ಕ್ರಿಸ್ ಗೋಪಾಲಕೃಷ್ಣನ್ ಸಮಿತಿ – ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ (AI)
ಇದೀಗ ಸುದ್ದಿಯಲ್ಲಿದೆ:
ಕರ್ನಾಟಕ ಸರ್ಕಾರವು ಇನ್ಫೋಸಿಸ್‌ನ ಸಹ-ಸ್ಥಾಪಕಕ್ರಿಸ್ ಗೋಪಾಲಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ‘ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ’ ಕುರಿತಾದ ಸಮಿತಿಯನ್ನು ರಚಿಸಿದೆ.
ಈ ಸಮಿತಿಯ ಪ್ರಮುಖ ಉದ್ದೇಶಗಳು:
ಪ್ರಮುಖ ಉದ್ದೇಶ:- ಸಾರ್ವಜನಿಕ ಸೇವೆಗಳಲ್ಲಿ ಸುರಕ್ಷಿತ, ನೈತಿಕ ಮತ್ತು ಪಾರದರ್ಶಕವಾದ AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಅಳವಡಿಕೆಗಾಗಿ ಸೂಕ್ತ ಚೌಕಟ್ಟನ್ನು ಅಭಿವೃದ್ಧಿಪಡಿಸುವುದು.
ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಗಳಲ್ಲಿ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಉದ್ಯಮ ತಜ್ಞರು ಮತ್ತು ಅಧಿಕಾರಿಗಳನ್ನು ಒಳಗೊಂಡ ಈ ಸಮಿತಿಯು ಇತ್ತೀಚಿಗೆ ಬೆಂಗಳೂರಿನಲ್ಲಿ ಸಭೆ ಸೇರಿತು. ಈ ಸಭೆಯಲ್ಲಿ AI ನೈತಿಕತೆ, ಅಪಾಯದ ವರ್ಗೀಕರಣ ಮತ್ತು ದತ್ತಾಂಶ ಗೌಪ್ಯತೆಯ ಕುರಿತು ವಿವರವಾಗಿ ಚರ್ಚಿಸಲಾಯಿತು.
ಜವಾಬ್ದಾರಿಯುತ AI ಸಮಿತಿಯ ಪ್ರಮುಖ ಅಂಶಗಳು:
ಸದಸ್ಯ ಕಾರ್ಯದರ್ಶಿ:- ‘ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ’ಯ (KITS) ವ್ಯವಸ್ಥಾಪಕ ನಿರ್ದೇಶಕರು.
ಕಾರ್ಯಾದೇಶ:- ಸರ್ಕಾರಿ ಆಡಳಿತದಲ್ಲಿ ಜವಾಬ್ದಾರಿಯುತವಾಗಿ AI ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು, ಕೇವಲ 90 ದಿನಗಳೊಳಗೆ ಸೂಕ್ತ ನೀತಿ ಮತ್ತು ಅನುಷ್ಠಾನದ ಮಾರ್ಗಸೂಚಿಯನ್ನು ಸಿದ್ಧಪಡಿಸುವುದು ಕಡ್ಡಾಯವಾಗಿದೆ.
ಆದ್ಯತಾ ಕ್ಷೇತ್ರಗಳು:- AI ತತ್ವಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಹಾಗೂ ಸರ್ಕಾರದ AI ಅನ್ವಯಿಕೆಗಳಿಗೆ ಸಂಬಂಧಿಸಿದಂತೆ ಅಪಾಯದ ವರ್ಗೀಕರಣಗಳನ್ನು ರಚಿಸುವುದು ಇದರ ಆದ್ಯತೆಯಾಗಿದೆ. ಅಲ್ಲದೆ, ದತ್ತಾಂಶ ಆಡಳಿತ, ಗೌಪ್ಯತೆ ಮತ್ತು ಸೈಬರ್ ಭದ್ರತೆಗಾಗಿ ಮಾರ್ಗಸೂಚಿಗಳನ್ನು ರೂಪಿಸುವ ಜವಾಬ್ದಾರಿಯನ್ನು ಇದು ಹೊಂದಿದೆ.
ಪ್ರಮುಖ ನಾಗರಿಕ-ಕೇಂದ್ರಿತ ವಲಯಗಳು:- ಈ ಹೊಸ ಚೌಕಟ್ಟು ಆರೋಗ್ಯ, ಶಿಕ್ಷಣ, ಕಲ್ಯಾಣ ಯೋಜನೆಗಳ ವಿತರಣೆ ಮತ್ತು ಪೊಲೀಸ್ ವ್ಯವಸ್ಥೆಯಂತಹ ನಾಗರಿಕ-ಕೇಂದ್ರಿತ ವಲಯಗಳಲ್ಲಿ AI ತಂತ್ರಜ್ಞಾನದ ಬಳಕೆಯನ್ನು ಒಳಗೊಂಡಿರುತ್ತದೆ.
ರಾಜಸ್ಥಾನದ ಅರಾವಳಿ ಬೆಟ್ಟಗಳ ಸಾಲಿನಲ್ಲಿ ನಡೆಯುತ್ತಿರುವ ಗಣಿಗಾರಿಕಾ ಪ್ರದೇಶಗಳನ್ನು ನಕ್ಷೆ ಮಾಡುವ ಮಹತ್ವದ ಕಾರ್ಯವನ್ನು ಸರ್ವೋಚ್ಚ ನ್ಯಾಯಾಲಯದ ‘ಕೇಂದ್ರೀಯ ಉನ್ನತಾಧಿಕಾರ ಸಮಿತಿ’ಯು ‘ಭಾರತೀಯ ಅರಣ್ಯ ಸಮೀಕ್ಷಾ ಸಂಸ್ಥೆ’ಗೆ (FSI) ವಹಿಸಿದೆ.
ಅರಾವಳಿ ಬೆಟ್ಟಗಳ ಬಗ್ಗೆ:
ಉಗಮ:-ಪ್ರೊಟೆರೋಜೋಯಿಕ್ ಯುಗದಲ್ಲಿ (ಪ್ರಿ-ಕ್ಯಾಂಬ್ರಿಯನ್ ಅವಧಿ) ‘ಅರಾವಳಿ-ದೆಹಲಿ ಓರೊಜೆನಿ’ಯ (ಪರ್ವತ ನಿರ್ಮಾಣ ಪ್ರಕ್ರಿಯೆ) ಮೂಲಕ ಇವು ರೂಪುಗೊಂಡಿವೆ.
ಅತ್ಯಂತ ಪ್ರಾಚೀನ ‘ಮಡಿಕೆ ಪರ್ವತ ಶ್ರೇಣಿ ವ್ಯವಸ್ಥೆ’ಯಾಗಿದೆ:- ಲಕ್ಷಾಂತರ ವರ್ಷಗಳ ನಿರಂತರ ಸವೆತದಿಂದಾಗಿ ಪ್ರಸ್ತುತ ಇದು ಕೇವಲ “ಶೇಷ ಬೆಟ್ಟಗಳಾಗಿ” ಉಳಿದುಕೊಂಡಿದೆ.
ವ್ಯಾಪ್ತಿ:-ಗುಜರಾತ್‌ನಿಂದ (ಅಹಮದಾಬಾದ್) ಆರಂಭವಾಗಿ, ರಾಜಸ್ಥಾನ ಮತ್ತು ಹರಿಯಾಣದ ಮೂಲಕ ದೆಹಲಿಯವರೆಗೆ ಸುಮಾರು 670 ರಿಂದ 800 ಕಿ.ಮೀ ಉದ್ದಕ್ಕೂ ಈ ಪರ್ವತ ಶ್ರೇಣಿಯು ವಿಸ್ತರಿಸಿದೆ.
ಅತ್ಯುನ್ನತ ಶಿಖರ:- ರಾಜಸ್ಥಾನದ ಮೌಂಟ್ ಅಬುವಿನಲ್ಲಿರುವ ‘ಗುರು ಶಿಖರ’ (1,722 ಮೀಟರ್).
ಪ್ರಮುಖ ನದಿಗಳು:-ಬನಾಸ್, ಲೂನಿ, ಸಾಬರಮತಿ ಮತ್ತು ಸಾಹಿಬಿ ನದಿಗಳಿಗೆ ಈ ಬೆಟ್ಟಗಳು ಉಗಮ ಸ್ಥಾನವಾಗಿವೆ.
ಖನಿಜ ಸಂಪತ್ತು:-ತಾಮ್ರ, ಸತು, ಸೀಸ, ಬೆಳ್ಳಿ, ಅಮೃತಶಿಲೆ ಮತ್ತು ಗ್ರಾನೈಟ್‌ನಂತಹ ಬೆಲೆಬಾಳುವ ಖನಿಜ ಸಂಪನ್ಮೂಲಗಳಿಂದ ಈ ಪ್ರದೇಶವು ಸಮೃದ್ಧವಾಗಿದೆ.
ಪರಿಸರ ವಿಜ್ಞಾನ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆ:
ಹವಾಮಾನ ನಿಯಂತ್ರಕ:-ನೈಋತ್ಯ ಮುಂಗಾರು ಮಾರುತಗಳನ್ನು ಹಿಮಾಲಯದ ಕಡೆಗೆ ತಿರುವು ನೀಡುವ ಭೌಗೋಳಿಕ ತಡೆಗೋಡೆಯಾಗಿ ಇದು ಕಾರ್ಯನಿರ್ವಹಿಸುತ್ತದೆ; ತನ್ಮೂಲಕ ಉತ್ತರ ಭಾರತದ ಬಯಲು ಸೀಮೆಗಳಿಗೆ ಮಳೆ ತರಿಸಲು ನೆರವಾಗುತ್ತದೆ.
“ಹಸಿರು ಗೋಡೆ”:- ‘ಥಾರ್ ಮರುಭೂಮಿ’ಯು ಪೂರ್ವದ ಫಲವತ್ತಾದ ‘ಸಿಂಧೂ-ಗಂಗಾ ಬಯಲು ಸೀಮೆ’ಯತ್ತ ವಿಸ್ತರಿಸದಂತೆ ತಡೆಯುವ ನೈಸರ್ಗಿಕ ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತದೆ.
ಅಂತರ್ಜಲ ಮರುಪೂರಣ:- ರಾಷ್ಟ್ರೀಯ ರಾಜಧಾನಿ ವಲಯ (NCR) ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಇದು ಅಂತರ್ಜಲದ ಬಹುಮುಖ್ಯ ಮೂಲವಾಗಿದೆ.
ಜೀವವೈವಿಧ್ಯತೆ:- 300ಕ್ಕೂ ಹೆಚ್ಚು ಅಪರೂಪದ ಪಕ್ಷಿ ಪ್ರಭೇದಗಳಿಗೆ, ಹಾಗೂ ಚಿರತೆ, ಪಟ್ಟೆ ಕತ್ತೆಕಿರುಬ, ಮತ್ತು ‘ಹೊನ್ನರಿ’ಯಂತಹ ವನ್ಯಜೀವಿಗಳಿಗೆ ಇದು ನೆಚ್ಚಿನ ಆವಾಸಸ್ಥಾನವಾಗಿದೆ.
ಭಾರತೀಯ ಅರಣ್ಯ ಸಮೀಕ್ಷಾ ಸಂಸ್ಥೆ(FSI)ಯ ಬಗ್ಗೆ:
ಸ್ಥಾಪನೆ:- 1981
ಆಡಳಿತಾತ್ಮಕ ನಿಯಂತ್ರಣ:-ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC).
ಕಾರ್ಯ:-ಭಾರತದಾದ್ಯಂತ ಅರಣ್ಯ ಸಂಪನ್ಮೂಲಗಳನ್ನು ಮೇಲ್ವಿಚಾರಣೆ ಮಾಡುವ ಪ್ರಮುಖ ರಾಷ್ಟ್ರೀಯ ಸಂಸ್ಥೆಯಾಗಿದೆ.
ಪ್ರಾಮುಖ್ಯತೆ:- ದೇಶದ ಅರಣ್ಯ ಹೊದಿಕೆಯಲ್ಲಿನ (ಅರಣ್ಯ ವ್ಯಾಪ್ತಿ) ಬದಲಾವಣೆಗಳನ್ನು ಮೌಲ್ಯಮಾಪನ ಮಾಡಲು ಪ್ರತಿ ಎರಡು ವರ್ಷಗಳಿಗೊಮ್ಮೆ ‘ಭಾರತೀಯ ಅರಣ್ಯ ಸ್ಥಿತಿಗತಿ ವರದಿ’ (ISFR)ಯನ್ನು ಪ್ರಕಟಿಸುವುದು, ಹಾಗೂ ಅರಣ್ಯ ಮತ್ತು ಅರಣ್ಯೇತರ ಪ್ರದೇಶಗಳಲ್ಲಿನ ವೃಕ್ಷ ಸಂಪನ್ಮೂಲಗಳ ಸಮಗ್ರ ದಾಸ್ತಾನನ್ನು ನಿರ್ವಹಿಸುವುದು ಇದರ ಪ್ರಮುಖ ಜವಾಬ್ದಾರಿಯಾಗಿದೆ.
ಭಾರತದ ಜೈವಿಕ ಆರ್ಥಿಕತೆಯು $300 ಶತಕೋಟಿ ಡಾಲರ್‌ಗಳತ್ತ ಮುನ್ನಡೆ
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
ಭಾರತದ ‘ಜೈವಿಕ ಆರ್ಥಿಕತೆ’ಯು 2014ರಲ್ಲಿದ್ದ ಸುಮಾರು 10 ಶತಕೋಟಿ ಡಾಲರ್‌ಗಳಿಂದ, 2025ರ ಹೊತ್ತಿಗೆ 195 ಶತಕೋಟಿ ಡಾಲರ್‌ಗಳಿಗೂ ಅಧಿಕ ಮಟ್ಟಕ್ಕೆ ಏರಿಕೆಯಾಗುವ ಮೂಲಕ ಅಸಾಧಾರಣ ಬೆಳವಣಿಗೆಯನ್ನು ದಾಖಲಿಸಿದೆ; ಹಾಗೂ ಶೀಘ್ರದಲ್ಲೇ 300 ಶತಕೋಟಿ ಡಾಲರ್‌ಗಳ ಗುರಿಯನ್ನು ತಲುಪಲಿದೆ ಎಂದು ಕೇಂದ್ರ ಸಚಿವರು ಇತ್ತೀಚಿಗೆ ತಿಳಿಸಿದ್ದಾರೆ.
‘ಜೈವಿಕ ಆರ್ಥಿಕತೆ’ಯ ಬಗ್ಗೆ:
‘ಜ್ಞಾನ-ಆಧಾರಿತ’ ಉತ್ಪಾದನಾ ಪ್ರಕ್ರಿಯೆ:-ಸುಸ್ಥಿರ ಆರ್ಥಿಕ ವ್ಯವಸ್ಥೆಯ ಚೌಕಟ್ಟಿನೊಳಗೆ ಜೈವಿಕ ಸಂಪನ್ಮೂಲಗಳನ್ನು ಬಳಸಿಕೊಂಡು, ವಿವಿಧ ಆರ್ಥಿಕ ವಲಯಗಳಿಗೆ ಅಗತ್ಯವಿರುವ ಉತ್ಪನ್ನಗಳು, ಪ್ರಕ್ರಿಯೆಗಳು ಮತ್ತು ಸೇವೆಗಳನ್ನು ಒದಗಿಸುವ ‘ಜ್ಞಾನ-ಆಧಾರಿತ’ ಉತ್ಪಾದನಾ ಪ್ರಕ್ರಿಯೆಯನ್ನೇ ‘ಜೈವಿಕ ಆರ್ಥಿಕತೆ’ ಎನ್ನಲಾಗುತ್ತದೆ.
ಇದು ಕೃಷಿ, ಅರಣ್ಯ, ಮೀನುಗಾರಿಕೆ, ಆಹಾರ ಉತ್ಪಾದನೆ, ಜೈವಿಕ ತಂತ್ರಜ್ಞಾನ ಮತ್ತು ಜೈವಿಕ-ಇಂಧನ ಸೇರಿದಂತೆ ವೈವಿಧ್ಯಮಯ ವಲಯಗಳನ್ನು ಒಳಗೊಂಡಿದೆ.
ಭಾರತದಲ್ಲಿನ ಜೈವಿಕ ಆರ್ಥಿಕತೆಯ ಪ್ರಮುಖ ಉಪ-ವಲಯಗಳು:
ಬಯೋಫಾರ್ಮಾ (ಜೈವಿಕ ಔಷಧ) ಅಥವಾ ಬಯೋಮೆಡಿಕಲ್ (ಜೈವ ವೈದ್ಯಕೀಯ):- ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಪ್ರಯೋಗಾಲಯದಲ್ಲಿ ಬೆಳೆಸಿದ ಅಂಗಾಂಶ ಮಾದರಿಗಳಂತಹ ವೈದ್ಯಕೀಯ ಉತ್ಪನ್ನಗಳು ಹಾಗೂ ಸೇವೆಗಳ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಇದು ಒಳಗೊಂಡಿದೆ.
ಬಯೋ-ಅಗ್ರಿ (ಜೈವಿಕ ಕೃಷಿ):-ಕುಲಾಂತರಿ (ತಳೀಯವಾಗಿ ಮಾರ್ಪಡಿಸಿದ) ಬೆಳೆಗಳು ಮತ್ತು ಪ್ರಾಣಿಗಳ ಅಭಿವೃದ್ಧಿ, ‘ನಿಖರ ಕೃಷಿ ತಂತ್ರಜ್ಞಾನ’ಗಳ ಅಳವಡಿಕೆ ಹಾಗೂ ಜೈವಿಕ-ಆಧಾರಿತ ಉತ್ಪನ್ನಗಳ ಉತ್ಪಾದನೆಯನ್ನು ಇದು ಒಳಗೊಂಡಿದೆ. (ಉದಾಹರಣೆಗೆ: ಬಿಟಿ ಹತ್ತಿ).
ಬಯೋ-ಇಂಡಸ್ಟ್ರಿಯಲ್ (ಜೈವಿಕ ಕೈಗಾರಿಕಾ ವಲಯ):-ಕಿಣ್ವಗಳು, ಜೈವಿಕ-ಸಂಶ್ಲೇಷಿತ ಮಾರ್ಗಗಳು ಮತ್ತು ಮರುಸಂಯೋಜಿತ ಡಿಎನ್‌ಎ ತಂತ್ರಜ್ಞಾನವನ್ನು ಬಳಸಿಕೊಂಡು ಜೈವಿಕ-ಆಧಾರಿತ ರಾಸಾಯನಿಕಗಳು ಹಾಗೂ ಕೈಗಾರಿಕಾ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದನ್ನು ಇದು ಒಳಗೊಂಡಿದೆ.
ಸರ್ಕಾರದ ಪ್ರಮುಖ ಉಪಕ್ರಮಗಳು:
ಬಯೋ-ಇ3 ನೀತಿ (BioE3 Policy):-ಇದು ಸುಸ್ಥಿರ ಜೈವಿಕ-ಉತ್ಪಾದನೆ ಮತ್ತು ಜೈವಿಕ-ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುತ್ತದೆ. ಸ್ಮಾರ್ಟ್ ಪ್ರೋಟೀನ್‌ಗಳು, ನಿಖರ ಚಿಕಿತ್ಸಕಗಳು ಮತ್ತು ‘ಹವಾಮಾನ-ಸ್ಥಿತಿಸ್ಥಾಪಕ ಕೃಷಿ’ಯ ಮೇಲೆ ಇದು ವಿಶೇಷ ಗಮನ ಹರಿಸಿದೆ.
ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (RDI) ನಿಧಿ:-ಡೀಪ್-ಟೆಕ್ ಆವಿಷ್ಕಾರಗಳನ್ನು ಬೆಂಬಲಿಸಲು ಮತ್ತು ನವೋದ್ಯಮಗಳನ್ನು ಉನ್ನತ ಮಟ್ಟಕ್ಕೆ ಬೆಳೆಸಲು ₹1 ಲಕ್ಷ ಕೋಟಿ ಮೊತ್ತದ ಬೃಹತ್ ನಿಧಿಯನ್ನು ಸ್ಥಾಪಿಸಲಾಗಿದೆ.
ನವೋದ್ಯಮ ಮತ್ತು ಇನ್‌ಕ್ಯುಬೇಶನ್ ಬೆಂಬಲ:- ಭಾರತದಾದ್ಯಂತ ಜೈವಿಕ ತಂತ್ರಜ್ಞಾನ ವಲಯಗಳು ಮತ್ತು ನಾವೀನ್ಯತಾ ಕೇಂದ್ರಗಳನ್ನು ಬಲಪಡಿಸುವುದು ಇದರ ಗುರಿಯಾಗಿದೆ.
ಅಂತರ್ಗತ ಪ್ರತಿಭಾ ವಿಕಸನ:-2ನೇ ಮತ್ತು 3ನೇ ದರ್ಜೆಯ (ಟೈರ್-2 & 3) ನಗರಗಳು, ಮಹಿಳಾ ಉದ್ಯಮಿಗಳು ಹಾಗೂ ಯುವ ಸಂಶೋಧಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದೆ.
ರಿಲೀಫ್ (RELIEF) ಯೋಜನೆ
ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ಪಶ್ಚಿಮ ಏಷ್ಯಾದ ಭೌಗೋಳಿಕ-ರಾಜಕೀಯ ಬಿಕ್ಕಟ್ಟಿನಿಂದಾಗಿ ಉಂಟಾಗಿರುವ ಕಡಲ ಸಾರಿಗೆ ಅಡಚಣೆಗಳಿಂದ ಸಂಕಷ್ಟಕ್ಕೀಡಾಗಿರುವ ಭಾರತದ ರಫ್ತುದಾರರನ್ನು ಬೆಂಬಲಿಸಲು, ಕೇಂದ್ರ ಸರ್ಕಾರವು ‘ರಿಲೀಫ್’ (RELIEF) ಎಂಬ ನೂತನ ಯೋಜನೆಯನ್ನು ಜಾರಿಗೊಳಿಸಿದೆ.
ರಿಲೀಫ್ ಯೋಜನೆ ( – RELIEF):
RELIEF ಸಂಪೂರ್ಣ ರೂಪ:-ರೆಸಿಲಿಯೆನ್ಸ್ ಅಂಡ್ ಲಾಜಿಸ್ಟಿಕ್ಸ್ ಇಂಟರ್ವೀನ್ಷನ್ ಫಾರ್ ಎಕ್ಸ್ಪೋರ್ಟ್ ಫಾಸೀಲಿಟೇಷನ್ (ರಫ್ತು ಸೌಲಭ್ಯಕ್ಕಾಗಿ ಸ್ಥಿತಿಸ್ಥಾಪಕತ್ವ ಮತ್ತು ಲಾಜಿಸ್ಟಿಕ್ಸ್ ಮಧ್ಯಸ್ಥಿಕೆ).
ಪ್ರಾರಂಭ:-2026ರ ಮಾರ್ಚ್ 19ರಂದು ಭಾರತ ಸರ್ಕಾರವು ಪ್ರಾರಂಭಿಸಿದ ₹497 ಕೋಟಿ ವಿಶೇಷ ಉಪಕ್ರಮವಾಗಿದೆ.
ಉದ್ದೇಶ:- ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳಿಂದಾಗಿ ಎದುರಾಗಿರುವ ಸರಕು ಸಾಗಣೆ ದರಗಳ ಅಸಾಧಾರಣ ಏರಿಕೆ, ವಿಮಾ ಕಂತುಗಳ ತೀವ್ರ ಹೆಚ್ಚಳ ಮತ್ತು ಲಾಜಿಸ್ಟಿಕ್ಸ್ ಅಡಚಣೆಗಳನ್ನು ಎದುರಿಸುತ್ತಿರುವ ಭಾರತದ ರಫ್ತುದಾರರಿಗೆ ಅದರಲ್ಲೂ ವಿಶೇಷವಾಗಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (MSMEs) ಆರ್ಥಿಕ ಬೆಂಬಲ ನೀಡುವುದು.
ಮಿಷನ್:- ಈ ಯೋಜನೆಯನ್ನು ‘ರಫ್ತು ಉತ್ತೇಜನಾ ಮಿಷನ್’ (EPM) ಅಡಿಯಲ್ಲಿ ಜಾರಿಗೊಳಿಸಲಾಗಿದೆ.
ಅನುಷ್ಠಾನ ಸಂಸ್ಥೆ:-‘ಭಾರತೀಯ ರಫ್ತು ಸಾಲ ಖಾತರಿ ನಿಗಮ’ (ECGC).
ಗುರಿ ಪ್ರದೇಶ:-ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಸೌದಿ ಅರೇಬಿಯಾ, ಕುವೈತ್, ಕತಾರ್, ಓಮನ್, ಬಹ್ರೇನ್, ಇರಾಕ್, ಇರಾನ್, ಇಸ್ರೇಲ್ ಮತ್ತು ಯೆಮೆನ್ ದೇಶಗಳಿಗೆ ಸಾಗಿಸಲಾಗುತ್ತಿರುವ ಅಥವಾ ಆ ದೇಶಗಳ ಮೂಲಕ ಹಾದುಹೋಗುವ ಸರಕುಗಳಿಗೆ ಮಾತ್ರ ಈ ಯೋಜನೆಯು ಅನ್ವಯಿಸುತ್ತದೆ.
ಪ್ರಾಮುಖ್ಯತೆ:-ಕಡಲ ಮಾರ್ಗದ ಅಡಚಣೆಗಳ ಸಂದರ್ಭದಲ್ಲಿ ಆರ್ಥಿಕ ಅಪಾಯಗಳನ್ನು ತಗ್ಗಿಸುವುದು, ರಫ್ತು ಆದೇಶಗಳ ರದ್ದತಿಯನ್ನು ತಡೆಯುವುದು ಮತ್ತು ರಫ್ತು-ಸಂಯೋಜಿತ ವಲಯಗಳಲ್ಲಿನ ಉದ್ಯೋಗಗಳನ್ನು ರಕ್ಷಿಸುವುದು ಇದರ ಪ್ರಮುಖ ಮಹತ್ವವಾಗಿದೆ.
ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆ
ಯೋಜನೆಗಳು
ಇದೀಗ ಸುದ್ದಿಯಲ್ಲಿದೆ:
ಗ್ರಾಮೀಣ ಅಭಿವೃದ್ಧಿ ಹಾಗೂ ಶುದ್ಧ ಇಂಧನ (ಕಡಿಮೆ-ಹೊರಸೂಸುವಿಕೆಯ ನವೀಕರಿಸಬಹುದಾದ ಶಕ್ತಿ) ಉತ್ಪಾದನೆಯನ್ನು ಉತ್ತೇಜಿಸುವ ಮಹತ್ವಾಕಾಂಕ್ಷಿ ಗುರಿಯೊಂದಿಗೆ, ಕೇಂದ್ರ ಸಚಿವ ಸಂಪುಟವು 2026-31ರ ಅವಧಿಗೆ ಅನ್ವಯವಾಗುವಂತೆ ‘ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆ’ಗೆ ಇತ್ತೀಚಿಗೆ ಅಧಿಕೃತ ಅನುಮೋದನೆ ನೀಡಿದೆ.
ಸಣ್ಣ ಜಲವಿದ್ಯುತ್ (SHP) ಅಭಿವೃದ್ಧಿ ಯೋಜನೆಯ ಬಗ್ಗೆ:
ಇದೊಂದು ‘ಕೇಂದ್ರ ಪ್ರಾಯೋಜಿತ ಉಪಕ್ರಮ’ವಾಗಿದ್ದು, 2026ರ ಮಾರ್ಚ್‌ನಲ್ಲಿ ಕೇಂದ್ರ ಸಚಿವ ಸಂಪುಟದಿಂದ ಇದಕ್ಕೆ ಅನುಮೋದನೆ ದೊರೆತಿದೆ.
ಪ್ರಮುಖ ಉದ್ದೇಶ:-ದೇಶದ ದೂರದ, ಗುಡ್ಡಗಾಡು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಇಂಧನ ಉತ್ಪಾದನೆಯನ್ನು ಉತ್ತೇಜಿಸುವುದು ಹಾಗೂ ಗಣನೀಯವಾಗಿ ಹೆಚ್ಚಿಸುವುದು.
ಅನುಷ್ಠಾನ ಸಚಿವಾಲಯ:-ಕೇಂದ್ರ ‘ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ’ (MNRE).
ಗುರಿ:- 2026-27ನೇ ಹಣಕಾಸು ವರ್ಷದಿಂದ ಆರಂಭಿಸಿ 2030-31ನೇ ಹಣಕಾಸು ವರ್ಷದ ಒಳಗೆ, ಒಟ್ಟು 1,500 ಮೆಗಾವ್ಯಾಟ್ (MW) ಸಾಮರ್ಥ್ಯದ ನವೀಕರಿಸಬಹುದಾದ ವಿದ್ಯುತ್ ಅನ್ನು ಉತ್ಪಾದಿಸುವ ಗುರಿಯನ್ನು ನಿಗದಿಪಡಿಸಲಾಗಿದೆ.
ವಿಶ್ವ ಸಂತೋಷದ ವರದಿ, 2026
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಯುವಜನರು ಸಾಮಾಜಿಕ ಜಾಲತಾಣಗಳ ಮಿತಿಮೀರಿದ ಬಳಕೆಗೆ ವ್ಯಸನಿಗಳಾಗುತ್ತಿದ್ದು, ಇದು ಅವರ ಒಟ್ಟಾರೆ ಯೋಗಕ್ಷೇಮದ ಮೇಲೆ ತೀವ್ರ ಸ್ವರೂಪದ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಇತ್ತೀಚಿಗೆ ಬಿಡುಗಡೆಯಾದ ‘ವಿಶ್ವ ಸಂತೋಷದ ವರದಿ, 2026’ ತೀವ್ರ ಕಳವಳ ವ್ಯಕ್ತಪಡಿಸಿದೆ.
ವಿಶ್ವ ಸಂತೋಷದ ವರದಿ, 2026 ರ ಬಗ್ಗೆ:
ಈ ವಾರ್ಷಿಕ ವರದಿಯನ್ನು ಸಿದ್ಧಪಡಿಸಿ ಪ್ರಕಟಿಸುವವರು:-ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ‘ವೆಲ್‌ಬೀಯಿಂಗ್ ರಿಸರ್ಚ್ ಸೆಂಟರ್’, ‘ಗ್ಯಾಲಪ್’ ಸಮೀಕ್ಷಾ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ‘ಸುಸ್ಥಿರ ಅಭಿವೃದ್ಧಿ ಪರಿಹಾರಗಳ ಜಾಲ’ (SDSN) ಜಂಟಿಯಾಗಿ ಸಿದ್ಧಪಡಿಸಿ ಪ್ರಕಟಿಸುತ್ತವೆ.
ಸಂತೋಷದ ಶ್ರೇಯಾಂಕವನ್ನು ಮೌಲ್ಯಮಾಪನ ಮಾಡುವ 6 ಪ್ರಮುಖ ಮಾನದಂಡಗಳು:-
ತಲಾದಾಯ (GDP per capita)
ಆರೋಗ್ಯಕರ ಜೀವಿತಾವಧಿ
ಸಾಮಾಜಿಕ ಬೆಂಬಲ ವ್ಯವಸ್ಥೆ
ಬದುಕಿನ ಆಯ್ಕೆಗಳನ್ನು ನಿರ್ಧರಿಸುವ ಸ್ವಾತಂತ್ರ್ಯ
ಉದಾರತೆ
ಭ್ರಷ್ಟಾಚಾರದ ಕುರಿತಾದ ಗ್ರಹಿಕೆ.
ಪ್ರಮುಖ ಶ್ರೇಯಾಂಕಗಳು:-
ಅಗ್ರ 3 ರಾಷ್ಟ್ರಗಳು:- ಫಿನ್‌ಲ್ಯಾಂಡ್ (1ನೇ ಸ್ಥಾನ – 2018 ರಿಂದ ಸತತವಾಗಿ ಅಗ್ರಸ್ಥಾನ ಕಾಯ್ದುಕೊಂಡಿದೆ), ಐಸ್‌ಲ್ಯಾಂಡ್ ಮತ್ತು ಡೆನ್ಮಾರ್ಕ್.
ಕೊನೆಯ 3 ರಾಷ್ಟ್ರಗಳು:- ಅಫ್ಘಾನಿಸ್ತಾನ (147ನೇ ಸ್ಥಾನ – ಅತ್ಯಂತ ಕೊನೆಯ ಸ್ಥಾನ), ಸಿಯೆರಾ ಲಿಯೋನ್ (146ನೇ ಸ್ಥಾನ) ಮತ್ತು ಮಲಾವಿ (145ನೇ ಸ್ಥಾನ).
ಪ್ರಸ್ತುತ ಭಾರತದ ಸ್ಥಾನ:-116ನೇ ಸ್ಥಾನವನ್ನು ಪಡೆದುಕೊಂಡಿದೆ (2025ರ ವರದಿಯಲ್ಲಿ ಭಾರತ 118ನೇ ಸ್ಥಾನದಲ್ಲಿತ್ತು; ಹೀಗಾಗಿ ಪ್ರಸ್ತುತ ಶ್ರೇಯಾಂಕದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ).
ಕರ್ನಾಟಕ ಸರ್ಕಾರವು IIIT-ಧಾರವಾಡದಲ್ಲಿರುವ‘ಕ್ವಾಂಟಮ್ ಕಂಪ್ಯೂಟಿಂಗ್ ಸೆಂಟರ್ ಆಫ್ ಎಕ್ಸಲೆನ್ಸ್’ (QCCE) ನಲ್ಲಿ 25-ಕ್ಯೂಬಿಟ್ ಸಾಮರ್ಥ್ಯದ ಸೂಪರ್ ಕಂಡಕ್ಟಿಂಗ್ ಕ್ವಾಂಟಮ್ ಕಂಪ್ಯೂಟಿಂಗ್ ವ್ಯವಸ್ಥೆಯಾದ ‘QpiAI ಇಂಡಸ್’ಅನ್ನು ಅಧಿಕೃತವಾಗಿ ಸ್ಥಾಪಿಸಿದೆ.
ಈ ವ್ಯವಸ್ಥೆಯ ಉದ್ದೇಶಗಳು ಮತ್ತು ಬಳಕೆ:
ಶೈಕ್ಷಣಿಕ ಸಂಯೋಜನೆ:- ಈ ವ್ಯವಸ್ಥೆಯನ್ನು ಉನ್ನತ ಶಿಕ್ಷಣದ ಪಠ್ಯಕ್ರಮ ಅಭಿವೃದ್ಧಿ, ಕ್ವಾಂಟಮ್ ಅಲ್ಗಾರಿದಮ್‌ಗಳ ಸಂಶೋಧನೆ ಮತ್ತು ವಿದ್ಯಾರ್ಥಿಗಳಿಗೆ ಈ ಸುಧಾರಿತ ತಂತ್ರಜ್ಞಾನದಲ್ಲಿ ಪ್ರಾಯೋಗಿಕ ತರಬೇತಿ ನೀಡಲು ಬಳಸಲಾಗುತ್ತದೆ.
ವಾಣಿಜ್ಯ ಪ್ರವೇಶಾವಕಾಶ:- ಈ ಕೇಂದ್ರವು ಉದ್ಯಮಗಳಿಗೆ ‘ಸೇವಾ ರೂಪದ ಕ್ವಾಂಟಮ್ ಕಂಪ್ಯೂಟಿಂಗ್’ (QCaaS) ಮಾದರಿಯ ಸೌಲಭ್ಯವನ್ನು ಒದಗಿಸುತ್ತದೆ. ಇದರಿಂದಾಗಿ ಕಂಪನಿಗಳು ಸ್ವಂತವಾಗಿ ಅತ್ಯಂತ ದುಬಾರಿ ಕ್ವಾಂಟಮ್ ಕಂಪ್ಯೂಟರ್‌ಗಳನ್ನು ಖರೀದಿಸುವ ಅಗತ್ಯವಿಲ್ಲದೆ, ಇಂಟರ್ನೆಟ್ ನ ಮೂಲಕ ಈ ಕೇಂದ್ರದ ತಂತ್ರಜ್ಞಾನವನ್ನು ಬಳಸಿಕೊಂಡು ಹಣಕಾಸು, ಸಾರಿಗೆ ನಿರ್ವಹಣೆ ಮತ್ತು ಔಷಧ ಸಂಶೋಧನಾ ಕ್ಷೇತ್ರಗಳಲ್ಲಿ ಸಂಕೀರ್ಣ ಪ್ರಯೋಗಗಳನ್ನು ನಡೆಸಬಹುದಾಗಿದೆ.
‘ಕರ್ನಾಟಕ ಕ್ವಾಂಟಮ್ ಮಾರ್ಗಸೂಚಿ’:- ಇದು ಕರ್ನಾಟಕ ಸರ್ಕಾರದ ‘ಕರ್ನಾಟಕ ಕ್ವಾಂಟಮ್ ಮಾರ್ಗಸೂಚಿ’ಯಭಾಗವಾಗಿದ್ದು, 2035ರ ವೇಳೆಗೆ $ 20 ಬಿಲಿಯನ್ ಡಾಲರ್ ಮೌಲ್ಯದ ಕ್ವಾಂಟಮ್ ಆರ್ಥಿಕತೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
ಕ್ವಾಂಟಮ್ ಕಂಪ್ಯೂಟಿಂಗ್ ಬಗ್ಗೆ:
ಕ್ವಾಂಟಮ್ ಕಂಪ್ಯೂಟಿಂಗ್ ಎನ್ನುವುದು ಭೌತಶಾಸ್ತ್ರದ ವಿಶಿಷ್ಟ ನಿಯಮಗಳನ್ನು ಬಳಸಿಕೊಂಡು ಮಾಹಿತಿಯನ್ನು ಅತ್ಯಂತ ವೇಗವಾಗಿ ಸಂಸ್ಕರಿಸುವ ಕಂಪ್ಯೂಟರ್‌ಗಳ ಹೊಸ ವಿಧಾನವಾಗಿದೆ.
ನಾವು ಬಳಸುವ ಸಾಮಾನ್ಯ ಫೋನ್ ಅಥವಾ ಲ್ಯಾಪ್‌ಟಾಪ್‌ಗಳು ಮಾಹಿತಿಯನ್ನು ಬಿಟ್‌ಗಳ (Bits) ರೂಪದಲ್ಲಿ (ಅಂದರೆ 0 ಅಥವಾ 1, ಲೈಟ್ ಸ್ವಿಚ್ ಆನ್ ಅಥವಾ ಆಫ್ ಇರುವಂತೆ) ಸಂಗ್ರಹಿಸುತ್ತವೆ. ಆದರೆ ಕ್ವಾಂಟಮ್ ಕಂಪ್ಯೂಟರ್‌ಗಳು ಕ್ಯೂಬಿಟ್‌ಗಳನ್ನು (Qubits) ಬಳಸುತ್ತವೆ.
ಸಾಮರ್ಥ್ಯ:- ಇಂದಿನ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್‌ಗಳು ಸಮಸ್ಯೆಗಳನ್ನು ಪರಿಹರಿಸಲು ಸಾವಿರಾರು ವರ್ಷ ತೆಗೆದುಕೊಳ್ಳುವ ಬೃಹತ್ ಮತ್ತು ಸಂಕೀರ್ಣ ಸಮಸ್ಯೆಗಳನ್ನು ಕ್ವಾಂಟಮ್ ಕಂಪ್ಯೂಟರ್‌ಗಳು ಕೇವಲ ಕೆಲವೇ ನಿಮಿಷಗಳಲ್ಲಿ ಪರಿಹರಿಸುವ ಸಾಮರ್ಥ್ಯ ಹೊಂದಿವೆ.
ಕ್ವಾಂಟಮ್ ಕಂಪ್ಯೂಟರ್‌ಗಳು ಪ್ರಮುಖ ಅನ್ವಯಗಳು:
ವೈದ್ಯಕೀಯ ಕ್ಷೇತ್ರ:- ಹೊಸ ಔಷಧಗಳು ಮಾನವ ದೇಹದೊಂದಿಗೆ ಆಣ್ವಿಕ ಮಟ್ಟದಲ್ಲಿ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಇವು ನಿಖರವಾಗಿ ವಿಶ್ಲೇಷಿಸಬಲ್ಲ ಸಾಮರ್ಥ್ಯವನ್ನು ಹೊಂದಿವೆ.
ಸೈಬರ್ ಭದ್ರತೆ:- ಇವು ಪ್ರಸ್ತುತ ಇರುವ ಬಹುತೇಕ ಇಂಟರ್ನೆಟ್ ಎನ್‌ಕ್ರಿಪ್ಶನ್‌ಗಳನ್ನು (ಪಾಸ್ವರ್ಡ್ ಭದ್ರತೆ) ಭೇದಿಸುವ ಸಾಮರ್ಥ್ಯ ಹೊಂದಿರುವುದರಿಂದ, ಅತ್ಯಂತ ಸುರಕ್ಷಿತವಾದ ಭದ್ರತಾ ವ್ಯವಸ್ಥೆಯನ್ನು ರೂಪಿಸಲು ಇವುಗಳ ಬಳಕೆ ಅತ್ಯಗತ್ಯವಾಗಿದೆ.
ಹವಾಮಾನ ಮತ್ತು ಇಂಧನ:- ಸಂಕೀರ್ಣ ರಾಸಾಯನಿಕ ಕ್ರಿಯೆಗಳನ್ನು ವಿಶ್ಲೇಷಿಸುವ ಮೂಲಕ ಸುಧಾರಿತ ಬ್ಯಾಟರಿಗಳ ವಿನ್ಯಾಸ ಮತ್ತು ಗಾಳಿಯಿಂದ ಇಂಗಾಲವನ್ನು ತೆಗೆದುಹಾಕುವ ಮಾರ್ಗಗಳನ್ನು ಕಂಡುಹಿಡಿಯಲು ಇವು ನೆರವಾಗುತ್ತವೆ.
ರೋಗನಿರೋಧಕ ಲಸಿಕಾ ಅಭಿಯಾನದಲ್ಲಿ ಭಾರತವು ಸಾಧಿಸಿರುವ ಐತಿಹಾಸಿಕ ಮೈಲಿಗಲ್ಲುಗಳನ್ನು ಗುರುತಿಸುವ ಉದ್ದೇಶದಿಂದ, ಮಾರ್ಚ್ 16 ರಂದು ‘ರಾಷ್ಟ್ರೀಯ ಲಸಿಕಾ ದಿನ’ವನ್ನು ಆಚರಿಸಲಾಯಿತು.
1995ರಲ್ಲಿ ‘ಪಲ್ಸ್ ಪೋಲಿಯೊ ಕಾರ್ಯಕ್ರಮ’ದ ಅಡಿಯಲ್ಲಿ, ಮೊದಲ ಬಾರಿಗೆ ಬಾಯಿಯ ಮೂಲಕ ನೀಡುವ ಪೋಲಿಯೊ ಲಸಿಕೆಯ ಡೋಸ್ ಅನ್ನು ನೀಡಿದ ಐತಿಹಾಸಿಕ ದಿನದ ಸವಿನೆನಪಿಗಾಗಿ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ.
ಸರ್ಕಾರದ ಪ್ರಮುಖ ಉಪಕ್ರಮಗಳು:
ಸಾರ್ವತ್ರಿಕ ಲಸಿಕಾ ಅಭಿಯಾನಕಾರ್ಯಕ್ರಮ (UIP):-
ಪ್ರಾರಂಭ:- 1985
ಅನುಷ್ಠಾನ ಸಚಿವಾಲಯ:-ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.
ಪ್ರಮುಖ ಉದ್ದೇಶ:- ಮಕ್ಕಳು ಮತ್ತು ಗರ್ಭಿಣಿಯರಿಗೆ ವಿವಿಧ ಮಾರಣಾಂತಿಕ ಕಾಯಿಲೆಗಳ ವಿರುದ್ಧ ಉಚಿತವಾಗಿ ಲಸಿಕೆಗಳನ್ನು ಒದಗಿಸುವುದು.
ಮಿಷನ್ ಇಂದ್ರಧನುಷ್:-
ಪ್ರಾರಂಭ:-2014ರ ಡಿಸೆಂಬರ್‌ನಲ್ಲಿ ಭಾರತ ಸರ್ಕಾರವು ಈ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿತು.
ಉದ್ದೇಶ:- ಇದುವರೆಗೂ ಲಸಿಕೆ ಪಡೆಯದ ಅಥವಾ ಭಾಗಶಃ ಮಾತ್ರ ಲಸಿಕೆ ಪಡೆದಿರುವ ಎಲ್ಲಾ ಮಕ್ಕಳು ಮತ್ತು ಗರ್ಭಿಣಿಯರನ್ನು ತಲುಪುವ ಮಹತ್ವಾಕಾಂಕ್ಷೆಯ ಉದ್ದೇಶ.
ಇತ್ತೀಚಿನ ಉಪಕ್ರಮಗಳು (2026ರ ಗುರಿಗಳು):
ಎಚ್‌ಪಿವಿ ಲಸಿಕಾ ಅಭಿಯಾನ:-ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ, ದೇಶಾದ್ಯಂತ ಸುಮಾರು 1.15 ಕೋಟಿ ಹೆಣ್ಣುಮಕ್ಕಳಿಗೆ (14 ವರ್ಷ ವಯಸ್ಸಿನ) ಲಸಿಕೆ ನೀಡುವ ಬೃಹತ್ ಗುರಿಯನ್ನು ಇದು ಹೊಂದಿದೆ.
ಸ್ವದೇಶಿ ಟಿಡಿ(Td) ಲಸಿಕೆ:-ಹಿಮಾಚಲ ಪ್ರದೇಶದ ಕಸೌಲಿಯಲ್ಲಿರುವ ‘ಕೇಂದ್ರೀಯ ಸಂಶೋಧನಾ ಸಂಸ್ಥೆ’ಯಲ್ಲಿ (CRI) ಈ ಸ್ಥಳೀಯ ಲಸಿಕೆಯನ್ನು ಉತ್ಪಾದಿಸಲಾಗುತ್ತಿದ್ದು, ಸುಮಾರು 55 ಲಕ್ಷ ಡೋಸ್‌ಗಳನ್ನು ಪೂರೈಸಲು ಸರ್ಕಾರ ಯೋಜಿಸಿದೆ.
ಡಿಜಿಟಲ್ ಉಪಕ್ರಮಗಳು:
ಇ-ವಿನ್ (eVIN):- ಇದು ಲಸಿಕೆಗಳ ದಾಸ್ತಾನು ಮತ್ತು ತಾಪಮಾನವನ್ನು ನೈಜ-ಸಮಯದಲ್ಲಿ ಮೇಲ್ವಿಚಾರಣೆ ಮಾಡುವ ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆಯಾಗಿದೆ.
ಯು-ವಿನ್ (U-Win):- ಇದೊಂದು ಡಿಜಿಟಲ್ ಲಸಿಕಾ ನೋಂದಣಿ ಮತ್ತು ಮೇಲ್ವಿಚಾರಣಾ ವೇದಿಕೆಯಾಗಿದೆ.
ಕೋ-ವಿನ್ (CoWIN):- ಭಾರತದಲ್ಲಿ 220 ಕೋಟಿಗೂ ಅಧಿಕ ಕೋವಿಡ್ ಲಸಿಕಾ ಡೋಸ್‌ಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲು ಈ ಡಿಜಿಟಲ್ ವೇದಿಕೆಯು ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದೆ.
ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO)
ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ‘ಹಾರ್ಮುಜ್ ಜಲಸಂಧಿ’ಯ ಭದ್ರತೆಯನ್ನು ಕಾಪಾಡುವಲ್ಲಿ ನ್ಯಾಟೋ (NATO) ಮಿತ್ರರಾಷ್ಟ್ರಗಳು ನೆರವು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ’ಯಿಂದ (NATO) ಹೊರಬರುವ ಎಚ್ಚರಿಕೆಯನ್ನು ನೀಡಿದ್ದಾರೆ.
ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO)ಯ ಬಗ್ಗೆ:
ಅಂತರ್-ಸರ್ಕಾರಿ ಸೇನಾ ಮೈತ್ರಿಕೂಟವಾಗಿದೆ:- ‘ನ್ಯಾಟೋ’ (NATO)ವನ್ನು ‘ಉತ್ತರ ಅಟ್ಲಾಂಟಿಕ್ ಮೈತ್ರಿಕೂಟ’ (North Atlantic Alliance) ಎಂತಲೂ ಕರೆಯಲಾಗುತ್ತದೆ.
ಕೇಂದ್ರ ಕಚೇರಿ:-ಬ್ರಸೆಲ್ಸ್ (ಬೆಲ್ಜಿಯಂ)
ಸ್ಥಾಪನೆಯ ಹಿನ್ನೆಲೆ:-ಎರಡನೇ ಮಹಾಯುದ್ಧದ ನಂತರ, ಸೋವಿಯತ್ ಒಕ್ಕೂಟದ ಸಂಭವನೀಯ ದಾಳಿಗಳನ್ನು ಹಿಮ್ಮೆಟ್ಟಿಸಲು ‘ಸಾಮೂಹಿಕ ಭದ್ರತೆ’ಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ 1949ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು.
ಯುರೋಪ್ ಮತ್ತು ಉತ್ತರ ಅಮೆರಿಕದ 12 ರಾಷ್ಟ್ರಗಳು ‘ಉತ್ತರ ಅಟ್ಲಾಂಟಿಕ್ ಒಪ್ಪಂದ’ (ವಾಷಿಂಗ್ಟನ್ ಒಪ್ಪಂದ)ಕ್ಕೇ ಸಹಿ ಹಾಕುವ ಮೂಲಕ ಇದನ್ನು ಅಸ್ತಿತ್ವಕ್ಕೆ ತಂದವು.
ಸಾಮೂಹಿಕ ರಕ್ಷಣೆ:- ವಾಷಿಂಗ್ಟನ್ ಒಪ್ಪಂದದ 5ನೇ ವಿಧಿಯ ಅನ್ವಯ, ನ್ಯಾಟೋ ‘ಸಾಮೂಹಿಕ ರಕ್ಷಣೆ’ಯ ತತ್ವದಡಿ ಕಾರ್ಯನಿರ್ವಹಿಸುತ್ತದೆ. ಅಂದರೆ,
ಯಾವುದೇ ಒಂದು ನ್ಯಾಟೋ ಸದಸ್ಯ ರಾಷ್ಟ್ರದ ಮೇಲಿನ ಶಸ್ತ್ರಾಸ್ತ್ರ ದಾಳಿಯನ್ನು, ಒಟ್ಟಾರೆ ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳ ಮೇಲಿನ ದಾಳಿ ಎಂದೇ ಪರಿಗಣಿಸಲಾಗುತ್ತದೆ.
2001ರಲ್ಲಿ ಅಮೆರಿಕದ ಮೇಲೆ ನಡೆದ 9/11 ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಇತಿಹಾಸದಲ್ಲಿ ಇಲ್ಲಿಯವರೆಗೆ ಕೇವಲ ಒಮ್ಮೆ ಮಾತ್ರ ಈ 5ನೇ ವಿಧಿಯನ್ನು ಅಧಿಕೃತವಾಗಿ ಪ್ರಯೋಗಿಸಲಾಗಿದೆ.
ಸದಸ್ಯ ರಾಷ್ಟ್ರಗಳು:- ಪ್ರಸ್ತುತ ಈ ಸೇನಾ ಮೈತ್ರಿಕೂಟವು 32 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
ಇತ್ತೀಚೆಗೆ ‘ಸ್ವೀಡನ್’ ದೇಶವು ಇದರ 32ನೇ ಸದಸ್ಯ ರಾಷ್ಟ್ರವಾಗಿ ಅಧಿಕೃತವಾಗಿ ಸೇರ್ಪಡೆಗೊಂಡಿದೆ.
ಪಿಎಂ ಪೋಷಣ್ ಯೋಜನೆ (PM POSHAN Scheme)
ಯೋಜನೆಗಳು
ಇದೀಗ ಸುದ್ದಿಯಲ್ಲಿದೆ:
‘ಪಿಎಂ ಪೋಷಣ್’ ಯೋಜನೆಯ ಅಡಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಉಪಾಹಾರವನ್ನು ಕಡ್ಡಾಯವಾಗಿ ಒದಗಿಸಬೇಕು ಹಾಗೂ ಈ ಯೋಜನೆಯ ವ್ಯಾಪ್ತಿಯನ್ನು 12ನೇ ತರಗತಿಯವರೆಗೆ ವಿಸ್ತರಿಸಬೇಕು ಎಂದು ‘ಸಂಸದೀಯ ಸ್ಥಾಯಿ ಸಮಿತಿ’ಯು ಕೇಂದ್ರ ಸರ್ಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ.
ಪಿಎಂ ಪೋಷಣ್ ಯೋಜನೆ (PM-POSHAN)ಯ ಬಗ್ಗೆ:
ಈ ಮೊದಲು ‘ಮಧ್ಯಾಹ್ನದ ಬಿಸಿಯೂಟ ಯೋಜನೆ’ (MDMS) ಎಂದು ಕರೆಯಲ್ಪಡುತ್ತಿದ್ದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು 2021ರಲ್ಲಿ ‘ಪಿಎಂ ಪೋಷಣ್’ (ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್) ಎಂದು ಮರುನಾಮಕರಣ ಮಾಡಲಾಯಿತು.
ಇದು ಕೇಂದ್ರ ಶಿಕ್ಷಣ ಸಚಿವಾಲಯದ ಆಡಳಿತಾತ್ಮಕ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2021-22 ರಿಂದ 2025-26ರ ವರೆಗಿನ ಅವಧಿಗೆ ಇದರ ಮುಂದುವರಿಕೆಗೆ ಸಂಪುಟದ ಅನುಮೋದನೆ ನೀಡಲಾಗಿದೆ.
ಇದೊಂದು ‘ಕೇಂದ್ರ ಪ್ರಾಯೋಜಿತ ಯೋಜನೆ’ಯಾಗಿದ್ದು (ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ನಿರ್ದಿಷ್ಟ ಅನುಪಾತದಲ್ಲಿ ಅನುದಾನ ಒದಗಿಸುತ್ತವೆ). ಸರ್ಕಾರಿ ಮತ್ತು ಸರ್ಕಾರಿ-ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ದಿನಕ್ಕೊಂದು ಬಿಸಿ ಊಟವನ್ನು ಒದಗಿಸುವುದು ಇದರ ಮೂಲ ಸ್ವರೂಪವಾಗಿದೆ.
ಪ್ರಮುಖ ಉದ್ದೇಶ:-ಶಾಲಾ ಮಕ್ಕಳಲ್ಲಿನ ಅಪೌಷ್ಟಿಕತೆ ಹಾಗೂ ಹಸಿವನ್ನು (ಸಾಕಷ್ಟು ಆಹಾರ ಸೇವನೆಯ ಕೊರತೆ) ನೀಗಿಸುವುದು, ಹಾಗೂ ಅದೇ ಹೊತ್ತಿಗೆ ಶೈಕ್ಷಣಿಕ ಫಲಿತಾಂಶಗಳನ್ನು (ಶಾಲಾ ಹಾಜರಾತಿ ಹೆಚ್ಚಿಸುವುದು, ಶಾಲೆಯಲ್ಲೇ ಉಳಿಸಿಕೊಳ್ಳುವ ಪ್ರಮಾಣ ಹೆಚ್ಚಿಸುವುದು ಮತ್ತು ಕಲಿಕಾ ಸಾಮರ್ಥ್ಯವನ್ನು ಸುಧಾರಿಸುವುದು) ಏಕಕಾಲದಲ್ಲಿ ಉನ್ನತೀಕರಿಸುವುದು.
ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ (BHAVYA)
ಯೋಜನೆಗಳು
ಇದೀಗ ಸುದ್ದಿಯಲ್ಲಿದೆ:
ಇತ್ತೀಚಿಗೆ, ಕೇಂದ್ರ ಸಚಿವ ಸಂಪುಟವು ₹33,660 ಕೋಟಿಗಳ ಬೃಹತ್ ಅನುದಾನದೊಂದಿಗೆ ‘ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ’ಗೆ (BHAVYA) ಅಧಿಕೃತ ಅನುಮೋದನೆ ನೀಡಿದೆ.
ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ (BHAVYA)ಯ ಬಗ್ಗೆ:
ಗುರಿ:-‘ಪಿಎಂ ಗತಿಶಕ್ತಿ’ ರಾಷ್ಟ್ರೀಯ ಯೋಜನೆಯೊಂದಿಗೆ ಸಂಯೋಜನೆಗೊಂಡು, “ಭವಿಷ್ಯದ ಅಗತ್ಯತೆಗಳಿಗೆ ಸಜ್ಜಾದ 100 ಅತ್ಯಾಧುನಿಕ ಕೈಗಾರಿಕಾ ಪಾರ್ಕ್”ಗಳನ್ನು ನಿರ್ಮಿಸುವುದು ಇದರ ಪ್ರಮುಖ ಗುರಿಯಾಗಿದೆ. ಇದರಿಂದಾಗಿ ಈ ಪಾರ್ಕ್‌ಗಳಿಗೆ ‘ಬಹು-ಮಾದರಿ ಸಂಪರ್ಕ ವ್ಯವಸ್ಥೆ’ ಮತ್ತು ‘ಕೊನೆಯ ಹಂತದವರೆಗಿನ ಸಂಪರ್ಕ’ ಸುಲಭವಾಗಿ ಲಭ್ಯವಾಗಲಿದೆ.
ಈ ಕೈಗಾರಿಕಾ ಪಾರ್ಕ್‌ಗಳು ಕೈಗಾರಿಕಾ ಮೂಲಸೌಕರ್ಯದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲಿವೆ. ಕಾರ್ಯಾಚರಣೆಯ ವಿಶ್ವಾಸಾರ್ಹತೆಯನ್ನು ಖಚಿತಪಡಿಸುವುದು, ದಕ್ಷತೆಯ ಕೊರತೆಯನ್ನು ತಗ್ಗಿಸುವುದು ಮತ್ತು ವಿವಿಧ ಕೈಗಾರಿಕಾ ವಲಯಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವುದು ಇದರ ಮಹತ್ವಾಕಾಂಕ್ಷೆಯಾಗಿದೆ.
ಭೂಬಳಕೆ:- ಅಭಿವೃದ್ಧಿಗಾಗಿ 100 ರಿಂದ 1,000 ಎಕರೆಗಳವರೆಗಿನ ವಿಸ್ತೀರ್ಣದ ಕೈಗಾರಿಕಾ ಪಾರ್ಕ್‌ಗಳನ್ನು ಗುರುತಿಸಿ ನಿರ್ಮಿಸಲು ಉದ್ದೇಶಿಸಲಾಗಿದೆ.
ಹಣಕಾಸು ನೆರವು:-ಕೇಂದ್ರ ಸರ್ಕಾರವು ಪ್ರತಿ ಎಕರೆಗೆ 1 ಕೋಟಿ ರೂ.ಗಳವರೆಗೆ ಆರ್ಥಿಕ ನೆರವು ಒದಗಿಸಲಿದೆ. ಈ ಯೋಜನೆಯು ಕೇವಲ ಕೇಂದ್ರಕ್ಕೆ ಸೀಮಿತವಾಗಿರದೆ, ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ವಲಯದ ಸಕ್ರಿಯ ಪಾಲ್ಗೊಳ್ಳುವಿಕೆಯನ್ನೂ ನಿರೀಕ್ಷಿಸುತ್ತದೆ.
ಮೂಲಸೌಕರ್ಯ:- ಆಂತರಿಕ ರಸ್ತೆಗಳು, ಭೂಗತ ಉಪಯುಕ್ತತೆಗಳು, ಒಳಚರಂಡಿ ವ್ಯವಸ್ಥೆ, ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಹಾಗೂ ಆಡಳಿತಾತ್ಮಕ ವ್ಯವಸ್ಥೆಗಳಂತಹ ಸುಸಜ್ಜಿತ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಅನುಷ್ಠಾನ:- ಕೇಂದ್ರ ‘ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯ’ (DPIIT) ಅಡಿಯಲ್ಲಿ ಬರುವ ‘ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ’ವು (NICDC) ಈ ಉಪಕ್ರಮದ ಅನುಷ್ಠಾನದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ಯೋಜನೆಯ ಅವಧಿ:- ಈ ಯೋಜನೆಯು 2026-27ನೇ ಸಾಲಿನಿಂದ ಪ್ರಾರಂಭವಾಗಿ ಒಟ್ಟು ಆರು ವರ್ಷಗಳ ಅವಧಿಯವರೆಗೆ ಜಾರಿಯಲ್ಲಿರಲಿದೆ.
‘ಪಿಎಂ ಗತಿಶಕ್ತಿ’ ಯೋಜನೆಯ ಬಗ್ಗೆ:
ಪ್ರಾರಂಭ:-2021ರಲ್ಲಿ ಪ್ರಾರಂಭಿಸಲಾಯಿತು.
ಉದ್ದೇಶ:- ದೇಶದ ಸಮಗ್ರ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ವಿವಿಧ ವಲಯಗಳಾದ್ಯಂತ ತಡೆರಹಿತ ಸಂಪರ್ಕವನ್ನು ಉತ್ತೇಜಿಸುವುದು.
ಪ್ರಾಮುಖ್ಯತೆ:- ಇದು ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ‘ಪರಿವರ್ತನಾತ್ಮಕ ವಿಧಾನ’ವಾಗಿದೆ.
ಈ ಯೋಜನೆಯ 7 ಪ್ರಮುಖ ಚಾಲಕ ಶಕ್ತಿಗಳೆಂದರೆ:-ರೈಲ್ವೆ, ರಸ್ತೆಗಳು, ಬಂದರುಗಳು, ಜಲಮಾರ್ಗಗಳು, ವಿಮಾನ ನಿಲ್ದಾಣಗಳು, ಸಮೂಹ ಸಾರಿಗೆ ಮತ್ತು ಸರಕು ಸಾಗಣೆ (ಲಾಜಿಸ್ಟಿಕ್ಸ್) ಮೂಲಸೌಕರ್ಯ.
ಅನುಷ್ಠಾನ:- ‘ಪಿಎಂ ಗತಿಶಕ್ತಿ’ಯು ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಮೂಲಸೌಕರ್ಯ ಯೋಜನೆಗಳಾದ ‘ಭಾರತಮಾಲಾ’, ‘ಸಾಗರಮಾಲಾ’, ಒಳನಾಡು ಜಲಮಾರ್ಗಗಳು, ಶುಷ್ಕ ಬಂದರುಗಳು, ಉಡಾನ್ (UDAN) ಮುಂತಾದವುಗಳನ್ನು ಒಂದೇ ವೇದಿಕೆಯಡಿ ಸಂಯೋಜಿಸುತ್ತದೆ.
ಮೀಥೇನ್ ಹೊರಸೂಸುವಿಕೆಯ ತೀವ್ರ ತಾಣಗಳು
ಪರಿಸರ
ಇದೀಗ ಸುದ್ದಿಯಲ್ಲಿದೆ:
ಇತ್ತೀಚಿಗೆ, ‘ಸ್ಟಾಪ್ ಮೀಥೇನ್ ಪ್ರಾಜೆಕ್ಟ್’ (UCLA) ನಡೆಸಿದ ಉಪಗ್ರಹ-ಆಧಾರಿತ ಸಂಶೋಧನೆಯು ಆಘಾತಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದೆ. ಕೇವಲ ಬೆರಳೆಣಿಕೆಯಷ್ಟು ತೈಲ ಮತ್ತು ಅನಿಲ ನಿಕ್ಷೇಪ ತಾಣಗಳು ಅಸಮಾನವಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೀಥೇನ್ ಅನಿಲವನ್ನು ಹೊರಸೂಸುತ್ತಿವೆ ಎಂದು ಈ ವರದಿಯು ಎತ್ತಿ ತೋರಿಸಿದೆ.
ಮೀಥೇನ್ (CH₄) ಕುರಿತಾದ ಮೂಲಭೂತ ಅಂಶಗಳು:
ಬಣ್ಣರಹಿತ, ವಾಸನೆರಹಿತ ಮತ್ತು ಹೆಚ್ಚು ದಹನಶೀಲವಾದ ಅನಿಲವಾಗಿದೆ:- ಇದು ‘ನೈಸರ್ಗಿಕ ಅನಿಲ’ದ ಪ್ರಾಥಮಿಕ ಹಾಗೂ ಪ್ರಮುಖ ಘಟಕವಾಗಿದೆ.
ಇಂಗಾಲದ ಡೈಆಕ್ಸೈಡ್‌ಗೆ (CO2) ಹೋಲಿಸಿದರೆ, ಮೀಥೇನ್ ವಾತಾವರಣದಲ್ಲಿ ಕೇವಲ 12 ವರ್ಷಗಳಷ್ಟು ಅಲ್ಪಾವಧಿಯ ಜೀವಿತಾವಧಿಯನ್ನು ಹೊಂದಿದೆ.
ಅತ್ಯಂತ ಪ್ರಬಲವಾದ ಹಸಿರುಮನೆ ಅನಿಲವಾಗಿದೆ (GHG):-ಅಲ್ಪಾವಧಿಯಲ್ಲಿ ತೀವ್ರತರವಾದ ತಾಪಮಾನ ಏರಿಕೆಗೆ ಕಾರಣವಾಗುತ್ತದೆ.
20 ವರ್ಷಗಳ ಅವಧಿಯಲ್ಲಿ ವಾತಾವರಣದಲ್ಲಿ ಶಾಖವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದಲ್ಲಿ, ಇದು ಇಂಗಾಲದ ಡೈಆಕ್ಸೈಡ್‌ಗಿಂತ 80 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ.
ಕೈಗಾರಿಕಾ-ಪೂರ್ವ ಕಾಲಘಟ್ಟದಿಂದ ಇಲ್ಲಿಯವರೆಗೆ ಸಂಭವಿಸಿರುವ ಒಟ್ಟಾರೆ ಜಾಗತಿಕ ತಾಪಮಾನ ಏರಿಕೆಯಲ್ಲಿ, ಶೇಕಡಾ 30ರಷ್ಟು ಪಾಲು ಕೇವಲ ಮೀಥೇನ್ ಅನಿಲದ್ದೇ ಆಗಿದೆ.
ಪ್ರಮುಖ ಮೂಲಗಳು:-
ಮಾನವ-ಪ್ರೇರಿತ ಮೂಲಗಳು:-ತೈಲ ಮತ್ತು ಅನಿಲ ಉತ್ಪಾದನೆ, ಕಲ್ಲಿದ್ದಲು ಗಣಿಗಾರಿಕೆ, ಜಾನುವಾರುಗಳ ಜೀರ್ಣಕ್ರಿಯೆ ಪ್ರಕ್ರಿಯೆ, ಮತ್ತು ಭೂಕುಸಿತ ಪ್ರದೇಶಗಳಲ್ಲಿ ತ್ಯಾಜ್ಯ ಕೊಳೆಯುವಿಕೆಯಿಂದ ಇದು ಹೆಚ್ಚಾಗಿ ಬಿಡುಗಡೆಯಾಗುತ್ತದೆ.
ನೈಸರ್ಗಿಕ ಮೂಲಗಳು:-ಜೌಗು ಪ್ರದೇಶಗಳು, ಸಾಗರ ಜಲಸಂಚಯಗಳು, ಹೈಡ್ರೇಟ್‌ಗಳು ಮತ್ತು ಜ್ವಾಲಾಮುಖಿಗಳಂತಹ ಭೌಗೋಳಿಕ ಮೂಲಗಳಿಂದ ಮೀಥೇನ್ ನೈಸರ್ಗಿಕವಾಗಿ ಬಿಡುಗಡೆಯಾಗುತ್ತದೆ.
2026ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಬೆಂಗಳೂರು ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಾದ ‘ಪಿಕ್ಸೆಲ್’ (Pixxel) ತನ್ನ ನೂತನ ‘ಶಕುಂತಲಾ ಉಪಕ್ರಮ’ದ ಅಡಿಯಲ್ಲಿ ‘ಶಕುಂತಲಾ ಅನುದಾನ’ವನ್ನುಪ್ರಾರಂಭಿಸಿದೆ.
ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಪರಿಸರ ಅಧ್ಯಯನದ ಮೇಲೆ ಸಂಶೋಧನೆ ನಡೆಸುತ್ತಿರುವ ಮಹಿಳಾ ಸಂಶೋಧಕರಿಗೆ ಈ ಉಪಕ್ರಮವು ಕಿರು-ಅನುದಾನಗಳನ್ನು ಒದಗಿಸುತ್ತದೆ.
ಈ ಕಾರ್ಯಕ್ರಮವು ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಮಹಿಳಾ ಸಂಶೋಧಕರಿಗೆ ಕ್ಷೇತ್ರ ಅಧ್ಯಯನಗಳು, ದತ್ತಾಂಶ ಸಂಗ್ರಹಣೆ ಮತ್ತು ಸಂಶೋಧನಾ ಉಪಕರಣಗಳ ಖರೀದಿಗೆ ಅಗತ್ಯವಿರುವ ಆರ್ಥಿಕ ಬೆಂಬಲವನ್ನು ನೀಡುತ್ತದೆ.
‘ಶಕುಂತಲಾ ಅನುದಾನ’ ಮತ್ತು ಉಪಕ್ರಮದ ಪ್ರಮುಖ ವಿವರಗಳು:
ಮುಖ್ಯ ಉದ್ದೇಶ:- STEM ಕ್ಷೇತ್ರದಲ್ಲಿ ಮಹಿಳಾ ಸಂಶೋಧಕರು ಎದುರಿಸುತ್ತಿರುವ ಹಣಕಾಸಿನ ಕೊರತೆಯನ್ನು ನೀಗಿಸುವುದು ಮತ್ತು ದೀರ್ಘಕಾಲೀನವಾಗಿ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಸಮುದಾಯವನ್ನು ಬಲಪಡಿಸುವುದು.
ಪಾಲುದಾರಿಕೆ:- ಈ ಕಾರ್ಯಕ್ರಮವನ್ನು ‘ಎಸ್ಕೇಪ್ ವೆಲಾಸಿಟಿ ಗ್ರಾಂಟ್ಸ್’ ಸಂಸ್ಥೆಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ.
ಆದ್ಯತಾ ಕ್ಷೇತ್ರಗಳು:-ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆ ಮತ್ತು ಭೂಮಿಯ ವೀಕ್ಷಣೆಗೆ ಸಂಬಂಧಿಸಿದ ಸಂಶೋಧನಾ ಯೋಜನೆಗಳಿಗೆ ಈ ಅನುದಾನವು ಬೆಂಬಲ ನೀಡುತ್ತದೆ.
ಪ್ರೇರಣೆ:- ಈ ಹೊಸ ಪ್ರಯತ್ನಕ್ಕೆ ಪಿಕ್ಸೆಲ್ ಸಂಸ್ಥೆಯು ಬಾಹ್ಯಾಕಾಶಕ್ಕೆ ಹಾರಿಸಿದ ಮೊಟ್ಟಮೊದಲ ಮಾರ್ಗದರ್ಶಕ ಉಪಗ್ರಹವಾದ ‘ಶಕುಂತಲಾ’ ಮತ್ತು ಭಾರತದ ಹೆಮ್ಮೆಯ ಗಣಿತಜ್ಞೆ ಶಕುಂತಲಾ ದೇವಿ ಅವರ ಸವಿನೆನಪಿಗಾಗಿ ಈ ಹೆಸರನ್ನು ಇಡಲಾಗಿದೆ.
ನಗೋಯಾ ಶಿಷ್ಟಾಚಾರದ ಕುರಿತು ಭಾರತದ ಮೊದಲ ರಾಷ್ಟ್ರೀಯ ವರದಿ (NR1)
ಪರಿಸರ
ಇದೀಗ ಸುದ್ದಿಯಲ್ಲಿದೆ:
ಜೈವಿಕ ವೈವಿಧ್ಯತೆಯ ಆಡಳಿತದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿರುವ ‘ನಗೋಯಾ ಶಿಷ್ಟಾಚಾರ’ದ ಅನುಷ್ಠಾನದ ಕುರಿತಾದ ತನ್ನ ಮೊದಲ ರಾಷ್ಟ್ರೀಯ ವರದಿಯನ್ನು (NR1) ಭಾರತವು ಇತ್ತೀಚಿಗೆ ‘ಜೈವಿಕ ವೈವಿಧ್ಯತಾ ಸಮಾವೇಶದ ಸಚಿವಾಲಯ’ಕ್ಕೆ ಸಲ್ಲಿಸಿದೆ.
ನಗೋಯಾ ಶಿಷ್ಟಾಚಾರದ ಬಗ್ಗೆ:
ಅಂಗೀಕಾರ:-2010 ರ ಅಕ್ಟೋಬರ್ 29 ರಂದು ಜಪಾನ್‌ನ ‘ನಗೋಯಾ’ದಲ್ಲಿ ಈ ಅಂತರರಾಷ್ಟ್ರೀಯ ಶಿಷ್ಟಾಚಾರವನ್ನು ಅಂಗೀಕರಿಸಲಾಯಿತು.
ಜಾರಿ:- ಈ ಶಿಷ್ಟಾಚಾರವು 2014 ರ ಅಕ್ಟೋಬರ್ 12 ರಿಂದ ಜಾಗತಿಕವಾಗಿ ಜಾರಿಗೆ ಬಂದಿದೆ.
ಉದ್ದೇಶ:- ಜೈವಿಕ ಅಥವಾ ಆನುವಂಶಿಕ ಸಂಪನ್ಮೂಲಗಳ ನ್ಯಾಯಸಮ್ಮತ ಮತ್ತು ಸಮಾನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ.
ಭಾರತವು ತನ್ನ ‘ಜೈವಿಕ ವೈವಿಧ್ಯತಾ ಕಾಯ್ದೆ, 2002’ ಕ್ಕೆ ಅನುಗುಣವಾಗಿ 2012 ರಲ್ಲಿಯೇ ಈ ಶಿಷ್ಟಾಚಾರವನ್ನು ಅಧಿಕೃತವಾಗಿ ಅಂಗೀಕರಿಸಿದೆ.
2027ರ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಪ್ರಕ್ರಿಯೆ ಆರಂಭ
ಪ್ರಶಸ್ತಿಗಳು/ಇತರೆ
ಇದೀಗ ಸುದ್ದಿಯಲ್ಲಿದೆ:
ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ‘2027ರ ಪದ್ಮ ಪ್ರಶಸ್ತಿ’ಗಳಿಗಾಗಿ ಕೇಂದ್ರ ಸರ್ಕಾರವು ನಾಮನಿರ್ದೇಶನ ಮತ್ತು ಶಿಫಾರಸುಗಳನ್ನು ಆಹ್ವಾನಿಸಿದೆ.
ಪದ್ಮ ಪ್ರಶಸ್ತಿಗಳ ಬಗ್ಗೆ:
1954 ರಲ್ಲಿ ಸ್ಥಾಪಿಸಲಾದ ಪದ್ಮ ಪ್ರಶಸ್ತಿಗಳು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿವೆ.
ಇವುಗಳನ್ನು ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ಪ್ರದಾನ ಮಾಡಲಾಗುತ್ತದೆ.
‘ಪದ್ಮ ವಿಭೂಷಣ’ ಪ್ರಶಸ್ತಿಯನ್ನು ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ.
‘ಪದ್ಮಭೂಷಣ’ ಪ್ರಶಸ್ತಿಯನ್ನು ಉನ್ನತ ಮಟ್ಟದ ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ.
‘ಪದ್ಮಶ್ರೀ’ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿನ ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ.
ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವಾಣಿಜ್ಯ ಮತ್ತು ಕೈಗಾರಿಕೆ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿನ ಅಸಾಧಾರಣ ಸಾಧನೆಗಳು ಅಥವಾ “ವಿಶಿಷ್ಟ ಕಾರ್ಯ”ಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ಜಾತಿ, ಧರ್ಮ.ವೃತ್ತಿ, ಸ್ಥಾನಮಾನ ಅಥವಾ ಲಿಂಗ ಭೇದವಿಲ್ಲದೆ ಎಲ್ಲಾ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ.
ಗಮನಿಸಿ: ಸಾರ್ವಜನಿಕ ವಲಯದ ಉದ್ಯಮಗಳ (PSU) ನೌಕರರು ಸೇರಿದಂತೆ ಯಾವುದೇ ಸರ್ಕಾರಿ ನೌಕರರು ಸಾಮಾನ್ಯವಾಗಿ ಈ ಪ್ರಶಸ್ತಿಗಳಿಗೆ ಅರ್ಹರಾಗಿರುವುದಿಲ್ಲ; ಆದರೆ, ವೈದ್ಯರು ಮತ್ತು ವಿಜ್ಞಾನಿಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.
ಪದ್ಮ ಪ್ರಶಸ್ತಿಗಳನ್ನು “ಜನಸಾಮಾನ್ಯರ ಪದ್ಮ” ಪ್ರಶಸ್ತಿಗಳನ್ನಾಗಿ ಪರಿವರ್ತಿಸಲು ಸರ್ಕಾರವು ಬದ್ಧವಾಗಿದ್ದು, ಅರ್ಹ ಸಾಧಕರನ್ನು ನಾಮನಿರ್ದೇಶನ ಮಾಡಲು ನಾಗರಿಕರನ್ನು ಪ್ರೋತ್ಸಾಹಿಸುತ್ತಿದೆ.
ಈ ಪ್ರಕ್ರಿಯೆಯಲ್ಲಿ ವ್ಯಕ್ತಿಗಳು ತಮ್ಮನ್ನು ತಾವೇ ನಾಮನಿರ್ದೇಶನ ಮಾಡಿಕೊಳ್ಳಲು ಕೂಡ ಅವಕಾಶ ಕಲ್ಪಿಸಲಾಗಿದೆ.
ಈ ನಾಮನಿರ್ದೇಶನಗಳು, ಆಯಾ ಕ್ಷೇತ್ರಗಳಲ್ಲಿ ನಾಮನಿರ್ದೇಶಿತ ವ್ಯಕ್ತಿ ಮಾಡಿರುವ ವಿಶಿಷ್ಟ ಸಾಧನೆಗಳ ಕುರಿತಾದ ವಿವರವಾದ ಮಾಹಿತಿಯನ್ನು ಕಡ್ಡಾಯವಾಗಿ ಒಳಗೊಂಡಿರಬೇಕು.
ನಾಮನಿರ್ದೇಶನಗಳನ್ನು ಆನ್‌ಲೈನ್ ಮೂಲಕ ಕೇವಲ ‘ರಾಷ್ಟ್ರೀಯ ಪುರಸ್ಕಾರ ಪೋರ್ಟಲ್’ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ.
ಪ್ರತಿ ವರ್ಷ ಗಣರಾಜ್ಯೋತ್ಸವದ (ಜನವರಿ 26) ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.
ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಧ್ಯುಕ್ತ ಸಮಾರಂಭಗಳಲ್ಲಿ ಭಾರತದ ರಾಷ್ಟ್ರಪತಿಗಳು ಈ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆ.
ಗುಂಟೂರಿನಲ್ಲಿ ಗಜಪತಿ ರಾಜವಂಶದ ಶಾಸನ ಪತ್ತೆ
ಇತಿಹಾಸ
ಇದೀಗ ಸುದ್ದಿಯಲ್ಲಿದೆ:
ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಗಜಪತಿ ರಾಜವಂಶಕ್ಕೆ ಸೇರಿದ ಮಧ್ಯಕಾಲೀನ ಶಾಸನವೊಂದು ಇತ್ತೀಚಿಗೆ ಪತ್ತೆಯಾಗಿದೆ.
ದೇವಾಲಯದ ಮಂಟಪದಲ್ಲಿರುವ ಕಲ್ಲಿನ ಕಂಬವೊಂದರ ಮೇಲೆ ಈ ಶಾಸನವನ್ನು ಕೆತ್ತಲಾಗಿದೆ.
ಸಾ.ಶ. 15ನೇ ಶತಮಾನದಲ್ಲಿ ಪುರುಷೋತ್ತಮ ದೇವನ ಆಳ್ವಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ‘ಕುಮಾರಗುರು ಮಹಾಪಾತ್ರ’ ಎಂಬ ಅಧಿಕಾರಿಯ ಕುರಿತು ಈ ಶಾಸನವು ಉಲ್ಲೇಖಿಸುತ್ತದೆ.
ಆ ಕಾಲಘಟ್ಟದಲ್ಲಿ ನಡೆದ ಸತತ ಆಕ್ರಮಣಗಳ ಹಿನ್ನೆಲೆಯಲ್ಲಿ, ಕೊಂಡವೀಡು ಕೋಟೆಯಿಂದ ನರಸಿಂಹ ಸ್ವಾಮಿಯ ವಿಗ್ರಹ ಹಾಗೂ ಮಂಟಪದ ಕಂಬಗಳನ್ನು ಗುಂಟೂರಿಗೆ ಸ್ಥಳಾಂತರಿಸಲಾಯಿತು ಎಂಬ ಐತಿಹಾಸಿಕ ಮಾಹಿತಿಯನ್ನು ಈ ಶಾಸನವು ಒದಗಿಸುತ್ತದೆ.
ಮೂಲತಃ ಕೊಂಡವೀಡಿನ ಮಲ್ಲಿಕಾರ್ಜುನ ಸ್ವಾಮಿಗೆ ಸಮರ್ಪಿಸಲಾಗಿದ್ದ ಈ ಶಾಸನವನ್ನು, ತರುವಾಯ ಗುಂಟೂರು ದೇವಾಲಯಕ್ಕೆ ತಂದು ನಿಲ್ಲಿಸಲಾಗಿದೆ.
‘ಗಜಪತಿ ರಾಜವಂಶ’ದ ಬಗ್ಗೆ:
ಗಜಪತಿ ರಾಜವಂಶವು ಒಡಿಶಾದಲ್ಲಿ ಉಗಮಿಸಿ, 15 ಮತ್ತು 16ನೇ ಶತಮಾನಗಳಲ್ಲಿ ಪ್ರವರ್ಧಮಾನಕ್ಕೆ ಬಂದ ಪ್ರಬಲ ಮಧ್ಯಕಾಲೀನ ಸಾಮ್ರಾಜ್ಯವಾಗಿದೆ.
ಪೂರ್ವ ಗಂಗಾ ರಾಜವಂಶದ ಪತನದ ನಂತರ, ‘ಕಪಿಲೇಂದ್ರ ದೇವ’ ಎಂಬ ರಾಜನು ಈ ಗಜಪತಿ ರಾಜವಂಶವನ್ನು ಸ್ಥಾಪಿಸಿದನು.
ಈ ಸಾಮ್ರಾಜ್ಯವು ತನ್ನ ಉತ್ತುಂಗದ ಕಾಲದಲ್ಲಿ, ಪ್ರಸ್ತುತ ಪಶ್ಚಿಮ ಬಂಗಾಳದ ಕೆಲವು ಭಾಗಗಳಿಂದ ತಮಿಳುನಾಡಿನ ತಿರುಚಿರಾಪಳ್ಳಿಯವರೆಗೆ ವಿಸ್ತರಿಸಿತ್ತು. ‘ಕಟಕ’ (ಇಂದಿನ ಕಟಕ್) ನಗರವು ಈ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
ಗಜಪತಿ ಆಡಳಿತಗಾರರು ಕಲೆ, ವಾಸ್ತುಶಿಲ್ಪ ಮತ್ತು ಸಾಹಿತ್ಯಕ್ಕೆ ನೀಡಿದ ಅಪಾರ ಪ್ರೋತ್ಸಾಹಕ್ಕಾಗಿ ಇತಿಹಾಸದಲ್ಲಿ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ವಿಜಯನಗರ ಸಾಮ್ರಾಜ್ಯದೊಂದಿಗೆ ಇವರು ನಿರಂತರ ರಾಜಕೀಯ ಪೈಪೋಟಿಯನ್ನು ಹೊಂದಿದ್ದರು.
ಲಡಾಖ್ ಮ್ಯಾಗ್ಮ್ಯಾಟಿಕ್ ಆರ್ಕ್ (Ladakh Magmatic Arc)
ಭೂಗೋಳ
ಇದೀಗ ಸುದ್ದಿಯಲ್ಲಿದೆ:
ಇತ್ತೀಚಿಗೆ, ‘ಹಿಮಾಲಯನ್ ಭೂವಿಜ್ಞಾನದ ವಾಡಿಯಾ ಸಂಸ್ಥೆಯ’ ವಿಜ್ಞಾನಿಗಳು ವಾಯುವ್ಯ ಹಿಮಾಲಯದಲ್ಲಿರುವ ‘ಲಡಾಖ್ ಮ್ಯಾಗ್ಮ್ಯಾಟಿಕ್ ಆರ್ಕ್’ನ (LMA) ವಿಕಸನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಭೇದಿಸಿದ್ದಾರೆ (ಅರ್ಥೈಸಿದ್ದಾರೆ).
‘ಲಡಾಖ್ ಮ್ಯಾಗ್ಮ್ಯಾಟಿಕ್ ಆರ್ಕ್’ನ ಬಗ್ಗೆ:
ಇದು ಭಾರತದ ಟ್ರಾನ್ಸ್-ಹಿಮಾಲಯನ್ ಪ್ರದೇಶದಲ್ಲಿ (ಹಿಮಾಲಯ ಶ್ರೇಣಿಯಾಚೆಯ ಪ್ರದೇಶ ) (ಮುಖ್ಯವಾಗಿ ಲಡಾಖ್) ಕಂಡುಬರುವ ಅಗ್ನಿಶಿಲೆಗಳ ಒಂದು ಬೃಹತ್ ವಲಯವಾಗಿದೆ.
ಇದು ಬಹುಕಾಲದ ಹಿಂದೆಯೇ ಅಳಿದುಹೋದ ಪ್ರಾಚೀನ ‘ಜ್ವಾಲಾಮುಖಿ ಕಮಾನಿನ ವ್ಯವಸ್ಥೆ’ಯನ್ನು ಪ್ರತಿನಿಧಿಸುತ್ತದೆ.
ಪ್ರಸ್ತುತ ಅಸ್ತಿತ್ವದಲ್ಲಿರುವ ಲಡಾಖ್ ಪ್ರದೇಶವು ಒಂದು ಕಾಲದಲ್ಲಿ ‘ನಿಯೋ-ಟೆಥಿಸ್ ಮಹಾಸಾಗರ’ದ ಮೇಲ್ಭಾಗದಲ್ಲಿ ನೆಲೆಗೊಂಡಿತ್ತು ಎಂದು ಭೂವಿಜ್ಞಾನಿಗಳು ವಿವರಿಸಿದ್ದಾರೆ.
ಈ ಮಹಾಸಾಗರದ ತಳಭಾಗದಲ್ಲಿ, ‘ಭಾರತೀಯ ಭೂಫಲಕ’ದ ಸಾಗರ ಕವಚವು ‘ಯುರೇಷಿಯನ್ ಭೂಫಲಕ’ದ ಕಡೆಗೆ ನಿರಂತರವಾಗಿ ಚಲಿಸುತ್ತಿತ್ತು.
ಈ ಚಲನೆಯಿಂದಾಗಿ, ಹೆಚ್ಚಿನ ಸಾಂದ್ರತೆಯನ್ನು ಹೊಂದಿದ್ದ ಸಾಗರ ಫಲಕವು ಯುರೇಷಿಯನ್ ಫಲಕದ ಕೆಳಗೆ ಮುಳುಗಿತು/ನುಸುಳಿತು. (Subduction ಪ್ರಕ್ರಿಯೆ).
ಈ ಭೌಗೋಳಿಕ ಪ್ರಕ್ರಿಯೆಯು ಭೂಮಿಯ ಒಳಪದರವಾದ ‘ಮ್ಯಾಂಟಲ್’ (ಶಿಲಾಪಾಕ) ವಸ್ತುಗಳ ಕರಗುವಿಕೆಗೆ ಹಾಗೂ ‘ಮ್ಯಾಗ್ಮಾ’ (ಶಿಲಾರಸ) ಸೃಷ್ಟಿಗೆ ಕಾರಣವಾಯಿತು. ತದನಂತರ ಈ ಮ್ಯಾಗ್ಮಾ ಮೇಲಕ್ಕೆ ಚಿಮ್ಮಿ, ಜ್ವಾಲಾಮುಖಿ ಕಮಾನುಗಳು ರೂಪುಗೊಂಡವು.
ದತ್ತು ಪಡೆಯುವ ತಾಯಂದಿರಿಗೆ ಸಮಾನ ಹೆರಿಗೆ ರಜೆ ಹಕ್ಕುಗಳು
ಆಡಳಿತ ಮತ್ತು ಸಂವಿಧಾನ
ಇದೀಗ ಸುದ್ದಿಯಲ್ಲಿದೆ:
ಮಕ್ಕಳನ್ನು ದತ್ತು ಪಡೆಯುವ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ, ಮಗುವಿನ ವಯಸ್ಸನ್ನು ಪರಿಗಣಿಸದೆ 12 ವಾರಗಳ ‘ವೇತನ ಸಹಿತ ಹೆರಿಗೆ ರಜೆ’ ಪಡೆಯುವ ಹಕ್ಕಿದೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
ಕಾನೂನಿನ ಹಿನ್ನೆಲೆ:
ಭಾರತದಲ್ಲಿ ಹೆರಿಗೆ ಸೌಲಭ್ಯಗಳನ್ನು ಒದಗಿಸುವ ಕಾನೂನು ಚೌಕಟ್ಟು ‘ಹೆರಿಗೆ ಸೌಲಭ್ಯ ಕಾಯ್ದೆ, 1961’ರ ಅಡಿಯಲ್ಲಿ ರೂಪುಗೊಂಡಿದೆ. 2017ರಲ್ಲಿ ಈ ಕಾಯ್ದೆಗೆ ತರಲಾದ ತಿದ್ದುಪಡಿಯ ಮೂಲಕ, ಮೊದಲ ಬಾರಿಗೆ ದತ್ತು ಪಡೆಯುವ ತಾಯಂದಿರು ಮತ್ತು ಬಾಡಿಗೆ ತಾಯಂದಿರಿಗೆ 12 ವಾರಗಳ ಹೆರಿಗೆ ರಜೆಯನ್ನು ಮಂಜೂರು ಮಾಡಲಾಯಿತು.
ಆದಾಗ್ಯೂ, ದತ್ತು ಪಡೆದ ಮಗುವಿನ ವಯಸ್ಸು 3 ತಿಂಗಳಿಗಿಂತ ಕಡಿಮೆಯಿದ್ದರೆ ಮಾತ್ರ ಈ ಹೆರಿಗೆ ರಜೆ ಅನ್ವಯವಾಗುತ್ತದೆ ಎಂಬ ‘ನಿರ್ಬಂಧಿತ ಷರತ್ತನ್ನು’ ಕಾನೂನಿನಲ್ಲಿ ವಿಧಿಸಲಾಗಿತ್ತು.
ಸರ್ವೋಚ್ಚ ನ್ಯಾಯಾಲಯದ ತೀರ್ಪು:
ಕಳವಳ:- ‘ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ’ದ (CARA) ಮಾರ್ಗಸೂಚಿಗಳಿಗೆ ಅನುಗುಣವಾಗಿ ನಡೆಯುವ ಭಾರತದ ದತ್ತು ಪ್ರಕ್ರಿಯೆಯಲ್ಲಿ, ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಲು ಅವಕಾಶ ಸಿಗುವುದು ಅತ್ಯಂತ ವಿರಳವಾಗಿದೆ.
ಇದರ ಪರಿಣಾಮವಾಗಿ, ದತ್ತು ಪಡೆಯುವ ಬಹುಪಾಲು ತಾಯಂದಿರಿಗೆ ಹೆರಿಗೆ ರಜೆಯ ಸೌಲಭ್ಯಗಳನ್ನು ವಾಸ್ತವವಾಗಿ ನಿರಾಕರಿಸಿದಂತಾಗಿತ್ತು. ಇದು ಕಾಯ್ದೆಯ ಮೂಲ ಉದ್ದೇಶವನ್ನೇ ವಿಫಲಗೊಳಿಸಿ, ನಿಬಂಧನೆಯನ್ನು ಕೇವಲ ಭ್ರಮೆಯನ್ನಾಗಿಸಿತ್ತು.
ಮಗುವಿನ ವಯಸ್ಸಿನ ಆಧಾರದ ಮೇಲೆ ಮಾಡುವ ಇಂತಹ ವರ್ಗೀಕರಣವು ತಾರತಮ್ಯದಿಂದ ಕೂಡಿದ್ದು, ಸಂವಿಧಾನದ 14 ಮತ್ತು 21ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
‘ದತ್ತು ಪಡೆಯುವಿಕೆ’ಯು ತಾಯ್ತನವನ್ನು ಹೊಂದುವ ಒಂದು ಸಮಾನ ಹಾಗೂ ಮಾನ್ಯವಾದ ಮಾರ್ಗವಾಗಿದೆ. ಹೀಗಾಗಿ, ದತ್ತು ಪಡೆಯುವ ತಾಯಂದಿರ ಹಕ್ಕುಗಳನ್ನು ‘ನೈಸರ್ಗಿಕ/ಜೈವಿಕ ಹೆರಿಗೆ’ಯ ಹಕ್ಕುಗಳಿಗಿಂತ ಭಿನ್ನವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಮಂಡ್ಯದ ವಿ.ಸಿ. ಫಾರ್ಮ್‌ನಲ್ಲಿ ಬಹು-ಉದ್ದೇಶಿತ ಒಳಾಂಗಣ ಕ್ರೀಡಾ ಸಂಕೀರ್ಣ
ಇದೀಗ ಸುದ್ದಿಯಲ್ಲಿದೆ:
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾರ್ಚ್ 14, 2026 ರಂದು ಕರ್ನಾಟಕದ ಮಂಡ್ಯದಲ್ಲಿರುವ ವಿ.ಸಿ. ಫಾರ್ಮ್‌ನಲ್ಲಿ ₹14-ಕೋಟಿ ವೆಚ್ಚದ ಬಹು-ಉದ್ದೇಶಿತ ಒಳಾಂಗಣ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಯೋಜನೆಯ ಪ್ರಮುಖ ವಿವರಗಳು:
ಸ್ಥಳ:-ವಿ.ಸಿ. ಫಾರ್ಮ್ನಲ್ಲಿರುವಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಆವರಣದಲ್ಲಿ ಈ ನೂತನ ಕ್ರೀಡಾ ಸೌಲಭ್ಯವನ್ನು ನಿರ್ಮಿಸಲಾಗುತ್ತಿದೆ.
ಹಣಕಾಸು ನೆರವು:- ತಳಮಟ್ಟದ ಕ್ರೀಡಾ ಮೂಲಸೌಕರ್ಯಗಳನ್ನು ಬಲಪಡಿಸುವ ಉದ್ದೇಶದಿಂದ, ಭಾರತ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಈ ಅನುದಾನವನ್ನು ಮಂಜೂರು ಮಾಡಲಾಗಿದೆ.
ಖೇಲೋ ಇಂಡಿಯಾ ಕಾರ್ಯಕ್ರಮದ ಬಗ್ಗೆ:
ಭಾರತ ಸರ್ಕಾರವು ಈ ಯೋಜನೆಯನ್ನು 2018 ರಲ್ಲಿ ಪ್ರಾರಂಭಿಸಿತು.
ಹಣಕಾಸು ನೆರವು:- ಇದು ಕೇಂದ್ರ ವಲಯದ ಯೋಜನೆಯಾಗಿದೆ.
ಪ್ರಮುಖ ಗುರಿ:- ತಳಮಟ್ಟದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದು.
ಅನುಷ್ಠಾನ ಸಚಿವಾಲಯ:- ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ.
ಯೋಜನೆಯ ರಚನೆ:-ಇದು ಹಿಂದಿನ ಯೋಜನೆಗಳಾದ ರಾಜೀವ್ ಗಾಂಧಿ ಖೇಲ್ ಅಭಿಯಾನ್ (RGKA), ನಗರ ಕ್ರೀಡಾ ಮೂಲಸೌಕರ್ಯ ಯೋಜನೆ (USIS), ಮತ್ತು ರಾಷ್ಟ್ರೀಯ ಕ್ರೀಡಾ ಪ್ರತಿಭಾ ಶೋಧ ಯೋಜನೆ (NSTSS) ಗಳನ್ನು ವಿಲೀನಗೊಳಿಸಿ ರಚಿಸಲಾದ ಸಮಗ್ರ ಯೋಜನೆಯಾಗಿದೆ.
ಪ್ರತಿಭೆ ಗುರುತಿಸುವಿಕೆ:- ಭರವಸೆಯ ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ ಸತತ 8 ವರ್ಷಗಳವರೆಗೆ ವಾರ್ಷಿಕ ₹5 ಲಕ್ಷ ಆರ್ಥಿಕ ನೆರವು ನೀಡಲಾಗುತ್ತದೆ.
ಅವಳಿ ಗುರಿಗಳು:-ಕ್ರೀಡೆಯಲ್ಲಿ ಸಾಮೂಹಿಕ ಭಾಗವಹಿಸುವಿಕೆಯನ್ನು ಸಾಧಿಸುವುದು ಮತ್ತು ಕ್ರೀಡಾ ಶ್ರೇಷ್ಠತೆಯನ್ನು ಉತ್ತೇಜಿಸುವುದು ಇದರ ಎರಡು ಪ್ರಮುಖ ಗುರಿಗಳಾಗಿವೆ.
ಕೇಂದ್ರ ಸಂಸ್ಕೃತಿ ಸಚಿವಾಲಯವು ಭಾರತದ ಅಗಾಧವಾದ ಹಸ್ತಪ್ರತಿ ಪರಂಪರೆಯನ್ನು ಗುರುತಿಸಲು ಮತ್ತು ಸಮಗ್ರವಾಗಿ ದಾಖಲಿಸಲು ಇದೇ ಮೊದಲ ಬಾರಿಗೆ ಮೂರು ತಿಂಗಳ ಅವಧಿಯ ‘ರಾಷ್ಟ್ರವ್ಯಾಪಿ ಸಮೀಕ್ಷೆ’ಯನ್ನು ಆರಂಭಿಸಿದೆ.
ಈ ಉಪಕ್ರಮವು 2025-26ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ‘ಜ್ಞಾನ ಭಾರತಂ ಅಭಿಯಾನ’ದ ಒಂದು ಪ್ರಮುಖ ಭಾಗವಾಗಿದೆ.
ಈ ಉಪಕ್ರಮದ ಮಹತ್ವ:
ಪರಂಪರೆಯ ಸಂರಕ್ಷಣೆ:-ಡಿಜಿಟಲೀಕರಣ ಮತ್ತು ದಾಖಲೀಕರಣವು ನಶಿಸುತ್ತಿರುವ ಹಾಗೂ ಶಿಥಿಲಾವಸ್ಥೆಯಲ್ಲಿರುವ ಸೂಕ್ಷ್ಮ ಹಸ್ತಪ್ರತಿಗಳನ್ನು ಸಂರಕ್ಷಿಸಲು ನೆರವಾಗುತ್ತದೆ.
ಸಂಶೋಧನೆಗೆ ಸುಲಭ ಲಭ್ಯತೆ:-ಕೇಂದ್ರೀಕೃತ ದತ್ತಾಂಶ ಸಂಗ್ರಹಣೆಯ ಸ್ಥಾಪನೆಯಿಂದಾಗಿ ಸಂಶೋಧಕರಿಗೆ ಹಾಗೂ ಸಾರ್ವಜನಿಕರಿಗೆ ಈ ಹಸ್ತಪ್ರತಿಗಳು ಅತ್ಯಂತ ಸುಲಭವಾಗಿ ಲಭ್ಯವಾಗಲಿವೆ.
ಬೌದ್ಧಿಕ ಚೌರ್ಯದ ತಡೆ:- ಕರಾರುವಕ್ಕಾದ ದಾಖಲೆಗಳು ಮತ್ತು ಮೆಟಾಡೇಟಾ ವ್ಯವಸ್ಥೆಯು ಹಸ್ತಪ್ರತಿಗಳ ಅಧಿಕೃತತೆಯನ್ನು ದೃಢೀಕರಿಸಲು ಹಾಗೂ ಅವುಗಳ ದುರ್ಬಳಕೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಸಾಂಸ್ಕೃತಿಕ ಪುನರುಜ್ಜೀವನ:- ಈ ಉಪಕ್ರಮದ ಮೂಲಕ ಭಾರತದ ಪ್ರಾಚೀನ ಜ್ಞಾನ ಮತ್ತು ಸಾಹಿತ್ಯ ಪರಂಪರೆಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಮಾನ್ಯತೆ ದೊರೆಯಲಿದೆ.
ಜ್ಞಾನ ಭಾರತಂ ಅಭಿಯಾನದ ಬಗ್ಗೆ:
ಪ್ರಮುಖ ಉದ್ದೇಶ:- ದೇಶದಾದ್ಯಂತ ಹಂಚಿಹೋಗಿರುವ ಐತಿಹಾಸಿಕ ಹಸ್ತಪ್ರತಿಗಳನ್ನು ಗುರುತಿಸಿ, ಸಂರಕ್ಷಿಸುವುದು.
ಗುರಿ:- ಶೈಕ್ಷಣಿಕ ಸಂಸ್ಥೆ, ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯಗಳಲ್ಲಿ ಲಭ್ಯವಿರುವ 1 ಕೋಟಿಗೂ ಅಧಿಕ ಹಸ್ತಪ್ರತಿಗಳ “ಸಮೀಕ್ಷೆ, ದಾಖಲೀಕರಣ ಮತ್ತು ಸಂರಕ್ಷಣೆ” ಕೈಗೊಳ್ಳುವುದು.
ಮಹತ್ವ:-ಐತಿಹಾಸಿಕ ಮೌಲ್ಯಗಳನ್ನು ಕಾಪಾಡುವುದು, ಪ್ರಾಚೀನ ಭಾರತೀಯ ಜ್ಞಾನ ಭಂಡಾರವನ್ನು ಜಗತ್ತಿಗೆ ಪರಿಚಯಿಸುವುದು ಹಾಗೂ ಹಸ್ತಪ್ರತಿಗಳ ದೀರ್ಘಕಾಲೀನ ಉಳಿವು ಮತ್ತು ಸಾರ್ವಕಾಲಿಕ ಲಭ್ಯತೆಯನ್ನು ಖಚಿತಪಡಿಸುವುದು..
ಹಸ್ತಪ್ರತಿಗಳು ಎಂದರೇನು?
ಕೈಯಿಂದ ಬರೆಯಲಾದ ಪ್ರಾಚೀನ ಕೃತಿಗಳು:-ಕಾಗದ, ಮರದ ತೊಗಟೆ, ತಾಳೆಗರಿಗಳ ಮೇಲೆ ಕೈಯಿಂದ ಬರೆಯಲಾದ, ಕನಿಷ್ಠ 75 ವರ್ಷಗಳಷ್ಟು ಹಳೆಯದಾದ ಹಾಗೂ ಗಮನಾರ್ಹ ವೈಜ್ಞಾನಿಕ, ಐತಿಹಾಸಿಕ ಅಥವಾ ಸೌಂದರ್ಯಾತ್ಮಕ ಮೌಲ್ಯವನ್ನು ಹೊಂದಿರುವ ಪ್ರಾಚೀನ ಕೃತಿಗಳನ್ನು ‘ಹಸ್ತಪ್ರತಿ’ ಎಂದು ಕರೆಯಲಾಗುತ್ತದೆ.
ಉದಾಹರಣೆ:-ಭೂರ್ಜ ಮರದ ತೊಗಟೆಯ ಮೇಲೆ ರಚಿಸಲಾದ, 3 ಅಥವಾ 4ನೇ ಶತಮಾನದ ‘ಬಕ್ಷಾಲಿ ಹಸ್ತಪ್ರತಿ’ಯು ಪ್ರಾಚೀನ ಭಾರತದ ಗಣಿತಶಾಸ್ತ್ರದ ಪಠ್ಯವಾಗಿದೆ. ಗಣಿತದಲ್ಲಿ ‘ಶೂನ್ಯದ’ (Zero) ಬಳಕೆಯನ್ನು ಉಲ್ಲೇಖಿಸಿರುವ ಅತ್ಯಂತ ಹಳೆಯ ಲಿಖಿತ ದಾಖಲೆ ಇದಾಗಿದೆ ಎಂದು ಪರಿಗಣಿಸಲಾಗಿದೆ.
ಬ್ರಾಹ್ಮಿ, ಕುಶಾನ್, ಗೌಡಿ, ಲೆಪ್ಚಾ ಮತ್ತು ಮೈಥಿಲಿ ಸೇರಿದಂತೆ ಸುಮಾರು 80 ಪ್ರಾಚೀನ ಲಿಪಿಗಳಲ್ಲಿ ರಚನೆಯಾಗಿರುವ ಅಂದಾಜು 1 ಕೋಟಿ ಹಸ್ತಪ್ರತಿಗಳನ್ನು ಭಾರತ ಹೊಂದಿದೆ.
ಭಾರತದಲ್ಲಿ ಹಸ್ತಪ್ರತಿ ಸಂರಕ್ಷಣೆಗಾಗಿರುವ ಇತರ ಉಪಕ್ರಮಗಳು:
ರಾಷ್ಟ್ರೀಯ ಹಸ್ತಪ್ರತಿ ಅಭಿಯಾನ (NMM):-ಹಸ್ತಪ್ರತಿಗಳನ್ನು ಪತ್ತೆಹಚ್ಚಲು ಮತ್ತು ಸಂರಕ್ಷಿಸಲು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವು 2003ರಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಿತು.
ಭಾರತೀಯ ರಾಷ್ಟ್ರೀಯ ಗ್ರಂಥಾಲಯ, ಕೋಲ್ಕತ್ತಾ:- ಈ ಗ್ರಂಥಾಲಯವು ಸುಮಾರು 3,600 ಅಪರೂಪದ ಹಾಗೂ ಐತಿಹಾಸಿಕವಾಗಿ ಅತ್ಯಂತ ಪ್ರಮುಖವಾದ ಹಸ್ತಪ್ರತಿಗಳ ಸಂಗ್ರಹವನ್ನು ಹೊಂದಿದೆ.
ಬಂಗಾಳದ ಏಷ್ಯಾಟಿಕ್ ಸೊಸೈಟಿ:-ಸರ್ ವಿಲಿಯಂ ಜೋನ್ಸ್ ಅವರು 1784ರ ಜನವರಿ15ರಂದು ಇದನ್ನು ಸ್ಥಾಪಿಸಿದರು. ಇದು ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣ ಕಾರ್ಯವನ್ನು ಕೈಗೊಳ್ಳುತ್ತದೆ.
ಅಭಿಲೇಖ್ ಪಟಲ್:- ಇದು ಹಸ್ತಪ್ರತಿಗಳು, ಪ್ರಾಚ್ಯ ದಾಖಲೆಗಳು ಮತ್ತು ಖಾಸಗಿ ಪತ್ರಗಳ ಅಪರೂಪದ ಸಂಗ್ರಹ ಸೇರಿದಂತೆ 1 ದಶಲಕ್ಷಕ್ಕೂ ಅಧಿಕ ಕಡತಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲು ‘ಭಾರತೀಯ ರಾಷ್ಟ್ರೀಯ ಅಭಿಲೇಖಾಗಾರ’ವು ರೂಪಿಸಿರುವ ಡಿಜಿಟಲ್ ವೇದಿಕೆಯಾಗಿದೆ.
ಜ್ಞಾನ-ಸೇತು:-ಹಸ್ತಪ್ರತಿಗಳ ಸಂರಕ್ಷಣೆ, ಲಿಪಿಗಳ ಅರ್ಥೈಸುವಿಕೆ, ಮರುಸ್ಥಾಪನೆ ಮತ್ತು ಸುಲಭ ಲಭ್ಯತೆಗಾಗಿ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನದ ಪರಿಹಾರಗಳನ್ನು ಕಂಡುಕೊಳ್ಳಲು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಾಗಿ ಇದನ್ನು ಪ್ರಾರಂಭಿಸಲಾಗಿದೆ.
ಪ್ರಾಚೀನ ವಸ್ತುಗಳು ಮತ್ತು ಕಲಾ ನಿಧಿಗಳ ಕಾಯ್ದೆ, 1972:- ಬೆಲೆಬಾಳುವ ಹಸ್ತಪ್ರತಿಗಳು ಸೇರಿದಂತೆ ಭಾರತದ ಸಾಂಸ್ಕೃತಿಕ ಪರಂಪರೆಯ ಅಕ್ರಮ ರಫ್ತು ಮತ್ತು ಕಳ್ಳಸಾಗಣೆಯನ್ನು ತಡೆಯುವ ಪ್ರಮುಖ ಗುರಿಯನ್ನು ಈ ಕಾಯ್ದೆ ಹೊಂದಿದೆ.
ಟ್ರಾಪಿಕಲ್ ಫಾರೆಸ್ಟ್ ಫಾರೆವರ್ ಫೆಸಿಲಿಟಿ (TFFF)
ಪರಿಸರ
ಇದೀಗ ಸುದ್ದಿಯಲ್ಲಿದೆ:
‘ಬೆಲೆಮ್’ನಲ್ಲಿಜರುಗಿದ “ಪಕ್ಷಗಳ ಸಮ್ಮೇಳನ- 30” (COP30) ಹವಾಮಾನ ಶೃಂಗಸಭೆಯು ಜಾಗತಿಕ ಅರಣ್ಯ ಸಂರಕ್ಷಣೆಯ ಕುರಿತು ಮಹತ್ವದ ಸಂದೇಶವನ್ನು ರವಾನಿಸಿದೆ. ಪರಿಣಾಮಕಾರಿ ಅರಣ್ಯ ಸಂರಕ್ಷಣೆಗೆ ಕೇವಲ ಆರ್ಥಿಕ ಬದ್ಧತೆಗಳಷ್ಟೇ ಸಾಲದು, ಬದಲಾಗಿ ‘ನಿರ್ಧಾರ ಕೈಗೊಳ್ಳುವ ಅಧಿಕಾರಗಳ’ ಮರುಹಂಚಿಕೆಯೂ ಅತ್ಯಗತ್ಯ ಎಂಬುದರತ್ತ ಜಾಗತಿಕ ಗಮನ ಸೆಳೆದಿದೆ.
ಈ ನಿಟ್ಟಿನಲ್ಲಿ, ಅರಣ್ಯ ಸಂರಕ್ಷಣಾ ಪ್ರಯತ್ನಗಳಿಗೆ ಹೊಸ ರೂಪು ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಬ್ರೆಜಿಲ್ ದೇಶವು ‘ಟ್ರಾಪಿಕಲ್ ಫಾರೆಸ್ಟ್ ಫಾರೆವರ್ ಫೆಸಿಲಿಟಿ’ (TFFF) ಎಂಬ ನೂತನ ಅರಣ್ಯ ಹಣಕಾಸು ವ್ಯವಸ್ಥೆಯನ್ನು ಪರಿಚಯಿಸಿದೆ.
ಟ್ರಾಪಿಕಲ್ ಫಾರೆಸ್ಟ್ ಫಾರೆವರ್ ಫೆಸಿಲಿಟಿ (TFFF)ಯ ಬಗ್ಗೆ:
‘ಕಾರ್ಯಕ್ಷಮತೆ-ಆಧಾರಿತ ಹಣಕಾಸು ಕಾರ್ಯವಿಧಾನವಾಗಿದೆ:- ಕೇವಲ ಅರಣ್ಯನಾಶದ ಪ್ರಮಾಣವನ್ನು ತಗ್ಗಿಸುವ ಗುರಿಗೆ ಸೀಮಿತವಾಗದೆ, ಅಸ್ತಿತ್ವದಲ್ಲಿರುವ ಅರಣ್ಯಗಳನ್ನು ಯಶಸ್ವಿಯಾಗಿ ಸಂರಕ್ಷಿಸಿ ಉಳಿಸುವ ರಾಷ್ಟ್ರಗಳಿಗೆ ಪ್ರೋತ್ಸಾಹ ನೀಡುವುದನ್ನು ಉದ್ದೇಶಿಸುತ್ತದೆ.
ದೀರ್ಘಕಾಲೀನ ಅರಣ್ಯ ಸಂರಕ್ಷಣೆಯನ್ನು ಬೆಂಬಲಿಸುವುದರ ಜೊತೆಗೆ, ಪಾಲುದಾರರಿಗೆ ಆರ್ಥಿಕ ಲಾಭವನ್ನು ತಂದುಕೊಡುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ.
ಈ ನಿಧಿಗೆ ನಾರ್ವೆ ದೇಶವು $ 3 ಶತಕೋಟಿ ಡಾಲರ್‌ಗಳ ಗಣನೀಯ ಕೊಡುಗೆ ನೀಡಿದೆ. ಇದರೊಂದಿಗೆ ಈ ನಿಧಿಯು $ 5.5 ಶತಕೋಟಿ ಡಾಲರ್‌ಗಳಿಗೂ ಅಧಿಕ ಆರಂಭಿಕ ಬಂಡವಾಳವನ್ನು ಈಗಾಗಲೇ ಕ್ರೋಡೀಕರಿಸಿದೆ.
ಬುಡಕಟ್ಟು ಕಲಾ ಉತ್ಸವ, 2026
ಕಲೆ ಮತ್ತು ಸಂಸ್ಕೃತಿ
ಇದೀಗ ಸುದ್ದಿಯಲ್ಲಿದೆ:
ಇತ್ತೀಚಿಗೆ, ನವದೆಹಲಿಯ ‘ಟ್ರಾವಂಕೂರ್ ಅರಮನೆ’ಯಲ್ಲಿ ಆಯೋಜಿಸಲಾಗಿದ್ದ ‘ಬುಡಕಟ್ಟು ಕಲಾ ಉತ್ಸವ 2026’ ಭಾರತದ ಶ್ರೀಮಂತ ಬುಡಕಟ್ಟು ಕಲಾ ಪರಂಪರೆಯನ್ನು ಜಗತ್ತಿಗೆ ಅನಾವರಣಗೊಳಿಸಿತು.
ಪ್ರದರ್ಶನಗೊಂಡ ಪ್ರಮುಖ ಬುಡಕಟ್ಟು ಕಲಾ ಪ್ರಕಾರಗಳು:
ವಾರ್ಲಿ ಚಿತ್ರಕಲೆ (Warli Painting):
ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡಿರುವ ಈ ಕಲೆಯನ್ನು ಪ್ರಮುಖವಾಗಿ ‘ವಾರ್ಲಿ’ ಬುಡಕಟ್ಟು ಜನಾಂಗದವರು ರೂಢಿಸಿಕೊಂಡಿದ್ದಾರೆ.
ಇದರ ಮೂಲವು ನವಶಿಲಾಯುಗಕ್ಕೆ (ಕ್ರಿ. ಪೂ. 2500–3000) ಸೇರಿದೆ ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ.
ಪ್ರಮುಖ ಲಕ್ಷಣಗಳು:-
ಮಣ್ಣಿನ ಗೋಡೆಗಳ ಮೇಲೆ ಅಕ್ಕಿ ಹಿಟ್ಟಿನಿಂದ ತಯಾರಿಸಿದ ಬಿಳಿ ಬಣ್ಣವನ್ನು ಬಳಸಿ ಚಿತ್ರಗಳನ್ನು ರಚಿಸಲಾಗುತ್ತದೆ.
ವೃತ್ತಗಳು, ತ್ರಿಕೋನಗಳು ಮತ್ತು ಚೌಕಗಳಂತಹ ಮೂಲಭೂತ ಜ್ಯಾಮಿತೀಯ ಆಕಾರಗಳ ಮೂಲಕ ಮಾನವ ಹಾಗೂ ಪ್ರಕೃತಿಯ ನಡುವಿನ ಒಡನಾಟವನ್ನು ಬಿಂಬಿಸಲಾಗುತ್ತದೆ.
ಕೃಷಿ, ಧಾರ್ಮಿಕ ಆಚರಣೆಗಳು, ಬೇಟೆ ಮತ್ತು ‘ತರ್ಪಾ’ ನೃತ್ಯವು ಈ ಚಿತ್ರಕಲೆಯ ಪ್ರಮುಖ ಕಥಾವಸ್ತುಗಳಾಗಿವೆ.
ರಾಭಾ ಮತ್ತು ತಮಾಂಗ್ ಮುಖಗವಸುಗಳು/ ಮುಖವಾಡಗಳು:
ಅಸ್ಸಾಂ ಮತ್ತು ಉತ್ತರ ಬಂಗಾಳದ ‘ರಾಭಾ’ ಬುಡಕಟ್ಟು ಜನಾಂಗದಲ್ಲಿ ಮುಖಗವಸುಗಳ ತಯಾರಿಕೆಯು ಅತ್ಯಂತ ಪ್ರಮುಖ ಕಲಾ ಪ್ರಕಾರವಾಗಿದೆ.
ಪ್ರಮುಖ ಲಕ್ಷಣಗಳು:-
ಮರ, ಬಿದಿರು, ಸೋರೆಕಾಯಿ ಅಥವಾ ಜೇಡಿಮಣ್ಣನ್ನು ಬಳಸಿ ತಯಾರಿಸುವ ಈ ಮುಖಗವಸುಗಳನ್ನು ಆಕರ್ಷಕ ಬಣ್ಣಗಳಿಂದ ಸಿಂಗರಿಸಲಾಗುತ್ತದೆ.
ದೇವರು, ದುಷ್ಟಶಕ್ತಿಗಳು, ಪ್ರಾಣಿಗಳು ಹಾಗೂ ಪೌರಾಣಿಕ ಜೀವಿಗಳನ್ನು ಪ್ರತಿನಿಧಿಸುವ ಈ ಮುಖಗವಸುಗಳನ್ನು ಹೆಚ್ಚಾಗಿ ಧಾರ್ಮಿಕ ನೃತ್ಯಗಳು ಮತ್ತು ಜಾನಪದ ನಾಟಕಗಳಲ್ಲಿ ಬಳಸಲಾಗುತ್ತದೆ.
ಗೋಂಡ ಕಲೆ:
ಗೋಂಡ ಚಿತ್ರಕಲೆಯು ಮಧ್ಯ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಮಧ್ಯಪ್ರದೇಶದಲ್ಲಿ ಉಗಮಿಸಿದೆ.
ಇದು ‘ಭೌಗೋಳಿಕ ಸೂಚ್ಯಂಕ’’ (GI ಟ್ಯಾಗ್) ಮಾನ್ಯತೆಯನ್ನು ಪಡೆದಿದ್ದು, ಕಾನೂನಾತ್ಮಕ ಸಂರಕ್ಷಣೆ ಹಾಗೂ ಜಾಗತಿಕ ಮನ್ನಣೆಯನ್ನು ಗಳಿಸಿದೆ.
ಪ್ರಮುಖ ಲಕ್ಷಣಗಳು:-
ಆಕರ್ಷಕ ಹಾಗೂ ಸಂಕೀರ್ಣ ವಿನ್ಯಾಸಗಳನ್ನು ರಚಿಸಲು ಚುಕ್ಕೆಗಳು ಮತ್ತು ರೇಖೆಗಳನ್ನು ಬಳಸುವುದು ಇದರ ವಿಶಿಷ್ಟತೆಯಾಗಿದೆ.
ಜಾನಪದ ಕಥೆಗಳು, ಪ್ರಾಣಿಗಳು, ಅರಣ್ಯ ಹಾಗೂ ಪರಿಸರ ವ್ಯವಸ್ಥೆಯನ್ನು ಆಧರಿಸಿದ ಕಥಾವಸ್ತುಗಳು ಈ ಕಲೆಯಲ್ಲಿ ಹಾಸುಹೊಕ್ಕಾಗಿವೆ.
ಭಿಲ್ ಚಿತ್ರಕಲೆ:
ಇದು ಭಾರತದ ಅತ್ಯಂತ ಪ್ರಾಚೀನ ಬುಡಕಟ್ಟು ಕಲಾ ಸಂಪ್ರದಾಯಗಳಲ್ಲಿ ಒಂದಾಗಿದೆ.
ಭಾರತದ ಅತಿದೊಡ್ಡ ಮೂಲನಿವಾಸಿ ಬುಡಕಟ್ಟು ಗುಂಪುಗಳಲ್ಲಿ ಒಂದಾದ ‘ಭಿಲ್’ ಬುಡಕಟ್ಟು ಜನಾಂಗವು ಈ ಕಲೆಯನ್ನು ರೂಢಿಸಿಕೊಂಡಿದೆ.
ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ ಮತ್ತು ರಾಜಸ್ಥಾನದಲ್ಲಿ ಇದನ್ನು ಪ್ರಮುಖವಾಗಿ ಕಾಣಬಹುದು.
ಪ್ರಮುಖ ಲಕ್ಷಣಗಳು:-
ಬೀಜಗಳು ಮತ್ತು ಪ್ರಕೃತಿಯ ಲಯವನ್ನು ಸಂಕೇತಿಸುವ ಸಾವಿರಾರು ಬಣ್ಣ-ಬಣ್ಣದ ಚುಕ್ಕೆಗಳನ್ನು ಈ ಚಿತ್ರಕಲೆಯಲ್ಲಿ ಬಳಸಲಾಗುತ್ತದೆ.
ದೇವತೆಗಳು, ಪ್ರಾಣಿಗಳು, ದಟ್ಟ ಅರಣ್ಯಗಳು ಮತ್ತು ದೈನಂದಿನ ಜೀವನದ ಚಿತ್ರಣವು ಈ ಕಲೆಯ ಕಥಾವಸ್ತುಗಳಾಗಿವೆ.
ಎನ್.ಎಂ.ಡಿ.ಸಿ (NMDC) ಯಿಂದ ಕಬ್ಬಿಣದ ಅದಿರು ಉತ್ಪಾದನೆ
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
‘ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು’ (NMDC Limited) ಒಂದೇ ಆರ್ಥಿಕ ವರ್ಷದಲ್ಲಿ (2025-26) 50 ಮಿಲಿಯನ್ ಟನ್ (MT) ಕಬ್ಬಿಣದ ಅದಿರನ್ನು ಉತ್ಪಾದಿಸಿದೆ. ಈ ಮೂಲಕ, ಇಂತಹ ಬೃಹತ್ ಸಾಧನೆ ಮಾಡಿದ ಭಾರತದ ‘ಮೊದಲ ಗಣಿಗಾರಿಕಾ ಕಂಪನಿ’ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಬ್ಬಿಣದ ಅದಿರಿನ ಬಗ್ಗೆ:
ಲೋಹೀಯ ಕಬ್ಬಿಣವನ್ನು ಹೊರತೆಗೆಯಲು ಬಳಸುವ ಶಿಲೆಗಳು ಮತ್ತು ಖನಿಜಗಳನ್ನು ‘ಕಬ್ಬಿಣದ ಅದಿರು’ ಎಂದು ಕರೆಯಲಾಗುತ್ತದೆ.
ಅದಿರಿನಲ್ಲಿರುವ ಕಬ್ಬಿಣದ ಅಂಶ ಹಾಗೂ ಗುಣಮಟ್ಟದ ಆಧಾರದ ಮೇಲೆ ಇದನ್ನು ನಾಲ್ಕು ಮುಖ್ಯ ಪ್ರಕಾರಗಳಾಗಿ ವಿಂಗಡಿಸಲಾಗಿದೆ:
ಮ್ಯಾಗ್ನೆಟೈಟ್:- ಇದು ಅತ್ಯುತ್ತಮ ಗುಣಮಟ್ಟದ ಅದಿರಾಗಿದ್ದು, ಶೇ 70 ಕ್ಕಿಂತ ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿರುತ್ತದೆ.
ಹೆಮಟೈಟ್:- ಇದು ಅತ್ಯಂತ ಪ್ರಮುಖ ಕೈಗಾರಿಕಾ ಅದಿರಾಗಿದ್ದು, ಶೇ 60 ರಿಂದ 70 ರಷ್ಟು ಕಬ್ಬಿಣದ ಅಂಶವನ್ನು ಹೊಂದಿದೆ.
ಲಿಮೋನೈಟ್:- ಇದು ಕಡಿಮೆ ಗುಣಮಟ್ಟದ ಅದಿರಾಗಿದ್ದು, ಶೇ 40 ರಿಂದ 60 ರಷ್ಟು ಕಬ್ಬಿಣದ ಅಂಶವನ್ನು ಹೊಂದಿರುತ್ತದೆ.
ಸಿಡೆರೈಟ್:-ಇದು ಅತ್ಯಂತ ಕಳಪೆ ಗುಣಮಟ್ಟದ ಅದಿರಾಗಿದ್ದು, ಶೇ 40 ಕ್ಕಿಂತ ಕಡಿಮೆ ಕಬ್ಬಿಣದ ಅಂಶವನ್ನು ಹೊಂದಿರುತ್ತದೆ.
ಆಸ್ಟ್ರೇಲಿಯಾ, ಬ್ರೆಜಿಲ್ ಮತ್ತು ಚೀನಾ ರಾಷ್ಟ್ರಗಳ ನಂತರ, ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ 4ನೇ ಅತಿದೊಡ್ಡ ರಾಷ್ಟ್ರವಾಗಿದೆ.
ಭಾರತದಲ್ಲಿ ಉತ್ಪಾದನೆಯ ದೃಷ್ಟಿಯಿಂದ ‘ಒಡಿಶಾ’ ರಾಜ್ಯವು ಮುಂಚೂಣಿಯಲ್ಲಿದ್ದು, ‘ಛತ್ತೀಸ್‌ಗಢ’ ಮತ್ತು ‘ಕರ್ನಾಟಕ’ ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ.
ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (NMDC) ಬಗ್ಗೆ:
ಭಾರತದ ಕಬ್ಬಿಣದ ಅದಿರು ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ 1958 ರಲ್ಲಿ ಈ ನಿಗಮವನ್ನು ಸ್ಥಾಪಿಸಲಾಯಿತು. ಇದು ಭಾರತದ ಅತಿದೊಡ್ಡ ಕಬ್ಬಿಣದ ಅದಿರು ಉತ್ಪಾದಕ ಸಂಸ್ಥೆಯಾಗಿದೆ.
ಇದು ಕೇಂದ್ರ ಉಕ್ಕು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಡುವ ‘ನವರತ್ನ’ ಸ್ಥಾನಮಾನ ಹೊಂದಿರುವ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದೆ (CPSE).
2030ರ ವೇಳೆಗೆ 300 ದಶಲಕ್ಷ ಟನ್ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ತಲುಪುವ ಭಾರತದ ಗುರಿಯನ್ನು ಸಾಕಾರಗೊಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತಿದೆ.
ಗೈನಾಂಡ್ರೊಮಾರ್ಫಿ (Gynandromorphy)
ಪರಿಸರ
ಇದೀಗ ಸುದ್ದಿಯಲ್ಲಿದೆ:
ಪಶ್ಚಿಮ ಘಟ್ಟಗಳಲ್ಲಿರುವ ಕೇರಳದ ‘ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನ’ದಲ್ಲಿ ಕಂಡುಬರುವ ‘ವೆಲಾ ಕಾರ್ಲಿ’ ಎಂಬ ಸಿಹಿನೀರಿನ ಏಡಿ ಪ್ರಭೇದದಲ್ಲಿ ಅತ್ಯಂತ ಅಪರೂಪದ ‘ಗೈನಾಂಡ್ರೊಮಾರ್ಫಿ’ ಪ್ರಕರಣವು ಇತ್ತೀಚಿಗೆ ವರದಿಯಾಗಿದೆ.
ಗೈನಾಂಡ್ರೊಮಾರ್ಫಿ ಎಂದರೆ ಏನು?
‘ಗೈನಾಂಡ್ರೊಮಾರ್ಫಿ’ ಎಂದರೆ ಒಂದೇ ಜೀವಿಯಲ್ಲಿ ಗಂಡು ಮತ್ತು ಹೆಣ್ಣಿನ ಲಕ್ಷಣಗಳೆರಡೂ ಏಕಕಾಲದಲ್ಲಿ ಅಸ್ತಿತ್ವದಲ್ಲಿರುವ (ಕಂಡುಬರುವ) ಒಂದು ಅತ್ಯಂತ ಅಪರೂಪದ ಜೈವಿಕ ಸ್ಥಿತಿಯಾಗಿದೆ.
ಕಾರಣಗಳು:- ಈ ಅಪರೂಪದ ಸ್ಥಿತಿಯು ಪ್ರಮುಖವಾಗಿ ಜೀವಕೋಶ ವಿಭಜನೆಯ ಪ್ರಕ್ರಿಯೆಯಲ್ಲಿನ (ಮೈಟೋಸಿಸ್ ಅಥವಾ ಮಿಯೋಸಿಸ್) ದೋಷಗಳಿಂದಾಗಿ ಅಥವಾ ಭ್ರೂಣದ ಆರಂಭಿಕ ಬೆಳವಣಿಗೆಯ ಹಂತದಲ್ಲಿ ಉಂಟಾಗುವ ವರ್ಣತಂತುಗಳ ವೈಪರೀತ್ಯಗಳಿಂದಾಗಿ ಸಂಭವಿಸುತ್ತದೆ.
ಗೈನಾಂಡ್ರೊಮಾರ್ಫಿ ಸ್ಥಿತಿಯು ಈ ಕೆಳಗಿನ ಜೈವಿಕ ಸ್ಥಿತಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ:
ಹರ್ಮಾಫ್ರೋಡಿಟಿಸಂ (Hermaphroditism):- ಹರ್ಮಾಫ್ರೋಡಿಟಿಸಂ ಎಂಬ ಸ್ಥಿತಿಯಲ್ಲಿ ಜೀವಿಯು ಗಂಡು ಮತ್ತು ಹೆಣ್ಣು ಎರಡೂ ಲಿಂಗಗಳ ಕ್ರಿಯಾತ್ಮಕ ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿರುತ್ತದೆ.
ಅಂತರ್ಲಿಂಗಿ (Intersex):- ಇಂಟರ್‌ಸೆಕ್ಸ್ ಎಂಬ ಸ್ಥಿತಿಯಲ್ಲಿ ಜೀವಿಯ ಲೈಂಗಿಕ ಗುಣಲಕ್ಷಣಗಳು ಮಿಶ್ರವಾಗಿರುತ್ತವೆಯೇ ಹೊರತು, ಅದರಲ್ಲಿ ಗಂಡು ಮತ್ತು ಹೆಣ್ಣಿನ ಲಕ್ಷಣಗಳ ಸ್ಪಷ್ಟವಾದ ಹಾಗೂ ಪ್ರತ್ಯೇಕವಾದ ಭಾಗಗಳು ಕಂಡುಬರುವುದಿಲ್ಲ.
ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದ ಬಗ್ಗೆ:
ಈ ರಾಷ್ಟ್ರೀಯ ಉದ್ಯಾನವು ಕೇರಳ ರಾಜ್ಯದ ‘ನೀಲಗಿರಿ ಬೆಟ್ಟ’ಗಳ ಸಾಲಿನಲ್ಲಿ ನೆಲೆಗೊಂಡಿದೆ.
ಸೈಲೆಂಟ್ ವ್ಯಾಲಿಯನ್ನು 1984 ರಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು ಹಾಗೂ 1985 ರಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.
ನದಿಗಳು:-ಕಾವೇರಿ ನದಿಯ ಉಪನದಿಯಾದ ‘ಭವಾನಿ ನದಿ’ ಮತ್ತು ಭರತಪುಳ ನದಿಯ ಉಪನದಿಯಾದ ‘ಕುಂತಿಪುಳ ನದಿ’ಯು ಈ ಸೈಲೆಂಟ್ ವ್ಯಾಲಿಯ ಸಮೀಪದಲ್ಲಿಯೇ ಉಗಮಿಸುತ್ತವೆ.
ಬುಡಕಟ್ಟು ಜನಾಂಗ:- ಈ ಉದ್ಯಾನವನದ ಗಡಿಯೊಳಗೆ ವಾಸಿಸುವ ಪ್ರಮುಖ ಸ್ಥಳೀಯ ಬುಡಕಟ್ಟು ಗುಂಪುಗಳಲ್ಲಿ ಇರುಳರು, ಕುರುಂಬರು, ಮುಡುಗರು ಮತ್ತು ಕಾಟ್ಟುನಾಯ್ಕರು ಸೇರಿದ್ದಾರೆ.
ಕರ್ನಾಟಕ ಸರ್ಕಾರದ ಎಲಿವೇಟ್ (ELEVATE) ಅನುದಾನಿತ ಕಾರ್ಯಕ್ರಮದಲ್ಲಿ ಮಹಿಳಾ-ನೇತೃತ್ವದ ನವೋದ್ಯಮಗಳ ಪಾಲು ಸತತ ಏರಿಕೆ ಕಂಡಿದೆ. ಇದು 2017ರಲ್ಲಿದ್ದ 16.96% ರಿಂದ 2025ರಲ್ಲಿ ಸರಿಸುಮಾರು 43% ಕ್ಕೆ ಏರಿಕೆಯಾಗಿದೆ.
ಎಲಿವೇಟ್ ಕಾರ್ಯಕ್ರಮದ ಬಗ್ಗೆ:
ಇದು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯಪ್ರಮುಖ ಉಪಕ್ರಮವಾಗಿದೆ.
ನವೀನ ಹಾಗೂ ಆರಂಭಿಕ ಹಂತದ ನವೋದ್ಯಮಗಳನ್ನು ಗುರುತಿಸಲು ಮತ್ತು ಅವುಗಳನ್ನು ಪೋಷಿಸಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
ಈ ಕಾರ್ಯಕ್ರಮವು ಅನುದಾನ-ಸಹಾಯ ನಿಧಿ, ಸೂಕ್ತ ಮಾರ್ಗದರ್ಶನ ಮತ್ತು ಉದ್ಯಮ ಬಂಡವಾಳ ಲಭ್ಯತೆ ಸೇರಿದಂತೆ ಸಮಗ್ರ ಬೆಂಬಲವನ್ನು ಒದಗಿಸುತ್ತದೆ.
ಪ್ರಮುಖ ನಿಧಿ ಮತ್ತು ಬೆಂಬಲ ವಿಭಾಗಗಳು:
ಎಲಿವೇಟ್ (ಸಾಮಾನ್ಯ):- ನವೋದ್ಯಮಗಳಿಗೆ ತಮ್ಮ ಮಾದರಿಗಳನ್ನು ಅಭಿವೃದ್ಧಿಪಡಿಸಲು, ಮಾರುಕಟ್ಟೆ ಪ್ರಯೋಗಗಳನ್ನು ನಡೆಸಲು ಮತ್ತು ತಮ್ಮ ವ್ಯವಹಾರವನ್ನು ವಿಸ್ತರಿಸಲು ₹50 ಲಕ್ಷದವರೆಗಿನ ಒಂದು ಬಾರಿಯ ಸಹಾಯ ಧನವನ್ನು ನೀಡುತ್ತದೆ.
ಎಲಿವೇಟ್ ಉನ್ನತಿ:- ಸಾಮಾಜಿಕ ಒಳಗೊಳ್ಳುವಿಕೆಯನ್ನು ಸುಧಾರಿಸುವ ಉದ್ದೇಶದಿಂದ, ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಉದ್ಯಮಿಗಳ ನೇತೃತ್ವದ ನವೋದ್ಯಮಗಳನ್ನು ಗುರಿಯಾಗಿಸಿಕೊಂಡು ಇದು ₹50 ಲಕ್ಷದವರೆಗಿನ ಆರಂಭಿಕ ನಿಧಿಯನ್ನು ಒದಗಿಸುತ್ತದೆ.
ಎಲಿವೇಟ್ NxT (ಡೀಪ್‌ಟೆಕ್):- ಇದು LEAP ಚೌಕಟ್ಟಿನ ಅಡಿಯಲ್ಲಿ ಬರುವ ಪ್ರಮುಖ ಕಾರ್ಯಕ್ರಮವಾಗಿದೆ. ಇದು ಹೆಚ್ಚಿನ ಸಾಮರ್ಥ್ಯವಿರುವ ಡೀಪ್‌ಟೆಕ್ ಮತ್ತು ಕೃತಕ ಬುದ್ಧಿಮತ್ತೆ (AI) ನವೋದ್ಯಮಗಳನ್ನು ವಿಸ್ತರಿಸುವತ್ತ ಗಮನಹರಿಸುತ್ತದೆ.
ಎಲಿವೇಟ್ ವುಮೆನ್:- ಇದು ಮಹಿಳಾ-ನೇತೃತ್ವದ ನವೋದ್ಯಮಗಳನ್ನು ಉತ್ತೇಜಿಸಲು ಮೀಸಲಾಗಿರುವ ವಿಶೇಷ ಕಾರ್ಯಕ್ರಮವಾಗಿದೆ.
ಎಲಿವೇಟ್ (ಮೈನಾರಿಟಿ):-ಅಲ್ಪಸಂಖ್ಯಾತ ಸಮುದಾಯಗಳ ಉದ್ಯಮಿಗಳನ್ನು ಬೆಂಬಲಿಸಲು ಮತ್ತು ಅವರಿಗೆ ಅಗತ್ಯ ನಿಧಿ ಒದಗಿಸಲು ಮೀಸಲಾದ ವಿಶೇಷ ವಿಭಾಗವಾಗಿದೆ.
ಭಾರತದ ವಸತಿ ನಿರ್ಮಾಣ ವಲಯದಲ್ಲಿ “ಕೈಗೆಟುಕುವ ಹಾಗೂ ಮಧ್ಯಮ ಆದಾಯ ವರ್ಗದ ವಸತಿ ಗೃಹಗಳಿಗೆ ಹೂಡಿಕೆ ಮಾಡುವ ವಿಶೇಷ ನಿಧಿ” ವ್ಯವಸ್ಥೆ (SWAMIH) ಒಂದು ಕ್ರಾಂತಿಕಾರಿ ಹಾಗೂ ಪ್ರಮುಖ ನೀತಿಯಾಗಿ ಹೊರಹೊಮ್ಮಿದೆ.
ಸ್ವಾಮಿಹ್ (SWAMIH) ನಿಧಿಯ ಬಗ್ಗೆ:
SWAMIH ಸಂಪೂರ್ಣ ರೂಪ:-ಸ್ಪೆಷಲ್ ವಿಂಡೋ ಫಾರ್ ಅಫರ್ಡಬಲ್ ಅಂಡ್ ಮಿಡ್ – ಇನ್ಕಮ್ ಹೌಸಿಂಗ್ ಇನ್ವೆಸ್ಟ್ಮೆಂಟ್ ಫಂಡ್ (ಕೈಗೆಟುಕುವ ಹಾಗೂ ಮಧ್ಯಮ ಆದಾಯ ವರ್ಗದ ವಸತಿ ಗೃಹಗಳಿಗೆ ಹೂಡಿಕೆ ಮಾಡುವ ವಿಶೇಷ ನಿಧಿ).
ಭಾರತ ಸರ್ಕಾರವು 2019 ರಲ್ಲಿ ಈ ಮಹತ್ವಾಕಾಂಕ್ಷಿ ಹೂಡಿಕೆ ನಿಧಿಯನ್ನು ಸ್ಥಾಪಿಸಿತು.
ಪ್ರಮುಖ ಉದ್ದೇಶ:-ಹಣಕಾಸಿನ ಮುಗ್ಗಟ್ಟಿನಿಂದಾಗಿ ನನೆಗುದಿಗೆ ಬಿದ್ದಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು, ‘ಅಂತಿಮ ಹಂತದ ಹಣಕಾಸು ನೆರವು’ ಒದಗಿಸುವುದು.
ಭಾರತ ಸರ್ಕಾರದ ಹಣಕಾಸು ಸಚಿವಾಲಯವು ಈ ನಿಧಿಯ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ. ಸ್ಟೇಟ್ ಬ್ಯಾಂಕ್ ಸಮೂಹದ ಅಂಗಸಂಸ್ಥೆಯಾಗಿರುವ ‘ಎಸ್‌ಬಿಐ ಕ್ಯಾಪ್ ವೆಂಚರ್ಸ್ ಲಿಮಿಟೆಡ್’ ಇದರ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ.
ಫಲಿತಾಂಶ ಮತ್ತು ಪ್ರಭಾವ:- ಈ ನಿಧಿಯ ಆರ್ಥಿಕ ನೆರವಿನಿಂದಾಗಿ ಇದುವರೆಗೆ ಸುಮಾರು 58,596 ಮನೆಗಳ ನಿರ್ಮಾಣ ಕಾರ್ಯವು ಯಶಸ್ವಿಯಾಗಿ ಪೂರ್ಣಗೊಂಡಿದೆ. ಭವಿಷ್ಯದಲ್ಲಿ 1 ಲಕ್ಷಕ್ಕೂ ಅಧಿಕ ಮನೆಗಳು ನಿರ್ಮಾಣಗೊಳ್ಳುವ ನಿರೀಕ್ಷೆಯಿದ್ದು, ಇದರಿಂದ 2.38 ಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಅನುಕೂಲವಾಗಲಿದೆ.
ರಾಷ್ಟ್ರೀಯ ಚಂಬಲ್ ಅಭಯಾರಣ್ಯ
ಪರಿಸರ
ಇದೀಗ ಸುದ್ದಿಯಲ್ಲಿದೆ:
ರಾಷ್ಟ್ರೀಯ ಚಂಬಲ್ ಅಭಯಾರಣ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯು, ಅಳಿವಿನಂಚಿನಲ್ಲಿರುವ ‘ಘರಿಯಾಲ್’ ಮೊಸಳೆಗಳ ನೈಸರ್ಗಿಕ ಆವಾಸಸ್ಥಾನಕ್ಕೆ ತೀವ್ರ ಧಕ್ಕೆ ತರುತ್ತಿದೆ.
ಈ ಕಳವಳಕಾರಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತದ ಸರ್ವೋಚ್ಚ ನ್ಯಾಯಾಲಯವು, ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ‘ಸ್ವಯಂಪ್ರೇರಿತ ವಿಚಾರಣೆ’ಯನ್ನು ಕೈಗೆತ್ತಿಕೊಂಡಿದೆ.
ರಾಷ್ಟ್ರೀಯ ಚಂಬಲ್ ಅಭಯಾರಣ್ಯದ ಬಗ್ಗೆ:
ಸ್ಥಳ:- ಈ ಅಭಯಾರಣ್ಯವು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಹರಿಯುವ ಚಂಬಲ್ ನದಿಪಾತ್ರದಲ್ಲಿ ಸುಮಾರು 1800 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಸ್ತಾರವಾಗಿ ಹರಡಿಕೊಂಡಿದೆ.
ಇದು ಭಾರತದ ಪ್ರಥಮ ಹಾಗೂ ಏಕೈಕ ‘ತ್ರಿ-ರಾಜ್ಯ ನದಿ ಸಂರಕ್ಷಿತ ಪ್ರದೇಶ’ ಎಂಬ ವಿಶಿಷ್ಟ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದು ತೀವ್ರವಾಗಿ ಅಳಿವಿನಂಚಿನಲ್ಲಿರುವ ‘ಘರಿಯಾಲ್’ ಮೊಸಳೆಗಳಿಗೆ ಅತ್ಯಂತ ಪ್ರಮುಖ ನೈಸರ್ಗಿಕ ಆವಾಸಸ್ಥಾನವನ್ನು ಒದಗಿಸಿದೆ.
ಜೀವವೈವಿಧ್ಯ:-ಘರಿಯಾಲ್‌ಗಳ ಹೊರತಾಗಿ, ಈ ಅಭಯಾರಣ್ಯವು ಜಲಾವೃತ ಹುಲ್ಲುಗಾವಲು ಮೊಸಳೆಗಳು (ಮುಗ್ಗೆರ್ಸ್), ಕೆಂಪು ಕಿರೀಟದ ಆಮೆಗಳು , ನಯವಾದ ಚರ್ಮದ ನೀರುನಾಯಿಗಳು ಮತ್ತು ಗಂಗಾ ನದಿ ಡಾಲ್ಫಿನ್‌ಗಳಿಗೆ ಸುರಕ್ಷಿತ ಆಶ್ರಯ ತಾಣವಾಗಿದೆ. ಇದರ ಜೊತೆಗೆ, ಭಾರತೀಯ ಚೀಲಹಕ್ಕಿ (ಇಂಡಿಯನ್ ಸ್ಕಿಮ್ಮರ್), ಕಪ್ಪು ಹೊಟ್ಟೆಯ ತುರಾಯಿ ಹಕ್ಕಿ, ಸಾರಸ್ ಕೊಕ್ಕರೆ ಮತ್ತು ಕಪ್ಪು ಕುತ್ತಿಗೆಯ ಕೊಕ್ಕರೆಯಂತಹ ಅತ್ಯಂತ ಅಪರೂಪದ ಪಕ್ಷಿಸಂಕುಲಗಳು ಇಲ್ಲಿ ಹೇರಳವಾಗಿ ಕಂಡುಬರುತ್ತವೆ.
ಘರಿಯಾಲ್‌ಗಳ ಬಗ್ಗೆ:
ಗುಣಲಕ್ಷಣಗಳು:- ಈ ಜೀವಿಗಳಲ್ಲಿ ‘ಲೈಂಗಿಕ ದ್ವಿರೂಪತೆ’ ಎದ್ದು ಕಾಣುತ್ತದೆ. ಅಂದರೆ, ಗಂಡು ಮತ್ತು ಹೆಣ್ಣು ಘರಿಯಾಲ್‌ಗಳು ತಮ್ಮ ದೈಹಿಕ ಗಾತ್ರ ಹಾಗೂ ಬಾಹ್ಯ ನೋಟದಲ್ಲಿ ಗಮನಾರ್ಹವಾದ ವ್ಯತ್ಯಾಸಗಳನ್ನು ಹೊಂದಿರುತ್ತವೆ.
ಸಾಮಾನ್ಯ ಮೊಸಳೆಗಳಿಗೆ ಹೋಲಿಸಿದರೆ ಇವುಗಳ ಸ್ವಭಾವ ಭಿನ್ನವಾಗಿದ್ದು, ಘರಿಯಾಲ್‌ಗಳು ಕೇವಲ ಮೀನುಗಳನ್ನು ಮಾತ್ರ ತಮ್ಮ ಪ್ರಧಾನ ಆಹಾರವಾಗಿ ಸೇವಿಸುತ್ತವೆ. ಇವು ಮನುಷ್ಯರ ಮೇಲೆ ದಾಳಿ ಮಾಡುವ ನರಭಕ್ಷಕ ಪ್ರಾಣಿಗಳಲ್ಲ ಎಂಬುದು ವಿಶೇಷವಾಗಿದೆ.
ಆವಾಸಸ್ಥಾನ:-ಇವು ಸಂಪೂರ್ಣವಾಗಿ ನದಿಪಾತ್ರದಲ್ಲಿ ಮಾತ್ರ ವಾಸಿಸುವ ಜೀವಿಗಳಾಗಿವೆ. ಇವುಗಳ ದೈನಂದಿನ ಬದುಕು ಮತ್ತು ಸಂತಾನೋತ್ಪತ್ತಿಗಾಗಿ ಆಳವಾದ, ಶುದ್ಧವಾದ ಹಾಗೂ ವೇಗವಾಗಿ ಹರಿಯುವ ನದಿ ನೀರು ಮತ್ತು ಕಡಿದಾದ ಮರಳು ದಂಡೆಗಳು ಅತ್ಯಗತ್ಯವಾಗಿವೆ.
ಚಂಬಲ್, ಗಿರ್ವಾ, ಕೆನ್, ಯಮುನಾ, ಬ್ರಹ್ಮಪುತ್ರ, ಘಾಘ್ರ ಮತ್ತು ಭಾಗೀರಥಿ – ಹೂಗ್ಲಿ ನದಿಗಳ ಪಾತ್ರದಲ್ಲಿ ಪ್ರಮುಖವಾಗಿ ಕಂಡುಬರುತ್ತವೆ.
ಸಂರಕ್ಷಣಾ ಸ್ಥಾನಮಾನ:-
IUCN ಕೆಂಪು ಪಟ್ಟಿಯಲ್ಲಿ:-ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇದ (CR)
‘ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972’ ರ ಅಡಿಯಲ್ಲಿ:-‘ಅನುಸೂಚಿ-1’
ಪ್ರಾಜೆಕ್ಟ್ ಕ್ರೊಕೊಡೈಲ್ (1975):-ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಮತ್ತು ‘ಆಹಾರ ಹಾಗೂ ಕೃಷಿ ಸಂಸ್ಥೆ’ಯ (FAO) ಜಂಟಿ ಸಹಯೋಗದೊಂದಿಗೆ, ಮೊಸಳೆಗಳ ಕೃತಕ ಸಂತಾನೋತ್ಪತ್ತಿ ಮತ್ತು ಸಂರಕ್ಷಣೆಗಾಗಿ ಈ ಮಹತ್ವದ ಯೋಜನೆಯನ್ನು ಪ್ರಾರಂಭಿಸಲಾಯಿತು.
ಅಂತರರಾಷ್ಟ್ರೀಯ ಸೌರ ಒಕ್ಕೂಟ
ಪರಿಸರ
ಇದೀಗ ಸುದ್ದಿಯಲ್ಲಿದೆ:
ಸೌರಶಕ್ತಿಯ ಬಳಕೆಯತ್ತ ಹೆಚ್ಚುತ್ತಿರುವ ಜಾಗತಿಕ ಒಲವು ಹಾಗೂ ‘ಶುದ್ಧ ಇಂಧನ ಪರಿವರ್ತನೆ’ಯ ಪ್ರಕ್ರಿಯೆಯಲ್ಲಿ ‘ಅಂತರರಾಷ್ಟ್ರೀಯ ಸೌರ ಒಕ್ಕೂಟ’ವು (ISA) ವಹಿಸುತ್ತಿರುವ ನಿರ್ಣಾಯಕ ಪಾತ್ರವನ್ನು ಕೇಂದ್ರ ಸರ್ಕಾರವು ಇತ್ತೀಚಿಗೆ ಒತ್ತಿಹೇಳಿದೆ.
ಅಂತರರಾಷ್ಟ್ರೀಯ ಸೌರ ಒಕ್ಕೂಟದ ಬಗ್ಗೆ:
ಪ್ರಾರಂಭ:- ಇದು ಭಾರತದ ಒಂದು ಪ್ರಮುಖ ಜಾಗತಿಕ ಉಪಕ್ರಮವಾಗಿದೆ. 2015ರ ನವೆಂಬರ್ 30ರಂದು ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ಶೃಂಗಸಭೆಯ ಸಂದರ್ಭದಲ್ಲಿ, ಭಾರತದ ಪ್ರಧಾನ ಮಂತ್ರಿ ಹಾಗೂ ಫ್ರಾನ್ಸ್‌ನ ಅಧ್ಯಕ್ಷರು ಜಂಟಿಯಾಗಿ ಇದಕ್ಕೆ ಚಾಲನೆ ನೀಡಿದರು.
ಸೌರಶಕ್ತಿ ಹೇರಳವಾಗಿರುವ ದೇಶಗಳ ಒಕ್ಕೂಟ:- ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಸಂಪೂರ್ಣವಾಗಿ ಅಥವಾ ಭಾಗಶಃ ನೆಲೆಗೊಂಡಿರುವ, ಹೇರಳವಾದ ಸೌರ ಸಂಪನ್ಮೂಲಗಳನ್ನು ಹೊಂದಿರುವ 124 ರಾಷ್ಟ್ರಗಳನ್ನು ಒಳಗೊಂಡ ಉಪಕ್ರಮ ಇದಾಗಿದೆ.
ಪ್ರಮುಖ ಉದ್ದೇಶ:- ಒಕ್ಕೂಟದ ಸದಸ್ಯ ರಾಷ್ಟ್ರಗಳಲ್ಲಿ ಸೌರಶಕ್ತಿಯ ಬಳಕೆಯನ್ನು ವ್ಯಾಪಕವಾಗಿ ವಿಸ್ತರಿಸುವಲ್ಲಿ ಎದುರಾಗುವ ಪ್ರಮುಖ ಸಾಮಾನ್ಯ ಸವಾಲುಗಳನ್ನು ಒಗ್ಗೂಡಿ ಎದುರಿಸುವುದು.
ಪ್ರಧಾನ ಕಚೇರಿ:- ಹರಿಯಾಣದ ಗುರುಗ್ರಾಮದಲ್ಲಿರುವ‘ರಾಷ್ಟ್ರೀಯ ಸೌರ ಇಂಧನ ಸಂಸ್ಥೆ’ಯ (NISE) ಆವರಣದಲ್ಲಿ.
ಸದಸ್ಯತ್ವ:-2026ರ ಮಾರ್ಚ್ ವೇಳೆಗೆ, ಅಂತರರಾಷ್ಟ್ರೀಯ ಸೌರ ಒಕ್ಕೂಟವು ಗಣನೀಯವಾಗಿ ವಿಸ್ತರಣೆಗೊಂಡಿದ್ದು, ಒಟ್ಟು 125 ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಪೈಕಿ, ಸುಮಾರು 107 ದೇಶಗಳು ‘ISA ಚೌಕಟ್ಟಿನ ಒಪ್ಪಂದ’ವನ್ನು ಅಧಿಕೃತವಾಗಿ ಅನುಮೋದಿಸುವ ಮೂಲಕ ಪೂರ್ಣ ಪ್ರಮಾಣದ ಸದಸ್ಯತ್ವವನ್ನು ಪಡೆದುಕೊಂಡಿವೆ.
ಕೆಸಿ-135 ಸ್ಟ್ರಾಟೋಟ್ಯಾಂಕರ್
ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
ಇರಾನ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ‘ಆಪರೇಷನ್ ಎಪಿಕ್ ಫ್ಯೂರಿ’ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ, ಅಮೆರಿಕದ ಯುದ್ಧ ವಿಮಾನಗಳಿಗೆ ಆಗಸದಲ್ಲೇ ಇಂಧನ ತುಂಬುವ ‘ಕೆಸಿ-135 ಸ್ಟ್ರಾಟೋಟ್ಯಾಂಕರ್’ ವಿಮಾನವೊಂದು ಪಶ್ಚಿಮ ಇರಾಕ್ ಪ್ರದೇಶದಲ್ಲಿ ಪತನಗೊಂಡಿದೆ.
‘ಕೆಸಿ-135 ಸ್ಟ್ರಾಟೋಟ್ಯಾಂಕರ್’ನ ಬಗ್ಗೆ:
ವಿಮಾನದ ನಿರ್ಮಾಣ:-ಬೋಯಿಂಗ್ ಕಂಪನಿಯು 1950ರ ದಶಕದ ಅಂತ್ಯದಲ್ಲಿ ಹಾಗೂ 1960ರ ದಶಕದ ಆರಂಭದಲ್ಲಿ ನಿರ್ಮಿಸಿತು.
ವೈಮಾನಿಕ ಇಂಧನ ಮರುಪೂರಣ:- ಇದು ದಶಕಗಳಿಂದಲೂ ಅಮೆರಿಕದ ಸೇನಾಪಡೆಯ ‘ವೈಮಾನಿಕ ಇಂಧನ ಮರುಪೂರಣ ಪಡೆಯ’ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ. ಯುದ್ಧ ವಿಮಾನಗಳು ಭೂಮಿಗೆ ಇಳಿಯದೆಯೇ ನಿರಂತರವಾಗಿ ತಮ್ಮ ಕಾರ್ಯಾಚರಣೆಗಳನ್ನು ಮುಂದುವರಿಸಲು ಈ ವಿಮಾನವು ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಐತಿಹಾಸಿಕ ಬಳಕೆ:-ಮೊದಲ ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಯುದ್ಧ ವಿಮಾನಗಳು ಮತ್ತು ಬಾಂಬರ್‌ಗಳ ಹಾರಾಟದ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಲು ಇವುಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗಿತ್ತು.
ಕಾರ್ಯಾಚರಣೆಯ ಸಾಮರ್ಥ್ಯ:-ಈ ವಿಮಾನವು 30,000 ಅಡಿಗಳ (9,144 ಮೀಟರ್) ಎತ್ತರದಲ್ಲಿ, ಗಂಟೆಗೆ 530 ಮೈಲುಗಳಷ್ಟು ವೇಗದಲ್ಲಿ ಹಾರಾಟ ನಡೆಸುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದೆ.
ಜಾಗತಿಕ ಸಾಂಕ್ರಾಮಿಕ ಒಪ್ಪಂದ
ಅಂತರರಾಷ್ಟ್ರೀಯ
ಇದೀಗ ಸುದ್ದಿಯಲ್ಲಿದೆ:
ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಮುಂಬರುವ ‘ಜಾಗತಿಕ ಸಾಂಕ್ರಾಮಿಕ ಒಪ್ಪಂದ’ದ ಉನ್ನತ ಮಟ್ಟದ ಮಾತುಕತೆಗಳಲ್ಲಿ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ‘ನ್ಯಾಯಸಮ್ಮತ ಲಾಭ-ಹಂಚಿಕೆ ಚೌಕಟ್ಟನ್ನು’ ಕಡ್ಡಾಯವಾಗಿ ಒದಗಿಸಬೇಕು ಎಂದು ಭಾರತವು ಪ್ರಬಲವಾಗಿ ಪ್ರತಿಪಾದಿಸುತ್ತಿದೆ.
ಜಾಗತಿಕ ಸಾಂಕ್ರಾಮಿಕ ಒಪ್ಪಂದದ ಬಗ್ಗೆ:
ಅಂಗೀಕಾರ:-ಮೇ 2025 ರಲ್ಲಿ ನಡೆದ ‘ವಿಶ್ವ ಆರೋಗ್ಯ ಸಭೆಯಲ್ಲಿ ಅಧಿಕೃತವಾಗಿ ಅಂಗೀಕರಿಸಿದೆ.
ಉದ್ದೇಶ:-ಭವಿಷ್ಯದಲ್ಲಿ ಎದುರಾಗಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ, ಸಮರ್ಪಕ ಸಿದ್ಧತೆ ನಡೆಸುವ ಮತ್ತು ಪರಿಣಾಮಕಾರಿಯಾಗಿ ಸ್ಪಂದಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿರುವ ನ್ಯೂನತೆಗಳು ಹಾಗೂ ಅಸಮಾನತೆಗಳನ್ನು ನಿವಾರಿಸಲು, ‘ಕಾನೂನಾತ್ಮಕವಾಗಿ ಕಡ್ಡಾಯವಾಗಿರುವ’ ಅಂತರರಾಷ್ಟ್ರೀಯ ಚೌಕಟ್ಟೊಂದನ್ನು ಸ್ಥಾಪಿಸುವುದು.
ಮಾತುಕತೆಯ ಹಂತಗಳು:-ಜೈವಿಕ ಮಾದರಿಗಳು ಮತ್ತು ಆನುವಂಶಿಕ ದತ್ತಾಂಶಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಹಂಚಿಕೊಳ್ಳಬೇಕು ಎಂಬುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು, ಇದರ ‘ರೋಗಕಾರಕ ಪ್ರವೇಶ ಮತ್ತು ಲಾಭ-ಹಂಚಿಕೆ’ (PABS) ವ್ಯವಸ್ಥೆಯ ಕುರಿತು ಪ್ರಸ್ತುತ ಉನ್ನತ ಮಟ್ಟದ ಮಾತುಕತೆಗಳು ನಡೆಯುತ್ತಿವೆ.
ಜಾರಿ ಪ್ರಕ್ರಿಯೆ:-ಮೇ 2026 ರ ವೇಳೆಗೆ ಈ ಒಪ್ಪಂದವನ್ನು ಅಂತಿಮವಾಗಿ ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ. ತದನಂತರ ಇದು ವಿವಿಧ ದೇಶಗಳ ಸಹಿ ಮತ್ತು ಅಧಿಕೃತ ಅನುಮೋದನೆಗೆ ಮುಕ್ತವಾಗಲಿದ್ದು, ಕನಿಷ್ಠ 60 ದೇಶಗಳು ಅನುಮೋದಿಸಿದ 30 ದಿನಗಳ ನಂತರ ಇದು ಜಾಗತಿಕವಾಗಿ ಜಾರಿಗೆ ಬರಲಿದೆ.