Blog

  • ಮಕ್ಕಳ ಹಕ್ಕುಗಳ ಸೂಚ್ಯಂಕ

    ಮಕ್ಕಳ ಹಕ್ಕುಗಳ ಸೂಚ್ಯಂಕ

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗವು (KSCPCR) ‘ಮಕ್ಕಳ ಹಕ್ಕುಗಳ ಸೂಚ್ಯಂಕ’ವನ್ನು ಬಿಡುಗಡೆ ಮಾಡಿದೆ. ಇಡೀ ದೇಶದಲ್ಲೇ ಇಂತಹದೊಂದು ಸಮಗ್ರ ದಾಖಲೆಯನ್ನು ಸಿದ್ಧಪಡಿಸಿರುವುದು ಇದೇ ಮೊದಲಾಗಿದೆ.

    ಮಕ್ಕಳ ಹಕ್ಕುಗಳ ಸೂಚ್ಯಂಕದ ಬಗ್ಗೆ:

    • ಸಮಗ್ರ ಮಾಹಿತಿ: ಈ ದಾಖಲೆಯು ಮಕ್ಕಳ ಕಲ್ಯಾಣಕ್ಕಾಗಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಜಾರಿಯಲ್ಲಿರುವ ಕಾನೂನುಗಳು ಮತ್ತು ಯೋಜನೆಗಳ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.
    • ಮೌಲ್ಯಮಾಪನ: ಯೋಜನೆಗಳ ಅನುಷ್ಠಾನದ ಪರಿಣಾಮಕಾರಿತ್ವವನ್ನು ಇದು ವಿಶ್ಲೇಷಿಸುತ್ತದೆ. ಜೊತೆಗೆ, ಪ್ರಸ್ತುತ ವ್ಯವಸ್ಥೆಯನ್ನು ಸುಧಾರಿಸಲು ಅಗತ್ಯವಾದ ಬದಲಾವಣೆಗಳನ್ನು ಸೂಚಿಸುತ್ತದೆ.
    • ಗುರಿ: ಮಕ್ಕಳ ಹಕ್ಕುಗಳು, ರಕ್ಷಣೆ ಮತ್ತು ಕಲ್ಯಾಣವನ್ನು ಖಾತ್ರಿಪಡಿಸುವುದು ಇದರ ಪ್ರಮುಖ ಗುರಿಯಾಗಿದೆ.

    ಈ ಸೂಚ್ಯಂಕದಲ್ಲಿ ಕರ್ನಾಟಕದ 10ನೇ ಸ್ಥಾನ ಪಡೆದಿದೆ:

    • ಶ್ರೇಯಾಂಕ: ಮಕ್ಕಳ ಹಕ್ಕುಗಳು ಮತ್ತು ಯೋಗಕ್ಷೇಮವನ್ನು ಸಾಕಾರಗೊಳಿಸುವಲ್ಲಿ ಕರ್ನಾಟಕದ ಸಾಧನೆಯು ‘ಮಧ್ಯಮ’ ಮಟ್ಟದಲ್ಲಿದೆ. ‘ಮಕ್ಕಳ ಹಕ್ಕುಗಳ ಸೂಚ್ಯಂಕ 2023’ ರ ವರದಿಯ ಪ್ರಕಾರ, ದೇಶದ 30 ರಾಜ್ಯಗಳ ಪೈಕಿ ಕರ್ನಾಟಕವು 10ನೇ ಸ್ಥಾನ ಪಡೆದಿದೆ.
    • ಆಯಾಮಗಳು : ಈ ಸೂಚ್ಯಂಕವನ್ನು ಈ ಕೆಳಗಿನ ಆರು ಪ್ರಮುಖ ಆಯಾಮಗಳ ಆಧಾರದ ಮೇಲೆ ಲೆಕ್ಕಹಾಕಲಾಗಿದೆ:
      1. ಜೀವಿಸುವ ಹಕ್ಕು 
      2. ಬದುಕಲು ಪೂರಕವಾದ ಪರಿಸರದ ಹಕ್ಕು 
      3. ಪೋಷಣೆಯ ಹಕ್ಕು 
      4. ರಕ್ಷಣೆಯ ಹಕ್ಕು
      5. ಶಿಕ್ಷಣದ ಹಕ್ಕು
      6. ಭಾಗವಹಿಸುವಿಕೆಯ ಹಕ್ಕು
  • ಭೂ ವ್ಯವಸ್ಥೆ ವಿಜ್ಞಾನ ಮಂಡಳಿ | ಎಲ್ಲರಿಗಾಗಿ ಯುವ ಎ ಐ (AI) | ಹನೋಯಿ ಸಮಾವೇಶ | ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ (PPV&FRA Act)) | ಅಪಾಯದಲ್ಲಿರುವ ಭಾರತದ ಡುಗಾಂಗ್‌ಗಳು (ಕಡಲ ಹಸುಗಳು) | ಗಿಂಕ್ಗೊ-ಹಲ್ಲಿನ ಕೊಕ್ಕಿನ ತಿಮಿಂಗಿಲಗಳು | ಲೀಡ್‌ ಐಟಿ (LeadIT) | ಕ್ರಿಸ್ಪರ್-ಕ್ಯಾಸ್ ವ್ಯವಸ್ಥೆಗಳು (CRISPR-Cas systems)

    ಭೂ ವ್ಯವಸ್ಥೆ ವಿಜ್ಞಾನ ಮಂಡಳಿ

    ಪಠ್ಯಕ್ರಮ: ಜಿ.ಎಸ್-2/ ಆಡಳಿತ

    ಸಂದರ್ಭ:

    ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿರುವ ಐದು ಪ್ರತ್ಯೇಕ ಸಂಸ್ಥೆಗಳನ್ನು ವಿಲೀನಗೊಳಿಸಿ, ಭೂ ವ್ಯವಸ್ಥೆ ವಿಜ್ಞಾನ ಮಂಡಳಿ ಎಂದು ಏಕೀಕೃತಗೊಳಿಸಿ  ಒಂದೇ ಸೂರಿನಡಿ ತರಲಾಗಿದೆ.

    ಭೂ ವ್ಯವಸ್ಥೆ ವಿಜ್ಞಾನ ಮಂಡಳಿ (“ಅರ್ತ್ ಸಿಸ್ಟಮ್ ಸೈನ್ಸಸ್ ಕೌನ್ಸಿಲ್” -ESSC) ಯ ಬಗ್ಗೆ:

    • ಗುರಿ: ಆಡಳಿತವನ್ನು ಸುಗಮಗೊಳಿಸುವುದು ಮತ್ತು ಬದಲಾಗುತ್ತಿರುವ ಹವಾಮಾನ, ಏರುಪೇರಾಗುವ ಮಾನ್ಸೂನ್ (ಮುಂಗಾರು) ಮತ್ತು ಕರಗುತ್ತಿರುವ ಧ್ರುವ ಪ್ರದೇಶಗಳಿಂದ ಎದುರಾಗುವ ವೈಜ್ಞಾನಿಕ ಮತ್ತು ಮಾನವೀಯ ಸಮಸ್ಯೆಗಳನ್ನು ಒಗ್ಗೂಡಿಸಿ ಪರಿಹರಿಸುವುದು.

    ವಿಲೀನಗೊಂಡ ಸಂಸ್ಥೆಗಳು:

    • ಭಾರತೀಯ ಉಷ್ಣವಲಯದ ಹವಾಮಾನಶಾಸ್ತ್ರ ಸಂಸ್ಥೆ (IITM), ಪುಣೆ
    • ರಾಷ್ಟ್ರೀಯ ಧ್ರುವೀಯ ಮತ್ತು ಸಾಗರ ಸಂಶೋಧನಾ ಕೇಂದ್ರ (NCPOR), ಗೋವಾ
    • ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (NIOT), ಚೆನ್ನೈ
    • ರಾಷ್ಟ್ರೀಯ ಭೂ ವಿಜ್ಞಾನ ಅಧ್ಯಯನ ಕೇಂದ್ರ (NCESS), ತಿರುವನಂತಪುರಂ
    • ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಮತ್ತು ಸೇವೆಗಳ ಕೇಂದ್ರ (INCOIS), ಹೈದರಾಬಾದ

    ಭೂ ವ್ಯವಸ್ಥೆ ವಿಜ್ಞಾನ ಮಂಡಳಿ  (ESSC) ಯು ಎರಡು ಅಧೀನ ಕಚೇರಿಗಳನ್ನು ಒಳಗೊಂಡಿದೆ:

    • ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಗಾಗಿ ರಾಷ್ಟ್ರೀಯ ಕೇಂದ್ರ (NCMRWF).
    • ESSC 2023 ರಲ್ಲಿ ಔಪಚಾರಿಕವಾಗಿ ಒಂದು ಮಂಡಳಿಯಾಗಿ ನೋಂದಾಯಿಸಲ್ಪಟ್ಟಿತು. ಭೂ ವಿಜ್ಞಾನ ಸಚಿವಾಲಯದ (MoES) ಕಾರ್ಯದರ್ಶಿಯವರು ESSC ಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಭೂ ವಿಜ್ಞಾನ ಸಚಿವರು ESSC ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.

    ಎಲ್ಲರಿಗಾಗಿ ಯುವ ಎ ಐ (AI)

    ಪಠ್ಯಕ್ರಮ: ಜಿ.ಎಸ್-3/ ವಿಜ್ಞಾನ ಮತ್ತು ತಂತ್ರಜ್ಞಾನ

    ಸಂದರ್ಭ:

    • ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY), ‘ಇಂಡಿಯಾ ಎಐ ಮಿಷನ್’ ಅಡಿಯಲ್ಲಿ “ಎಲ್ಲರಿಗಾಗಿ ಯುವ ಎ ಐ” (YUVA AI for ALL) ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ. ಇದು ಎಲ್ಲಾ ಭಾರತೀಯರಿಗೆ ಕೃತಕ ಬುದ್ಧಿಮತ್ತೆಯ (AI) ಪ್ರಪಂಚವನ್ನು ಪರಿಚಯಿಸುವ, ತನ್ನದೇ ಆದ ರೀತಿಯ ಮೊದಲ ಉಚಿತ ತರಗತಿ ನೀಡುವುದಾಗಿದೆ.

    ಎಲ್ಲರಿಗಾಗಿ ಯುವ ಎ ಐ (YUVA AI for ALL) ನ ಬಗ್ಗೆ:

    • ಇದು 4.5 ಗಂಟೆಗಳ ಅಲ್ಪಾವಧಿಯ, ಸ್ವಯಂ-ವೇಗದ ತರಗತಿ ಆಗಿದೆ. ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಕಲಿಯಲು ಆಸಕ್ತಿಯಿರುವ ಇತರರಿಗೆ ಎಐ (AI) ನ ಮೂಲಭೂತ ವಿಷಯಗಳನ್ನು ಸುಲಭವಾಗಿಸಲು ಮತ್ತು ಅದು ಪ್ರಪಂಚವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ತೋರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
    • ಗುರಿ: 1 ಕೋಟಿ ನಾಗರಿಕರಿಗೆ ಮೂಲಭೂತ ಎಐ ಕೌಶಲ್ಯಗಳನ್ನು ನೀಡಿ ಸಬಲೀಕರಣಗೊಳಿಸುವುದು. ಇದು ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು, ನೈತಿಕ ಎಐ ಬಳಕೆಯನ್ನು ಉತ್ತೇಜಿಸಲು ಮತ್ತು ಭವಿಷ್ಯಕ್ಕಾಗಿ ಭಾರತದ ಉದ್ಯೋಗಿಗಳನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ.

    ಇಂಡಿಯಾ ಎಐ (AI) ಮಿಷನ್  ಬಗ್ಗೆ:

    • ಪ್ರಾರಂಭ: ಮಾರ್ಚ್ 2024.
    • ಉದ್ದೇಶ : ಇದು ಭಾರತದಲ್ಲಿ ಎಐ ಸಂಶೋಧನೆ, ಅಭಿವೃದ್ಧಿ ಮತ್ತು ನಾವಿನ್ಯತೆಯನ್ನು ಉತ್ತೇಜಿಸುವ ಅನುಷ್ಠಾನ ಸಂಸ್ಥೆ: ಡಿಜಿಟಲ್ ಇಂಡಿಯಾ ಕಾರ್ಪೊರೇಶನ್ ಅಡಿಯಲ್ಲಿರುವ ‘ಇಂಡಿಯಾ ಎಐ’ ಸ್ವತಂತ್ರ ವಹಿವಾಟು ವಿಭಾಗ.

    ಹನೋಯಿ ಸಮಾವೇಶ

    ಪಠ್ಯಕ್ರಮ: ಜಿ.ಎಸ್-3/ ಸೈಬರ್ ಭದ್ರತೆ

    ಸಂದರ್ಭ:

    ಸೈಬರ್ ಅಪರಾಧಗಳನ್ನು ಎದುರಿಸುವ ಗುರಿಯೊಂದಿಗೆ ವಿಯೆಟ್ನಾಂ ದೇಶದ ರಾಜಧಾನಿ ಹನೋಯಿ ನಗರದಲ್ಲಿ ನಡೆದ ಐತಿಹಾಸಿಕ ವಿಶ್ವಸಂಸ್ಥೆಯ ‘ಸೈಬರ್ ಅಪರಾಧಗಳ ವಿರುದ್ಧದ ಸಮಾವೇಶ’ದ ಒಪ್ಪಂದಕ್ಕೆ 72 ರಾಷ್ಟ್ರಗಳು ಸಹಿ ಹಾಕಿವೆ.

    ಹನೋಯಿ ಸಮಾವೇಶದ ಕುರಿತು:

    • ಉದ್ದೇಶ: ಕಾನೂನು ಜಾರಿ ಸಂಸ್ಥೆಗಳ ನಡುವೆ ಅಂತರರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಲು ಇದು ಶಾಸಕಾಂಗ ಚೌಕಟ್ಟನ್ನು ಪ್ರಸ್ತಾಪಿಸುತ್ತದೆ. ಅಷ್ಟೇ ಅಲ್ಲದೆ, ಸೈಬರ್ ಅಪರಾಧಗಳನ್ನು ಎದುರಿಸಲು ಸಾಕಷ್ಟು ಮೂಲಸೌಕರ್ಯಗಳಿಲ್ಲದ ದೇಶಗಳಿಗೆ ತಾಂತ್ರಿಕ ನೆರವನ್ನು ಒದಗಿಸುತ್ತದೆ.
    • ಮೊದಲ ಸಾರ್ವತ್ರಿಕ ಸಮಾವೇಶ: ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಅಪರಾಧಗಳನ್ನು ತನಿಖೆ ಮಾಡಲು ಮತ್ತು ವಿಚಾರಣೆ ನಡೆಸಲು ಈ ಸಮಾವೇಶವು ಮೊದಲ ಸಾರ್ವತ್ರಿಕ ಚೌಕಟ್ಟನ್ನು ಸ್ಥಾಪಿಸುತ್ತದೆ.
    • ಕಾನೂನು ಬದ್ಧ: ವಿಶ್ವಸಂಸ್ಥೆಯ ಸೈಬರ್ ಅಪರಾಧ ಸಮಾವೇಶವು ಪ್ರಬಲವಾದ, ಕಾನೂನು ಬದ್ಧವಾಗಿರುವ ಸಾಧನವಾಗಿದೆ.
    • ಅಳವಡಿಕೆ: ಐದು ವರ್ಷಗಳ ಮಾತುಕತೆಯ ನಂತರ 2024 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇದನ್ನು ಅಳವಡಿಸಿಕೊಂಡಿತು.
    • ಇದಕ್ಕೆ ಸಹಿ ಹಾಕುವ ಪ್ರಕ್ರಿಯೆಯು ಮುಂದಿನ ವರ್ಷದವರೆಗೂ ತೆರೆದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

    ಪ್ರಮುಖ ನಿಬಂಧನೆಗಳು: ಇದು ಈ ಕೆಳಗಿನ ರೀತಿಯ ಅಪರಾಧವನ್ನು ಅಪರಾಧಗಳನ್ನಾಗಿ ಮಾಡುತ್ತದೆ:

    • ಸೈಬರ್-ಅವಲಂಬಿತ ಅಪರಾಧಗಳು : ಅನಧಿಕೃತ ಪ್ರವೇಶ (ಹ್ಯಾಕಿಂಗ್), ದತ್ತಾಂಶ (ಡೇಟಾ) ಹಸ್ತಕ್ಷೇಪ.
    • ಸೈಬರ್-ಶಕ್ತಗೊಂಡ ಅಪರಾಧಗಳು: ಆನ್‌ಲೈನ್ ವಂಚನೆ, ಅನ್ಯೋನ್ಯ ಚಿತ್ರಗಳ ಒಪ್ಪಿಗೆಯಿಲ್ಲದ ಹಂಚಿಕೆ.
    • ಮಕ್ಕಳ ಶೋಷಣೆ: ಆನ್‌ಲೈನ್ ಲೈಂಗಿಕ ದೌರ್ಜನ್ಯ, ನಿಂದನಾತ್ಮಕ ವಿಷಯಗಳ ವಿತರಣೆ, ಅಮಿಷವೊಡ್ಡುವುದು.
    • ಇದು ಗಡಿಗಳನ್ನು ಮೀರಿ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಹಂಚಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ ಮತ್ತು ಸದಸ್ಯ ರಾಷ್ಟ್ರಗಳ ನಡುವೆ 24/7 ಸಹಕಾರ ಜಾಲವನ್ನು ಸ್ಥಾಪಿಸುತ್ತದೆ.
    • ಐತಿಹಾಸಿಕ ಕ್ರಮ: ಅನ್ಯೋನ್ಯ ಚಿತ್ರಗಳ ಒಪ್ಪಿಗೆಯಿಲ್ಲದ ಹಂಚಿಕೆಯನ್ನು ಅಪರಾಧವೆಂದು ಗುರುತಿಸಿದ ಮೊದಲ ಅಂತರರಾಷ್ಟ್ರೀಯ ಒಪ್ಪಂದ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಇದು ಆನ್‌ಲೈನ್ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಸಿಕ್ಕ ಮಹತ್ವದ ಗೆಲುವಾಗಿದೆ.
    • ಜಾರಿ: 40 ನೇ ರಾಷ್ಟ್ರವು ತನ್ನ ಅನುಮೋದನೆಯನ್ನು ಸಲ್ಲಿಸಿದ 90 ದಿನಗಳ ನಂತರ ಇದು ಜಾರಿಗೆ ಬರುತ್ತದೆ.
    • ಸದಸ್ಯ ರಾಷ್ಟ್ರಗಳ ಸಮ್ಮೇಳನ: ಜಾರಿಗೆ ಬಂದ ನಂತರ, ಸದಸ್ಯ ರಾಷ್ಟ್ರಗಳ ನಡುವಿನ ಸಾಮರ್ಥ್ಯ ಮತ್ತು ಸಹಕಾರವನ್ನು ಸುಧಾರಿಸಲು ‘ಸದಸ್ಯ ರಾಷ್ಟ್ರಗಳ ಸಮ್ಮೇಳನ’ವು ನಿಯತಕಾಲಿಕವಾಗಿ ನಡೆಯಲಿದೆ.
    • ಸಚಿವಾಲಯ: ವಿಶ್ವಸಂಸ್ಥೆಯ ಮಾದಕ ದ್ರವ್ಯ ಮತ್ತು ಅಪರಾಧ ಕಚೇರಿಯು (UNODC) ಇದರ ಸಚಿವಾಲಯವಾಗಿ ಕಾರ್ಯನಿರ್ವಹಿಸುತ್ತದೆ. 

    ಸೈಬರ್ ದಾಳಿಗಳ ವಿಧಗಳು:

    • ಮಾಲ್ವೇರ್ (Malware): ಇದು ‘ದುರುದ್ದೇಶಪೂರಿತ ತಂತ್ರಾಂಶ’ದ ಸಂಕ್ಷಿಪ್ತ ರೂಪವಾಗಿದೆ. ಕಂಪ್ಯೂಟರ್, ಸರ್ವರ್ ಅಥವಾ ಕಂಪ್ಯೂಟರ್ ನೆಟ್‌ವರ್ಕ್‌ಗೆ ಹಾನಿ ಮಾಡಲು ವಿನ್ಯಾಸಗೊಳಿಸಲಾದ ಯಾವುದೇ ರೀತಿಯ ತಂತ್ರಾಂಶವನ್ನು ಇದು ಸೂಚಿಸುತ್ತದೆ.
      • ಉದಾಹರಣೆ: ರಾನ್ಸಮ್‌ವೇರ್, ಸ್ಪೈವೇರ್, ವರ್ಮ್‌ಗಳು, ವೈರಸ್‌ಗಳು ಮತ್ತು ಟ್ರೋಜನ್‌ಗಳು ಇವೆಲ್ಲವೂ ಮಾಲ್ವೇರ್‌ನ ವಿಧಗಳಾಗಿವೆ.
    • ಫಿಶಿಂಗ್ (Phishing): ಮೋಸದ ಇಮೇಲ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಬಳಸಿಕೊಂಡು ವೈಯಕ್ತಿಕ ಮಾಹಿತಿಯನ್ನು ಕದಿಯಲು ಪ್ರಯತ್ನಿಸುವ ವಿಧಾನ ಇದಾಗಿದೆ.

    ಮಾಲ್ವೇರ್ (Malware) ನ ವಿಧಗಳು:

    • ಸ್ಪೈವೇರ್ (Spyware): ಇದು ನಿಮ್ಮ ಮೇಲೆ ಕಣ್ಣಿಡುವ ತಂತ್ರಾಂಶವಾಗಿದೆ. ಜಾಹೀರಾತುಗಳನ್ನು ನಿಮ್ಮ ಯಂತ್ರಣಕ್ಕೆ ಕಳುಹಿಸಲು ಇದು ನಿಮ್ಮ ಇಂಟರ್ನೆಟ್ ಚಟುವಟಿಕೆಗಳನ್ನು ಹುಡುಕಾಟ ಮಾಡುತ್ತಾ ಗಮನಿಸುತ್ತದೆ.
    • ವೈರಸ್ (Virus): ಇದೊಂದು ಸಾಂಕ್ರಾಮಿಕ ಕಾರ್ಯಕ್ರಮ ಅಥವಾ ಕೋಡ್ ಆಗಿದ್ದು, ಮತ್ತೊಂದು ತಂತ್ರಾಂಶಕ್ಕೆ ಅಂಟಿಕೊಳ್ಳುತ್ತದೆ ಮತ್ತು ಆ ತಂತ್ರಾಂಶ ಚಾಲನೆಯಾದಾಗ ತನ್ನನ್ನು ತಾನೇ ಪುನರುತ್ಪಾದಿಸಿಕೊಳ್ಳುತ್ತದೆ.
      • ಸಾಮಾನ್ಯವಾಗಿ ಕಂಪ್ಯೂಟರ್‌ಗಳ ನಡುವೆ ಸಾಫ್ಟ್‌ವೇರ್ ಅಥವಾ ಫೈಲ್‌ಗಳನ್ನು ಹಂಚಿಕೊಳ್ಳುವ ಮೂಲಕ ಇದು ಹರಡುತ್ತದೆ.
    • ವರ್ಮ್ (Worm): ಇದು ತನ್ನನ್ನು ತಾನೇ ನಕಲು ಮಾಡಿಕೊಳ್ಳುವ ಮತ್ತು ಕಂಪ್ಯೂಟರ್‌ನಲ್ಲಿನ ದತ್ತಾoಶ ಮತ್ತು ಫೈಲ್‌ಗಳನ್ನು ನಾಶಪಡಿಸುವ ಕಾರ್ಯಕ್ರಮವಾಗಿದೆ.
      • ಡ್ರೈವ್ ಖಾಲಿಯಾಗುವವರೆಗೂ ವ್ಯವಸ್ಥೆಯನ್ನು ಕಾರ್ಯಗೊಳಿಸುವ ಕಡತಗಳು ಮತ್ತು ದತ್ತಾoಶದ ಕಡತಗಳನ್ನು “ತಿನ್ನುವ” ಕೆಲಸವನ್ನು ವರ್ಮ್‌ಗಳು ಮಾಡುತ್ತವೆ.

    ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತದಲ್ಲಿ ಇತ್ತೀಚೆಗೆ ತೆಗೆದುಕೊಂಡ ಕ್ರಮಗಳು:

    • ಸೈಬರ್ ಸುರಕ್ಷಿತ್ ಭಾರತ ಉಪಕ್ರಮ: ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಐಟಿ ಸಿಬ್ಬಂದಿಗೆ ಸುರಕ್ಷತಾ ಕ್ರಮಗಳ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯೊಂದಿಗೆ 2018 ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
    • ರಾಷ್ಟ್ರೀಯ ಸೈಬರ್ ಭದ್ರತಾ ಸಮನ್ವಯ ಕೇಂದ್ರ (NCCC): ನೈಜ ಸಮಯದ ಸೈಬರ್ ಬೆದರಿಕೆಗಳನ್ನು ಪತ್ತೆಹಚ್ಚಲು, ದೇಶಕ್ಕೆ ಬರುವ ಇಂಟರ್ನೆಟ್ ಟ್ರಾಫಿಕ್ ಮತ್ತು ಸಂವಹನ ಮೆಟಾಡೇಟಾವನ್ನು ಸ್ಕ್ಯಾನ್ ಮಾಡಲು 2017 ರಲ್ಲಿ NCCC ಅನ್ನು ಅಭಿವೃದ್ಧಿಪಡಿಸಲಾಯಿತು.
    • ಸೈಬರ್ ಸ್ವಚ್ಛತಾ ಕೇಂದ್ರ: ವೈರಸ್‌ಗಳು ಮತ್ತು ಮಾಲ್ವೇರ್‌ಗಳನ್ನು ಅಳಿಸಿಹಾಕುವ ಮೂಲಕ ಇಂಟರ್ನೆಟ್ ಬಳಕೆದಾರರು ತಮ್ಮ ಕಂಪ್ಯೂಟರ್ ಮತ್ತು ಸಾಧನಗಳನ್ನು ಸ್ವಚ್ಛಗೊಳಿಸಲು 2017 ರಲ್ಲಿ ಈ ವೇದಿಕೆಯನ್ನು ಪರಿಚಯಿಸಲಾಯಿತು.
    • ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ – ಇಂಡಿಯಾ (CERT-IN): ಹ್ಯಾಕಿಂಗ್ ಮತ್ತು ಫಿಶಿಂಗ್‌ನಂತಹ ಸೈಬರ್ ಭದ್ರತಾ ಬೆದರಿಕೆಗಳನ್ನು ನಿರ್ವಹಿಸುವ ನೋಡಲ್ ಏಜೆನ್ಸಿ ಇದಾಗಿದೆ.

    ಸಂಬಂಧಿತ ಕಾನೂನುಗಳು 

    • ಮಾಹಿತಿ ತಂತ್ರಜ್ಞಾನ ಕಾಯಿದೆ, 2000.
    • ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ, 2019 (2022ರಲ್ಲಿ ಹಿಂಪಡೆಯಲಾಗಿದೆ).
    • ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯಿದೆ, 2023 (DPDP ಕಾಯಿದೆ).
    •  ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ನಿಯಮಗಳು, 2025.

    ಅಂತರರಾಷ್ಟ್ರೀಯ ಕಾರ್ಯವಿಧಾನಗಳು

    • ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ITU): ಇದು ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದ್ದು, ದೂರಸಂಪರ್ಕ ಮತ್ತು ಸೈಬರ್ ಸುರಕ್ಷತೆಯ ವಿಷಯಗಳ ಪ್ರಮಾಣೀಕರಣ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

    ಸೈಬರ್ ಅಪರಾಧಗಳಿಗಾಗಿ ಬುಡಾಪೆಸ್ಟ್ ಸಮಾವೇಶ:

      • ರಾಷ್ಟ್ರೀಯ ಕಾನೂನುಗಳನ್ನು ಸಮನ್ವಯಗೊಳಿಸುವುದು, ತನಿಖಾ ತಂತ್ರಗಳನ್ನು ಸುಧಾರಿಸುವುದು ಮತ್ತು ರಾಷ್ಟ್ರಗಳ ನಡುವಿನ ಸಹಕಾರವನ್ನು ಹೆಚ್ಚಿಸುವ ಮೂಲಕ ಇಂಟರ್ನೆಟ್ ಮತ್ತು ಕಂಪ್ಯೂಟರ್ ಅಪರಾಧಗಳನ್ನು (ಸೈಬರ್ ಅಪರಾಧ) ಎದುರಿಸಲು ಪ್ರಯತ್ನಿಸುವ ಅಂತರರಾಷ್ಟ್ರೀಯ ಒಪ್ಪಂದ ಇದಾಗಿದೆ.
      • ಇದು 1 ಜುಲೈ 2004 ರಂದು ಜಾರಿಗೆ ಬಂದಿತು.
    • ಭಾರತವು ಈ ಸಮಾವೇಶಕ್ಕೆ ಸಹಿಯನ್ನು ಹಾಕಿಲ್ಲ.

    ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ (PPV&FRA Act))

    ಪಠ್ಯಕ್ರಮ: ಜಿ.ಎಸ್-3/ ಕೃಷಿ

    ಸಂದರ್ಭ:

    • ಕೇಂದ್ರ ಸರ್ಕಾರವು ‘ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ’ (PPV&FRA Act) ಯನ್ನು ಪಾಲುದಾರರಿಂದ ಸಲಹೆಗಳನ್ನು ಅಳವಡಿಸಿಕೊಳ್ಳಲು ತಿದ್ದುಪಡಿ ಮಾಡಲಿದೆ ಎಂದು ಕೇಂದ್ರ ಕೃಷಿ ಸಚಿವರು ತಿಳಿಸಿದ್ದಾರೆ.

    ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ (ಪ್ರೊಟೆಕ್ಷನ್ ಆಫ್ ಪ್ಲಾಂಟ್ ವೆರೈಟಿ ಅಂಡ್ ಫಾರ್ಮರ್ಸ್ ರೈಟ್ಸ್ ಆಕ್ಟ್ – PPV&FRA Act), 2001 ರ ಬಗ್ಗೆ:

    • ಉದ್ದೇಶ: ಈ ಕೆಳಗಿನವುಗಳಿಗೆ ಪರಿಣಾಮಕಾರಿ ವ್ಯವಸ್ಥೆಯನ್ನು ಸ್ಥಾಪಿಸುವುದು:
    1. ಸಸ್ಯ ತಳಿಗಳ ಸಂರಕ್ಷಣೆ.
    2. ರೈತರು ಮತ್ತು ಸಸ್ಯ ತಳಿಗಳನ್ನು ಅಭಿವೃದ್ಧಿಪಡಿಸುವವರ ಹಕ್ಕುಗಳ ರಕ್ಷಣೆ
    3. ಹೊಸ ತಳಿಯ ಸಸ್ಯಗಳ ಅಭಿವೃದ್ಧಿಯನ್ನು ಉತ್ತೇಜಿಸುವುದು.

    ಮಹತ್ವ :

    • ಇದು ನಾವೀನ್ಯತೆ ಮತ್ತು ರೈತರ ಸಾಂಪ್ರದಾಯಿಕ ಹಕ್ಕುಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.
    • ಕೃಷಿ ಜೀವವೈವಿಧ್ಯದ ಸಂರಕ್ಷಣೆಯನ್ನು ಉತ್ತೇಜಿಸುತ್ತದೆ.
    • ಗ್ರಾಮೀಣ ಜೀವನೋಪಾಯವನ್ನು ರಕ್ಷಿಸುವ ಜೊತೆಗೆ ಬೀಜ ಉದ್ಯಮದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

    ಅಪಾಯದಲ್ಲಿರುವ ಭಾರತದ ಡುಗಾಂಗ್‌ಗಳು (ಕಡಲ ಹಸುಗಳು)

    ಪಠ್ಯಕ್ರಮ: ಜಿ.ಎಸ್-3/ ಸುದ್ದಿಯಲ್ಲಿರುವ ಪ್ರಭೇದಗಳು

    ಸಂದರ್ಭ:

    • ಅಬುಧಾಬಿಯಲ್ಲಿ ನಡೆದ ಐಯುಸಿಎನ್ (IUCN) ಸಂರಕ್ಷಣಾ ಕಾಂಗ್ರೆಸ್‌ನಲ್ಲಿ ಬಿಡುಗಡೆಯಾದ ಇತ್ತೀಚಿನ ವರದಿಯು ಭಾರತದ ಡುಗಾಂಗ್ ಜನಸಂಖ್ಯೆಗೆ ಎದುರಾಗಿರುವ ಅಪಾಯದ ಬಗ್ಗೆ ಎಚ್ಚರಿಸಿದೆ.

    ಡುಗಾಂಗ್‌ಗಳು (ಡುಗಾಂಗ್ ಡುಗಾನ್)

    • ಡುಗಾಂಗ್‌ಗಳು ಪ್ರಮುಖವಾಗಿ ಸಸ್ಯಾಹಾರಿಗಳಾಗಿದ್ದು, ದಿನಕ್ಕೆ 30 ರಿಂದ 40 ಕೆಜಿ ಕಡಲ ಹುಲ್ಲನ್ನು (seagrass) ತಿನ್ನುತ್ತವೆ.
    • ಇವುಗಳನ್ನು “ಕಡಲ ಹಸುಗಳು” ಎಂದು ಕರೆಯಲಾಗುತ್ತದೆ. ಇವು ಹಿಂದೂ ಮಹಾಸಾಗರ ಮತ್ತು ಪಶ್ಚಿಮ ಪೆಸಿಫಿಕ್ ಮಹಾಸಾಗರದ ಆಳವಿಲ್ಲದ ಕರಾವಳಿ ನೀರಿನಲ್ಲಿ ಶಾಂತಿಯಿಂದ ಕಡಲ ಹುಲ್ಲನ್ನು ಮೇಯುತ್ತವೆ.
    • ಕರಾವಳಿ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವಲ್ಲಿ ಮತ್ತು ಮೀನು ಉತ್ಪಾದನೆಗೆ ಸಹಾಯ ಮಾಡುವಲ್ಲಿ ಅವು ಪ್ರಮುಖ ಪಾತ್ರವಹಿಸುವುದರಿಂದ, ಇವುಗಳನ್ನು “ಸಮುದ್ರದ ರೈತರು ಅಥವಾ ತೋಟಗಾರರು” ಎಂದು ಕರೆಯಲಾಗುತ್ತದೆ.
    • ಭೌಗೋಳಿಕ ವ್ಯಾಪ್ತಿ: ಈ ಶಾಂತ ಸ್ವಭಾವದ ದೈತ್ಯ ಜೀವಿಗಳು ಕರಾವಳಿಯುದ್ದಕ್ಕೂ ಬೆಚ್ಚಗಿನ ನೀರಿನಲ್ಲಿ ಕಂಡುಬರುತ್ತವೆ. ಇವು ಮುಖ್ಯವಾಗಿ ಕೊಲ್ಲಿಗಳು ಮತ್ತು ಲಗೂನ್‌ಗಳಂತಹ ಶಾಂತವಾದ ಆವಾಸಸ್ಥಾನಗಳಲ್ಲಿ ಕಂಡುಬರುವ ಕಡಲ ಹುಲ್ಲು ಹಾಸುಗಳಿಗೆ ಸೀಮಿತವಾಗಿವೆ.
    • ಹಂಚಿಕೆ: ಇವು ಭಾರತದಲ್ಲಿ ಮನ್ನಾರ್ ಕೊಲ್ಲಿ, ಪಾಕ್ ಕೊಲ್ಲಿ, ಕಚ್ ಕೊಲ್ಲಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಂಡುಬರುತ್ತವೆ.
    • ಬೆದರಿಕೆಗಳು: ಮಾಂಸಕ್ಕಾಗಿ ಬೇಟೆಯಾಡುವುದು, ವಾಣಿಜ್ಯ ಮೀನುಗಾರಿಕೆಯಿಂದಾಗಿ ಆಕಸ್ಮಿಕವಾಗಿ ಬಲೆಯಲ್ಲಿ ಸಿಲುಕಿ ಸಾವು ಮತ್ತು ಆವಾಸಸ್ಥಾನದ ನಾಶ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕಳೆದ ಹಲವಾರು ದಶಕಗಳಲ್ಲಿ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ.

    ಸಂರಕ್ಷಣಾ ಸ್ಥಿತಿ:

    • IUCN ಕೆಂಪು ಪಟ್ಟಿ – ದುರ್ಬಲ (Vulnerable).
    • ವನ್ಯಜೀವಿ (ಸಂರಕ್ಷಣೆ) ಕಾಯಿದೆ, 1972 –ಅನುಸೂಚಿ I

    ಭಾರತದಲ್ಲಿ ಸಂರಕ್ಷಣಾ ಪ್ರಯತ್ನಗಳು

    • ಡುಗಾಂಗ್ ಸಂರಕ್ಷಣಾ ಮೀಸಲು: ತಮಿಳುನಾಡಿನ ಪಾಕ್ ಕೊಲ್ಲಿಯಲ್ಲಿ ಭಾರತದ ಮೊದಲ ಡುಗಾಂಗ್ ಸಂರಕ್ಷಣಾ ಮೀಸಲು ಪ್ರದೇಶವನ್ನು ಸ್ಥಾಪಿಸಲಾಗಿದೆ. ಇದನ್ನು ಸಾಗರ ಜೀವವೈವಿಧ್ಯ ಸಂರಕ್ಷಣೆಗೆ ಜಾಗತಿಕ ಮಾದರಿ ಎಂದು ಐಯುಸಿಎನ್ (IUCN) ಗುರುತಿಸಿದೆ.
    • ರಾಷ್ಟ್ರೀಯ ಡುಗಾಂಗ್ ಚೇತರಿಕೆ ಕಾರ್ಯಕ್ರಮ: ಆವಾಸಸ್ಥಾನಗಳನ್ನು ಸಂರಕ್ಷಿಸಲು ಮತ್ತು ಡುಗಾಂಗ್ ಸಂರಕ್ಷಣೆಯನ್ನು ಉತ್ತೇಜಿಸಲು ತಮಿಳುನಾಡು, ಗುಜರಾತ್ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಹಯೋಗದೊಂದಿಗೆ ಇದನ್ನು ಪ್ರಾರಂಭಿಸಲಾಗಿದೆ.
    • ಅಂತರರಾಷ್ಟ್ರೀಯ ಸಹಕಾರ: ಭಾರತದ ಪ್ರಯತ್ನಗಳು CITES ಮತ್ತು ವಲಸೆ ಪ್ರಭೇದಗಳ ಸಮಾವೇಶದಂತಹ (CMS) ಜಾಗತಿಕ ಸಂರಕ್ಷಣಾ ಚೌಕಟ್ಟುಗಳೊಂದಿಗೆ ಹೊಂದಿಕೆಯಾಗುತ್ತವೆ.

    ಗಿಂಕ್ಗೊ-ಹಲ್ಲಿನ ಕೊಕ್ಕಿನ ತಿಮಿಂಗಿಲಗಳು

    ಪಠ್ಯಕ್ರಮ: ಜಿ.ಎಸ್-3/ ಸುದ್ದಿಯಲ್ಲಿರುವ ಪ್ರಭೇದಗಳು

    ಸಂದರ್ಭ:

    • ಇತ್ತೀಚೆಗೆ, ವಿಜ್ಞಾನಿಗಳ ತಂಡವೊಂದು ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಅಪರೂಪದ ‘ಗಿಂಕ್ಗೊ-ಹಲ್ಲಿನ ಕೊಕ್ಕಿನ ತಿಮಿಂಗಿಲಗಳನ್ನು’ ಪತ್ತೆಹಚ್ಚಿದೆ.

    ಗಿಂಕ್ಗೊ-ಹಲ್ಲಿನ ಕೊಕ್ಕಿನ ತಿಮಿಂಗಿಲ (ಮೆಸೊಪ್ಲೋದೊಂ ಗಿಂಕ್ಗೋಡೆನ್ಸ್) ಗಳ ಬಗ್ಗೆ:

    • ಇವು ಕೊಕ್ಕಿನ ತಿಮಿಂಗಿಲಗಳ  24 ಪ್ರಭೇದಗಳಲ್ಲಿ ಒಂದಾಗಿವೆ.
    • ಕೊಕ್ಕಿನ ತಿಮಿಂಗಿಲಗಳು ಭೂಮಿಯ ಮೇಲಿರುವ ಅತ್ಯಂತ ಆಳವಾಗಿ ಧುಮುಕುವ ಸಸ್ತನಿಗಳಾಗಿವೆ.
    • ಇವು ತಮ್ಮ ಜೀವನದ ಹೆಚ್ಚಿನ ಸಮಯವನ್ನು ಸಾಗರಗಳಲ್ಲಿ ಕಳೆಯುತ್ತವೆ. ಉಸಿರಾಡಲು ಕೇವಲ ಕೆಲವೇ ನಿಮಿಷಗಳ ಕಾಲ ಮೇಲೆ ಬರುತ್ತವೆ, ಸಾಮಾನ್ಯವಾಗಿ ಕರಾವಳಿಯಿಂದ ಬಹಳ ದೂರದಲ್ಲಿರುತ್ತವೆ.
    • ಇವು ಪಶ್ಚಿಮ ಪೆಸಿಫಿಕ್‌ನ ಉಷ್ಣವಲಯದ ಮತ್ತು ಬೆಚ್ಚಗಿನ-ಸಮಶೀತೋಷ್ಣ ನೀರಿನಲ್ಲಿ ಕಂಡುಬರುತ್ತವೆ.
    • IUCN ಸ್ಥಿತಿ: ದತ್ತಾಂಶದ ಕೊರತೆ (DD).

    ಲೀಡ್‌ ಐಟಿ (LeadIT)

    ಪಠ್ಯಕ್ರಮ: ಜಿ.ಎಸ್-3/ ಪರಿಸರ

    ಸಂದರ್ಭ 

    • ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆದ COP30 ಶೃಂಗಸಭೆಯಲ್ಲಿ, ಭಾರತದ ಕೇಂದ್ರ ಪರಿಸರ ಸಚಿವರು ಲೀಡ್‌ಐಟಿ ಉದ್ಯಮ ನಾಯಕರ ದುಂಡುಮೇಜಿನ ಸಭೆ’ ಯನ್ನು ಉದ್ದೇಶಿಸಿ ಮಾತನಾಡಿದರು. ಕಡಿಮೆ ಇಂಗಾಲದ ಕೈಗಾರಿಕಾ ಪರಿವರ್ತನೆಗಳನ್ನು ಚಾಲನೆ ಮಾಡುವಲ್ಲಿ ಭಾರತದ ಪಾತ್ರವನ್ನು ಅವರು ಪುನರುಚ್ಚರಿಸಿದರು.

    ಲೀಡ್‌ಐಟಿ (LeadIT) ಯ ಬಗ್ಗೆ:

    • ಪ್ರಾರಂಭ: ವಿಶ್ವಸಂಸ್ಥೆಯ ಹವಾಮಾನ ಕ್ರಿಯೆ ಶೃಂಗಸಭೆಯಲ್ಲಿ, ವಿಶ್ವ ಆರ್ಥಿಕ ವೇದಿಕೆಯ ಬೆಂಬಲದೊಂದಿಗೆ, ಭಾರತ ಮತ್ತು ಸ್ವೀಡನ್ ಜಂಟಿಯಾಗಿ 2019 ರಲ್ಲಿ ಇದನ್ನು ಪ್ರಾರಂಭಿಸಿದವು.
    • ಉದ್ದೇಶ: ಉಕ್ಕು, ಸಿಮೆಂಟ್, ಅಲ್ಯೂಮಿನಿಯಂ, ರಾಸಾಯನಿಕಗಳು ಮತ್ತು ಭಾರೀ ಸಾರಿಗೆಯಂತಹ ‘ನಿಯಂತ್ರಿಸಲು ಕಷ್ಟಕರವಾದ’ ಹಾಗೂ ಹೆಚ್ಚು ಇಂಗಾಲ ಹೊರಸೂಸುವ ಕೈಗಾರಿಕೆಗಳನ್ನು, 2050 ರ ವೇಳೆಗೆ ‘ನಿವ್ವಳ-ಶೂನ್ಯ’ ಹೊರಸೂಸುವಿಕೆ  ಸ್ಥಿತಿಗೆ ಪರಿವರ್ತಿಸುವುದನ್ನು ತ್ವರಿತಗೊಳಿಸುವುದು ಇದರ ಉದ್ದೇಶವಾಗಿದೆ.
    • ಇದು ನಿರ್ದಿಷ್ಟವಾಗಿ ‘ಕೈಗಾರಿಕಾ ಇಂಗಾಲ ಮುಕ್ತಗೊಳಿಸುವಿಕೆ’ಯ ಮೇಲೆ ಗಮನಹರಿಸಿದ ಪ್ರಪ್ರಥಮ ಜಾಗತಿಕ ಉನ್ನತ ಮಟ್ಟದ ಉಪಕ್ರಮಗಳಲ್ಲಿ ಒಂದಾಗಿದೆ.
    • ಲೀಡ್‌ಐಟಿ 2.0 (2024–2026): ದುಬೈನಲ್ಲಿ ನಡೆದ COP28 ಶೃಂಗಸಭೆಯಲ್ಲಿ ಇದನ್ನು ಅಂಗೀಕರಿಸಲಾಯಿತು. ಇದು ಕೇವಲ ‘ಸಂವಾದ’ದಿಂದ ಪ್ರಾಯೋಗಿಕ ‘ಅನುಷ್ಠಾನ’ದ ಹಂತಕ್ಕೆ ಸಾಗುವ ಧ್ಯೇಯವನ್ನು ಹೊಂದಿದೆ.

    ಕ್ರಿಸ್ಪರ್-ಕ್ಯಾಸ್ ವ್ಯವಸ್ಥೆಗಳು (CRISPR-Cas systems)

    ವಿಜ್ಞಾನ ಮತ್ತು ತಂತ್ರಜ್ಞಾನ

    ಸಂದರ್ಭ: 

    • ಅಂತರರಾಷ್ಟ್ರೀಯ ಮಟ್ಟದಲ್ಲಿ ಪೇಟೆಂಟ್ ಹೊಂದಿರುವ ‘ಕ್ರಿಸ್ಪರ್-ಕ್ಯಾಸ್’ (CRISPR-Cas) ವ್ಯವಸ್ಥೆಗಳಿಗೆ ಪರ್ಯಾಯವಾಗಿ, ಐಸಿಎಆರ್‌ (ICAR) ನ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ (IIRR) ಯ ವಿಜ್ಞಾನಿಗಳು ‘ಟಿಎನ್‌ಪಿಬಿ ಪ್ರೋಟೀನ್‌ಗಳನ್ನು’ (TnpB proteins) ಬಳಸಿಕೊಂಡು, ಸಂಪೂರ್ಣ ಸ್ವದೇಶಿ ನಿರ್ಮಿತ ವಂಶವಾಹಿ ತಿದ್ದುವಿಕೆ (ಜಿನೋಮ್-ಎಡಿಟಿಂಗ್ -GE) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

    ನಿಮಗಿದು ತಿಳಿದಿದೆಯೇ?

    • ಮೇ 2025 ರಲ್ಲಿ, ಭಾರತೀಯ ಭತ್ತ ಸಂಶೋಧನಾ ಸಂಸ್ಥೆ (IIRR) ಮತ್ತು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI) ಅಭಿವೃದ್ಧಿಪಡಿಸಿದ ವಂಶವಾಹಿ ತಿದ್ದುಪಡಿ ಮಾಡಿದ ಎರಡು ಭತ್ತದ ಪ್ರಭೇದಗಳನ್ನು ICAR ಬಿಡುಗಡೆ ಮಾಡಿತು.
    • IIRR ಸಂಸ್ಥೆಯು CRISPR-Cas12a ತಂತ್ರಜ್ಞಾನ ಬಳಸಿ, ‘ಸೈಟೊಕಿನಿನ್ ಆಕ್ಸಿಡೇಸ್ 2’ ವಂಶವಾಹಿಯನ್ನು ಮಾರ್ಪಾಡು ಮಾಡುವ ಮೂಲಕ ಸಾಂಬಾ ಮಸೂರಿ ಭತ್ತದ ಇಳುವರಿಯನ್ನು ಹೆಚ್ಚಿಸಿದೆ. ಹಾಗೆಯೇ, IARI ಸಂಸ್ಥೆಯು CRISPR-Cas9 ಬಳಸಿ, ‘DST’ ಜೀನ್ ಅನ್ನು ತಿದ್ದುಪಡಿ ಮಾಡುವ ಮೂಲಕ ಎಂಟಿಯು-1010 (ಕಾಟನ್‌ದೊರ ಸನ್ನಲು) ತಳಿಯಲ್ಲಿ ಬರಗಾಲ ಮತ್ತು ಉಪ್ಪಿನಂಶವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದೆ.

    ಟಿಎನ್‌ಪಿಬಿ (TnpB) ಅಥವಾ ಟ್ರಾನ್ಸ್‌ಪೋಸನ್-ಸಂಬಂಧಿತ ಪ್ರೋಟೀನ್‌ಗಳು (Transposon-associated proteins):

    • ಇದು ಒಂದು ರೀತಿಯ “ಆಣ್ವಿಕ ಕತ್ತರಿ” (molecular scissors) ಯಂತೆ ಕೆಲಸ ಮಾಡುತ್ತದೆ. ಇದು ಸಸ್ಯದ ಡಿಎನ್‌ಎ ಅನ್ನು ಅತ್ಯಂತ ನಿಖರವಾಗಿ ಕತ್ತರಿಸಿ, ಮಾರ್ಪಡಿಸುತ್ತದೆ. ವಿಶೇಷವೆಂದರೆ, ಇದು ಯಾವುದೇ ಹೊರಗಿನ ಜೀನ್‌ಗಳನ್ನು ಸೇರಿಸದೆಯೇ, ನಮಗೆ ಬೇಕಾದ ಗುಣಲಕ್ಷಣಗಳನ್ನು ಸಸ್ಯದಲ್ಲಿ ತರುತ್ತದೆ.
    • ಗಾತ್ರದಲ್ಲಿ ದೊಡ್ಡದಾದ Cas9 ಮತ್ತು Cas12a ಪ್ರೋಟೀನ್‌ಗಳಿಗೆ ಹೋಲಿಸಿದರೆ, TnpB ತುಂಬಾ ಚಿಕ್ಕದಾಗಿದೆ (ಕೇವಲ 408 ಅಮೈನೋ ಆಮ್ಲಗಳು). ಆದ್ದರಿಂದ, ಇದನ್ನು ವೈರಲ್ ವಾಹಕಗಳ ಮೂಲಕ ಸಸ್ಯದ ಜೀವಕೋಶದೊಳಗೆ ಕಳುಹಿಸುವುದು ಸುಲಭ. ಇದರಿಂದ ಪ್ರಯೋಗಾಲಯದ ಸಂಕೀರ್ಣ ಅಂಗಾಂಶ ಕೃಷಿ  ವಿಧಾನಗಳನ್ನು ಅವಲಂಬಿಸುವುದು ತಪ್ಪುತ್ತದೆ.

    ವಂಶವಾಹಿ ತಿದ್ದುವಿಕೆ ತಂತ್ರಜ್ಞಾನ (Gene Editing Technology) ದ ಬಗ್ಗೆ:

    • ಇದು ಒಂದು ಜೀವಿಯ ಡಿಎನ್‌ಎ ನಲ್ಲಿ ಬದಲಾವಣೆ ಮಾಡಲು ಬಳಸುವ ತಂತ್ರಜ್ಞಾನವಾಗಿದೆ. ಇದರ ಮೂಲಕ ವಂಶವಾಹಿಯ (ಜೀನೋಮ್) ನಿರ್ದಿಷ್ಟ ಭಾಗಗಳಲ್ಲಿ ಆನುವಂಶಿಕ ಅಂಶಗಳನ್ನು ಸೇರಿಸಬಹುದು, ತೆಗೆದುಹಾಕಬಹುದು ಅಥವಾ ಮಾರ್ಪಡಿಸಬಹುದಾಗಿದೆ.

    ಕ್ರಿಸ್ಪರ್-ಕ್ಯಾಸ್ 9 ತಂತ್ರಜ್ಞಾನ (CRISPR Cas9 Technology) ದ ಬಗ್ಗೆ:

    • ಸಂಕ್ಷಿಪ್ತ ರೂಪ: ಕ್ಲಸ್ಟರ್ಡ್ ರೆಗ್ಯುಲರ್ಲಿ ಇಂಟರ್‌ಸ್ಪೇಸ್ಡ್ ಶಾರ್ಟ್ ಪ್ಯಾಲಿಂಡ್ರೊಮಿಕ್ ರಿಪೀಟ್ಸ್ (Clustered Regularly Interspaced Short Palindromic Repeats).
    • ಮಹತ್ವ: ಈ ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ಬಳಸಿ, ವಿಜ್ಞಾನಿಗಳು ಜೀವಿಗಳ ಡಿಎನ್‌ಎಯಲ್ಲಿ ಬೇಕಾದ ಬದಲಾವಣೆಗಳನ್ನು ಮಾಡಬಹುದು.
    • ಇದರಲ್ಲಿರುವ ‘ಕ್ಯಾಸ್ 9 (Cas9)’ ಎಂಬ ಕಿಣ್ವವು ಒಂದು ಅಣು ಕತ್ತರಿಯಂತೆ ಕೆಲಸ ಮಾಡುತ್ತದೆ. ಎಲ್ಲಿ ಕತ್ತರಿಸಬೇಕು ಎಂಬುದನ್ನು, ನಿರ್ದಿಷ್ಟ ಡಿಎನ್‌ಎ ವಿನ್ಯಾಸಕ್ಕೆ ಹೊಂದಿಕೆಯಾಗುವಂತೆ ಸಿದ್ಧಪಡಿಸಿದ ಆರ್‌ಎನ್‌ಎ (RNA) ಅಣುಗಳು ತೋರಿಸಿಕೊಡುತ್ತವೆ.
    • ವಂಶವಾಹಿ ತಿದ್ದುವಿಕೆ (ಜಿನೋಮ್ ಎಡಿಟಿಂಗ್): ಇದು ಜೀವಿಯೊಂದರ ಜೀನೋಮ್‌ನಲ್ಲಿರುವ ಜೀನ್ (ವಂಶವಾಹಿ) ಗಳನ್ನೇ ತಿದ್ದುಪಡಿ ಮಾಡುವುದಾಗಿದೆ. ಇದರಲ್ಲಿ ಹೊರಗಿನ ಯಾವುದೇ ವಿದೇಶಿ ವಂಶವಾಹಿಗಳನ್ನು ಸೇರಿಸುವುದಿಲ್ಲ; ಬದಲಿಗೆ ನಮಗೆ ಬೇಕಾದ ಬದಲಾವಣೆಗಳನ್ನು ಅಸ್ತಿತ್ವದಲ್ಲಿರುವ ವಂಶವಾಹಿಗಳಲ್ಲೇ ಮಾಡಲಾಗುತ್ತದೆ. 
    • ಕುಲಾಂತರಿ (ಜನಟಿಕಲಿ ಮೋಡಿಫೈಡ್): ಇದರಲ್ಲಿ ಒಂದು ಜೀವಿಗೆ ಹೊಸ ಗುಣವನ್ನು ನೀಡಲು, ಅದಕ್ಕೆ ಸಂಬಂಧವಿಲ್ಲದ ಬೇರೊಂದು ಜೀವಿಯ ವಿದೇಶಿ ಜೀನ್‌ಗಳನ್ನು ತಂದು ಸೇರಿಸಲಾಗುತ್ತದೆ.

    ನಿಯಂತ್ರಕ ಸಂಸ್ಥೆಗಳು:

    • ಜನಟಿಕ್ ಇಂಜಿನಿಯರಿಂಗ್ ಅಪ್ಪರೈಸಲ್ ಸಮಿತಿ (GEAC): ಇದು ಕೇಂದ್ರ ಪರಿಸರ ಸಚಿವಾಲಯದ (MoEFCC) ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ನಿಯಂತ್ರಕ ಸಂಸ್ಥೆಯಾಗಿದೆ. ಕುಲಾಂತರಿ ಜೀವಿಗಳನ್ನು (GMOs) ಪರಿಶೀಲಿಸುವುದು ಮತ್ತು ಅವುಗಳಿಗೆ ಅನುಮತಿ ನೀಡುವುದು ಇದರ ಕಾರ್ಯವಾಗಿದೆ.
    • ಜೈವಿಕ ಸುರಕ್ಷತೆಗಾಗಿ ಕಾರ್ಟಜೆನಾ ಶಿಷ್ಟಾಚಾರ (Cartagena Protocol on Biosafety): ಇದು ಜೀವವೈವಿಧ್ಯತೆಯ ಸಂರಕ್ಷಣೆಗಿರುವ ಒಂದು ಅಂತರರಾಷ್ಟ್ರೀಯ ಒಪ್ಪಂದವಾಗಿದೆ. ಕುಲಾಂತರಿ ಜೀವಿಗಳಿಂದ (GMOs) ಪರಿಸರಕ್ಕೆ ಹಾನಿಯಾಗದಂತೆ ಅವುಗಳನ್ನು ಸುರಕ್ಷಿತವಾಗಿ ನಿರ್ವಹಿಸುವುದನ್ನು ಇದು ಖಚಿತಪಡಿಸುತ್ತದೆ.
    • ನಗೋಯಾ-ಕೌಲಾಲಂಪುರ (Nagoya-Kuala Lumpur): ಇದು ಕಾರ್ಟಜೆನಾ ಶಿಷ್ಟಾಚಾರಕ್ಕೆ ಸೇರಿಸಲಾದ ಒಂದು ಹೆಚ್ಚುವರಿ ಒಪ್ಪಂದವಾಗಿದೆ. ಒಂದು ವೇಳೆ ಕುಲಾಂತರಿ ಜೀವಿಗಳಿಂದ ಹಾನಿ ಸಂಭವಿಸಿದರೆ, ಅದಕ್ಕೆ ಯಾರು ಹೊಣೆ ಮತ್ತು ಅದಕ್ಕೆ ಏನು ಪರಿಹಾರ ಎಂಬುದನ್ನು ಇದು ನಿರ್ಧರಿಸುತ್ತದೆ.
  • ಟಾಟಾ ಟ್ರಾನ್ಸ್‌ಫಾರ್ಮೇಷನ್ (ಪರಿವರ್ತನಾ) ಪ್ರಶಸ್ತಿ, 2025

    ಟಾಟಾ ಟ್ರಾನ್ಸ್‌ಫಾರ್ಮೇಷನ್ (ಪರಿವರ್ತನಾ) ಪ್ರಶಸ್ತಿ, 2025

    ಇದೀಗ ಸುದ್ದಿಯಲ್ಲಿದೆ:

    • ನ್ಯೂಯಾರ್ಕ್ ಅಕಾಡೆಮಿ ಆಫ್ ಸೈನ್ಸಸ್ ಮತ್ತು ಟಾಟಾ ಸನ್ಸ್ ಸಂಸ್ಥೆಗಳು ಜಂಟಿಯಾಗಿ, 2025ನೇ ಸಾಲಿನ ಪ್ರತಿಷ್ಠಿತ ‘ಟಾಟಾ ಟ್ರಾನ್ಸ್‌ಫಾರ್ಮೇಷನ್ ಪ್ರಶಸ್ತಿ’ಗೆ ಬೆಂಗಳೂರು ಮೂಲದ ಮೂವರು ವಿಜ್ಞಾನಿಗಳನ್ನು ವಿಜೇತರನ್ನಾಗಿ ಘೋಷಿಸಿವೆ.

    ಪ್ರಶಸ್ತಿ ವಿಜೇತರು ಮತ್ತು ಅವರ ಕ್ಷೇತ್ರಗಳು:

    1. ಪಡುಬಿದ್ರಿ ವಿ. ಶಿವಪ್ರಸಾದ್: ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (NCBS).
    2. ಬಾಲಸುಬ್ರಮಣಿಯನ್ ಗೋಪಾಲ್: ಭಾರತೀಯ ವಿಜ್ಞಾನ ಸಂಸ್ಥೆ (IISc). ಇವರು ಆಹಾರ ಭದ್ರತೆಯಲ್ಲಿನ  ಸಂಶೋಧನೆಗಾಗಿ ಆಯ್ಕೆಯಾಗಿದ್ದಾರೆ.
    3. ಅಂಬರೀಶ್ ಘೋಷ್: ಇವರು ಸುಸ್ಥಿರತೆ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಾಗಿ ಆಯ್ಕೆಯಾಗಿದ್ದಾರೆ.

    ಆಯ್ಕೆ ಪ್ರಕ್ರಿಯೆ ಮತ್ತು ಪ್ರಶಸ್ತಿ ವಿವರ

    • ಆಯ್ಕೆ: ದೇಶದ 27 ರಾಜ್ಯಗಳಿಂದ ಸಲ್ಲಿಕೆಯಾಗಿದ್ದ 212 ನಾಮನಿರ್ದೇಶನಗಳನ್ನು ಪರಿಶೀಲಿಸಿ, ವಿಜ್ಞಾನಿಗಳು, ವೈದ್ಯರು, ತಂತ್ರಜ್ಞರು ಮತ್ತು ಇಂಜಿನಿಯರ್‌ಗಳನ್ನೊಳಗೊಂಡ ಅಂತರರಾಷ್ಟ್ರೀಯ ತೀರ್ಪುಗಾರರ ಮಂಡಳಿಯು ಈ ವಿಜೇತರನ್ನು ಅಂತಿಮಗೊಳಿಸಿದೆ.
    • ಬಹುಮಾನ: ಪ್ರತಿಯೊಬ್ಬ ವಿಜೇತರಿಗೆ ತಮ್ಮ ಸಂಶೋಧನೆಯನ್ನು ಮುಂದುವರಿಸಲು ಮತ್ತು ಅದರ ನೈಜ ಪರಿಣಾಮವನ್ನು ವಿಸ್ತರಿಸಲು ತಲಾ ₹2 ಕೋಟಿ ಅನುದಾನವನ್ನು ನೀಡಲಾಗುತ್ತದೆ.
  • ಕೋಡೆಕ್ಸ್ ಅಲಿಮೆಂಟರಿಯಸ್ ಆಯೋಗ (Codex Alimentarius Commission) | ಜಲ ಆಯವ್ಯಯ (Water Budgeting) | ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ | ಎಎಂಆರ್ 2.0 ಮೇಲಿನ ರಾಷ್ಟ್ರೀಯ ಕಾರ್ಯ ಯೋಜನೆ ಬಿಡುಗಡೆ ಮಾಡಲಾಗಿದೆ | ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಯ ಪಟ್ಟಿಯಿಂದ ಅನರ್ಹ ಫಲಾನುಭವಿಗಳ ತೆರವು | ಪರಿಷ್ಕೃತ “ಉಡಾನ್” (UDAN) ಪ್ರಾದೇಶಿಕ ವಾಯು ಸಂಪರ್ಕ ಯೋಜನೆ

    ಕೋಡೆಕ್ಸ್ ಅಲಿಮೆಂಟರಿಯಸ್ ಆಯೋಗ (Codex Alimentarius Commission)

    ಪಠ್ಯಕ್ರಮ: ಜಿ.ಎಸ್-3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಭಾರತವು ಏಷ್ಯಾ ಪ್ರದೇಶಕ್ಕಾಗಿ ಕೋಡೆಕ್ಸ್ ಅಲಿಮೆಂಟೇರಿಯಸ್ ಆಯೋಗದ ಕಾರ್ಯಕಾರಿ ಸಮಿತಿಗೆ 2027ರ CAC50 (50ನೇ ಅಧಿವೇಶನ) ಮುಕ್ತಾಯದವರೆಗೆ ಮರುಚುನಾಯಿತವಾಗಿದೆ.

    ಕೋಡೆಕ್ಸ್ ಅಲಿಮೆಂಟರಿಯಸ್ ಆಯೋಗ (CAC) ದ ಬಗ್ಗೆ:

    • ಸ್ಥಾಪನೆ: 1963 ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಜಂಟಿಯಾಗಿ ಸ್ಥಾಪಿಸಿದವು.
    • ಉದ್ದೇಶ: ಗ್ರಾಹಕರ ಆರೋಗ್ಯವನ್ನು ರಕ್ಷಿಸುವುದು ಮತ್ತು ಆಹಾರ ವ್ಯಾಪಾರದಲ್ಲಿ ನ್ಯಾಯಯುತ ಅಭ್ಯಾಸಗಳನ್ನು ಉತ್ತೇಜಿಸುವುದು.
    • ಸದಸ್ಯರು: ಯುರೋಪಿಯನ್ ಒಕ್ಕೂಟವೂ ಸೇರಿದಂತೆ ಒಟ್ಟು 189 ದೇಶಗಳು.
    • ಸಭೆಗಳು: ವಾರ್ಷಿಕ ಅಧಿವೇಶನಗಳು ಜಿನೇವಾ ಮತ್ತು ರೋಮ್ ನಡುವೆ ಪರ್ಯಾಯವಾಗಿ ನಡೆಯುತ್ತವೆ.

    ಜಲ ಆಯವ್ಯಯ (Water Budgeting)

    ಪಠ್ಯಕ್ರಮ: ಜಿ.ಎಸ್-3/ ಕೃಷಿ

    ಸಂದರ್ಭ:

    • ಸ್ಥಳೀಯ ಜಲ ಭದ್ರತೆಯನ್ನು ಹೆಚ್ಚಿಸಲು ಮಹತ್ವಾಕಾಂಕ್ಷಿ ವಲಯಗಳಲ್ಲಿ (Aspiration Blocks) ಜಲ ಆಯವ್ಯಯದ ಕುರಿತು ನೀತಿ ಆಯೋಗವು  ವರದಿಯನ್ನು ಬಿಡುಗಡೆ ಮಾಡಿದೆ.

    ಜಲ ಆಯವ್ಯಯ (ವಾಟರ್ ಬಜೆಟಿಂಗ್) ಬಗ್ಗೆ:

    • ವ್ಯಾಖ್ಯಾನ: ಕೃಷಿ, ಮನೆಬಳಕೆ, ಜಾನುವಾರು, ಕೈಗಾರಿಕೆ ಮತ್ತು ಪರಿಸರ ವ್ಯವಸ್ಥೆ ಸೇರಿದಂತೆ ಎಲ್ಲಾ ವಲಯಗಳಲ್ಲಿ ನೀರಿನ ಲಭ್ಯತೆ ಮತ್ತು ನೀರಿನ ಬೇಡಿಕೆಯನ್ನು ವ್ಯವಸ್ಥಿತವಾಗಿ ಅಂದಾಜು ಮಾಡುವುದಾಗಿದೆ.
    • ಇದು ಸುಸ್ಥಿರ ಅಭಿವೃದ್ಧಿ ಗುರಿ – SDG 6 (ಶುದ್ಧ ನೀರು ಮತ್ತು ನೈರ್ಮಲ್ಯ) ಮತ್ತು ನೀರಿನ ಬಳಕೆಯ ದಕ್ಷತೆಯ ಕಡೆಗಿನ ರಾಷ್ಟ್ರೀಯ ಪ್ರಯತ್ನಗಳಿಗೆ ನೇರವಾಗಿ ಬೆಂಬಲ ನೀಡುತ್ತದೆ.
    • ಮಹತ್ವ: ಜಲ ಜೀವನ್ ಮಿಷನ್, ಜಲ ಶಕ್ತಿ ಅಭಿಯಾನ ಮತ್ತು ಅಟಲ್ ಭೂಜಲ ಯೋಜನೆಯಡಿ ವಿಕೇಂದ್ರೀಕೃತ ಯೋಜನೆಯನ್ನು ಬಲಪಡಿಸಲು ಇದು ಸಹಕಾರಿಯಾಗಿದೆ.

    ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ

    ಪಠ್ಯಕ್ರಮ: ಇತರೆ

    ಸಂದರ್ಭ:

    • ಚಿಲಿ ದೇಶದ ಮಾಜಿ ರಾಷ್ಟ್ರಪತಿಯಾದ ಮಿಚೆಲ್ ಬ್ಯಾಚೆಲೆಟ್ ಅವರು 2024ನೇ ಸಾಲಿನ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಯ ಬಗ್ಗೆ:

    • ಇದು ಭಾರತದಲ್ಲಿನ ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಸ್ಥಾಪಿಸಿದ ವಾರ್ಷಿಕವಾಗಿ ನೀಡುವ ಪ್ರಶಸ್ತಿಯಾಗಿದೆ.
    • ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಗೌರವಾರ್ಥ ಪ್ರಶಸ್ತಿಗೆ ಈ ಹೆಸರನ್ನು ಇಡಲಾಗಿದೆ.
    • ಇದನ್ನು 1986ರಲ್ಲಿ ಸ್ಥಾಪಿಸಲಾಯಿತು.
    • ಪ್ರಶಸ್ತಿ ಮೊತ್ತ: ಇತ್ತೀಚೆಗೆ ಈ ಪ್ರಶಸ್ತಿಯ ನಗದು ಮೊತ್ತವನ್ನು ₹25 ಲಕ್ಷದಿಂದ ₹1 ಕೋಟಿಗೆ ಹೆಚ್ಚಿಸಲಾಗಿದೆ. 
    • ಉದ್ದೇಶ: ಅಂತರರಾಷ್ಟ್ರೀಯ ಶಾಂತಿ, ನಿಶ್ಶಸ್ತ್ರೀಕರಣ, ಅಭಿವೃದ್ಧಿ, ನೂತನ ಅಂತರರಾಷ್ಟ್ರೀಯ ಆರ್ಥಿಕ ಕ್ರಮ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಲು ಗಮನಾರ್ಹ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. 
    • ಸಾಮಾನ್ಯವಾಗಿ, ಇಂದಿರಾ ಗಾಂಧಿಯವರ ಜನ್ಮದಿನವಾದ ನವೆಂಬರ್ 19 ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 

    ಈ ಪ್ರಶಸ್ತಿಯನ್ನು ಮೂರು ಕ್ಷೇತ್ರಗಳಲ್ಲಿ ನೀಡಲಾಗುತ್ತದೆ:

    • ಶಾಂತಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ಹಾಗೂ ಅದನ್ನು ಕಾಪಾಡುವ ನಿಟ್ಟಿನಲ್ಲಿ ನಡೆಸಲಾದ ಮಹತ್ವದ ಪ್ರಯತ್ನಗಳನ್ನು ಇದು ಗುರುತಿಸುತ್ತದೆ.
    • ನಿಶ್ಯಸ್ತ್ರೀಕರಣ: ಪರಮಾಣು ಅಸ್ತ್ರಗಳು ಸೇರಿದಂತೆ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಕಡಿತ ಮತ್ತು ಅವುಗಳ ಸಂಪೂರ್ಣ ನಿರ್ಮೂಲನೆಗೆ ನೀಡಿದ ಕೊಡುಗೆಗಳನ್ನು ಈ ವಿಭಾಗದಲ್ಲಿ ಪರಿಗಣಿಸಲಾಗುತ್ತದೆ.
    • ಅಭಿವೃದ್ಧಿ: ಜಾಗತಿಕವಾಗಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ಬಡತನ ನಿರ್ಮೂಲನೆಗೆ ಸಹಕರಿಸುವ ಕಾರ್ಯಗಳನ್ನು ಇದು ಗೌರವಿಸುತ್ತದೆ.

    ಎಎಂಆರ್ 2.0 ಮೇಲಿನ ರಾಷ್ಟ್ರೀಯ ಕಾರ್ಯ ಯೋಜನೆ ಬಿಡುಗಡೆ ಮಾಡಲಾಗಿದೆ

    ಪಠ್ಯಕ್ರಮ: ಜಿ.ಎಸ್-2/ ಆರೋಗ್ಯ ಸಂಬಂಧಿತ ವಿಷಯಗಳು

    ಸಂದರ್ಭ:

    • ಇತ್ತೀಚೆಗೆ, ಕೇಂದ್ರ ಆರೋಗ್ಯ ಸಚಿವರು ಸೂಕ್ಷ್ಮಾಣುಜೀವಿ ಪ್ರತಿರೋಧ (ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್) ದ ಮೇಲಿನ ರಾಷ್ಟ್ರೀಯ ಕಾರ್ಯ ಯೋಜನೆಯ ಎರಡನೇ ಆವೃತ್ತಿಯನ್ನು (NAP – AMR, 2025–29) ಬಿಡುಗಡೆ ಮಾಡಿದರು.

    ಸೂಕ್ಷ್ಮಾಣುಜೀವಿ ಪ್ರತಿರೋಧ (ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್) ದ ಮೇಲಿನ ರಾಷ್ಟ್ರೀಯ ಕಾರ್ಯ ಯೋಜನೆ 2.0 ದ ಬಗ್ಗೆ:

    • ಇದು ಎನ್‌ಎಪಿ-ಎಎಂಆರ್ 1.0 (2017–2021) ರಲ್ಲಿದ್ದ ಲೋಪದೋಷಗಳನ್ನು ಸರಿಪಡಿಸುತ್ತದೆ. ಇದರಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವುದು, ಸಾರ್ವಜನಿಕ ಜಾಗೃತಿಯನ್ನು ವಿಸ್ತರಿಸುವುದು, ಖಾಸಗಿ ವಲಯದ ಸಹಭಾಗಿತ್ವವನ್ನು ಹೆಚ್ಚಿಸುವುದು ಮತ್ತು ನಿಯಂತ್ರಣ ಹಾಗೂ ಪ್ರಯೋಗಾಲಯಗಳ ಸಾಮರ್ಥ್ಯವನ್ನು ಸುಧಾರಿಸುವುದು  ಸೇರಿದಂತೆ ಅನೇಕ ಅಂಶಗಳು ಸೇರಿವೆ.

    ಸೂಕ್ಷ್ಮಾಣುಜೀವಿ ಪ್ರತಿರೋಧ (ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್) ದ ಕುರಿತ:

    • ವ್ಯಾಖ್ಯಾನ: ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಮತ್ತು ಪರಾವಲಂಬಿ ಜೀವಿಗಳು ಕಾಲಕ್ರಮೇಣ ಬದಲಾವಣೆಗೆ ಒಳಗಾಗಿ, ಔಷಧಿಗಳಿಗೆ ಸ್ಪಂದಿಸುವುದನ್ನು ನಿಲ್ಲಿಸಿದಾಗ ಈ ಸ್ಥಿತಿ ಉಂಟಾಗುತ್ತದೆ. ಇದರಿಂದ ಸೋಂಕಿನ ಚಿಕಿತ್ಸೆ ಕಷ್ಟಕರವಾಗುತ್ತದೆ ಹಾಗೂ ರೋಗ ಹರಡುವಿಕೆ, ತೀವ್ರ ಅನಾರೋಗ್ಯ ಮತ್ತು ಸಾವಿನ ಅಪಾಯ ಹೆಚ್ಚಾಗುತ್ತದೆ.
    • ಪ್ರತಿ ವರ್ಷ ಸುಮಾರು 700,000 ಜನರು ಎಎಂಆರ್ (AMR) ನಿಂದ ಸಾವನ್ನಪ್ಪುತ್ತಿದ್ದಾರೆ. 2050 ರ ಹೊತ್ತಿಗೆ ಈ ಸಂಖ್ಯೆ 1 ಕೋಟಿಗೆ ಏರಬಹುದು ಮತ್ತು ಜಾಗತಿಕ ಒಟ್ಟು ಆಂತರಿಕ ಉತ್ಪನ್ನದ (GDP) ಶೇಕಡಾ 3.8 ರಷ್ಟು ಈ ಸಮಸ್ಯೆಯಿಂದಲೇ ವ್ಯಾಪಿಸಬಹುದು.

    ಸೂಕ್ಷ್ಮಾಣುಜೀವಿ ಪ್ರತಿರೋಧಕ್ಕೇ ಕಾರಣಗಳು:

    • ಪ್ರತಿಜೀವಕ ಔಷಧಿಗಳ (Antibiotics) ಅತಿಯಾದ ಮತ್ತು ದುರ್ಬಳಕೆ.
    • ಅಸಮರ್ಪಕ ಔಷಧದ ಪ್ರಮಾಣ ಮತ್ತು ಅವಧಿ.
    • ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವನೆ (ಸ್ವಯಂ-ಚಿಕಿತ್ಸೆ).
    • ಆಹಾರಕ್ಕಾಗಿ ಬಳಸುವ ಪ್ರಾಣಿಗಳಲ್ಲಿ ಪ್ರತಿಜೀವಕ ಔಷಧಿಗಳ ಬಳಕೆ.
    • ಅಸಮರ್ಪಕ ಸ್ವಚ್ಛತೆ.

    ಸೂಕ್ಷ್ಮಾಣುಜೀವಿ ಪ್ರತಿರೋಧದ ವಿರುದ್ಧ ಜಾಗತಿಕ ಪ್ರಯತ್ನಗಳು:

    • ಸೂಕ್ಷ್ಮಾಣುಜೀವಿ ಪ್ರತಿರೋಧ(AMR) ದ ಮೇಲಿನ ಜಾಗತಿಕ ಕಾರ್ಯ ಯೋಜನೆ.
    • ವಿಶ್ವ ಸೂಕ್ಷ್ಮಾಣುಜೀವಿ ಪ್ರತಿರೋಧದ ಜಾಗೃತಿ ಸಪ್ತಾಹ (WAAW).
    • ಜಾಗತಿಕ ಸೂಕ್ಷ್ಮಾಣುಜೀವಿ ಪ್ರತಿರೋಧ ಮತ್ತು ಬಳಕೆಯ ಕಣ್ಗಾವಲು ವ್ಯವಸ್ಥೆ (GLASS).
    • ಜಾಗತಿಕ ಪ್ರತಿಜೀವಕ ಔಷಧಿ ಸಂಶೋಧನೆ ಮತ್ತು ಅಭಿವೃದ್ಧಿ ಪಾಲುದಾರಿಕೆ (GARDP).

    ಭಾರತದಲ್ಲಿ ಸೂಕ್ಷ್ಮಾಣುಜೀವಿ ಪ್ರತಿರೋಧದ ವಿರುದ್ಧ ತೆಗೆದುಕೊಂಡ ಕ್ರಮಗಳು:

    • ಸೂಕ್ಷ್ಮಾಣುಜೀವಿ ಪ್ರತಿರೋಧ (AMR) ದ ಮೇಲಿನ ರಾಷ್ಟ್ರೀಯ ಕಾರ್ಯ ಯೋಜನೆ (NAP – AMR)
    • ಸೂಕ್ಷ್ಮಾಣುಜೀವಿ ಪ್ರತಿರೋಧ (AMR) ದ ಕಣ್ಗಾವಲು ಜಾಲ.
    • ಭಾರತದ ‘ರೆಡ್ ಲೈನ್’ ಅಭಿಯಾನ: ವೈದ್ಯರ ಚೀಟಿ ಇದ್ದರೆ ಮಾತ್ರ ಮಾರಾಟ ಮಾಡಬೇಕಾದ ಪ್ರತಿಜೀವಕ ಔಷಧಿಗಳ ಪ್ಯಾಕೆಟ್ ಮೇಲೆ ‘ಕೆಂಪು ಗೆರೆ’ಯನ್ನು ಕಡ್ಡಾಯವಾಗಿ ಮುದ್ರಿಸಬೇಕೆಂದು ಈ ಅಭಿಯಾನವು ಪ್ರತಿಪಾದಿಸುತ್ತದೆ. ಔಷಧ ಅಂಗಡಿಗಳಲ್ಲಿ ನೇರವಾಗಿ (ವೈದ್ಯರ ಸಲಹೆಯಿಲ್ಲದೆ) ಪ್ರತಿಜೀವಕ ಔಷಧಿಗಳನ್ನು ಮಾರಾಟ ಮಾಡುವುದನ್ನು ತಡೆಯಲು ಇದೊಂದು ದಿಟ್ಟ ಕ್ರಮವಾಗಿದೆ.

    ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಯ ಪಟ್ಟಿಯಿಂದ ಅನರ್ಹ ಫಲಾನುಭವಿಗಳ ತೆರವು

    ಪಠ್ಯಕ್ರಮ: ಜಿ.ಎಸ್-3/ ಆಹಾರ ಭದ್ರತೆ

    ಸಂದರ್ಭ:

    • ಕಳೆದ ನಾಲ್ಕೈದು ತಿಂಗಳುಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಯ ಅಡಿಯಲ್ಲಿ ಉಚಿತ ಮಾಸಿಕ ಪಡಿತರ ಯೋಜನೆಯಿಂದ ಸುಮಾರು 2.25 ಕೋಟಿ ಅನರ್ಹ ಫಲಾನುಭವಿಗಳನ್ನು ಕೇಂದ್ರ ಸರ್ಕಾರವು ತೆಗೆದುಹಾಕಿದೆ.

    ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA), 2013 ರ ಬಗ್ಗೆ:

    • ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಬರುವ “ಜೀವಿಸುವ ಹಕ್ಕಿ”ನ ಅಡಿಯಲ್ಲಿ “ಆಹಾರದ ಹಕ್ಕು” ಅಂತರ್ಗತವಾಗಿದೆ.
    • ಗುರಿ: ಇದು ಭಾರತದ ಜನಸಂಖ್ಯೆಯ ಹೆಚ್ಚಿನ ವರ್ಗಕ್ಕೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವುದು.
    • 2011 ರ ಜನಗಣತಿ ದತ್ತಾಂಶದ ಆಧಾರದ ಮೇಲೆ, ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ (TPDS) ಅಡಿಯಲ್ಲಿ ಇದು ಸರಿಸುಮಾರು 81.35 ಕೋಟಿ ಜನರಿಗೆ ನೆರವಾಗಿದೆ.

    ಇಷ್ಟು ಫಲಾನುಭವಿಗಳನ್ನು ಒಳಗೊಂಡಿದೆ:

    • ಗ್ರಾಮೀಣ ಜನಸಂಖ್ಯೆಯ 75% ರಷ್ಟು.
    • ನಗರ ಜನಸಂಖ್ಯೆಯ 50% ರಷ್ಟು.

     

    ಫಲಾನುಭವಿಗಳ ವರ್ಗಗಳು: ಈ ಕಾಯ್ದೆಯು ಫಲಾನುಭವಿಗಳನ್ನು ಎರಡು ಮುಖ್ಯ ಗುಂಪುಗಳಾಗಿ ವಿಂಗಡಿಸುತ್ತದೆ, ಅವುಗಳೆಂದರೆ-

    • ಅಂತ್ಯೋದಯ ಅನ್ನ ಯೋಜನೆ (AAY) ಕುಟುಂಬಗಳು: ಪ್ರತಿ ಕುಟುಂಬ ತಿಂಗಳಿಗೆ 35 ಕೆಜಿ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
    • ಆದ್ಯತಾ ಕುಟುಂಬದ (PHH) ವ್ಯಕ್ತಿಗಳು: ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
    • ಪ್ರಸ್ತುತ, ಈ ವರ್ಗಗಳ ಅಡಿಯಲ್ಲಿ ಬರುವ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ಉಚಿತ ಆಹಾರ ಧಾನ್ಯಗಳನ್ನು (ಗೋಧಿ ಮತ್ತು ಅಕ್ಕಿ) ವಿತರಿಸಲಾಗುತ್ತಿದೆ.

    ವಿತರಣೆಯ ಪ್ರಮಾಣ:

    • ಭಾರತವು ಪ್ರಸ್ತುತ 19 ಕೋಟಿಗೂ ಹೆಚ್ಚು ಪಡಿತರ ಚೀಟಿದಾರರನ್ನು ಹೊಂದಿದೆ ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 5 ಲಕ್ಷ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ.
    • ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಬಳಸಿಕೊಳ್ಳುತ್ತದೆ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಗೂ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳಂತಹ (ICDS) ಯೋಜನೆಗಳನ್ನು ಸಂಯೋಜಿಸುತ್ತದೆ.

    ಕೇವಲ ‘ಅರ್ಹ’ ಫಲಾನುಭವಿಗಳನ್ನು ಗುರುತಿಸುವುದು:

    • ಕೇವಲ ನೈಜ ಫಲಾನುಭವಿಗಳು ಅಂದರೆ, ನಿಜವಾಗಿಯೂ ಸಹಾಯದ ಅಗತ್ಯವಿರುವವರು ಮಾತ್ರ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.
    • ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ವಿವಿಧ ಮಾನದಂಡಗಳನ್ನು ಉಪಯೋಗಿಸಿಕೊಂಡು ಅನರ್ಹ ವ್ಯಕ್ತಿಗಳನ್ನು ಗುರುತಿಸಿ ಮತ್ತು ಪರಿಶೀಲನೆ ಹಾಗೂ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ರಾಜ್ಯ ಸರ್ಕಾರಗಳೊಂದಿಗೆ ಪಟ್ಟಿಗಳನ್ನು ಹಂಚಿಕೊಂಡಿದೆ.
    • ಅನರ್ಹ ಹೆಸರುಗಳನ್ನು ಗುರುತಿಸಿ ತೆಗೆದುಹಾಕಲು ಇದು ಆಧಾರ್-ಆಧಾರಿತ ಪರಿಶೀಲನೆಯನ್ನು ಬಳಸಿದೆ.

    ಪಟ್ಟಿಯಿಂದ ಹೆಸರುಗಳನ್ನುತೆಗೆದುಹಾಕಲು ಪ್ರಮುಖ ಕಾರಣಗಳು:

    • ನಾಲ್ಕು ಚಕ್ರದ ವಾಹನಗಳ ಒಡೆತನ ಹೊಂದಿದ್ದರೆ.
    • ಅರ್ಹತೆ ಮಿತಿ ಮೀರಿ ಹೆಚ್ಚಿನ ಆದಾಯ ಹೊಂದಿದ್ದರೆ.
    • ಕಂಪನಿಯ ನಿರ್ದೇಶಕ ಸ್ಥಾನಗಳನ್ನು ಹೊಂದಿದ್ದರೆ.
    • ಮೃತಪಟ್ಟ ಫಲಾನುಭವಿಗಳು.

    ಪರಿಷ್ಕೃತ “ಉಡಾನ್” (UDAN) ಪ್ರಾದೇಶಿಕ ವಾಯು ಸಂಪರ್ಕ ಯೋಜನೆ

    ಪಠ್ಯಕ್ರಮ: ಜಿ.ಎಸ್-3/ ಆರ್ಥಿಕತೆ

    ಸಂದರ್ಭ:

    • ಪರಿಷ್ಕೃತ ಉಡಾನ್ (UDAN) ಪ್ರಾದೇಶಿಕ ವಾಯು ಸಂಪರ್ಕ ಯೋಜನೆಯನ್ನು ಏಪ್ರಿಲ್ 2027 ರ ನಂತರವೂ ವಿಸ್ತರಿಸಲು ಕೇಂದ್ರ ಸರ್ಕಾರವು 30,000 ಕೋಟಿ ರೂಪಾಯಿಗಳ ವೆಚ್ಚವನ್ನು ಪ್ರಸ್ತಾಪಿಸಿದೆ.
    • ಇದರಲ್ಲಿ, ಹೊಸ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ 18,000 ಕೋಟಿ ರೂ.ಗಳನ್ನು ಮತ್ತು ಸೇವೆ ಲಭ್ಯವಿಲ್ಲದ ಪ್ರದೇಶಗಳನ್ನು ಸಂಪರ್ಕಿಸುವ ವಿಮಾನಯಾನ ಸಂಸ್ಥೆಗಳನ್ನು ಬೆಂಬಲಿಸಲು “ಲಾಭದಾಯಕತೆಯ ಅಂತರದ ಧನಸಹಾಯ” (ವಯಬಿಲಿಟಿ ಗ್ಯಾಪ್ ಫಂಡಿಂಗ್ -VGF) ಕ್ಕಾಗಿ 12,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

    ಉಡಾನ್ ಯೋಜನೆಯ ಬಗ್ಗೆ:

    • ಇದು 2016 ರಲ್ಲಿ ಪ್ರಾರಂಭಿಸಲಾದ ಪ್ರಾದೇಶಿಕ ಸಂಪರ್ಕ ಯೋಜನೆಯಾಗಿದೆ.
    • ಮೊದಲ ಉಡಾನ್ ವಿಮಾನವು 2017 ರಲ್ಲಿ ಶಿಮ್ಲಾ ಮತ್ತು ದೆಹಲಿ ನಡುವೆ ಹಾರಾಟ ನಡೆಸಿತು.
    • ಸಚಿವಾಲಯ: ನಾಗರಿಕ ವಿಮಾನಯಾನ ಸಚಿವಾಲಯ.
    • ಗುರಿ: ಎರಡನೇ (Tier-2) ಮತ್ತು ಮೂರನೇ ಸ್ತರದ (Tier-3) ನಗರಗಳನ್ನು ಪ್ರಮುಖ ಕೇಂದ್ರಗಳಿಗೆ ಸಂಪರ್ಕಿಸುವ ಮೂಲಕ ಸಾಮಾನ್ಯ ನಾಗರಿಕರಿಗೆ ವಿಮಾನ ಪ್ರಯಾಣವನ್ನು ಕೈಗೆಟುಕುವ ಮತ್ತು ಸುಲಭವಾಗಿ ಸಿಗುವಂತೆ ಮಾಡುವುದು.

    ಅನುಷ್ಠಾನ :

    • “ಲಾಭದಾಯಕತೆಯ ಅಂತರದ ಧನಸಹಾಯ” (ವಯಬಿಲಿಟಿ ಗ್ಯಾಪ್ ಫಂಡಿಂಗ್ -VGF): ಇದು ಕೈಗೆಟುಕುವ ದರಗಳನ್ನು ಖಚಿತಪಡಿಸಿಕೊಳ್ಳಲು ವಿಮಾನಯಾನ ಸಂಸ್ಥೆಗಳಿಗೆ ನೀಡುವ ಆರ್ಥಿಕ ಬೆಂಬಲವಾಗಿದೆ.
    • ದರಗಳು ಕೈಗೆಟುಕುವಂತೆ ನೋಡಿಕೊಳ್ಳಲು ವಿಮಾನ ಪ್ರಯಾಣ  ದರಗಳ ಮೇಲೆ ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ.
  • “ಸನ್ಮಿತ್ರ” ಉಪಕ್ರಮ

    “ಸನ್ಮಿತ್ರ” ಉಪಕ್ರಮ

    ಇದೀಗ ಸುದ್ದಿಯಲ್ಲಿದೆ: 

    • ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ, ‘ಸನ್ಮಿತ್ರ’ (ಒಬ್ಬ ಒಳ್ಳೆಯ ಸ್ನೇಹಿತ) ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ.

    ‘ಸನ್ಮಿತ್ರ’ ಉಪಕ್ರಮದದ ಬಗ್ಗೆ 

    • ಉದ್ದೇಶ: ಮಾದಕ ದ್ರವ್ಯ ವ್ಯಸನದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ನಿರಂತರ ಬೆಂಬಲ, ಪುನರ್ವಸತಿ ಮತ್ತು ಮೇಲ್ವಿಚಾರಣೆಯನ್ನು ಒದಗಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
    • ವಿಶಿಷ್ಟ ವಿಧಾನ: ಈ ಕಾರ್ಯಕ್ರಮವು ಮಾದಕ ವ್ಯಸನದ ಸಮಸ್ಯೆಯನ್ನು ಕೇವಲ ಕಾನೂನು ಜಾರಿ ದೃಷ್ಟಿಕೋನದಿಂದ ನೋಡದೆ, ಸಹಾನುಭೂತಿ, ಸೂಕ್ತ ಮಾರ್ಗದರ್ಶನ ಮತ್ತು ರಚನಾತ್ಮಕ ಪುನರ್ವಸತಿಯ ಮೂಲಕ ಪರಿಹರಿಸಲು ಯತ್ನಿಸುತ್ತದೆ.
    • ಸನ್ಮಿತ್ರ ಸಹಾಯವಾಣಿ: ರಾಜ್ಯದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಮೀಸಲಾದ ‘ಸನ್ಮಿತ್ರ ಸಹಾಯವಾಣಿ’ ಅನ್ನು ಸ್ಥಾಪಿಸಲಾಗುವುದು.
    • ಸಿಬ್ಬಂದಿಯ ಜವಾಬ್ದಾರಿ: ಸನ್ಮಿತ್ರ ಯೋಜನೆಯಡಿ ನಿಯೋಜಿತರಾದ ಪೊಲೀಸ್ ಸಿಬ್ಬಂದಿ , ಬಾಧಿತ ವ್ಯಕ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಅವರ ಕುಟುಂಬದ ಸದಸ್ಯರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮತ್ತು ಮಾನಸಿಕ ಆರೋಗ್ಯ ತಜ್ಞರೊಂದಿಗೆ ಸಮನ್ವಯ ಸಾಧಿಸುವ ಮೂಲಕ ವ್ಯಕ್ತಿಯ ಚೇತರಿಕೆಯ ಮಾಸಿಕ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಬೇಕು.
    • ವರದಿ ನಿರ್ವಹಣೆ: ಪೊಲೀಸ್ ಠಾಣಾಧಿಕಾರಿಗಳು ಪ್ರತಿ ಎರಡು ವಾರಗಳಿಗೊಮ್ಮೆ ಸನ್ಮಿತ್ರ ಸಿಬ್ಬಂದಿಯಿಂದ ಪ್ರಗತಿಯ ವರದಿಗಳನ್ನು ಸಂಗ್ರಹಿಸಬೇಕು. ತದನಂತರ, ಗೌಪ್ಯ ಮಾಸಿಕ ವರದಿಗಳನ್ನು ಮೊಹರು ಮಾಡಿದ ಲಕೋಟೆಗಳಲ್ಲಿ  ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿ (SP) ಅಥವಾ ಉಪ ಪೊಲೀಸ್ ಆಯುಕ್ತರಿಗೆ (DCP) ಸಲ್ಲಿಸಬೇಕು.
  • ಭಾರತ – ಅಮೇರಿಕಾ ನಡುವೆ ರಕ್ಷಣಾ ಒಪ್ಪಂದ | ತಪ್ಪು ದಾರಿಗೆ ಎಳೆಯುವ ಒಆರ್‌ಎಸ್ (ORS) ಗುರುತು ಪಟ್ಟಿ ಹೊಂದಿರುವ ಪಾನೀಯಗಳನ್ನು ತಕ್ಷಣವೇ ತೆಗೆದುಹಾಕುವಂತೆ FSSAI ಆದೇಶಿಸಿದೆ | ಜಂಟಿ ಸಾಲದ ಕಾರ್ಯವಿಧಾನ (JCM) | ಅಕಾಂಥೋಸಿಸ್ ನಿಗ್ರಿಕಾನ್ಸ್ (Acanthosis Nigricans) | ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ (IITF) | ಜಾಗತಿಕ ಮೀಥೇನ್ ಸ್ಥಿತಿಗತಿ ವರದಿ, 2025

    ಭಾರತ – ಅಮೇರಿಕಾ ನಡುವೆ ರಕ್ಷಣಾ ಒಪ್ಪಂದ

    ಜಿ.ಎಸ್-2/ಅಂತರರಾಷ್ಟ್ರೀಯ ಸಂಬಂಧಗಳು

    ಸಂದರ್ಭ:

    • ಅಮೇರಿಕಾದ ರಾಜ್ಯ ಇಲಾಖೆಯು ಭಾರತಕ್ಕೆ 93 ದಶಲಕ್ಷ ಡಾಲರ್ ಮೌಲ್ಯದ ಎಫ್‌ಜಿಎಂ-148 ಜಾವೆಲಿನ್ ಟ್ಯಾಂಕ್ ವಿರೋಧಿ ಕ್ಷಿಪಣಿ ವ್ಯವಸ್ಥೆಯ ಮಾರಾಟಕ್ಕೆ ಅಧಿಕೃತವಾಗಿ ಅನುಮೋದನೆ ನೀಡಿದೆ.

    ಎಫ್‌ಜಿಎಂ-148 ಜಾವೆಲಿನ್ ಟ್ಯಾಂಕ್ ವಿರೋಧಿ ಕ್ಷಿಪಣಿ ವ್ಯವಸ್ಥೆಯ ಬಗ್ಗೆ: 

    • ಇದು ಅತ್ಯಾಧುನಿಕ ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿ ವ್ಯವಸ್ಥೆಯಾಗಿದೆ (ATGM).
    • ಇದು ಒಬ್ಬನೇ ಸೈನಿಕನಿಂದ ಹೊತ್ತೋಯ್ಯಬಲ್ಲ ಮಧ್ಯಮ ಶ್ರೇಣಿಯ, “ಪ್ರಯೋಗಿಸಿ ಮತ್ತು ಮರೆತುಬಿಡಿ” ತತ್ವದ ಮೇಲೆ ಕಾರ್ಯನಿರ್ವಹಿಸುವ (ಅಂದರೆ, ಒಮ್ಮೆ ಗುರಿ ಇಟ್ಟು ಉಡಾಯಿಸಿದ ನಂತರ, ಅದು ತನ್ನಷ್ಟಕ್ಕೇ ಗುರಿಯನ್ನು ತಲುಪುತ್ತದೆ) ಅಸ್ತ್ರವಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ಎಲ್ಲಾ ಬಗೆಯ ರಕ್ಷಾ ಕವಚಗಳನ್ನು ಭೇದಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

    ಭಾರತ ಮತ್ತು ಅಮೆರಿಕ ನಡುವಿನ ಜಂಟಿ ಸೇನಾ ಸಮರಾಭ್ಯಾಸಗಳ ಬಗ್ಗೆ: 

    • ಯುದ್ಧ ಅಭ್ಯಾಸ: ಭೂಸೇನೆಗಳ ನಡುವಿನ ಸಮರಾಭ್ಯಾಸ.
    • ಮಲಬಾರ್: ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾಗಳನ್ನೊಳಗೊಂಡ ನೌಕಾಪಡೆಯ ಕ್ವಾಡ್ ಒಕ್ಕೂಟದ ಸಮರಾಭ್ಯಾಸ.
    • ಕೋಪ್ ಇಂಡಿಯಾ: ವಾಯುಪಡೆಯ ಸಮರಾಭ್ಯಾಸ.
    • ಟೈಗರ್ ಟ್ರಯಂಫ್: ಮೂರು ಸೇನೆ (ಭೂ, ಜಲ, ವಾಯು) ಗಳ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಸಮರಾಭ್ಯಾಸ.
    • ವಜ್ರ ಪ್ರಹಾರ: ವಿಶೇಷ ಪಡೆಗಳ ಸಮರಾಭ್ಯಾಸ.

    ತಪ್ಪು ದಾರಿಗೆ ಎಳೆಯುವ ಒಆರ್‌ಎಸ್ (ORS) ಗುರುತು ಪಟ್ಟಿ ಹೊಂದಿರುವ ಪಾನೀಯಗಳನ್ನು ತಕ್ಷಣವೇ ತೆಗೆದುಹಾಕುವಂತೆ FSSAI ಆದೇಶಿಸಿದೆ

    ಪಠ್ಯಕ್ರಮ: ಜಿ.ಎಸ್-2/ ಆರೋಗ್ಯ

    ಇದೀಗ ಸುದ್ದಿಯಲ್ಲಿದೆ: 

    • ಹಣ್ಣಿನ ಆಧಾರಿತ ಪಾನೀಯಗಳು, ಕುಡಿಯಲು ಸಿದ್ಧವಿರುವ ಪಾನೀಯಗಳು, ಶಕ್ತಿವರ್ಧಕ ಪಾನೀಯಗಳು, ವಿದ್ಯುತ್ಲವಣ (ಎಲೆಕ್ಟ್ರೋಲೈಟ್) ಪಾನೀಯಗಳು ಮತ್ತು ಇದೇ ಮಾದರಿಯ ಇತರೆ ಉತ್ಪನ್ನಗಳನ್ನು ‘ಒಆರ್‌ಎಸ್’ (ORS) ಎಂಬ ಹೆಸರಿನಲ್ಲಿ ತಪ್ಪಾಗಿ ಮಾರಾಟ ಮಾಡುತ್ತಿರುವುದನ್ನು ತಕ್ಷಣವೇ ನಿಲ್ಲಿಸುವಂತೆ ಮತ್ತು ಅಂತಹ ಸರಕುಗಳನ್ನು ಮಾರುಕಟ್ಟೆಯಿಂದ ತೆರವುಗೊಳಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರವು (FSSAI) ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

    ಮೌಖಿಕ ಪುನರ್ಜಲೀಕರಣ ಲವಣ (ORS – Oral Rehydration Salts) ದ ಬಗ್ಗೆ: 

    • ಇದನ್ನು “ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಸಂಸ್ಥೆಯ ಮಕ್ಕಳ ನಿಧಿ” (UNICEF) ಶಿಫಾರಸು ಮಾಡಿದ ಲವಣಗಳ ಮಿಶ್ರಣದ ಪ್ಯಾಕೆಟ್‌ಗಳಾಗಿವೆ. ಇವುಗಳನ್ನು ಶುದ್ಧ ನೀರಿನಲ್ಲಿ ಕರಗಿಸಿ “ಮೌಖಿಕ ಪುನರ್ಜಲೀಕರಣ ದ್ರಾವಣ” (ORS) ವನ್ನಾಗಿ ತಯಾರಿಸಲಾಗುತ್ತದೆ.
    • ಉದ್ದೇಶ:- ಎಲ್ಲಾ ವಯಸ್ಸಿನವರಲ್ಲಿ ಕಾಲರಾ ಸೇರಿದಂತೆ, ತೀವ್ರ ಅತಿಸಾರದಿಂದ ಉಂಟಾಗುವ ನಿರ್ಜಲೀಕರಣವನ್ನು (ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು) ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.
    • ಒಆರ್‌ಎಸ್ ಸಂಯೋಜನೆಯು ನಿರ್ದಿಷ್ಟ ಪ್ರಮಾಣದಲ್ಲಿ ಸೋಡಿಯಂ ಕ್ಲೋರೈಡ್, ನಿರ್ಜಲೀಕೃತ ಗ್ಲೂಕೋಸ್, ಪೊಟ್ಯಾಸಿಯಮ್ ಕ್ಲೋರೈಡ್ ಮತ್ತು ಟ್ರೈಸೋಡಿಯಂ ಸಿಟ್ರೇಟ್ ಡೈಹೈಡ್ರೇಟ್‌ಗಳನ್ನು ಒಳಗೊಂಡಿರುತ್ತದೆ.

    ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರ (FSSAI) ದ ಕುರಿತು:

    • ಸ್ಥಾಪನೆ: 2006ರ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯ ಅಡಿಯಲ್ಲಿ 2011ರಲ್ಲಿ ಸ್ಥಾಪಿಸಲಾದ ಸ್ವಾಯತ್ತ ಸಂಸ್ಥೆಯಾಗಿದೆ.
    • ಕಾರ್ಯವ್ಯಾಪ್ತಿ: ಇದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಉದ್ದೇಶ: ಭಾರತದಲ್ಲಿ ಆಹಾರ ಸುರಕ್ಷತೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ಶಾಸನಬದ್ಧ ಸಂಸ್ಥೆಯಾಗಿದೆ.
    • ಪ್ರಧಾನ ಕಚೇರಿ: ನವದೆಹಲಿ.

    FSSAI ನ ಪ್ರಮುಖ ಉಪಕ್ರಮಗಳು:

    • ಈಟ್ ರೈಟ್ ಮೂವ್‌ಮೆಂಟ್ ಅಭಿಯಾನ: ಎಲ್ಲಾ ಭಾರತೀಯರಿಗೆ ಸುರಕ್ಷಿತ, ಆರೋಗ್ಯಕರ ಮತ್ತು ಸುಸ್ಥಿರ ಆಹಾರವನ್ನು ಖಚಿತಪಡಿಸುವುದು ಇದರ ಗುರಿಯಾಗಿದೆ.
    • ಕ್ಲೀನ್ ಸ್ಟ್ರೀಟ್ ಫುಡ್: ಬೀದಿ ಬದಿಯ ಆಹಾರ ಮಾರಾಟಗಾರರಿಗೆ ತರಬೇತಿ ನೀಡುವುದು ಮತ್ತು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯ ಉಲ್ಲಂಘನೆಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವುದು.
    • ಡಯಟ್ ಫಾರ್ ಲೈಫ್ (Diet4Life): ವಿವಿಧ ರೀತಿಯ ಚಯಾಪಚಯ ಅಸ್ವಸ್ಥತೆ ಮತ್ತು ಅವುಗಳನ್ನು ತಡೆಯುವ ಬಗ್ಗೆ ಜಾಗೃತಿ ಮೂಡಿಸುವುದು.
    • ಆಹಾರ ಉಳಿಸಿ, ಆಹಾರ ಹಂಚಿ, ಸಂತೋಷ ಹಂಚಿ (Save Food, Share Food, Share Joy): ಆಹಾರ ವ್ಯರ್ಥವಾಗುವುದನ್ನು ತಡೆಯಲು ಮತ್ತು ಆಹಾರ ದಾನವನ್ನು ಉತ್ತೇಜಿಸಲು ಜನರನ್ನು ಪ್ರೇರೇಪಿಸುವುದು.
    • ಹಾರ್ಟ್ ಅಟ್ಯಾಕ್ ರಿವೈಂಡ್: ಇದು 2022ರ ವೇಳೆಗೆ ಭಾರತದಲ್ಲಿ ಟ್ರಾನ್ಸ್ ಫ್ಯಾಟ್ (ಕೆಟ್ಟ ಕೊಬ್ಬು) ಅನ್ನು ನಿರ್ಮೂಲನೆ ಮಾಡುವ ಗುರಿಯನ್ನು ಬೆಂಬಲಿಸಲು ನಡೆಸಿದ ಸಮೂಹ ಮಾಧ್ಯಮ ಅಭಿಯಾನವಾಗಿದೆ.

    ಜಂಟಿ ಸಾಲದ ಕಾರ್ಯವಿಧಾನ (JCM)

    ಪಠ್ಯಕ್ರಮ: ಜಿ.ಎಸ್-3/ ಪರಿಸರ ಅಧ್ಯಾಯನ

    ಸಂದರ್ಭ

    • ‘ಬ್ರೆಜಿಲ್‌’ನ ‘ಬೆಲೆಮ್‌’ನಲ್ಲಿ ನಡೆಯಲಿರುವ COP30 ಶೃಂಗಸಭೆಯಲ್ಲಿ, ನ್ಯಾಯಯುತ ಮತ್ತು ತಂತ್ರಜ್ಞಾನ ಚಾಲಿತ ಹವಾಮಾನ ಪ್ರಕ್ರಿಯೆಯನ್ನು ವಿಸ್ತರಿಸಲು “ಜಂಟಿ ಸಾಲದ ಕಾರ್ಯವಿಧಾನ” (JCM) ಪ್ರಮುಖ ಸಾಧನವಾಗಿದೆ ಎಂದು ಭಾರತ ಬಣ್ಣಿಸಿದೆ.

    ಜಂಟಿ ಸಾಲದ ಕಾರ್ಯವಿಧಾನ (ಜಾಯಿಂಟ್ ಕ್ರೆಡಿಟಿಂಗ್ ಮೆಕ್ಯಾನಿಸಮ್ – JCM) ಯ ಬಗ್ಗೆ:

    • ಇದು ಒಂದು ದ್ವಿಪಕ್ಷೀಯ ಉಪಕ್ರಮವಾಗಿದ್ದು, ಇದರ ಅಡಿಯಲ್ಲಿ ಭಾರತದಂತಹ ಪಾಲುದಾರ ರಾಷ್ಟ್ರವು ಜಪಾನ್‌ನೊಂದಿಗೆ ಸಹಕರಿಸಿ ಕಡಿಮೆ ಇಂಗಾಲದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮತ್ತು ಅದಕ್ಕೆ ಪ್ರತಿಯಾಗಿ ಇಂಗಾಲದ ಕ್ರೆಡಿಟ್‌ಗಳನ್ನು (ಕಾರ್ಬನ್ ಕ್ರೆಡಿಟ್ಸ್) ಪಡೆಯಲು ಅವಕಾಶವಿದೆ.
    • ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಯೋಜನೆಗಳಿಂದ ಉತ್ಪತ್ತಿಯಾಗುವ ಈ ‘ಕ್ರೆಡಿಟ್‌’ಗಳನ್ನು (ಸಾಲದ ಅಂಕಗಳನ್ನು), ಎರಡೂ ದೇಶಗಳು ತಮ್ಮ ರಾಷ್ಟ್ರೀಯ ಹವಾಮಾನ ಗುರಿಗಳನ್ನು ತಲುಪಲು ಬಳಸಿಕೊಳ್ಳಬಹುದು.
    • ಇದು, ತಂತ್ರಜ್ಞಾನ ವರ್ಗಾವಣೆ ಮತ್ತು ಹಸಿರು ತಂತ್ರಜ್ಞಾನಗಳಲ್ಲಿ ಹೂಡಿಕೆಯನ್ನು ಸುಗಮಗೊಳಿಸುತ್ತದೆ ಹಾಗೂ ಪಾಲುದಾರ ರಾಷ್ಟ್ರದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

    ಅಕಾಂಥೋಸಿಸ್ ನಿಗ್ರಿಕಾನ್ಸ್ (Acanthosis Nigricans)

    ಪಠ್ಯಕ್ರಮ: ಜಿ.ಎಸ್-2/ ಆರೋಗ್ಯ

    ಸಂದರ್ಭ:

    • ಅಕಾಂಥೋಸಿಸ್ ನಿಗ್ರಿಕಾನ್ಸ್‌ ತ್ವಚೆಯ (ಚರ್ಮದ) ಮಡಿಚುಗಳ ಮತ್ತು ಮುದುಡಿನ ಭಾಗಗಳಲ್ಲಿ ಕಾಣಿಸಿಕೊಳ್ಳಬಹುದು ಮತ್ತು ಇದು ಇನ್ಸುಲಿನ್ ಪ್ರತಿರೋಧದೊಂದಿಗೆ ನಿಕಟವಾಗಿ ಸಂಬಂಧಿಸಿದೆ ಎಂದು ಇತ್ತೀಚಿನ ಅಧ್ಯಯನವೊಂದರಿಂದ ತಿಳಿದುಬಂದಿದೆ. 

    ಅಕಾಂಥೋಸಿಸ್ ನಿಗ್ರಿಕಾನ್ಸ್ (AN) ನ ಬಗ್ಗೆ:

    • ಇದು ಚರ್ಮದ ಒಂದು ಸ್ಥಿತಿಯಾಗಿದ್ದು, ಚರ್ಮದ ಮಡಿಚುಗಳ ಮೇಲೆ ಕಪ್ಪಾದ, ನಯವಾದ ಕಲೆಗಳು ಕಾಣಿಸಿಕೊಳ್ಳುವುದು ಇದರ ಲಕ್ಷಣವಾಗಿದೆ.
    • ಚರ್ಮದಲ್ಲಿನ ಈ ಬದಲಾವಣೆಗಳು ರಾತ್ರೋರಾತ್ರಿ ಕಾಣಿಸಿಕೊಳ್ಳುವುದಿಲ್ಲ, ಬದಲಿಗೆ ಕೆಲವು ತಿಂಗಳುಗಳ ಅವಧಿಯಲ್ಲಿ ನಿಧಾನವಾಗಿ ಬೆಳೆಯುತ್ತವೆ.
    • ಇದು ಇನ್ಸುಲಿನ್ ಪ್ರತಿರೋಧದೊಂದಿಗೆ ಬಲವಾದ ನಂಟನ್ನು ಹೊಂದಿದೆ. ಆದ್ದರಿಂದ, ಇದು ಮಧುಮೇಹಪೂರ್ವ ಮತ್ತು ಮಧುಮೇಹದ  ಪ್ರಮುಖ ಮುನ್ಸೂಚನೆಯಾಗಿದೆ.
    • ಕಾರಣಗಳು:- ಸ್ಥೂಲಕಾಯತೆ (ಬೊಜ್ಜು), ಇನ್ಸುಲಿನ್ ಪ್ರತಿರೋಧ, ಚಯಾಪಚಯ ಲಕ್ಷಣ, ಮಧುಮೇಹ ಮತ್ತು ಬಹಳ ಅಪರೂಪವಾಗಿ ಮೆಲನೋಮಾಗಳು, ಹೊಟ್ಟೆ ಅಥವಾ ಯಕೃತ್ತಿನ ಕ್ಯಾನ್ಸರ್ ನಿಂದಲೂ ಇದು ಉಂಟಾಗಬಹುದು.
    • ಚಿಕಿತ್ಸೆ: ಬೊಜ್ಜಿಗೆ ಅಥವಾ ಇನ್ಸುಲಿನ್ ಪ್ರತಿರೋಧಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ, ಚಯಾಪಚಯ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಮೂಲಕ ಚರ್ಮದ ಬಣ್ಣವನ್ನು ತಿಳಿಯಾಗಿಸಲು ಸಹಾಯವಾಗುತ್ತದೆ.

    ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ (IITF)

    ಪಠ್ಯಕ್ರಮ: ಜಿ.ಎಸ್-3/ ಆರ್ಥಿಕತೆ

    ಸಂದರ್ಭ:

    • ದೆಹಲಿಯ ಭಾರತ ಮಂಟಪದಲ್ಲಿ  ನಡೆದ ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳವು (IITF), ಭಾರತದ ಅತೀ ದೊಡ್ಡ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ಪ್ರದರ್ಶನಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

    ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳ (IITF) ದ ಬಗ್ಗೆ:

    • ಆಯೋಜಕರು: ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ.
    • ಉದ್ದೇಶ: ಈ ವಾರ್ಷಿಕ ಮೇಳವು ತಯಾರಕರಿಗೆ, ವ್ಯಾಪಾರಿಗಳಿಗೆ, ರಫ್ತುದಾರರಿಗೆ ಮತ್ತು ಆಮದುದಾರರಿಗೆ ಒಂದೇ ಸೂರಿನಡಿ ಸಾಮಾನ್ಯ ವೇದಿಕೆಯನ್ನು ಒದಗಿಸುತ್ತದೆ.
    • ಇದನ್ನು ಪ್ರತಿ ವರ್ಷ ನವದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗುತ್ತದೆ.
    • ಇದು ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಸಮಗ್ರ ವ್ಯಾಪಾರ ಮೇಳಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ.
    • ಇದನ್ನು ಮೊದಲ ಬಾರಿಗೆ 1980ರಲ್ಲಿ ಆಯೋಜಿಸಲಾಗಿತ್ತು.
    • ಘೋಷವಾಕ್ಯ: ‘ಏಕ್ ಭಾರತ್ ಶ್ರೇಷ್ಠ ಭಾರತ್’ (ಒಂದೇ ಭಾರತ, ಶ್ರೇಷ್ಠ ಭಾರತ).

    ಜಾಗತಿಕ ಮೀಥೇನ್ ಸ್ಥಿತಿಗತಿ ವರದಿ, 2025

    ಪಠ್ಯಕ್ರಮ: ಜಿ.ಎಸ್-3/ ಪರಿಸರ

    ಸಂದರ್ಭ:

    • ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ವು ಇತ್ತೀಚಿಗೆ ಬ್ರೆಜಿಲ್ ನ ಬೆಲೆಮ್‌ನಲ್ಲಿ ನಡೆದ COP30 ಶೃಂಗಸಭೆಯಲ್ಲಿ ಜಾಗತಿಕ ಮೀಥೇನ್ ಸ್ಥಿತಿಗತಿ ವರದಿಯನ್ನು ಬಿಡುಗಡೆ ಮಾಡಿದೆ.

    ವರದಿಯ ಮುಖ್ಯಾಂಶಗಳು:

    • ಮೀಥೇನ್ ಹೊರಸೂಸುವಿಕೆಯಲ್ಲಿ ಏರಿಕೆ: ಕಠಿಣ ತ್ಯಾಜ್ಯ ನಿಯಂತ್ರಣ ಮತ್ತು ಸುಧಾರಿತ ಕಣ್ಗಾವಲು ವ್ಯವಸ್ಥೆಗಳ ಹೊರತಾಗಿಯೂ, 2030ರ ವೇಳೆಗೆ ಮೀಥೇನ್ ಪ್ರಮಾಣವನ್ನು 30% ರಷ್ಟು ಕಡಿಮೆ ಮಾಡುವ ಗುರಿಯನ್ನು ತಲುಪುವಲ್ಲಿ ಜಾಗತಿಕ ಪ್ರಯತ್ನಗಳು ಇನ್ನೂ ಹಿಂದುಳಿದಿವೆ.
    • ತೀವ್ರತೆ ಮತ್ತು ಪರಿಣಾಮ: 20 ವರ್ಷಗಳ ಅವಧಿಯಲ್ಲಿ ಮೀಥೇನ್, ಇಂಗಾಲದ ಡೈ ಆಕ್ಸೈಡ್‌ (CO₂) ಗಿಂತ ಸುಮಾರು 80 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಪ್ರಸ್ತುತ ಸುಮಾರು ಮೂರನೇ ಒಂದರಷ್ಟು ಭಾಗ ಜಾಗತಿಕ ತಾಪಮಾನ ಏರಿಕೆಯಲ್ಲಿ ಇದು ಕಾರಣವಾಗಿದೆ.
    • ಮೀಥೇನ್ ಹೊರಸೂಸುವಿಕೆಯಲ್ಲಿ ಭಾರತದ ಪಾಲು: 2020ರಲ್ಲಿ ಸುಮಾರು 31 ಮಿಲಿಯನ್ ಟನ್ ಮೀಥೇನ್ ಅನ್ನು ಹೊರಸೂಸಿದೆ, ಇದು ಜಾಗತಿಕ ಹೊರಸೂಸುವಿಕೆಯ 9% ರಷ್ಟಿದೆ. ಜಾಗತಿಕ ಕೃಷಿ ಆಧಾರಿತ ಮೀಥೇನ್ ಹೊರಸೂಸುವಿಕೆಯಲ್ಲಿ ಭಾರತದ ಪಾಲು 12% ರಷ್ಟಿದ್ದು, ಇದು ಪ್ರಪಂಚದಲ್ಲೇ ಅತ್ಯಧಿಕವಾಗಿದೆ.
    • ಕೃಷಿ ವಲಯದ ವಿವರಣೆ: ಜಾನುವಾರುಗಳು (ಜಾನುವಾರುಗಳ ಜೀರ್ಣಕ್ರಿಯೆ) ಮೀಥೇನ್‌ನ ಅತೀ ದೊಡ್ಡ ಮೂಲವಾಗಿದೆ. ಇದರ ನಂತರದ ಸ್ಥಾನದಲ್ಲಿ ಭತ್ತದ ಕೃಷಿ ಇದ್ದು, 2030ರ ವೇಳೆಗೆ ಇದರಿಂದಾಗುವ ಹೊರಸೂಸುವಿಕೆ 8% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಬೆಳೆ ತ್ಯಾಜ್ಯ ಸುಡುವುದೂ ಕೂಡ ಹೆಚ್ಚುತ್ತಿದ್ದು, ಇವೆಲ್ಲವೂ ಕೂಡ ಹೊರಸೂಸುವಿಕೆಯಲ್ಲಿ ಭಾರತವನ್ನು ಜಾಗತಿಕವಾಗಿ ಪ್ರಮುಖ ಕೇಂದ್ರವನ್ನಾಗಿಸಿವೆ.

    ಮೀಥೇನ್ ನ ಬಗ್ಗೆ:

    • ಇದು ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕವಾಗಿದೆ (ವಾತಾವರಣದಲ್ಲಿ ಇದರ ಜೀವಿತಾವಧಿ 12 ವರ್ಷಗಳು).
    • 20 ವರ್ಷಗಳ ಅವಧಿಯಲ್ಲಿ ಇದು ಇಂಗಾಲದ ಡೈ ಆಕ್ಸೈಡ್‌ (CO₂) ಗಿಂತ 80–84 ಪಟ್ಟು ಹೆಚ್ಚು ಪ್ರಬಲವಾಗಿರುತ್ತದೆ.
    • ಜಾಗತಿಕ ಪ್ರಮುಖ ಮೂಲಗಳು: ಕೃಷಿ (40%), ಇಂಧನ (35%), ಮತ್ತು ತ್ಯಾಜ್ಯ (20%).

    ಮೀಥೇನ್ ಮಾಲಿನ್ಯವನ್ನು ತಡೆಗಟ್ಟಲು ಜಾಗತಿಕ ಉಪಕ್ರಮಗಳು: 

    ಜಾಗತಿಕ ಮೀಥೇನ್ ಪ್ರತಿಜ್ಞೆ (Global Methane Pledge), 2021: 

    • ಇದು 2030ರ ವೇಳೆಗೆ ಮೀಥೇನ್ ಹೊರಸೂಸುವಿಕೆಯನ್ನು 2020ರ ಮಟ್ಟಕ್ಕಿಂತ 30% ರಷ್ಟು ಕಡಿಮೆ ಮಾಡುವ ಸ್ವಯಂಪ್ರೇರಿತ ಅಂತರರಾಷ್ಟ್ರೀಯ ಚೌಕಟ್ಟಾಗಿದೆ. 
    • ಇದನ್ನು COP26 ರಲ್ಲಿ ಅಮೆರಿಕ, ಯುರೋಪಿಯನ್ ಒಕ್ಕೂಟ ಮತ್ತು ಹವಾಮಾನ ಮತ್ತು ಶುದ್ಧ ವಾಯು ಒಕ್ಕೂಟ (CCAC) ಜಂಟಿಯಾಗಿ ಪ್ರಾರಂಭಿಸಿದವು.
    • ಗಮನಿಸಿ: ಭಾರತವು ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ.

    ಭಾರತದ ಉಪಕ್ರಮಗಳು:

    ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಗುರಿ (NMSA): 

    • ಇದು ಹವಾಮಾನ-ಸ್ಥಿತಿಸ್ಥಾಪಕ ಮತ್ತು ಕಡಿಮೆ ಹೊರಸೂಸುವಿಕೆಯ ಕೃಷಿಯನ್ನು ಉತ್ತೇಜಿಸುತ್ತದೆ.
    • ಮಣ್ಣಿನ ಆರೋಗ್ಯ, ನೀರಿನ ದಕ್ಷತೆ ಮತ್ತು ಬೆಳೆ ವೈವಿಧ್ಯೀಕರಣದ ಮೇಲೆ ಗಮನಹರಿಸುವ ಮೂಲಕ ಪರೋಕ್ಷವಾಗಿ ಮೀಥೇನ್ ಅನ್ನು ಕಡಿಮೆ ಮಾಡುತ್ತದೆ.
    • ಭತ್ತದ ಕೃಷಿಯಿಂದ ಮೀಥೇನ್ ಹೊರಸೂಸಿಕೆಯನ್ನು ಕಡಿಮೆ ಮಾಡಲು ಆಧುನಿಕ ತಂತ್ರಜ್ಞಾನ ಮತ್ತು ಕೃಷಿ ಪದ್ಧತಿಗಳ ಬಳಕೆ.
  • ಇನ್ಫೋಸಿಸ್ ಪ್ರಶಸ್ತಿ, 2025

    ಇನ್ಫೋಸಿಸ್ ಪ್ರಶಸ್ತಿ, 2025

    ಇದೀಗ ಸುದ್ದಿಯಲ್ಲಿದೆ:

    • 2025ನೇ ಸಾಲಿನ ಪ್ರತಿಷ್ಠಿತ ಇನ್ಫೋಸಿಸ್ ಪ್ರಶಸ್ತಿ ಘೋಷಣೆಯಾಗಿದ್ದು, ಪ್ರಶಸ್ತಿ ಪುರಸ್ಕೃತರಾಗಿ ಆಯ್ಕೆಯಾದ ಒಟ್ಟು ಆರು ಗಣ್ಯರ ಪಟ್ಟಿಯಲ್ಲಿ ಪ್ರಾಕೃತ ಮತ್ತು ಕನ್ನಡ ಕಾವ್ಯಶಾಸ್ತ್ರದ ವಿದ್ವಾಂಸರಾದ ಆಂಡ್ರ್ಯೂ ಒಲೆಟ್ ಹಾಗೂ ಬೆಂಗಳೂರು ಮೂಲದ ವಿಜ್ಞಾನಿ ಅಂಜನಾ ಬದ್ರಿನಾರಾಯಣನ್ ಅವರು ಸೇರಿದ್ದಾರೆ.

    2025 ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿ ಪುರಸ್ಕೃತರ ವಿವರಣೆ:

    ವಿಭಾಗ

    ಪುರಸ್ಕೃತರು

    ಅರ್ಥಶಾಸ್ತ್ರ 

    ನಿಖಿಲ್ ಅಗರ್ವಾಲ್

    ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ

    ಸುಶಾಂತ್ ಸಚ್‌ದೇವ

    ಮಾನವಿಯ ಮತ್ತು ಸಮಾಜ ವಿಜ್ಞಾನ

    ಆಂಡ್ರ್ಯೂ ಒಲೆಟ್

    ಜೀವ ವಿಜ್ಞಾನ

    ಅಂಜನಾ ಬದ್ರಿನಾರಾಯಣನ್

    ಗಣಿತ ವಿಜ್ಞಾನ

    ಸವ್ಯಸಾಚಿ ಮುಖರ್ಜಿ

    ಭೌತ ವಿಜ್ಞಾನ

    ಕಾರ್ತಿಶ್ ಮಂತಿರಾಮ್

    ಇನ್ಫೋಸಿಸ್ ಪ್ರಶಸ್ತಿಯ ಬಗ್ಗೆ:

    • ಘೋಷಣೆ: ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನ (ISF), ಆರು ವಿಭಿನ್ನ ವಿಭಾಗಗಳಲ್ಲಿ 2025ನೇ ಸಾಲಿನ ಪ್ರಶಸ್ತಿ ವಿಜೇತರನ್ನು ಘೋಷಿಸಿದೆ. ಅವುಗಳೆಂದರೆ:
    1. ಅರ್ಥಶಾಸ್ತ್ರ
    2. ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ
    3. ಮಾನವಿಯ ಮತ್ತು ಸಮಾಜ ವಿಜ್ಞಾನ
    4. ಜೀವ ವಿಜ್ಞಾನ
    5. ಗಣಿತ ವಿಜ್ಞಾನ
    6. ಭೌತ ವಿಜ್ಞಾನ
    • ಉದ್ದೇಶ: ಭಾರತದ ಪ್ರಗತಿಯ ಮೇಲೆ ಗಮನಾರ್ಹ ಪ್ರಭಾವ ಬೀರುವಂತಹ ಸಂಶೋಧನೆ ಮತ್ತು ಪಾಂಡಿತ್ಯಪೂರ್ಣ ಸಾಧನೆಗಳನ್ನು ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಮೂಲ ಉದ್ದೇಶವಾಗಿದೆ.
    • ಪ್ರಶಸ್ತಿಯ ಸ್ವರೂಪ: ಪ್ರತಿಯೊಂದು ವಿಭಾಗದ ಪ್ರಶಸ್ತಿಯು ಚಿನ್ನದ ಪದಕ, ಪ್ರಶಂಸಾ ಪತ್ರ ಮತ್ತು $100,000 (ಅಥವಾ ಅದಕ್ಕೆ ಸಮನಾದ ಭಾರತೀಯ ರೂಪಾಯಿ ಮೌಲ್ಯ) ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
  • ರೀಸೆಸ್ ಮಂಗಗಳು (ರೀಸೆಸ್ ಮಕಾಕ್) | ಅಜೇಯ ವಾರಿಯರ್-25 | ಸೆಂಟಿನೆಲ್ -6B

    ರೀಸೆಸ್ ಮಂಗಗಳು (ರೀಸೆಸ್ ಮಕಾಕ್)

    ಸಾಮಾನ್ಯ ಅಧ್ಯಯನ -3/ ಸುದ್ದಿಯಲ್ಲಿರುವ ಪ್ರಭೇದಗಳು

    ಇದೀಗ ಸುದ್ದಿಯಲ್ಲಿದೆ:

    • ರಾಷ್ಟ್ರೀಯ ವನ್ಯಜೀವಿ ಮಂಡಳಿಯು, ವನ್ಯಜೀವಿ (ಸಂರಕ್ಷಣಾ) ಕಾಯಿದೆ, 1972 ರ ಅನುಸೂಚಿ II ರ ಅಡಿಯಲ್ಲಿ ರೀಸೆಸ್ ಮಂಗಗಳನ್ನು ಮರುಸೇರ್ಪಡೆಗೊಳಿಸಲು ಶಿಫಾರಸು ಮಾಡಿದೆ.

    ರೀಸೆಸ್ ಮಕಾಕ್ (ಮಕಾಕಾ ಮುಲಟ್ಟಾ) ಗಳ ಬಗ್ಗೆ:

      • ಆವಾಸಸ್ಥಾನ: ಇದು ಹಗಲು ಹೊತ್ತಿನಲ್ಲಿ ಸಕ್ರಿಯವಾಗಿರುವ ಸರ್ವಭಕ್ಷಕ ಪ್ರಭೇದವಾಗಿದ್ದು, ಮರಗಳು ಮತ್ತು ನೆಲದ ಮೇಲೆ ಎರಡೂ ಕಡೆ ವಾಸಿಸುತ್ತದೆ. ಇದು ಶಂಕುವೃಕ್ಷದ ಕಾಡುಗಳು (ಕೊನಿಫೆರಸ್), ಎಲೆ ಉದುರುವ ಕಾಡುಗಳು, ಬಿದಿರು ಮತ್ತು ಮಿಶ್ರ ಕಾಡುಗಳಿಂದ ಹಿಡಿದು ಮ್ಯಾಂಗ್ರೋವ್‌ಗಳು (ಜೌಗು ಕಾಡುಗಳು), ಕುರುಚಲು ಕಾಡುಗಳು , ಮಳೆಕಾಡುಗಳು ಮತ್ತು ಮಾನವ ವಸತಿ ಪ್ರದೇಶಗಳ ಸಮೀಪವಿರುವ ಪ್ರದೇಶಗಳವರೆಗೆ ವಿಶಾಲವಾದ ಆವಾಸಸ್ಥಾನಗಳಲ್ಲಿ ಜೀವಿಸುತ್ತದೆ.
      • ಹಂಚಿಕೆ : ಇದು ದಕ್ಷಿಣ ಏಷ್ಯಾದ ಬಹುತೇಕ ಭಾಗಗಳಲ್ಲಿ, ಪೂರ್ವ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಚೀನಾ ಮತ್ತು ಭಾರತದಲ್ಲಿ ಕಂಡುಬರುತ್ತದೆ.
      • ಪರಿಸರ ಪಾತ್ರಗಳು: ಇವು ಪ್ರಮುಖ ಬೀಜ ಪ್ರಸಾರಕಗಳಾಗಿವೆ. ಅರಣ್ಯ ಪುನರುತ್ಪಾದನೆ ಮತ್ತು ಜೀವವೈವಿಧ್ಯಕ್ಕೆ ಸಹಾಯ ಮಾಡುತ್ತವೆ. ಆದುದರಿಂದ ಜೀವಿ ಪರಿಸರದ ಸಮತೋಲನ ಮತ್ತು ಸುಸ್ಥಿರ ಸಹಬಾಳ್ವೆಗೆ ಇವುಗಳ ರಕ್ಷಣೆ ಅತ್ಯಗತ್ಯವಾಗಿದೆ.
      • ಬೆದರಿಕೆಗಳು: ಇವುಗಳಿಗೆ ಸಾಮಾನ್ಯವಾಗಿ ಯಾವುದೇ ಬೆದರಿಕೆಯಿಲ್ಲದಿದ್ದರೂ, ಅಭಿವೃದ್ಧಿಯ ಕಾರಣದಿಂದಾಗಿ ಇವುಗಳ ಮೂಲ ಆವಾಸಸ್ಥಾನವು ಹೆಚ್ಚು ನಶಿಸುತ್ತಿದೆ.
    • ಸಂರಕ್ಷಣಾ ಸ್ಥಾನಮಾನ:
    • ಐಯುಸಿಎನ್ ನ ಕೆಂಪು ಪಟ್ಟಿಯಲ್ಲಿ ‘ಕನಿಷ್ಠ ಕಾಳಜಿ’ ಎಂದು ಪಟ್ಟಿ ಮಾಡಲಾಗಿದೆ.
    • ಇದನ್ನು CITES ನ ‘ಅನುಬಂಧ II‘ ರಲ್ಲಿ ಪಟ್ಟಿ ಮಾಡಲಾಗಿದೆ.

    ಅಜೇಯ ವಾರಿಯರ್-25

    ಸಾಮಾನ್ಯ ಅಧ್ಯಯನ – 3/ ರಕ್ಷಣೆ

    ಇದೀಗ ಸುದ್ದಿಯಲ್ಲಿದೆ:

    • ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ನಡುವಿನ ಜಂಟಿ ಸೇನಾ ಸಮರಾಭ್ಯಾಸವಾದ “ಅಜೇಯ ವಾರಿಯರ್-25” ರ 8ನೇ ಆವೃತ್ತಿಯು ಇತ್ತೀಚಿಗೆ ರಾಜಸ್ಥಾನದಲ್ಲಿ ಪ್ರಾರಂಭವಾಯಿತು.

    ಅಜೇಯ ವಾರಿಯರ್-25 ರ ಬಗ್ಗೆ:

    • ಉದ್ದೇಶ – ಈ ಸಮರಾಭ್ಯಾಸವು ಅರೆ-ನಗರ ಪರಿಸರಗಳಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಮೇಲೆ ಗಮನಹರಿಸುತ್ತದೆ.

    ಭಾರತ-ಯುನೈಟೆಡ್ ಕಿಂಗ್‌ಡಮ್ ನಡುವೆ ನಡೆಯುವ ಇತರ ಸಮರಾಭ್ಯಾಸಗಳು:

    • “ಕೊಂಕಣ್” ಎಂಬುದು ಭಾರತೀಯ ನೌಕಾಪಡೆ ಮತ್ತು ಯುನೈಟೆಡ್ ಕಿಂಗ್‌ಡಮ್ ನ ರಾಯಲ್ ನೇವಿ’ ಯ ನಡುವೆ ನಡೆಯುವ ದ್ವಿಪಕ್ಷೀಯ ನೌಕಾ ಸಮರಾಭ್ಯಾಸವಾಗಿದೆ.
    • “ಇಂದ್ರಧನುಷ್” ಎಂಬುದು ಭಾರತೀಯ ವಾಯುಪಡೆ (IAF) ಮತ್ತು ಯುಕೆ ರಾಯಲ್ ಏರ್ ಫೋರ್ಸ್ ನಡುವೆ ನಡೆಯುವ ದ್ವಿಪಕ್ಷೀಯ ವಾಯು ಸಮರಾಭ್ಯಾಸವಾಗಿದೆ.

    ಸೆಂಟಿನೆಲ್ -6B

    ಸಾಮಾನ್ಯ ಅಧ್ಯಯನ – 3/ ಬಾಹ್ಯಾಕಾಶ

    ಇದೀಗ ಸುದ್ದಿಯಲ್ಲಿದೆ:

    • ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ವಾಂಡೆನ್‌ಬರ್ಗ್ ಬಾಹ್ಯಾಕಾಶ ಪಡೆಯ ನೆಲೆಯಿಂದಸೆಂಟಿನೆಲ್ -6B” ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

    ಸೆಂಟಿನೆಲ್ -6B ಯ ಬಗ್ಗೆ:

    • ಇದು ಸಾಗರ ವೀಕ್ಷಣಾ ಉಪಗ್ರಹವಾಗಿದ್ದು, ಏರುತ್ತಿರುವ ಸಮುದ್ರ ಮಟ್ಟ ಮತ್ತು ಭೂಮಿಯ ಮೇಲೆ ಅವುಗಳ ಪರಿಣಾಮಗಳನ್ನು ಅಳೆಯುವ ಆರು ವೈಜ್ಞಾನಿಕ ಉಪಕರಣಗಳನ್ನು ಒಳಗೊಂಡಿದೆ.
    • ಇದು ಭೂಮಿಯನ್ನು ಪ್ರತಿ ಸೆಕೆಂಡಿಗೆ 7.2 ಕಿ.ಮೀ ವೇಗದಲ್ಲಿ ಸುತ್ತುತ್ತದೆ ಮತ್ತು ಪ್ರತಿ 112 ನಿಮಿಷಗಳಿಗೊಮ್ಮೆ ಒಂದು ಪ್ರದಕ್ಷಿಣೆಯನ್ನು ಪೂರ್ಣಗೊಳಿಸುತ್ತದೆ.
    • ಈ ಯೋಜನೆಯು ನಾಸಾ, ಎನ್‌ಒಎಎ, ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿಗಳ ಜಂಟಿ ಸಹಯೋಗವಾಗಿದೆ.
  • ಸೆಂಕಾಕು ದ್ವೀಪಗಳು | ಸಿಲಿಗುರಿ ಕಾರಿಡಾರ್ | ಸರ್ವೋಚ್ಚ ನ್ಯಾಯಾಲಯವು ಹುಲಿಯ ಮೂಲ ವಾಸಸ್ಥಳಗಳಲ್ಲಿ ಹುಲಿ ಸಫಾರಿ ನಡೆಸುವುದನ್ನು ನಿಷೇಧಿಸಿದೆ

    ಸೆಂಕಾಕು ದ್ವೀಪಗಳು

    ಸಾಮಾನ್ಯ ಅಧ್ಯಯನ – 1/ ಸುದ್ಧಿಯಲ್ಲಿರುವ  ಸ್ಥಳಗಳು

    ಇದೀಗ ಸುದ್ದಿಯಲ್ಲಿದೆ:

    • ಚೀನಾ ಕರಾವಳಿ ರಕ್ಷಕ ಪಡೆಯ ಹಡಗುಗಳ ತುಕಡಿಯು ಸೆಂಕಾಕು/ಡಿಯಾಯು ದ್ವೀಪಗಳ ಬಳಿ “ಹಕ್ಕುಗಳ ಜಾರಿ ಗಸ್ತು” ನಡೆಸಿದ್ದು, ಇದು ಜಪಾನ್‌ನೊಂದಿಗಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

    ಸೆಂಕಾಕು/ಡಿಯಾಯು ದ್ವೀಪಗಳ ಬಗ್ಗೆ:

    • ‘ಸೆಂಕಾಕು ದ್ವೀಪಗಳು’ ಎಂಬುದು ಉಟ್ಸುರಿ, ಕಿತಾಕೋಜಿಮಾ, ಮಿನಾಮಿಕ್ಯೋಜಿಮಾ, ಕುಬಾ, ತೈಶೋ, ಒಕಿನೋಕಿತೈವಾ, ಒಕಿನೋಮಿನಾಮಿವಾ ಮತ್ತು ಟೋಬಿಸ್  ದ್ವೀಪಗಳನ್ನು ಒಳಗೊಂಡಿರುವ ದ್ವೀಪಗಳ ಸಮೂಹವನ್ನು ಸೂಚಿಸುವ ಒಂದು ಸಾಮೂಹಿಕ ಹೆಸರಾಗಿದೆ.
    • ವಿವಾದ : ಸೆಂಕಾಕು ದ್ವೀಪಗಳು ಜಪಾನ್ ಮತ್ತು ಚೀನಾ ದೇಶಗಳ ನಡುವೆ ದೀರ್ಘಕಾಲದಿಂದ ಒಂದು ವಿವಾದಾತ್ಮಕ ವಿಷಯವಾಗಿದೆ.
    • ಪ್ರಸ್ತುತ ಈ ದ್ವೀಪಗಳು ಜಪಾನ್ ದೇಶದ ನಿಯಂತ್ರಣದಲ್ಲಿವೆ.

    ಸಿಲಿಗುರಿ ಕಾರಿಡಾರ್

    ಸಾಮಾನ್ಯ ಅಧ್ಯಯನ – 3/ ಆಂತರಿಕ ಭದ್ರತೆ

    ಇದೀಗ ಸುದ್ದಿಯಲ್ಲಿ 

    • ಭಾರತೀಯ ಸೇನೆಯು ಕಾರ್ಯತಂತ್ರದ ಮಹತ್ವವುಳ್ಳ ‘ಸಿಲಿಗುರಿ ಕಾರಿಡಾರ್’ ಬಳಿ ಮೂರು ಹೊಸ ಸೇನಾ ನೆಲೆಗಳನ್ನು ಸ್ಥಾಪಿಸಿದೆ.

    ಸಿಲಿಗುರಿ ಕಾರಿಡಾರ್ ನ ಬಗ್ಗೆ:

    • ಸಿಲಿಗುರಿ ಕಾರಿಡಾರ್ ಅನ್ನು ‘ಚಿಕನ್ಸ್ ನೆಕ್’ (ಕೋಳಿಯ ಕುತ್ತಿಗೆ) ಎಂದೂ ಕೂಡ ಕರೆಯಲಾಗುತ್ತದೆ.
    • ಇದು ಪಶ್ಚಿಮ ಬಂಗಾಳದಲ್ಲಿರುವ ಒಂದು ಕಿರಿದಾದ ಭೂಭಾಗವಾಗಿದ್ದು, ಈಶಾನ್ಯ ಭಾರತದ ರಾಜ್ಯಗಳನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.
    • ಇದು ಮಹಾನಂದಾ ಮತ್ತು ತೀಸ್ತಾ ನದಿಗಳ ನಡುವೆ ನೆಲೆಗೊಂಡಿರುವ ಪೂರ್ವ ಭಾರತದ ಅತ್ಯಂತ ಪ್ರಮುಖ ಕಾರ್ಯತಂತ್ರದ ಪ್ರದೇಶವಾಗಿದೆ.

    ಸಿಲಿಗುರಿ ಕಾರಿಡಾರ್‌ನ ಮಹತ್ವ:

    • ಕಾರ್ಯತಂತ್ರದ ಸ್ಥಳ : ಒಂದು ವೇಳೆ ಈ ಕಾರಿಡಾರ್‌ನ ಸಂಪರ್ಕ ಕಡಿತಗೊಂಡರೆ, ಅದು ಈಶಾನ್ಯ ರಾಜ್ಯಗಳನ್ನು ಪ್ರತ್ಯೇಕಿಸುತ್ತದೆ. ಇದರಿಂದಾಗಿ ಸರ್ಕಾರಕ್ಕೆ ಅಗತ್ಯ ಸರಕುಗಳು, ಸೇವೆಗಳು ಮತ್ತು ಸೇನಾ ಬೆಂಬಲವನ್ನು ಪೂರೈಸುವುದು ಕಷ್ಟಕರವಾಗುತ್ತದೆ.
    • ಸೇನಾ ಮತ್ತು ರಕ್ಷಣಾ ಪರಿಗಣನೆಗಳು : ಇದು ಸೂಕ್ಷ್ಮವಾದ ಅಂತರರಾಷ್ಟ್ರೀಯ ಗಡಿಗಳಿಗೆ, ನಿರ್ದಿಷ್ಟವಾಗಿ ಚೀನಾ, ನೇಪಾಳ ಮತ್ತು ಬಾಂಗ್ಲಾದೇಶದ ಗಡಿಗಳಿಗೆ ಹತ್ತಿರದಲ್ಲಿದೆ.

    ಸರ್ವೋಚ್ಚ ನ್ಯಾಯಾಲಯವು ಹುಲಿಯ ಮೂಲ ವಾಸಸ್ಥಳಗಳಲ್ಲಿ ಹುಲಿ ಸಫಾರಿ ನಡೆಸುವುದನ್ನು ನಿಷೇಧಿಸಿದೆ

    ಸಾಮಾನ್ಯ ಅಧ್ಯಯನ – 3/ ಪರಿಸರ, ಸಂರಕ್ಷಣೆ

    ಇದೀಗ ಸುದ್ಧಿಯಲ್ಲಿದೆ.

    • ಸರ್ವೋಚ್ಚ ನ್ಯಾಯಾಲಯವು ಮೂಲ ಅಥವಾ ನಿರ್ಣಾಯಕ ಹುಲಿ ಆವಾಸಸ್ಥಾನಗಳಲ್ಲಿ ಹುಲಿ ಸಫಾರಿ ನಡೆಸುವುದನ್ನು ನಿಷೇಧಿಸಲು ನಿರ್ದೇಶನಗಳನ್ನು ನೀಡಿದೆ.

    ಪರಿಸರ ಸೂಕ್ಷ್ಮ ವಲಯಗಳ ಬಗ್ಗೆ:

    • ಅಧಿಸೂಚನೆ: ಪರಿಸರ ಸೂಕ್ಷ್ಮ ವಲಯಗಳನ್ನು ಪರಿಸರ (ಸಂರಕ್ಷಣಾ) ಕಾಯ್ದೆ, 1986 ರ ಅಡಿಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಅಧಿಸೂಚನೆ ಹೊರಡಿಸುತ್ತದೆ.
    • ವ್ಯಾಖ್ಯಾನ: ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯಗಳ ಗಡಿಯಿಂದ 10 ಕಿ.ಮೀ ವ್ಯಾಪ್ತಿಯಲ್ಲಿರುವ ಭೂಮಿಯನ್ನು ಪರಿಸರ ದುರ್ಬಲ ವಲಯಗಳು ಅಥವಾ ಪರಿಸರ ಸೂಕ್ಷ್ಮ ವಲಯಗಳು ಎಂದು ಅಧಿಸೂಚನೆ ಹೊರಡಿಸಲಾಗುತ್ತದೆ. 

    ಪರಿಸರ ಸೂಕ್ಷ್ಮ ವಲಯಗಳಲ್ಲಿನ (ESZs) ಚಟುವಟಿಕೆಗಳು:

    • ನಿಷೇಧಿತ ಚಟುವಟಿಕೆಗಳು: ವಾಣಿಜ್ಯ ಗಣಿಗಾರಿಕೆ, ಗರಗಸದ ಕಾರ್ಖಾನೆಗಳು, ಮಾಲಿನ್ಯವನ್ನು (ವಾಯು, ಜಲ, ಮಣ್ಣು, ಶಬ್ದ ಇತ್ಯಾದಿ) ಉಂಟುಮಾಡುವ ಕೈಗಾರಿಕೆಗಳು, ಪ್ರಮುಖ ಜಲವಿದ್ಯುತ್ ಯೋಜನೆಗಳ ಸ್ಥಾಪನೆ, ಮರದ ವಾಣಿಜ್ಯ ಬಳಕೆ ಇತ್ಯಾದಿ. 
    • ನಿಯಂತ್ರಿತ ಚಟುವಟಿಕೆಗಳು : ಮರಗಳನ್ನು ಕಡಿಯುವುದು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಸ್ಥಾಪನೆ, ನೈಸರ್ಗಿಕ ನೀರಿನ ವಾಣಿಜ್ಯ ಬಳಕೆ, ವಿದ್ಯುತ್ ಕೇಬಲ್‌ಗಳನ್ನು ಅಳವಡಿಸುವುದು, ಕೃಷಿ ಪದ್ಧತಿಯಲ್ಲಿನ ತೀವ್ರ ಬದಲಾವಣೆ ಇತ್ಯಾದಿ.
    • ಅನುಮತಿ ನೀಡಿದ ಚಟುವಟಿಕೆಗಳು : ಪ್ರಸ್ತುತ ನಡೆಯುತ್ತಿರುವ ಕೃಷಿ ಅಥವಾ ತೋಟಗಾರಿಕೆ ಪದ್ಧತಿಗಳು, ಮಳೆನೀರು ಕೊಯ್ಲು, ಸಾವಯವ ಕೃಷಿ ಇತ್ಯಾದಿ.
  • ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ, 2025-2030 | ಮೇಕೆದಾಟು ಜಲಾಶಯ ಯೋಜನೆ

    ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ, 2025-2030

    ಇದೀಗ ಸುದ್ದಿಯಲ್ಲಿದೆ:

    • ರಾಜ್ಯ ಸರ್ಕಾರವು ‘ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-2030’ ಕ್ಕೆ ಅಧಿಕೃತವಾಗಿ ಅನುಮೋದನೆ ನೀಡಿದೆ.

    ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ, 2025-2030 ರ ಕುರಿತು:

    • ಅನಾವರಣ: ನವೆಂಬರ್ 2025 ರಲ್ಲಿ ನಡೆದ ಪ್ರತಿಷ್ಠಿತ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ಯಲ್ಲಿ ಈ ನೀತಿಯನ್ನು ಅನಾವರಣಗೊಳಿಸಲಾಯಿತು.
    • ದೃಷ್ಟಿಕೋನ: ಬಾಹ್ಯಾಕಾಶ ನಾವೀನ್ಯತೆ ಮತ್ತು ಉತ್ಪಾದನಾ ವಲಯದಲ್ಲಿ ರಾಜ್ಯವನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಗುರಿಯನ್ನು ಹೊಂದಿರುವ ಮಹತ್ವದ ಕಾರ್ಯತಂತ್ರದ ನೀಲನಕ್ಷೆಯಾಗಿದೆ.

    ಪ್ರಮುಖ ಉದ್ದೇಶಗಳು

    ಈ ನೀತಿಯು ರಾಜ್ಯದ ಬಾಹ್ಯಾಕಾಶ ಉದ್ಯಮದ ಬೆಳವಣಿಗೆಗಾಗಿ ಈ ಕೆಳಗಿನ ಮಹತ್ವಾಕಾಂಕ್ಷೆಯ ಗುರಿ ಮತ್ತು ಉದ್ದೇಶಗಳನ್ನು ಹೊಂದಿದೆ:

    1. ಮಾರುಕಟ್ಟೆ ಪಾಲು:- ರಾಷ್ಟ್ರೀಯ ಬಾಹ್ಯಾಕಾಶ ಮಾರುಕಟ್ಟೆಯ ಶೇ. 50 ರಷ್ಟು ಪಾಲನ್ನು (2033 ರ ವೇಳೆಗೆ 22 ಶತಕೋಟಿ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ) ಮತ್ತು ಜಾಗತಿಕ ಮಾರುಕಟ್ಟೆಯ ಶೇ. 5 ರಷ್ಟು ಪಾಲನ್ನು ವಶಪಡಿಸಿಕೊಳ್ಳುವುದು.
    2. ಹೂಡಿಕೆ ಆಕರ್ಷಣೆ:- ರಾಜ್ಯದ ಬಾಹ್ಯಾಕಾಶ ಪರಿಸರ ವ್ಯವಸ್ಥೆಗೆ ಒಟ್ಟಾರೆಯಾಗಿ 3 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆಯನ್ನು ಆಕರ್ಷಿಸುವುದು.
    3. ಮಾನವ ಸಂಪನ್ಮೂಲ ಅಭಿವೃದ್ಧಿ:- ವಿಶೇಷ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ 15,000 ಮಹಿಳೆಯರು ಸೇರಿದಂತೆ ಒಟ್ಟು 50,000 ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಉನ್ನತ ತರಬೇತಿ ಮತ್ತು ಕೌಶಲ್ಯವನ್ನು  ಒದಗಿಸುವುದು.
    4. ನವೋದ್ಯಮಗಳಿಗೆ ಪ್ರೋತ್ಸಾಹ:- 500 ಬಾಹ್ಯಾಕಾಶ ನವೋದ್ಯಮಗಳು ಹಾಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ  ಪ್ರೋತ್ಸಾಹ ನೀಡುವುದು. ಕರ್ನಾಟಕದಿಂದಲೇ 50 ಉಪಗ್ರಹಗಳ ವಿನ್ಯಾಸ, ತಯಾರಿಕೆ ಮತ್ತು ಉಡಾವಣೆಗೆ ಅಗತ್ಯವಾದ ನೆರವು ನೀಡುವುದು.

    ನೀತಿಯ ಮಹತ್ವ 

    • ಈ ನೀತಿಯು ಕೇಂದ್ರ ಸರ್ಕಾರದ ‘ಭಾರತೀಯ ಬಾಹ್ಯಾಕಾಶ ನೀತಿ 2023’ ರೊಂದಿಗೆ ಮತ್ತು 2035 ರ ವೇಳೆಗೆ ‘ಭಾರತೀಯ ಅಂತರಿಕ್ಷ ನಿಲ್ದಾಣ‘ವನ್ನು ಸ್ಥಾಪಿಸುವ ಹಾಗೂ 2040 ರ ವೇಳೆಗೆ ಭಾರತೀಯ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸುವ ರಾಷ್ಟ್ರೀಯ ಗುರಿಗಳಿಗೆ ಪೂರಕವಾಗಲಿದೆ.

    ಮೇಕೆದಾಟು ಜಲಾಶಯ ಯೋಜನೆ

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕ ಮತ್ತು ತಮಿಳುನಾಡು ನಡುವಿನ ಅಂತರರಾಜ್ಯ ನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನಲ್ಲಿ ಕರ್ನಾಟಕವು ಜಲಾಶಯವನ್ನು ನಿರ್ಮಿಸಲು ಉದ್ದೇಶಿಸಿದ ಯೋಜನೆಯನ್ನು ಪ್ರಶ್ನಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು, ಸರ್ವೋಚ್ಚ ನ್ಯಾಯಾಲಯವು “ಅಕಾಲಿಕ” ಎಂದು ಪರಿಗಣಿಸಿ, ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿದೆ.

    ಕಾವೇರಿ ನದಿ ವ್ಯವಸ್ಥೆಯ ಬಗ್ಗೆ:

    • ಉಗಮ: ತಲಕಾವೇರಿ (ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟಗಳಲ್ಲಿ).
    • ಒಟ್ಟು ಉದ್ದ: 805 ಕಿ.ಮೀ.
    • ಹರಿವಿನ ದಿಕ್ಕು: ಪೂರ್ವಾಭಿಮುಖ.
    • ಹರಿಯುವ ರಾಜ್ಯಗಳು: ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶ.
    • ಉಪನದಿಗಳು: ಅರ್ಕಾವತಿ, ಶಿಂಷಾ, ಹೇಮಾವತಿ, ಕಪಿಲಾ, ಹೊನ್ನುಹೊಳೆ, ಅಮರಾವತಿ, ಲಕ್ಷ್ಮಣತೀರ್ಥ, ಕಬಿನಿ, ಲೋಕಪಾವನಿ, ಭವಾನಿ ಮತ್ತು ನೊಯ್ಯಲ್.

    ಮೇಕೆದಾಟು ಯೋಜನೆಯ ಬಗ್ಗೆ:

    • ಯೋಜನೆಯ ಸ್ವರೂಪ: ಮೇಕೆದಾಟು ಯೋಜನೆಯು ಒಂದು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಪೂರೈಕೆ ಯೋಜನೆಯಾಗಿದೆ.
    • ನಿರ್ಮಾಣ ಸ್ಥಳ: ಇದನ್ನು ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮದಲ್ಲಿ ನಿರ್ಮಿಸಲು ಕರ್ನಾಟಕ ಸರ್ಕಾರವು ಉದ್ದೇಶಿಸಿದೆ.
    • ಉದ್ದೇಶ: ಬೆಂಗಳೂರು ಮಹಾನಗರ ಮತ್ತು ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
    • ಮಹತ್ವ : ಕುಡಿಯುವ ನೀರು ಪೂರೈಕೆಯ ಜೊತೆಗೆ, ಈ ಯೋಜನೆಯು 400 ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಉತ್ಪಾದನೆಗೂ ಸಹಕಾರಿಯಾಗಲಿದೆ.
    • ಯೋಜನೆಯ ಬಗೆಗಿನ ಕಳವಳಗಳು: ಈ ಯೋಜನೆಯ ಅನುಷ್ಠಾನದಿಂದಾಗಿ “ಕಾವೇರಿ ವನ್ಯಜೀವಿ ಧಾಮ”ದ ಸುಮಾರು 63% ರಷ್ಟು ಅರಣ್ಯ ಪ್ರದೇಶವು ಮುಳುಗಡೆಯಾಗುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗಿದೆ.