Blog

  • ರಕ್ಷಣಾ ಕೈಗಾರಿಕಾ ಸಹಕಾರವನ್ನು ಬಲಪಡಿಸಲು ಭಾರತ-ಜರ್ಮನಿ ಒಪ್ಪಂದ | ಪ್ಯಾರಿಸ್ ಒಪ್ಪಂದದ 6ನೇ ವಿಧಿ ಮತ್ತು ಭಾರತ | ಬಮನ್ವಾಸ್ ಕಂಕರ್ – ರಾಜಸ್ಥಾನದ ಮೊದಲ ಸಂಪೂರ್ಣ ಸಾವಯವ ಗ್ರಾಮ ಪಂಚಾಯತಿ | ಇಸ್ರೋದ PSLV-C62/EOS-N1 ಮಿಷನ್‌ನ ಮೂರನೇ ಹಂತದಲ್ಲಿ ವೈಫಲ್ಯ | ಭದ್ರಕಾಳಿ ಶಾಸನ | ಪ್ಯಾಕ್ಸ್ ಸಿಲಿಕಾ

    ರಕ್ಷಣಾ ಕೈಗಾರಿಕಾ ಸಹಕಾರವನ್ನು ಬಲಪಡಿಸಲು ಭಾರತ-ಜರ್ಮನಿ ಒಪ್ಪಂದ

    ಸಾಮಾನ್ಯ ಅಧ್ಯಯನ- 2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಭಾರತ ಮತ್ತು ಜರ್ಮನಿ ದೇಶಗಳು ರಕ್ಷಣೆ, ತಂತ್ರಜ್ಞಾನ, ಆರೋಗ್ಯ, ಇಂಧನ ಮತ್ತು ಮಾನವ ಸಂಪನ್ಮೂಲಗಳಂತಹ ವಲಯಗಳಲ್ಲಿ ವಿವಿಧ ಒಪ್ಪಂದಗಳಿಗೆ ಸಹಿ ಹಾಕಿವೆ.

    ಭಾರತ ಮತ್ತು ಜರ್ಮನಿ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ:

      • 1951ರಲ್ಲಿ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆ:- 2026ಕ್ಕೆ ಈ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ 75 ವರ್ಷಗಳು ಪೂರ್ಣಗೊಳ್ಳಲಿವೆ.
      • 2000ನೇ ಇಸವಿಯಿಂದ ಕಾರ್ಯತಂತ್ರದ ಪಾಲುದಾರಿಕೆ:- 2025ಕ್ಕೆ ಈ ಪಾಲುದಾರಿಕೆಯು 25 ವರ್ಷಗಳನ್ನು ಪೂರೈಸಲಿದೆ.
      • ರಕ್ಷಣಾ ಸಹಕಾರ:- ಜರ್ಮನಿಯು ಭಾರತದೊಂದಿಗೆ MILAN, PASSEX ಮತ್ತು EX TARANG SHAKTI-1 ನಂತಹ ಅನೇಕ ಬಹುಪಕ್ಷೀಯ ಸಮರಾಭ್ಯಾಸಗಳಲ್ಲಿ ಭಾಗವಹಿಸಿದೆ.
      • ವ್ಯಾಪಾರ ಸಹಕಾರ:- 2024ರಲ್ಲಿ ಜರ್ಮನಿಯು ಭಾರತದ 8ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ಐರೋಪ್ಯ ಒಕ್ಕೂಟ (EU)ದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಇದೇ ವೇಳೆ, ಭಾರತವು ಜರ್ಮನಿಯ 23ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.
      • ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆ, 2022:- ಜರ್ಮನಿಯು 2030ರ ವೇಳೆಗೆ €10 ಬಿಲಿಯನ್ ನೆರವು ನೀಡುವುದಾಗಿ ಹೇಳಿದೆ.
        • ನವೀಕರಿಸಬಹುದಾದ ಇಂಧನ, ಮೆಟ್ರೋ ಯೋಜನೆಗಳು, ಹಸಿರು ಕಾರಿಡಾರ್‌ಗಳು ಮತ್ತು ಸ್ಮಾರ್ಟ್ ಸಿಟಿಗಳಲ್ಲಿನ ಸಹಯೋಗವು ಭಾರತದ ಹವಾಮಾನ ಗುರಿಗಳು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಬದ್ಧತೆಗಳನ್ನು ಈಡೇರಿಸಲು ನೇರವಾಗಿ ಸಹಕರಿಸುತ್ತದೆ.
      • ಬಹುಪಕ್ಷೀಯ ಸಹಕಾರ:-
    • ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಭಾರತದ ಕಾಯಂ ಸದಸ್ಯತ್ವಕ್ಕೆ ಬೆಂಬಲ ನೀಡುವುದು.
      • ಜಿ-20, ವಿಶ್ವಸಂಸ್ಥೆ, ವಿಶ್ವ ವ್ಯಾಪಾರ ಸಂಸ್ಥೆ ಮತ್ತು COP ಹವಾಮಾನ ಮಾತುಕತೆಗಳ ವೇದಿಕೆಗಳಲ್ಲಿ ಪರಸ್ಪರ ಸಮನ್ವಯ ಸಾಧಿಸುವುದು.
      • ಭಾರತೀಯ ವಲಸಿಗರು:- ಜರ್ಮನಿಯಲ್ಲಿ ಸುಮಾರು 2.46 ಲಕ್ಷ (2023ರ ಅಂಕಿಅಂಶಗಳ ಪ್ರಕಾರ) ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಮತ್ತು ಭಾರತೀಯ ಮೂಲದ ಜನರಿದ್ದಾರೆ.

    ಪ್ಯಾರಿಸ್ ಒಪ್ಪಂದದ 6ನೇ ವಿಧಿ ಮತ್ತು ಭಾರತ

    ಸಾಮಾನ್ಯ ಅಧ್ಯಯನ- 3/ ಪರಿಸರ ಮತ್ತು ಪರಿಸರ ವಿಜ್ಞಾನ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚೆಗೆ, COP29 ಶೃಂಗಸಭೆಯಲ್ಲಿ, ಹವಾಮಾನ ಹಣಕಾಸಿನ ವಿತರಣೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಉದ್ದೇಶದಿಂದ ಪ್ಯಾರಿಸ್ ಒಪ್ಪಂದದ 6ನೇ ವಿಧಿಯ ಅಡಿಯಲ್ಲಿ ಇಂಗಾಲದ ಮಾರುಕಟ್ಟೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ನಿರ್ಧರಿಸಲಾಯಿತು.
    • ಇದಕ್ಕೂ ಮುನ್ನ, ಜಂಟಿ ಸಾಲದ ಕಾರ್ಯವಿಧಾನ (JCM)ಕ್ಕೇ ಸಹಿ ಹಾಕುವ ಮೂಲಕ ಭಾರತವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇದು ಪರಿಣಾಮಕಾರಿಯಾಗಿ 6.2ನೇ ವಿಧಿಯ ಅನುಷ್ಠಾನವಾಗಿದ್ದು, ಅಂತರರಾಷ್ಟ್ರೀಯ ಇಂಗಾಲದ ಮಾರುಕಟ್ಟೆ ಸಹಕಾರಕ್ಕೆ ಭಾರತದ ಅಧಿಕೃತ ಪ್ರವೇಶವನ್ನು ಸೂಚಿಸುತ್ತದೆ.

    ಪ್ಯಾರಿಸ್ ಒಪ್ಪಂದದ 6ನೇ ವಿಧಿಯ ಕುರಿತು:

    • ರಾಷ್ಟ್ರಗಳು ತಮ್ಮ ‘ರಾಷ್ಟ್ರೀಯ ನಿರ್ಧರಿತ ಕೊಡುಗೆ’ (NDCs)ಗಳನ್ನು ಸಾಧಿಸಲು ಸ್ವಯಂಪ್ರೇರಿತವಾಗಿ ಪರಸ್ಪರ ಸಹಕರಿಸಲು ಅನುವು ಮಾಡಿಕೊಡುವ ಚೌಕಟ್ಟನ್ನು ಈ ವಿಧಿಯು ಸೃಷ್ಟಿಸುತ್ತದೆ. ಇದು ಪ್ರಮುಖವಾಗಿ 2 ಮಾರ್ಗಗಳನ್ನು ಒಳಗೊಂಡಿದೆ:
    1. ವಿಧಿ 6.2- ಅಂತರರಾಷ್ಟ್ರೀಯವಾಗಿ ವರ್ಗಾಯಿಸಲಾದ ಹೊರಸೂಸುವಿಕೆಯ ಕಡಿತದ ಫಲಿತಾಂಶಗಳು (ITMOs):- ಇದು ಹೊರಸೂಸುವಿಕೆ ಕಡಿತಗಳ ವ್ಯಾಪಾರದ ಮೂಲಕ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಸಹಕಾರಕ್ಕೆ ಅವಕಾಶ ನೀಡುತ್ತದೆ. 
    2. ವಿಧಿ 6.4- ಪ್ಯಾರಿಸ್ ಒಪ್ಪಂದದ ಸಾಲದ ಕಾರ್ಯವಿಧಾನ (PACM):- ಇದು ಕೇಂದ್ರೀಕೃತ ಸಾಲದ ಕಾರ್ಯವಿಧಾನ(PACM) ವನ್ನು ಸ್ಥಾಪಿಸುತ್ತದೆ. ಇದು ಹಿಂದಿನ “ಶುದ್ಧ ಅಭಿವೃದ್ಧಿ ಕಾರ್ಯವಿಧಾನ” (CDM) ದಿಂದ ವಿಕಸನಗೊಂಡಿದ್ದು, ಇಂಗಾಲದ ಶ್ರೇಯಗಳನ್ನು ಉತ್ಪಾದಿಸುವ ಯೋಜನೆಗಳನ್ನು ಮೌಲ್ಯೀಕರಿಸಲು ಮತ್ತು ಪರಿಶೀಲಿಸಲು ಇದನ್ನು ಬಳಸಲಾಗುತ್ತದೆ.
    • ಈ 2 ವ್ಯವಸ್ಥೆಗಳು ಪಾರದರ್ಶಕತೆ ಮತ್ತು ಪರಿಸರ ಸಮಗ್ರತೆಯನ್ನು ಖಚಿತಪಡಿಸಲು ಹಾಗೂ ದ್ವಿಗುಣ ಎಣಿಕೆಯನ್ನು ತಪ್ಪಿಸಲು ಕಠಿಣವಾದ ಲೆಕ್ಕಪತ್ರ ನಿಯಮಗಳಿಂದ ಬೆಂಬಲಿತವಾಗಿವೆ.

    ಭಾರತ ಮತ್ತು ಜಂಟಿ ಸಾಲದ ಕಾರ್ಯವಿಧಾನ (JCM)ದ ಬಗ್ಗೆ:

    ಭಾರತವು ಜಪಾನ್‌ನೊಂದಿಗಿನ JCM ಪಾಲುದಾರಿಕೆಯ ಮೂಲಕ 6ನೇ ವಿಧಿಗೆ ಪ್ರವೇಶಿಸಿರುವುದು, ವಿಧಿ 6.2ರ ಪ್ರಾಯೋಗಿಕ ಅನುಷ್ಠಾನವನ್ನು ಪ್ರತಿನಿಧಿಸುತ್ತದೆ.

    • JCM ನ ಕಾರ್ಯವಿಧಾನ:- ಈ ಚೌಕಟ್ಟು ಕಡಿಮೆ ಇಂಗಾಲದ ಮತ್ತು ಸುಧಾರಿತ ಕೈಗಾರಿಕಾ ತಂತ್ರಜ್ಞಾನಗಳ ಅಳವಡಿಕೆಗೆ ಉತ್ತೇಜನ ನೀಡುತ್ತದೆ.
    • ಪರಸ್ಪರ ಲಾಭ:- ಇದು ಜಪಾನ್‌ಗೆ ಹೊರಸೂಸುವಿಕೆ ಕಡಿತದ ಲಾಭವನ್ನು ನೀಡಿದರೆ, ಭಾರತಕ್ಕೆ ತಂತ್ರಜ್ಞಾನ ವರ್ಗಾವಣೆ ಮತ್ತು ಆರ್ಥಿಕ ನೆರವಿನ ರೂಪದಲ್ಲಿ ಲಾಭದಾಯಕವಾಗಿದೆ.

    ಭಾರತ ಸರ್ಕಾರವು 6ನೇ ವಿಧಿಯ ಅಡಿಯಲ್ಲಿ ಗುರುತಿಸಲಾದ 13 ಅರ್ಹ ಚಟುವಟಿಕೆಗಳು:

    • ಇವು ಹೆಚ್ಚಿನ ಪ್ರಭಾವ ಬೀರುವ ಈ ಕೆಳಗಿನ ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿವೆ. ಅವುಗಳೆಂದರೆ,
    1. ನವೀಕರಿಸಬಹುದಾದ ಇಂಧನ:- ಶೇಖರಣಾ ವ್ಯವಸ್ಥೆಯುಳ್ಳ ನವೀಕರಿಸಬಹುದಾದ ಇಂಧನ ಮತ್ತು ಕಡಲಾಚೆಯ ಪವನ ಶಕ್ತಿ.
    2. ಹಸಿರು ಇಂಧನಗಳು:- ಹಸಿರು ಜಲಜನಕ ಮತ್ತು ಸಂಕುಚಿತ ಜೈವಿಕ ಅನಿಲ.
    3. ಸಾರಿಗೆ ವಲಯ: ಸುಸ್ಥಿರ ವಿಮಾನಯಾನ ಇಂಧನ ಮತ್ತು ಇಂಧನ ಕೋಶ ಆಧಾರಿತ ಚಲನಶೀಲತೆ.
    4. ಇಂಧನ ದಕ್ಷತೆ:- ಅತ್ಯುನ್ನತ ಇಂಧನ ದಕ್ಷತೆಯ ತಂತ್ರಜ್ಞಾನಗಳ ಅಳವಡಿಕೆ.
    5. ಇಂಗಾಲದ ನಿರ್ವಹಣೆ:- ಇಂಗಾಲ ಸೆರೆಹಿಡಿಯುವಿಕೆ, ಬಳಕೆ ಮತ್ತು ಶೇಖರಣೆ (CCUS).

    ಮಹತ್ವ:

    • ಈ ಕ್ರಮಗಳು ಭಾರತದ ಅಭಿವೃದ್ಧಿ ಆದ್ಯತೆಗಳು ಮತ್ತು ದೀರ್ಘಕಾಲೀನ ಇಂಗಾಲದ ಅಂಶವನ್ನು ಕಡಿತಗೊಳಿಸುವ (ಡಿ-ಕಾರ್ಬೊನೈಸೇಶನ್) ಗುರಿಗಳ ನಡುವಿನ ಕಾರ್ಯತಂತ್ರದ ಹೊಂದಾಣಿಕೆಯನ್ನು ಪ್ರತಿಬಿಂಬಿಸುತ್ತವೆ. ವಿಶೇಷವಾಗಿ ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯಂತಹ ‘ಕಠಿಣ-ನಿಯಂತ್ರಣದ’ ಕೈಗಾರಿಕೆಗಳಿಗೆ ಇವು ನಿರ್ಣಾಯಕವಾಗಿವೆ.

    ಬಮನ್ವಾಸ್ ಕಂಕರ್ – ರಾಜಸ್ಥಾನದ ಮೊದಲ ಸಂಪೂರ್ಣ ಸಾವಯವ ಗ್ರಾಮ ಪಂಚಾಯತಿ

    ಸಾಮಾನ್ಯ ಅಧ್ಯಯನ- 3/ ಆರ್ಥಿಕತೆ/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ರಾಜಸ್ಥಾನದ ಬಮನ್ವಾಸ್ ಕಂಕರ್ ಪಂಚಾಯತಿ, ರಾಜ್ಯದ ಮೊದಲ ಸಂಪೂರ್ಣ ಸಾವಯವ ಗ್ರಾಮ ಪಂಚಾಯತಿಯಾಗಿ ಹೊರಹೊಮ್ಮಿದೆ. ಈ ಪಂಚಾಯತಿ 7 ಚಿಕ್ಕ ಗ್ರಾಮಗಳನ್ನು ಒಳಗೊಂಡಿದೆ.

    ನೈಸರ್ಗಿಕ ಕೃಷಿ ಪದ್ದತಿಯ ಬಗ್ಗೆ:

    • ರಾಸಾಯನಿಕ ಮುಕ್ತ ಕೃಷಿ ಪದ್ದತಿ:- ಇದು ಜಾನುವಾರುಗಳನ್ನು (ಆದ್ಯತೆ ಮೇರೆಗೆ ಸ್ಥಳೀಯ ತಳಿಯ ಹಸು) ಒಳಗೊಂಡ ಸಮಗ್ರ ನೈಸರ್ಗಿಕ ಕೃಷಿ ವಿಧಾನಗಳು ಮತ್ತು ಭಾರತೀಯ ಸಾಂಪ್ರದಾಯಿಕ ಜ್ಞಾನದಲ್ಲಿ ಬೇರೂರಿರುವ ವೈವಿಧ್ಯಮಯ ಬೆಳೆ ಪದ್ಧತಿ ವ್ಯವಸ್ಥೆಯನ್ನು ಒಳಗೊಂಡಿದೆ.
    • ಕೃಷಿ ತ್ಯಾಜ್ಯ ಮರುಬಳಕೆಯನ್ನು ಆಧರಿಸಿದೆ:- ಇದರಲ್ಲಿ ಜೈವಿಕ ಹೊದಿಕೆ ಹಾಕುವುದು (ಬಯೋಮಾಸ್ ಮಲ್ಚಿಂಗ್), ಹಸುಮೂತ್ರ ಮತ್ತು ಸಗಣಿಯ ಮಿಶ್ರಣಗಳ ಬಳಕೆ, ಮಣ್ಣಿನ ಗಾಳಿಯಾಡುವಿಕೆಯನ್ನು ಕಾಪಾಡಿಕೊಳ್ಳುವುದು ಮತ್ತು ಎಲ್ಲಾ ರೀತಿಯ ಕೃತಕ ರಾಸಾಯನಿಕ ಒಳಹರಿವುಗಳನ್ನು ನಿಷೇಧಿಸುವುದರ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

    ರಾಷ್ಟ್ರೀಯ ನೈಸರ್ಗಿಕ ಕೃಷಿ ಗುರಿ (NMNF)ಯ ಬಗ್ಗೆ:

    • ಪ್ರಾರಂಭ:- ನವೆಂಬರ್ 2024.
    • ಇದೊಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    • ಉದ್ದೇಶ:- ಸಾಂಪ್ರದಾಯಿಕ ಜ್ಞಾನದಲ್ಲಿ ಬೇರೂರಿರುವ ರಾಸಾಯನಿಕ ಮುಕ್ತ ಮತ್ತು ಪರಿಸರ ವ್ಯವಸ್ಥೆ ಆಧಾರಿತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದು.

    ಇಸ್ರೋದ PSLV-C62/EOS-N1 ಮಿಷನ್‌ನ ಮೂರನೇ ಹಂತದಲ್ಲಿ ವೈಫಲ್ಯ

    ಸಾಮಾನ್ಯ ಅಧ್ಯಯನ-3/ ಬಾಹ್ಯಾಕಾಶ

    ಇದೀಗ ಸುದ್ದಿಯಲ್ಲಿದೆ:

    • 2026ನೇ ವರ್ಷದ ಮೊದಲ ಉಡಾವಣೆಯಾಗಿದ್ದ ಇಸ್ರೋದ PSLV-C62 ಮಿಷನ್, ತನ್ನ 16 ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗೆ ಸೇರಿಸುವಲ್ಲಿ ವಿಫಲವಾಯಿತು. ಇದರಿಂದ, ದೀರ್ಘಕಾಲದಿಂದ ವಿಶ್ವಾಸಾರ್ಹವಾಗಿದ್ದ PSLV ರಾಕೆಟ್‌ಗೆ ಇದು ಸತತವಾಗಿ ಎರಡನೇ ವೈಫಲ್ಯತೆ ಎಂಬುದಾಗಿ ದಾಖಲಾಗಿದೆ.

    PSLV-C62 / EOS-N1 ಮಿಷನ್ ನ ಬಗ್ಗೆ:

    • ಇದು ಭಾರತದ PSLVಯ 64ನೇ ಹಾರಾಟ ಮತ್ತು ‘ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌’ (NSIL)ನ 9ನೇ ವಾಣಿಜ್ಯ ಗುರಿ ಆಗಿತ್ತು.
    • ಇದು EOS-N1 ಭೂ ವೀಕ್ಷಣಾ ಉಪಗ್ರಹದೊಂದಿಗೆ 15 ಸಹ-ಪ್ರಯಾಣಿಕ ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿಯನ್ನು ಹೊಂದಿತ್ತು.
    • EOS-N1 ಉಪಗ್ರಹವು ಪರಿಸರ ಮೇಲ್ವಿಚಾರಣೆ, ಸಂಪನ್ಮೂಲಗಳ ನಕ್ಷೆ ತಯಾರಿಕೆ ಮತ್ತು ವಿಪತ್ತು ನಿರ್ವಹಣೆಗಾಗಿ ರೂಪಿಸಲಾದ ಭೂ ವೀಕ್ಷಣಾ ಉಪಗ್ರಹವಾಗಿದೆ.

    ಧ್ರುವೀಯ ಉಪಗ್ರಹ ಉಡಾವಣಾ ವಾಹನ (PSLV)ಗಳ ಬಗ್ಗೆ:

    • ಇದು ಭಾರತದ 3ನೇ ತಲೆಮಾರಿನ ಉಡಾವಣಾ ವಾಹನವಾಗಿದೆ.
    • “ಇಸ್ರೋದ ವರ್ಕ್‌ಹಾರ್ಸ್”:- ಕಾರಣ, ವಿವಿಧ ಉಪಗ್ರಹಗಳನ್ನು ‘ಕೆಳ ಭೂ ಕಕ್ಷೆಗಳಿಗೆ’ (LEO) ಹೆಚ್ಚಿನ ಯಶಸ್ಸಿನ ದರದೊಂದಿಗೆ ಸೇರಿಸುತ್ತದೆ.
    • ದ್ರವ ಹಂತಗಳನ್ನು ಅಳವಡಿಸಿಕೊಂಡಿರುವ ಭಾರತದ ಮೊದಲ ಉಡಾವಣಾ ವಾಹನ ಇದಾಗಿದೆ.
    • ಇದು 4 ಹಂತದ ಉಡಾವಣಾ ವಾಹನವಾಗಿದ್ದು, ಪ್ರತಿ ಹಂತವು ತನ್ನದೇ ಆದ ಎಂಜಿನ್ ಮತ್ತು ಇಂಧನವನ್ನು ಹೊಂದಿರುತ್ತದೆ.

    ಪ್ರಮುಖ ಉಡಾವಣೆಗಳು:

    • ಅಕ್ಟೋಬರ್‌, 1994ರಲ್ಲಿ ಇದರ ಮೊದಲ ಯಶಸ್ವಿ ಉಡಾವಣೆ ನಡೆಯಿತು.
    • PSLV ಪ್ರಮುಖ 2 ನೌಕೆಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಅವುಗಳೆಂದರೆ,
    1. 2008ರಲ್ಲಿ ಚಂದ್ರಯಾನ-1 
    2. 2013ರಲ್ಲಿ ಮಂಗಳಯಾನ (ಮಾರ್ಸ್ ಆರ್ಬಿಟರ್ ಬಾಹ್ಯಾಕಾಶ ನೌಕೆ) 
    • ಇವು ನಂತರ ಕ್ರಮವಾಗಿ ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಪ್ರಯಾಣ ಬೆಳೆಸಿದವು.
    • ಇದು ಭಾರತದ ಮೊದಲ ಬಾಹ್ಯಾಕಾಶ ವೀಕ್ಷಣಾಲಯವಾದ ‘ಆಸ್ಟ್ರೋಸ್ಯಾಟ್’ ಅನ್ನು ಸಹ ಉಡಾವಣೆ ಮಾಡಿದೆ.

    ಭೂಸ್ಥಾಯೀ ಉಪಗ್ರಹ ಉಡಾವಣಾ ವಾಹನ (GSLV):

    • ಇದು ಭಾರತದ ಅತಿದೊಡ್ಡ 4ನೇ ತಲೆಮಾರಿನ ಉಡಾವಣಾ ವಾಹನವಾಗಿದೆ. PSLV ಉಡಾವಣಾ ವಾಹನದ ಮಿತಿಗಳನ್ನು ಮೀರುವ ಉದ್ದೇಶದಿಂದ, ಹೆಚ್ಚಿನ ಭಾರವಾದ ಉಪಗ್ರಹಗಳನ್ನು ಹೆಚ್ಚಿನ ಎತ್ತರದ ಕಕ್ಷೆಗಳಿಗೆ ಕೊಂಡೊಯ್ಯಲು ಇದನ್ನು ವಿನ್ಯಾಸಗೊಳಿಸಲಾಗಿದೆ.
    • 3 ಹಂತದ ಉಡಾವಣ ವಾಹನವಾಗಿದೆ:- ಇದು 1,750 ಕೆಜಿಯಷ್ಟು ತೂಕವನ್ನು ಕೆಳ ಭೂ ಕಕ್ಷೆಗೆ (600 ಕಿ.ಮೀ ವರೆಗೆ) ಮತ್ತು ಕಡಿಮೆ ಭಾರದ ಉಪಗ್ರಹಗಳನ್ನು ಭೂಸ್ಥಿರ ವರ್ಗಾವಣೆ ಕಕ್ಷೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ.
    • ಕ್ರಯೋಜೆನಿಕ್ ಎಂಜಿನ್‌ಗಳನ್ನು ಬಳಸುತ್ತದೆ:- ಅಂದರೆ ದ್ರವ ಜಲಜನಕ ಮತ್ತು ದ್ರವ ಆಮ್ಲಜನಕವನ್ನು ಒಟ್ಟಿಗೆ ಉಪಯೋಗಿಸುತ್ತವೆ. ಇವು ಹಿಂದಿನ ಉಡಾವಣಾ ವಾಹನಗಳಿಗಿಂತ ಅತೀ ಹೆಚ್ಚಿನ ನೂಕುಬಲವನ್ನು ನೀಡುತ್ತವೆ.
    • LVM-3 (ಹಿಂದೆ GSLV Mk III):- ಇದು GSLVಯ ಸುಧಾರಿತ ಆವೃತ್ತಿಯಾಗಿದೆ. ಇದು ಘನ, ದ್ರವ ಮತ್ತು ಕ್ರಯೋಜೆನಿಕ್ ಎಂಜಿನ್‌ಗಳನ್ನು ಬಳಸುತ್ತದೆ. 
    1. ಇದು ಕೆಳ ಭೂಮಿಯ ಕಕ್ಷೆಗೆ (2,000 ಕಿಮೀ ವರೆಗೆ) ಗರಿಷ್ಠ 8,000 ಕೆ.ಜಿ ಭಾರವನ್ನು,
    2. ಭೂಸ್ಥಾಯೀ ಕಕ್ಷೆಗೆ (36,000 ಕಿಮೀ) ಗರಿಷ್ಠ 4,000 ಕೆ.ಜಿ ಭಾರವನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಈ ಸಾಮರ್ಥ್ಯದಿಂದಾಗಿ ಇದಕ್ಕೆ ‘ಬಾಹುಬಲಿ’ ಎಂಬ ಹೆಸರು ಬಂದಿದೆ.

    LVM-3 ಯ ಪ್ರಮುಖ ಉಡಾವಣೆಗಳು:

    • LVM-3 ನ ಮೊದಲ ಯಶಸ್ವಿ ಮಿಷನ್ 2017ರಲ್ಲಿ GSAT-19 ನೊಂದಿಗೆ ಉಡಾವಣೆಯಾಯಿತು.
    • ನಂತರ 2019ರಲ್ಲಿ ಚಂದ್ರಯಾನ-2 ಮತ್ತು 2023ರಲ್ಲಿ ಚಂದ್ರಯಾನ-3 ಉಡಾವಣೆಯಾದವು.

    ಗಮನಿಸಿ: 

    ಇಸ್ರೋ ತನ್ನ ಅತ್ಯಂತ ಭಾರವಿರುವ ಉಡಾವಣಾ ವಾಹನವಾದ ‘ಲೂನಾರ್ ಮಾಡ್ಯೂಲ್ ಉಡಾವಣಾ ವಾಹನ’ (LMLV) ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು 2035ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದ್ದು, 2040ಕ್ಕೆ ಯೋಜಿಸಲಾದ ಭಾರತದ ಮೊದಲ ಮಾನವ ಸಹಿತ ಚಂದ್ರಯಾನ ಸೇರಿದಂತೆ ಭವಿಷ್ಯದ ಚಂದ್ರನ ಕಾರ್ಯಾಚರಣೆಗಳನ್ನು ಬೆಂಬಲಿಸಲಿದೆ. 

    ಭದ್ರಕಾಳಿ ಶಾಸನ

    ಸಾಮಾನ್ಯ ಅಧ್ಯಯನ- 1/ ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚೆಗೆ, ‘ಪ್ರಭಾಸ್ ಪಟಾನ್’ ಶ್ರೀಮಂತ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿದೆ ಎಂಬ ವಿಷಯವು ಮುನ್ನೆಲೆಗೆ ಬಂದಿದೆ. ಇಲ್ಲಿನ ಭದ್ರಕಾಳಿ ಶಾಸನ, ತಾಮ್ರದ ಫಲಕಗಳು ಮತ್ತು ಸ್ಮಾರಕ ಕಲ್ಲುಗಳು ಈ ಸ್ಥಳದ ಸಮೃದ್ಧಿ, ಶೌರ್ಯ ಮತ್ತು ಭಕ್ತಿಯನ್ನು ಎತ್ತಿ ತೋರಿಸುತ್ತವೆ.
    • ಗಮನಿಸಿ:- ಪ್ರಭಾಸ್ ಪಟಾನ್ (ಇದನ್ನು ‘ದೇವ್ ಪಟಾನ್’ ಎಂತಲೂ ಕರೆಯುತ್ತಾರೆ) ಗುಜರಾತ್‌ನ ವೆರಾವಲ್‌ನಲ್ಲಿರುವ ಐತಿಹಾಸಿಕ ಮತ್ತು ಪವಿತ್ರ ತಾಣವಾಗಿದೆ. ಇದು ಪ್ರಸಿದ್ಧ ಸೋಮನಾಥ ದೇವಾಲಯದ ನೆಲೆಬೀಡಾಗಿದೆ. ಶಿವನ ಹನ್ನೆರಡು ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದನ್ನು ಹೊಂದಿರುವ ಈ ತಾಣವು, ಭಾರತದ ಅತ್ಯಂತ ಮಹತ್ವದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.

    ‘ಭದ್ರಕಾಳಿ ಶಾಸನ’ದ ಬಗ್ಗೆ:

    • ಇದನ್ನು ಕ್ರಿ.ಶ. 1169 ರಲ್ಲಿ (ವಲಭಿ ಸಂವತ್ 850 ಮತ್ತು ವಿಕ್ರಮ ಸಂವತ್ 1255) ಕೆತ್ತಲಾಗಿದೆ. ಪ್ರಸ್ತುತ ಇದು ರಾಜ್ಯ ಪುರಾತತ್ವ ಇಲಾಖೆಯ ಸಂರಕ್ಷಣೆಯಲ್ಲಿದೆ.
    • ಇದು ಪ್ರಭಾಸ್ ಪಟಾನ್‌ನಲ್ಲಿರುವ ವಸ್ತುಸಂಗ್ರಹಾಲಯದ ಬಳಿ, ಭದ್ರಕಾಳಿ ರಸ್ತೆಯಲ್ಲಿರುವ ಹಳೆಯ ರಾಮ ಮಂದಿರದ ಪಕ್ಕದಲ್ಲಿದೆ.
    • ಇದು ಅನ್ಹಿಲ್ವಾಡ್ ಪಟಾನ್‌ನ ಮಹಾರಾಜಾಧಿರಾಜ ಕುಮಾರಪಾಲನ ಆಧ್ಯಾತ್ಮಿಕ ಗುರುಗಳಾದ ‘ಪರಮ ಪಾಶುಪತ ಆಚಾರ್ಯ ಶ್ರೀಮಾನ್ ಭಾವಬೃಹಸ್ಪತಿ’ ಅವರ ಕುರಿತಾದ ಪ್ರಶಂಸಾತ್ಮಕ ಶಾಸನವಾಗಿದೆ.

    ಈ ಶಾಸನದ ವೈಶಿಷ್ಟ್ಯಗಳು:

    • ಈ ಶಾಸನವು ಸೋಮನಾಥ ದೇವಾಲಯದ ಪ್ರಾಚೀನ ಮತ್ತು ಮಧ್ಯಕಾಲೀನ ಇತಿಹಾಸವನ್ನು ದಾಖಲಿಸುತ್ತದೆ.
    • ನಾಲ್ಕು ಯುಗಗಳಲ್ಲಿ ಸೋಮನಾಥ ಮಹಾದೇವ ದೇವಾಲಯದ ನಿರ್ಮಾಣವನ್ನು ಇದು ಉಲ್ಲೇಖಿಸುತ್ತದೆ. ಅದರ ವಿವರಗಳು ಈ ಕೆಳಗಿನಂತಿವೆ:
      • ಸತ್ಯ ಯುಗದಲ್ಲಿ:- ಚಂದ್ರನು (ಸೋಮ) ಇದನ್ನು ಚಿನ್ನದಿಂದ ನಿರ್ಮಿಸಿದನು.
      • ತ್ರೇತಾ ಯುಗದಲ್ಲಿ:- ರಾವಣನು ಇದನ್ನು ಬೆಳ್ಳಿಯಿಂದ ನಿರ್ಮಿಸಿದನು.
      • ದ್ವಾಪರ ಯುಗದಲ್ಲಿ: ಶ್ರೀ ಕೃಷ್ಣನು ಇದನ್ನು ಮರದಿಂದ ನಿರ್ಮಿಸಿದನು.
      • ಕಲಿ ಯುಗದಲ್ಲಿ: ರಾಜ ಭೀಮದೇವ ಸೋಲಂಕಿ ಸುಂದರವಾದ ಕಲಾತ್ಮಕ ಕಲ್ಲಿನ ದೇವಾಲಯವನ್ನು ನಿರ್ಮಿಸಿದನು.
    • ರಾಜ ಭೀಮದೇವ ಸೋಲಂಕಿಯು ಹಿಂದಿನ ಅವಶೇಷಗಳ ಮೇಲೆ ನಾಲ್ಕನೇ ದೇವಾಲಯವನ್ನು ನಿರ್ಮಿಸಿದನು ಎಂಬುದನ್ನು ಇತಿಹಾಸವು ದೃಢೀಕರಿಸುತ್ತದೆ. ತದನಂತರ ಮಹಾರಾಜಾಧಿರಾಜ ಕುಮಾರಪಾಲನು ಕ್ರಿ.ಶ. 1169 ರಲ್ಲಿ ಅದೇ ಸ್ಥಳದಲ್ಲಿ ಐದನೇ ದೇವಾಲಯವನ್ನು ನಿರ್ಮಿಸಿದನು.

    ಈ ಶಾಸನದ ಮಹತ್ವ:

    • ಪ್ರಭಾಸ್ ಪಟಾನ್ ಸನಾತನ ಧರ್ಮದ ಆಧ್ಯಾತ್ಮಿಕ ಹೆಮ್ಮೆಯನ್ನು ಸಂಕೇತಿಸುತ್ತದೆ.
    • ಭದ್ರಕಾಳಿ ಶಾಸನವು ಸೋಲಂಕಿ ಆಡಳಿತಗಾರರು ಮತ್ತು ಭಾವಬೃಹಸ್ಪತಿಯಂತಹ ವಿದ್ವಾಂಸರ ಭಕ್ತಿಯನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಇಲ್ಲಿನ ಶ್ರೀಮಂತ ಕಲಾತ್ಮಕ, ವಾಸ್ತುಶಿಲ್ಪ ಮತ್ತು ಸಾಹಿತ್ಯಕ ಪರಂಪರೆಯು ಸ್ಫೂರ್ತಿ ನೀಡುವುದನ್ನು ಮುಂದುವರೆಸಿದೆ. ಭಕ್ತಿ ಮತ್ತು ಸ್ವಾಭಿಮಾನ ಶಾಶ್ವತವಾಗಿ ಉಳಿಯುತ್ತದೆ ಎಂಬುದನ್ನು ಇದು ದೃಢೀಕರಿಸುತ್ತದೆ.

    ಪ್ಯಾಕ್ಸ್ ಸಿಲಿಕಾ

    ಸಾಮಾನ್ಯ ಅಧ್ಯಯನ- 2/ ಅಂತರರಾಷ್ಟ್ರೀಯ ಸಂಬಂಧಗಳು, ಸಾಮಾನ್ಯ ಅಧ್ಯಯನ- 3/ ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ಪ್ಯಾಕ್ಸ್ ಸಿಲಿಕಾ ಉಪಕ್ರಮಕ್ಕೆ ಸೇರ್ಪಡೆಗೊಳ್ಳಲು ಮುಂದಿನ ತಿಂಗಳು ಭಾರತವನ್ನು ಆಹ್ವಾನಿಸಲಾಗುವುದು ಎಂದು ಅಮೆರಿಕದ ರಾಯಭಾರಿ ಘೋಷಿಸಿದ್ದಾರೆ.

    ‘ಪ್ಯಾಕ್ಸ್ ಸಿಲಿಕಾ’ ಉಪಕ್ರಮದ ಬಗ್ಗೆ:

    • ಉದ್ದೇಶ:- ಇದು ಅಮೆರಿಕ ನೇತೃತ್ವದ ಕಾರ್ಯತಂತ್ರದ ಉಪಕ್ರಮವಾಗಿದೆ. ನಿರ್ಣಾಯಕ ಖನಿಜಗಳಿಂದ ಸುರಕ್ಷಿತ, ಸಮೃದ್ಧ ಮತ್ತು ನಾವೀನ್ಯತೆ ಆಧಾರಿತ ‘ಸಿಲಿಕಾನ್ ಪೂರೈಕೆ ಸರಪಳಿ’ಯನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ.
    • ಶೃಂಗಸಭೆ:- ಮೊದಲ ಪ್ಯಾಕ್ಸ್ ಸಿಲಿಕಾ ಶೃಂಗಸಭೆಯು ಡಿಸೆಂಬರ್ 2025 ರಲ್ಲಿ ನಡೆಯಿತು. 
    • ಸದಸ್ಯ ರಾಷ್ಟ್ರಗಳು:- ಆಸ್ಟ್ರೇಲಿಯಾ, ಇಸ್ರೇಲ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ, ಯುಕೆ, ನೆದರ್ಲ್ಯಾಂಡ್ಸ್ ಮತ್ತು ಯುಎಇ ದೇಶಗಳು ಈ ಉಪಕ್ರಮಕ್ಕೆ ಸಹಿ ಹಾಕಿವೆ.
    • ಸದಸ್ಯ ರಾಷ್ಟ್ರಗಳ ವ್ಯಾಪ್ತಿ:- ಜಾಗತಿಕ ಕೃತಕ ಬುದ್ಧಿಮತ್ತೆ (AI) ಪೂರೈಕೆ ಸರಪಳಿಯನ್ನು ಸಶಕ್ತಗೊಳಿಸುವ ಅತ್ಯಂತ ಪ್ರಮುಖ ಕಂಪನಿಗಳು ಮತ್ತು ಹೂಡಿಕೆದಾರರನ್ನು ಒಟ್ಟಾರೆಯಾಗಿ ಈ ದೇಶಗಳು ಹೊಂದಿವೆ.
    • ಕತಾರ್:- ಪ್ಯಾಕ್ಸ್ ಸಿಲಿಕಾ ಉಪಕ್ರಮಕ್ಕೆ  ಸಹಿ ಹಾಕಿದ ಇತ್ತೀಚಿನ ರಾಷ್ಟ್ರವಾಗಿದೆ.

    ಮಹತ್ವ:

    • ಬಲವಂತದ ಅವಲಂಬನೆಯನ್ನು ಕಡಿಮೆ ಮಾಡುವುದು.
    • ಕೃತಕ ಬುದ್ಧಿಮತ್ತೆಗೆ ಅಡಿಪಾಯವಾಗಿರುವ ಸಾಮಗ್ರಿಗಳನ್ನು ಮತ್ತು ಸಾಮರ್ಥ್ಯಗಳನ್ನು ರಕ್ಷಿಸುವುದು.
    • ಸಮಾನ ಮನಸ್ಕ ರಾಷ್ಟ್ರಗಳು ಪರಿವರ್ತಕ ತಂತ್ರಜ್ಞಾನಗಳನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಮತ್ತು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವುದು.

    ಭಾರತಕ್ಕೆ ಇದರ ಮಹತ್ವ:

    • ಪ್ಯಾಕ್ಸ್ ಸಿಲಿಕಾ ಉಪಕ್ರಮಕ್ಕೆ ಭಾರತವು ಸೇರ್ಪಡೆಯಾಗುವುದರಿಂದ, ನಿರ್ಣಾಯಕ ಖನಿಜಗಳಿಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಭಾರತಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾದಂತಹ ಹೆಚ್ಚು ಸುರಕ್ಷಿತ ಪೂರೈಕೆದಾರರತ್ತ ತನ್ನ ಆಮದು ಮೂಲಗಳನ್ನು ವೈವಿಧ್ಯಮಯಗೊಳಿಸಲು ಇದು ನೆರವಾಗಲಿದೆ.
  • ಬೆಸ್ಕಾಂನಿಂದ ಟ್ರಾನ್ಸ್‌ಫಾರ್ಮರ್‌ಗಳ ಮೇಲ್ವಿಚಾರಣೆಗೆ DTLMS- ಮೊಬೈಲ್ ಆಪ್ ಬಿಡುಗಡೆ

    ಬೆಸ್ಕಾಂನಿಂದ ಟ್ರಾನ್ಸ್‌ಫಾರ್ಮರ್‌ಗಳ ಮೇಲ್ವಿಚಾರಣೆಗೆ DTLMS- ಮೊಬೈಲ್ ಆಪ್ ಬಿಡುಗಡೆ

    ಇದೀಗ ಸುದ್ದಿಯಲ್ಲಿದೆ:

    • ಬೆಸ್ಕಾಂ (BESCOM), ‘DTLMS- ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್ ಲೈಫ್ ಸೈಕಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್’ ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ.

    DTLMS ಬಗ್ಗೆ:

    • DTLMS ಪೂರ್ಣ ರೂಪ:- ‘ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್ ಲೈಫ್ ಸೈಕಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್’ ಅಪ್ಲಿಕೇಶನ್.
    • ಅಭಿವೃದ್ಧಿಪಡಿಸಿದವರು:- ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು (ಬೆಸ್ಕಾಂ).
    • ಪ್ರಾಥಮಿಕ ಉದ್ದೇಶ:- ಗ್ರಾಹಕರಿಗೆ ಗುಣಮಟ್ಟದ ಮತ್ತು ತಡೆರಹಿತ ವಿದ್ಯುತ್ ಸರಬರಾಜನ್ನು ಖಚಿತಪಡಿಸುವುದು.
    • ಗುರಿ ವ್ಯಾಪ್ತಿ:- ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿರುವ 5 ಲಕ್ಷಕ್ಕೂ ಹೆಚ್ಚು ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ಮೇಲ್ವಿಚಾರಣೆ ಮತ್ತು ವ್ಯವಸ್ಥಿತವಾಗಿ ತಡೆಗಟ್ಟುವ ನಿರ್ವಹಣೆಯನ್ನು ಕೈಗೊಳ್ಳಲು ಈ ವ್ಯವಸ್ಥೆಯು ಸಹಾಯ ಮಾಡುತ್ತದೆ.
    • ಕಾರ್ಯವಿಧಾನ:- ಈ ಆ್ಯಪ್ ಅಧಿಕಾರಿಗಳಿಗೆ ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ಕಾರ್ಯಾಚರಣೆ, ದುರಸ್ತಿ ಮತ್ತು ದಕ್ಷತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ.
    • ಸ್ವತ್ತುಗಳ ನೈಜ-ಸಮಯದ ಮೇಲ್ವಿಚಾರಣೆ:- ಕ್ಷೇತ್ರಾಧಿಕಾರಿಗಳು ಎಲ್ಲಾ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ವಿವರಗಳನ್ನು ನೇರವಾಗಿ ಅಪ್ಲಿಕೇಶನ್‌ಗೆ ನಮೂದಿಸಬಹುದು.
  • ಎಚ್‌ಪಿವಿ ಲಸಿಕೆ

    ಎಚ್‌ಪಿವಿ ಲಸಿಕೆ

    ಸಾಮಾನ್ಯ ಅಧ್ಯಯನ-2/ ಆರೋಗ್ಯ

    ಇದೀಗ ಸುದ್ದಿಯಲ್ಲಿದೆ: 

    • ಬೃಹತ್ ಜನಸಂಖ್ಯೆ ಆಧಾರಿತ ಅಧ್ಯಯನವೊಂದರ ಪ್ರಕಾರ, ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆಯ ಹೆಚ್ಚಿನ ವ್ಯಾಪ್ತಿಯು, ಲಸಿಕೆ ಪಡೆಯದ ಮಹಿಳೆಯರಲ್ಲೂ ಸಹ ‘ಕ್ಯಾನ್ಸರ್-ಪೂರ್ವ ಗರ್ಭಕಂಠದ ಗಾಯಗಳನ್ನು’ ಕಡಿಮೆ ಮಾಡಬಲ್ಲದು ಎಂದು ತೋರಿಸಿದೆ. ಇದು ಬಲವಾದ ‘ಸಾಮೂಹಿಕ ರೋಗನಿರೋಧಕ ಶಕ್ತಿಯ’ ಪರಿಣಾಮವನ್ನು ಎತ್ತಿ ತೋರಿಸುತ್ತದೆ.

    ಗರ್ಭಕಂಠದ ಕ್ಯಾನ್ಸರ್ (Cervical Cancer)ನ ಬಗ್ಗೆ:

    • ಗರ್ಭಕಂಠದ ಕ್ಯಾನ್ಸರ್ ಮಹಿಳೆಯ ಗರ್ಭಕಂಠದಲ್ಲಿ (ಯೋನಿಯಿಂದ ಗರ್ಭಾಶಯಕ್ಕೆ ಇರುವ ಪ್ರವೇಶ ದ್ವಾರ) ಬೆಳೆಯುತ್ತದೆ.
    • ಲೈಂಗಿಕ ಸಂಪರ್ಕದ ಮೂಲಕ ಹರಡುವಿಕೆ:- ಬಹುತೇಕ ಎಲ್ಲಾ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು (99%) ‘ಅಪಾಯಕಾರಿ ಹ್ಯೂಮನ್ ಪ್ಯಾಪಿಲೋಮವೈರಸ್’ (HPV) ಸೋಂಕಿನೊಂದಿಗೆ ಸಂಪರ್ಕ ಹೊಂದಿವೆ. ಇದು ಲೈಂಗಿಕ ಸಂಪರ್ಕದ ಮೂಲಕ ಹರಡುವ ಅತ್ಯಂತ ಸಾಮಾನ್ಯವಾದ ವೈರಸ್ ಆಗಿದೆ.
    • 4ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್:- ಇದು ವಿಶ್ವದಾದ್ಯಂತ ಮಹಿಳೆಯರಲ್ಲಿ ಕಂಡುಬರುವ 4ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ.
    • ಭಾರತದಲ್ಲಿ 2ನೇ ಅತ್ಯಂತ ಸಾಮಾನ್ಯ ವಿಧದ ಕ್ಯಾನ್ಸರ್:- ಮಹಿಳೆಯರಲ್ಲಿ ಕಂಡುಬರುವ 2ನೇ ಅತ್ಯಂತ ಸಾಮಾನ್ಯ ವಿಧದ ಕ್ಯಾನ್ಸರ್ ಇದಾಗಿದೆ.
    • ಚಿಕಿತ್ಸೆ ನೀಡಬಹುದು:- ರೋಗವನ್ನು ಮೊದಲೇ ಪತ್ತೆಹಚ್ಚಿ ಪರಿಣಾಮಕಾರಿಯಾಗಿ ನಿರ್ವಹಿಸಿದರೆ, ಅತ್ಯಂತ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದಾದ ಕ್ಯಾನ್ಸರ್ ರೂಪಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಕೂಡ ಒಂದಾಗಿದೆ.
    • ‘ಗಾರ್ಡಾಸಿಲ್’ ಮತ್ತು ‘ಸರ್ವವ್ಯಾಕ್’ ಲಸಿಕೆಗಳು:- ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ವಿರುದ್ಧ ಪ್ರಸ್ತುತ ದೇಶದಲ್ಲಿ ಎರಡು ಲಸಿಕೆಗಳು ಲಭ್ಯವಿವೆ. ಅವುಗಳೆಂದರೆ,
    1. ಮೆರ್ಕ್‌  ಅಭಿವೃದ್ಧಿ ಪಡಿಸಿದ ‘ಗಾರ್ಡಾಸಿಲ್’ 
    2. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿ ಪಡಿಸಿದ ‘ಸರ್ವವ್ಯಾಕ್’.
  • ಅಪ್ರಸ್ತುತ ಯೋಜನೆಗಳನ್ನು ವಿಲೀನಗೊಳಿಸುವಂತೆ – 2ನೇ ಆಡಳಿತ ಸುಧಾರಣಾ ಆಯೋಗ

    ಅಪ್ರಸ್ತುತ ಯೋಜನೆಗಳನ್ನು ವಿಲೀನಗೊಳಿಸುವಂತೆ – 2ನೇ ಆಡಳಿತ ಸುಧಾರಣಾ ಆಯೋಗ

    ಇದೀಗ ಸುದ್ದಿಯಲ್ಲಿದೆ: 

    • ಹೆಚ್ಚುತ್ತಿರುವ ಹಣಕಾಸಿನ ಕೊರತೆಯನ್ನು ನಿಭಾಯಿಸಲು ರಾಜಸ್ವ ವೆಚ್ಚವನ್ನು ತರ್ಕಬದ್ಧಗೊಳಿಸುವಂತೆ 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಶಿಫಾರಸು ಮಾಡಿದೆ.

    ಈ ಆಯೋಗದ ಶಿಫಾರಸು ಮತ್ತು ಉದ್ದೇಶ:

    • ಪ್ರಸ್ತಾಪಿಸಿದವರು:- ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಅವರ ನೇತೃತ್ವದ 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗ.
    • ಮೂಲ ಉದ್ದೇಶ:- ಕಳೆದ 2 ಆರ್ಥಿಕ ವರ್ಷಗಳಲ್ಲಿ ಹೆಚ್ಚಿರುವ ರಾಜಸ್ವ ಕೊರತೆಯನ್ನು ಸರಿದೂಗಿಸಲು ರಾಜಸ್ವ ವೆಚ್ಚವನ್ನು ಆದ್ಯತೆ ಮತ್ತು ತರ್ಕಬದ್ಧಗೊಳಿಸುವುದು.
    • ಆದ್ಯತೆಯ ಕ್ರಮ:- 
    • ಕಾರ್ಯಚಟುವಟಿಕೆಗೆ ಅಪ್ರಸ್ತುತವಾಗಿರುವ ಹುದ್ದೆಗಳನ್ನು ರದ್ದುಗೊಳಿಸಲು ಮತ್ತು 
    • ದೀರ್ಘಕಾಲದಿಂದ ಬಾಕಿ ಉಳಿದಿರುವ ಮುಂಚೂಣಿ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಲು. 

    ಪ್ರಮುಖ ಶಿಫಾರಸುಗಳು:

      • ಯೋಜನೆಗಳ ಪರಿಷ್ಕರಣೆ:- ಹಳೆಯದಾದ, ಅನುದಾನವಿಲ್ಲದ ಅಥವಾ ಸಾಲ ನಿರ್ವಹಣೆಯ ಭಾಗವಾಗಿರುವ ಸುಮಾರು 1,000 ಲೆಕ್ಕ ಶೀರ್ಷಿಕೆಗಳು ಅಥವಾ ಯೋಜನೆಗಳನ್ನು (ಒಟ್ಟು 2,874) ಕೊನೆಗೊಳಿಸಲು ಅಥವಾ ವಿಲೀನಗೊಳಿಸಲು ಆಯೋಗವು ಶಿಫಾರಸು ಮಾಡಿದೆ.
      • ನೇಮಕಾತಿ ಸುಧಾರಣೆಗಳು:-
    • ಹೊಸ ಹುದ್ದೆಗಳ ಸೃಜನೆಯನ್ನು ನಿರ್ಬಂಧಿಸುವುದು.
        • ವಾರ್ಷಿಕ ನೇಮಕಾತಿ ಯೋಜನೆಯನ್ನು ಜಾರಿಗೊಳಿಸುವುದು.
    • ‘ಸಿ’ ಮತ್ತು ‘ಡಿ’ ವೃಂದದ ಹುದ್ದೆಗಳಿಗೆ ಹೊರಗುತ್ತಿಗೆಯನ್ನು ಸ್ಥಗಿತಗೊಳಿಸುವುದು.

    ಸಿಬ್ಬಂದಿ ಅಂಕಿಅಂಶಗಳು:

    • ಖಾಲಿ ಹುದ್ದೆಗಳು:- 42 ಇಲಾಖೆಗಳಲ್ಲಿ ಮಂಜೂರಾದ 8.16 ಲಕ್ಷ ಹುದ್ದೆಗಳ ಪೈಕಿ 2.94 ಲಕ್ಷ ಹುದ್ದೆಗಳು ಖಾಲಿಯಿವೆ ಎಂದು ಆಯೋಗವು ಗುರುತಿಸಿದೆ.

    ಪ್ರಸ್ತುತ ಸ್ಥಿತಿ:- ಪ್ರಸ್ತುತ ಕೇವಲ 5.18 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಮತ್ತು ಸುಮಾರು 70,000 ಸಿಬ್ಬಂದಿಯನ್ನು ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಲಾಗಿದೆ.

  • ರಾಷ್ಟ್ರೀಯ ಯುವ ದಿನಾಚರಣೆ 2026

    ರಾಷ್ಟ್ರೀಯ ಯುವ ದಿನಾಚರಣೆ 2026

    ಇತರೆ ವಿಷಯಗಳು

    ಇದೀಗ ಸುದ್ದಿಯಲ್ಲಿದೆ: 

    • ಇತ್ತೀಚಿಗೆ, ಸ್ವಾಮಿ ವಿವೇಕಾನಂದ ಅವರ  ಜನ್ಮದಿನದ ಅಂಗವಾಗಿ, ಜನವರಿ 12 ರಂದು ‘ರಾಷ್ಟ್ರೀಯ ಯುವ ದಿನಾಚರಣೆ”ಯನ್ನು ಆಚರಿಸಲಾಯಿತು.

    ರಾಷ್ಟ್ರೀಯ ಯುವ ದಿನಾಚರಣೆಯ ಬಗ್ಗೆ:

    • ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮದಿನ:- ಶ್ರೇಷ್ಠ ಆಧ್ಯಾತ್ಮಿಕ ನಾಯಕ, ತತ್ವಜ್ಞಾನಿ ಮತ್ತು ಚಿಂತಕ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಜನವರಿ 12 ರಂದು ಇದನ್ನು ಆಚರಿಸಲಾಗುತ್ತದೆ.
    • ಯುವಜನರ ಸಾಮರ್ಥ್ಯದ ಮೇಲಿನ ಅವರ ಅಚಲವಾದ ನಂಬಿಕೆಯು, ದೇಶದ ಯುವ ನಾಗರಿಕರ ಮನದಲ್ಲಿ ಇಂದಿಗೂ ಆಳವಾಗಿ ಪ್ರತಿಧ್ವನಿಸುತ್ತಿದೆ.
    • ಶಿಕ್ಷಣ, ನವೋದ್ಯಮಗಳು, ಸೇವೆ ಮತ್ತು ನಾಯಕತ್ವದ ಮೂಲಕ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಭಾರತದ ಯುವಜನರ ಪ್ರಮುಖ ಪಾತ್ರವನ್ನು ‘ರಾಷ್ಟ್ರೀಯ ಯುವ ದಿನ 2026’ ಎತ್ತಿ ತೋರಿಸುತ್ತದೆ.
    • ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದ ಈ ದಿನವು, ಯುವಕರು ಕೇವಲ ಉತ್ತರಾಧಿಕಾರಿಗಳಲ್ಲ, ಬದಲಿಗೆ “2047 ರ ವಿಕಸಿತ ಭಾರತ ಕನಸಿನತ್ತ ಸಾಗುವ ಭಾರತದ ಪಯಣದ ಶಿಲ್ಪಿಗಳು” ಎಂಬುದನ್ನು ಒತ್ತಿಹೇಳುತ್ತದೆ.

    ಯುವಕರಿಗಾಗಿ ಸರ್ಕಾರದ ಉಪಕ್ರಮಗಳು:

    • ಮೇರಾ ಯುವ ಭಾರತ್ (MY Bharat): ಇದು ಸ್ವಾಯತ್ತ, ತಂತ್ರಜ್ಞಾನ ಚಾಲಿತ ವೇದಿಕೆಯಾಗಿದೆ.
    • ಸಚಿವಾಲಯ:- ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ.  
    • ಉದ್ದೇಶ:- ಇದು ಸ್ವಯಂಸೇವಕತನ, ಕೌಶಲ್ಯ ಅಭಿವೃದ್ಧಿ, ನಾಯಕತ್ವ ಮತ್ತು ಪ್ರಾಯೋಗಿಕ ಕಲಿಕೆಯ ಅವಕಾಶಗಳೊಂದಿಗೆ ಸಂಪರ್ಕ ಕಲ್ಪಿಸುವ ಮೂಲಕ ಯುವಜನರನ್ನು ಸಬಲೀಕರಣಗೊಳಿಸುತ್ತದೆ.
    • ರಾಷ್ಟ್ರೀಯ ಸೇವಾ ಯೋಜನೆ (NSS):- ಇದು 
    • ಸಚಿವಾಲಯ:- ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ.
    • ಉದ್ದೇಶ:- ಸಮುದಾಯ ಸೇವೆಯ ಮೂಲಕ ಯುವಜನರ ವ್ಯಕ್ತಿತ್ವ ವಿಕಸನ ಮಾಡುವುದು ಮತ್ತು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವುದು ಇದರ ಒಟ್ಟಾರೆ ಉದ್ದೇಶವಾಗಿದೆ.
    • ಅಗ್ನಿಪಥ ಯೋಜನೆ:- 
    • ಪ್ರಾರಂಭ:- ಕೇಂದ್ರ ಸರ್ಕಾರವು 2022 ರಲ್ಲಿ
    • ಉದ್ದೇಶ:- ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಬ್ಬರನ್ನೂ ಭಾರತದ ಮೂರೂ ಸೇನೆಗಳ ‘ಅಧಿಕಾರಿ ಹುದ್ದೆಗಿಂತ ಕೆಳಗಿನ ಶ್ರೇಣಿಗೆ’ 4 ವರ್ಷಗಳ ಅವಧಿಗೆ ‘ಅಗ್ನಿವೀರರನ್ನಾಗಿ’ ನೇಮಿಸಿಕೊಳ್ಳಲಾಗುತ್ತದೆ.
    • PM-SETU ಯೋಜನೆ:- 
    • PM-SETU ವಿಸ್ತರಿತ ರೂಪ:- ಉನ್ನತೀಕರಿಸಿದ ಐಟಿಐಗಳ ಮೂಲಕ – ಪ್ರಧಾನ ಮಂತ್ರಿ ಕೌಶಲ್ಯ ಮತ್ತು ಉದ್ಯೋಗಾರ್ಹತೆಯ ಪರಿವರ್ತನೆ ಯೋಜನೆ.
    • ಪ್ರಾರಂಭ:- 2025 ರ ಅಕ್ಟೋಬರ್‌ 
    • ಉದ್ದೇಶ:- ಇದು ಭಾರತದ ‘ಕೈಗಾರಿಕಾ ತರಬೇತಿ ಸಂಸ್ಥೆಗಳ’ (ITIs) ಜಾಲವನ್ನು ಆಧುನೀಕರಿಸಲು ಮತ್ತು ಜಾಗತಿಕ ಕೈಗರಿಕೋದ್ಯಮದ ಮಾನದಂಡಗಳೊಂದಿಗೆ ವೃತ್ತಿಪರ ತರಬೇತಿಯನ್ನು ಸಂಯೋಜಿಸಲು ರೂಪಿಸಲಾಗಿದೆ 
    • ಹಣಕಾಸಿನ ಹಂಚಿಕೆ:- ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    • ಕೌಶಲ್ಯ ಭಾರತ ಮಿಷನ್ (SIM):- 
    • ಪ್ರಾರಂಭ:- 2015 ರಲ್ಲಿ, ವಿಶ್ವ ಯುವ ಕೌಶಲ್ಯ ದಿನದಂದು.
    • ಉದ್ದೇಶ:- ಇದು ವ್ಯಾಪಕವಾದ ಕೇಂದ್ರ ಮತ್ತು ಸಂಸ್ಥೆಗಳ ಜಾಲದ ಮೂಲಕ ವ್ಯಕ್ತಿಗಳಿಗೆ ಕೌಶಲ್ಯ ತರಬೇತಿ, ಮರು-ಕೌಶಲ್ಯ ಮತ್ತು ಉನ್ನತ-ಕೌಶಲ್ಯ ತರಬೇತಿಯನ್ನು ನೀಡುತ್ತದೆ.
    • ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (PMKVY):- 
    • ಪ್ರಾರಂಭ:- 2015 
    • ಉದ್ದೇಶ:- ಅಲ್ಪಾವಧಿಯ ಕೌಶಲ್ಯ ತರಬೇತಿ ಮತ್ತು ಉನ್ನತ-ಕೌಶಲ್ಯ ಅಥವಾ ಮರು-ಕೌಶಲ್ಯ ತರಬೇತಿಯನ್ನು ಒದಗಿಸಲು. 
    • ಇದು ‘ಪೂರ್ವ ಕಲಿಕೆಯ ಗುರುತಿಸುವಿಕೆ’ಯ  ಮೂಲಕ ಭಾರತದಾದ್ಯಂತ ಯುವಜನರಿಗೆ ತರಬೇತಿ ನೀಡುವುದನ್ನು ಒಳಗೊಂಡಿದೆ.
    • ಜನ ಶಿಕ್ಷಣ ಸಂಸ್ಥಾನ (JSS) ಯೋಜನೆ:- 
    • ಪ್ರಾರಂಭ:- ಆರಂಭದಲ್ಲಿ 1967 ರಲ್ಲಿ ‘ಶ್ರಮಿಕ್ ವಿದ್ಯಾಪೀಠ’ ಎಂದು ಪ್ರಾರಂಭಿಸಲಾಯಿತು. 
    • ಉದ್ದೇಶ:- ಇದು ಅನೌಪಚಾರಿಕ ವಿಧಾನದಲ್ಲಿ ಕೌಶಲ್ಯ ತರಬೇತಿಯನ್ನು ನೀಡುವ ಉದ್ದೇಶವನ್ನು ಹೊಂದಿದೆ.
    • ರಾಷ್ಟ್ರೀಯ ಶಿಷ್ಯವೃತ್ತಿ ಉತ್ತೇಜನ ಯೋಜನೆ (NAPS):-
    • ಪ್ರಾರಂಭ:- ಆಗಸ್ಟ್ 2016
    • ಉದ್ದೇಶ:- ಶಿಷ್ಯವೃತ್ತಿ ವಿದ್ಯಾರ್ಥಿಗಳ ವೇತನಕ್ಕೆ ಹಣಕಾಸಿನ ಬೆಂಬಲವನ್ನು ಒದಗಿಸುವ ಮೂಲಕ ಶಿಷ್ಯವೃತ್ತಿಯನ್ನು ಉತ್ತೇಜಿಸುತ್ತದೆ. 
    • ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY):- 
    • ಪ್ರಾರಂಭ:- 2014
    • ಇದು ‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಕಾರ್ಯಯೋಜನೆ ‘(NRLM)ಯ ಭಾಗವಾಗಿದೆ. 
    • 2 ಪ್ರಮುಖ ಉದ್ದೇಶಗಳು:- 
    • ಗ್ರಾಮೀಣ ಬಡ ಕುಟುಂಬಗಳ ಆದಾಯ ಮೂಲಗಳಲ್ಲಿ ವೈವಿಧ್ಯತೆಯನ್ನು ತರುವುದು.
    • ಗ್ರಾಮೀಣ ಯುವಕರ ವೃತ್ತಿ ಆಕಾಂಕ್ಷೆಗಳನ್ನು ಪೂರೈಸುವುದು.
    • ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆ:- 
    • ಘೋಷಣೆ:- 2025 ರಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಘೋಷಣೆ.
    • ವೆಚ್ಚ:- ₹1 ಲಕ್ಷ ಕೋಟಿ 
    • ಆರ್ಥಿಕ ಪ್ರೋತ್ಸಾಹ:- ಇದು ಹೊಸದಾಗಿ ಉದ್ಯೋಗಕ್ಕೆ ಸೇರುವ ಯುವಜನರಿಗೆ 2 ಕಂತುಗಳಲ್ಲಿ ₹15,000 ವರೆಗಿನ ಆರ್ಥಿಕ ಪ್ರೋತ್ಸಾಹವನ್ನು ನೀಡುತ್ತದೆ.
    • ಉದ್ಯೋಗದಾತರಿಗೆ ಸಹಾಯಧನ:- ಹೆಚ್ಚುವರಿಯಾಗಿ, ಉದ್ಯೋಗದಾತರು ಪ್ರತಿ ಹೊಸ ಉದ್ಯೋಗಿಗೆ ತಿಂಗಳಿಗೆ ₹3,000 ವರೆಗೆ ಸಹಾಯಧನವನ್ನು ನೀಡುತ್ತಾರೆ. ಇದು ಹೊಸ ಉದ್ಯೋಗಾವಕಾಶಗಳ ಸೃಷ್ಟಿಯನ್ನು ಉತ್ತೇಜಿಸುತ್ತದೆ.
    • ಸ್ಟಾರ್ಟ್ಅಪ್ ಇಂಡಿಯಾ:- 
    • ಪ್ರಾರಂಭ:- 2016
    • ಉದ್ದೇಶ:- ನಾವೀನ್ಯತೆ ಮತ್ತು ಉದ್ಯಮಶೀಲತೆಗಾಗಿ ದೃಢವಾದ ಪರಿಸರ ವ್ಯವಸ್ಥೆಯನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ.
    • ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY):- 
    • ಉದ್ದೇಶ:- ಹಣಕಾಸು ಸೌಲಭ್ಯ ಪಡೆಯದ ಸೂಕ್ಷ್ಮ ಉದ್ಯಮ ಮತ್ತು ಸಣ್ಣ ವ್ಯಾಪಾರಗಳಿಗೆ ಹಣಕಾಸು ಸೌಲಭ್ಯ ಒದಗಿಸುವುದು
    • ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ (RKSK):- 
    • ಪ್ರಾರಂಭ:- 2014
    • ಸಚಿವಾಲಯ:- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.
    • ಉದ್ದೇಶ:- ಭಾರತದಾದ್ಯಂತ 10–19 ವರ್ಷದ ಕಿಶೋರರ ಸಮಗ್ರ ಆರೋಗ್ಯ ಅಗತ್ಯಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ.

    ಸ್ವಾಮಿ ವಿವೇಕಾನಂದರ ಬಗ್ಗೆ:

    • ಜನನ:- ಜನವರಿ 12, 1863 ರಂದು ಕೋಲ್ಕತ್ತಾದಲ್ಲಿ ನರೇಂದ್ರ ನಾಥ ದತ್ತ ಎಂಬ ಹೆಸರಿನಲ್ಲಿ ಜನಿಸಿದರು.
    • ಪಾಶ್ಚಿಮಾತ್ಯರಿಗೆ ಯೋಗ ಮತ್ತು ವೇದಾಂತದ ಹಿಂದೂ ತತ್ವಚಿಂತನೆಗಳನ್ನು ಪರಿಚಯಿಸುವಲ್ಲಿ ಇವರು ಪ್ರಮುಖ ವ್ಯಕ್ತಿಯಾಗಿದ್ದರು.
    • ಇವರು ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದರು. ಭಾರತದಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸುಧಾರಣೆಗೆ ತಮ್ಮನ್ನು ಮುಡಿಪಾಗಿಟ್ಟರು ಹಾಗೂ ಆರ್ಥಿಕ ಸುಧಾರಣೆ ಮತ್ತು ಆಧ್ಯಾತ್ಮಿಕ ಜ್ಞಾನದ ಬಗ್ಗೆ ಜನರಿಗೆ ಶಿಕ್ಷಣ ನೀಡಲು ದೇಶಾದ್ಯಂತ ಸಂಚರಿಸಿದರು.
    • 1893 ರಲ್ಲಿ ಚಿಕಾಗೋದಲ್ಲಿ ನಡೆದ ‘ವಿಶ್ವ ಧರ್ಮಗಳ ಸಂಸತ್ತಿನಲ್ಲಿ’ ಮಾಡಿದ ಭಾಷಣದ ಮೂಲಕ ಇವರು ಜಾಗತಿಕ ಮನ್ನಣೆಯನ್ನು ಗಳಿಸಿದರು. ಅದರಲ್ಲಿ ಅವರು ಸಾರ್ವತ್ರಿಕ ಸಹಿಷ್ಣುತೆ, ಎಲ್ಲಾ ಧರ್ಮಗಳ ಸ್ವೀಕಾರ ಮತ್ತು ಭಾರತೀಯ ಸಂಪ್ರದಾಯಗಳ ಬಗ್ಗೆ ಹೆಮ್ಮೆಯನ್ನು ಪ್ರತಿಪಾದಿಸಿದರು.
    • 1897 ರಲ್ಲಿ ರಾಮಕೃಷ್ಣ ಮಿಷನ್ ಮತ್ತು 1899 ರಲ್ಲಿ ಬೇಲೂರು ಮಠ ಸ್ಥಾಪನೆ:- ಇದು ಲೌಕಿಕ ಪ್ರಗತಿಯೊಂದಿಗೆ ಆಧ್ಯಾತ್ಮಿಕತೆಯ ಏಕೀಕರಣವನ್ನು ಉತ್ತೇಜಿಸಿತು.
    • ತಮ್ಮ ಬೋಧನೆ, ಉಪನ್ಯಾಸ ಮತ್ತು ಬರಹಗಳ ಮೂಲಕ ರಾಜ ಯೋಗ, ಜ್ಞಾನ ಯೋಗ ಮತ್ತು ಕರ್ಮ ಯೋಗ ಸೇರಿದಂತೆ ಅವರು ಯೋಗದ ಅಭ್ಯಾಸ ಮತ್ತು ‘ನವ-ವೇದಾಂತ’ದ ತತ್ವಗಳನ್ನು ಹರಡಿದರು. ಭಾರತೀಯ ಜ್ಞಾನಸಮಾಜದ ಹರಿಕಾರರಾಗಿ ಮತ್ತು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಉನ್ನತಿಯ ದಾರ್ಶನಿಕರಾಗಿ ಶಾಶ್ವತವಾದ ಪರಂಪರೆಯನ್ನು ಉಳಿಸಿದರು.
    • ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ವಿವೇಕಾನಂದರನ್ನು “ಆಧುನಿಕ ಭಾರತದ ನಿರ್ಮಾತೃ” ಎಂದು ಕರೆದಿದ್ದಾರೆ.
  • ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಹೆಚ್ಚುತ್ತಿರುವ ಬೇಡಿಕೆ

    ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಹೆಚ್ಚುತ್ತಿರುವ ಬೇಡಿಕೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ಬೆಳಗಾವಿಯಲ್ಲಿ ಮುಕ್ತಾಯವಾದ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ, ಕಿತ್ತೂರು ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿಯನ್ನು ರಚಿಸುವಂತೆ ಕೋರಿ ಆ ಭಾಗದ ಶಾಸಕರು ಸಹಿ ಮಾಡಿದ ಮನವಿಯನ್ನು ಸಲ್ಲಿಸಿದ್ದಾರೆ.

    ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿಯ ಬೇಡಿಕೆಯ ಬಗ್ಗೆ:

    • ಪ್ರಮುಖ ಬೇಡಿಕೆ:- ಕಿತ್ತೂರು ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುವಂತೆ ಈ ಮಂಡಳಿಯನ್ನು ರಚಿಸಬೇಕು ಮತ್ತು ಅದಕ್ಕೆ ವಾರ್ಷಿಕವಾಗಿ ₹5,000 ಕೋಟಿ ಅನುದಾನವನ್ನು ನೀಡಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.
    • ಪ್ರಾದೇಶಿಕ ವ್ಯಾಪ್ತಿ:- ಪ್ರಸ್ತಾಪಿತ ಮಂಡಳಿಯು ಕಿತ್ತೂರು ಕರ್ನಾಟಕ (ಹಿಂದಿನ ಮುಂಬೈ ಕರ್ನಾಟಕ) ಪ್ರದೇಶವನ್ನು ಒಳಗೊಂಡಿದೆ. ಇದು ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಮತ್ತು ಉತ್ತರ ಕನ್ನಡ ಎಂಬ 7 ಜಿಲ್ಲೆಗಳನ್ನು ಒಳಗೊಂಡಿದೆ.
    • ಶಾಸಕಾಂಗದ ಬೆಂಬಲ:- ಈ ಪ್ರದೇಶದ 56 ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಶಾಸಕರು (8 ಜನ ಸಚಿವರನ್ನು ಹೊರತುಪಡಿಸಿ) ಸಹಿ ಮಾಡಿದ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ.
    • ಸಮರ್ಥನೆ:- ಈ ಪ್ರದೇಶವು ಆರ್ಥಿಕ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಹಿಂದುಳಿದಿದೆ ಎಂದು ಈ ಬೇಡಿಕೆಯು ಎತ್ತಿ ತೋರಿಸುತ್ತದೆ. ಇತರ ಪ್ರದೇಶಗಳೊಂದಿಗಿನ ಅಂತರವನ್ನು ಕಡಿಮೆ ಮಾಡಲು ಕೈಗಾರಿಕಾ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಲ್ಲಿ ಗಮನಾರ್ಹ ಉತ್ತೇಜನದ ಅಗತ್ಯವಿದೆ ಎಂದು ಇದು ಪ್ರತಿಪಾದಿಸುತ್ತದೆ.
    • ಆರ್ಥಿಕ ಅಸಮಾನತೆ:- ಕರ್ನಾಟಕ ಆರ್ಥಿಕ ಸಮೀಕ್ಷೆ, 2024-25 ರ ಪ್ರಕಾರ, 
    • ಬೆಳಗಾವಿ ವಿಭಾಗದ ತಲಾ ಆದಾಯವು ₹2,00,457 ಆಗಿದೆ. ಇದು ಬೆಂಗಳೂರು ವಿಭಾಗ (₹5,01,383) ಮತ್ತು ಮೈಸೂರು ವಿಭಾಗದ (₹3,59,177) ತಲಾ ಆದಾಯಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.
    • ರಾಜಕೀಯ ಸಂದರ್ಭ:- ವಿದರ್ಭ ಮಾದರಿಯನ್ನು ಆಧರಿಸಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (KKRDB) ಕೇಂದ್ರದಿಂದ ಹೊಂದಾಣಿಕೆಯ ಅನುದಾನವನ್ನು ಕೋರುವ ನಿರ್ಣಯವನ್ನು ರಾಜ್ಯ ಸರ್ಕಾರ ಅಂಗೀಕರಿಸಿದ ನಂತರ ಈ ಬೇಡಿಕೆಯು ತೀವ್ರಗೊಂಡಿದೆ.
  • ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (PM-RKVY) |

    ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (PM-RKVY)

    ಸಾಮಾನ್ಯ ಅಧ್ಯಯನ- 3/ಕೃಷಿ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಕೃಷಿ ಸಚಿವಾಲಯವು ಪ್ರಸ್ತುತ ಜಾರಿಯಲ್ಲಿರುವ ಮೂರು ಪ್ರತ್ಯೇಕ ಯೋಜನೆಗಳನ್ನು, ತನ್ನ ಪ್ರಮುಖ ಯೋಜನೆಯಾದ ‘ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ’ (PM-RKVY)ಯೊಂದಿಗೆ ವಿಲೀನಗೊಳಿಸಲು ಪ್ರಸ್ತಾಪಿಸಿದೆ.

    PM-RKVY ಯೋಜನೆಯೊಂದಿಗೆ ವಿಲೀನಗೊಳ್ಳಲಿರುವ ಯೋಜನೆಗಳು:

    • ಕೃಷೋನ್ನತಿ ಯೋಜನೆ (KY) – ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    • ನೈಸರ್ಗಿಕ ಕೃಷಿಗಾಗಿ ರಾಷ್ಟ್ರೀಯ ಕಾರ್ಯಯೋಜನೆ (NMNF). ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
    • ರಾಷ್ಟ್ರೀಯ ಜೇನು ಮತ್ತು ಜೇನುತುಪ್ಪ ಕಾರ್ಯಯೋಜನೆ (NBHM). ಕೇಂದ್ರ ವಲಯದ ಯೋಜನೆಯಾಗಿದೆ.

    ಗಮನಿಸಿ: 

    ಕೇಂದ್ರ ಪ್ರಾಯೋಜಿತ ಯೋಜನೆ:- ಇವುಗಳಿಗೆ ಕೇಂದ್ರ ಮತ್ತು ರಾಜ್ಯಗಳೆರಡೂ ಜಂಟಿಯಾಗಿ ನಿಧಿಯನ್ನು ಒದಗಿಸುತ್ತವೆ ಹಾಗೂ ರಾಜ್ಯ ಸರ್ಕಾರಗಳು ಇವುಗಳನ್ನು ಅನುಷ್ಠಾನಗೊಳಿಸುತ್ತವೆ

    ಕೇಂದ್ರ ವಲಯದ ಯೋಜನೆ:- ಇದಕ್ಕೆ ಸಂಪೂರ್ಣ ನಿಧಿ ಮತ್ತು ಅನುಷ್ಠಾನವನ್ನು ಕೇಂದ್ರ ಸರ್ಕಾರವೇ ನಿರ್ವಹಿಸುತ್ತದೆ.

    ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (PM-RKVY)ಯ ಬಗ್ಗೆ:

    • 2007 ರಲ್ಲಿ ಪ್ರಾರಂಭವಾದ ಸಮಗ್ರ ಯೋಜನೆ:- ಕೃಷಿ ಮತ್ತು ಅದರ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಪ್ರಾರಂಭಿಸಲಾಗಿದೆ.
    • ನೋಡಲ್ ಸಚಿವಾಲಯ:- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ.
    • ಹಣಕಾಸಿನ ಹಂಚಿಕೆ:- ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.

    ಉದ್ದೇಶ:- ಇದು ಜಿಲ್ಲಾ ಅಥವಾ ರಾಜ್ಯ ಕೃಷಿ ಯೋಜನೆಯ ಪ್ರಕಾರ, ತಮ್ಮದೇ ಆದ ಕೃಷಿ ಮತ್ತು ಪೂರಕ ವಲಯದ ಅಭಿವೃದ್ಧಿ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳಲು ರಾಜ್ಯಗಳಿಗೆ ಅನುವು ಮಾಡಿಕೊಡುತ್ತದೆ.

  • ವಿಬಿ ಜಿ-ರಾಮ್ ಜಿ ಕಾಯ್ದೆ: ರಾಜ್ಯದ ಹಣಕಾಸಿನ ಮೇಲೆ ಪರಿಣಾಮ

    ವಿಬಿ ಜಿ-ರಾಮ್ ಜಿ ಕಾಯ್ದೆ: ರಾಜ್ಯದ ಹಣಕಾಸಿನ ಮೇಲೆ ಪರಿಣಾಮ

    ಇದೀಗ ಸುದ್ದಿಯಲ್ಲಿದೆ:

    • ಹೊಸ ಗ್ರಾಮೀಣ ಉದ್ಯೋಗ ಕಾಯ್ದೆಯು ಕೇಂದ್ರದ ನಿಧಿಯ ಮಾದರಿಯನ್ನು ವೆಚ್ಚ-ಹಂಚಿಕೆ ಮಾದರಿಯೊಂದಿಗೆ ಬದಲಾಯಿಸುತ್ತಿರುವುದರಿಂದ, ರಾಜ್ಯದ ಮೇಲಾಗುವ ಆರ್ಥಿಕ ಹೊರೆಯ ಬಗ್ಗೆ ಕಳವಳಗಳು ವ್ಯಕ್ತವಾಗಿವೆ.

    ಕರ್ನಾಟಕದ ಮೇಲೆ ಹೊಸ ಗ್ರಾಮೀಣ ಉದ್ಯೋಗ ಕಾಯ್ದೆಯ ಪರಿಣಾಮಗಳು:

    • VB-G RAM G ಪೂರ್ಣ ರೂಪ:- ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ.
    • ಹೊಸ ಕಾಯ್ದೆ:- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA) ಬದಲಿಗೆ ‘VB-G RAM G- ವಿಕಸಿತ ಭಾರತ – ಉದ್ಯೋಗಕ್ಕೆ ಖಾತ್ರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆಯನ್ನು ಜಾರಿಗೆ ತರಲಾಗಿದೆ.
    • 40% ರಷ್ಟು ಯೋಜನಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುವುದು ಕಡ್ಡಾಯ:- ಹಿಂದಿನ MGNREGA ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವೇ ಸಂಪೂರ್ಣ ವೆಚ್ಚವನ್ನು ಭರಿಸುತ್ತಿತ್ತು. ಆದರೆ, ಹೊಸ ಕಾಯ್ದೆಯ ಅನ್ವಯ ರಾಜ್ಯ ಸರ್ಕಾರವೇ ಭರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
    • ₹20,000 ಕೋಟಿಗಳಷ್ಟು ಸಂಚಿತ ಆರ್ಥಿಕ ಹೊರೆ:- ಕರ್ನಾಟಕವು ವಾರ್ಷಿಕವಾಗಿ ₹3,000 ಕೋಟಿಯಿಂದ ₹4,000 ಕೋಟಿಗಳಷ್ಟು ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದು ಮುಂದಿನ ಐದು ವರ್ಷಗಳಲ್ಲಿ ಸರಿಸುಮಾರು ₹20,000 ಕೋಟಿಗಳಷ್ಟು ಸಂಚಿತ ಹೊರೆಯನ್ನು ಉಂಟುಮಾಡಲಿದೆ.
    • ಹಣಕಾಸಿನ ಸವಾಲು:- ಜಿಎಸ್‌ಟಿ (GST) ದರಗಳ ಪರಿಷ್ಕರಣೆಯಿಂದಾಗಿ ರಾಜ್ಯವು ಈಗಾಗಲೇ ವಾರ್ಷಿಕವಾಗಿ ಸುಮಾರು ₹18,000 ಕೋಟಿಗಳಷ್ಟು ಆದಾಯ ನಷ್ಟವನ್ನು ಎದುರಿಸುತ್ತಿರುವಂತಹ ನಿರ್ಣಾಯಕ ಸಮಯದಲ್ಲಿ, ಈ ಹೆಚ್ಚುವರಿ ವೆಚ್ಚದ ಹೊರೆ ಎದುರಾಗಿದೆ.
  • ಅಮೆರಿಕ ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಂಡರೆ ನಾಟೋ (NATO)ದ ಅಂತ್ಯವನ್ನು ಸೂಚಿಸುತ್ತದೆ: ಡೆನ್ಮಾರ್ಕ್ | ಒಪೆಕ್+ (OPEC+) | ಬಯೋಹ್ಯಾಪಿನೆಸ್ (ಜೈವಿಕ ಸಂತೋಷ)

    ಅಮೆರಿಕ ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಂಡರೆ ನಾಟೋ (NATO)ದ ಅಂತ್ಯವನ್ನು ಸೂಚಿಸುತ್ತದೆ: ಡೆನ್ಮಾರ್ಕ್

    ಸಾಮಾನ್ಯ ಅಧ್ಯಯನ-2/ ಪ್ರಾದೇಶಿಕ ಗುಂಪುಗಳು

    ಇದೀಗ ಸುದ್ದಿಯಲ್ಲಿದೆ:

    • ಒಂದು ವೇಳೆ ಡೊನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಂಡರೆ, ಅದು ನ್ಯಾಟೋ (NATO) ಸೇನಾ ಮೈತ್ರಿಕೂಟದ ಅಂತ್ಯವನ್ನು ಸೂಚಿಸುತ್ತದೆ ಎಂದು ಡೆನ್ಮಾರ್ಕ್ ಪ್ರಧಾನ ಮಂತ್ರಿ ಹೇಳಿದ್ದಾರೆ.

    ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ (NATO)ಯ ಬಗ್ಗೆ:

    • ‘ಉತ್ತರ ಅಟ್ಲಾಂಟಿಕ್ ಮೈತ್ರಿಕೂಟ’:- ನ್ಯಾಟೋವನ್ನು ‘ಉತ್ತರ ಅಟ್ಲಾಂಟಿಕ್ ಮೈತ್ರಿಕೂಟ’ ಎಂತಲೂ ಕರೆಯಲಾಗುತ್ತದೆ. ಇದೊಂದು ಅಂತರ ಸರ್ಕಾರಿ ಸೇನಾ ಮೈತ್ರಿಕೂಟವಾಗಿದೆ.
    • ಕೇಂದ್ರ ಕಚೇರಿ:- ಬ್ರಸೆಲ್ಸ್ (ಬೆಲ್ಜಿಯಂ).
    • “ವಾಷಿಂಗ್ಟನ್ ಒಪ್ಪಂದ”:- 2ನೇ ಮಹಾಯುದ್ಧದ ನಂತರ ಸೋವಿಯತ್ ಒಕ್ಕೂಟದ ಆಕ್ರಮಣದ ವಿರುದ್ಧ “ಸಾಮೂಹಿಕ ರಕ್ಷಣೆ”ಯನ್ನು ಒದಗಿಸುವ ಉದ್ದೇಶದಿಂದ, ಯುರೋಪ್ ಮತ್ತು ಉತ್ತರ ಅಮೆರಿಕದ 12 ರಾಷ್ಟ್ರಗಳು 1949ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಉತ್ತರ ಅಟ್ಲಾಂಟಿಕ್ ಒಪ್ಪಂದ ಅಥವಾ ವಾಷಿಂಗ್ಟನ್ ಒಪ್ಪಂದಕ್ಕೇ ಸಹಿ ಹಾಕುವ ಮೂಲಕ ಇದನ್ನು ಅಸ್ತಿತ್ವಕ್ಕೆ ತಂದವು.
    • ವಿಧಿ 5 – ಸಾಮೂಹಿಕ ರಕ್ಷಣೆ: ಈ ಒಪ್ಪಂದದ ವಿಧಿ 5ರ ಪ್ರಕಾರ, ನ್ಯಾಟೋ ‘ಸಾಮೂಹಿಕ ರಕ್ಷಣೆ’ಯ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದರ ಅನ್ವಯ, ಯಾವುದೇ ನ್ಯಾಟೋ ಸದಸ್ಯ ರಾಷ್ಟ್ರದ ಮೇಲಿನ ದಾಳಿಯನ್ನು ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ.
    • ಇಲ್ಲಿಯವರೆಗೆ, ವಿಧಿ 5 ಅನ್ನು ಒಮ್ಮೆ ಮಾತ್ರ ಜಾರಿಗೊಳಿಸಲಾಗಿದೆ. 2001ರಲ್ಲಿ ಅಮೆರಿಕದ ಮೇಲೆ ನಡೆದ 9/11ರ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಇದನ್ನು ಬಳಸಲಾಗಿತ್ತು.
    • ಸದಸ್ಯರು:- ಇದು 32 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಅವುಗಳೆಂದರೆ,
    1. 2 ಉತ್ತರ ಅಮೆರಿಕದ ರಾಷ್ಟ್ರಗಳು (ಅಮೆರಿಕ ಮತ್ತು ಕೆನಡಾ), 
    2. 28 ಯುರೋಪಿಯನ್ ರಾಷ್ಟ್ರಗಳು,
    3. 1 ಯುರೇಷಿಯನ್ ರಾಷ್ಟ್ರ (ಟರ್ಕಿ),
    4. 2024ರಲ್ಲಿ ಸ್ವೀಡನ್ ಇದರ 32ನೇ ಸದಸ್ಯ ರಾಷ್ಟ್ರವಾಯಿತು.

    ಒಪೆಕ್+ (OPEC+)

    ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ:

    • ಪ್ರಮುಖ ಸದಸ್ಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಗಳು ಮತ್ತು ವಿಸ್ತಾರವಾಗುತ್ತಿರುವ ಭೂ-ರಾಜಕೀಯ ಅನಿಶ್ಚಿತತೆಯ ಹೊರತಾಗಿಯೂ, ಒಪೆಕ್+ (OPEC+) ಮೈತ್ರಿಕೂಟವು ತೈಲ ಉತ್ಪಾದನೆಯನ್ನು ಸ್ಥಿರವಾಗಿ ಕಾಯ್ದುಕೊಳ್ಳಲು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ.

    ಒಪೆಕ್ (OPEC) ಒಕ್ಕೂಟದ ಬಗ್ಗೆ:

      • ಸ್ಥಾಪನೆ:- 1960ರಲ್ಲಿ ಇರಾಕ್, ಇರಾನ್, ಕುವೈತ್, ಸೌದಿ ಅರೇಬಿಯಾ ಮತ್ತು ವೆನೆಜುವೆಲಾ ರಾಷ್ಟ್ರಗಳಿಂದ ಸ್ಥಾಪಿಸಲಾಯಿತು.
      • ಕೇಂದ್ರ ಕಚೇರಿ:- ವಿಯೆನ್ನಾ, ಆಸ್ಟ್ರಿಯಾ.
    • 12 ಸದಸ್ಯ ರಾಷ್ಟ್ರಗಳು:- 
    • 5 ಸಂಸ್ಥಾಪಕ ಸದಸ್ಯ ರಾಷ್ಟ್ರಗಳು:- ಇರಾಕ್, ಇರಾನ್, ಕುವೈತ್, ಸೌದಿ ಅರೇಬಿಯಾ ಮತ್ತು ವೆನೆಜುವೆಲಾ.
    • 7 ಹೆಚ್ಚುವರಿ ಸದಸ್ಯ ರಾಷ್ಟ್ರಗಳು:- ಅಲ್ಜೀರಿಯಾ, ಕಾಂಗೋ, ಈಕ್ವಟೋರಿಯಲ್ ಗಿನಿಯಾ, ಗಾಬನ್, ಲಿಬಿಯಾ, ನೈಜೀರಿಯಾ ಮತ್ತು ಯುಎಇ (UAE).

    ಒಪೆಕ್+ (OPEC+) ಒಕ್ಕೂಟದ ಬಗ್ಗೆ:

    • ಸಂಕ್ಷಿಪ್ತ ವಿವರಣೆ:- ಇದು ‘ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಸಂಘಟನೆ’ (OPEC) ಮತ್ತು 10 ‘ಒಪೆಕ್’ ಯೇತರ ರಾಷ್ಟ್ರಗಳನ್ನು ಒಳಗೊಂಡಿರುವ ತೈಲ ಉತ್ಪಾದಿಸುವ ದೇಶಗಳ ನಡುವಿನ ಪಾಲುದಾರಿಕೆಯ ಒಂದು ಒಕ್ಕೂಟವಾಗಿದೆ.
    • ಒಪೆಕ್+ ಒಕ್ಕೂಟದಲ್ಲಿರುವ 10 ಒಪೆಕ್-ಯೇತರ  ಸದಸ್ಯ ರಾಷ್ಟ್ರಗಳು (Non-OPEC members):- ರಷ್ಯಾ, ಅಜರ್‌ಬೈಜಾನ್, ಬಹ್ರೇನ್, ಬ್ರೂನಿ, ಕಜಕಿಸ್ತಾನ್, ಮೆಕ್ಸಿಕೊ, ಮಲೇಷ್ಯಾ, ಓಮನ್, ದಕ್ಷಿಣ ಸುಡಾನ್ ಮತ್ತು ಸುಡಾನ್.
    • ಒಪೆಕ್+ ನ ಮಹತ್ವ:- ಇದು ಜಾಗತಿಕ ತೈಲ ಪೂರೈಕೆಯ ಸುಮಾರು 40% ರಷ್ಟನ್ನು ನಿಯಂತ್ರಿಸುತ್ತದೆ.

    ಬಯೋಹ್ಯಾಪಿನೆಸ್ (ಜೈವಿಕ ಸಂತೋಷ)

    ಸಾಮಾನ್ಯ ಅಧ್ಯಯನ-3/ ಆರ್ಥಿಕತೆ/ ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್, ಅರುಣಾಚಲ ಪ್ರದೇಶದ ಕೆಯಿ ಪನ್ಯೋರ್ ಜಿಲ್ಲೆಯಲ್ಲಿ ‘ಬಯೋಹ್ಯಾಪಿನೆಸ್’ (ಜೈವಿಕ ಸಂತೋಷ) ಕುರಿತಾದ ಯೋಜನೆಯ ಕಾರ್ಯವನ್ನು ಆರಂಭಿಸಿದೆ.

    ಬಯೋಹ್ಯಾಪಿನೆಸ್ (ಜೈವಿಕ ಸಂತೋಷ)ನ ಬಗ್ಗೆ:

    • ಈ ಪದವನ್ನು ದಿವಂಗತ ಕೃಷಿ ವಿಜ್ಞಾನಿ ಡಾ. ಎಂ.ಎಸ್. ಸ್ವಾಮಿನಾಥನ್ ಅವರು ಪರಿಚಯಿಸಿದ್ದಾರೆ.
    • ಇದು ಮಾನವನ ಆರೋಗ್ಯ, ಪೋಷಕಾಂಶ ಮತ್ತು ಜೀವನೋಪಾಯಗಳನ್ನು ಸುಧಾರಿಸಲು ಜೀವವೈವಿಧ್ಯವನ್ನು ಸಂರಕ್ಷಿಸುವ ಮತ್ತು ಬಳಸಿಕೊಳ್ಳುವ ಮೂಲಕ ಸಾಧಿಸಲಾದ ಯೋಗಕ್ಷೇಮ ಹಾಗೂ ಪರಿಪೂರ್ಣತೆಯ ಸ್ಥಿತಿಯಾಗಿದೆ. ಇದು ಜನರು ಮತ್ತು ಪ್ರಕೃತಿಯ ನಡುವೆ ಸಾಮರಸ್ಯವನ್ನು ಉತ್ತೇಜಿಸುತ್ತದೆ.
    • ಮಹತ್ವ:- ಅರುಣಾಚಲ ಪ್ರದೇಶದ ಕೆಯಿ ಪನ್ಯೋರ್ ಜಿಲ್ಲೆಯಲ್ಲಿನ ಈ ಹೊಸ ಬಯೋಹ್ಯಾಪಿನೆಸ್ ಯೋಜನೆಯು ಅಲ್ಲಿನ ನಿವಾಸಿಗಳ ಜೀವನೋಪಾಯಗಳು, ಜಿಲ್ಲೆಯ ಕೃಷಿ-ಜೀವವೈವಿಧ್ಯ ಮತ್ತು ಅದರ ವ್ಯಾಪ್ತಿಯಲ್ಲಿರುವ ಇತರ ಪರಿಸರದ ಅಂಶಗಳ ಮೇಲೆ ಗಮನಹರಿಸಲಿದೆ.

    ನಿಮಗಿದು ತಿಳಿದಿದೆಯೇ?

    • ನಿಶಿ ಸಮುದಾಯದ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಮೂಲಕ, ‘ಕೆಯಿ ಪನ್ಯೋರ್’ ಅರುಣಾಚಲ ಪ್ರದೇಶದ 26ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು. ಇದರ ಕೇಂದ್ರ ಸ್ಥಾನವು ‘ಟೆರ್ ಗ್ಯಾಪಿನ್-ಸಮ್ ಸಾರ್ಥ್’ ನಲ್ಲಿದೆ.
  • ಕಾವೇರಿ ವನ್ಯಜೀವಿ ಧಾಮ

    ಕಾವೇರಿ ವನ್ಯಜೀವಿ ಧಾಮ

    ಇದೀಗ ಸುದ್ದಿಯಲ್ಲಿದೆ: 

    • ಕಾವೇರಿ ವನ್ಯಜೀವಿ ಧಾಮದೊಳಗೆ ನಿರ್ಮಿಸಲಾದ ನೀರು ಕೊಯ್ಲು ಹೊಂಡಗಳಿಂದಾಗಿ ಹುಲ್ಲುಗಾವಲುಗಳು ನಾಶವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

    ಪ್ರಮುಖ ಅಂಶಗಳು:

    • ಆರೋಪ:- ಅರಣ್ಯ ಇಲಾಖೆಯು ಅಗೆದಿರುವ ನೀರು ಕೊಯ್ಲು ಹೊಂಡಗಳು ನೈಸರ್ಗಿಕ ಹುಲ್ಲುಗಾವಲುಗಳ ನಾಶಕ್ಕೆ ಕಾರಣವಾಗುತ್ತಿವೆ ಎಂಬ ಆತಂಕ ವ್ಯಕ್ತವಾಗಿದೆ.
    • ಸ್ಥಳ:- ಕಾವೇರಿ ವನ್ಯಜೀವಿ ಧಾಮದೊಳಗೆ, ನಿರ್ದಿಷ್ಟವಾಗಿ ಸಂಗಮ, ಹಲಗೂರು ಮತ್ತು ಮುಗ್ಗುರು ವಲಯಗಳ ಮೇಲೆ ಈ ಚಟುವಟಿಕೆಯು ಪರಿಣಾಮ ಬೀರುತ್ತಿದೆ ಎಂದು ವರದಿಯಾಗಿದೆ.
    • ವಿಧಾನ:- ಪರಿಸರವಾದಿಗಳು ವರದಿ ಮಾಡಿರುವಂತೆ, ಈ ಹೊಂಡಗಳನ್ನು ಅಗೆಯಲು ಭಾರೀ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದ್ದು, ಇದು ಭೂದೃಶ್ಯದ ನಾಶಕ್ಕೆ ಕಾರಣವಾಗುತ್ತಿದೆ.
    • ಪರಿಸರ ಪ್ರಭಾವ:- ಈ ಹುಲ್ಲುಗಾವಲುಗಳು ಆನೆಗಳು, ಕಡವೆ, ಚುಕ್ಕೆ ಜಿಂಕೆ ಮತ್ತು ಕಾಡೆಮ್ಮೆಗಳಂತಹ ಸಸ್ಯಾಹಾರಿ ಪ್ರಾಣಿಗಳಿಗೆ ಮೇವು ಒದಗಿಸುವಲ್ಲಿ ನಿರ್ಣಾಯಕವಾಗಿವೆ.
    • ಪರಿಣಾಮ:- ನೈಸರ್ಗಿಕ ಹುಲ್ಲುಗಾವಲುಗಳ ನಾಶವು ಕಾಡು ಪ್ರಾಣಿಗಳಿಗೆ ಮೇವಿನ ಲಭ್ಯತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಂತಿಮವಾಗಿ ಇದು ಮಾನವ-ವನ್ಯಜೀವಿ ಸಂಘರ್ಷದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

    ಕಾವೇರಿ ವನ್ಯಜೀವಿ ಧಾಮದ ಬಗ್ಗೆ:

    • ಸ್ಥಳ:- ಇದು ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹರಡಿದೆ. ಇದು 2 ಉಪ-ವಿಭಾಗಗಳನ್ನು (ಹನೂರು ಮತ್ತು ಕನಕಪುರ) ಮತ್ತು 7 ವಲಯಗಳನ್ನು (ಕೊತ್ತನೂರು, ಹನೂರು, ಕೌದಳ್ಳಿ, ಗೋಪಿನಾಥಂ, ಹಲಗೂರು, ಸಂಗಮ ಮತ್ತು ಮುಗ್ಗುರು) ಒಳಗೊಂಡಿದೆ.
    • ವಿಸ್ತೀರ್ಣ:- ಪ್ರಸ್ತುತ 1,027 ಚದರ ಕಿ.ಮೀ ವರೆಗೆ ವಿಸ್ತರಿಸಲಾಗಿದೆ (ಮೂಲತಃ 1987 ರಲ್ಲಿ 510 ಚದರ ಕಿ.ಮೀ ಎಂದು ಅಧಿಸೂಚಿಸಲಾಗಿತ್ತು).
    • ಸಂಚಾರ ಪಥ:- ಇದು ಉತ್ತರದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವನ್ನು, ದಕ್ಷಿಣದಲ್ಲಿ ಬಿಳಿಗಿರಿ ರಂಗನ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದೊಂದಿಗೆ ಸಂಪರ್ಕಿಸುವ ಪ್ರಮುಖ ವನ್ಯಜೀವಿ ಸಂಚಾರ ಪಥವಾಗಿ ಕಾರ್ಯನಿರ್ವಹಿಸುತ್ತದೆ.
    • ನದಿ ವ್ಯವಸ್ಥೆಗಳು:- ಕಾವೇರಿ, ಅರ್ಕಾವತಿ ಮತ್ತು ಶಿಂಶಾ ಎಂಬ ಮೂರು ಪ್ರಮುಖ ನದಿಗಳು ಹಾಗೂ ಹಲವಾರು ಸಣ್ಣ ತೊರೆಗಳು. 
    • ಅರಣ್ಯ ವಿಧಗಳು:- ಇದು ಪ್ರಮುಖವಾಗಿ ಒಣ ಎಲೆ ಉದುರುವ ಕಾಡುಗಳು ಮತ್ತು ಕುರುಚಲು ಕಾಡುಗಳನ್ನು ಒಳಗೊಂಡಿದೆ. ಇದರೊಂದಿಗೆ, ವಿವಿಧ ಎತ್ತರಗಳಲ್ಲಿ ಕಮ್ಮರ (ಹಾರ್ಡ್‌ವಿಕ್ಯಾ) ಕಾಡುಗಳು, ನದಿ ತೀರದ ಕಾಡುಗಳು, ಶೋಲಾ, ತೇವಾಂಶವುಳ್ಳ ಎಲೆ ಉದುರುವ ಹಾಗೂ ನಿತ್ಯಹರಿದ್ವರ್ಣ ಕಾಡುಗಳಂತಹ ವೈವಿಧ್ಯಮಯ ಅರಣ್ಯ ಪ್ರಕಾರಗಳು ಇಲ್ಲಿ ಕಂಡುಬರುತ್ತವೆ.
    • ಪ್ರಮುಖ ಪ್ರಾಣಿ ಪ್ರಭೇದಗಳು:- ಹುಲಿ, ಆನೆ, ಚಿರತೆ, ತೇವಾಂಕಿ/ಜೇನು ಬ್ಯಾಜರ್ (ರಾಟೆಲ್) ಮತ್ತು ಕೊಳ್ಳೇಗಾಲದ ನೆಲದ ಹಲ್ಲಿ, ಕಾಡೆಮ್ಮೆ , ಕಾಡು ನಾಯಿ, ಕೂರೆ (ಇಲಿ ಜಿಂಕೆ) ಮತ್ತು ಮಲಬಾರ್ ದೈತ್ಯ ಅಳಿಲು ಸೇರಿವೆ.