಮಕ್ಕ ಮತ್ತು ಅವರ ಪತಿ ಬಿಕ್ಕಲ ಚಿಕ್ಕಯ್ಯ ಅವರು ನಿಸ್ವಾರ್ಥ ಪರಿಸರ ಸೇವೆಯನ್ನು ಆರಂಭಿಸಿದರು.
ದಂಪತಿಗಳು ಪ್ರತಿದಿನ ಮೈಲುಗಟ್ಟಲೆ ದೂರದಿಂದ ನೀರನ್ನು ಹೊತ್ತು ತಂದು ಸಸಿಗಳಿಗೆ ಎರೆಯುತ್ತಿದ್ದರು. ಮೇಯುವ ಜಾನುವಾರುಗಳಿಂದ ಎಳೆಯ ಸಸಿಗಳನ್ನು ರಕ್ಷಿಸಲು ಮುಳ್ಳಿನ ಕೊಂಬೆಗಳನ್ನು ಬಳಸಿ ಬೇಲಿ ಹಾಕುತ್ತಿದ್ದರು.
ವೈಜ್ಞಾನಿಕ ಅರಿವು: ಮರಗಳು ಬದುಕಿ ಉಳಿಯುವ ಸಾಧ್ಯತೆಯನ್ನು ಹೆಚ್ಚಿಸಲು, ಅವರು ಪ್ರಮುಖವಾಗಿ ‘ಮುಂಗಾರು’ ಋತುಗಳಲ್ಲಿ ಸಸಿಗಳನ್ನು ನೆಡುವ ಪದ್ಧತಿಯನ್ನು ರೂಢಿಸಿಕೊಂಡಿದ್ದರು.
ಸ್ಫೂರ್ತಿಯ ಸೆಲೆ: ಅವರ ಪರಿಸರ ಕಾಳಜಿಯ ಪರಂಪರೆಯು ಕರ್ನಾಟಕದ ಅರಣ್ಯೀಕರಣ ನೀತಿಗಳ ಮೇಲೆ ಪ್ರಭಾವ ಬೀರಿದೆ. ಅಷ್ಟೇ ಅಲ್ಲದೆ, ಭಾರತದಾದ್ಯಂತ ಹಲವಾರು ಗಿಡ ನೆಡುವ ಚಳವಳಿಗಳಿಗೆ ಅವರು ಪ್ರೇರಣೆಯಾಗಿದ್ದಾರೆ.
2019 ರ ಐತಿಹಾಸಿಕ ರಕ್ಷಣೆ: ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ನಾಶವನ್ನು ಅವರು ಬಲವಾಗಿ ವಿರೋಧಿಸಿದ್ದರು. 2019 ರಲ್ಲಿ ರಸ್ತೆ ಅಗಲೀಕರಣ ಯೋಜನೆಯ ಸಂದರ್ಭದಲ್ಲಿ, ತಾವು ಮಕ್ಕಳಂತೆ ಸಲುಹಿದ್ದ 385 ಮರಗಳು ಕಡಿಯಲ್ಪಡುವ ಭೀತಿ ಎದುರಾಯಿತು. ಆಗ ಅವರು ನೇರವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ, ಆ ಮರಗಳನ್ನು ಉಳಿಸುವಲ್ಲಿ ಯಶಸ್ವಿಯಾದರು.
ಪರಿಸರಕ್ಕಾದ ಲಾಭ ಮತ್ತು ಪರಿಣಾಮ:
ಅವರ ದಶಕಗಳ ದಣಿವರಿಯದ ಪ್ರಯತ್ನಗಳು ಇಂದು ಬೃಹತ್ ಹೆಮ್ಮರಗಳಾಗಿ ಬೆಳೆದು ನಿಂತಿವೆ.
ಹಸಿರು ಪಥ : ಅವರ ಶ್ರಮವು ಒಂದು ವಿಶಾಲವಾದ ಹಸಿರು ಪಥದ ನಿರ್ಮಾಣಕ್ಕೆ ಕಾರಣವಾಗಿದೆ.
ಜೀವವೈವಿಧ್ಯದ ರಕ್ಷಣೆ: ಈ ಮರಗಳು ಪ್ರಯಾಣಿಕರಿಗೆ ತಂಪಾದ ನೆರಳು ನೀಡುತ್ತಿವೆ ಮತ್ತು ಅಸoಖ್ಯಾತ ಪಕ್ಷಿಸಂಕುಲಕ್ಕೆ ಆಶ್ರಯ ತಾಣವಾಗಿವೆ.
ವಾಯುಗುಣ ನಿಯಂತ್ರಣ: ಈ ಮರಗಳು ಆ ಪ್ರದೇಶದ ‘ಸೂಕ್ಷ್ಮ ವಾಯುಗುಣವನ್ನು’ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.
ಮಾದರಿ ಕಾರ್ಯ: ಇದು ಸಮುದಾಯ ನೇತೃತ್ವದ ಅರಣ್ಯೀಕರಣಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.
ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗಳು (NGRA), 2025
ಸಾಮಾನ್ಯ ಅಧ್ಯಯನ – 3/ ಹೈನುಗಾರಿಕೆ ವಲಯ
ಇದೀಗ ಸುದ್ದಿಯಲ್ಲಿದೆ:
ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು 2025 ನೇ ಸಾಲಿನ ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗಳ (NGRA) ವಿಜೇತರನ್ನು ಘೋಷಿಸಿದೆ.
ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗಳ ಬಗ್ಗೆ:
ಈ ಪ್ರಶಸ್ತಿಗಳು ಜಾನುವಾರು ಮತ್ತು ಹೈನುಗಾರಿಕೆ ವಲಯದಲ್ಲಿ ನೀಡಲಾಗುವ ಅತ್ಯುನ್ನತ ರಾಷ್ಟ್ರೀಯ ಗೌರವಗಳಲ್ಲಿ ಒಂದಾಗಿವೆ.
ರಾಷ್ಟ್ರೀಯ ಕ್ಷೀರ ದಿನಾಚರಣೆಯ ಅಂಗವಾಗಿ ಪ್ರತೀ ವರ್ಷ ನವೆಂಬರ್ 26 ರಂದು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ರಾಷ್ಟ್ರೀಯ ಗೋಕುಲ್ ಮಿಷನ್‌ನ ಭಾಗವಾಗಿ 2014 ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು.
ದೇಶೀಯ ಜಾನುವಾರು ತಳಿಗಳ ವೈಜ್ಞಾನಿಕ ಸಂರಕ್ಷಣೆ ಮತ್ತು ಅಭಿವೃದ್ಧಿಯ ಮೇಲೆ ಇದು ಕೇಂದ್ರೀಕರಿಸುತ್ತದೆ.
ಹಾಲು ಉತ್ಪಾದಿಸುವ ರೈತರು, ಹೈನುಗಾರಿಕೆ ಸಹಕಾರ ಸಂಘಗಳು/ ಕಂಪನಿಗಳು/ರೈತ ಉತ್ಪಾದಕರ ಸಂಘಗಳು ಮತ್ತು ಕೃತಕ ಗರ್ಭಧಾರಣೆ ತಂತ್ರಜ್ಞರನ್ನು ಪ್ರೋತ್ಸಾಹಿಸಲು ಈ ಪ್ರಶಸ್ತಿಗಳನ್ನು ವಾರ್ಷಿಕವಾಗಿ ನೀಡಲಾಗುತ್ತದೆ.
ಪ್ರಶಸ್ತಿ ಪುರಸ್ಕೃತರಿಗೆ ಅರ್ಹತಾ ಪ್ರಮಾಣಪತ್ರ ಮತ್ತು ಸ್ಮರಣಿಕೆಯನ್ನು ನೀಡಲಾಗುವುದು. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ಅನುಕ್ರಮವಾಗಿ ₹5,00,000, ₹3,00,000 ಮತ್ತು ₹2,00,000 ನಗದು ಬಹುಮಾನವನ್ನು ನೀಡಲಾಗುತ್ತದೆ.
2025 ನೇ ಸಾಲಿನ ‘ನಾಡೋಜ ಬರಗೂರು ಪ್ರಶಸ್ತಿ’ಗೆ ಸಾಮಾಜಿಕ ಹೋರಾಟಗಾರ್ತಿ, ಲೇಖಕಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ (ಸಾಹಿತ್ಯ ಕ್ಷೇತ್ರ) ಮತ್ತು ಶಿವರುದ್ರಯ್ಯ (ಚಲನಚಿತ್ರ ಕ್ಷೇತ್ರ) ಅವರನ್ನು ಆಯ್ಕೆ ಮಾಡಲಾಗಿದೆ.
ಬರಗೂರು ಪ್ರಶಸ್ತಿಯ ಬಗ್ಗೆ:
ಪ್ರಶಸ್ತಿ ನೀಡುವ ಸಂಸ್ಥೆ: ಈ ಪ್ರಶಸ್ತಿಯನ್ನು ‘ನಾಡೋಜ ಡಾ. ಬರಗೂರು ಪ್ರತಿಷ್ಠಾನ’ ನೀಡುತ್ತದೆ.
ಉದ್ದೇಶ:- ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಾಗೂ ಕೊಡುಗೆ ನೀಡಿದ ಸಾಧಕರಿಗೆವಾರ್ಷಿಕವಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸುವುದು ಪ್ರತಿಷ್ಠಾನದ ಮೂಲ ಉದ್ದೇಶವಾಗಿದೆ.
ಪ್ರಶಸ್ತಿಯ ಸ್ವರೂಪ:- ಈ ಪ್ರಶಸ್ತಿಯು ಒಂದು ಫಲಕ ಮತ್ತು ₹25,000 ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
2025 ನೇ ಸಾಲಿನ ಪುರಸ್ಕೃತರು
ಬಿ.ಟಿ. ಲಲಿತಾ ನಾಯಕ್: ಸಾಹಿತ್ಯ ಕ್ಷೇತ್ರ.
ಶಿವರುದ್ರಯ್ಯ: ಚಲನಚಿತ್ರ ಕ್ಷೇತ್ರ.
ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ, 2025-2030
ಇದೀಗ ಸುದ್ದಿಯಲ್ಲಿದೆ:
‘ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025-2030’ ರ ಅಡಿಯಲ್ಲಿ ವಿವಿಧ ಪ್ರೋತ್ಸಾಹಕಗಳಿಗಾಗಿ ರಾಜ್ಯ ಸರ್ಕಾರವು ₹967 ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ.
ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ, 2025-2030 ರ ಕುರಿತು:
ಕಾರ್ಯತಂತ್ರದ ಬದಲಾವಣೆ: ರಾಜ್ಯದ ಗಮನವನ್ನು ಸಾಂಪ್ರದಾಯಿಕ ಮಾಹಿತಿ ತಂತ್ರಜ್ಞಾನ (IT) ಸೇವೆಗಳಿಂದ, ಡೀಪ್ ಟೆಕ್ ನಾವೀನ್ಯತೆಗೆ ಪರಿವರ್ತಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ. ಇದೊಂದು ಮಹತ್ವದ ಕಾರ್ಯತಂತ್ರದ ನೀಲನಕ್ಷೆಯಾಗಿದೆ.
ಜಾಗತಿಕ ನಾಯಕತ್ವ:ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಸೈಬರ್ ಭದ್ರತೆ ಯಂತಹ ಆಧುನಿಕ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಜಾಗತಿಕ ನಾಯಕನನ್ನಾಗಿ ರೂಪಿಸುವುದು ಇದರ ಗುರಿಯಾಗಿದೆ.
ಸಮತೋಲಿತ ಬೆಳವಣಿಗೆ: ನವೆಂಬರ್ 2025 ರಲ್ಲಿ ರಾಜ್ಯ ಸಚಿವ ಸಂಪುಟದಿಂದ ಅನುಮೋದನೆಗೊಂಡ ಈ ನೀತಿಯು, ‘ಬೆಂಗಳೂರಿನ ಆಚೆಗೆ’ ಈ ಉಪಕ್ರಮದ ಮೂಲಕ ರಾಜ್ಯದಾದ್ಯಂತ ಸಮಾನ ಬೆಳವಣಿಗೆಗೆ ಒತ್ತು ನೀಡುತ್ತದೆ. ಐದು ವರ್ಷಗಳ ಅವಧಿಗೆ ಒಟ್ಟು ₹967.12 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ.
ನೀತಿಯ ಪ್ರಮುಖ ದೃಷ್ಟಿಕೋನ ಮತ್ತು ಗುರಿಗಳು:
ಈ ನೀತಿಯನ್ನು “FRAME” (ಮುಂಬರುವ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಪ್ರಾದೇಶಿಕ ಅಭಿವೃದ್ಧಿ, ಹೊಂದಾಣಿಕೆ, ಮಾರುಕಟ್ಟೆ ಸೃಷ್ಟಿ, ಉದ್ಯಮ ಸೌಲಭ್ಯ) ಚೌಕಟ್ಟಿನ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ.
ಅಮೇರಿಕ ಸಂಯುಕ್ತ ಸಂಸ್ಥಾನವು ಲ್ಯಾಟಿನ್ ಅಮೇರಿಕದಲ್ಲಿ ‘ಆಪರೇಷನ್ ಸದರ್ನ್ ಸ್ಪಿಯರ್’ ಎಂಬ ಮಹತ್ವದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. “ನಾರ್ಕೋ-ಭಯೋತ್ಪಾದಕರನ್ನು” (ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕರ ಜಾಲ) ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಈ ಕಾರ್ಯಾಚರಣೆಯ ಮೂಲ ಉದ್ದೇಶವಾಗಿದೆ.
ಆಪರೇಷನ್ ಸದರ್ನ್ ಸ್ಪಿಯರ್ಕಾರ್ಯಾಚರಣೆಯ ಪ್ರಮುಖಾಂಶಗಳು:
ಸ್ವರೂಪ: ಇದೊಂದು ಪ್ರಮುಖ ಸೇನಾ ಮತ್ತು ಕಣ್ಗಾವಲು ಕಾರ್ಯಾಚರಣೆಯಾಗಿದ್ದು ನಾರ್ಕೋ-ಭಯೋತ್ಪಾದಕ ಜಾಲಗಳನ್ನು ಗುರಿಯಾಗಿಸಿಕೊಂಡಿದೆ.
ನಿರ್ವಹಣೆ: ಈ ಕಾರ್ಯಾಚರಣೆಯನ್ನು ಅಮೆರಿಕದ ‘ಸೌತ್ ಕಾಮ್’ (SOUTHCOM) ಮುನ್ನಡೆಸುತ್ತಿದೆ.
‘ಸೌತ್ ಕಾಮ್’ ನ ಬಗ್ಗೆ
ಪೂರ್ಣ ರೂಪ: ‘ಯು.ಎಸ್. ಸದರ್ನ್ ಕಮಾಂಡ್’
ಕಾರ್ಯವ್ಯಾಪ್ತಿ: ಇದರ ಕಾರ್ಯವ್ಯಾಪ್ತಿಯು ದಕ್ಷಿಣ ಅಮೆರಿಕ, ಮಧ್ಯ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶದಾದ್ಯಂತ ಇರುವ 31 ದೇಶಗಳನ್ನು ಒಳಗೊಂಡಿದೆ.
ಕಾರ್ಯಾಚರಣೆಯ ಉದ್ದೇಶಗಳು
ಅಮೆರಿಕ ಸರ್ಕಾರದ ಪ್ರಕಾರ, ಈ ಕಾರ್ಯಾಚರಣೆಯು ಮೂರು ಪ್ರಮುಖ ಗುರಿಗಳನ್ನು ಹೊಂದಿದೆ:
ತಾಯ್ನಾಡಿನ ರಕ್ಷಣೆ: ಅಮೆರಿಕದ ತಾಯ್ನಾಡನ್ನು ಬಾಹ್ಯ ಬೆದರಿಕೆಗಳಿಂದ ರಕ್ಷಿಸುವುದು.
ಭಯೋತ್ಪಾದನೆ ನಿಗ್ರಹ: ಪಶ್ಚಿಮ ಗೋಳಾರ್ಧದಿಂದ ನಾರ್ಕೋ-ಭಯೋತ್ಪಾದಕ ಬೆದರಿಕೆಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವುದು.
ಮಾದಕ ದ್ರವ್ಯ ತಡೆಗಟ್ಟುವಿಕೆ: ಅಮೆರಿಕದ ಜನಸಂಖ್ಯೆಗೆ ಗಂಭೀರ ಹಾನಿಯನ್ನುಂಟು ಮಾಡುತ್ತಿರುವ ಅಕ್ರಮ ಮಾದಕ ದ್ರವ್ಯಗಳ ಹರಿವನ್ನು ತಡೆಗಟ್ಟುವುದು.
ಕೊಲಂಬೊ ಭದ್ರತಾ ಸಮಾವೇಶ (CSC)
ಸಾಮಾನ್ಯ ಅಧ್ಯಯನ – 2/ ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ಕೊಲಂಬೊ ಭದ್ರತಾ ಸಮಾವೇಶವು ಅಧಿಕೃತವಾಗಿ ಬಾಂಗ್ಲಾದೇಶವನ್ನು ತನ್ನ ಐದನೇ ಸದಸ್ಯ ರಾಷ್ಟ್ರವನ್ನಾಗಿ ಸೇರ್ಪಡೆಗೊಳಿಸಿಕೊಂಡಿದೆ.
ಕೊಲಂಬೊ ಭದ್ರತಾ ಸಮಾವೇಶದ ಬಗ್ಗೆ:
ಸ್ಥಾಪನೆ – 2020.
ಉದ್ದೇಶ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ ಸಹಕಾರವನ್ನು ವಿಸ್ತರಿಸುವುದು ಮತ್ತು ಪ್ರಾದೇಶಿಕ ಭದ್ರತೆಯನ್ನು ಬಲಪಡಿಸುವುದು.
ಸದಸ್ಯ ರಾಷ್ಟ್ರಗಳು: ಭಾರತ, ಶ್ರೀಲಂಕಾ, ಮಾಲ್ಡೀವ್ಸ್, ಮಾರಿಷಸ್ ಮತ್ತು ಬಾಂಗ್ಲಾದೇಶ.
ಸೀಶೆಲ್ಸ್ ಒಂದು ವೀಕ್ಷಕ ರಾಷ್ಟ್ರವಾಗಿದೆ.
ಸಹಕಾರದ ಆಧಾರಸ್ತಂಭಗಳು : ಕಡಲ ಭದ್ರತೆ, ಭಯೋತ್ಪಾದನಾ ನಿಗ್ರಹ, ಗಡಿಯಾಚೆಗಿನ ಸಂಘಟಿತ ಅಪರಾಧಗಳ ತಡೆಗಟ್ಟುವಿಕೆ, ಸೈಬರ್ ಭದ್ರತೆ ಹಾಗೂ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ.
ಸುರತ್ಕಲ್‌ನ NITK ತಂಡವು, ‘ಆಗುಂಬೆಯಲ್ಲಿ ಹೆಲ್ತ್ (HEALTH) ಉತ್ತೇಜನ’ ಯೋಜನೆಯ ಅಡಿಯಲ್ಲಿ ನವೆಂಬರ್ 8 ರಂದು ಆಗುಂಬೆ ಭಾಗದಲ್ಲಿ 100 ಇಂಟರ್ನೆಟ್ ಸಂಪರ್ಕಗಳನ್ನು ಅಳವಡಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಹೆಲ್ತ್ (HEALTH) ಉಪಕ್ರಮದ ಉತ್ತೇಜನ ಕುರಿತು:
ಇದು ಎನ್‌ಐಟಿಕೆ ಸುರತ್ಕಲ್‌ನ ಡಾ. ಮೋಹಿತ್ ಪಿ. ತಹಿಲಿಯಾನಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ.
HEALTH ಎಂದರೆ:- ಆರೋಗ್ಯ ರಕ್ಷಣೆ (H), ಶಿಕ್ಷಣ (E), ಕೃಷಿ (A), ಜೀವನೋಪಾಯ (L), ತಂತ್ರಜ್ಞಾನ (T) ಮತ್ತು ಪರಂಪರೆ (H).
ಉದ್ದೇಶ:- ಪಶ್ಚಿಮ ಘಟ್ಟಗಳಂತಹ ದೂರದ ಮತ್ತು ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಸ್ಥಳೀಯ ಸಂಸ್ಥೆಗಳು, ಉದ್ದಿಮೆಗಳು ಮತ್ತು ಮನೆಗಳಿಗೆ ಡಿಜಿಟಲ್ ಪ್ರವೇಶವನ್ನು ಕಲ್ಪಿಸುವುದು ಇದರ ಮೂಲ ಉದ್ದೇಶವಾಗಿದೆ. ಆಗುಂಬೆಯ 100 ತಾಣಗಳಿಗೆ ವಿಶ್ವಾಸಾರ್ಹ ಅಂತರ್ಜಾಲ ಸಂಪರ್ಕವನ್ನು ಒದಗಿಸಿರುವುದು ಯೋಜನೆಯ ಇತ್ತೀಚಿನ ಮೈಲಿಗಲ್ಲಾಗಿದೆ..
HEALTH ಉಪಕ್ರಮದ ಆಧಾರಸ್ತಂಭಗಳು
ಆರೋಗ್ಯ ರಕ್ಷಣೆ (H): ಗ್ರಾಮೀಣ ಜನರಿಗೆ ಆನ್‌ಲೈನ್ ಮೂಲಕ ಆರೋಗ್ಯ ಮಾಹಿತಿ ಮತ್ತು ವೈದ್ಯಕೀಯ ಸೇವೆಗಳ ಲಭ್ಯತೆಯನ್ನು ಸುಗಮಗೊಳಿಸುವುದು.
ಶಿಕ್ಷಣ (E): ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆನ್‌ಲೈನ್ ಸಂಪನ್ಮೂಲಗಳು ಹಾಗೂ ಡಿಜಿಟಲ್ ಕಲಿಕಾ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುವುದು.
ಕೃಷಿ (A): ಕೃಷಿ ಸಮುದಾಯಕ್ಕೆ ಅಗತ್ಯ ಮಾಹಿತಿ ಮತ್ತು ಉತ್ತಮ ಸಂವಹನ ವ್ಯವಸ್ಥೆಯನ್ನು ಒದಗಿಸುವುದು.
ಜೀವನೋಪಾಯ (L): ಆನ್‌ಲೈನ್ ಪ್ರಚಾರ, ಕಾಯ್ದಿರಿಸುವಿಕೆ ವ್ಯವಸ್ಥೆಗಳು ಮತ್ತು ತಂಗುಮನೆ (ಹೋಮ್‌ಸ್ಟೇ) ಗಳಂತಹ ಸ್ಥಳೀಯ ಉದ್ಯಮಗಳಿಗೆ ತಾಂತ್ರಿಕ ಬೆಂಬಲ ನೀಡುವ ಮೂಲಕ ಸ್ಥಳೀಯ ವಾಣಿಜ್ಯ ವಹಿವಾಟನ್ನು ಸುಧಾರಿಸುವುದು.
ತಂತ್ರಜ್ಞಾನ (T): ವಿದ್ಯುತ್ ವ್ಯತ್ಯಯ ಮತ್ತು ಕಠಿಣ ಭೌಗೋಳಿಕ ಸವಾಲುಗಳಿರುವ ಪ್ರದೇಶಕ್ಕೂ ವಿಶ್ವಾಸಾರ್ಹ ಅಂತರ್ಜಾಲ ಸೇವೆಯನ್ನು ತಲುಪಿಸುವುದು.
ಪರಂಪರೆ (H): ಆಗುಂಬೆಯ ಪ್ರಮುಖ ಜೀವವೈವಿಧ್ಯ ಪ್ರಭೇದವಾದ ಕಾಳಿಂಗ ಸರ್ಪಗಳ ಸಂರಕ್ಷಣೆ ಮತ್ತು ಸಂಶೋಧನಾ ಪ್ರಯತ್ನಗಳಿಗೆ ಬೆಂಬಲ ನೀಡುವುದು.
“ಫ್ಲೈಬಸ್” ಸೇವೆ
ಇದೀಗ ಸುದ್ದಿಯಲ್ಲಿದೆ:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC), ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮತ್ತು ದಾವಣಗೆರೆ ನಗರದ ನಡುವೆ ನೇರವಾದ ನೂತನ ‘ಫ್ಲೈಬಸ್’ (ವೋಲ್ವೋ ಮಲ್ಟಿ-ಆಕ್ಸಲ್) ಸೇವೆಯನ್ನು ಪ್ರಾರಂಭಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಗ್ಗೆ:
ಮಾಲೀಕತ್ವ:- ಈ ನಿಗಮವು ಸಂಪೂರ್ಣವಾಗಿ ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ.
ಸಾರಿಗೆ ಸೇವೆಗಳು:- ಕೆಎಸ್‌ಆರ್‌ಟಿಸಿಯು ಸಾಮಾನ್ಯ ದರ್ಜೆಯ “ಕರ್ನಾಟಕ ಸಾರಿಗೆ” ಮತ್ತು “ಗ್ರಾಮಾಂತರ ಸಾರಿಗೆ” (ಹವಾನಿಯಂತ್ರಣ ರಹಿತ) ಬಸ್‌ಗಳಿಂದ ಹಿಡಿದು, ಐಷಾರಾಮಿ ದರ್ಜೆಯ “ಐರಾವತ ಕ್ಲಬ್ ಕ್ಲಾಸ್,” “ಅಂಬಾರಿ ಡ್ರೀಮ್ ಕ್ಲಾಸ್” ಮತ್ತು ಪರಿಸರ ಸ್ನೇಹಿ ವಿದ್ಯುತ್ ಚಾಲಿತ “ಇವಿ- ಪವರ್ ಪ್ಲಸ್+” ಬಸ್‌ಗಳವರೆಗೆ ವೈವಿಧ್ಯಮಯ ಸಾರಿಗೆ ಸೇವೆಗಳನ್ನು ಒದಗಿಸುತ್ತಿದೆ.
ಕಾರ್ಯವ್ಯಾಪ್ತಿ:- ಇದು ದಕ್ಷಿಣ ಕರ್ನಾಟಕದ 17 ಜಿಲ್ಲೆಗಳಿಗೆ ಸಾರಿಗೆ ಸೇವೆ ಒದಗಿಸುವುದಲ್ಲದೆ, ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೂ ಸಂಪರ್ಕ ಕಲ್ಪಿಸುತ್ತದೆ.
ಆಡಳಿತಾತ್ಮಕ ವಿಭಜನೆ : ಆಡಳಿತಾತ್ಮಕ ದಕ್ಷತೆ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ, ಕೆಎಸ್‌ಆರ್‌ಟಿಸಿಯನ್ನು ಕಾಲಕ್ರಮೇಣ ವಿಭಜಿಸಿ ಸ್ವತಂತ್ರ ಪ್ರಾದೇಶಿಕ ಸಾರಿಗೆ ನಿಗಮಗಳನ್ನು ರಚಿಸಲಾಗಿದೆ. ಅವುಗಳೆಂದರೆ:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC): ಬೆಂಗಳೂರು ಮಹಾನಗರ ಪ್ರದೇಶಕ್ಕಾಗಿ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC): ವಾಯುವ್ಯ ಕರ್ನಾಟಕದ ಜಿಲ್ಲೆಗಳಿಗಾಗಿ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC): ಈಶಾನ್ಯ ಕರ್ನಾಟಕದ (ಕಲ್ಯಾಣ ಕರ್ನಾಟಕ) ಜಿಲ್ಲೆಗಳಿಗಾಗಿ.
ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ನವೆಂಬರ್ 15 ರಂದು “ಜನಜಾತೀಯ ಗೌರವ ದಿವಸ’ವನ್ನಾಗಿ ಆಚರಿಸಲಾಗುತ್ತದೆ.
ಸರ್ಕಾರವು 2021 ರಲ್ಲಿ ಈ ದಿನವನ್ನು ‘ಜನಜಾತೀಯ ಗೌರವ ದಿವಸ’ ಎಂದು ಘೋಷಿಸಿತು.
ಬಿರ್ಸಾ ಮುಂಡಾ ಅವರ ಬಗ್ಗೆ:
ಬಿರ್ಸಾ ಮುಂಡಾ ಅವರು ಜಾರ್ಖಂಡ್‌ನ ಉಲಿಹಾಟು ಎಂಬ ಗ್ರಾಮದಲ್ಲಿ 1874 ರಲ್ಲಿ ಜನಿಸಿದರು ಮತ್ತು ಅವರು ಒಬ್ಬ ಆಧ್ಯಾತ್ಮಿಕ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.
ಅವರನ್ನು “ಧರ್ತಿ ಆಬಾ” (ಭೂಮಿಯ ತಂದೆ) ಎಂದು ಪ್ರಸಿದ್ಧರಾಗಿದ್ದಾರೆ.
ಬುಡಕಟ್ಟು ಸ್ವ-ಆಡಳಿತ ಮತ್ತು ಖುಂಟ್ಕಟ್ಟಿ (ಸಮುದಾಯ ಭೂ ಹಕ್ಕುಗಳು) ವ್ಯವಸ್ಥೆಯ ಪುನಃಸ್ಥಾಪನೆಗಾಗಿ ನಡೆದ ಉಗ್ರ ಹೋರಾಟವಾದ “ಉಲ್ಗುಲನ್ ಅಥವಾ ಮಹಾ ಕ್ರಾಂತಿ/ ಗ್ರೇಟ್ ತುಮುಲ್ಟ್” (1899–1900) ನ ನೇತೃತ್ವವನ್ನು ಅವರು ವಹಿಸಿದ್ದರು. ಇದನ್ನು ಮುಂಡಾ ದಂಗೆ ಎಂದೂ ಕೂಡ ಕರೆಯುತ್ತಾರೆ.
ಬ್ರಿಟಿಷರ ಭೂ ಕಾನೂನುಗಳು ಮತ್ತು ಊಳಿಗಮಾನ್ಯ ಪದ್ಧತಿಯ ಶೋಷಣೆಯ ವಿರುದ್ಧ ಅವರು ಮುಂಡಾ ಬುಡಕಟ್ಟು ಸಮುದಾಯವನ್ನು ಒಗ್ಗೂಡಿಸಿದರು.
ವಸಾಹತುಶಾಹಿ ಪ್ರಭಾವದಿಂದ ಮುಕ್ತವಾದ ನೈತಿಕ, ಸ್ವ-ಆಡಳಿತ ಸಮಾಜವನ್ನು ಅವರು ಕಲ್ಪಿಸಿಕೊಂಡಿದ್ದರು.
ಅಂತಿಮವಾಗಿ ಅವರನ್ನು ಸೆರೆಹಿಡಿಯಲಾಯಿತು ಮತ್ತು ತಮ್ಮ 25 ನೇ ವಯಸ್ಸಿನಲ್ಲಿ ರಾಂಚಿ ಜೈಲಿನಲ್ಲಿ ಹುತಾತ್ಮರಾದರು.
ಜನಜಾತೀಯ ಗೌರವ ದಿವಸದ ಬಗ್ಗೆ:
ದೇಶಕ್ಕಾಗಿ ಬುಡಕಟ್ಟು ಸಮುದಾಯದ ಸ್ವಾತಂತ್ರ್ಯ ಹೋರಾಟಗಾರರು ನೀಡಿದ ಕೊಡುಗೆಗಳನ್ನು ಸ್ಮರಿಸಲು ಜನಜಾತೀಯ ಗೌರವ ದಿವಸವನ್ನು ಮೀಸಲಿಡಲಾಗಿದೆ.
ಈ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.
ಇದು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಬುಡಕಟ್ಟು ಜನಾಂಗದವರು ನಡೆಸಿದ ಪ್ರಯತ್ನಗಳನ್ನು ಗುರುತಿಸುತ್ತದೆ ಮತ್ತು ದೇಶಕ್ಕಾಗಿ ಬುಡಕಟ್ಟು ಜನಾಂಗದವರು ಮಾಡಿದ ತ್ಯಾಗಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಲು ಸಹಾಯ ಮಾಡುತ್ತದೆ.
ಸಮಸ್ತ ಬುಡಕಟ್ಟು ಸಮುದಾಯಗಳಿಂದ “ಭಗವಾನ್” ಎಂದು ಪೂಜಿಸಲ್ಪಡುವ “ಶ್ರೀ ಬಿರ್ಸಾ ಮುಂಡಾ” ಅವರ ಜನ್ಮದಿನವಾದ ನವೆಂಬರ್ 15 ಅನ್ನು, ‘ಜನಜಾತೀಯ ಗೌರವ ದಿವಸ’ವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ.
ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PM-JANMAN) ದ ಬಗ್ಗೆ:
ಉದ್ದೇಶ:- ದೇಶದ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳಿಗೆ (PVTGs) ಕಲ್ಯಾಣ ಯೋಜನೆಗಳ ಫಲವನ್ನು ಕೊನೆಯ ಹಂತದ ಫಲಾನುಭವಿಗಳವರೆಗೂ ತಲುಪಿಸುವ ಮತ್ತು ಅವರಿಗೆ ಸೂಕ್ತ ರಕ್ಷಣೆಯನ್ನು ಖಚಿತಪಡಿಸುವ ಮಹತ್ವದ ಉದ್ದೇಶವನ್ನು ಈ ಅಭಿಯಾನವು ಹೊಂದಿದೆ.
ವಿಕಸಿತ ಭಾರತ ಸಂಕಲ್ಪ ಯಾತ್ರೆ – ಇದು ರಾಷ್ಟ್ರದಾದ್ಯಂತ ವ್ಯಾಪಿಸಿರುವ ಒಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ಇದರ ಮೂಲಕ ದೇಶದ ಪ್ರತಿಯೊಂದು ಗ್ರಾಮವನ್ನು ತಲುಪಿ, ಅಲ್ಲಿನ ವಿವಿಧ ಕೇಂದ್ರ ಯೋಜನೆಗಳಿಗೆ ಅರ್ಹರಾದ ನಾಗರಿಕರನ್ನು ಗುರುತಿಸಿ, ಅವರನ್ನು ಯೋಜನೆಯ ವ್ಯಾಪ್ತಿಗೆ ಸೇರ್ಪಡಿಸುವುದೇ ಇದರ ಪ್ರಮುಖ ಗುರಿಯಾಗಿದೆ.
ಕಾಂಡ ಕೋಶ ಚಿಕಿತ್ಸೆ (ಸ್ಟೇಮ್ ಸೆಲ್ ಥೆರೇಪಿ)
ಸಾಮಾನ್ಯ ಅಧ್ಯಯನ – 3/ ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
ಒಸಾಕಾ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯದ ಸಂಶೋಧಕರು ಅಡಿಪೋಸ್ (ಕೊಬ್ಬು) ಮೂಲದ ಕಾಂಡ ಕೋಶಗಳನ್ನು (ADSCs) ಬಳಸಿಕೊಂಡು ಬೆನ್ನುಮೂಳೆಯ ಮುರಿತಗಳನ್ನು ಗುಣಪಡಿಸಲು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಕಾಂಡ ಕೋಶ (ಸ್ಟೇಮ್ ಸೆಲ್ ) ಗಳ ಬಗ್ಗೆ:
ವ್ಯಾಖ್ಯಾನ:- ಕಾಂಡ ಕೋಶವು ದೇಹದಲ್ಲಿ ಕಂಡುಬರುವ ಅನೇಕ ವಿಭಿನ್ನ ಜೀವಕೋಶ ವಿಧಗಳನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿರುವ ಕೋಶವಾಗಿದೆ.
ಕಾಂಡ ಕೋಶಗಳು ವಿಭಜನೆಗೊಂಡಾಗ, ಅವು ಹೆಚ್ಚಿನ ಕಾಂಡ ಕೋಶಗಳನ್ನು ಅಥವಾ ವಿಶೇಷ ಕಾರ್ಯಗಳನ್ನು ನಿರ್ವಹಿಸುವ ಇತರ ಜೀವಕೋಶಗಳನ್ನು ರೂಪಿಸುತ್ತವೆ.
ವಯಸ್ಕ/ದೈಹಿಕ ಕಾಂಡ ಕೋಶಗಳು: ಇವು ಅಸ್ಥಿಮಜ್ಜೆಯಲ್ಲಿ ಕಂಡುಬರುವ ವಯಸ್ಕ ದೈಹಿಕ ಕೋಶಗಳಾಗಿವೆ (ASCs).
ಭ್ರೂಣದ ಕಾಂಡ ಕೋಶಗಳು: ಇವುಗಳನ್ನು ಸುಮಾರು 6 ರಿಂದ 8 ದಿನಗಳ ಭ್ರೂಣಗಳಿಂದ ಪಡೆಯಲಾಗುತ್ತದೆ. ಇವು ವಯಸ್ಕ ಕೋಶಗಳಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುತ್ತವೆ. ಏಕೆಂದರೆ ಸರಿಯಾದ ರೀತಿಯಲ್ಲಿ ಪಡೆದ ಭ್ರೂಣದ ಕಾಂಡ ಕೋಶವು ನರ ಕೋಶಗಳು, ಸ್ನಾಯು ಕೋಶಗಳು ಮತ್ತು ಯಕೃತ್ ಕೋಶಗಳನ್ನು ಉತ್ಪತ್ತಿ ಮಾಡಬಲ್ಲದು.
ಕಾಂಡ ಕೋಶ ಚಿಕಿತ್ಸೆಯ ಬಗ್ಗೆ:
ಕಾಂಡ ಕೋಶ ಚಿಕಿತ್ಸೆಯು ಮಾನವ ದೇಹದಲ್ಲಿ ಹಾನಿಗೊಳಗಾದ ಜೀವಕೋಶಗಳು ಮತ್ತು ಅಂಗಾಂಶಗಳನ್ನು ಪುನರುತ್ಪಾದಿಸಲು ಕಾಂಡ ಕೋಶಗಳ ವಿಶಿಷ್ಟ ಗುಣಲಕ್ಷಣಗಳನ್ನು ಬಳಸಿಕೊಳ್ಳುತ್ತದೆ.
ಕಾಂಡ ಕೋಶಗಳು ಈ ಹಾನಿಗೊಳಗಾದ ಕೋಶಗಳನ್ನು ಹೊಸ, ಆರೋಗ್ಯಕರ ಮತ್ತು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಕೋಶಗಳೊಂದಿಗೆ ಬದಲಾಯಿಸುತ್ತವೆ.
ಇದನ್ನು “ಪುನರುತ್ಪಾದಕ ಔಷಧ” ಎಂದೂ ಕರೆಯಲಾಗುತ್ತದೆ.
ಇದು ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಮುಂದಿನ ಹಂತವಾಗಿದೆ ಮತ್ತು ಪೂರೈಕೆ ಸೀಮಿತವಾಗಿರುವ ದಾನಿ ಅಂಗಗಳ ಬದಲಿಗೆ ಜೀವಕೋಶಗಳನ್ನು ಬಳಸುತ್ತದೆ.
ಕಾಂಡ ಕೋಶಗಳನ್ನು ಪ್ರಯೋಗಾಲಯಗಳಲ್ಲಿ ಬೆಳೆಸಲಾಗುತ್ತದೆ. ಈ ಕಾಂಡ ಕೋಶಗಳನ್ನು ಹೃದಯದ ಸ್ನಾಯು ಕೋಶಗಳು, ರಕ್ತ ಕಣಗಳು ಅಥವಾ ನರ ಕೋಶಗಳಂತಹ ನಿರ್ದಿಷ್ಟ ರೀತಿಯ ಜೀವಕೋಶಗಳಾಗಿ ಪರಿಣತಿ ಹೊಂದಲು ಮಾರ್ಪಡಿಸಲಾಗುತ್ತದೆ.
ನಂತರ ಈ ವಿಶೇಷ ಜೀವಕೋಶಗಳನ್ನು ವ್ಯಕ್ತಿಯ ದೇಹದಲ್ಲಿ ಅಳವಡಿಸಬಹುದಾಗಿದೆ.
ಕಳೆದ 90 ವರ್ಷಗಳಿಂದ, ಲ್ಯುಕೇಮಿಯಾ ಮತ್ತು ಲಿಂಫೋಮಾದಂತಹ ಕಾಯಿಲೆಗಳಿರುವ ಜನರಿಗೆ ಚಿಕಿತ್ಸೆ ನೀಡಲು ಹೆಮಾಟೊಪಯಟಿಕ್ ಕಾಂಡ ಕೋಶ ಕಸಿಯನ್ನು ಬಳಸಲಾಗುತ್ತಿದೆ.
ಬೆಂಗಳೂರು ಮೂಲದ ‘ಏಕ್ಯಾ ವನ’ ಶಾಲೆಯು, ಭಾರತದ ಮೊಟ್ಟಮೊದಲ ನಿಸರ್ಗ-ಪ್ರೇರಿತ ಕೆ-12 ಶಾಲೆಯಾಗಿ ಹೊರಹೊಮ್ಮುವ ಮೂಲಕ ಸುದ್ದಿಯಲ್ಲಿದೆ.
ಏಕ್ಯಾ ವನ ಶಾಲೆಯ ಬಗ್ಗೆ:
ಸ್ಥಳ : ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶ.
ಸ್ವರೂಪ: ಇದು ಒಂದು ನೂತನ ಹಾಗೂ ನಿರ್ದಿಷ್ಟ ಧ್ಯೇಯ-ಪ್ರೇರಿತಕೆ-12 ಮಾದರಿಯ ಶಾಲೆಯಾಗಿದೆ.
ದೃಷ್ಟಿಕೋನ: ಇದು ಮುಖ್ಯವಾಗಿ ಸಂರಕ್ಷಣೆ, ಸುಸ್ಥಿರತೆ ಮತ್ತು ಪರಿಸರ ಸ್ನೇಹಿ ನಾವೀನ್ಯತೆಗೆ ಒತ್ತು ನೀಡುತ್ತದೆ.
ವಿನ್ಯಾಸ: ವಿದ್ಯಾರ್ಥಿಗಳು ನಿಸರ್ಗದ ಮಡಿಲಲ್ಲಿ ಮತ್ತು ನಿಸರ್ಗದೊಂದಿಗೆ ಬೆರೆಯುತ್ತಾ ಕಲಿಯುವಂತಾಗಲು, ಈ ಶಾಲೆಯನ್ನು ಒಂದು “ಜೀವಂತ ಮತ್ತು ಕ್ರಿಯಾಶೀಲ ಜೀವಿ ಪರಿಸರ ವ್ಯವಸ್ಥೆ“ಯನ್ನಾಗಿ ರೂಪಿಸಲಾಗಿದೆ.
ಧ್ಯೇಯ: ಹವಾಮಾನ ಬದಲಾವಣೆ ಮತ್ತು ಜೀವ ವೈವಿಧ್ಯದ ನಾಶದಂತಹ ಸಮಕಾಲೀನ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಇದರ ಗುರಿಯಾಗಿದೆ. ಅವರನ್ನು ಸುಸ್ಥಿರತೆಯ ನಾವೀನ್ಯಕಾರರು, ಪ್ರತಿಪಾದಕರು ಮತ್ತು ನಾಯಕರನ್ನಾಗಿ ಸಬಲೀಕರಣಗೊಳಿಸುವುದು ಶಾಲೆಯ ಪ್ರಮುಖ ದೃಷ್ಟಿಕೋನವಾಗಿದೆ.
ಸಲಹಾ ಮಂಡಳಿ: ಪ್ರಖ್ಯಾತ ಪರಿಸರವಾದಿಗಳು ಮತ್ತು ಉದ್ಯಮ ರಂಗದ ನಾಯಕರನ್ನೊಳಗೊಂಡ ವಿಶೇಷ ಸಲಹಾ ಮಂಡಳಿಯು ಈ ಉಪಕ್ರಮಕ್ಕೆ ಮಾರ್ಗದರ್ಶನ ನೀಡುತ್ತಿದೆ.
ಏಕ್ಯಾ ವನ ಶಾಲೆಯ ಪ್ರಮುಖ ಲಕ್ಷಣಗಳು:
ನಿಸರ್ಗ ಆಧಾರಿತ ಕಲಿಕೆ: ಈ ಶಾಲೆಯ ಪಠ್ಯಕ್ರಮವು ಸಾಂಪ್ರದಾಯಿಕ ತರಗತಿ ಬೋಧನೆಯ ಸಹಿತ, ಹೊರಾಂಗಣ ತರಗತಿಗಳು, ಚಿಟ್ಟೆ ಮತ್ತು ಗಿಡಮೂಲಿಕೆ ಉದ್ಯಾನಗಳು, ಮಿಶ್ರಗೊಬ್ಬರ ಘಟಕಗಳು ಮತ್ತು ಪರಿಸರ ಪ್ರಯೋಗಾಲಯಗಳನ್ನು ಪ್ರಧಾನ ಕಲಿಕಾ ನೆಲೆಗಳಾಗಿ ಬಳಸಿಕೊಳ್ಳುತ್ತದೆ.
ಪಠ್ಯಕ್ರಮದ ಮಾರ್ಗಗಳು: ಜಾಗತಿಕ ಸುಸ್ಥಿರತೆಯ ವಿಷಯಗಳನ್ನು ನೈಜ ಪ್ರಪಂಚದ ಕಲಿಕೆಯೊಂದಿಗೆ ಜೋಡಿಸಲು ನಾಲ್ಕು ಪ್ರಮುಖ ಶೈಕ್ಷಣಿಕ ಮಾರ್ಗಗಳನ್ನು ರೂಪಿಸಲಾಗಿದೆ:
ಜನರು ಮತ್ತು ಗ್ರಹ
ಭೂಮಿಯ ಆರೈಕೆ
ಜೀವ ವ್ಯವಸ್ಥೆಗಳು
ಶಕ್ತಿ ಮತ್ತು ನಾವೀನ್ಯತೆ
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (KPME) ಕಾಯಿದೆ, 2007
ಇದೀಗ ಸುದ್ದಿಯಲ್ಲಿದೆ:
ಕರ್ನಾಟಕ ಸರ್ಕಾರವು ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (KPME) ಕಾಯಿದೆ, 2007’ ಕ್ಕೆ ಮಹತ್ವದ ತಿದ್ದುಪಡಿಗಳನ್ನು ಮಾಡಿದೆ.
ತಿದ್ದುಪಡಿಗಳ ಮುಖ್ಯಾಂಶಗಳು:
ಉದ್ದೇಶ: ನಾಯಿ, ಇತರ ಪ್ರಾಣಿ ಮತ್ತು ಹಾವು ಕಡಿತಕ್ಕೆ ಒಳಗಾದ ಸಂತ್ರಸ್ತರಿಗೆ, ಸಮಯೋಚಿತ ಹಾಗೂ ಜೀವ ರಕ್ಷಕ ಚಿಕಿತ್ಸೆಯು ಲಭ್ಯವಾಗುವುದನ್ನು ಖಚಿತಪಡಿಸಲು ಅಸ್ತಿತ್ವದಲ್ಲಿರುವ ಕಾನೂನು ಉಪಬಂಧಗಳನ್ನು ಬಲಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಹಿನ್ನೆಲೆ: ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ರೇಬೀಸ್ ನಿರೋಧಕ ಲಸಿಕೆ (ARV), ಇಮ್ಯುನೊಗ್ಲಾಬ್ಯುಲಿನ್ ಮತ್ತು ತುರ್ತು ಚಿಕಿತ್ಸಾ ಸೌಲಭ್ಯಗಳು ಏಕರೂಪವಾಗಿ ಲಭ್ಯವಿರಬೇಕೆಂದು ಕೋರಿ ದಾಖಲಾದ ಸ್ವಯಂಪ್ರೇರಿತ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು, ನವೆಂಬರ್ 7, 2025 ರಂದು ನೀಡಿದ ನಿರ್ದೇಶನಗಳನ್ನು ಪಾಲಿಸುವ ನಿಟ್ಟಿನಲ್ಲಿ ಈ ತಿದ್ದುಪಡಿಯನ್ನು ತರಲಾಗಿದೆ.
ಕಡ್ಡಾಯ ಚಿಕಿತ್ಸೆ: ಕಾಯಿದೆಗೆ ಸೇರ್ಪಡೆಗೊಳಿಸಲಾದ ಹೊಸ ನಿಯಮದನ್ವಯ, ಹಾವು ಕಡಿತ ಅಥವಾ ನಾಯಿ/ಪ್ರಾಣಿ ಕಡಿತದ ಸಂತ್ರಸ್ತರಿಗೆ ಚಿಕಿತ್ಸೆ ನೀಡುವ ಮುನ್ನ ಮುಂಗಡ ಹಣ ಪಾವತಿಗೆ ಒತ್ತಾಯಿಸಬಾರದು. ಮತ್ತು ಪ್ರತಿಯೊಂದು ಖಾಸಗಿ ವೈದ್ಯಕೀಯ ಸಂಸ್ಥೆಯು ಸಂತ್ರಸ್ತರಿಗೆ ಅಗತ್ಯವಿರುವ ಪ್ರಥಮ ಚಿಕಿತ್ಸೆಯನ್ನು ನೀಡುವುದು ಕಡ್ಡಾಯವಾಗಿದೆ.
ಇತ್ತೀಚೆಗೆ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ‘ಕೋ -ಒಪ್ ಕುಂಭ 2025’ ರಲ್ಲಿ, ಭಾರತದ ಯುವಜನರು ಮತ್ತು ಹಿಂದುಳಿದ ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ ಪರಿವರ್ತನಾತ್ಮಕ ಪಾತ್ರ ವಹಿಸುವಂತೆ ನಗರ ಸಹಕಾರಿ ಬ್ಯಾಂಕುಗಳಿಗೆ (ಯುಸಿಬಿ) ಕರೆ ನೀಡಿದರು.
‘ಕೋ -ಒಪ್ ಕುಂಭ 2025′ ರ ಪ್ರಮುಖ ಮುಖ್ಯಾಂಶಗಳು:
‘ದೆಹಲಿ ಘೋಷಣೆ 2025’:- ಸಹಕಾರಿ ಬ್ಯಾಂಕಿಂಗ್ ಜಾಲದೊಳಗೆ ಆರ್ಥಿಕ ಸ್ಥಿರತೆ, ಆಡಳಿತ ಮತ್ತು ಡಿಜಿಟಲೀಕರಣವನ್ನು ಹೆಚ್ಚಿಸುವತ್ತ ಗಮನಹರಿಸುವುದು ಮತ್ತು ರಾಷ್ಟ್ರೀಯ ನಗರ ಸಹಕಾರಿ ಬ್ಯಾಂಕುಗಳು ಮತ್ತು ಸಾಲ ಸಂಘಗಳ ಒಕ್ಕೂಟ (NAFCUB) ಅಂಗೀಕರಿಸುವುದು.
ನಗರ ಸಹಕಾರಿ ಬ್ಯಾಂಕುಗಳ (UCB’s) ಬಗ್ಗೆ:
ಇವು ಪ್ರಾಥಮಿಕವಾಗಿ ನಗರ ಮತ್ತು ಅರೆ ನಗರದ ಜನರಿಗೆ ಸೇವೆಯನ್ನು ಓದಗಿಸುವ ಹಣಕಾಸು ಸಂಸ್ಥೆಗಳಾಗಿವೆ.
ಸಹಕಾರದ ತತ್ವಗಳು:- ವಾಣಿಜ್ಯ ಬ್ಯಾಂಕುಗಳಿಗಿಂತ ಭಿನ್ನವಾಗಿ ಪರಸ್ಪರ ಸಹಾಯ, ಪ್ರಜಾಪ್ರಭುತ್ವ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಮುಕ್ತ ಸದಸ್ಯತ್ವ.
ಮಹತ್ವ:- ಇವು ಸಣ್ಣ ವ್ಯವಹಾರಗಳಿಗೆ, ಸಂಬಳ ಪಡೆಯುವ ವ್ಯಕ್ತಿಗಳಿಗೆ ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಠೇವಣಿ, ಸಾಲ ಮತ್ತು ಸಾಲ ಸೌಲಭ್ಯಗಳಂತಹ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತವೆ.
ಇವು ಒಳಗೊಳ್ಳುವಿಕೆಯಿಂದ ಕೂಡಿದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ, ಸಣ್ಣ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಬೆಂಬಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಕಸುಗೂಡು (ಡಂಪ್‌ಸೈಟ್) ಪುನಶ್ಚೇತನ ವೇಗವರ್ಧಕ ಕಾರ್ಯಕ್ರಮ (DRAP)
ಸಾಮಾನ್ಯ ಅಧ್ಯಾಯನ -2/ಆಡಳಿತ
ಇದೀಗ ಸುದ್ದಿಯಲ್ಲಿದೆ:
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ವು ಕಸ ಹಾಕುವ ಸ್ಥಳಗಳ (ಕಸುಗೂಡು) ಪುನಶ್ಚೇತನ ವೇಗವರ್ಧಕ ಕಾರ್ಯಕ್ರಮವನ್ನು (DRAP) ಪ್ರಾರಂಭಿಸಿದೆ.
ಪುನಶ್ಚೇತನ vs ಜೈವಿಕ ಪುನಶ್ಚೇತನ ಎಂದರೇನು?
ಪುನಶ್ಚೇತನವು, ಪರಿಸರ ಮಾಲಿನ್ಯಕಾರಕಗಳನ್ನು ತೆಗೆದುಹಾಕುವ ಅಥವಾ ಒಳಗೊಂಡಿರುವ ವಿಶಾಲ ಪ್ರಕ್ರಿಯೆಯಾಗಿದೆ.
ಜೈವಿಕ ಪುನಶ್ಚೇತನವು, ಪುನಶ್ಚೇತನದ ಉಪ-ವರ್ಗವಾಗಿದ್ದು, ಇದು ಮಾಲಿನ್ಯಕಾರಕಗಳನ್ನು ವಿಘಟಿಸಲು ಅಥವಾ ಪರಿವರ್ತಿಸಲು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಂತಹ ಸೂಕ್ಷ್ಮಜೀವಿಗಳನ್ನು ಬಳಸಿಕೊಳ್ಳುತ್ತದೆ.
ಕಸುಗೂಡು (ಡಂಪ್‌ಸೈಟ್) ಪುನಶ್ಚೇತನ ವೇಗವರ್ಧಕ ಕಾರ್ಯಕ್ರಮ (DRAP) ದ ಬಗ್ಗೆ:
ಉಳಿದಿರುವ ಕಸದ ಗುಡ್ಡಗಳ ಪುನಶ್ಚೇತನವನ್ನು ವೇಗಗೊಳಿಸಿ, ಸಮುದಾಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಾದ ನಗರ ಭೂಮಿಯನ್ನು ಪುನಃ ಪಡೆದಿಕೊಳ್ಳುವ ಉದ್ದೇಶವಾಗಿದೆ.
ಇದು ಸೆಪ್ಟೆಂಬರ್ 2026 ರ ವೇಳೆಗೆ “ಲಕ್ಷ್ಯ ಶೂನ್ಯ ಕಸುಗೂಡು” ಸಾಧಿಸುವ ಭಾರತದ ದೃಷ್ಟಿಕೋನವನ್ನು ಸಾಧಿಸಲು ಸಹಾಯ ಮಾಡುತ್ತದೆ.
ಲೂಸಿಫರ್ ಜೇನು ಹುಳ
ಸಾಮಾನ್ಯ ಅಧ್ಯಾಯನ-3/ ಸುದ್ದಿಯಲ್ಲಿರುವ ಪ್ರಭೇದಗಳು
ಸಂದರ್ಭ:
ಆಸ್ಟ್ರೇಲಿಯಾದ ವಿಜ್ಞಾನಿಗಳು ಲೂಸಿಫರ್ ಎಂಬ ಹೊಸ ಸ್ಥಳೀಯ ಜೇನುನೊಣದ ಪ್ರಭೇದವನ್ನು ಕಂಡುಹಿಡಿದಿದ್ದಾರೆ.
ಲೂಸಿಫರ್ ಜೇನುನೊಣದ ಬಗ್ಗೆ:
“ಮೆಗಾಕೈಲ್ (ಹ್ಯಾಕೆರಿಯಾಪಿಸ್) ಲೂಸಿಫರ್” ಎಂದು ಹೆಸರಿಸಲ್ಪಟ್ಟ ಈ ಹೊಸ ಪ್ರಭೇದವನ್ನು ಮೊದಲು 2019ರಲ್ಲಿ ಪಶ್ಚಿಮ ಆಸ್ಟ್ರೇಲಿಯಾ ರಾಜ್ಯದಲ್ಲಿ ಕಂಡುಹಿಡಿಯಲಾಯಿತು.
ಆಸ್ಟ್ರೇಲಿಯಾ ಸುಮಾರು 2,000 ಸ್ಥಳೀಯ ಜೇನುನೊಣ ಪ್ರಭೇದಗಳನ್ನು ಹೊಂದಿದ್ದು, ಅವುಗಳಲ್ಲಿ 300 ಕ್ಕೂ ಹೆಚ್ಚು ಪ್ರಭೇದಗಳನ್ನು ಇನ್ನೂ ವೈಜ್ಞಾನಿಕವಾಗಿ ಹೆಸರಿಸಲಾಗಿಲ್ಲ ಮತ್ತು ವಿವರಿಸಲಾಗಿಲ್ಲ.
ಹೆಣ್ಣು ಪ್ರಭೇಧದ ಜೇನುನೊಣದ ಮುಖದಲ್ಲಿ ಅತ್ಯಂತ ವೈಶಿಷ್ಟ್ಯಮಯವಾದ, ಮೇಲ್ಮುಖವಾದ ಕೊಂಬುಗಳಿವೆ.
ಕುತೂಹಲಕಾರಿಯಾಗಿ, ಗಂಡು ಪ್ರಭೇಧದ ಜೇನುನೊಣಗಳಿಗೆ ಕೊಂಬುಗಳಿರುವುದಿಲ್ಲ.
ಗಗನಯಾನ ಮಿಷನ್
ಸಾಮಾನ್ಯ ಅಧ್ಯಾಯನ-3/ ಬಾಹ್ಯಾಕಾಶ
ಇದೀಗ ಸುದ್ದಿಯಲ್ಲಿದೆ:
ಇಸ್ರೋ ತನ್ನ ಮುಂಬರುವ ಮಾನವ ಬಾಹ್ಯಾಕಾಶ ಹಾರಾಟ ಮಿಷನ್ ಗಗನಯಾನಕ್ಕಾಗಿ ನಿರ್ಣಾಯಕ ಪ್ಯಾರಾಚೂಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.
ಇಸ್ರೋ ಮುಂದಿನ ಮಾನವರಹಿತ ಮೂರು ಉಡ್ಡಯನಗಳನ್ನು ಅರೆ -ಮಾನವರೂಪದ ರೋಬೋಟ್ ವ್ಯೋಮಿತ್ರದೊಂದಿಗೆ ನಡೆಸಲಿದ್ದು, 2027ರ ಆರಂಭದಲ್ಲಿ ಮಾನವ ಸಹಿತ ಮಿಷನ್‌ನ್ನು ಗುರಿಯಾಗಿಸಿಕೊಂಡಿದೆ.
ಗಗನಯಾನ ಮಿಷನ್ ನ ಬಗ್ಗೆ:
ಡಿಸೆಂಬರ್ 2018 ರಲ್ಲಿ ಅನುಮೋದಿಸಲಾಗಿದೆ.
ಹಣಕಾಸು ವೆಚ್ಚ – ₹20,193 ಕೋಟಿ.
ವಿಶಿಷ್ಟತೆ – ಇದು ಭಾರತದ ಮೊದಲ ಸ್ಥಳೀಯ ನಿರ್ಮಿತ ಮಾನವ ಬಾಹ್ಯಾಕಾಶ ಹಾರಾಟ ಉಪಕ್ರಮವಾಗಿದೆ.
ಉದ್ದೇಶ:- ಭಾರತದ ಮಾನವ ಬಾಹ್ಯಾಕಾಶ ಪ್ರಯಾಣದ ಸಾಮರ್ಥ್ಯವನ್ನು ಪ್ರದರ್ಶಿಸುವುದನ್ನು ಗುರಿಯಾಗಿಸಿದ್ದು, ಸಿಬ್ಬಂದಿಯನ್ನು 400 ಕಿ.ಮೀ ಎತ್ತರದ ಭೂನಿಮ್ನ ಕಕ್ಷೆಗೆ ಮೂರು ದಿನಗಳ ಕಾಲ ಕಳುಹಿಸಿ, ನಂತರ ಸುರಕ್ಷಿತವಾಗಿ ಹಿಂದಿರುಗಿಸಿ ಭಾರತದ ಜಲಸೀಮೆಯಲ್ಲಿ ಸಮುದ್ರದ ಮೇಲೆ ಇಳಿಸುವುದಾಗಿದೆ.
ಉಡಾವಣಾ ವಾಹನ – LVM3 ರಾಕೆಟ್
ಅಂತರರಾಷ್ಟ್ರೀಯ ಕ್ರಯೋಸ್ಫಿಯರ್ ( ಹಿಮ ಮಂಡಲ) ಹವಾಮಾನ ಉಪಕ್ರಮ
ಸಾಮಾನ್ಯ ಅಧ್ಯಾಯನ-3/ ಪರಿಸರ ಅಧ್ಯಾಯನ
ಇದೀಗ ಸುದ್ದಿಯಲ್ಲಿದೆ:
ಭೂಮಿಯ ಹಿಮನದಿಗಳು ಮತ್ತು ಮಂಜುಗಡ್ಡೆಗಳು ವೇಗವಾಗಿ ಕರಗುತ್ತಿವೆ ಎಂದು “2025 ರ ಕ್ರಯೋಸ್ಫಿಯರ್ ವರದಿ” ಯು ಒತ್ತಿ ಹೇಳುತ್ತದೆ.
ಕ್ರಯೋಸ್ಫಿಯರ್ ( ಹಿಮ ಮಂಡಲ) ನ ಬಗ್ಗೆ:
ಹಿಮ ಮಂಡಲವೆಂದರೆ, ಭೂಮಿಯ ಹವಾಮಾನ ವ್ಯವಸ್ಥೆಯ ಒಂದು ಭಾಗವಾಗಿದ್ದು, ಘನಿಕೃತ ಮಳೆ, ಹಿಮ, ಸಮುದ್ರದ ಹಿಮ, ಸರೋವರ ಮತ್ತು ನದಿಯ ಹಿಮ, ಹಿಮಗುಡ್ಡಗಳು, ಹಿಮನದಿಗಳು, ಹಿಮಮುಡುಗಳು, ಹಿಮಪರತೆಗಳು, ಹಿಮದ ಬಂಡೆಗಳು, ಶಾಶ್ವತವಾಗಿ ಹಿಮಗೊಂಡ ಮಣ್ಣು (ಪರ್ಮಾಫ್ರಾಸ್ಟ್) ಹಾಗೂ ಋತುಮಾನಿಕವಾಗಿ ಹಿಮವಾಗುವ ನೆಲಗಳನ್ನು ಒಳಗೊಂಡಿರುತ್ತದೆ.
“ಕ್ರಯೋಸ್ಫಿಯರ್” ಎಂಬ ಪದವು ಗ್ರೀಕ್ ಪದ ‘ಕ್ರಯೋಸ್’ ನಿಂದ ಬಂದಿದೆ, ಇದರರ್ಥ ಹಿಮ ಅಥವಾ ತೀವ್ರ ಶೀತ.
ಹಿಮ ಮಂಡಲವು ಆರ್ಕ್ಟಿಕ್, ಅಂಟಾರ್ಕ್ಟಿಕ್ ಮತ್ತು ಪರ್ವತ ಪ್ರದೇಶಗಳಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ವ್ಯಾಪಿಸಿದೆ ಮತ್ತು ಸುಮಾರು ನೂರು ದೇಶಗಳಲ್ಲಿ ವ್ಯಾಪಿಸಿಕೊಂಡಿದೆ.
ಅಂಟಾರ್ಕ್ಟಿಕಾದಲ್ಲಿ ಅತಿದೊಡ್ಡ ಭೂಖಂಡದ ಹಿಮಗಡ್ಡೆಗಳು ಮತ್ತು ಹಿಮಪರತೆಗಳು ಕಂಡುಬರುತ್ತವೆ.
ಭೂಮಿಯ ಮೇಲಿನ ಸುಮಾರು 70% ರಷ್ಟು ಸಿಹಿನೀರು ಹಿಮ ಅಥವಾ ಮಂಜುಗಡ್ಡೆಯ ರೂಪದಲ್ಲಿ ಅಸ್ತಿತ್ವದಲ್ಲಿದೆ.
ರಾಷ್ಟ್ರೀಯ ಜಲ ಪ್ರಶಸ್ತಿಗಳು, 2024
ಇತರೆ
ಸಂದರ್ಭ:
2024 ರ 6 ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳ ಅತ್ಯುತ್ತಮ ರಾಜ್ಯ ವಿಭಾಗದಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಗುಜರಾತ ಮತ್ತು ಹರಿಯಾಣ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.
ರಾಷ್ಟ್ರೀಯ ಜಲ ಪ್ರಶಸ್ತಿಗಳ ಬಗ್ಗೆ:
ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ಮೊದಲು 2018 ರಲ್ಲಿ ಪ್ರಾರಂಭಿಸಲಾಯಿತು.
ಉದ್ದೇಶ:- ಜಲ ನಿರ್ವಹಣೆ ಮತ್ತು ಸಂರಕ್ಷಣೆಯಲ್ಲಿನ ಪ್ರಯತ್ನಗಳನ್ನು ಗುರುತಿಸುವುದು ಈ ಪ್ರಶಸ್ತಿಯ ಗುರಿಯಾಗಿದೆ.
ಮಹತ್ವ:- ಈ ಉಪಕ್ರಮವು ಭಾರತ ಸರ್ಕಾರದ “ಜಲ ಸಮೃದ್ಧ ಭಾರತ” (ವಾಟರ್ ಪ್ರೊಸ್ಪೆರಸ್ ಇಂಡಿಯಾ) ದೃಷ್ಟಿಕೋನವನ್ನು ಬೆಂಬಲಿಸುತ್ತದೆ.
ಹಸಿರು ಜಲಜನಕದ ಕುರಿತು 3ನೇ ಅಂತರರಾಷ್ಟ್ರೀಯ ಸಮ್ಮೇಳನ (ICGH 2025)
ಸಾಮಾನ್ಯ ಅಧ್ಯಾಯನ-3/ಪರಿಸರ ಅಧ್ಯಾಯನ
ಇದೀಗ ಸುದ್ದಿಯಲ್ಲಿದೆ:
ಹಸಿರು ಜಲಜನಕದ ಕುರಿತು 3ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ, ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು, ಭಾರತದಹಸಿರು ಜಲಜನಕದ ಕ್ಷೇತ್ರದಲ್ಲಿ ಶುದ್ಧ ಇಂಧನ ಪರಿವರ್ತನೆಗೆ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತಿರುವ “ರಾಷ್ಟ್ರೀಯ ಹಸಿರು ಜಲಜನಕ ಗುರಿ” (NGHM) ಯ ಬಗ್ಗೆ ಮುಖ್ಯವಾಗಿ ಪ್ರಸ್ತಾಪಿಸಿದರು.
ಹಸಿರು ಜಲಜನಕದ ಬಗ್ಗೆ:
ಹಸಿರು ಜಲಜನಕವನ್ನು, ನವೀಕರಿಸಬಹುದಾದ ಶಕ್ತಿಯಿಂದ ಉತ್ಪತ್ತಿಯಾಗುವ ವಿದ್ಯುತ್‌ನೊಂದಿಗೆ ನೀರಿನ ವಿದ್ಯುದ್ವಿಭಜನೆಯನ್ನು ಬಳಸಿಕೊಂಡು ಉತ್ಪಾದಿಸಲಾಗುತ್ತದೆ.
ಪ್ರಯೋಜನ: ಇದು ಶುದ್ಧ ದಹನಶೀಲ ಅಂಶವಾಗಿದ್ದು, ಕಬ್ಬಿಣ ಮತ್ತು ಉಕ್ಕು, ರಾಸಾಯನಿಕ ಮತ್ತು ಸಾರಿಗೆ ಸೇರಿದಂತೆ ಹಲವು ಕ್ಷೇತ್ರಗಳ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜಲಜನಕವನ್ನು ದೀರ್ಘಕಾಲದವರೆಗೆ ಸಂಗ್ರಹಿಸಬಹುದು, ಇದರ ಇಂಧನ ಕೋಶಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಬಹುದು.
ರಾಷ್ಟ್ರೀಯ ಹಸಿರು ಜಲಜನಕ ಗುರಿ (NGHM) ಯ ಬಗ್ಗೆ:
ಗುರಿ:- ಭಾರತವನ್ನು ಹಸಿರು ಜಲಜನಕ ಉತ್ಪಾದನೆಯ ಜಾಗತಿಕ ಕೇಂದ್ರವನ್ನಾಗಿ ಮಾಡುವುದು.
ಅನುಷ್ಠಾನಗೊಳಿಸುವ ಸಚಿವಾಲಯ: ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ.
ಜಲಜನಕದ ಬಗ್ಗೆ:
ಚಿಹ್ನೆ ಮತ್ತು ಪರಮಾಣು ಸಂಖ್ಯೆ:- ಜಲಜನಕ H ಚಿಹ್ನೆ ಮತ್ತು ಪರಮಾಣು ಸಂಖ್ಯೆ 1 ಹೊಂದಿರುವ ರಾಸಾಯನಿಕ ಅಂಶವಾಗಿದೆ.
ಜಲಜನಕವು ವಿಶ್ವದಲ್ಲೇ ಅತ್ಯಂತ ಹಗುರವಾದ ಮತ್ತು ಅತ್ಯಂತ ಹೇರಳವಾಗಿರುವರಾಸಾಯನಿಕ ವಸ್ತುವಾಗಿದ್ದು, ಎಲ್ಲಾ ಸಾಮಾನ್ಯ ವಸ್ತುವಿನ ಸರಿಸುಮಾರು 75% ರಷ್ಟಿದೆ.
ಇದು ಬಣ್ಣವಿಲ್ಲದ, ವಾಸನೆಯಿಲ್ಲದ, ರುಚಿಯಿಲ್ಲದ, ವಿಷಕಾರಿಯಲ್ಲದ ಮತ್ತು ಹೆಚ್ಚು ದಹನಕಾರಿ ಅನಿಲವಾಗಿದೆ.
ಮೆಂಟರಿಂಗ್ ಸಮ್ಮಿಟ್ ಇಂಡಿಯಾ (ಭಾರತ ಮಾರ್ಗದರ್ಶನ ಶೃಂಗಸಭೆ), 2025
ಇದೀಗ ಸುದ್ದಿಯಲ್ಲಿದೆ:
‘ಮೆಂಟರ್ ಟುಗೆದರ್’ ಸಂಸ್ಥೆಯ ವತಿಯಿಂದ,ಬೆಂಗಳೂರಿನಲ್ಲಿರುವ ‘ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ’ದಲ್ಲಿ ‘ಮೆಂಟರಿಂಗ್ ಸಮ್ಮಿಟ್ ಇಂಡಿಯಾ 2025’ ಆಯೋಜನೆಗೊಳ್ಳಲಿದೆ.
ಮೆಂಟರಿಂಗ್ ಸಮ್ಮಿಟ್ ಇಂಡಿಯಾ, 2025 ರ ಬಗ್ಗೆ:
ದಿನಾಂಕ:- ನವೆಂಬರ್ 19-20, 2025.
ಸ್ಥಳ:- ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ, ಬೆಂಗಳೂರು.
ಆಯೋಜಕರು:- ಮೆಂಟರ್ ಟುಗೆದರ್ ಸಂಸ್ಥೆ.
ಉದ್ದೇಶ:- ಮಾರ್ಗದರ್ಶನ ಪ್ರಕ್ರಿಯೆಯನ್ನು ಒಂದು “ಸಾರ್ವಜನಿಕ ಸರಕು” ಎಂದು ಪರಿಗಣಿಸಿ, ಆ ದೃಷ್ಟಿಕೋನವನ್ನು ಮುನ್ನಡೆಸುವುದು ಈ ಶೃಂಗಸಭೆಯ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ, ಮಾರ್ಗದರ್ಶನ ನೀಡುವ ಪರಿಣಿತರು, ಸಂಶೋಧಕರು ಮತ್ತು ಬದಲಾವಣೆಯ ಹರಿಕಾರರನ್ನು ಒಂದೇ ವೇದಿಕೆಯಡಿ ತರುವುದು ಹಾಗೂ ದೇಶಾದ್ಯಂತ ಯುವಜನರನ್ನು ಬೆಂಬಲಿಸಲು ಪರಸ್ಪರ ಸಹಯೋಗವನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.
ಬೆಳಗಾವಿ ಮೃಗಾಲಯದಲ್ಲಿ 28 ಕೃಷ್ಣಮೃಗಗಳ ಸಾವು; ಸೋಂಕಿನ ಶಂಕೆ
ಇದೀಗ ಸುದ್ದಿಯಲ್ಲಿದೆ:
ಬೆಳಗಾವಿ ಜಿಲ್ಲೆಯ ಭೂತರಾಮನಹಟ್ಟಿಯಲ್ಲಿರುವ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣಮೃಗಗಳು ಮೃತಪಟ್ಟಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬ್ಯಾಕ್ಟೀರಿಯಾ ಸೋಂಕಿನಿಂದ ಈ ಪ್ರಾಣಿಗಳು ಸಾವನ್ನಪ್ಪಿರುವ ಶಂಕೆ ಇದ್ದು, ಹೆಚ್ಚಿನ ತಪಾಸಣೆಗಾಗಿ ಆಂತರಿಕ ಅಂಗಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕೃಷ್ಣಮೃಗ (ಆಂಟಿಲೋಪ್ ಸರ್ವಿಕಾಪ್ರಾ) ಗಳ ಬಗ್ಗೆ:
ದೈಹಿಕ ಲಕ್ಷಣಗಳು:
ಗಂಡು ಕೃಷ್ಣಮೃಗಗಳು ಆಕರ್ಷಕವಾದ ಮತ್ತು ಸುರುಳಿಯಾಕಾರದ ಕೊಂಬುಗಳನ್ನು ಹೊಂದಿದ್ದು, ಇವು 75 ಸೆಂ.ಮೀ (30 ಇಂಚು) ವರೆಗೆ ಬೆಳೆಯುತ್ತವೆ. ಗಂಡು ಕೃಷ್ಣಮೃಗಗಳ ಮೈಬಣ್ಣ ಗಾಢ ಕಂದು ಬಣ್ಣದಿಂದ ಕಪ್ಪು ಬಣ್ಣದಲ್ಲಿರುತ್ತದೆ.
ಹೆಣ್ಣು ಕೃಷ್ಣಮೃಗಗಳು ಗಾತ್ರದಲ್ಲಿ ಚಿಕ್ಕದಾಗಿದ್ದು, ಕೋಡುಗಳಿರುವುದಿಲ್ಲ ಮತ್ತು ಕೆಂಪು-ಕಂದು ಬಣ್ಣವನ್ನು ಹೊಂದಿರುತ್ತವೆ.
ಆವಾಸಸ್ಥಾನ: ಇವು ಸಾಮಾನ್ಯವಾಗಿ ಹುಲ್ಲುಗಾವಲುಗಳು, ಸವನ್ನಾಗಳು ಮತ್ತು ತೆರೆದಅರಣ್ಯಗಳಲ್ಲಿ ಕಂಡುಬರುತ್ತವೆ. ಮೇಯಲು ಕಡಿಮೆ ಎತ್ತರದ ಹುಲ್ಲು ಇರುವ ಪ್ರದೇಶಗಳನ್ನು ಇವು ಹೆಚ್ಚು ಇಷ್ಟಪಡುತ್ತವೆ.
ಬೆದರಿಕೆಗಳು : ಐತಿಹಾಸಿಕವಾಗಿ ಭಾರತದ ದೇಶೀಯ ಸಂಸ್ಥಾನಗಳಲ್ಲಿ ಇವುಗಳ ಅತಿಯಾದ ಬೇಟೆ ನಡೆಯುತ್ತಿತ್ತು. ಪ್ರಸ್ತುತ, ಆವಾಸಸ್ಥಾನಗಳ ನಾಶ ಮತ್ತು ವಾಣಿಜ್ಯ/ಆರ್ಥಿಕ ಬಳಕೆಗಾಗಿ ನಡೆಯುವ ಅಕ್ರಮ ಬೇಟೆ ಇವುಗಳ ಅಸ್ತಿತ್ವಕ್ಕೆ ಪ್ರಮುಖ ಬೆದರಿಕೆಗಳಾಗಿವೆ.
ಸಂರಕ್ಷಣಾ ಸ್ಥಾನಮಾನ:
IUCN ಕೆಂಪು ಪಟ್ಟಿ: ಕನಿಷ್ಠ ಕಾಳಜಿ (LC)
CITES: ಅನುಬಂಧ III
ವನ್ಯಜೀವಿ (ಸಂರಕ್ಷಣಾ) ಕಾಯಿದೆ, 1972: ಅನುಸೂಚಿ I
ಇತರೆ ಪ್ರಮುಖ ಅಂಶಗಳು
ರಾಜ್ಯ ಪ್ರಾಣಿ: ಕೃಷ್ಣಮೃಗವನ್ನು ಪಂಜಾಬ್, ಹರಿಯಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ‘ರಾಜ್ಯ ಪ್ರಾಣಿ’ಯನ್ನಾಗಿ ಘೋಷಿಸಲಾಗಿದೆ.
ಸಾಂಸ್ಕೃತಿಕ ಮಹತ್ವ: ಹಿಂದೂ ಧರ್ಮದಲ್ಲಿ, ಕೃಷ್ಣಮೃಗವನ್ನು ಪಾವಿತ್ರ್ಯದ ಸಂಕೇತವೆಂದು ಪರಿಗಣಿಸಲಾಗಿದೆ. ಇದರ ಚರ್ಮ ಮತ್ತು ಕೊಂಬುಗಳನ್ನು ಪವಿತ್ರ ವಸ್ತುಗಳಾಗಿ ಪೂಜಿಸಲಾಗುತ್ತದೆ. ಬೌದ್ಧ ಧರ್ಮದಲ್ಲಿ, ಇದನ್ನು ಅದೃಷ್ಟದ ಸಂಕೇತವೆಂದು ನಂಬಲಾಗಿದೆ.
ಡೇವಿಡ್ ಸ್ಜಲೇ ಅವರ ‘ಫ್ಲೆಶ್’ ಕಾದಂಬರಿಗಾಗಿ ಈ ವರ್ಷದ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಗೆದ್ದ ಮೊದಲ ಹಂಗೇರಿಯನ್-ಬ್ರಿಟಿಷ್ ಲೇಖಕರು ಇವರಾಗಿದ್ದಾರೆ.
ಬೂಕರ್ ಪ್ರಶಸ್ತಿಯ ಬಗ್ಗೆ:
ಇದು ಪ್ರತಿವರ್ಷ ನೀಡಲಾಗುವ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯಾಗಿದೆ. ಇಂಗ್ಲಿಷ್ ಭಾಷೆಯಲ್ಲಿ ಬರೆಯಲ್ಪಟ್ಟು, ಯುನೈಟೆಡ್ ಕಿಂಗ್‌ಡಮ್ ಮತ್ತು/ಅಥವಾ ಐರ್ಲೆಂಡ್‌ನಲ್ಲಿ ಪ್ರಕಟವಾಗಿರುವ ಅತ್ಯುತ್ತಮ ಕಾದಂಬರಿಗೆ ಪ್ರದಾನವಾಗುವ ಪ್ರಶಸ್ತಿಯಾಗಿದೆ.
ಉದ್ಘಾಟನೆ : ಓದು ಮತ್ತು ಸಾಹಿತ್ಯವನ್ನು ಉತ್ತೇಜಿಸಲು ಇದನ್ನು ಮೊದಲು 1969 ರಲ್ಲಿ ನೀಡಲಾಯಿತು.
ಭಾರತೀಯ ವಿಜೇತರು:-
1971 ರಲ್ಲಿ “ಇನ್ ಎ ಫ್ರೀ ಸ್ಟೇಟ್ ಗಾಗಿ ವಿ.ಎಸ್. ನೈಪಾಲ್.”
1981 ರಲ್ಲಿ “ಮಿಡ್‌ನೈಟ್ಸ್ ಚಿಲ್ಡ್ರನ್ ಗಾಗಿ ಸಲ್ಮಾನ್ ರಶ್ದಿ.”
1997 ರಲ್ಲಿ “ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಗಾಗಿ ಅರುಂಧತಿ ರಾಯ್”.
2006 ರಲ್ಲಿ “ದಿ ಇನ್ಹೆರಿಟೆನ್ಸ್ ಆಫ್ ಲಾಸ್ ಗಾಗಿ ಕಿರಣ್ ದೇಸಾಯಿ.”
2008 ರಲ್ಲಿ “ದಿ ವೈಟ್ ಟೈಗರ್ ಗಾಗಿ ಅರವಿಂದ್ ಅಡಿಗ.”
2022 ರಲ್ಲಿ ಹಿಂದಿ ಕಾದಂಬರಿ “ಟಾಂಬ್ ಆಫ್ ಸ್ಯಾಂಡ್ ಗಾಗಿ ಗೀತಾಂಜಲಿ ಶ್ರೀ.”
ಗಮನಿಸಿ:- 2025 ರಲ್ಲಿ, ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಅವರು ಮುಷ್ತಾಕ್ ಅವರ ಸಣ್ಣ ಕಥೆಗಳ ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಲಾದ “ಹಾರ್ಟ್ ಲ್ಯಾಂಪ್” ಸಂಕಲನಕ್ಕಾಗಿ ಪ್ರಶಸ್ತಿಯನ್ನುಪಡೆದರು.
ಹಣ ಅಮಾನ್ಯೀಕರಣವಾಗಿ ಒಂಬತ್ತು ವರ್ಷಗಳ ನಂತರ
ಸಾಮಾನ್ಯ ಅಧ್ಯಾಯನ-3/ಆರ್ಥಿಕತೆ
ಸಂದರ್ಭ:
2016ರಲ್ಲಿ ಕೇಂದ್ರ ಸರ್ಕಾರ ಹಣ ಅಮಾನ್ಯೀಕರಣವನ್ನು ಘೋಷಿಸಿದ ನಂತರ, ಸಾರ್ವಜನಿಕರ ಕೈಯಲ್ಲಿರುವ ನಗದು ಪ್ರಮಾಣವು ದ್ವಿಗುಣಕ್ಕಿಂತ ಹೆಚ್ಚಾಗಿದೆ.
ಹಣ ಅಮಾನ್ಯೀಕರಣದ ಬಗ್ಗೆ:
ಪ್ರಧಾನ ಮಂತ್ರಿಯವರು ನವೆಂಬರ್ 8, 2016 ರಂದು ಹಣ ಅಮಾನ್ಯೀಕರಣವನ್ನು ಘೋಷಿಸಿದರು.
ಆ ಸಮಯದಲ್ಲಿ ಒಟ್ಟಾರೆ ಚಲಾವಣೆಯಲ್ಲಿದ್ದ ಹಣದಲ್ಲಿ ಸುಮಾರು 86% ಹೊಂದಿದ್ದ ಎಲ್ಲಾ ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ಇನ್ನು ಮುಂದೆ ಕಾನೂನುಬದ್ಧ ಹಣವಲ್ಲ ಎಂದು ಅದು ಘೋಷಿಸಿತು.
ಕಪ್ಪು ಹಣವನ್ನು ತೊಡೆದುಹಾಕಲು, ನಕಲಿ ಹಣವನ್ನು ನಿಗ್ರಹಿಸಲು, ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಮತ್ತು ಆರ್ಥಿಕತೆಯನ್ನು ಔಪಚಾರಿಕಗೊಳಿಸಲು ಉದ್ದೇಶಿಸಲಾಗಿತ್ತು.
ಆದಿತ್ಯ–ಎಲ್ 1 ಮಿಷನ್ – ಸೂರ್ಯನ ಹೊರಪದರದಿಂದ ಉಕ್ಕಿ ಬರುವ ದ್ರವ್ಯ ಸ್ಫೋಟಗಳನ್ನು ಗಮನಿಸುತ್ತದೆ
ಸಾಮಾನ್ಯ ಅಧ್ಯಾಯನ-3/ಬಾಹ್ಯಾಕಾಶ
ಇದೀಗ ಸುದ್ದಿಯಲ್ಲಿದೆ:
ಭಾರತೀಯ ಖಗೋಳಭೌತಶಾಸ್ತ್ರ ಸಂಸ್ಥೆ ಮತ್ತು ನಾಸಾದ ವಿಜ್ಞಾನಿಗಳು, ಆದಿತ್ಯ–L1 ಉಪಗ್ರಹದಲ್ಲಿರುವ VELC ಪೇಲೋಡ್ ಅನ್ನು ಬಳಸಿ, ಸೂರ್ಯನ ಮೇಲ್ಮೈಗೆ ಹತ್ತಿರವಿರುವ, ಗೋಚರ ತರಂಗಾಂತರ ವ್ಯಾಪ್ತಿಯಲ್ಲಿ ಕೊರೋನಲ್ ಮಾಸ್ ಎಜೆಕ್ಷನ್ (CME) ಅನ್ನು ಮೊದಲ ಬಾರಿಗೆ ಸ್ಪೆಕ್ಟ್ರೋಸ್ಕೋಪಿಕ್ ವೀಕ್ಷಣೆ ಮಾಡಿದ್ದಾರೆ.
ಆದಿತ್ಯ-L1 ಮಿಷನ್ ನ ಬಗ್ಗೆ:
ವಿಶಿಷ್ಟತೆ:- ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಭಾರತೀಯ ಬಾಹ್ಯಾಕಾಶ ವೀಕ್ಷಣಾಲಯವಾಗಿದೆ. ಇದನ್ನು PSLV-C57 ಉಡಾವಣೆ ಮಾಡುತ್ತದೆ.
ಗಮನಿಸಿ:- ಈ ಸೌರ ಮಿಷನ್‌ನಲ್ಲಿ ಉಪಗ್ರಹವು ಸೂರ್ಯನತ್ತ ನೇರವಾಗಿ ಹೋಗುವುದಿಲ್ಲ; ಬದಲಿಗೆ ಸೂರ್ಯಗ್ರಹಣ ಸಮಯದಲ್ಲೂ ಸೂರ್ಯವನ್ನು ವೀಕ್ಷಿಸಲು ಅನುಕೂಲವಾಗುವ ಬಿಂದುವಿನಲ್ಲಿ ಬಾಹ್ಯಾಕಾಶ ವೀಕ್ಷಣಾಲಯವನ್ನು ನಿರ್ಮಿಸುವುದು ಇದರ ಉದ್ದೇಶ.
ಈ ಬಾಹ್ಯಾಕಾಶ ನೌಕೆಯನ್ನು ಸೂರ್ಯ–ಭೂಮಿ ವ್ಯವಸ್ಥೆಯ ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲಾಗ್ರಾಂಜ್ ಪಾಯಿಂಟ್ 1 (L1) ಸುತ್ತಲಿನ ಹ್ಯಾಲೋ ಕಕ್ಷೆಯಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ.
ಮಿಷನ್‌ನ ಪ್ರಮುಖ ಉದ್ದೇಶಗಳು:
ಸೂರ್ಯನ ಮೇಲಿನ ವಾತಾವರಣ (ಕ್ರೋಮೋಸ್ಫಿಯರ್ ಮತ್ತು ಕೊರೋನಾ) ದಲ್ಲಿ ನಡೆಯುವ ಚಲನ- ವಲನಗಳನ್ನು ಅಧ್ಯಯನ ಮಾಡುವುದು.
ಇದು ಸೌರ ಮಾರುತದ ಮೂಲ, ಸಂಯೋಜನೆ ಮತ್ತು ಚಲನಶೀಲತೆಯ ಜೊತೆಗೆ ಬಾಹ್ಯಾಕಾಶ ಹವಾಮಾನವನ್ನು ಯಾವುದು ಪ್ರೇರೇಪಿಸುತ್ತದೆ ಎಂಬುದನ್ನು ಸಹ ಗುರುತಿಸುತ್ತದೆ.
ಸೂರ್ಯನನ್ನು ಅಧ್ಯಯನ ಮಾಡುವ ಇತರೆ ಮಿಷನ್‌ಗಳು:
ನಾಸಾದ ಪಾರ್ಕರ್ ಸೋಲಾರ್ ಪ್ರೋಬ್:- 2018 ರಲ್ಲಿ ಉಡಾವಣೆ ಮಾಡಲಾಯಿತು. ಈಗಾಗಲೇ ತುಂಬಾ ಹತ್ತಿರಕ್ಕೆ ಹೋಗಿದೆ, ಆದರೆ ಅದು ಸೂರ್ಯನಿಂದ ದೂರದಲ್ಲಿರುವಂತೆ ಕಾಣುತ್ತದೆ.
ಹೆಲಿಯೊಸ್ 2 ಸೌರ ಪ್ರೋಬ್:- 1976 ರಲ್ಲಿ ಸೂರ್ಯನ ಮೇಲ್ಮೈಯ ಸೌರ ಪ್ರಕ್ರಿಯೆಗಳನ್ನು ತನಿಖೆ ಮಾಡಲು ನಾಸಾ ಮತ್ತು ಹಿಂದಿನ ಪಶ್ಚಿಮ ಜರ್ಮನಿಯ ಬಾಹ್ಯಾಕಾಶ ಸಂಸ್ಥೆಯು ಜಂಟಿಯಾಗಿ ಪ್ರಾರಂಭಿಸಲಾಯಿತು.
ಭೌಗೋಳಿಕ ಸೂಚ್ಯಂಕ ಪಟ್ಟಿಯ ಅರ್ಜಿ ಶುಲ್ಕ ಕಡಿತ
ಸಾಮಾನ್ಯ ಅಧ್ಯಾಯನ- 3/ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
ಇತ್ತೀಚೆಗೆ, ಸರ್ಕಾರವು ಭೌಗೋಳಿಕ ಸೂಚ್ಯಂಕ ಪಟ್ಟಿಯ ಅರ್ಜಿ ಶುಲ್ಕವನ್ನು ₹5,000 ರಿಂದ ₹1,000 ಕ್ಕೆ ಇಳಿಸುವುದಾಗಿ ಘೋಷಿಸಿತು, ಇದು ಬುಡಕಟ್ಟು ಕುಶಲಕರ್ಮಿಗಳ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಸಂರಕ್ಷಿಸಲು ಪ್ರೋತ್ಸಾಹಿಸುತ್ತದೆ.
ಭೌಗೋಳಿಕ ಸೂಚ್ಯಂಕ ಪಟ್ಟಿಯ ಶುಲ್ಕ ಕಡಿತ:
ಈ ಕೆಳಗಿನ ಕರಕುಶಲ ವಸ್ತು ಮತ್ತು ಉತ್ಪನ್ನಗಳಿಗೆ ಭೌಗೋಳಿಕ ಸೂಚ್ಯಂಕ ಪಟ್ಟಿಯ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ.
ಕನ್ನಡಿಪ್ಪಯ (ಕೇರಳ)
2. ಅಪತಾನಿ ಜವಳಿ (ಅರುಣಾಚಲ)
3. ಮಾರ್ತಾಂಡಂ ಜೇನು (ತಮಿಳುನಾಡು)
4. ಲೆಪ್ಚಾ ತುಂಗ್‌ಬುಕ್ (ಸಿಕ್ಕಿಂ)
5. ಬೋಡೋ ಅರೋನೈ (ಅಸ್ಸಾಂ)
6. ಅಂಬಾಜಿ ಮಾರ್ಬಲ್ (ಗುಜರಾತ್)
7. ಬದ್ರಿ ಹಸುವಿನ ತುಪ್ಪ (ಉತ್ತರಾಖಂಡ)
ಭೌಗೋಳಿಕ ಸೂಚ್ಯಂಕ ಪಟ್ಟಿಯ ಬಗ್ಗೆ:
ಇದು ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳ ಅಥವಾ ಪ್ರದೇಶ, ಪಟ್ಟಣ ಅಥವಾ ದೇಶದಂತಹ ಮೂಲಗಳಿಗೆ ಸಂಬಂಧಿಸಿದ ಕೆಲವು ಉತ್ಪನ್ನಗಳಿಗೆ ನೀಡಲಾಗುವ ಹೆಸರು ಅಥವಾ ಸಂಕೇತವಾಗಿದೆ.
ವಿಶಿಷ್ಟ ಉತ್ಪನ್ನಗಳಿಗೆ ಪ್ರಮಾಣೀಕರಣ:- ಭೌಗೋಳಿಕ ಸೂಚ್ಯಂಕ ಪಟ್ಟಿಯನ್ನು ಕೆಲವು ನಿರ್ದಿಷ್ಟ ಗುಣಗಳನ್ನು ಹೊಂದಿರುವ ಅಥವಾ ಅದರ ಭೌಗೋಳಿಕ ಮೂಲದ ಕಾರಣದಿಂದಾಗಿ ನಿರ್ದಿಷ್ಟ ಖ್ಯಾತಿಯನ್ನು ಹೊಂದಿರುವ ನಿರ್ದಿಷ್ಟ ಉತ್ಪನ್ನಕ್ಕೆ ಪ್ರಮಾಣೀಕರಣವೆಂದು ಪರಿಗಣಿಸಬಹುದು.
ವೈನ್ ಮತ್ತು ತಂಪು ಪಾನೀಯಗಳು, ಆಹಾರ ಪದಾರ್ಥಗಳು, ಕೃಷಿ ಉತ್ಪನ್ನಗಳು, ಕರಕುಶಲ ವಸ್ತುಗಳು ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ಭೌಗೋಳಿಕ ಸೂಚ್ಯಂಕಗಳನ್ನು ನೀಡಬಹುದು.
ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ-ಸಂಬಂಧಿತ ಅಂಶಗಳು (TRIPS):- ಅಂತರರಾಷ್ಟ್ರೀಯ ಮಟ್ಟದಲ್ಲಿ, ಭೌಗೋಳಿಕ ಸೂಚ್ಯಂಕಗಳನ್ನು ವಿಶ್ವ ವ್ಯಾಪಾರ ಸಂಸ್ಥೆಯ (WTO) ಯ ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ-ಸಂಬಂಧಿತ ಅಂಶಗಳ ಒಪ್ಪಂದ (TRIPS) ನಿಯಂತ್ರಿಸುತ್ತದೆ.
ಸರಕುಗಳ ಭೌಗೋಳಿಕ ಸೂಚ್ಯಂಕ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ, 1999:- ಭಾರತದಲ್ಲಿ, ಭೌಗೋಳಿಕ ಸೂಚ್ಯಂಕಗಳ ನೋಂದಣಿಯನ್ನು ಸೆಪ್ಟೆಂಬರ್ 2003 ರಲ್ಲಿ ಜಾರಿಗೆ ಬಂದ ಸರಕುಗಳ ಭೌಗೋಳಿಕ ಸೂಚನೆಗಳು (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ, 1999 ರಿಂದ ನಿರ್ವಹಿಸಲಾಗುತ್ತದೆ.
ಡಾರ್ಜಿಲಿಂಗ್ ಚಹಾ – 2004-05ರಲ್ಲಿ ಭಾರತದಲ್ಲಿ ಭೌಗೋಳಿಕ ಸೂಚ್ಯಂಕ ಪಟ್ಟಿಯನ್ನು ಪಡೆದ ಮೊದಲ ಉತ್ಪನ್ನವಾಗಿದೆ.
ಹವಾಮಾನ ಅಪಾಯ ಸೂಚ್ಯಂಕ (CRI), 2026
ಸಾಮಾನ್ಯ ಅಧ್ಯಾಯನ-3/ವಿಪತ್ತು ನಿರ್ವಹಣೆ
ಸಂದರ್ಭ:
ಜರ್ಮನ್‌ವಾಚ್‌ನಿಂದ ಹೊಸ ಹವಾಮಾನ ಅಪಾಯ ಸೂಚ್ಯಂಕ (CRI) 2026 ರ ವರದಿಯನ್ನು ಬಿಡುಗಡೆ ಮಾಡಲಾಗಿದೆ.
ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆಯುತ್ತಿರುವ COP30 ನಲ್ಲಿ ಈ ವಿಶ್ಲೇಷಣೆಯನ್ನು ಪ್ರಸ್ತುತಪಡಿಸಲಾಯಿತು.
ಪ್ರಮುಖ ಸಂಶೋಧನೆಗಳು:
1995 ರಿಂದ 2024 ರ ನಡುವೆ ಹವಾಮಾನ ವೈಪರೀತ್ಯದಿಂದ ಹೆಚ್ಚು ಪರಿಣಾಮ ಬೀರುವ ದೇಶಗಳ ಪಟ್ಟಿಯಲ್ಲಿ ಭಾರತ ಒಂಬತ್ತನೇ ಸ್ಥಾನದಲ್ಲಿತ್ತು .
ಕಳೆದ ಮೂರು ದಶಕಗಳಲ್ಲಿ , ಭಾರತವು ಸುಮಾರು 430 ತೀವ್ರ ಹವಾಮಾನ ವೈಪರೀತ್ಯಗಳನ್ನು ಎದುರಿಸಿದೆ, ಇದರ ಪರಿಣಾಮವಾಗಿ ಹಣದುಬ್ಬರ-ಸರಿಹೊಂದಿಸಿದ ನಷ್ಟವು ಸುಮಾರು $170 ಬಿಲಿಯನ್ ಆಗಿದೆ.
ಹೆಚ್ಚಿನ ಜನರು ಪರಿಣಾಮ ಬೀರಿದ್ದಾರೆ: ಭಾರತವು ಬಾಂಗ್ಲಾದೇಶ ಮತ್ತು ಫಿಲಿಪೈನ್ಸ್‌ಗಿಂತ ಮೂರನೇ ಸ್ಥಾನದಲ್ಲಿದೆ.
ಭಾರತ ಮತ್ತು ಬೋಟ್ಸ್ವಾನಾ ನಡುವೆ ಚಿರತೆ ಸ್ಥಳಾಂತರ ಒಪ್ಪಂದ
ಸಾಮಾನ್ಯ ಅಧ್ಯಾಯನ – 3 / ಪರಿಸರ ಅಧ್ಯಾಯನ
ಇದೀಗ ಸುದ್ದಿಯಲ್ಲಿದೆ:
‘ಪ್ರಾಜೆಕ್ಟ್ ಚಿರತೆ’ ಯ ಭಾಗವಾಗಿ ಎಂಟು ಚಿರತೆಗಳನ್ನು ಭಾರತಕ್ಕೆ ಸ್ಥಳಾಂತರಿಸುವುದಾಗಿ ಭಾರತ ಮತ್ತು ಬೋಟ್ಸ್ವಾನಾ ಔಪಚಾರಿಕವಾಗಿ ಘೋಷಿಸಿವೆ.
‘ಪ್ರಾಜೆಕ್ಟ್ ಚಿರತೆ’ ಯನ್ನು ಪ್ರಾರಂಭಿಸಿದರ ಬಗ್ಗೆ:
ದಶಕಗಳ ಕಾಲದ ಅತಿಯಾದ ಬೇಟೆ, ಆವಾಸಸ್ಥಾನ ವಿಘಟನೆ ಮತ್ತು ಬೇಟೆಯ ಪ್ರಭೇದಗಳ ವಿನಾಶದ ನಂತರ, 1952 ರಲ್ಲಿ ಭಾರತವು ಚಿರತೆಗಳು ಅಳಿದುಹೋಗಿವೆ ಎಂದು ಘೋಷಿಸಿತು.
2022 ರಲ್ಲಿ ಪ್ರಾಜೆಕ್ಟ್ ಚಿರತೆ ಪ್ರಾರಂಭವಾದ ನಂತರ ಮತ್ತು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಚಿರತೆಗಳ ಆಗಮನವು ದೊಡ್ಡ ಮಾಂಸಾಹಾರಿ ಪ್ರಾಣಿ ಜಾತಿಗೆ ಸಂಬಂಧಿಸಿದ ವಿಶ್ವದ ಮೊದಲ ಅಂತರಖಂಡ ಸ್ಥಳಾಂತರ ಕಾರ್ಯಕ್ರಮವನ್ನು ಸೃಷ್ಟಿಸಲಾಯಿತು.
ಬೋಟ್ಸ್ವಾನಾ:- ಇದು ಭೂಆವೃತ ದೇಶವಾಗಿದ್ದು, ಅದರ ಭೂಪ್ರದೇಶದ ಸುಮಾರು 70% ಕಲಹರಿ ಮರುಭೂಮಿಯಿಂದ ಆವೃತವಾಗಿದೆ ಮತ್ತು ಜಗತ್ತಿನ ಅತಿ ಹೆಚ್ಚಿನ ಸಂಖ್ಯೆಯ ಕಾಡು ಚೀತಾಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ.
ಪ್ರಾಜೆಕ್ಟ್ ಚೀತಾ (ಚಿರತೆ ಯೋಜನೆ), 2022 ರ ಬಗ್ಗೆ:
ಅವಲೋಕನ: ಪ್ರಾಜೆಕ್ಟ್ ಚೀತಾ ಎಂಬುದು ಭಾರತದ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದ್ದು, ಸೂಕ್ತವಾದ ಮುಕ್ತ ಅರಣ್ಯ ಮತ್ತು ಹುಲ್ಲುಗಾವಲು ಪರಿಸರ ವ್ಯವಸ್ಥೆಯಲ್ಲಿ ಚಿರತೆಯನ್ನು ಮರು ಪರಿಚಯಿಸುತ್ತದೆ.
ಪ್ರಾರಂಭಿಸಿದವರು: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA), ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ಸ್ಥಾಪಿತವಾದ ಶಾಸನಬದ್ಧ ಸಂಸ್ಥೆಯಾಗಿದೆ.
ವಿಶಿಷ್ಟತೆ – ಇದು ವಿಶ್ವದ ಮೊದಲ ಖಂಡಾಂತರ ಮಟ್ಟದ ಅತಿ ದೊಡ್ಡ ಕಾಡು ಮಾಂಸಾಹಾರಿ ಪ್ರಾಣಿಯ ಸ್ಥಳಾಂತರವಾಗಿದೆ.
ಇದುವರೆಗಿನ ಸ್ಥಳಾಂತರಗಳು:
2022 ರಲ್ಲಿ ನಮೀಬಿಯಾದಿಂದ 8 ಚಿರತೆಗಳ ಸ್ಥಳಾಂತರ.
2023 ರಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳ ಸ್ಥಳಾಂತರ.
ಬೋಟ್ಸ್ವಾನಾದಿಂದ 8 ಚಿರತೆಗಳು (2025 ರ ಘೋಷಣೆ) ಸ್ಥಳಾಂತರ.
ಚಿರತೆ (ಅಸಿನೋನಿಕ್ಸ್ ಜುಬಾಟಸ್) ಯ ಬಗ್ಗೆ:
ಇದು ವಿಶ್ವದ ಅತಿ ವೇಗದ ಸಸ್ತನಿ ಮತ್ತು ಭಾರತದಲ್ಲಿ ಅಳಿದುಹೋದ ಏಕೈಕ ದೊಡ್ಡ ಮಾಂಸಾಹಾರಿ ಪ್ರಭೇಧವಾಗಿದೆ (1952).
ಇತರ ದೊಡ್ಡ ಬೆಕ್ಕುಗಳಂತೆ, ಚಿರತೆಗಳು ಘರ್ಜಿಸುವುದಿಲ್ಲ.
ಎರಡು ಪ್ರಮುಖ ಪ್ರಭೇಧಗಳಿವೆ:- ಆಫ್ರಿಕಾದ ಚಿರತೆ (ದುರ್ಬಲವಾಗಿವೆ) ಮತ್ತು ಏಷ್ಯಾದ ಚಿರತೆ (ತೀವ್ರವಾಗಿ ಅಳಿವಿನಂಚಿನಲ್ಲಿವೆ), ಇವು ಪೂರ್ವ ಇರಾನ್ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬರುತ್ತವೆ.
ಭೂತಾನಿಗೆ ಭೇಟಿ ನೀಡಿದ ಪ್ರಧಾನಿ
ಸಾಮಾನ್ಯ ಅಧ್ಯಾಯನ-2/ ಅಂತರರಾಷ್ಟ್ರೀಯ ಸಂಬಂಧಗಳು
ಸಂದರ್ಭ:
ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಭೂತಾನ ಭೇಟಿಯು ಎರಡೂ ದೇಶಗಳ ನಡುವಿನ ಸ್ನೇಹ ಮತ್ತು ಸಹಕಾರದ ವಿಶೇಷ ಸಂಬಂಧಗಳನ್ನು ಬಲಪಡಿಸಿತು.
ಪ್ರಮುಖ ಫಲಿತಾಂಶಗಳು:
ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ನಿರ್ಮಿಸಲಾದ 1020 ಮೆಗಾವ್ಯಾಟ್ ಪುನತ್ಸಂಗ್ಚು-II ಜಲವಿದ್ಯುತ್ ಯೋಜನೆಯ ಉದ್ಘಾಟನೆ.
ಭಾರತ-ಭೂತಾನ ಸಂಬಂಧಗಳು:
ಭೌಗೋಳಿಕ ಸಂಪರ್ಕ:- ಭೂತಾನ ತನ್ನ ಗಡಿಯನ್ನು ನಾಲ್ಕು ಭಾರತದ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಜೊತೆ 699 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ ಮತ್ತು ಭಾರತ ಮತ್ತು ಚೀನಾ ನಡುವೆ ಗಡಿ ತಡೆ ವಲಯವಾಗಿ (ಬಫರ್ ಜೋನ್) ಕಾರ್ಯನಿರ್ವಹಿಸುತ್ತದೆ.
ರಾಜತಾಂತ್ರಿಕ ಸಂಬಂಧಗಳು – 1968 ರಲ್ಲಿ ಸ್ಥಾಪಿಸಲಾಯಿತು.
ಸ್ನೇಹ ಒಪ್ಪಂದ – ಭಾರತ ಭೂತಾನ್ ಸಂಬಂಧಗಳ ಮೂಲ ಚೌಕಟ್ಟು 1949 ರಲ್ಲಿ ಸಹಿ ಹಾಕಲಾದ ಸ್ನೇಹ ಮತ್ತು ಸಹಕಾರ ಒಪ್ಪಂದವಾಗಿದ್ದು, ಫೆಬ್ರವರಿ 2007 ರಲ್ಲಿ ನವೀಕರಿಸಲಾಯಿತು.
ಭಾರತದಿಂದ ಭೂತಾನ್‌ನಲ್ಲಿ ನಾಲ್ಕು ಪ್ರಮುಖ ದ್ವಿಪಕ್ಷೀಯ ಯೋಜನೆಗಳನ್ನು ಪ್ರಾರಂಭಿಸಲಾಗಿದೆ, ಅವುಗಳೆಂದರೆ:
ಜಲವಿದ್ಯುತ್ ಯೋಜನೆಗಳು – ಪುನತ್ಸಂಗ್ಚು ಮತ್ತು ಮಂಗ್ಡೆಚ್ಚು ಯೋಜನೆಗಳು.
ಇಸ್ರೋದ ಭೂ ಕೇಂದ್ರ.
ರುಪೇ ಕಾರ್ಡ್
ಭಾರತದ ರಾಷ್ಟ್ರೀಯ ಜ್ಞಾನ ಜಾಲ
ಆರ್ಥಿಕತೆ – ಭಾರತವು ಆಮದು ಮೂಲ ಮತ್ತು ರಫ್ತು ತಾಣವಾಗಿ ಭೂತಾನ್‌ನ ಅಗ್ರ ವ್ಯಾಪಾರ ಪಾಲುದಾರ ದೇಶವಾಗಿದೆ.
ಭೂತಾನ, BHIM ಆ್ಯಪ್ ಅನ್ನು ಪ್ರಾರಂಭಿಸಿದ ಎರಡನೇ ದೇಶವಾಗಿದೆ.
ಸಾಂಸ್ಕೃತಿಕ ಮತ್ತು ಬೌದ್ಧ ಸಂಪರ್ಕಗಳು: ಹಲವಾರು ಭೂತಾನ್ ಯಾತ್ರಿಕರು ಬೋಧಗಯಾ, ರಾಜಗೀರ್, ನಳಂದಾ, ಸಿಕ್ಕಿಂ, ಉದಯಗಿರಿ ಮತ್ತು ಭಾರತದ ಇತರ ಬೌದ್ಧ ಸ್ಥಳಗಳಿಗೆ ಪ್ರಯಾಣಿಸುತ್ತಾರೆ.
ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು, ಕಿಯೋನಿಕ್ಸ್ (KEONICS) ಸಹಯೋಗದೊಂದಿಗೆ ‘KEO’ ಎಂಬ ನೂತನ ವೈಯಕ್ತಿಕ ಗಣಕಯಂತ್ರವನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು ಗಾತ್ರದಲ್ಲಿ ಚಿಕ್ಕದಾಗಿದ್ದು, ಕೈಗೆಟುಕುವ ದರದಲ್ಲಿದೆ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಪೂರಕವಾಗಿದೆ.
KEO (ಜ್ಞಾನ ಚಾಲಿತ, ಆರ್ಥಿಕವಾಗಿ, ಮುಕ್ತ ಮೂಲ) ಗಣಕಯಂತ್ರದ ಬಗ್ಗೆ:
ಇದೊಂದು ಅತ್ಯಂತ ಕಡಿಮೆ ದರದ ಮತ್ತು ಸಾಂದ್ರ ವಿನ್ಯಾಸದ (ಚಿಕ್ಕ ಗಾತ್ರದ) ವೈಯಕ್ತಿಕ ಕಂಪ್ಯೂಟರ್ ಆಗಿದ್ದು, ಇದನ್ನು ರಾಜ್ಯದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಕಿಯೋನಿಕ್ಸ್ (KEONICS) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
ನವೆಂಬರ್ 2025 ರಲ್ಲಿ ನಡೆದ ಪ್ರತಿಷ್ಠಿತ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ಯಲ್ಲಿ ಇದಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಉದ್ದೇಶ:ಡಿಜಿಟಲ್ಅಂತರವನ್ನು ಕಡಿಮೆ ಮಾಡುವುದು ಇದರ ಪ್ರಾಥಮಿಕ ಗುರಿಯಾಗಿದೆ. ವಿದ್ಯಾರ್ಥಿಗಳು, ಗೃಹ ಬಳಕೆದಾರರು ಹಾಗೂ ಸಣ್ಣ ಉದ್ದಿಮೆಗಳಿಗೆ ಕೈಗೆಟುಕುವ ದರದಲ್ಲಿ, ಕೃತಕ ಬುದ್ಧಿಮತ್ತೆ – ಚಾಲಿತ ಗಣಕೀಕರಣ ಸೌಲಭ್ಯಗಳನ್ನು ಒದಗಿಸುವ ಉದ್ದೇಶವನ್ನು ಇದು ಹೊಂದಿದೆ.
ಡಿಜಿಟಲ್ ನಾಗರೀಕ್ ಕಾರ್ಯಕ್ರಮ
ಇದೀಗ ಸುದ್ದಿಯಲ್ಲಿದೆ:
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ‘ಡಿಜಿಟಲ್ ನಾಗರೀಕ್ ಕಾರ್ಯಕ್ರಮ’ಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ಡಿಜಿಟಲ್ ನಾಗರೀಕ್ ಕಾರ್ಯಕ್ರಮದ ಬಗ್ಗೆ:
ಉದ್ದೇಶ: ರಾಜ್ಯದ ಎಲ್ಲಾ ಸರ್ಕಾರಿಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಲ್ಲಿಸೈಬರ್ ಭದ್ರತೆಹಾಗೂಡಿಜಿಟಲ್ ಸುರಕ್ಷತೆಯಬಗ್ಗೆಅರಿವು ಮೂಡಿಸುವುದು.
ವ್ಯಾಪ್ತಿ: 6 ನೇ ತರಗತಿಯಿಂದ 10 ನೇ ತರಗತಿಯವರೆಗಿನ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಮತ್ತು 1 ಲಕ್ಷ ಶಿಕ್ಷಕರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.
ವಿಷಯವಸ್ತು: ಸುರಕ್ಷಿತ ಇಂಟರ್ನೆಟ್ ಬಳಕೆ, ಸೈಬರ್ ಸುರಕ್ಷತಾ ನಿಯಮಗಳು, ಆನ್‌ಲೈನ್ ಶಿಷ್ಟಾಚಾರ, ಡಿಜಿಟಲ್ ಹಕ್ಕುಗಳು, ಜವಾಬ್ದಾರಿ ಮತ್ತು ದತ್ತಾಂಶ ಗೌಪ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತದೆ.
ಅನುಷ್ಠಾನ: ಈ ಕಾರ್ಯಕ್ರಮವನ್ನು ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಸಾಮಾಜಿಕ ಜಾಲತಾಣ ಸಂಸ್ಥೆ ‘ಮೆಟಾ‘ ದ ಸಹಯೋಗದೊಂದಿಗೆ ಅನುಷ್ಠಾನ ಮಾಡಲಾಗುತ್ತದೆ.
2024-25 ನೇ ಸಾಲಿನಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಯಶಸ್ವಿಯಾಗಿ ಜಾರಿಗೊಳಿಸಲಾಗಿತ್ತು.
ತರಬೇತಿ: ಈ ಉಪಕ್ರಮದ ಭಾಗವಾಗಿ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು (DSERT) ಆರಂಭಿಕ ಹಂತದಲ್ಲಿ ‘ದಿಶಾ ಪೋರ್ಟಲ್’ ಮೂಲಕ 1,00,000 ಶಿಕ್ಷಕರಿಗೆ ತರಬೇತಿ ನೀಡಲಿದೆ. ತರಬೇತಿ ಪಡೆದ ಶಿಕ್ಷಕರು ನಂತರ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಾರೆ.
ಡಿಜಿಟಲ್ ನಾಗರೀಕರ ಟೂಲ್‌ಕಿಟ್ (ಸಾಧನಗಳ ಸಂಕಲನ): ಸುರಕ್ಷಿತ ಮತ್ತು ಜವಾಬ್ದಾರಿಯುತ ಆನ್‌ಲೈನ್ ನಡವಳಿಕೆಯನ್ನು ಉತ್ತೇಜಿಸುವ ಯೋಜನೆಗಳನ್ನು ರೂಪಿಸಲು ಶಾಲೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಈ ಟೂಲ್‌ಕಿಟ್ ಅನ್ನು ಹಂಚಿಕೊಳ್ಳಲಾಗುವುದು.