ಸ್ವಾಹಿದ್ ದಿವಸ್ (ದಿನ)
ಸಾಮಾನ್ಯ ಅಧ್ಯಯನ -1/ಇತಿಹಾಸ; ಸಾಮಾನ್ಯ ಅಧ್ಯಯನ-2/ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಸ್ವಾಹಿದ್ ದಿವಸ್’ ಸಂದರ್ಭದಲ್ಲಿ, ಐತಿಹಾಸಿಕ ಅಸ್ಸಾಂ ಚಳವಳಿಯಲ್ಲಿ ಭಾಗವಹಿಸಿದವರ ಧೈರ್ಯವನ್ನು ಸ್ಮರಿಸಿ ಗೌರವ ಸಲ್ಲಿಸಿದರು.
“ಸ್ವಾಹಿದ್ ದಿನದ” ಬಗ್ಗೆ:
- ಇದನ್ನು ಪ್ರತಿ ವರ್ಷ ಡಿಸೆಂಬರ್ 10 ರಂದು ಆಚರಿಸಲಾಗುತ್ತದೆ.
- ಉದ್ದೇಶ:- ಅಸ್ಸಾಂ ಚಳವಳಿಯ ಸಮಯದಲ್ಲಿ ತಮ್ಮ ಪ್ರಾಣತ್ಯಾಗ ಮಾಡಿದವರನ್ನು ನೆನಪಿಸಿ ಗೌರವಿಸುವುದು.
ಅಸ್ಸಾಂ ಚಳವಳಿಯ ಬಗ್ಗೆ:
- ಇದು ಬಾಂಗ್ಲಾದೇಶದಿಂದ ನಡೆಯುತ್ತಿದ್ದ ದೊಡ್ಡ ಪ್ರಮಾಣದ ಅಕ್ರಮ ಒಳನುಸುಳುವಿಕೆಯ ವಿರುದ್ಧ, 1979 ರಲ್ಲಿ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ ಮತ್ತು ಆಲ್ ಅಸ್ಸಾಂ ಗಣ ಸಂಗ್ರಾಮ ಪರಿಷತ್ ಆರಂಭಿಸಿದ ಸಾಮೂಹಿಕ ಆಂದೋಲನವಾಗಿದೆ.
- ಈ ಚಳವಳಿಯು 1985 ರಲ್ಲಿ ಐತಿಹಾಸಿಕ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಮುಕ್ತಾಯವಾಯಿತು.
- ಈ ಒಪ್ಪಂದವು ಅಕ್ರಮ ವಿದೇಶಿಯರ ಪತ್ತೆ ಹಚ್ಚುವಿಕೆ ಮತ್ತು ಗಡಿಪಾರು ಮಾಡುವುದನ್ನು ಖಚಿತಪಡಿಸುತ್ತದೆ; ಜೊತೆಗೆ ಅಸ್ಸಾಮಿ ಅಸ್ಮಿತೆ, ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಲು ಸಾಂವಿಧಾನಿಕ, ಶಾಸನಬದ್ಧ ಮತ್ತು ಆಡಳಿತಾತ್ಮಕ ರಕ್ಷಣೆಗಳನ್ನು ಖಾತರಿಪಡಿಸುತ್ತದೆ.
ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB)
ಸಾಮಾನ್ಯ ಅಧ್ಯಯನ -3/ ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB), 2026ನೇ ಆರ್ಥಿಕ ವರ್ಷದ (FY26) ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು ಶೇ. 6.5 ರಿಂದ ಶೇ. 7.2 ಕ್ಕೆ ಹೆಚ್ಚಿಸಿದೆ.
‘ಏಷ್ಯನ್ ಅಭಿವೃದ್ಧಿ ಬ್ಯಾಂಕ್’ ನ ಬಗ್ಗೆ:
- ಏಷ್ಯಾ ಮತ್ತು ಪೆಸಿಫಿಕ್ ವಲಯದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ, 1966 ರಲ್ಲಿ ಸ್ಥಾಪಿತವಾದ ಪ್ರಾದೇಶಿಕ ಅಭಿವೃದ್ಧಿ ಬ್ಯಾಂಕ್ ಆಗಿದೆ.
- ಕೇಂದ್ರ ಕಚೇರಿ:- ಫಿಲಿಪ್ಪೀನ್ಸ್‌ನ ಮನಿಲಾದಲ್ಲಿರುವ ‘ಮಂಡಲುಯಾಂಗ್’ನಲ್ಲಿದೆ.
- ಸದಸ್ಯತ್ವ:- ಪ್ರಾದೇಶಿಕ (ಏಷ್ಯಾ-ಪೆಸಿಫಿಕ್) ಮತ್ತು ಪ್ರಾದೇಶಿಕೇತರ ದೇಶಗಳೆರಡನ್ನೂ ಒಳಗೊಂಡಿದೆ; ಏಷ್ಯಾ ಮತ್ತು ಪೆಸಿಫಿಕ್‌ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (UNESCAP) ದ ಸುಮಾರು ಮೂರನೇ ಎರಡರಷ್ಟು ಸದಸ್ಯ ರಾಷ್ಟ್ರಗಳು ಹಾಗೂ ಅಭಿವೃದ್ಧಿ ಹೊಂದಿದ ದಾನಿ ರಾಷ್ಟ್ರಗಳು ಇದರಲ್ಲಿ ಪಾಲ್ಗೊಂಡಿವೆ.
- ಭಾರತವು 1966 ರಲ್ಲಿ ಸ್ಥಾಪಕ ಸದಸ್ಯ ರಾಷ್ಟ್ರವಾಗಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಗೆ ಸೇರ್ಪಡೆಗೊಂಡಿತು.
- ಪ್ರಮುಖ ಷೇರುದಾರರು:- ಜಪಾನ್ ಮತ್ತು ಅಮೆರಿಕ (ತಲಾ 15.6%) ಸೇರಿವೆ; ನಂತರದ ಸ್ಥಾನಗಳಲ್ಲಿ ಚೀನಾ (6.4%), ಭಾರತ (6.3%) ಮತ್ತು ಆಸ್ಟ್ರೇಲಿಯಾ (5.8%) ಇವೆ. ಈ ಅಂಕಿಅಂಶಗಳು ಬ್ಯಾಂಕ್‌ನಲ್ಲಿನ ಪ್ರಾದೇಶಿಕ ಮತ್ತು ಪ್ರಾದೇಶಿಕೇತರ ಪಾಲುದಾರಿಕೆಗಳೆರಡನ್ನೂ ಪ್ರತಿಬಿಂಬಿಸುತ್ತವೆ.
ಗ್ಲೋ ಕ್ಯಾಸ್ 9 (GlowCas9)
ಸಾಮಾನ್ಯ ಅಧ್ಯಯನ -3/ ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿದೆ:
- ಡಿಎನ್‌ಎ ಪರಿಷ್ಕರಿಸುವಾಗ ಬೆಳಕನ್ನು ಹೊರಸೂಸುವ, ಹೊಸದಾಗಿ ವಿನ್ಯಾಸಗೊಳಿಸಲಾದ ‘ಕ್ರಿಸ್ಪರ್ ಕ್ಯಾಸ್ 9’ (CRISPR Cas9) ಕಿಣ್ವದ ಒಂದು ರೂಪಾಂತರವೇ ‘ಗ್ಲೋ ಕ್ಯಾಸ್ 9’ ಆಗಿದೆ.
ಗ್ಲೋಕ್ಯಾಸ್9 ನ ಬಗ್ಗೆ:
- ಇದನ್ನು ಕೋಲ್ಕತ್ತಾದ ಬೋಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಸೃಷ್ಟಿಸಲಾದ, ಸ್ವಯಂ-ಬೆಳಗುವ ಅಥವಾ ‘ಜೈವಿಕ ದೀಪ್ತಿ’ ಹೊಂದಿರುವ ‘ಕ್ರಿಸ್ಪರ್ ಕ್ಯಾಸ್9’ ಆಗಿದೆ.
- ಆಳ ಸಮುದ್ರದ ಸಿಗಡಿ ಪ್ರೋಟೀನ್‌ಗಳಿಂದ ಪಡೆಯಲಾದ ‘ವಿಭಜಿತ ನ್ಯಾನೊ-ಲೂಸಿಫೆರೇಸ್’ ಕಿಣ್ವದೊಂದಿಗೆ ಕ್ಯಾಸ್9 ಅನ್ನು ಸಂಯೋಜಿಸುವ ಮೂಲಕ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಜೀನ್ ಪರಿಷ್ಕರಿಸುವ (ಎಡಿಟಿಂಗ್) ತಂತ್ರಜ್ಞಾನದ ಬಗ್ಗೆ:
- ಇದು ಜೀವಿಯೊಂದರ ಜೀನೋಮ್‌ನಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಆನುವಂಶಿಕ ವಸ್ತುವನ್ನು ಸೇರಿಸಲು, ತೆಗೆದುಹಾಕಲು ಅಥವಾ ಬದಲಾಯಿಸಲು ಅನುವು ಮಾಡಿಕೊಡುವ ತಂತ್ರಜ್ಞಾನವಾಗಿದೆ; ಈ ಮೂಲಕ ಆ ಜೀವಿಯ ಡಿಎನ್‌ಎ ಬದಲಾವಣೆಗೆ ಅವಕಾಶ ನೀಡುತ್ತದೆ.
ಕ್ರಿಸ್ಪರ್ ಕ್ಯಾಸ್9 ತಂತ್ರಜ್ಞಾನದ ಬಗ್ಗೆ:
- ಸಂಕ್ಷಿಪ್ತ ರೂಪ:- CRISPR- ಕ್ಲಸ್ಟರ್ಡ್ ರೆಗ್ಯುಲರ್ಲಿ ಇಂಟರ್‌ಸ್ಪೇಸ್ಡ್ ಶಾರ್ಟ್ ಪ್ಯಾಲಿಂಡ್ರೋಮಿಕ್ ರಿಪೀಟ್ಸ್.
- ಮಹತ್ವ:- CRISPR ಎಂಬ ಜೀನ್ ಪರಿಷ್ಕರಿಸುವ ತಂತ್ರದ ಬಳಕೆಯೊಂದಿಗೆ, ಸಂಶೋಧಕರು ಜೀವಿಗಳ ಡಿಎನ್‌ಎ ಅನ್ನು ಮಾರ್ಪಡಿಸಬಹುದು.
- ಕಾರ್ಯವಿಧಾನ:– ಕ್ಯಾಸ್ 9 ಎಂಬ ಕಿಣ್ವವು ‘ಆಣ್ವಿಕ ಕತ್ತರಿ’ಯಂತೆ ಕಾರ್ಯನಿರ್ವಹಿಸುತ್ತದೆ. ನಿರ್ದಿಷ್ಟ ಡಿಎನ್‌ಎ ಅನುಕ್ರಮಕ್ಕೆ ನಿಖರವಾಗಿ ಹೊಂದಿಕೆಯಾಗುವಂತೆ ಸೃಷ್ಟಿಸಲಾದ ಆರ್‌ಎನ್‌ಎ ಅಣುಗಳು ಇದಕ್ಕೆ ಮಾರ್ಗದರ್ಶನ ನೀಡುತ್ತವೆ.
- ಜಿಇ (ಜೀನೋಮ್ ಪರಿಷ್ಕರಿಸುವ):– ಇದು ಯಾವುದೇ ಬಾಹ್ಯ (ಅನ್ಯ) ಜೀನ್‌ಗಳನ್ನು ಪರಿಚಯಿಸದೆಯೇ, ಜೀವಿಯೊಂದರ ಜೀನೋಮ್‌ನೊಳಗಿನ ನಿರ್ದಿಷ್ಟ ಜೀನ್‌ಗಳ ನಿಖರವಾದ ಮಾರ್ಪಾಡನ್ನು ಒಳಗೊಂಡಿರುತ್ತದೆ; ಇದು ಉದ್ದೇಶಿತ ಆನುವಂಶಿಕ ಬದಲಾವಣೆಗಳಿಗೆ ಕಾರಣವಾಗುತ್ತದೆ.
- ಜಿಎಂ (ತಳೀಯವಾಗಿ ಮಾರ್ಪಡಿಸಿದ/ಕುಲಾಂತರಿ):- ನಿರ್ದಿಷ್ಟ ಗುಣಲಕ್ಷಣಗಳು ಅಥವಾ ವೈಶಿಷ್ಟ್ಯಗಳನ್ನು ನೀಡಲು, ಸಂಬಂಧವಿಲ್ಲದ ಜೀವಿಗಳಿಂದ ಅನ್ಯ ಜೀನ್‌ಗಳನ್ನು ಜೀವಿಯೊಂದರ ಜೀನೋಮ್‌ಗೆ ಸೇರಿಸುವುದನ್ನು ಇದು ಒಳಗೊಂಡಿರುತ್ತದೆ.
ನಿಯಂತ್ರಕ ಸಂಸ್ಥೆಗಳು:
- ಜಿಇಎಸಿ (GEAC- ಅನುವಂಶಿಕ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ): ಇದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿರುವ ನಿಯಂತ್ರಕ ಸಂಸ್ಥೆಯಾಗಿದೆ. ಕುಲಾಂತರಿ ಜೀವಿಗಳನ್ನು ಮೌಲ್ಯಮಾಪನ ಮಾಡುವ ಮತ್ತು ಅನುಮೋದಿಸುವ ಜವಾಬ್ದಾರಿಯನ್ನು ಜಿಇಎಸಿ ಹೊಂದಿದೆ.
- ಜೈವಿಕ ಸುರಕ್ಷತೆಗೆ ಕಾರ್ಟಜೆನಾ ಶಿಷ್ಟಾಚಾರ (CPB): ಜೈವಿಕ ವೈವಿಧ್ಯತೆಯ ಸಮಾವೇಶದ (CBD) ಅಡಿಯಲ್ಲಿ, ಜೀವವೈವಿಧ್ಯದ ಮೇಲೆ ಪರಿಣಾಮ ಬೀರಬಹುದಾದ ಕುಲಾಂತರಿ ಜೀವಿಗಳ ಸುರಕ್ಷಿತ ನಿರ್ವಹಣೆಯನ್ನು ಇದು ಖಚಿತಪಡಿಸುತ್ತದೆ.
CITES ಪಕ್ಷಗಳ ಸಮ್ಮೇಳನ (CoP20)
ಸಾಮಾನ್ಯ ಅಧ್ಯಯನ -3/ ಪರಿಸರ
ಇದೀಗ ಸುದ್ದಿಯಲ್ಲಿದೆ:
- “ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯವರ್ಗಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶದ” (CITES) ಪಕ್ಷಗಳ ಸಮ್ಮೇಳನದ 20ನೇ ಸಭೆಯು (CoP20) ಉಜ್ಬೇಕಿಸ್ತಾನದ ಸಮರ್ಕಂಡ್‌ನಲ್ಲಿ ಮುಕ್ತಾಯಗೊಂಡಿತು. ಇದು ಈ ಸಮಾವೇಶದ 50ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.
CITES ನ ಬಗ್ಗೆ:
- ಪೂರ್ಣ ರೂಪ:- CITES- ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯವರ್ಗಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶ.
- 1963 ರಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣೆ ಒಕ್ಕೂಟ (IUCN) ದ ಸಭೆಯಲ್ಲಿ CITES ಪರಿಕಲ್ಪನೆಯನ್ನು ರೂಪಿಸಲಾಯಿತು.
- ಸ್ಥಾಪನೆ:- ಇದು 1975 ರಲ್ಲಿ ಜಾರಿಗೆ ಬಂದಿತು ಮತ್ತು 183 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
- ಕೇಂದ್ರ ಕಚೇರಿ:- ಜಿನೀವಾ (ಸ್ವಿಟ್ಜರ್ಲೆಂಡ್).
- ಆಡಳಿತ ನಿರ್ವಹಣೆ:- ವಿಶ್ವಸಂಸ್ಥೆಯು ತನ್ನ ‘ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ’ (UNEP) ವಿಭಾಗದ ಅಡಿಯಲ್ಲಿ ಇದರ ಆಡಳಿತವನ್ನು ನಿರ್ವಹಿಸುತ್ತದೆ.
- CITES ಒಪ್ಪಂದವು ಪಕ್ಷಗಳಿಗೆ (ಸದಸ್ಯ ರಾಷ್ಟ್ರಗಳಿಗೆ) ಕಾನೂನುಬದ್ಧವಾಗಿದೆ, ಆದರೆ ಇದು ರಾಷ್ಟ್ರೀಯ ಕಾನೂನುಗಳ ಸ್ಥಾನವನ್ನು ತೆಗೆದುಕೊಳ್ಳುವುದಿಲ್ಲ.
CITES ಒಳಗೊಂಡಿರುವ ಅನುಬಂಧಗಳು:
- ಅನುಬಂಧ 1:- ಇದು ಅಳಿವಿನಂಚಿನಲ್ಲಿರುವ ಮತ್ತು ವ್ಯಾಪಾರದಿಂದ ಪ್ರಭಾವಿತವಾಗಿರುವ ಅಥವಾ ಪ್ರಭಾವಿತವಾಗಬಹುದಾದ ಪ್ರಭೇದಗಳನ್ನು ಪಟ್ಟಿ ಮಾಡುತ್ತದೆ.
- ಅನುಬಂಧ 2:- ಅಳಿವಿನಂಚಿನಲ್ಲಿಲ್ಲದಿದ್ದರೂ, ಅವುಗಳ ಉಳಿವಿಗಾಗಿ ವ್ಯಾಪಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕಾದ ಅಗತ್ಯವಿರುವ ಪ್ರಭೇದಗಳನ್ನು ಈ ಪಟ್ಟಿ ಒಳಗೊಂಡಿದೆ (ಅವುಗಳ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ತಡೆಯಲು).
- ಅನುಬಂಧ 3:- ಕನಿಷ್ಠ ಒಂದು ದೇಶದಲ್ಲಿ ಸಂರಕ್ಷಿಸಲ್ಪಟ್ಟಿರುವ ಮತ್ತು ಆ ಪ್ರಭೇದಗಳ ವ್ಯಾಪಾರವನ್ನು ನಿಯಂತ್ರಿಸಲು ಇತರೆ CITES ಪಕ್ಷಗಳ (ರಾಷ್ಟ್ರಗಳ) ನೆರವು ಕೋರಲಾಗಿರುವ ಪ್ರಭೇದಗಳನ್ನು ಇದು ಒಳಗೊಂಡಿದೆ.
ಗ್ರೇಟ್ ಬ್ಯಾರಿಯರ್ ರೀಫ್ (ಹವಳದ ದಿಬ್ಬ)
ಸಾಮಾನ್ಯ ಅಧ್ಯಯನ -3/ ಪರಿಸರ
ಇದೀಗ ಸುದ್ದಿಯಲ್ಲಿದೆ:
- ತೀವ್ರ ತಾಪಮಾನದ ಒತ್ತಡ ಮತ್ತು ಅಪರೂಪದ ಹವಳದ ಕಾಯಿಲೆಯ ಸಂಯೋಜನೆಯು ಗ್ರೇಟ್ ಬ್ಯಾರಿಯರ್ ರೀಫ್‌ನ ಒಂದು ತಾಣದಲ್ಲಿ 75% ರಷ್ಟು ‘ಗೊನಿಯೊಪೊರಾ’ ಹವಳದ ಸಮುದಾಯಗಳನ್ನು ನಾಶಪಡಿಸಿದೆ.
ಹವಳದ ದಿಬ್ಬಗಳ ಬಗ್ಗೆ:
- ಹವಳದ ದಿಬ್ಬಗಳು ಭೂಮಿಯ ಮೇಲಿನ ಅತ್ಯಂತ ಜೈವಿಕ ವೈವಿಧ್ಯಮಯ ಪರಿಸರ ವ್ಯವಸ್ಥೆಗಳಾಗಿವೆ. ರಚನೆ ಮತ್ತು ಸಹಜೀವನದ ಸಂಬಂಧ – (ಕೋರಲ್ ಪಾಲಿಪ್ಸ್ + ಝೂಕ್ಸಾಂಥೆಲೆ).
- ಹವಳದ ದಿಬ್ಬಗಳನ್ನು ನಿರ್ಮಿಸಲು ಪ್ರಾಥಮಿಕವಾಗಿ ಕಾರಣವಾಗುವ ಪ್ರಾಣಿಗಳಾದ ‘ಕೋರಲ್ ಪಾಲಿಪ್ಸ್’ , ತಮ್ಮ ಅಂಗಾಂಶಗಳಲ್ಲಿ ವಾಸಿಸುವ ‘ಝೂಕ್ಸಾಂಥೆಲೆ’ ಎಂಬ ದ್ಯುತಿಸಂಶ್ಲೇಷಕ ಪಾಚಿಗಳೊಂದಿಗೆ ಸಹಜೀವನದ ಸಂಬಂಧವನ್ನು ಬೆಳೆಸಿಕೊಂಡಾಗ ಇವು ರೂಪುಗೊಳ್ಳುತ್ತವೆ.
- ರಚನೆ:- ಮುಕ್ತವಾಗಿ ಈಜುವ ಹವಳದ ಲಾರ್ವಾಗಳು, ದ್ವೀಪಗಳು ಅಥವಾ ಖಂಡಗಳ ಅಂಚುಗಳಲ್ಲಿರುವ ಮುಳುಗಿದ ಬಂಡೆಗಳಿಗೆ ಅಥವಾ ಇತರ ಗಟ್ಟಿಯಾದ ಮೇಲ್ಮೈಗಳಿಗೆ ಅಂಟಿಕೊಂಡಾಗ ಹವಳದ ದಿಬ್ಬಗಳು ರಚನೆಯಾಗಲು ಪ್ರಾರಂಭಿಸುತ್ತವೆ.
- ಹವಳವು ಪಾಚಿಗೆ ಸಂರಕ್ಷಿತ ವಾತಾವರಣವನ್ನು ಮತ್ತು ದ್ಯುತಿಸಂಶ್ಲೇಷಣೆಗೆ ಅಗತ್ಯವಿರುವ ಸಂಯುಕ್ತಗಳನ್ನು ಒದಗಿಸುತ್ತದೆ.
- ಇದರ ಪ್ರತಿಯಾಗಿ, ಪಾಚಿಯು ಹವಳಗಳ ಆಹಾರಕ್ಕಾಗಿ ಬಳಸುವ ಕಾರ್ಬೋಹೈಡ್ರೇಟ್‌ಗಳನ್ನು ಹಾಗೂ ಆಮ್ಲಜನಕವನ್ನು ಉತ್ಪಾದಿಸುತ್ತದೆ. ತ್ಯಾಜ್ಯವನ್ನು ಹೊರಹಾಕಲು ಸಹ ಪಾಚಿಯು ಹವಳಕ್ಕೆ ಸಹಾಯ ಮಾಡುತ್ತದೆ.
ಹವಳದ ದಿಬ್ಬಗಳ ರಚನೆಗೆ ಅನುಕೂಲಕರ ಪರಿಸ್ಥಿತಿಗಳು:
-
- ಕನಿಷ್ಠ 20 ಡಿಗ್ರಿ ತಾಪಮಾನವಿರುವ ಬೆಚ್ಚಗಿನ ಉಷ್ಣವಲಯದ ಸಾಗರಗಳು (30 ಡಿಗ್ರಿ ಉತ್ತರ ಮತ್ತು 25 ಡಿಗ್ರಿ ದಕ್ಷಿಣ ಅಕ್ಷಾಂಶಗಳು).
- ಹೂಳು ರಹಿತವಾದ ಸಾಗರದ ನೀರು.
- ಸ್ವಚ್ಛ ಹಾಗೂ ಪಾರದರ್ಶಕ ಸಾಗರಗಳ ನೀರಿನ ಭಾಗಗಳು (ಸೂರ್ಯನ ಬೆಳಕು ಬೀಳುವಂತಿರಬೇಕು).
- ತುಲನಾತ್ಮಕವಾಗಿ ಕಡಿಮೆ ಲವಣಾಂಶವಿರುವ ಸಾಗರದ ನೀರು.
ಹವಳದ ದಿಬ್ಬಗಳ ರಚನೆಯ ವಿಧಗಳು:
- ಅಂಚಿನ ದಿಬ್ಬಗಳು:– ಇವು ಅತ್ಯಂತ ಸಾಮಾನ್ಯವಾಗಿವೆ; ಇವು ತೀರದಿಂದ ನೇರವಾಗಿ ಸಮುದ್ರದ ಕಡೆಗೆ ಚಾಚಿಕೊಂಡಿದ್ದು, ತೀರದ ಉದ್ದಕ್ಕೂ ಮತ್ತು ದ್ವೀಪಗಳ ಸುತ್ತಲೂ ಗಡಿಗಳನ್ನು ರೂಪಿಸುತ್ತವೆ.
- ತಡೆಗೋಡೆ ದಿಬ್ಬಗಳು:- ಇವು ತೀರದ ಗಡಿಗಳಲ್ಲಿ ಬೆಳೆಯುತ್ತವೆ, ಆದರೆ ಹೆಚ್ಚಿನ ದೂರದಲ್ಲಿರುತ್ತವೆ. ಇವು ತೆರೆದ, ಸಾಮಾನ್ಯವಾಗಿ ಆಳವಾದ ನೀರಿನ ಲಗೂನ್‌ನಿಂದ ತಮ್ಮ ಪಕ್ಕದ ಭೂಭಾಗದಿಂದ ಬೇರ್ಪಟ್ಟರುತ್ತವೆ.
- ಹವಳದ ದ್ವೀಪ (ಅಟಾಲ್): ಜ್ವಾಲಾಮುಖಿ ದ್ವೀಪದ ಸುತ್ತಲೂ ರೂಪುಗೊಂಡ ಅಂಚಿನ ದಿಬ್ಬವು ಸಮುದ್ರ ಮಟ್ಟಕ್ಕಿಂತ ಸಂಪೂರ್ಣವಾಗಿ ಕೆಳಗೆ ಕುಸಿದಾಗ, ಹವಳವು ಮೇಲ್ಮುಖವಾಗಿ ಬೆಳೆಯುವುದನ್ನು ಮುಂದುವರೆಸಿದರೆ, ಒಂದು ಹವಳದ ದ್ವೀಪ (ಅಟಾಲ್) ರಚನೆಯಾಗುತ್ತದೆ. ಅಟಾಲ್‌ಗಳು ಸಾಮಾನ್ಯವಾಗಿ ವೃತ್ತಾಕಾರ ಅಥವಾ ಅಂಡಾಕಾರದಲ್ಲಿದ್ದು, ಮಧ್ಯದಲ್ಲಿ ಲಗೂನ್ ಅನ್ನು ಹೊಂದಿರುತ್ತವೆ.
ಭಾರತದಲ್ಲಿ ಹಂಚಿಕೆ:
- ಗುಜರಾತಿನ ಕಚ್ ಖಾರಿ
- ಭಾರತದ ಪಶ್ಚಿಮ ಕರಾವಳಿ
- ಲಕ್ಷದ್ವೀಪ
- ತಮಿಳುನಾಡಿನ ಮನ್ನಾರ್ ಖಾರಿ
- ಪಾಕ್ ಕೊಲ್ಲಿ
- ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ
ಅಪಾಯಗಳು:
- ವಿನಾಶಕಾರಿ ಮೀನುಗಾರಿಕೆ ಪದ್ಧತಿಗಳು, ಮಿತಿಮೀರಿದ ಮೀನುಗಾರಿಕೆ, ಅಜಾಗರೂಕ ಪ್ರವಾಸೋದ್ಯಮ, ಮಾಲಿನ್ಯ, ಹೂಳು ತುಂಬುವಿಕೆ, ಹವಳದ ಗಣಿಗಾರಿಕೆ, ಹವಾಮಾನ ಬದಲಾವಣೆ.
ಹವಳದ ವಿವರ್ಣವಾಗುವಿಕೆ/ವರ್ಣನಾಶನ (ಕೋರಲ್ ಬ್ಲೀಚಿಂಗ್):
- ತಾಪಮಾನ, ಬೆಳಕು ಅಥವಾ ಪೋಷಕಾಂಶಗಳಂತಹ ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಂದ ಹವಳಗಳು ಒತ್ತಡವನ್ನು ಎದುರಿಸಿದಾಗ, ಅವು ತಮ್ಮ ಅಂಗಾಂಶಗಳಲ್ಲಿ ವಾಸಿಸುವ ಸಹಜೀವನದ ಪಾಚಿಯಾದ ‘ಝೂಕ್ಸಾಂಥೆಲೆ’ಯನ್ನು ಹೊರಹಾಕುತ್ತವೆ. ಇದರಿಂದಾಗಿ ಅವು ಸಂಪೂರ್ಣವಾಗಿ ಬಿಳಿಯಾಗಿ ಬದಲಾಗುತ್ತವೆ. ಈ ವಿದ್ಯಮಾನವನ್ನು ‘ಹವಳದ ವಿವರ್ಣವಾಗುವಿಕೆ/ಬ್ಲೀಚಿಂಗ್’ ಎಂದು ಕರೆಯಲಾಗುತ್ತದೆ.
ಹವಳದ ವಿವರ್ಣವಾಗುವಿಕೆಗೆ ಕಾರಣಗಳು:
- ಸಮುದ್ರದ ತಾಪಮಾನದಲ್ಲಿ ಏರಿಕೆ
- ಸಾಗರದ ಆಮ್ಲೀಕರಣ
- ಸೌರ ವಿಕಿರಣ ಮತ್ತು ನೇರಳಾತೀತ ವಿಕಿರಣ
- ಸಾಂಕ್ರಾಮಿಕ ರೋಗಗಳು
- ರಾಸಾಯನಿಕ ಮಾಲಿನ್ಯ
- ಹೆಚ್ಚಿದ ಹೂಳು ತುಂಬುವಿಕೆ
- ಬೆಳಕಿನ ಕಡಿಮೆ ಲಭ್ಯತೆ (ಕದಡಿದ ಸ್ಥಿತಿ)
- ಮಾನವ ಪ್ರೇರಿತ ಅಪಾಯಗಳು
ಪಶ್ಚಿಮದ ಟ್ರಾಗೋಪನ್ (Western Tragopan)
ಸಾಮಾನ್ಯ ಅಧ್ಯಯನ- 3/ಪ್ರಭೇದಗಳು

ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿನ ಅಧ್ಯಯನಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ‘ಪಶ್ಚಿಮ ಟ್ರಾಗೋಪನ್’ ಪಕ್ಷಿಗೆ ಸೂಕ್ತವಾದ ಆವಾಸಸ್ಥಾನಗಳಿರುವುದನ್ನು ದೃಢಪಡಿಸಿವೆ; ಆದರೆ ಮಾನವ ಅಡಚಣೆ ಮತ್ತು ಆವಾಸಸ್ಥಾನಗಳ ವಿಘಟನೆಯು ಈ ಪಕ್ಷಿಯ ಉಳಿವಿಗೆ ಬಲವಾದ ಅಪಾಯವನ್ನು ಒಡ್ದುತ್ತಿದೆ.
ಪಶ್ಚಿಮ ಟ್ರಾಗೋಪನ್ ಪಕ್ಷಿಯ ಬಗ್ಗೆ:
- ಪಶ್ಚಿಮ ಟ್ರಾಗೋಪನ್, ಭಾರತದ ಅತ್ಯಂತ ಅಪರೂಪದ ಬಣ್ಣದ ಕಾಡುಕೋಳಿ ಜಾತಿ (ಫೆಸೆಂಟ್) ಗಳಲ್ಲಿ ಒಂದಾಗಿದೆ ಮತ್ತು ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿಯಾಗಿದೆ.
- ಇದು ಪ್ರಸ್ತುತ ಪಶ್ಚಿಮ ಹಿಮಾಲಯದಾದ್ಯಂತ ಸಣ್ಣ ಪ್ರಮಾಣದಲ್ಲಿ ವಿಘಟಿತ ತಾಣಗಳಲ್ಲಿ ಮಾತ್ರ ಉಳಿದುಕೊಂಡಿದೆ.
- ಕೇವಲ 3,000 ರಿಂದ 9,500 ರಷ್ಟು ಪ್ರೌಢ ಹಂತದ ಪಕ್ಷಿಗಳು ಮಾತ್ರ ಉಳಿದಿವೆ ಎಂದು ಐಯುಸಿಎನ್ ಸಂಸ್ಥೆ ಅಂದಾಜಿಸಿದೆ.
- ಅಪಾಯಗಳು: ಆವಾಸಸ್ಥಾನದ ನಾಶ, ಬೇಟೆ ಮತ್ತು ಇತರ ಮಾನವಜನ್ಯ ಕಾರಣಗಳು.
- IUCN ಕೆಂಪು ಪಟ್ಟಿಯಲ್ಲಿ:- ‘ದುರ್ಬಲ’ (VU)
- ಸಂರಕ್ಷಣಾ ಪ್ರಯತ್ನಗಳು:- ಶಿಮ್ಲಾದಲ್ಲಿರುವ ‘ಸರಾಹನ್ ಫೆಸಂಟ್ರಿ’ಯಲ್ಲಿ ಕಳೆದ ಕೆಲವು ವರ್ಷಗಳಿಂದ ಪಶ್ಚಿಮ ಟ್ರಾಗೋಪನ್‌ನ ‘ಬಂಧಿತ ಸಂತಾನೋತ್ಪತ್ತಿ’ ಯಶಸ್ವಿಯಾಗಿದೆ.



ನಿಮ್ಮದೊಂದು ಉತ್ತರ