ವಂದೇ ಮಾತರಂಗೆ 150 ವರ್ಷಗಳು | ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷ | IMF ನಿಂದ UPI ಗೆ ವಿಶ್ವದ ಅತಿದೊಡ್ಡ ‘ನೈಜ-ಸಮಯದ ಪಾವತಿ ವ್ಯವಸ್ಥೆ’ ಎಂಬ ಮನ್ನಣೆ ದೊರೆತಿದೆ | ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) | ಸಿ. ರಾಜಗೋಪಾಲಾಚಾರಿ | ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನ

ವಂದೇ ಮಾತರಂಗೆ 150 ವರ್ಷಗಳು

ಸಾಮಾನ್ಯ ಅಧ್ಯಯನ -1 / ಆಧುನಿಕ ಇತಿಹಾಸ

ಇದೀಗ ಸುದ್ದಿಯಲ್ಲಿದೆ: 

  • ಭಾರತವು ತನ್ನ ರಾಷ್ಟ್ರೀಯ ಹಾಡು (National Song) ‘ವಂದೇ ಮಾತರಂ’ನ 150ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

‘ವಂದೇ ಮಾತರಂ’ ಹಾಡಿನ ಐತಿಹಾಸಿಕ ಹಿನ್ನೆಲೆ:

  • ‘ವಂದೇ ಮಾತರಂ’ ಹಾಡನ್ನು “ಬಂಕಿಮಚಂದ್ರ ಚಟ್ಟೋಪಾಧ್ಯಾಯರು” ಸಂಸ್ಕೃತದಲ್ಲಿ ತಮ್ಮ 1882ರ ‘ಆನಂದಮಠ’ ಕಾದಂಬರಿಯಲ್ಲಿ ಮೊದಲು ಪ್ರಕಟಿಸಲಾಯಿತು.
  • ರವೀಂದ್ರನಾಥ ಟ್ಯಾಗೋರ್ ಅವರು 1896ರಲ್ಲಿ ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಈ ಹಾಡನ್ನು ಹಾಡಿದರು, ಇದು ಈ ಹಾಡಿಗೆ ರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿತು.
  • ಈ ಹಾಡು ಮಾತೃಭೂಮಿಯನ್ನು ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಮೂರ್ತರೂಪವಾಗಿ ಬಣ್ಣಿಸುತ್ತದೆ ಹಾಗೂ ಭಾರತದ ಜಾಗೃತವಾಗುತ್ತಿರುವ ರಾಷ್ಟ್ರೀಯ ಪ್ರಜ್ಞೆಗೆ ಕಾವ್ಯಾತ್ಮಕ ಧ್ವನಿಯನ್ನು ನೀಡಿತು.

ರಾಷ್ಟ್ರೀಯ ಪ್ರಜ್ಞೆಯ ಉದಯ:

  • 1905ರ ಸ್ವದೇಶಿ ಚಳವಳಿಯ ಸಂದರ್ಭದಲ್ಲಿ, ‘ವಂದೇ ಮಾತರಂ’ ನಾಗರಿಕ ಪ್ರತಿರೋಧದ ಗೀತೆ ಅಥವಾ ಮಂತ್ರವಾಗಿ ಹೊರಹೊಮ್ಮಿತು.
  • ‘ವಂದೇ ಮಾತರಂ’ ಅನ್ನು ರಾಜಕೀಯ ಘೋಷಣೆಯಾಗಿ 1905ರ ಆಗಸ್ಟ್ 7 ರಂದು ಪ್ರಪ್ರಥಮ ಬಾರಿಗೆ ಬಳಸಲಾಯಿತು.
  • ಗಲ್ಲುಶಿಕ್ಷೆಯನ್ನು ಎದುರಿಸುತ್ತಿದ್ದ ಅನೇಕ ಯುವ ಕ್ರಾಂತಿಕಾರಿಗಳಿಗೆ, ಹುತಾತ್ಮರಾಗುವ ಮುನ್ನ ‘ವಂದೇ ಮಾತರಂ’ ಎಂಬುದು ಕೊನೆಯ ಉದ್ಘೋಷವಾಗಿತ್ತು; ಇದು ಈ ಹಾಡನ್ನು ತ್ಯಾಗದ ಸಂಕೇತವನ್ನಾಗಿ ಪರಿವರ್ತಿಸಿತು.
  • 1907ರಲ್ಲಿ, ಮೇಡಂ ಭಿಕಾಜಿ ಕಾಮಾ ಅವರು ಬರ್ಲಿನ್‌ನ ಸ್ಟಟ್‌ಗಾರ್ಟ್‌ನಲ್ಲಿ ಭಾರತದ ಹೊರಗೆ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಆ ಧ್ವಜದ ಮೇಲೆ ‘ವಂದೇ ಮಾತರಂ’ ಎಂದು ಬರೆಯಲಾಗಿತ್ತು.
  • ಮಾತೃಭೂಮಿಯ ಪರಿಕಲ್ಪನೆಯನ್ನು ಒಂದು ಧ್ಯೇಯ ಮತ್ತು ಧಾರ್ಮಿಕ ಭಾವನೆಯಾಗಿ ಉತ್ತೇಜಿಸಲು, 1905ರ ಅಕ್ಟೋಬರ್‌ನಲ್ಲಿ ಉತ್ತರ ಕಲ್ಕತ್ತಾದಲ್ಲಿ ‘ಬಂದೇ ಮಾತರಂ ಸಂಪ್ರದಾಯ’ವನ್ನು ಸ್ಥಾಪಿಸಲಾಯಿತು.
  • 1906ರಲ್ಲಿ, ಬಿಪಿನ್ ಚಂದ್ರ ಪಾಲ್ ಅವರ ಸಂಪಾದಕತ್ವದಲ್ಲಿ ‘ಬಂದೇ ಮಾತರಂ’ ಎಂಬ ಶೀರ್ಷಿಕೆಯ ಇಂಗ್ಲಿಷ್ ದಿನಪತ್ರಿಕೆಯನ್ನು ಪ್ರಾರಂಭಿಸಲಾಯಿತು; ನಂತರ ಅರವಿಂದೋ ಅವರು ಜಂಟಿ ಸಂಪಾದಕರಾಗಿ ಇದಕ್ಕೆ ಜೊತೆಯಾದರು.

ರಾಷ್ಟ್ರೀಯ ಹಾಡು (National Song):

  • ಸ್ವಾತಂತ್ರ್ಯದ ನಂತರ, ಸಂವಿಧಾನ ರಚನಾ ಸಭೆಯು ‘ವಂದೇ ಮಾತರಂ’ನ ಸ್ಥಾನಮಾನದ ಕುರಿತು ಚರ್ಚಿಸಿತು.
  • 1950ರ ಜನವರಿ 24ರಂದು, ಇದರ ಮೊದಲ ಎರಡು ಚರಣಗಳನ್ನು ಭಾರತದ ‘ರಾಷ್ಟ್ರೀಯ ಹಾಡು’ ಎಂದು ಅಂಗೀಕರಿಸಲಾಯಿತು.

ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಬಗ್ಗೆ:

  • ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು ಆಧುನಿಕ ಭಾರತೀಯ ಸಾಹಿತ್ಯದ ನಿರ್ಮಾತೃಗಳಲ್ಲಿ ಒಬ್ಬರಾಗಿದ್ದಾರೆ.
  • ಪ್ರಖ್ಯಾತ ಕಾದಂಬರಿಕಾರ, ಕವಿ ಮತ್ತು ಪ್ರಬಂಧಕಾರರಾಗಿದ್ದ ಇವರ ಕೊಡುಗೆಗಳು, ಆಧುನಿಕ ಬಂಗಾಳಿ ಗದ್ಯದ ಬೆಳವಣಿಗೆ ಮತ್ತು ಉದಯೋನ್ಮುಖ ಭಾರತೀಯ ರಾಷ್ಟ್ರೀಯತೆಯ ಅಭಿವ್ಯಕ್ತಿಯ ಮೇಲೆ ಗಮನಾರ್ಹ ಪ್ರಭಾವ ಬೀರಿದವು.
  • ಕೃತಿಗಳು: ದುರ್ಗೇಶನಂದಿನಿ (1865), ಕಪಾಲಕುಂಡಲ (1866), ಆನಂದಮಠ (1882) ಮತ್ತು ದೇವಿ ಚೌಧುರಾಣಿ (1884). ಇತ್ಯಾದಿ

ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷ

ಸಾಮಾನ್ಯ ಅಧ್ಯಯನ-2 / ಅಂತರರಾಷ್ಟ್ರೀಯ ಸಂಬಂಧಗಳು

ಇದೀಗ ಸುದ್ದಿಯಲ್ಲಿದೆ: 

  • ಇತ್ತೀಚೆಗೆ, ಥೈಲ್ಯಾಂಡ್ ದೇಶವು ಕಾಂಬೋಡಿಯಾದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಗಳನ್ನು ನಡೆಸಿತು.

ಹಿನ್ನೆಲೆ:

  • ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷವು 1907ರಲ್ಲಿ ಫ್ರೆಂಚರು ಕೈಗೊಂಡ ವಸಾಹತುಶಾಹಿ ಕಾಲದ ‘ಗಡಿ ನಿರ್ಣಯಗಳಿಗೆ’ ಸಂಬಂಧಿಸಿದ ದೀರ್ಘಕಾಲದ ಪ್ರಾದೇಶಿಕ ವಿವಾದವನ್ನು ಆಧರಿಸಿದೆ.
  • ಈ ವಿವಾದದ ಕೇಂದ್ರಬಿಂದು ‘ಪ್ರಿಹ ವಿಹಾರ್ ದೇವಾಲಯ’ವಾಗಿದೆ. ಸಾಂಸ್ಕೃತಿಕವಾಗಿ ಮಹತ್ವಪೂರ್ಣವಾದ 11-12ನೇ ಶತಮಾನದ ಈ ಖಮೇರ್ ದೇಗುಲದ ಮೇಲೆ ಎರಡೂ ರಾಷ್ಟ್ರಗಳು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿವೆ.
  • ಅಂತರರಾಷ್ಟ್ರೀಯ ನ್ಯಾಯಾಲಯವು (ICJ) 1962ರಲ್ಲಿ (ಮತ್ತು 2013ರಲ್ಲಿ ಮರುದೃಢೀಕರಿಸಿ), ಕಾಂಬೋಡಿಯಾದ ಸಾರ್ವಭೌಮತ್ವವನ್ನು ಎತ್ತಿಹಿಡಿದಿದೆ. ಆದಾಗ್ಯೂ, ಥೈಲ್ಯಾಂಡ್ ಈ ತೀರ್ಪುಗಳನ್ನು ತಿರಸ್ಕರಿಸಿದ್ದು, ಈ ಪ್ರದೇಶವು ತೀವ್ರವಾಗಿ ಸೈನ್ಯದ ನಿಯಂತ್ರಣಕ್ಕೆ ಒಳಪಡಿಸಲಾಗಿದೆ.

IMF ನಿಂದ UPI ಗೆ ವಿಶ್ವದ ಅತಿದೊಡ್ಡ ‘ನೈಜ-ಸಮಯದ ಪಾವತಿ ವ್ಯವಸ್ಥೆ’ ಎಂಬ ಮನ್ನಣೆ ದೊರೆತಿದೆ

ಸಾಮಾನ್ಯ ಅಧ್ಯಯನ- 3/ಅರ್ಥವ್ಯವಸ್ಥೆ

ಇದೀಗ ಸುದ್ದಿಯಲ್ಲಿದೆ: 

  • ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಜೂನ್ 2025 ರ ತನ್ನ “ಬೆಳೆಯುತ್ತಿರುವ ಚಿಲ್ಲರೆ ಡಿಜಿಟಲ್ ಪಾವತಿಗಳ (ಪರಸ್ಪರ ಕಾರ್ಯಸಾಧ್ಯತೆಯ ಮೌಲ್ಯ)” ವರದಿಯಲ್ಲಿ, ವಹಿವಾಟಿನ ಪ್ರಮಾಣದ ಆಧಾರದ ಮೇಲೆ ‘ಏಕೀಕೃತ ಪಾವತಿ ವ್ಯವಸ್ಥೆ’ (UPI) ಯನ್ನು ವಿಶ್ವದ ಅತಿದೊಡ್ಡ ‘ಚಿಲ್ಲರೆ ತ್ವರಿತ ಪಾವತಿ ವ್ಯವಸ್ಥೆ’ ಎಂದು ಗುರುತಿಸಿದೆ.

ಏಕೀಕೃತ ಪಾವತಿ ವ್ಯವಸ್ಥೆ (UPI) ಯ ಬಗ್ಗೆ: 

  • ಆರಂಭ: UPI ಅನ್ನು ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) 2016 ರಲ್ಲಿ ವಿನ್ಯಾಸಗೊಳಿಸಿ, ಜಾರಿಗೆ ತಂದಿತು.
  • ಉದ್ದೇಶ: ಇದೊಂದು ಏಕೀಕೃತ ವ್ಯವಸ್ಥೆಯಾಗಿದ್ದು, ಒಂದೇ ಮೊಬೈಲ್ ಅಪ್ಲಿಕೇಶನ್ ಮೂಲಕ (ಯಾವುದೇ ಪಾಲ್ಗೊಳ್ಳುವ ಬ್ಯಾಂಕ್‌ನ) ಅನೇಕ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದು ವಿವಿಧ ಬ್ಯಾಂಕಿಂಗ್ ವೈಶಿಷ್ಟ್ಯಗಳು, ಸುಗಮ ಹಣ ವರ್ಗಾವಣೆ ಮತ್ತು ವ್ಯಾಪಾರ ಪಾವತಿ  ಸೌಲಭ್ಯಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುತ್ತದೆ.
  • ಕಾರ್ಯನಿರ್ವಹಿಸುತ್ತಿರುವ ಅಥವಾ ಯೋಜಿತ ‘ಪರಸ್ಪರ ಕಾರ್ಯಸಾಧ್ಯತೆ’ಯನ್ನು ಹೊಂದಿರುವ ದೇಶಗಳು: ಸಿಂಗಾಪುರ (PayNow), ಯುಎಇ, ಫ್ರಾನ್ಸ್, ನೇಪಾಳ, ಭೂತಾನ್, ಮಾರಿಷಸ್, ಶ್ರೀಲಂಕಾ, ಇಂಡೋನೇಷ್ಯಾ ಮತ್ತು ಇತರೆ.

ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ದ ಬಗ್ಗೆ:

  • ಸ್ಥಾಪನೆ: ಇದು ಭಾರತದಲ್ಲಿನ ಚಿಲ್ಲರೆ ಪಾವತಿಗಳ ಕಾರ್ಯಾವನ್ನು ನಿರ್ವಹಿಸುವ ಒಂದು ‘ಸರ್ವೋಚ್ಚ (ಪ್ರಧಾನ) ಸಂಸ್ಥೆ’ಯಾಗಿ ಕಾರ್ಯನಿರ್ವಹಿಸುತ್ತದೆ.
  • ಸ್ಥಾಪಿಸಿದವರು: ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಜಂಟಿಯಾಗಿ ಇದನ್ನು ಸ್ಥಾಪಿಸಿವೆ.
  • ಇದನ್ನು ‘ಪಾವತಿ ಮತ್ತು ನಿವಾರಣ ವ್ಯವಸ್ಥೆಗಳ ಕಾಯ್ದೆ, 2007’ ರ ನಿಬಂಧನೆಗಳ ಅಡಿಯಲ್ಲಿ ಸ್ಥಾಪಿಸಲಾಗಿದೆ.

NPCI ನ ಉತ್ಪನ್ನಗಳು: 

  • ರುಪೇ (RuPay)
  • ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC)
  • ಭಾರತ್ ಇಂಟರ್‌ಫೇಸ್ ಫಾರ್ ಮನಿ (BHIM)
  • ಏಕೀಕೃತ ಪಾವತಿ ವ್ಯವಸ್ಥೆ (UPI)
  • ಭಾರತ್ ಬಿಲ್ ಪಾವತಿ ವ್ಯವಸ್ಥೆ

ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA)

ಸಾಮಾನ್ಯ ಅಧ್ಯಯನ – 3/ ಪರಿಸರ

ಇದೀಗ ಸುದ್ದಿಯಲ್ಲಿದೆ: 

  • ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA) ದ  ಅಡಿಯಲ್ಲಿನ ‘ದೊಡ್ಡ ಬೆಕ್ಕುಗಳ ಸಂರಕ್ಷಣೆಗಾಗಿ ಸಹಯೋಗದ ಉಪಕ್ರಮ’ದ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ಮಾತನಾಡಿದರು.

ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ  (IBCA) ದ ಬಗ್ಗೆ: 

  • ಪ್ರಧಾನ ಕಚೇರಿ: ಭಾರತ.
  • ಉದ್ದೇಶ : ಇದು ದೊಡ್ಡ ಬೆಕ್ಕು (ವನ್ಯ ಮಾರ್ಜಾಲ) ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ಪ್ರಭೇದಗಳು ಕಂಡುಬರುವ ವ್ಯಾಪ್ತಿಯ 95 ದೇಶಗಳ ಬಹು-ರಾಷ್ಟ್ರ ಹಾಗೂ ಬಹು- ಸಂಸ್ಥೆಗಳ ಒಕ್ಕೂಟವಾಗಿದೆ.
  • ಆರಂಭ : 2023 ರಲ್ಲಿ ‘ಪ್ರಾಜೆಕ್ಟ್ ಟೈಗರ್‌ನ 50 ವರ್ಷಗಳ ಸ್ಮರಣಾರ್ಥ’ ಆಯೋಜಿಸಲಾದ ಕಾರ್ಯಕ್ರಮದ ವೇಳೆ, ಭಾರತದ ಪ್ರಧಾನ ಮಂತ್ರಿಯವರು IBCA ಗೆ ಚಾಲನೆ ನೀಡಿದರು.
  • ಗುರಿ:- ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪೂಮಾ ಎಂಬ ಏಳು ಪ್ರಮುಖ ದೊಡ್ಡ ಬೆಕ್ಕು ಪ್ರಭೇದಗಳನ್ನು ಸಂರಕ್ಷಿಸುವುದು.

ಸದಸ್ಯ ರಾಷ್ಟ್ರಗಳು:- ನಿಕರಾಗುವಾ, ಈಸ್ವಾತಿನಿ, ಭಾರತ, ಸೊಮಾಲಿಯಾ ಮತ್ತು ಲೈಬೀರಿಯಾ.

ದೊಡ್ಡ ಬೆಕ್ಕುಗಳು 

ದೈಹಿಕ ನೋಟ

IUCN ಸ್ಥಿತಿಗತಿ

CITES ಸ್ಥಿತಿಗತಿ

ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 (ಭಾರತ)

ಹುಲಿ (ಪ್ಯಾಂಥೆರಾ ಟೈಗ್ರಿಸ್)

ಅಳಿವಿನಂಚಿನಲ್ಲಿರುವ (EN)

ಅನುಬಂಧ I

ಅನುಸೂಚಿ 1

ಸಿಂಹ (ಪ್ಯಾಂಥೆರಾ ಲಿಯೋ)

ದುರ್ಬಲ (VU)

ಅನುಬಂಧ I

ಅನುಸೂಚಿ 1

ಚಿರತೆ (ಪ್ಯಾಂಥೆರಾ ಪಾರ್ಡಸ್)

ದುರ್ಬಲ (VU)

ಅನುಬಂಧ I

ಅನುಸೂಚಿ 1

ಹಿಮ ಚಿರತೆ (ಪ್ಯಾಂಥೆರಾ ಉನ್ಸಿಯಾ)

ದುರ್ಬಲ (VU)

ಅನುಬಂಧ I

ಅನುಸೂಚಿ 1

ಚೀತಾ (ಅಸಿನೋನಿಕ್ಸ್ ಜುಬಾಟಸ್)

ದುರ್ಬಲ (VU)

ಅನುಬಂಧ I

ಅನುಸೂಚಿ 1

ಜಾಗ್ವಾರ್ (ಪ್ಯಾಂಥೆರಾ ಓಂಕಾ)

ಬಹುತೇಕ ಅಳಿವಿನಂಚಿನಲ್ಲಿರುವ (NT)

ಅನುಬಂಧ I

ಭಾರತದಲ್ಲಿ ಕಂಡುಬರುವುದಿಲ್ಲ

ಪೂಮಾ (ಪೂಮಾ ಕಾನ್ಕಲರ್)

ಕನಿಷ್ಠ ಕಾಳಜಿ (LT)

ಅನುಬಂಧ I

ಭಾರತದಲ್ಲಿ ಕಂಡುಬರುವುದಿಲ್ಲ

ಸಿ. ರಾಜಗೋಪಾಲಾಚಾರಿ

ಸಾಮಾನ್ಯ ಅಧ್ಯಯನ-1/ಇತಿಹಾಸ

ಇದೀಗ ಸುದ್ದಿಯಲ್ಲಿ: 

  • ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ‘ರಾಜಾಜಿ’ ಎಂದೇ ಜನಪ್ರಿಯರಾಗಿದ್ದ ಸಿ. ರಾಜಗೋಪಾಲಾಚಾರಿ ಅವರ ಜನ್ಮ ದಿನವಾದ ಡಿಸೆಂಬರ್ 10 ರಂದು ಅವರಿಗೆ ಗೌರವ ನಮನ ಸಲ್ಲಿಸಿದರು.

ಸಿ. ರಾಜಗೋಪಾಲಾಚಾರಿ ಅವರ ಬಗ್ಗೆ:

ಆರಂಭಿಕ ಜೀವನ ಮತ್ತು ಶಿಕ್ಷಣ:

  • ಇವರು ಮಹಾತ್ಮ ಗಾಂಧೀಜಿಯವರ ಆಪ್ತ ಸಹವರ್ತಿಯಾಗಿದ್ದರು.
  • ಕಾನೂನು ಪದವಿಯನ್ನು (1899) ಪೂರೈಸಿ, ಸೇಲಂನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.
  • ಲಾರ್ಡ್ ಕರ್ಜನ್‌ನ 1905ರ ಬಂಗಾಳ ವಿಭಜನೆ ನೀತಿ ಮತ್ತು ತಿಲಕರ “ಸ್ವರಾಜ್ಯ”ದ ಕರೆಯು ಇವರ ಆರಂಭಿಕ ರಾಜಕೀಯ ಪ್ರಜ್ಞೆಯನ್ನು ರೂಪಿಸಿತು.

ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಳು:

    • 1919ರಲ್ಲಿ ತಮ್ಮ ವಕೀಲಿ ವೃತ್ತಿಯನ್ನು ತ್ಯಜಿಸಿದ ರಾಜಗೋಪಾಲಾಚಾರಿ ಅವರು, ರೌಲತ್ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳು, ಅಸಹಕಾರ ಚಳವಳಿ, ವೈಕೋಮ್ ಸತ್ಯಾಗ್ರಹ ಮತ್ತು ನಾಗರಿಕ ಅಸಹಕಾರ ಚಳುವಳಿ ಸೇರಿದಂತೆ ಹಲವು ಪ್ರಮುಖ ಹೋರಾಟಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
  • ಗಾಂಧೀಜಿಯವರ ದಂಡಿ ಯಾತ್ರೆಗೆ ಸಮಾಂತರವಾಗಿ ಮದ್ರಾಸ್ ಪ್ರಾಂತ್ಯದಲ್ಲಿ 1930ರ ವೇದಾರಣ್ಯಂ ಉಪ್ಪಿನ ಸತ್ಯಾಗ್ರಹದ ನೇತೃತ್ವ ವಹಿಸಿದರು.
  • “ಭಾರತ ಬಿಟ್ಟು ತೊಲಗಿ” ಚಳುವಳಿಯ ನಂತರ, ಪಾಕಿಸ್ತಾನದ ವಿಷಯವಾಗಿ ಮುಸ್ಲಿಂ ಲೀಗ್‌ನೊಂದಿಗೆ ಉಂಟಾಗಿದ್ದ ಸಾಂವಿಧಾನಿಕ ಬಿಕ್ಕಟ್ಟನ್ನು ಪರಿಹರಿಸಲು ಸಿ.ಆರ್. ಸೂತ್ರವನ್ನು ಪ್ರಸ್ತಾಪಿಸುವ “ದಿ ವೇ ಔಟ್” ಕೃತಿಯನ್ನು ಪ್ರಕಟಿಸಿದರು.

ಸ್ವಾತಂತ್ರ್ಯಾ ನಂತರದ ಕೊಡುಗೆಗಳು:

  • ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡರು ಮತ್ತು ತದನಂತರ ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ (1947–1950) ಆಗಿ ಸೇವೆ ಸಲ್ಲಿಸಿದರು.
  • ಭಾರತದ ಜಾತ್ಯತೀತ ಸ್ವರೂಪವನ್ನು ಕಾಪಾಡಲು ಮತ್ತು ಮುಸ್ಲಿಮರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ಸೇರಿಸಲು ಶ್ರಮಿಸಿದರು.
  • ಸರ್ದಾರ್ ಪಟೇಲ್ ಅವರ ನಿಧನದ ನಂತರ ಕೇಂದ್ರ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದರು; ರಾಷ್ಟ್ರೀಯ ಏಕೀಕರಣ ಮತ್ತು ಮೊದಲ ಪಂಚವಾರ್ಷಿಕ ಯೋಜನೆ ಸೇರಿದಂತೆ ದೇಶದ ಆರಂಭಿಕ ಯೋಜನಾ ಪ್ರಕ್ರಿಯೆಗಳಿಗೆ ಮಹತ್ವದ ಕೊಡುಗೆ ನೀಡಿದರು.
  • ‘ಭಾರತ ರತ್ನ’:- ರಾಜಕೀಯ, ಸಾಹಿತ್ಯ ಮತ್ತು ಸಾರ್ವಜನಿಕ ಸೇವೆಗೆ ನೀಡಿದ ಅನನ್ಯ ಕೊಡುಗೆಗಳಿಗಾಗಿ ಇವರಿಗೆ 1954ರಲ್ಲಿ ‘ಭಾರತ ರತ್ನ’ ಪುರಸ್ಕಾರ ನೀಡಿ ಗೌರವಿಸಲಾಯಿತು.

‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನ

ಸಾಮಾನ್ಯ ಅಧ್ಯಯನ-2/ಆಡಳಿತ + ಸಾಮಾನ್ಯ ಅಧ್ಯಯನ-3/ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ: 

  • ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಾಗರಿಕರಿಗೆ ಕರೆ ನೀಡಿದರು.

‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನದ ಬಗ್ಗೆ:

  • ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನವು ಒಂದು ಮಹತ್ವಾಕಾಂಕ್ಷೆಯ ಉಪಕ್ರಮವಾಗಿದ್ದು, ಅಕ್ಟೋಬರ್ 2025ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
  • ನಾಗರಿಕರು ತಮ್ಮ ಹಕ್ಕಿನ ಸ್ವತ್ತುಗಳನ್ನು ಮರುಪಡೆಯುವುದನ್ನು ಖಾತ್ರಿಪಡಿಸಿಕೊಳ್ಳಲು ಇದನ್ನು ವಿನ್ಯಾಸಗೊಳಿಸಲಾಗಿದೆ.
  • ಗುರಿ:- ಹಕ್ಕು ಕೋರದ ಠೇವಣಿಗಳು, ವಿಮಾ ಮೊತ್ತಗಳು, ಲಾಭಾಂಶಗಳು ಮತ್ತು ಇತರ ಹಣಕಾಸಿನ ಸ್ವತ್ತುಗಳನ್ನು ಮರುಪಡೆಯಲು ಜನರಿಗೆ ನೆರವಾಗುವ ಗುರಿಯನ್ನು ಇದು ಹೊಂದಿದೆ.
  • ಮಹತ್ವ:- ಇದು ವ್ಯಕ್ತಿಗಳಿಗೆ ತಮ್ಮ ಮರೆತುಹೋದ ಹಣಕಾಸಿನ ಸ್ವತ್ತುಗಳನ್ನು, ಬಳಸಬಹುದಾದ ನಿಧಿಗಳನ್ನಾಗಿ ಪರಿವರ್ತಿಸಲು ಒಂದು ಅವಕಾಶವನ್ನು ಕಲ್ಪಿಸುತ್ತದೆ.

ಇದು ನಿಮಗೆ ತಿಳಿದಿದೆಯೇ?

  • ಪ್ರಸ್ತುತವಾಗಿ, ಭಾರತೀಯ ಬ್ಯಾಂಕುಗಳು ಸುಮಾರು ₹78,000 ಕೋಟಿ ಮೊತ್ತದ ಹಕ್ಕು ಕೋರದ ಠೇವಣಿಗಳನ್ನು ಹೊಂದಿವೆ.
  • ವಿಮಾ ಕಂಪನಿಗಳಲ್ಲಿ ಸುಮಾರು ₹14,000 ಕೋಟಿ, ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಸುಮಾರು ₹3,000 ಕೋಟಿ ಹಾಗೂ ಹಕ್ಕು ಕೋರದ ಲಾಭಾಂಶಗಳ ಮೊತ್ತವು ಸ್ಥೂಲವಾಗಿ ₹9,000 ಕೋಟಿಯಷ್ಟಿದೆ.

ವಿವಿಧ ಉಪಕ್ರಮಗಳು

ನಿಧಿಗಳ ಸುಲಭ ಪತ್ತೆ ಮತ್ತು ಹಕ್ಕು ಕೋರುವಿಕೆಯನ್ನು ಸಕ್ರಿಯಗೊಳಿಸಲು ಈ ಕೆಳಗಿನ ಮೀಸಲಾದ ಆನ್‌ಲೈನ್ ಪೋರ್ಟಲ್‌ಗಳನ್ನು ರಚಿಸಲಾಗಿದೆ:

  • ಹಕ್ಕು ಕೋರದ ಬ್ಯಾಂಕ್ ಠೇವಣಿಗಳಿಗಾಗಿ ಆರ್‌ಬಿಐ ನ ಉದ್ಗಮ್ ಪೋರ್ಟಲ್.
  • ಹಕ್ಕು ಕೋರದ ವಿಮಾ ಮೊತ್ತಗಳಿಗಾಗಿ ಐಆರ್‌ಡಿಎಐ ನ ಬಿಮಾ ಭರೋಸಾ ಪೋರ್ಟಲ್.
  • ಹಕ್ಕು ಕೋರದ ಮ್ಯೂಚುವಲ್ ಫಂಡ್ ಮೊತ್ತಗಳಿಗಾಗಿ ಸೆಬಿಯ ಮಿತ್ರ ಪೋರ್ಟಲ್.
  • ಪಾವತಿಯಾಗದ ಲಾಭಾಂಶಗಳು ಮತ್ತು ಹಕ್ಕು ಕೋರದ ಷೇರುಗಳಿಗಾಗಿ ಐಇಪಿಎಫ್‌ಎ ಪೋರ್ಟಲ್ (IEPFA Portal).

ಗ್ರಾಮೀಣ ಮತ್ತು ದೂರದ ಪ್ರದೇಶಗಳ ಮೇಲೆ ವಿಶೇಷ ಗಮನಹರಿಸಿ, ದೇಶದಾದ್ಯಂತ 477 ಜಿಲ್ಲೆಗಳಲ್ಲಿ ಸೌಲಭ್ಯ ಶಿಬಿರಗಳನ್ನು ಆಯೋಜಿಸಲಾಗಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts