ಚಾಮರಾಜನಗರದಲ್ಲಿ ಬೃಹತ್ ಶಿಲಾಯುಗದ ಉತ್ಖನನ: ಅಪರೂಪದ ಶವಸಂಸ್ಕಾರ ಪದ್ಧತಿ ಮತ್ತು ಶಿಲಾ ಕಲೆ ಪತ್ತೆ
ಇದೀಗ ಸುದ್ದಿಯಲ್ಲಿದೆ:
ಚಾಮರಾಜನಗರ ಜಿಲ್ಲೆಯ ದೊಡ್ಡಾಲತ್ತೂರಿನಲ್ಲಿ ನಡೆದ ಇತ್ತೀಚಿನ ಉತ್ಖನನಗಳು,ದಕ್ಷಿಣ ಕರ್ನಾಟಕದ ಆರಂಭಿಕಬೃಹತ್ ಶಿಲಾಯುಗದ ಶವಸಂಸ್ಕಾರ ಪದ್ಧತಿ ಮತ್ತು ಸಂಪ್ರದಾಯಗಳ ಮೇಲೆ ಹೊಸ ಬೆಳಕು ಚೆಲ್ಲಿವೆ.
ಇಲ್ಲಿ ಕಂಡುಬಂದಿರುವ ಅಸಾಮಾನ್ಯ ವಿನ್ಯಾಸಗಳು ಮತ್ತು ಬಂಡೆಗಳ ಮೇಲಿನ ಅಪರೂಪದ ಕೆತ್ತನೆಗಳು ಐತಿಹಾಸಿಕವಾಗಿ ಮಹತ್ವದ್ದಾಗಿವೆ.
ಸ್ಥಳ ಮತ್ತು ಹಿನ್ನೆಲೆ:
ಹನೂರು ತಾಲೂಕಿನ ಕೌದಳ್ಳಿಯ ನೈಋತ್ಯಕ್ಕೆ 5 ಕಿ.ಮೀ ದೂರದಲ್ಲಿರುವ ದೊಡ್ಡಾಲತ್ತೂರು, ಈ ಪ್ರದೇಶದಲ್ಲಿ ಸುಸ್ಥಿತಿಯಲ್ಲಿರುವ ಕೆಲವೇ ಕೆಲವುಬೃಹತ್ ಶಿಲಾಯುಗದ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಸಮಾಧಿಗಳು ಕಂಡು ಬರುತ್ತವೆ.
ಉತ್ಖನನದ ಪ್ರಮುಖಾಂಶಗಳು
ಸಮಾಧಿಗಳ ವಿಧಗಳು:- ಉತ್ಖನನದಲ್ಲಿ ಒಟ್ಟು 13 ಸಮಾಧಿಗಳನ್ನು ಪತ್ತೆಹಚ್ಚಲಾಗಿದೆ. ಇವು ವಿವಿಧ ವ್ಯಾಸದ ನೈಸರ್ಗಿಕ ಬಂಡೆಗಳಿಂದ ನಿರ್ಮಿಸಲಾದ ‘ಶಿಲಾವೃತ್ತಗಳು’ ಮತ್ತು ‘ಶಿಲೆಗಳ ರಾಶಿಯ ವೃತ್ತಗಳನ್ನು’ ಒಳಗೊಂಡಿವೆ.
ಇವುಗಳಲ್ಲಿ ನಾಲ್ಕು ‘ಕಲ್ಮನೆ ಸಮಾಧಿಗಳು’ ಆಗಿದ್ದರೆ, ಉಳಿದವು ‘ಬರಣಿ ಸಮಾಧಿಗಳು’ ಆಗಿವೆ.
ಪತ್ತೆಯಾದ ಅವಶೇಷಗಳು:-ಬೃಹತ್ ಶಿಲಾಯುಗಕ್ಕೆ ವಿಶಿಷ್ಟವಾದ ಕಪ್ಪು ಮತ್ತು ಕೆಂಪು ಮಡಕೆಗಳು , ಕಪ್ಪು ಮಡಕೆಗಳು, ಕೆಂಪು ಮಡಕೆಗಳು ಹಾಗೂ ಕಬ್ಬಿಣದ ವಸ್ತುಗಳು ಇಲ್ಲಿ ದೊರೆತಿವೆ.ಜೊತೆಗೆ ಅಸ್ಥಿಪಂಜರ ಮತ್ತು ಪ್ರಾಣಿಗಳ ಅವಶೇಷಗಳು ಹಾಗೂ ಕೆಲವು ಮಣಿಗಳು ಕೂಡ ಲಭ್ಯವಾಗಿವೆ.
ವಿಶೇಷ ಆವಿಷ್ಕಾರ: ಸಂಶೋಧಕರ ಪ್ರಕಾರ, ಇಲ್ಲಿ ಪತ್ತೆಯಾದ ಅತ್ಯಂತ ಕುತೂಹಲಕಾರಿ ವಸ್ತುವೆಂದರೆ ಕಬ್ಬಿಣದ ವಸ್ತು. ಇದು ವೃತ್ತಾಕಾರದಲ್ಲಿದ್ದು, ಎರಡೂ ಬದಿಗಳಲ್ಲಿ ಎರಡು ಕುಣಿಕೆಗಳನ್ನು ಹೊಂದಿದೆ ಮತ್ತು ಇದು ಕಬ್ಬಿಣದ ಗುರಾಣಿಯನ್ನು ಹೋಲುತ್ತದೆ.
ಈ ಸಮಾಧಿಯಲ್ಲಿ ಕೊಡಲಿ, ಬಾಣ ಮತ್ತುಎರಡು ಬಾಯಿಯ ಕತ್ತಿಯಂತಹ ಕಬ್ಬಿಣದ ಆಯುಧಗಳು ಪತ್ತೆಯಾಗಿವೆ. ಇದೇ ಸಮಾಧಿಯ ಬಂಡೆಗಳ ಮೇಲೆ ಮಾನವ ಆಕೃತಿಗಳನ್ನು ಕೆತ್ತಲಾಗಿದೆ.
ಕರ್ನಾಟಕದ ಈ ಭಾಗದಲ್ಲಿ ಶಿಲಾ ಕಲೆ ಅಪರೂಪವಾಗಿರುವುದರಿಂದ ಈ ಆವಿಷ್ಕಾರವು ಐತಿಹಾಸಿಕವಾಗಿ ಮಹತ್ವದ್ದಾಗಿದೆ.
ಕಾಲನಿರ್ಣಯ:- ಬರಣಿ ಮತ್ತು ಕಲ್ಮನೆ ಸಮಾಧಿಗಳಿಂದ ಸಂಗ್ರಹಿಸಲಾದ ಇದ್ದಿಲಿನ ಮಾದರಿಗಳನ್ನು ‘AMS ಕಾರ್ಬನ್-14 ವಿಶ್ಲೇಷಣೆ’ಗೆ ಒಳಪಡಿಸಲಾಗಿದೆ. ಇದರನ್ವಯ, ಈ ಸಮಾಧಿಗಳು ಕ್ರಿ.ಪೂ. 6 ನೇ ಶತಮಾನದಿಂದ ಕ್ರಿ.ಶ. 4 ನೇ ಶತಮಾನದ ಕಾಲಘಟ್ಟಕ್ಕೆ ಸೇರಿವೆ ಎಂದು ನಿರ್ಧರಿಸಲಾಗಿದೆ.ಇದು ಪರ್ಯಾಯ ದ್ವೀಪ ಭಾರತದ ಇತರೆಡೆಗಳಲ್ಲಿ ಕಂಡುಬರುವ ಬೃಹತ್ ಶಿಲಾಯುಗದ ವಾಸಸ್ಥಾನದ ಹಂತಗಳೊಂದಿಗೆ ಹೊಂದಿಕೆಯಾಗುತ್ತದೆ.
ಹೊಸ ಕರ್ನಾಟಕ ವಿಕಲಚೇತನರ ಹಕ್ಕುಗಳ ಮಸೂದೆ, 2025 ರ ಮೂಲಕ ವಿಕಲಚೇತನರ ಹಕ್ಕುಗಳನ್ನು ವಿಸ್ತರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಮಸೂದೆಯ ಪ್ರಮುಖಾಂಶಗಳು:
ಉದ್ಯೋಗ ಮೀಸಲಾತಿ:20 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ರಾಜ್ಯದ ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ವಿಕಲಚೇತನರಿಗೆ ಶೇ. 5 ರಷ್ಟು ಮೀಸಲಾತಿಯನ್ನು ಕಲ್ಪಿಸುವ‘ಉದ್ಯೋಗ ಮತ್ತು ಶಿಕ್ಷಣದಲ್ಲಿ ಕರ್ನಾಟಕ ವಿಕಲಚೇತನರ ಹಕ್ಕುಗಳ ಮಸೂದೆ, 2025’ ರ ಕರಡನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ.
ಶೈಕ್ಷಣಿಕ ಮೀಸಲಾತಿ: ಶಿಕ್ಷಣ ಸಂಸ್ಥೆಗಳು ಪ್ರತಿ ಕೋರ್ಸ್‌ನಲ್ಲಿ ಶೇ. 10 ರಷ್ಟು ಆಸನಗಳನ್ನುವಿಕಲಚೇತನ ವಿದ್ಯಾರ್ಥಿಗಳಿಗೆ ಕಾಯ್ದಿರಿಸುವುದನ್ನು ಈ ಕರಡು ಮಸೂದೆ ಕಡ್ಡಾಯಗೊಳಿಸಿದೆ. ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಒಳಗೊಳ್ಳುವಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಅನುಷ್ಠಾನದ ವಿವರಗಳು
ಹಂತ-ಹಂತವಾಗಿ ಜಾರಿ: ಕರಡು ಮಸೂದೆಯು ಖಾಸಗಿ ವಲಯದಲ್ಲಿಶೇ. 5 ರಷ್ಟು ಉದ್ಯೋಗ ಮೀಸಲಾತಿಯನ್ನು ಹಂತಹಂತವಾಗಿ ಜಾರಿಗೆ ತರಲು ನಿರ್ಧರಿಸಿದೆ.
ನಿಯಂತ್ರಣ ಮತ್ತು ವರದಿ: ಪ್ರಸ್ತಾಪಿತ ರಾಜ್ಯ ನಿಯಂತ್ರಕ ಪ್ರಾಧಿಕಾರವು ಸೂಚಿಸುವ ಮಾನದಂಡಗಳ ಆಧಾರದ ಮೇಲೆ ಕಂಪನಿಗಳು ಈ ಹುದ್ದೆಗಳನ್ನು ಹಂಚಿಕೆ ಮಾಡಬೇಕು. ಸಂಸ್ಥೆಗಳು ವಾರ್ಷಿಕ ಅನುಸರಣಾ ವರದಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಭರ್ತಿಯಾಗದ ಹುದ್ದೆಗಳನ್ನು ಮುಂದಿನ ಮೂರು ನೇಮಕಾತಿಗಳವರೆಗೆ ಮುಂದುವರೆಸಲು ಅವಕಾಶವಿದೆ.
ವಿನಾಯಿತಿಗಳು : ಸಮಂಜಸವಾದ ಸೌಕರ್ಯಗಳನ್ನು ಒದಗಿಸಿದಾಗಲೂ, ಅತ್ಯಗತ್ಯ ಉದ್ಯೋಗ ಕಾರ್ಯಗಳನ್ನು ನಿರ್ವಹಿಸಲು ಅಸಾಧ್ಯವಾದ ಸಂದರ್ಭಗಳಲ್ಲಿ ಮಾತ್ರ ವಿನಾಯಿತಿಗಳನ್ನು ನೀಡಲಾಗುತ್ತದೆ.
ಶಿಕ್ಷಣದಲ್ಲಿ ನಿರ್ದಿಷ್ಟತೆ: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಮಸೂದೆಯು ಶೇ. 10 ರಷ್ಟು ಮೀಸಲಾತಿಯನ್ನು ‘ಸಂಸ್ಥೆಯ ಮಟ್ಟದಲ್ಲಿ’ ಅನ್ವಯಿಸದೆ, ‘ಕೋರ್ಸ್-ನಿರ್ದಿಷ್ಟವಾಗಿ’ ಜಾರಿಗೊಳಿಸಲು ಸೂಚಿಸಿದೆ. ಕಾಲೇಜುಗಳು ವಿವಿಧ ವಿಭಾಗಗಳ ಸೀಟುಗಳನ್ನು ಸರಾಸರಿ ಮಾಡಿ ಮೀಸಲಾತಿ ಪ್ರಮಾಣವನ್ನು ತಗ್ಗಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಬೃಹತ್ ಶಿಲಾಯುಗದ ಮೆನ್ಹಿರ್‌ಗಳ ಪತ್ತೆ
ಇದೀಗ ಸುದ್ದಿಯಲ್ಲಿದೆ:
ಉಡುಪಿಯ ಆದಿಮ ಕಲಾ ಟ್ರಸ್ಟ್ (ರಿ.) ಕುಂದಾಪುರ ಪ್ರದೇಶದಲ್ಲಿ ಇತ್ತೀಚೆಗೆ ಕೈಗೊಂಡ ಪುರಾತತ್ವ ಅನ್ವೇಷಣೆಗಳಲ್ಲಿ ಎರಡು ಮೆನ್ಹಿರ್‌ಗಳನ್ನು ಪತ್ತೆಹಚ್ಚಲಾಗಿದೆ.
ಸ್ಥಳೀಯವಾಗಿ ‘ನಿಲ್ಸಕಲ್ಲು ‘ ಅಥವಾ ‘ಸ್ವತಂತ್ರವಾಗಿ ನಿಂತಿರುವ ಕಲ್ಲುಗಳು’ ಎಂದು ಕರೆಯಲ್ಪಡುವ ಈ ರಚನೆಗಳು, ಬೃಹತ್ ಶಿಲಾಯುಗದ ಅವಧಿಗೆ ಸೇರಿವೆ ಎಂದು ತಜ್ಞರು ಗುರುತಿಸಿದ್ದಾರೆ.
ಪತ್ತೆಯಾದ ಸ್ಥಳಗಳು ಮತ್ತು ಅಳತೆಗಳು:
ಈ ಎರಡು ಮೆನ್ಹಿರ್‌ಗಳು ಪ್ರತ್ಯೇಕ ಗ್ರಾಮಗಳಲ್ಲಿ ಪತ್ತೆಯಾಗಿದ್ದು, ವಿಶಿಷ್ಟ ಆಯಾಮಗಳನ್ನು ಹೊಂದಿವೆ:
ಹಿಲ್ಕೋಡ್ ಮೆನ್ಹಿರ್: ನೇರಳಕಟ್ಟೆ-ಅಜ್ರಿ ರಸ್ತೆಯಲ್ಲಿರುವ ಹಿಲ್ಕೋಡ್‌ನಲ್ಲಿ ಒಂದು ಮೆನ್ಹಿರ್ ಪತ್ತೆಯಾಗಿದೆ. ಈ ನಿರ್ದಿಷ್ಟ ‘ನಿಲ್ಸ್ ಕಲ್’ ಸುಮಾರು 135 ಸೆಂ.ಮೀ ಎತ್ತರವಿದೆ.
ಮಾವಿನಕೆರೆ ಮೆನ್ಹಿರ್: ಎರಡನೇ ಮೆನ್ಹಿರ್ ಕೆಂಚನೂರು ಗ್ರಾಮದ ಮಾವಿನಕೆರೆಯಲ್ಲಿ ಪತ್ತೆಯಾಗಿದೆ. ಇದು ಸುಮಾರು 112 ಸೆಂ.ಮೀ ಎತ್ತರವಿದ್ದು , ವಾಯುವ್ಯ ದಿಕ್ಕಿಗೆ ಸ್ವಲ್ಪ ವಾಲಿದಂತೆ ಕಂಡುಬರುತ್ತದೆ.
“ನಿಲ್ಸಕಲ್ಲು” ಎಂದರೇನು?
ಭೂಮಿಯ ಮೇಲೆ ಲಂಭವಾಗಿ, ಸ್ವಲ್ಪ ವಾಲಿದಂತೆ ನಿಂತು ಬೃಹತ್ ಶಿಲಾಯುಗದ ಸಮಾಧಿಯ ಮೇಲೆ ಅಥವಾ ಸಮಾಧಿ ಸಮೀಪದಲ್ಲಿ ಮೃತರ ಸ್ಮರಣಾರ್ಥವಾಗಿ ನಿಲ್ಲಿಸಲಾದ ಒರಟಾದ ಬೃಹತ್ ಶಿಲೆಗಳನ್ನು ನಿಲ್ಸಕಲ್ಲು, ನಿಂತಿಕಲ್ಲು, ಗರ್ಭಿಣಿಕಲ್ಲು, ಆನೆಕಲ್ಲು, ರಕ್ಕಸಕಲ್ಲು ಹೆಸರುಗಳಿಂದ ಕರೆಯಲಾಗುತ್ತದೆ. ದಕ್ಷಿಣ ಭಾರತದೆಲ್ಲೆಡೆ ಇಂತಹ ಕಲ್ಲುಗಳು ಕಂಡುಬರುತ್ತವೆ.
ರಾಜ್ಯದ ಮೀನುಗಾರಿಕೆ ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ‘ಮೀನುಗಾರರ ಸಂಕಷ್ಟ ಪರಿಹಾರ ನಿಧಿ’ಯ ಅಡಿಯಲ್ಲಿ ನೀಡಲಾಗುವ ಪರಿಹಾರ ಮೊತ್ತವನ್ನು ₹6 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
2024–25 ನೇ ಸಾಲಿನಲ್ಲಿ 9.63 ಲಕ್ಷ ಟನ್ ಮೀನು ಉತ್ಪಾದನೆ ಮಾಡುವ ಮೂಲಕ, ಒಟ್ಟು ಮೀನು ಉತ್ಪಾದನೆಯಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ.
ಮೀನುಗಾರರ ಸಂಕಷ್ಟ ಪರಿಹಾರ ನಿಧಿಯ ಬಗ್ಗೆ:
ಉದ್ದೇಶ:-ಮೀನುಗಾರಿಕೆಯಲ್ಲಿ ತೊಡಗಿರುವಾಗ ಸಮುದ್ರದಲ್ಲಿ ಅಥವಾ ಭೂಮಿಯ ಮೇಲೆ ಸಂಭವಿಸುವ ಅಪಘಾತಗಳು, ನೈಸರ್ಗಿಕ ವಿಪತ್ತುಗಳು ಅಥವಾ ಅಕಾಲಿಕ ಮರಣದಿಂದಾಗಿ ಸಂಕಷ್ಟಕ್ಕೆ ಸಿಲುಕುವ ಮೀನುಗಾರರಿಗೆ ಮತ್ತು ಅವರ ಕುಟುಂಬಗಳಿಗೆ ತಕ್ಷಣದ ಆರ್ಥಿಕ ಪರಿಹಾರ ಹಾಗೂ ಬೆಂಬಲವನ್ನು ಒದಗಿಸುವುದುಇದರ ಮೂಲ ಉದ್ದೇಶವಾಗಿದೆ.
ನಿರ್ವಹಣಾ ಪ್ರಾಧಿಕಾರ: ಈ ನಿಧಿಯ ನಿರ್ವಹಣೆಯನ್ನು ಕರ್ನಾಟಕ ಸರ್ಕಾರದ ‘ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ’ಯು ನಿರ್ವಹಿಸುತ್ತದೆ.
ಪರಿಹಾರದ ಮೊತ್ತ: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದಾಗ ಕಣ್ಮರೆಯಾದ ಅಥವಾ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ನೀಡಲಾಗುತ್ತಿದ್ದ ಪರಿಹಾರ ಧನವನ್ನು ರಾಜ್ಯ ಸರ್ಕಾರವು ಇತ್ತೀಚೆಗೆ ₹6 ಲಕ್ಷದಿಂದ ₹10 ಲಕ್ಷಕ್ಕೆ ಏರಿಸಿದೆ.
ಅರ್ಹತೆ:-ಪರಿಹಾರವನ್ನು ಕೋರುವ ಅರ್ಜಿದಾರರು ಇಲಾಖೆಯಲ್ಲಿ ನೋಂದಾಯಿತ ಮೀನುಗಾರರಾಗಿರಬೇಕು. ಅಲ್ಲದೆ, ಪರಿಹಾರದ ನಷ್ಟದ ಸ್ವರೂಪಕ್ಕೆ (ಉದಾಹರಣೆಗೆ: ಜೀವಹಾನಿ, ದೋಣಿ ಅಥವಾ ಮೀನುಗಾರಿಕೆ ಉಪಕರಣಗಳಿಗೆ ಹಾನಿ) ಅನುಗುಣವಾಗಿ ನಿಗದಿಪಡಿಸಲಾದ ನಿರ್ದಿಷ್ಟ ಮಾನದಂಡಗಳನ್ನು ಪೂರೈಸಿರಬೇಕು.
ದಶಕಗಳಿಂದಲೂ ಸಶಸ್ತ್ರ ಪಡೆಗಳ ಕಸರತ್ತು, ಯುದ್ಧಗಳು, ಸಮಾರಂಭಗಳು ಮತ್ತು ಪಥಸಂಚಲನಗಳಲ್ಲಿ ಅವಿಭಾಜ್ಯ ಸಾಧನವಾಗಿ ಬಳಕೆಯಾಗುತ್ತಿದ್ದ ‘ಬ್ಯೂಗಲ್’ ವಾದ್ಯವು ಇತ್ತೀಚೆಗೆ ಪ್ರತಿಷ್ಠಿತ “ಭೌಗೋಳಿಕ ಸೂಚ್ಯಂಕ” (GI) ಟ್ಯಾಗ್‌ಗೆ ಭಾಜನವಾಗಿದೆ.
ಮೀರತ್ ಬ್ಯೂಗಲ್ ವಾದ್ಯದ ಬಗ್ಗೆ:
ಮೀರತ್‌ನಲ್ಲಿ ಬ್ಯೂಗಲ್ ತಯಾರಿಕೆಯು 19ನೇ ಶತಮಾನದಷ್ಟು ಹಳೆಯ ಇತಿಹಾಸವನ್ನು ಹೊಂದಿದೆ.
ಭಾರತದ ಸೇನಾ ಸಂಸ್ಕೃತಿ ಬೆಳೆದಂತೆಲ್ಲಾ, ಈ ವಾದ್ಯದ ಇತಿಹಾಸವೂ ಅದರೊಂದಿಗೇ ಸಾಗಿಬಂದಿದೆ.
ಬ್ರಿಟಿಷರ ಕಾಲದಲ್ಲಿ ಇದನ್ನು ‘ಆದೇಶ ನೀಡುವ ಸಾಧನ’ವಾಗಿ ಬಳಸುತ್ತಿದ್ದರು. ಸೇನೆ ಎಷ್ಟೇ ಆಧುನಿಕವಾದರೂ, ಬ್ಯೂಗಲ್ ತನ್ನ ಗೌರವದ ಸ್ಥಾನವನ್ನು ಇಂದಿಗೂ ಉಳಿಸಿಕೊಂಡಿದೆ.
ಸರ್ಕಾರಿ ಭದ್ರತಾ ಪತ್ರಗಳು (G-Secs)
ಸಾಮಾನ್ಯ ಅಧ್ಯಯನ – 3/ ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತಗೊಳಿಸಿದ್ದರೂ ಸಹ, ಸರ್ಕಾರಿ ಭದ್ರತಾ ಪತ್ರಗಳ ಇಳುವರಿಯು ಸ್ವಲ್ಪಮಟ್ಟಿಗೆ ಏರುಗತಿಯನ್ನು ಸಾಧಿಸಿದೆ.
ಸರ್ಕಾರಿ ಭದ್ರತಾ ಪತ್ರ (G-Sec) ಗಳ ಬಗ್ಗೆ:
ವ್ಯಾಖ್ಯಾನ:- ಈ ಪತ್ರಗಳು ಕೇಂದ್ರ ಸರ್ಕಾರ ಇಲ್ಲವೇ ರಾಜ್ಯ ಸರ್ಕಾರಗಳಿಂದ ಹೊರಡಿಸಲ್ಪಡುವ ಒಂದು ವ್ಯಾಪಾರಾರ್ಹ ಭದ್ರತಾ ಸಾಧನಗಳಾಗಿವೆ.
ಹೊಣೆಗಾರಿಕೆ:- ಈ ಪತ್ರಗಳು ಸರ್ಕಾರದಸಾಲದ ಹೊಣೆಗಾರಿಕೆಯನ್ನು ಔಪಚಾರಿಕವಾಗಿ ಅಥವಾ ಅಧಿಕೃತವಾಗಿ ಅಂಗೀಕರಿಸುತ್ತವೆ.
ಸ್ವರೂಪ: ಈ ಪತ್ರಗಳು ಅಲ್ಪಾವಧಿ ಮತ್ತು ದೀರ್ಘಾವಧಿ ಸ್ವರೂಪಗಳನ್ನು ಒಳಗೊಂಡಿರುತ್ತವೆ:
ಅಲ್ಪಾವಧಿ ಭದ್ರತಾ ಪತ್ರಗಳು: ಇವುಗಳನ್ನು ಸಾಮಾನ್ಯವಾಗಿ ಖಜಾನೆ ಬಿಲ್ಲುಗಳು ಎಂದು ಕರೆಯಲಾಗುತ್ತದೆ. ಇವುಗಳ ಮೂಲದ ಮುಕ್ತಾಯ ಅವಧಿಯು ಒಂದು ವರ್ಷಕ್ಕಿಂತ ಕಡಿಮೆ ಇರುತ್ತದೆ.
ದೀರ್ಘಾವಧಿ ಭದ್ರತಾ ಪತ್ರಗಳು: ಇವುಗಳನ್ನು ಸಾಮಾನ್ಯವಾಗಿ ಸರ್ಕಾರಿ ಬಾಂಡ್‌ಗಳು ಅಥವಾ ದಿನಾಂಕ ಸಹಿತ ಭದ್ರತಾ ಪತ್ರಗಳು ಎಂದು ಕರೆಯಲಾಗುತ್ತದೆ. ಇವುಗಳ ಮೂಲದ ಮುಕ್ತಾಯ ಅವಧಿಯು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)
ಸಾಮಾನ್ಯ ಅಧ್ಯಯನ – 3/ ಆಂತರಿಕ ಭದ್ರತೆ
ಇದೀಗ ಸುದ್ದಿಯಲ್ಲಿದೆ:
‘ಅಂತರರಾಷ್ಟ್ರೀಯ ಹಡಗು ಮತ್ತು ಬಂದರು ಸೌಲಭ್ಯ ಭದ್ರತಾ ಸಂಹಿತೆ’ಯ (ISPS Code) ಅಡಿಯಲ್ಲಿ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯನ್ನು ‘ಮಾನ್ಯತೆ ಪಡೆದ ಭದ್ರತಾ ಸಂಸ್ಥೆ’ ಯನ್ನಾಗಿ ಅಧಿಕೃತವಾಗಿ ನಾಮನಿರ್ದೇಶನ ಮಾಡಲಾಗಿದೆ.
ಭಾರತದಲ್ಲಿ ಸುಮಾರು 250 ಬಂದರುಗಳಿದ್ದು, ಅವುಗಳಲ್ಲಿ 65–68 ಬಂದರುಗಳು ಸರಕು ಸಾಗಣೆ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಯ ಬಗ್ಗೆ:
ಸ್ಥಾಪನೆ ಮತ್ತು ಸ್ಥಾನಮಾನ: ಇದು 1968 ರ ‘ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಕಾಯಿದೆ’ ಯ ಅನ್ವಯ 1969 ರಲ್ಲಿ ಅಸ್ತಿತ್ವಕ್ಕೆ ಬಂದ ಒಂದು ಅರೆಸೇನಾ ಪಡೆಯಾಗಿದೆ.
ದಿನಾಚರಣೆ: ಪ್ರತಿ ವರ್ಷ ಮಾರ್ಚ್ 10 ರಂದು ‘CISF ಸ್ಥಾಪನಾ ದಿನ’ವನ್ನು ಆಚರಿಸಲಾಗುತ್ತದೆ.
ಆಡಳಿತಾತ್ಮಕ ನಿಯಂತ್ರಣ: ಈ ಪಡೆಯು ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯದ ನೇರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.
ಪ್ರಮುಖ ಕಾರ್ಯಗಳು: ದೇಶದ ತಂತ್ರಾತ್ಮಕ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುವುದು ಇದರ ಪ್ರಮುಖ ಕರ್ತವ್ಯವಾಗಿದೆ. ಪ್ರಮುಖವಾಗಿ ಈ ಕೆಳಗಿನ ಸಂಸ್ಥೆಗಳಿಗೆ ಈ ಪಡೆಯು ರಕ್ಷಣೆ ನೀಡುತ್ತದೆ:
ಬಾಹ್ಯಾಕಾಶ ಇಲಾಖೆ
ಪರಮಾಣು ಶಕ್ತಿ ಇಲಾಖೆ
ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೋ ಮತ್ತು ಬಂದರುಗಳು
ಐತಿಹಾಸಿಕ ಸ್ಮಾರಕಗಳು
ಭಾರತೀಯ ಆರ್ಥಿಕತೆಯ ಮೂಲಭೂತ ಕ್ಷೇತ್ರಗಳಾದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಿದ್ಯುಚ್ಛಕ್ತಿ, ಕಲ್ಲಿದ್ದಲು, ಉಕ್ಕು ಮತ್ತು ಗಣಿಗಾರಿಕೆ ಸ್ಥಾವರಗಳಿಗೆ ಇದು ಭದ್ರತೆಯನ್ನು ಒದಗಿಸುತ್ತದೆ.
ಸಂವಿಧಾನದ ವಿಧಿ 240
ಸಾಮಾನ್ಯ ಅಧ್ಯಯನ – 2/ ಆಡಳಿತ
ಇದೀಗ ಸುದ್ದಿಯಲ್ಲಿದೆ:
ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ, ಚಂಡೀಗಢವನ್ನು ಸಂವಿಧಾನದ ‘ವಿಧಿ 240’ ರವ್ಯಾಪ್ತಿಗೆ ತರಲು ಯಾವುದೇ ‘ಸಂವಿಧಾನ ತಿದ್ದುಪಡಿ ಮಸೂದೆ’ಯನ್ನು ಮಂಡಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯವು ಸ್ಪಷ್ಟಪಡಿಸಿದೆ.
131 ನೇ ಸಂವಿಧಾನ ತಿದ್ದುಪಡಿ ಮಸೂದೆ, 2025 ರ ಬಗ್ಗೆ:
ಈ ಮಸೂದೆಯು ಚಂಡೀಗಢವನ್ನುವಿಧಿ 240 ರ ಅಡಿಯಲ್ಲಿ ತರಲು ಪ್ರಸ್ತಾಪಿಸುತ್ತದೆ. ಈ ಮೂಲಕ ಶಾಸಕಾಂಗಗಳನ್ನು ಹೊಂದಿರದ ಕೇಂದ್ರಾಡಳಿತ ಪ್ರದೇಶಗಳ ಗುಂಪಿಗೆ ಇದನ್ನು ಸೇರಿಸುತ್ತದೆ ಮತ್ತು ಅದಕ್ಕಾಗಿ ನಿಯಮಾವಳಿಗಳನ್ನು ರೂಪಿಸಲು ರಾಷ್ಟ್ರಪತಿಯವರಿಗೆ ಅಧಿಕಾರ ನೀಡುತ್ತದೆ.
ಇದು ಚಂಡೀಗಢ ಕೇಂದ್ರಾಡಳಿತ ಪ್ರದೇಶದಲ್ಲಿ ಸ್ವತಂತ್ರ ‘ಆಡಳಿತಾಧಿಕಾರಿ’ಯ ನೇಮಕಕ್ಕೆ ದಾರಿ ಮಾಡಿಕೊಡುತ್ತದೆ.
ಚಂಡೀಗಢಕ್ಕಾಗಿ ಕೇಂದ್ರ ಸರ್ಕಾರದ ಕಾನೂನು ರಚನಾ ಪ್ರಕ್ರಿಯೆಯನ್ನು ಸರಳಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ.
ಶಾಸಕಾಂಗಗಳನ್ನು ಹೊಂದಿರದ ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಆಡಳಿತದಲ್ಲಿ ಏಕರೂಪತೆಯನ್ನು ಖಚಿತಪಡಿಸುವುದು ಇದರ ಗುರಿಯಾಗಿದೆ.
ಸಂಸತ್ತಿನ ಕಾಯಿದೆಗಳಿಗೆ ಸಮನಾದ ನಿಯಮಾವಳಿಗಳನ್ನು ಚಂಡೀಗಢಕ್ಕಾಗಿ ರೂಪಿಸಲು ರಾಷ್ಟ್ರಪತಿಯವರಿಗೆ ಅಧಿಕಾರ ನೀಡುವುದು ಇದರ ಉದ್ದೇಶವಾಗಿದೆ.
ಸಂವಿಧಾನದ 240 ನೇ ವಿಧಿಯ ಬಗ್ಗೆ:
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಹಾಗೂ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಸೇರಿದಂತೆ, ನಿರ್ದಿಷ್ಟ ಕೇಂದ್ರಾಡಳಿತ ಪ್ರದೇಶಗಳ ಶಾಂತಿ, ಪ್ರಗತಿ ಮತ್ತು ಪರಿಣಾಮಕಾರಿ ಆಡಳಿತಕ್ಕಾಗಿ ನಿಯಮಾವಳಿಗಳನ್ನು ರೂಪಿಸುವ ಅಧಿಕಾರವನ್ನು ಸಂವಿಧಾನದ 240 ನೇ ವಿಧಿಯು ರಾಷ್ಟ್ರಪತಿಯವರಿಗೆ ನೀಡುತ್ತದೆ.
ಹಂತ -3 ರ ‘ಪ್ರವೇಶಸಾಧ್ಯತೆ ವರ್ಧನೆ ಮಾನ್ಯತೆ’ ಪಡೆದ ಭಾರತದ ಮೊದಲ ವಿಮಾನ ನಿಲ್ದಾಣ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ
ಇದೀಗ ಸುದ್ದಿಯಲ್ಲಿದೆ:
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ (ACI) ನೀಡುವ ಪ್ರತಿಷ್ಠಿತ ‘ಪ್ರವೇಶಸಾಧ್ಯತೆ ವರ್ಧನೆ ಮಾನ್ಯತೆ’ (AEA) ಕಾರ್ಯಕ್ರಮದ ಅಡಿಯಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ‘ಹಂತ- 3’ ರ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಮೂಲಕ, ಈ ಸಾಧನೆಗೈದ ಭಾರತದ ಮೊಟ್ಟಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಪಡೆಯು, ವಾಸ್ತವ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸುವ 10 ಗಡಿ ಹೊರಠಾಣೆಗಳನ್ನು ಸ್ಥಾಪಿಸುತ್ತಿದೆ. ಗಡಿ ಭದ್ರತಾ ವ್ಯವಸ್ಥೆಯಲ್ಲಿ ಲಿಂಗ ಸಮನ್ವಯತೆ ಮತ್ತು ಒಳಗೊಳ್ಳುವಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ನ ಬಗ್ಗೆ:
ಸ್ಥಾಪನೆ: ಭಾರತ ಮತ್ತು ಚೀನಾ ಯುದ್ಧದ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, 1962 ರ ಅಕ್ಟೋಬರ್ 24 ರಂದು ಈ ಪಡೆಯನ್ನು ಅಸ್ತಿತ್ವಕ್ಕೆ ತರಲಾಯಿತು.
ಸ್ಥಾನಮಾನ: ಇದು ಕೇಂದ್ರ ಗೃಹ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ‘ಕೇಂದ್ರ ಸಶಸ್ತ್ರ ಪೊಲೀಸ್ ಪಡೆ’ಗಳಲ್ಲಿ (CAPF) ಒಂದಾಗಿದೆ.
ಧ್ಯೇಯವಾಕ್ಯ: “ಶೌರ್ಯ-ದೃಢತೆ-ಕರ್ಮ ನಿಷ್ಠೆ”.
ಕಾರ್ಯನಿರ್ವಹಣಾ ಪಾತ್ರ: ಲಡಾಖ್‌ನ ಕಾರಾಕೋರಂ ಕಣಿವೆಮಾರ್ಗದಿಂದ ಅರುಣಾಚಲ ಪ್ರದೇಶದ ಜಾಚೆಪ್ ಲಾ ವರೆಗೆ ಹಬ್ಬಿರುವ, ಸುಮಾರು 3,488 ಕಿ.ಮೀ. ಉದ್ದವಾದ ಭಾರತ-ಚೀನಾ ಗಡಿಯ ಕಾವಲು ಕಾಯುವುದು ಮತ್ತು ರಕ್ಷಣೆ ಒದಗಿಸುವುದು ಇದರ ಪ್ರಮುಖ ಜವಾಬ್ದಾರಿಯಾಗಿದೆ.
ಕಾನೂನಾತ್ಮಕ ಚೌಕಟ್ಟು: ಈ ಪಡೆಯ ಕಾರ್ಯನಿರ್ವಹಣೆಗೆ ಕಾನೂನು ಬಲ ನೀಡಲು, 1992 ರಲ್ಲಿ ‘ಐಟಿಬಿಪಿಎಫ್ ಕಾಯಿದೆ’ ಯನ್ನು ಜಾರಿಗೆ ತರಲಾಯಿತು. ನಂತರ , 2004 ರಲ್ಲಿ ಭಾರತ-ಚೀನಾ ಗಡಿಯ ಸಮಗ್ರ ಕಾವಲು ಜವಾಬ್ದಾರಿಯನ್ನು ಈ ಪಡೆಗೆ ನಿಯೋಜಿಸಲಾಯಿತು.
ಆಫ್ರಿಕಾದ ಬೂದು ಗಿಳಿ
ಸಾಮಾನ್ಯ ಅಧ್ಯಯನ – 3/ ಪ್ರಭೇದಗಳು
ಇದೀಗ ಸುದ್ದಿಯಲ್ಲಿದೆ:
ದೇಶದ ಮಾರುಕಟ್ಟೆಗಳಲ್ಲಿ ಆಫ್ರಿಕಾದ ಬೂದು ಗಿಳಿಗಳು ವ್ಯಾಪಕವಾಗಿ ಲಭ್ಯವಿದ್ದರೂ ಕೂಡ, ಇವುಗಳಿಗೆ ಸಂಬಂಧಿಸಿದಂತೆ ಅಧಿಕೃತವಾಗಿ ನೋಂದಾಯಿತ ತಳಿಗಾರರು ಅಥವಾ ಅಧಿಕೃತ ಸಾಕುಪ್ರಾಣಿ ಮಾರಾಟ ಮಳಿಗೆಗಳು ಭಾರತದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ರಾಜ್ಯ ಅರಣ್ಯ ಇಲಾಖೆಗಳು ಸ್ಪಷ್ಟಪಡಿಸಿವೆ.
‘ಆಫ್ರಿಕಾದ ಬೂದು ಗಿಳಿ’ ಯ ಬಗ್ಗೆ:
ವೈಜ್ಞಾನಿಕ ಹೆಸರು:- ಸಿಟ್ಟಾಕಸ್ ಎರಿಥಾಕಸ್ (Psittacus erithacus). ಇದು ಮಧ್ಯಮ ಗಾತ್ರದ ಹಾಗೂ ಅತ್ಯಂತ ಬುದ್ಧಿವಂತ ಗಿಳಿ ಪ್ರಭೇದವಾಗಿದೆ.
ಇದನ್ನು ಸಾಮಾನ್ಯವಾಗಿ “ಪಕ್ಷಿ ಸಂಕುಲದ ಐನ್‌ಸ್ಟೀನ್‌ಗಳು” ಎಂದು ಪರಿಗಣಿಸಲಾಗುತ್ತದೆ.
ಮೂಲ ಆವಾಸಸ್ಥಾನ:- ಇದು ಪಶ್ಚಿಮ ಮತ್ತು ಮಧ್ಯ ಆಫ್ರಿಕಾಕ್ಕೆ ಸ್ಥಳೀಯವಾಗಿದ್ದು, ಪ್ರಮುಖವಾಗಿ ಸವನ್ನಾ (ಹುಲ್ಲುಗಾವಲು) ಪ್ರದೇಶಗಳು ಮತ್ತು ಕರಾವಳಿ ಮ್ಯಾಂಗ್ರೋವ್‌ಗಳಲ್ಲಿ ಕಂಡುಬರುತ್ತದೆ.
ಇದರಲ್ಲಿ ಎರಡು ಪ್ರಮುಖ ಉಪ-ಪ್ರಭೇದಗಳಿವೆ:-
ಕಾಂಗೋ ಆಫ್ರಿಕಾದ ಬೂದು (CAG) ಗಿಳಿ: ಇದು ತನ್ನ ಪ್ರಕಾಶಮಾನವಾದ ಕೆಂಪು ಬಾಲಕ್ಕೆ ಹೆಸರುವಾಸಿಯಾಗಿದೆ.
ಟಿಮ್ನೆ ಆಫ್ರಿಕಾದ ಬೂದು (CAG) ಗಿಳಿ: ಇದು ಗಾಢವಾದ ಕಡುಗೆoಪು ಮಿಶ್ರಣ ಬಣ್ಣದ ಬಾಲವನ್ನು ಹೊಂದಿರುತ್ತದೆ.
ವಿಶಿಷ್ಟತೆ – ಆಫ್ರಿಕಾದ ಬೂದು ಗಿಳಿಗಳು ತಮ್ಮ ಅಸಾಧಾರಣ ಮಾತುಗಾರಿಕೆ ಮತ್ತು ಗ್ರಹಿಕೆ ಸಾಮರ್ಥ್ಯಗಳಿಗೆ ಪ್ರಖ್ಯಾತವಾಗಿವೆ. ಇವು ದೊಡ್ಡ ಶಬ್ದಕೋಶವನ್ನು ನೆನಪಿನಲ್ಲಿಟ್ಟುಕೊಳ್ಳುವ ಮತ್ತು ಸಂದರ್ಭಕ್ಕೆ ತಕ್ಕಂತೆ ಮಾತನಾಡುವ ಸಾಮರ್ಥ್ಯವನ್ನು ಹೊಂದಿವೆ.
IUCN ಕೆಂಪು ಪಟ್ಟಿಯಲ್ಲಿ ಸ್ಥಾನ:- ಇದನ್ನು “ಅಳಿವಿನಂಚಿನಲ್ಲಿರುವ (EN)” ಪ್ರಭೇದಎಂದು ವರ್ಗೀಕರಿಸಲಾಗಿದೆ.
ಸೆಮೆರು ಪರ್ವತ (Mount Semeru)
ಸಾಮಾನ್ಯ ಅಧ್ಯಯನ – 1 / ಪ್ರಾಕೃತಿಕ ಭೂಗೋಳಶಾಸ್ತ್ರ
ಇದೀಗ ಸುದ್ದಿಯಲ್ಲಿದೆ:
ಇಂಡೋನೇಷ್ಯಾದ ಪೂರ್ವ ಜಾವಾದಲ್ಲಿ ನೆಲೆಗೊಂಡಿರುವ ಸೆಮೆರು ಪರ್ವತದ ಜ್ವಾಲಾಮುಖಿಯು ಇತ್ತೀಚೆಗೆ ಸ್ಫೋಟಗೊಂಡಿದೆ.
ಇಂಡೋನೇಷ್ಯಾ ಜ್ವಾಲಾಮುಖಿ ಸ್ಫೋಟಗಳಿಗೆ ಹೆಚ್ಚು ತುತ್ತಾಗಲು ಕಾರಣಗಳು:
ಇಂಡೋ-ಆಸ್ಟ್ರೇಲಿಯನ್ ಭೂಫಲಕವು ಯುರೇಷಿಯನ್ ಭೂಫಲಕದ ಅಡಿಯಲ್ಲಿ ಕುಸಿಯುವ ‘ಒಮ್ಮುಖ ಭೂಫಲಕ ಗಡಿ’ಯ ಮೇಲೆ ಇಂಡೋನೇಷ್ಯಾ ನೆಲೆಗೊಂಡಿದೆ.
ಈ ಪ್ರಕ್ರಿಯೆಯು ಜಾವಾ, ಸುಮಾತ್ರಾ ಮತ್ತು ಸುಂಡಾ ದ್ವೀಪದುದ್ದಕ್ಕೂ ಸ್ತರ ಜ್ವಾಲಾಮುಖಿಗಳ ಸರಪಳಿಯನ್ನು ಸೃಷ್ಟಿಸುತ್ತದೆ.
ಇದು ಫೆಸಿಫಿಕ್ ನ ‘ಅಗ್ನಿ ವರ್ತುಲ’ದ (Ring of Fire) ಹೃದಯಭಾಗದಲ್ಲಿದೆ. ವಿಶ್ವದ ಶೇಕಡಾ 75 ರಷ್ಟು ಜ್ವಾಲಾಮುಖಿಗಳು ಮತ್ತು ಶೇಕಡಾ 90 ರಷ್ಟು ಭೂಕಂಪಗಳು ಈ ವಲಯದಲ್ಲೇ ಸಂಭವಿಸುತ್ತವೆ.
ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (GSI)
ಸಾಮಾನ್ಯ ಅಧ್ಯಯನ – 1/ ಭೂಗೋಳಶಾಸ್ತ್ರ
ಇದೀಗ ಸುದ್ದಿಯಲ್ಲಿದೆ:
ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಯ (GSI) 175ನೇ ಸ್ಥಾಪನಾ ವರ್ಷದ ಆಚರಣೆಯ ಭಾಗವಾಗಿ, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರು “ಭೂತಕಾಲದ ಶೋಧನೆ, ಭವಿಷ್ಯದ ರೂಪಿಸುವಿಕೆ: GSI ನ 175 ವರ್ಷಗಳು” ಎಂಬ ಶೀರ್ಷಿಕೆಯ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು.
ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (GSI) ಯ ಬಗ್ಗೆ:
ಈ ಸಂಸ್ಥೆಯುಭಾರತದ ಅಗ್ರಗಣ್ಯ ರಾಷ್ಟ್ರೀಯ ಭೂವೈಜ್ಞಾನಿಕ ಸಂಸ್ಥೆಯಾಗಿದೆ.
ಕಾರ್ಯನಿರ್ವಹಣೆ:- ಇದು ಕೇಂದ್ರ ಗಣಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಸ್ಥಾಪನೆ:- ಈ ಸಂಸ್ಥೆಯನ್ನು 1851 ರಲ್ಲಿ ಸರ್ ಥಾಮಸ್ ಓಲ್ಡ್‌ಹ್ಯಾಮ್ ಅವರು ಸ್ಥಾಪಿಸಿದರು.
ಜಾನ್ ಮೆಕ್ಲೆಲ್ಯಾಂಡ್ ಅವರ ನೇತೃತ್ವದಲ್ಲಿ ನಡೆದ ಕಲ್ಲಿದ್ದಲು ಅನ್ವೇಷಣೆಯ ಸಂದರ್ಭದಲ್ಲಿ, 1848 ರಲ್ಲಿ ಮೊದಲ ಬಾರಿಗೆ “ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ” ಎಂಬ ಪದವನ್ನು ಬಳಸಲಾಯಿತು.
ಪ್ರಮುಖ ಕಾರ್ಯಗಳು:
ಭೂವೈಜ್ಞಾನಿಕ ನಕ್ಷೆ ಮತ್ತು ಸಮೀಕ್ಷೆಗಳು:- ಭೂ, ವಾಯುಗಾಮಿ ಮತ್ತು ಸಾಗರ ಸಮೀಕ್ಷೆಗಳನ್ನು ಒಳಗೊಂಡಂತೆ, ಮೇಲ್ಮೈ ಹಾಗೂ ಉಪ-ಮೇಲ್ಮೈ ಭೂವಿಜ್ಞಾನದ ಸಮಗ್ರ ನಕ್ಷೆಗಳನ್ನು ತಯಾರಿಸುವುದು ಮತ್ತು ನಿರ್ವಹಿಸುವುದು.
ಖನಿಜ ಅನ್ವೇಷಣೆ : ಖನಿಜ, ಇಂಧನ (ಕಲ್ಲಿದ್ದಲು, ತೈಲ ಸೇರಿದಂತೆ) ಮತ್ತು ಜಲ ಸಂಪನ್ಮೂಲಗಳ ವೈಜ್ಞಾನಿಕ ಅನ್ವೇಷಣೆ ಹಾಗೂ ಮೌಲ್ಯಮಾಪನ ಮಾಡುವುದು.
ಭೂವೈಪರೀತ್ಯ ಅಧ್ಯಯನಗಳು:- ಭೂಕಂಪನ-ಭೂರಚನಾ ಸಂಶೋಧನೆ, ಹಿಮನದಿ ಶಾಸ್ತ್ರ, ಹವಾಮಾನ ಸಂಬಂಧಿತ ಭೂ-ಅಧ್ಯಯನಗಳು ಮತ್ತು ವಿಪತ್ತು ಅಪಾಯದ ವಿಶ್ಲೇಷಣೆಯನ್ನು ನಡೆಸುವುದು.
ಭೂತಾಂತ್ರಿಕ ಮತ್ತು ಭೂಪರಿಸರೀಯ ಅಧ್ಯಯನಗಳು : ಮೂಲಸೌಕರ್ಯ ಯೋಜನೆ, ಅಂತರ್ಜಲ ಅಧ್ಯಯನಗಳು, ಭೂಸ್ಥಿರತೆ ವಿಶ್ಲೇಷಣೆ ಮತ್ತು ಪರಿಸರ ಮೌಲ್ಯಮಾಪನಗಳಿಗೆ ಉತ್ತೇಜನ ನೀಡುವುದು.
ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಕಾರ್ಯಕ್ರಮ (ICDS)
ಸಾಮಾನ್ಯ ಅಧ್ಯಯನ – 2/ ಸರ್ಕಾರಿ ಯೋಜನೆಗಳು
ಇದೀಗ ಸುದ್ದಿಯಲ್ಲಿ
ಅಂಗನವಾಡಿಗಳ ಮುಖಾಂತರ ಪೌಷ್ಟಿಕಾಂಶ, ಶಿಕ್ಷಣ ಮತ್ತು ಬಾಲ್ಯಾವಸ್ಥೆಯ ಆರೈಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ‘ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ICDS) ಕಾರ್ಯಕ್ರವನ್ನು ವ್ಯಾಪಕವಾಗಿ ವಿಸ್ತರಣೆಗೊಂಡಿದೆ.
ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ICDS) ಕಾರ್ಯಕ್ರಮದ ಬಗ್ಗೆ:
ಆರಂಭ: 1975ರ ಅಕ್ಟೋಬರ್ 2
ಇದೊಂದು ದೇಶದ ಮಹತ್ವಾಕಾಂಕ್ಷೆಯ ‘ಪೂರ್ವ ಬಾಲ್ಯಾವಸ್ಥೆಯ ಆರೈಕೆ ಮತ್ತು ಅಭಿವೃದ್ಧಿ’ (ECCD) ಯೋಜನೆಯಾಗಿದೆ.
ಇದು ದೇಶಾದ್ಯಂತದ ಅಂಗನವಾಡಿ ಕೇಂದ್ರಗಳ ಜಾಲದ ಮೂಲಕ, 6 ವರ್ಷದೊಳಗಿನ ಮಕ್ಕಳು ಹಾಗೂ ತಾಯಂದಿರಿಗೆಪೌಷ್ಟಿಕಾಂಶ, ಆರೋಗ್ಯ ರಕ್ಷಣೆ ಮತ್ತು ಶಾಲಾ ಪೂರ್ವ ಶಿಕ್ಷಣದಂತಹ ಸಮಗ್ರ ಸೇವೆಗಳನ್ನು ಒದಗಿಸುತ್ತದೆ.
ಹಣಕಾಸು: ಇದೊಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
ಪೌಷ್ಟಿಕಾಂಶ ಮತ್ತು ಬಾಲ್ಯದ ಆರಂಭಿಕ ಆರೈಕೆಯನ್ನು ಏಕೀಕರಿಸುವ ಸಲುವಾಗಿ, ಪ್ರಸ್ತುತ ಇದನ್ನು ‘ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0’ ಅಭಿಯಾನದ ವ್ಯಾಪ್ತಿಗೆ ತರಲಾಗಿದೆ.
ಅಮಿಬಿಕ್ ಮೆನಿಂಗೊ ಎನ್ಸೆಫಾಲಿಟಿಸ್
ಸಾಮಾನ್ಯ ಅಧ್ಯಯನ – 2/ ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
ಅಮಿಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಅಥವಾ ಮೆದುಳು ಜ್ವರದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ, ಶಬರಿಮಲೆ ಯಾತ್ರಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಅಮಿಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ನ ಬಗ್ಗೆ:
ರೋಗಕಾರಕ – ಇದು ‘ನೇಗ್ಲೆರಿಯಾ ಫೌಲೆರಿ’ ಎಂಬ ರೋಗಕಾರಕದಿಂದ ಉಂಟಾಗುವ ಅಪರೂಪದ ಮೆದುಳಿನ ಸೋಂಕಾಗಿದೆ.
‘ನೇಗ್ಲೆರಿಯಾ ಫೌಲೆರಿ’ ಎಂಬುದು ಬೆಚ್ಚಗಿನ ಸಿಹಿನೀರು ಮತ್ತು ಮಣ್ಣಿನಲ್ಲಿ ಕಂಡುಬರುವ ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದೆ.
ಹರಡುವಿಕೆ: ಈಜುವುದು, ಧಾರ್ಮಿಕ ಆಚರಣೆಗಳಲ್ಲಿ ಮೂಗನ್ನು ಸ್ವಚ್ಛಗೊಳಿಸುವುದು ಇತ್ಯಾದಿ ಚಟುವಟಿಕೆಗಳ ಸಂದರ್ಭದಲ್ಲಿ, ಕಲುಷಿತ ನೀರು ಮೂಗಿನ ಮೂಲಕ ಪ್ರವೇಶಿಸಿದಾಗ ಸಾಮಾನ್ಯವಾಗಿ ಈ ಸೋಂಕು ಉಂಟಾಗುತ್ತದೆ.
ಇದು ನೀರನ್ನು ಕುಡಿಯುವುದರಿಂದ ಅಥವಾ ವ್ಯಕ್ತಿಯಿಂದ ವ್ಯಕ್ತಿಗೆ ನೇರ ಸಂಪರ್ಕದ ಮೂಲಕ ಹರಡುವುದಿಲ್ಲ.
ಲಕ್ಷಣಗಳು: ಇದು ಮೆದುಳಿಗೆ ಸಂಚರಿಸಿ, ಅಲ್ಲಿನ ಅಂಗಾಂಶಗಳನ್ನು ನಾಶಪಡಿಸುತ್ತದೆ ಮತ್ತು ಮೆದುಳಿನ ಊತಕ್ಕೆ ಕಾರಣವಾಗುತ್ತದೆ.
ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳು: ಅಪಾಯವನ್ನು ತಗ್ಗಿಸಲು, ನೀರಿನ ಚಟುವಟಿಕೆಗಳ ಸಮಯದಲ್ಲಿ ಮೂಗಿನೊಳಗೆ ನೀರು ಹೋಗದಂತೆ ನಿಯಂತ್ರಿಸಬೇಕು.
‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2025’ (BTS 2025) ನವೆಂಬರ್ 18 ರಿಂದ 20 ರವರೆಗೆ ‘ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ’ದಲ್ಲಿ (BIEC) ಯಶಸ್ವಿಯಾಗಿ ಜರುಗಿತು.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ, 2025 ರ ಪ್ರಮುಖ ಅಂಶಗಳು:
2025ರ ಧ್ಯೇಯವಾಕ್ಯ: “ಫ್ಯೂಚರೈಸ್”
ಆಯೋಜಕರು: ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್,ಮಾಹಿತಿ ತಂತ್ರಜ್ಞಾನಮತ್ತುಜೈವಿಕ ತಂತ್ರಜ್ಞಾನಇಲಾಖೆಯು, ಉದ್ಯಮ ವಲಯದ ಪಾಲುದಾರರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಮಹತ್ವ: ಜಾಗತೀಕ ನಾವೀನ್ಯಕಾರರು, ಸಂಶೋಧಕರು, ಉದ್ಯಮಿಗಳು ಮತ್ತು ನೀತಿ ನಿರೂಪಕರನ್ನು ಒಂದೇ ವೇದಿಕೆಯಡಿ ತರುವುದು ಈ ಶೃಂಗಸಭೆಯ ಉದ್ದೇಶವಾಗಿತ್ತು. ಈ ಮೂಲಕ, ಜಾಗತೀಕತಂತ್ರಜ್ಞಾನಮತ್ತು ನಾವೀನ್ಯತಾ ಕೇಂದ್ರವಾಗಿ ಕರ್ನಾಟಕದ ಸ್ಥಾನಮಾನವನ್ನು ಈ ಶೃಂಗಸಭೆಯು ಮತ್ತಷ್ಟು ಬಲಪಡಿಸಿದೆ.
ಭಾರತ-ಬ್ರೆಜಿಲ್-ದಕ್ಷಿಣ ಆಫ್ರಿಕಾ (IBSA) ನಾಯಕರ ಶೃಂಗಸಭೆಯಲ್ಲಿ ಮಾತನಾಡಿದ ಭಾರತದ ಪ್ರಧಾನ ಮಂತ್ರಿಯವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳು ಇನ್ನು ಮುಂದೆ ಕೇವಲ ಒಂದು ಆಯ್ಕೆಯಾಗಿರದೆ, ಅದೊಂದು ಜಾಗತಿಕ ಅನಿವಾರ್ಯತೆಯಾಗಿದೆ ಎಂದು ಒತ್ತು ನೀಡಿದರು.
ಭಾರತ-ಬ್ರೆಜಿಲ್-ದಕ್ಷಿಣ ಆಫ್ರಿಕಾ (IBSA) ನಾಯಕರ ಶೃಂಗಸಭೆ, 2025 ರ ಬಗ್ಗೆ:
ಗಮನಿಸಿ: ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲ ಜಿ-20 ಶೃಂಗಸಭೆಯೊಂದಿಗೆ ಇದು ಏಕಕಾಲದಲ್ಲಿ ಜರುಗಿತು.
ಐಬಿಎಸ್‌ಎ (IBSA) ಸಂವಾದ ವೇದಿಕೆಯ ಬಗ್ಗೆ:
ಸ್ಥಾಪನೆ:- ‘ಗ್ಲೋಬಲ್ ಸೌತ್’ನ (ದಕ್ಷಿಣ ಗೋಳಾರ್ಧದ ರಾಷ್ಟ್ರಗಳ) ಸಾಮೂಹಿಕ ದನಿಯಾಗಿ, 2003 ರ ‘ಬ್ರೆಸಿಲಿಯಾ ಘೋಷಣೆ’ಯ ಮೂಲಕ ಇದನ್ನು ಸ್ಥಾಪಿಸಲಾಯಿತು.
ಸದಸ್ಯತ್ವ: ಇದು ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾವನ್ನು (ಐಬಿಎಸ್‌ಎ ಟ್ರೋಯಿಕಾ ) ಒಳಗೊಂಡಿದೆ. ಈ ರಾಷ್ಟ್ರಗಳು ಬಹುಪಕ್ಷೀಯತೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಅಂತರ್ಗತ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದವು.
ಮಹತ್ವ: ಇದು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಖಂಡಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಮುಖ ಉಪಕ್ರಮಗಳು: ದಕ್ಷಿಣ-ದಕ್ಷಿಣ ಸಹಕಾರವನ್ನು ವರ್ಧಿಸಲು ಸ್ಥಾಪಿತವಾದ “IBSA ಟ್ರಸ್ಟ್ ನಿಧಿ” (2006 ರಲ್ಲಿ ಕಾರ್ಯಾರಂಭ) ಮತ್ತು “ಇಬ್ಸಾಮಾರ್” (IBSAMAR) ಬಹುರಾಷ್ಟ್ರೀಯ ಕಡಲ ಸಮರಾಭ್ಯಾಸಗಳು ಇದರಲ್ಲಿ ಸೇರಿವೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಯ ಬಗ್ಗೆ:
ಇದು ವಿಶ್ವಸಂಸ್ಥೆಯ (UN) ಪ್ರಮುಖ ಅಂಗ ಸಂಸ್ಥೆಗಳಲ್ಲಿ ಒಂದಾಗಿದ್ದು, ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿದೆ.
ವಿಶ್ವಸಂಸ್ಥೆಯ ಸನ್ನದಿನ ಅಡಿಯಲ್ಲಿ ಇದನ್ನು 1945 ರಲ್ಲಿ ಸ್ಥಾಪಿಸಲಾಯಿತು.
ರಚನೆ: ಇದು 15 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಇದರಲ್ಲಿ ವೀಟೋ ಅಧಿಕಾರಹೊಂದಿರುವಐದು ಕಾಯಂ ಸದಸ್ಯರು (P5) ಮತ್ತು ಸಾಮಾನ್ಯ ಸಭೆಯಿಂದ ಎರಡು ವರ್ಷಗಳ ಅವಧಿಗೆ ಆಯ್ಕೆಯಾದ ಹತ್ತು ಕಾಯಂ ಅಲ್ಲದ ಸದಸ್ಯರು ಇರುತ್ತಾರೆ.
ಕೇಂದ್ರ ಕಚೇರಿ: ಅಮೆರಿಕದ ನ್ಯೂಯಾರ್ಕ್ ನಗರದಲ್ಲಿದೆ.
ದಕ್ಷಿಣ ಆಫ್ರಿಕಾ ಜಿ-20 ಶೃಂಗಸಭೆ
ಸಾಮಾನ್ಯ ಅಧ್ಯಯನ – 2 / ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ 2025 ರ ಜಿ-20 ಶೃಂಗಸಭೆ ಜರುಗಿತು. ಆಫ್ರಿಕಾ ಖಂಡದ ನೆಲದಲ್ಲಿ ನಡೆದ ಚೊಚ್ಚಲ ಜಿ-20 ಶೃಂಗಸಭೆ ಇದಾಗಿದೆ. “ಒಗ್ಗಟ್ಟು, ಸಮಾನತೆ, ಸುಸ್ಥಿರತೆ” ಎಂಬುದು ಈ ಶೃಂಗಸಭೆಯ ಧ್ಯೇಯವಾಕ್ಯವಾಗಿತ್ತು.
ಶೃಂಗಸಭೆಯ ಮುಖ್ಯಾಂಶಗಳು:
ಜಿ-20 ನಾಯಕರ ಘೋಷಣೆಯ ಅಂಗೀಕಾರ: ಹವಾಮಾನ ಬದಲಾವಣೆ ತಡೆಗಟ್ಟುವ ಕ್ರಮಗಳಿಗೆ (ಹೊಂದಾಣಿಕೆಗಾಗಿ ಹಣಕಾಸು ಮತ್ತು ನವೀಕರಿಸಬಹುದಾದ ಇಂಧನದ ಮೇಲೆ ಕೇಂದ್ರೀಕರಿಸುವುದು) ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಸೇರಿದಂತೆ ಜಾಗತಿಕ ಸಾಂಸ್ಥಿಕ ಸುಧಾರಣೆಗಳಿಗೆ ಒತ್ತು ನೀಡಲಾಯಿತು.
ಮಹಿಳೆಯರು ಮತ್ತು ಬಾಲಕಿಯರ ಸಬಲೀಕರಣಕ್ಕೆ ವಿಶೇಷ ಪ್ರಾಧಾನ್ಯತೆ ಹಾಗೂ ಭಯೋತ್ಪಾದನೆಯ ತೀವ್ರ ಖಂಡನೆ ಮಾಡಲಾಯಿತು.
ಜಿ- 20 ಒಕ್ಕೂಟದಲ್ಲಿ ‘ಆಫ್ರಿಕಾದ ಒಕ್ಕೂಟ’ಕ್ಕೆ ಖಾಯಂ ಸದಸ್ಯತ್ವ ನೀಡಲಾಯಿತು.
ಭಾರತದ ನಿಲುವು/ಉಪಕ್ರಮಗಳು
ಸಾಮೂಹಿಕ ಮಾನವ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ‘ಜಾಗತಿಕ ಸಾಂಪ್ರದಾಯಿಕ ಜ್ಞಾನ ಭಂಡಾರ’ವನ್ನು ಸ್ಥಾಪಿಸಲು ಪ್ರಸ್ತಾಪಿಸಿತು.
ಆಫ್ರಿಕಾದ ಯುವಜನತೆಗೆ ಕೌಶಲ ತರಬೇತಿ ನೀಡಲು, ಒಂದು ಮಿಲಿಯನ್ ಪ್ರಮಾಣೀಕೃತ ತರಬೇತುದಾರರನ್ನು ರೂಪಿಸುವ ‘ಜಿ-20-ಆಫ್ರಿಕಾ ಸ್ಕಿಲ್ಸ್ ಮಲ್ಟಿಪ್ಲೈಯರ್’ ಉಪಕ್ರಮಕ್ಕೆ ಚಾಲನೆ ನೀಡಲಾಯಿತು.
ಆರೋಗ್ಯ ಬಿಕ್ಕಟ್ಟುಗಳಿಗೆ ತ್ವರಿತವಾಗಿ ಸ್ಪಂದಿಸಲು ‘ಜಾಗತಿಕ ಆರೋಗ್ಯ ಪ್ರತಿಕ್ರಿಯೆ ತಂಡ’ವನ್ನು ರಚಿಸಲು ಪ್ರತಿಪಾದಿಸಿತು.
ಕೃಷಿ, ಮೀನುಗಾರಿಕೆ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ದತ್ತಾಂಶ ಹಂಚಿಕೆಗಾಗಿ ‘ಮುಕ್ತ ಉಪಗ್ರಹ ದತ್ತಾಂಶ ಪಾಲುದಾರಿಕೆ’ಯನ್ನು ಆರಂಭಿಸಿತು.
ಮರುಬಳಕೆ ಮತ್ತು ಸುಸ್ಥಿರ ಪೂರೈಕೆ ಸರಪಳಿಗಳನ್ನು ಉತ್ತೇಜಿಸುವ ‘ನಿರ್ಣಾಯಕ ಖನಿಜಗಳ ಆವರ್ತಕತೆ ಉಪಕ್ರಮ’ವನ್ನು ಮಂಡಿಸಿತು.
ನಿರ್ಣಾಯಕ ತಂತ್ರಜ್ಞಾನಗಳು, ಕೃತಕ ಬುದ್ಧಿಮತ್ತೆ (AI), ಪೂರೈಕೆ ಸರಪಳಿಗಳು ಮತ್ತು ಶುದ್ಧ ಇಂಧನ ವಲಯದಲ್ಲಿನ ಸಹಕಾರಕ್ಕಾಗಿ ಆಸ್ಟ್ರೇಲಿಯಾ ಮತ್ತು ಕೆನಡಾದೊಂದಿಗೆ ‘ಎಸಿಐಟಿಐ ತ್ರಿಪಕ್ಷೀಯ ಚೌಕಟ್ಟಿಗೆ’ ಚಾಲನೆ ನೀಡಲಾಯಿತು.
ಅಸ್ಸಾಂ ಒಪ್ಪಂದ (1985)
ಸಾಮಾನ್ಯ ಅಧ್ಯಯನ – 2 / ಸರ್ಕಾರಿ ನೀತಿ ಮತ್ತು ಹಸ್ತಕ್ಷೇಪ
ಇದೀಗ ಸುದ್ದಿಯಲ್ಲಿದೆ:
1985 ರ ಅಸ್ಸಾಂ ಒಪ್ಪಂದದ 6ನೇ ಉಪಬಂಧದ ಅನುಷ್ಠಾನದ ಕುರಿತು ವಿಸ್ತಾರವಾದ ಒಮ್ಮತವನ್ನು ಸಾಧಿಸಲಾಗಿದೆ ಎಂದು ಇತ್ತೀಚೆಗೆ ಅಸ್ಸಾಂ ಸರ್ಕಾರವು ಘೋಷಿಸಿದೆ.
ಅಸ್ಸಾಂ ಒಪ್ಪಂದ, 1985 ರ ಬಗ್ಗೆ:
ಭಾರತ ಸರ್ಕಾರ, ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (AASU) ಮತ್ತು ಆಲ್ ಅಸ್ಸಾಂ ಗಣ ಸಂಗ್ರಾಮ್ ಪರಿಷತ್ (AAGSP) ನಡುವೆ 1985 ರ ಆಗಸ್ಟ್ 15 ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರ ವಿರುದ್ಧ 1979 ರಿಂದ 1985 ರವರೆಗೆ ಅಸ್ಸಾಂನಲ್ಲಿ ನಡೆದ ಆರು ವರ್ಷಗಳ ಸುದೀರ್ಘ ಆಂದೋಲನಕ್ಕೇ (ವಿದೇಶಿಯರ ವಿರೋಧಿ ಆಂದೋಲನ) ಈ ಒಪ್ಪಂದವು ಅಂತ್ಯ ಹಾಡಿತು. ಅಕ್ರಮ ವಲಸೆಯು ರಾಜ್ಯದ ಜನಸಂಖ್ಯಾ ಸ್ವರೂಪ, ಸಂಸ್ಕೃತಿ ಮತ್ತು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿತ್ತು.
ಅಸ್ಸಾಂ ಒಪ್ಪಂದದ 6ನೇ ಉಪಬಂಧ : ಅಸ್ಸಾಮಿ ಜನರ ‘ಸಾಂಸ್ಕೃತಿಕ, ಸಾಮಾಜಿಕ ಮತ್ತು ಭಾಷಾ ಅಸ್ಮಿತೆಯನ್ನು’ ಸಂರಕ್ಷಿಸಲು ಅಗತ್ಯವಾದ ‘ಸಂವಿಧಾನಾತ್ಮಕ, ಶಾಸಕಾಂಗೀಯ ಮತ್ತು ಆಡಳಿತಾತ್ಮಕ ರಕ್ಷಣೆಗಳನ್ನು’ ಒದಗಿಸುವ ಭರವಸೆಯನ್ನು ಇದು ನೀಡುತ್ತದೆ.
ಗಡಿ ಭದ್ರತೆ: ಅಕ್ರಮ ವಲಸೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ಭಾರತ-ಬಾಂಗ್ಲಾದೇಶ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲು ಮತ್ತು ತಂತಿ ಬೇಲಿ ಹಾಕಲು ಈ ಒಪ್ಪಂದವು ಹೇಳುತ್ತದೆ.
ಭಾರತೀಯ ಆಹಾರದಲ್ಲಿ ಔರಮೈನ್
ಸಾಮಾನ್ಯ ಅಧ್ಯಯನ – 2/ ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
ಭಾರತದಲ್ಲಿ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಕಲಬೆರಕೆ ಪ್ರಕರಣಗಳು ಮರುಕಳಿಸುತ್ತಲೇ ಇದ್ದು, ಇದು ವಿಶೇಷವಾಗಿ, ‘ಔರಮೈನ್ O’ ನಂತಹ ನಿಷೇಧಿತ ಕೃತಕ ವರ್ಣದ್ರವ್ಯಗಳ ಬಳಕೆಯ ಮೂಲಕ ಇದು ಹೆಚ್ಚುತ್ತಿದೆ.
‘ಔರಮೈನ್ O’ ನ ಬಗ್ಗೆ:
ಇದೊಂದು ಕೃತಕ, ವಾಸನೆ ರಹಿತ, ಹಳದಿ ಬಣ್ಣದ ವರ್ಣದ್ರವ್ಯವಾಗಿದ್ದು. ಇದನ್ನು ಜವಳಿ, ಚರ್ಮ ಸಂಸ್ಕರಣೆ, ಮುದ್ರಣಕ್ಕೆ ಬಳಸುವ ಮಸಿ ಮತ್ತು ಕಾಗದ ತಯಾರಿಕೆಯಂತಹ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಭಾರತ, ಯುರೋಪಿಯನ್ ಒಕ್ಕೂಟ, ಅಮೇರಿಕಾ ಸಹಿತ ಇತರ ಪ್ರಮುಖ ನಿಯಂತ್ರಕ ವ್ಯಾಪ್ತಿಗಳಲ್ಲಿ ‘ಔರಮೈನ್ O’ ಬಣ್ಣವನ್ನು ಆಹಾರದಲ್ಲಿ ಬಳಸಲು ಅನುಮೋದನೆ ನೀಡಲಾಗಿಲ್ಲ.
ಸಿಹಿ ತಿನಿಸುಗಳ ಮಾದರಿಗಳಲ್ಲಿ ಮೆಟಾನಿಲ್ ಹಳದಿ, ರೋಡಮೈನ್ ಬಿ ಮತ್ತು ಮಲಾಕೈಟ್ ಹಸಿರಿನಂತಹ ಇತರ ಅನುಮೋದನೆ ನೀಡದ ಬಣ್ಣಗಳೂ ಕಂಡುಬರುತ್ತಿವೆ.
ಇದು ಯಕೃತ್ತು ಮತ್ತು ಮೂತ್ರಪಿಂಡದ ಹಾನಿ, ಗುಲ್ಮದ ಹಿಗ್ಗುವಿಕೆ, ಆನುವಂಶಿಕ ದ್ರವ್ಯವನ್ನು ಬದಲಾಯಿಸಬಲ್ಲ ವಿಕೃತಿಜನ್ಯ ಪರಿಣಾಮಗಳು ಮತ್ತು ಸಂಭಾವ್ಯ ಕ್ಯಾನ್ಸರ್ ಕಾರಕ ಅಪಾಯಗಳನ್ನು ಒಳಗೊಂಡಿದೆ.
ಗಂಭೀರ ವಂಚನೆ ತನಿಖಾ ಕಚೇರಿ (SFIO)
ಸಾಮಾನ್ಯ ಅಧ್ಯಯನ – 3 / ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
‘ಗಂಭೀರ ವಂಚನೆ ತನಿಖಾ ಕಚೇರಿ’ (SFIO) ಯು ತನ್ನ ಹಾಜರಾಗುವ ಕರೆ (ಸಮನ್ಸ್) ಮತ್ತು ಸೂಚನೆ (ನೋಟಿಸ್) ಗಳ ದುರ್ಬಳಕೆಯನ್ನು ತಡೆಯಲು ಹಾಗೂ ಅಧಿಕಾರಿಗಳ ಸೋಗಿನಲ್ಲಿ ನಡೆಯುವ ವಂಚನೆಯನ್ನು ನಿಯಂತ್ರಿಸಲು, ನೂತನ ತಾಂತ್ರಿಕ ಮತ್ತು ಪ್ರಕ್ರಿಯಾತ್ಮಕ ಸುರಕ್ಷತಾ ಕ್ರಮಗಳನ್ನು ಅಳವಡಿಸಿದೆ.
ಗಂಭೀರ ವಂಚನೆ ತನಿಖಾ ಕಚೇರಿ (SFIO) ಯ ಬಗ್ಗೆ:
ಸ್ಥಾಪನೆ: ಕಂಪನಿಗಳ ಕಾಯ್ದೆ, 2013ರ ಅಡಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ.
ಕಾರ್ಯನಿರ್ವಹಣೆ: ಇದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಕಾರ್ಯವ್ಯಾಪ್ತಿ: ಇದು ಕೇವಲ ಸಾಮಾನ್ಯ ಕಂಪನಿ ಕಾನೂನು ಉಲ್ಲಂಘನೆಗಳಿಗಿಂತ ಭಿನ್ನವಾಗಿ, ‘ವೈಟ್ ಕಾಲರ್’ ಅಪರಾಧಗಳ (ಗಂಭೀರ ಆರ್ಥಿಕ ಅಪರಾಧಗಳ) ತನಿಖೆಗಾಗಿಯೇ ರಚಿಸಲಾದ ವಿಶೇಷ ಸಂಸ್ಥೆಯಾಗಿದೆ.
ಮಹತ್ವ: ಸಂಕೀರ್ಣ ಸ್ವರೂಪದ ಮತ್ತು ಗ೦ಭೀರವಾದ ಕಂಪನಿಗೆ ಸಂಬಂಧಿಸಿದ ವಂಚನೆಗಳನ್ನು ಭೇದಿಸಲು, ಇದು ಲೆಕ್ಕಪತ್ರ ನಿರ್ವಹಣೆ, ವಿಧಿವಿಜ್ಞಾನ ಲೆಕ್ಕಪರಿಶೋಧನೆ, ಬ್ಯಾಂಕಿಂಗ್, ಕಾನೂನು, ಮಾಹಿತಿ ತಂತ್ರಜ್ಞಾನ, ಬಂಡವಾಳ ಮಾರುಕಟ್ಟೆಗಳು ಹಾಗೂ ತೆರಿಗೆ ಕ್ಷೇತ್ರಗಳ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತದೆ.
ಭಾರತ ನೂತನ (ಹೊಸ) ಕಾರು ಮೌಲ್ಯಮಾಪನ ಕಾರ್ಯಕ್ರಮ (Bharat NCAP)
ಸಾಮಾನ್ಯ ಅಧ್ಯಯನ -3/ ಪರಿಸರ
ಇದೀಗ ಸುದ್ಧಿಯಲ್ಲಿದೆ:
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH), ‘ಭಾರತ ನೂತನ ಕಾರು ಮೌಲ್ಯಮಾಪನ ಕಾರ್ಯಕ್ರಮ ‘ 2.0 ನ (Bharat NCAP 2.0) ಪರಿಷ್ಕೃತ ಕರಡನ್ನು ಪ್ರಕಟಿಸಿದೆ.
ಭಾರತ ನೂತನ (ಹೊಸ) ಕಾರು ಮೌಲ್ಯಮಾಪನ ಕಾರ್ಯಕ್ರಮದ ಬಗ್ಗೆ:
ಈ ಯೋಜನೆಯನ್ನು 2023ರ ಅಕ್ಟೋಬರ್‌ನಲ್ಲಿ ಜಾರಿಗೆ ತರಲಾಯಿತು.
ಉದ್ದೇಶ: ವಾಹನಗಳ ಅಪಘಾತ ತಡೆ ಪರೀಕ್ಷೆ (‘ಕ್ರ್ಯಾಶ್ ಟೆಸ್ಟಿಂಗ್’) ಮತ್ತು ಮೌಲ್ಯಮಾಪನ ಮಾನದಂಡಗಳನ್ನು ಆಧರಿಸಿ, ವಾಹನಗಳಿಗೆ ಸುರಕ್ಷತಾ ಮೌಲ್ಯಾoಕಗಳನ್ನು ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ಪ್ರಕ್ರಿಯೆ: ವಾಹನ ತಯಾರಕರು ಅಥವಾ ಆಮದುದಾರರು ತಮ್ಮ ವಾಹನಗಳನ್ನು ವಾಹನ ಉದ್ಯಮದ ಮಾನದಂಡಗಳ ಅನ್ವಯ ಪರೀಕ್ಷೆಗೆ ಒಳಪಡಿಸಲು ಅಗತ್ಯವಿರುವ ವಿವರವಾದ ಕಾರ್ಯವಿಧಾನವನ್ನು ಇದು ರೂಪಿಸಿದೆ.
ನಿಯೋಜಿತ ಸಂಸ್ಥೆ: ಭಾರತ್ NCAP ರೇಟಿಂಗ್‌ಗಳನ್ನು ನೀಡಲು ಪುಣೆಯಲ್ಲಿರುವ ‘ಕೇಂದ್ರ ರಸ್ತೆ ಸಾರಿಗೆ ಸಂಸ್ಥೆ’ಯನ್ನು (CIRT) ಅಧಿಕೃತ ಸಂಸ್ಥೆಯನ್ನಾಗಿ ನಿಯೋಜಿಸಲಾಗಿದೆ.