ರೋಹಿಂಗ್ಯಾ ಗಡಿಪಾರು ಪ್ರಕರಣದ ಕುರಿತು ಸರ್ವೋಚ್ಚ ನ್ಯಾಯಾಲಯದ ವಿಚಾರಣೆ
ಸಾಮಾನ್ಯ ಅಧ್ಯಯನ– 2 / ಆಡಳಿತ / ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಕಳೆದ ಮೇ ತಿಂಗಳಿಂದ ದೆಹಲಿ ಪೊಲೀಸರ ವಶದಲ್ಲಿದ್ದ ಹಲವಾರು ರೋಹಿಂಗ್ಯಾ ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ, ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿದ್ದ ‘ಹೇಬಿಯಸ್ ಕಾರ್ಪಸ್’ (ಬಂದಿ ಪ್ರತ್ಯಕ್ಷೀಕರಣ) ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸಿತು.
ರೋಹಿಂಗ್ಯಾ ಬಿಕ್ಕಟ್ಟಿನ ಬಗ್ಗೆ:
- ರೋಹಿಂಗ್ಯಾ: ಇವರು ಪ್ರಧಾನವಾಗಿ ಪಶ್ಚಿಮ ಮ್ಯಾನ್ಮಾರ್‌ನ ರಾಖಿಣಿ ಪ್ರಾಂತ್ಯದಲ್ಲಿ ನೆಲೆಸಿರುವ, ಬಹುತೇಕ ಮುಸ್ಲಿಂ ಸಮುದಾಯವನ್ನು ಒಳಗೊಂಡ ಒಂದು ಜನಾಂಗೀಯ ಗುಂಪಿಗೆ ಸೇರಿದ್ದಾರೆ.
- ಮ್ಯಾನ್ಮಾರ್ ಸರ್ಕಾರವು ಇವರನ್ನು ದೇಶದ ಪ್ರಜೆಗಳೆಂದು ಪರಿಗಣಿಸದೆ, ‘ಅಕ್ರಮ ವಲಸಿಗರು’ ಮತ್ತು ‘ವಿದೇಶಿ ನಿವಾಸಿಗಳು’ ಎಂದು ವರ್ಗೀಕರಿಸಿದೆ.
ನಿರಾಶ್ರಿತರ ಸ್ಥಾನಮಾನಕ್ಕೆ ಸಂಬಂಧಿಸಿದ ಸಮಾವೇಶದ ಬಗ್ಗೆ:
- ಈ ಸಮಾವೇಶವನ್ನು ‘1951ರ ನಿರಾಶ್ರಿತರ ಸಮಾವೇಶ’ ಎಂದೂ ಕರೆಯಲಾಗುತ್ತದೆ.
- ಜೀವ ಬೆದರಿಕೆ ಅಥವಾ ಸ್ವಾತಂತ್ರ್ಯ ಹರಣದ ಸಾಧ್ಯತೆಯಿರುವ ದೇಶಗಳಿಗೆ ನಿರಾಶ್ರಿತರನ್ನು ಬಲವಂತವಾಗಿ ಹಿಂದಿರುಗಿಸಬಾರದು ಎಂದು ವಿಶ್ವಸಂಸ್ಥೆಯ ಈ ಒಪ್ಪಂದವು ಬಲವಾಗಿ ಪ್ರತಿಪಾದಿಸುತ್ತದೆ.
- ಭಾರತವು ಈ ಸಮಾವೇಶಕ್ಕೆ ಸಹಿದಾರ ರಾಷ್ಟ್ರವಾಗಿಲ್ಲ.
ನಾಗರೀಕ ಮತ್ತು ರಾಜಕೀಯ ಹಕ್ಕುಗಳ ಮೇಲಿನ ಅಂತರರಾಷ್ಟ್ರೀಯ ಒಡಂಬಡಿಕೆ (ICCPR) ಯ ಬಗ್ಗೆ:
- ಅಂಗೀಕಾರ: ಇದು 1966ರಲ್ಲಿ ವಿಶ್ವಸಂಸ್ಥೆಯಿಂದ ಅಂಗೀಕರಿಸಲ್ಪಟ್ಟ ಬಹುಪಕ್ಷೀಯ ಒಪ್ಪಂದವಾಗಿದೆ.
- ಈ ಒಡಂಬಡಿಕೆಯು, ಜೀವಿಸುವ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಸಭೆ ಸೇರುವ ಸ್ವಾತಂತ್ರ್ಯ, ಚುನಾವಣಾ ಹಕ್ಕುಗಳು ಹಾಗೂ ಸೂಕ್ತ ಕಾನೂನು ಪ್ರಕ್ರಿಯೆ ಮತ್ತು ನ್ಯಾಯಯುತ ವಿಚಾರಣೆಯ ಹಕ್ಕುಗಳನ್ನು ಒಳಗೊಂಡಂತೆ, ವ್ಯಕ್ತಿಗಳ ನಾಗರೀಕ ಮತ್ತು ರಾಜಕೀಯ ಹಕ್ಕುಗಳನ್ನು ಗೌರವಿಸಲು ತನ್ನ ಸದಸ್ಯ ರಾಷ್ಟ್ರಗಳಿಗೆ ಬದ್ಧತೆಯನ್ನು ವಿಧಿಸುತ್ತದೆ.
ರೋಹಿಂಗ್ಯಾಗಳ ಕುರಿತು ಭಾರತದ ನಿಲುವು:
- ಆಪರೇಷನ್ ಇನ್ಸಾನಿಯತ್: ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳಿಗೆ ಮಾನವೀಯ ನೆರವು ಒದಗಿಸುವ ಉದ್ದೇಶದಿಂದ ಭಾರತವು 2017ರಲ್ಲಿ “ಆಪರೇಷನ್ ಇನ್ಸಾನಿಯತ್” ಅನ್ನು ಪ್ರಾರಂಭಿಸಿತು.
ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ (IBC)
ಸಾಮಾನ್ಯ ಅಧ್ಯಯನ- 3 / ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ವ್ಯವಸ್ಥಿತ ಅಸಮರ್ಥತೆಗಳು ಮತ್ತು ರಚನಾತ್ಮಕ ವಿಳಂಬಗಳು ಭಾರತದ ‘ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ ’ಯ ಪರಿಣಾಮಕಾರಿತ್ವವನ್ನು ಕುಗ್ಗಿಸುತ್ತಿವೆ ಎಂದು ಇತ್ತೀಚೆಗೆ ಹಣಕಾಸಿನ ಮೇಲಿನ ಸಂಸದೀಯ ಸ್ಥಾಯಿ ಸಮಿತಿಯು ಎಚ್ಚರಿಸಿದೆ.
‘ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ ’ 2016 ರ ಬಗ್ಗೆ:
- ಇದು ಕಂಪನಿಗಳಲ್ಲಿ ಮತ್ತು ವ್ಯಕ್ತಿಗಳಲ್ಲಿನ ದಿವಾಳಿತನವನ್ನು ಪರಿಹರಿಸಲು ಕಾಲಮಿತಿಯ ಪ್ರಕ್ರಿಯೆಯನ್ನು ಒದಗಿಸುತ್ತದೆ.
- ಹಣಕಾಸು ನಷ್ಟ (Insolvency) ದ ವ್ಯಾಖ್ಯಾನ: ಇದು ವ್ಯಕ್ತಿಗಳು ಅಥವಾ ಕಂಪನಿಗಳು ತಮ್ಮ ಬಾಕಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಒಂದು ಪರಿಸ್ಥಿತಿಯಾಗಿದೆ.
- ದಿವಾಳಿ (Bankruptcy) ವ್ಯಾಖ್ಯಾನ: ಇದು ಸಕ್ಷಮ ಅಧಿಕಾರ ವ್ಯಾಪ್ತಿಯ ನ್ಯಾಯಾಲಯವು ವ್ಯಕ್ತಿ ಅಥವಾ ಇತರ ಘಟಕವನ್ನು ‘ದಿವಾಳಿ’ ಎಂದು ಘೋಷಿಸಿ, ಅದನ್ನು ಇತ್ಯರ್ಥಪಡಿಸಲು ಮತ್ತು ಸಾಲದಾತರ ಹಕ್ಕುಗಳನ್ನು ರಕ್ಷಿಸಲು ಸೂಕ್ತ ಆದೇಶಗಳನ್ನು ಹೊರಡಿಸುವ ಪರಿಸ್ಥಿತಿಯಾಗಿದೆ. ಇದು ಸಾಲಗಳನ್ನು ತೀರಿಸುವಲ್ಲಿನ ಅಸಮರ್ಥತೆಯ ಕಾನೂನುಬದ್ಧ ಘೋಷಣೆಯಾಗಿದೆ.
- ಮಹತ್ವ: ಇದು ಅಡೆತಡೆಗಳನ್ನು ನಿವಾರಿಸುವ, ಕಾರ್ಪೊರೇಟ್ ದಿವಾಳಿ ಪರಿಹಾರ ಪ್ರಕ್ರಿಯೆಯನ್ನು ಸರಳೀಕರಿಸುವ ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ವಲಯಗಳಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಅಂತಿಮ ಹಂತದ ಆರ್ಥಿಕ ನೆರವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.
ನ್ಯಾಯ ನಿರ್ಣಯ ಪ್ರಾಧಿಕಾರ:
- ಕಂಪನಿ ಮತ್ತು ಎಲ್‌ಎಲ್‌ಪಿ ಗಳಿಗೆ: ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT).
- ವ್ಯಕ್ತಿಗಳು ಮತ್ತು ಪಾಲುದಾರಿಕೆ ಸಂಸ್ಥೆಗಳಿಗೆ: ಸಾಲ ವಸೂಲಾತಿ ನ್ಯಾಯಮಂಡಳಿ (DRT).
ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಯ ಬಗ್ಗೆ: ಶಸ್ತ್ರಾಸ್ತ್ರ
- ಸ್ಥಾಪನೆ: ಇದು ಕಂಪನಿಗಳ ಕಾಯ್ದೆ, 2013ರ ಉಪಬಂಧ 408ರ ಅಡಿಯಲ್ಲಿ 2016ರಲ್ಲಿ ರಚಿಸಲಾದ ಒಂದು ಅರೆ-ನ್ಯಾಯಾಂಗ ಸಂಸ್ಥೆಯಾಗಿದೆ.
- ದಿವಾಳಿತನ ಮತ್ತು ಕಂಪನಿಗಳ ಮುಚ್ಚುವಿಕೆಗೆ ಸಂಬಂಧಿಸಿದ ಕಾನೂನಿನ ಮೇಲಿನ ವಿ. ಬಾಲಕೃಷ್ಣ ಎರಾಡಿ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಈ ನ್ಯಾಯಮಂಡಳಿಯನ್ನು ಸ್ಥಾಪಿಸಲಾಗಿದೆ.
- ಉದ್ದೇಶ: ಈ ನ್ಯಾಯಮಂಡಳಿಯು ಮುಖ್ಯವಾಗಿ ಕಂಪನಿಗಳ ಕಾಯ್ದೆ ಮತ್ತು ದಿವಾಳಿ ಕಾನೂನಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುತ್ತದೆ.
ಇಂಗಾಲದ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆ (CCUS)
ಸಾಮಾನ್ಯ ಅಧ್ಯಯನ–3 / ಪರಿಸರ
ಇದೀಗ ಸುದ್ದಿಯಲ್ಲಿದೆ:
- ಇಂಗಾಲದ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆ (CCUS) ತಂತ್ರಜ್ಞಾನದ ಮೂಲಕ ಭಾರತದ ‘ನಿವ್ವಳ ಶೂನ್ಯ’ ಹೊರಸೂಸುವಿಕೆ ಗುರಿಗಳನ್ನು ತಲುಪಲು ನೆರವಾಗುವ, ದೇಶದ ಮೊಟ್ಟಮೊದಲ ‘ಸಂಶೋಧನೆ ಮತ್ತು ಅಭಿವೃದ್ಧಿ ಮಾರ್ಗಸೂಚಿ’ಯನ್ನು ಬಿಡುಗಡೆ ಮಾಡಲಾಗಿದೆ.
ಇಂಗಾಲದ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆ (CCUS) ಯ ಬಗ್ಗೆ:
- ಇದು ಕೈಗಾರಿಕಾ ಸ್ಥಾವರಗಳು, ವಿದ್ಯುತ್ ಉತ್ಪಾದನಾ ಕೇಂದ್ರಗಳು ಅಥವಾ ಇತರೆ ಹೊರಸೂಸುವ ಮೂಲಗಳಿಂದ ಇಂಗಾಲದ ಡೈಆಕ್ಸೈಡ್ (CO₂) ಅನ್ನು ಸೆರೆಹಿಡಿಯುವ ಪ್ರಕ್ರಿಯೆಯಾಗಿದೆ.
- ಹೀಗೆ ಸೆರೆಹಿಡಿದ ಇಂಗಾಲವನ್ನು ಮರುಬಳಕೆ ಮಾಡಲಾಗುತ್ತದೆ ಅಥವಾ ಅದನ್ನು ಶಾಶ್ವತವಾಗಿ ಸಂಗ್ರಹಿಸಿಡಲಾಗುತ್ತದೆ. ಉದಾಹರಣೆಗೆ: ಭೂಗರ್ಭದ ಆಳವಾದ ಶಿಲಾಸ್ತರಗಳಲ್ಲಿ ಸಂಗ್ರಹಿಸುವುದು.
- ಉದ್ದೇಶಿತ ಬಳಕೆಯ ಮಾರ್ಗಗಳು: ಸೆರೆಹಿಡಿದ CO₂ ಅನ್ನು ಮೌಲ್ಯವರ್ಧಿತ ಉತ್ಪನ್ನಗಳನ್ನಾಗಿ ಪರಿವರ್ತಿಸುವುದನ್ನು ಈ ಮಾರ್ಗಸೂಚಿ ಒಳಗೊಂಡಿದೆ. ಉದಾಹರಣೆಗೆ: ಹಸಿರು ಯೂರಿಯಾ (ರಸಗೊಬ್ಬರ), ಕಟ್ಟಡ ನಿರ್ಮಾಣ ಸಾಮಗ್ರಿಗಳು (ಕಾಂಕ್ರೀಟ್, ಜಲ್ಲಿ/ಅಗ್ಗಿ್ರಗೇಟ್ಸ್), ರಾಸಾಯನಿಕಗಳು (ಮೆಥನಾಲ್, ಎಥನಾಲ್), ಪಾಲಿಮರ್‌ಗಳು ಮತ್ತು ಜೈವಿಕ ಪ್ಲಾಸ್ಟಿಕ್‌ಗಳು.
|
ನಿಮಗಿದು ಗೊತ್ತೇ ?
|
ತೂಕ ಇಳಿಕೆಗಾಗಿ GLP-1 ಔಷಧಗಳ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲ
ಸಾಮಾನ್ಯ ಅಧ್ಯಯನ– 2 / ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
- ಸ್ಥೂಲಕಾಯ ಅಥವಾ ಬೊಜ್ಜು ನಿರ್ವಹಣೆಗಾಗಿ ‘ಗ್ಲುಕಗನ್-ಲೈಕ್ ಪೆಪ್ಟೈಡ್-1’ (GLP-1) ಚಿಕಿತ್ಸೆಗಳನ್ನು ಬಳಸುವ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ಇದೇ ಮೊದಲ ಬಾರಿಗೆ ಅಧಿಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
‘ಗ್ಲುಕಗನ್-ಲೈಕ್ ಪೆಪ್ಟೈಡ್-1’ (GLP-1) ಚಿಕಿತ್ಸೆಗಳ ಬಗ್ಗೆ:
- GLP-1 ಚಿಕಿತ್ಸೆಗಳು (ಗ್ಲುಕಗನ್-ಲೈಕ್ ಪೆಪ್ಟೈಡ್-1 ರಿಸೆಪ್ಟರ್ ಅಗೊನಿಸ್ಟ್‌ಗಳು) ಒಂದು ನಿರ್ದಿಷ್ಟ ವರ್ಗದ ಔಷಧಗಳಾಗಿವೆ.
- ಇವು ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ GLP-1 ಹಾರ್ಮೋನ್ ಅನ್ನು ಅನುಕರಿಸುತ್ತವೆ.
- ಈ ಹಾರ್ಮೋನ್ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಈ ಮೂಲಕ ತೂಕ ಇಳಿಕೆಗೆ ಸಹಕಾರಿಯಾಗುತ್ತದೆ.
ಸ್ಥೂಲಕಾಯ (ಬೊಜ್ಜು) ದ ಬಗ್ಗೆ:
- ಇದು ದೇಹದಲ್ಲಿ ಅತಿಯಾದ ಕೊಬ್ಬಿನ ಶೇಖರಣೆಯಿಂದ ಉಂಟಾಗುವ ದೀರ್ಘಕಾಲದ ಸಂಕೀರ್ಣ ಕಾಯಿಲೆಯಾಗಿದೆ.
- ಇದು ‘ಟೈಪ್ 2 ಮಧುಮೇಹ’ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ಇದು ಮೂಳೆಗಳ ಆರೋಗ್ಯ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೂ ದುಷ್ಪರಿಣಾಮ ಬೀರಬಹುದು.
- ಇದು ನಿರ್ದಿಷ್ಟ ಬಗೆಯ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುವುದಲ್ಲದೆ, ನಿದ್ರೆ ಅಥವಾ ದೈಹಿಕ ಚಲನೆಯಂತಹ ಜೀವನದ ಗುಣಮಟ್ಟದ ಮೇಲೂ ಋಣಾತ್ಮಕ ಪ್ರಭಾವ ಬೀರುತ್ತದೆ.
- ಭಾರತದ ಅಂಕಿ-ಅಂಶ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ (NFHS-5) ದತ್ತಾಂಶದ ಪ್ರಕಾರ, ಭಾರತದಲ್ಲಿ 24% ರಷ್ಟು ಮಹಿಳೆಯರು ಮತ್ತು 23% ರಷ್ಟು ಪುರುಷರು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಸಮಗ್ರ ಶಿಕ್ಷಣ ಯೋಜನೆ
ಸಾಮಾನ್ಯ ಅಧ್ಯಯನ– 2 / ಕಲ್ಯಾಣ ಯೋಜನೆಗಳು
ಇದೀಗ ಸುದ್ದಿಯಲ್ಲಿದೆ:
- ‘ಸಮಗ್ರ ಶಿಕ್ಷಣ ಯೋಜನೆ’ಯ ಅಡಿಯಲ್ಲಿ ಕೇಂದ್ರದ ಅನುದಾನವನ್ನು ಬಿಡುಗಡೆ ಮಾಡಿಸಿಕೊಳ್ಳಲು, ರಾಜ್ಯಗಳು ಕಡ್ಡಾಯವಾಗಿ ಈ ಯೋಜನೆಯ ಷರತ್ತುಗಳನ್ನು ಪಾಲಿಸಲೇಬೇಕು ಎಂದು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಸಮಗ್ರ ಶಿಕ್ಷಣ ಯೋಜನೆಯ ಬಗ್ಗೆ:
- ಪ್ರಾರಂಭ: ಈ ಯೋಜನೆಯನ್ನು 2018-19ನೇ ಸಾಲಿನಲ್ಲಿ ಜಾರಿಗೆ ತರಲಾಯಿತು.
- ಹಣಕಾಸು ನೆರವು: ಇದೊಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
- ಉದ್ದೇಶ: ಪೂರ್ವ ಪ್ರಾಥಮಿಕ ಹಂತದಿಂದ ಹಿಡಿದು 12ನೇ ತರಗತಿಯವರೆಗೆ ಎಲ್ಲರಿಗೂ ಸಮಾನ, ಅಂತರ್ಗತ ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
- ವೈಶಿಷ್ಟ್ಯಗಳು: ಈ ಯೋಜನೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿವಿಧ ಶೈಕ್ಷಣಿಕ ಸುಧಾರಣಾ ಕ್ರಮಗಳ ಮೂಲಕ ಬೆಂಬಲ ನೀಡುತ್ತದೆ. ಇದರಲ್ಲಿ ಸಂಯೋಜಿತ ಶಾಲಾ ಅನುದಾನಗಳು, ಗ್ರಂಥಾಲಯಗಳ ಅಭಿವೃದ್ಧಿ, ಕ್ರೀಡೆ, ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳ ವಿತರಣೆ, ಐಸಿಟಿ ಉಪಕ್ರಮಗಳು, ಪರಿಹಾರಾತ್ಮಕ ಬೋಧನೆ ಮತ್ತು ನಾಯಕತ್ವದ ಗುಣಮಟ್ಟ ವೃದ್ಧಿಯಂತಹ ಅಂಶಗಳು ಸೇರಿವೆ.
ಮಹತ್ವ: ಈ ಯೋಜನೆಯು ‘ರಾಷ್ಟ್ರೀಯ ಶಿಕ್ಷಣ ನೀತಿ 2020′ರ ಆಶಯಗಳಿಗೆ ಅನುಗುಣವಾಗಿ ರೂಪಿತವಾಗಿದೆ.
ಮಲೇರಿಯಾ ಪರಾವಲಂಬಿಗಳು
ಸಾಮಾನ್ಯ ಅಧ್ಯಯನ– 2 / ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
- ಸೊಳ್ಳೆಗಳ ಕಚ್ಚುವಿಕೆಯ ಮೂಲಕ ಮಾನವನ ದೇಹವನ್ನು ಪ್ರವೇಶಿಸುವ ಮಲೇರಿಯಾದ ಸಾಂಕ್ರಾಮಿಕ ರೂಪಗಳಾದ ‘ಮಲೇರಿಯಾ ಸ್ಪೋರೋಜೋಯೈಟ್‌ಗಳು’, ಚರ್ಮದ ಅಡಿಯಲ್ಲಿ ಬಲಗೈ ಸುರುಳಿಯಾಕಾರದ ಪಥಗಳಲ್ಲಿ ಚಲಿಸುತ್ತವೆ ಎಂದು ಇತ್ತೀಚಿನ ‘ನೇಚರ್ ಫಿಸಿಕ್ಸ್’ ಅಧ್ಯಯನವು ಬಹಿರಂಗಪಡಿಸಿದೆ.
ಮಲೇರಿಯಾ ರೋಗದ ಬಗ್ಗೆ:
- ರೋಗಕಾರಕ ಜೀವಿ: ಮಲೇರಿಯಾವು ‘ಪ್ಲಾಸ್ಮೋಡಿಯಂ‘ ಎಂಬ ಪರಾವಲಂಬಿ ಜೀವಿಗಳಿಂದ ಉಂಟಾಗುವ ತೀವ್ರ ಸ್ವರೂಪದ ಜ್ವರದ ಕಾಯಿಲೆಯಾಗಿದೆ.
- ರೋಗವಾಹಕ: ಇದು ಸೋಂಕಿತ ಹೆಣ್ಣು ‘ಅನಾಫಿಲಿಸ್‘ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದೊಂದು ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ರೋಗವಾಗಿದೆ.
- ಹರಡುವಿಕೆ: ಮಲೇರಿಯಾವು ನೇರ ಸಂಪರ್ಕದಿಂದ ಹರಡುವ ಸಾಂಕ್ರಾಮಿಕ ರೋಗವಲ್ಲ. ಇದು ಸ್ಪರ್ಶದ ಮೂಲಕ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುವುದಿಲ್ಲ; ಕೇವಲ ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆಯ ಕಚ್ಚುವಿಕೆಯಿಂದ ಮಾತ್ರವೇ ಇದು ಹರಡುತ್ತದೆ.
- ಪ್ರಭೇದಗಳು: ಮನುಷ್ಯರಲ್ಲಿ ಮಲೇರಿಯಾವನ್ನು ಉಂಟುಮಾಡುವ 5 ಪರಾವಲಂಬಿ ಪ್ರಭೇದಗಳಿವೆ. ಇವುಗಳಲ್ಲಿ ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ ಮತ್ತು ಪ್ಲಾಸ್ಮೋಡಿಯಂ ವೈವಾಕ್ಸ್ – ಇವೆರಡು ಅತಿ ಹೆಚ್ಚು ಅಪಾಯಕಾರಿಯಾದ ಪ್ರಭೇದಗಳಾಗಿವೆ.
ರೋಗದ ಲಕ್ಷಣಗಳು:
- ಶಿಶುಗಳು, 5 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು (ಎಚ್ಐವಿ /ಏಡ್ಸ್ ರೋಗಿಗಳು) ಮತ್ತು ಪ್ರಯಾಣಿಕರು ಈ ರೋಗಕ್ಕೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ತೀವ್ರತರವಾದ ರೋಗಲಕ್ಷಣಗಳು ಈ ಕೆಳಗಿನಂತಿವೆ:
- ಅತಿಯಾದ ಸುಸ್ತು ಮತ್ತು ಬಳಲಿಕೆ.
- ಪ್ರಜ್ಞಾಹೀನತೆ ಅಥವಾ ಪ್ರಜ್ಞೆ ತಪ್ಪುವುದು.
- ಪದೇ ಪದೇ ಸೆಳೆತಗಳು ಬರುವುದು.
- ಉಸಿರಾಟದ ತೊಂದರೆ.
- ಗಾಢ ಬಣ್ಣದ ಅಥವಾ ರಕ್ತ ಮಿಶ್ರಿತ ಮೂತ್ರ ವಿಸರ್ಜನೆ.
- ಕಾಮಾಲೆ (ಕಣ್ಣುಗಳು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು).
- ಅಸಹಜ ರಕ್ತಸ್ರಾವ.
ವಿಶ್ವ ಆರೋಗ್ಯ ಸಂಸ್ಥೆಯಿಂದ ಮಲೇರಿಯಾ ನಿಯಂತ್ರಣಕ್ಕೆ ಕೈಗೊಂಡ ಉಪಕ್ರಮಗಳು:
- ಮಲೇರಿಯಾ ಜಾಗತಿಕ ತಾಂತ್ರಿಕ ಕಾರ್ಯತಂತ್ರ, 2016–2030: 2015ರ ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡು, ಮಲೇರಿಯಾ ಪ್ರಕರಣಗಳು ಮತ್ತು ಮರಣ ಪ್ರಮಾಣವನ್ನು 2020ರ ವೇಳೆಗೆ 40% ರಷ್ಟು, 2025ರ ವೇಳೆಗೆ 75% ರಷ್ಟು ಮತ್ತು 2030ರ ವೇಳೆಗೆ 90% ರಷ್ಟು ತಗ್ಗಿಸುವ ಗುರಿಯನ್ನು ಇದು ಹೊಂದಿದೆ.
- ‘E-2025 ಉಪಕ್ರಮ’: 2025ರ ವೇಳೆಗೆ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಾಮರ್ಥ್ಯವಿರುವ 25 ದೇಶಗಳನ್ನು ಗುರುತಿಸಿ, ವಿಶ್ವ ಆರೋಗ್ಯ ಸಂಸ್ಥೆಯು ಈ ಉಪಕ್ರಮವನ್ನು ಜಾರಿಗೆ ತಂದಿದೆ.
- ‘ಅಧಿಕ ಹೊರೆ – ಅಧಿಕ ಪರಿಣಾಮ’ (ಹೈ ಬರ್ಡನ್ ಟು ಹೈ ಇಂಪಾಕ್ಟ್- HBHI) ಉಪಕ್ರಮ: ಜಾಗತಿಕವಾಗಿ ಅತಿ ಹೆಚ್ಚು ಮಲೇರಿಯಾ ಹೊರೆ ಹೊಂದಿರುವ, ಭಾರತವೂ ಸೇರಿದಂತೆ 11 ದೇಶಗಳಲ್ಲಿ WHO ಈ ವಿಶೇಷ ಉಪಕ್ರಮವನ್ನು ಪ್ರಾರಂಭಿಸಿದೆ.
ಮಲೇರಿಯಾ ನಿಯಂತ್ರಣಕ್ಕಾಗಿ ಭಾರತ ಸರ್ಕಾರದ ಉಪಕ್ರಮಗಳು:
- ರಾಷ್ಟ್ರೀಯ ಗುರಿ: 2027ರ ವೇಳೆಗೆ ದೇಶದಿಂದ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ.
- ಮಲೇರಿಯಾ ನಿರ್ಮೂಲನೆಗಾಗಿ ರಾಷ್ಟ್ರೀಯ ಚೌಕಟ್ಟು (NFME): ಮಲೇರಿಯಾ ನಿರ್ಮೂಲನೆಗಾಗಿ ರೂಪಿಸಲಾದ “ಜಾಗತಿಕ ತಾಂತ್ರಿಕ ಕಾರ್ಯತಂತ್ರ” (GTS 2016-2030) ಕ್ಕೇ ಅನುಗುಣವಾಗಿ, ಭಾರತವು 2016ರಲ್ಲಿ ಈ ರಾಷ್ಟ್ರೀಯ ಚೌಕಟ್ಟನ್ನು ಅಭಿವೃದ್ಧಿಪಡಿಸಿ ಜಾರಿಗೆ ತಂದಿದೆ.
- ಮಲೇರಿಯಾ ನಿರ್ಮೂಲನ ಸಂಶೋಧನಾ ಒಕ್ಕೂಟ – ಭಾರತ (MERA-India): ಮಲೇರಿಯಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಪಾಲುದಾರರ ಒಂದು ಒಕ್ಕೂಟವಾಗಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ICMR) ಇದನ್ನು ಸ್ಥಾಪಿಸಿದೆ.
ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ
ಸಾಮಾನ್ಯ ಅಧ್ಯಯನ : 2 / ಯೋಜನೆಗಳು
ಇದೀಗ ಸುದ್ದಿಯಲ್ಲಿದೆ:
- ಒಂದು ವರ್ಷದ ಅವಧಿಯಲ್ಲಿ 1.25 ಲಕ್ಷ ಇಂಟರ್ನ್‌ಶಿಪ್ (ವೃತ್ತಿ ತರಬೇತಿ) ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದ ‘ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ’ಯ ಪ್ರಾಯೋಗಿಕ ಯೋಜನೆಯು, ಇದೀಗ ತನ್ನ ನಿಗದಿತ ಗುರಿಯನ್ನು ಮೀರಿ ಮಹತ್ವದ ಸಾಧನೆಯನ್ನು ದಾಖಲಿಸಿದೆ.
ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯ ಬಗ್ಗೆ:
- ಉದ್ದೇಶ: ದೇಶದ ಮುಂಚೂಣಿ ಕಂಪನಿಗಳಲ್ಲಿ ಯುವಜನತೆಗೆ ವೃತ್ತಿ ತರಬೇತಿ ಅವಕಾಶಗಳನ್ನು ಕಲ್ಪಿಸುವುದು ಮತ್ತು ತನ್ಮೂಲಕ ಶೈಕ್ಷಣಿಕ ಜ್ಞಾನ ಹಾಗೂ ಪ್ರಾಯೋಗಿಕ ಕೌಶಲ್ಯಗಳ ನಡುವಿನ ಕಂದರವನ್ನು ನಿವಾರಿಸುವುದು.
- ಸಚಿವಾಲಯ: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ.
- ಅವಧಿ: ಈ ಇಂಟರ್ನ್‌ಶಿಪ್ 12 ತಿಂಗಳುಗಳ ಕಾಲಾವಧಿಯನ್ನು ಒಳಗೊಂಡಿರುತ್ತದೆ.
- ಶಿಷ್ಯವೇತನ : ಇಂಟರ್ನ್‌ಗಳು (ವೃತ್ತಿ ತರಬೇತಿ ಪಡೆಯುವವರು) ಪೂರ್ಣ ಒಂದು ವರ್ಷದ ಅವಧಿಗೆ ಮಾಸಿಕ ₹5,000 ರೂಪಾಯಿಗಳ ಶಿಷ್ಯವೇತನವನ್ನು ಪಡೆಯುತ್ತಾರೆ.
- ಅರ್ಹತಾ ಮಾನದಂಡಗಳು:
- ಅಭ್ಯರ್ಥಿಯು ಕಡ್ಡಾಯವಾಗಿ ಭಾರತೀಯ ಪ್ರಜೆಯಾಗಿರಬೇಕು.
- ಅಭ್ಯರ್ಥಿಯ ವಯೋಮಿತಿ 21 ರಿಂದ 24 ವರ್ಷಗಳ ನಡುವೆ ಇರಬೇಕು.
- ಅಭ್ಯರ್ಥಿಯು ಪೂರ್ಣಾವಧಿಯ ಉದ್ಯೋಗದಲ್ಲಿರಬಾರದು ಅಥವಾ ಪೂರ್ಣಾವಧಿಯ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರಬಾರದು.
ನುಮಾಲಿಗಢ ರಿಫೈನರಿ ಲಿಮಿಟೆಡ್ (NRL) ಗೆ ‘ನವರತ್ನ’ ಸ್ಥಾನಮಾನ
ಸಾಮಾನ್ಯ ಅಧ್ಯಯನ-3 / ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ನುಮಾಲಿಗಢ ಶುದ್ಧಿಕರಣ ನಿಯಮಿತ (NRL) ಕ್ಕೇ ಪ್ರತಿಷ್ಠಿತ ‘ನವರತ್ನ’ ಸ್ಥಾನಮಾನವನ್ನು ನೀಡಲಾಗಿದೆ. ಈ ಗೌರವಕ್ಕೆ ಪಾತ್ರವಾದ 27ನೇ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ (CPSE) ಇದಾಗಿದೆ.
ನುಮಾಲಿಗಢ ಶುದ್ಧಿಕರಣ ನಿಯಮಿತ (NRL) ದ ಬಗ್ಗೆ:
- ಸ್ಥಳ: ಇದು ಅಸ್ಸಾಂನ ಗೋಲಘಾಟ್ ಜಿಲ್ಲೆಯ ನುಮಾಲಿಗಢದಲ್ಲಿ ನೆಲೆಗೊಂಡಿರುವ ಪೆಟ್ರೋಲಿಯಂ ಶುದ್ಧಿಕರಣ ಘಟಕವಾಗಿದೆ.
ಭಾರತದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ (CPSEs) ಗಳ ಬಗ್ಗೆ:
- ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳನ್ನು ಮೂರು ಪ್ರಮುಖ ವರ್ಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ – ಮಿನಿರತ್ನ, ನವರತ್ನ ಮತ್ತು ಮಹಾರತ್ನ.
- ಮಿನಿರತ್ನ ಸ್ಥಾನಮಾನ: ಮಿನಿರತ್ನ ಸ್ಥಾನಮಾನದ ಅಡಿಯಲ್ಲಿ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳನ್ನು ‘ಮಿನಿರತ್ನ-I’ ಮತ್ತು ‘ಮಿನಿರತ್ನ-II’ ಎಂಬ ಎರಡು ಉಪ-ವರ್ಗಗಳಲ್ಲಿ ವಿಂಗಡಿಸಲಾಗಿದೆ.
- ನವರತ್ನ ಸ್ಥಾನಮಾನ: ಮಿನಿರತ್ನ-I ಸ್ಥಾನಮಾನವನ್ನು ಹೊಂದಿರುವ ಮತ್ತು ಕಳೆದ 5 ವರ್ಷಗಳ ಪೈಕಿ 3 ವರ್ಷಗಳಲ್ಲಿ “ಅತ್ಯುತ್ತಮ” ಅಥವಾ “ಬಹಳ ಉತ್ತಮ” ಎಂ.ಒ.ಯು ರೇಟಿಂಗ್ ಪಡೆದ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳು ಈ ಸ್ಥಾನಮಾನಕ್ಕೆ ಅರ್ಹವಾಗಿರುತ್ತವೆ.
- ಮಹಾರತ್ನ ಸ್ಥಾನಮಾನ: ಕೇಂದ್ರ ಸಾರ್ವಜನಿಕ ವಲಯದ ಒಂದು ಉದ್ದಿಮೆಯು ಈ ಕೆಳಗಿನ ಮಾನದಂಡಗಳನ್ನು ಪೂರೈಸಿದಲ್ಲಿ “ಮಹಾರತ್ನ” ಸ್ಥಾನಮಾನವನ್ನು ಪಡೆಯಲು ಅರ್ಹವಾಗಿರುತ್ತದೆ:
- “ನವರತ್ನ” ಸ್ಥಾನಮಾನವನ್ನು ಹೊಂದಿರಬೇಕು.
- ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ನೋಂದಾಯಿತವಾಗಿರಬೇಕು.
- ಕನಿಷ್ಠ ಷೇರು ಪಾಲುದಾರಿಕೆ ನಿಯಮಗಳನ್ನು ಪಾಲಿಸಬೇಕು.
- ಕಳೆದ 3 ವರ್ಷಗಳಲ್ಲಿ ಸರಾಸರಿ ವಾರ್ಷಿಕ ವಹಿವಾಟು ₹25,000 ಕೋಟಿಗಿಂತ ಹೆಚ್ಚಿರಬೇಕು ಮತ್ತು ಸರಾಸರಿ ವಾರ್ಷಿಕ ನಿವ್ವಳ ಮೌಲ್ಯ ₹15,000 ಕೋಟಿಗಿಂತ ಹೆಚ್ಚಿರಬೇಕು.
- ಕಳೆದ 3 ವರ್ಷಗಳಲ್ಲಿ ಸರಾಸರಿ ವಾರ್ಷಿಕ ನಿವ್ವಳ ಲಾಭ ₹5,000 ಕೋಟಿಗಿಂತ ಹೆಚ್ಚಿರಬೇಕು ಹಾಗೂ ಇದರೊಂದಿಗೆ ಗಮನಾರ್ಹ ಜಾಗತಿಕ ಅಸ್ತಿತ್ವವನ್ನು ಹೊಂದಿರಬೇಕು.
- ಉದಾಹರಣೆ: BHEL, BPCL, ಕೋಲ್ ಇಂಡಿಯಾ, GAIL, HPCL, ಇಂಡಿಯನ್ ಆಯಿಲ್, NTPC ಮತ್ತು ONGC ಇವು ಕೆಲವು ಪ್ರಮುಖ ಮಹಾರತ್ನ ಸಾರ್ವಜನಿಕ ವಲಯದ ಉದ್ಯಮಗಳಾಗಿವೆ.
ಆಹಾರ ಮತ್ತು ಕೃಷಿಗಾಗಿ ವಿಶ್ವದ ಭೂ ಮತ್ತು ಜಲ ಸಂಪನ್ಮೂಲಗಳ ಸ್ಥಿತಿ (SOLAW 2025)
ಸಾಮಾನ್ಯ ಅಧ್ಯಯನ- 3 / ಪರಿಸರ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚೆಗೆ, ವಿಶ್ವಸಂಸ್ಥೆಯ “ಆಹಾರ ಮತ್ತು ಕೃಷಿ ಸಂಸ್ಥೆ” (FAO) ಯು ‘ಆಹಾರ ಮತ್ತು ಕೃಷಿಗಾಗಿ ವಿಶ್ವದ ಭೂ ಮತ್ತು ಜಲ ಸಂಪನ್ಮೂಲಗಳ ಸ್ಥಿತಿ’ (SOLAW 2025) ಎಂಬ ವರದಿಯನ್ನು ಬಿಡುಗಡೆ ಮಾಡಿದೆ.
SOLAW, 2025 ವರದಿಯ ಬಗ್ಗೆ:
- ಪ್ರಕಟಿಸುವ ಸಂಸ್ಥೆ: ಆಹಾರ ಮತ್ತು ಕೃಷಿ ಸಂಸ್ಥೆ (FAO).
- ಭೂ ಮತ್ತು ಜಲ ಸಂಪನ್ಮೂಲಗಳ ನಿರ್ವಹಣೆಗೆ ಸಂಬಂಧಿಸಿದ ಈ ವರದಿಯು, ಆಹಾರ ಭದ್ರತೆ ಮತ್ತು ಗ್ರಾಮೀಣಾಭಿವೃದ್ಧಿಯನ್ನು ಸಾಧಿಸಲು ನೈಸರ್ಗಿಕ ಸಂಪನ್ಮೂಲಗಳ ‘ಸುಸ್ಥಿರ ಬಳಕೆಯನ್ನು’ ಉತ್ತೇಜಿಸುವ ಗುರಿಯನ್ನು ಹೊಂದಿದೆ.
ವರದಿಯ ಇತ್ತೀಚಿನ ಪ್ರಮುಖಾಂಶಗಳು:
- ಹೆಚ್ಚುತ್ತಿರುವ ಆಹಾರದ ಬೇಡಿಕೆ: ಜಾಗತಿಕ ಆಹಾರದ ಬೇಡಿಕೆಯನ್ನು ಪೂರೈಸಲು, ಕೃಷಿ ವಲಯವು 2050 ರ ವೇಳೆಗೆ 50% ಹೆಚ್ಚಿನ ಆಹಾರವನ್ನು ಉತ್ಪಾದಿಸಬೇಕು ಎಂದು ವರದಿಯು ಎಚ್ಚರಿಸಿದೆ. ಆದರೆ, ಈ ಪ್ರಕ್ರಿಯೆಯು ಈಗಾಗಲೇ ತೀವ್ರ ಒತ್ತಡದಲ್ಲಿರುವ ಭೂಮಿ, ಮಣ್ಣು ಮತ್ತು ಜಲ ಸಂಪನ್ಮೂಲಗಳ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
- ಸಂಪನ್ಮೂಲಗಳ ಮೇಲಿನ ಒತ್ತಡ: ಪ್ರಸ್ತುತ ಕೃಷಿ ವಲಯವು ಭೂಮಿಯ ಒಟ್ಟು ಭೂಭಾಗದ ಮೂರನೇ ಒಂದರಷ್ಟು ಪ್ರದೇಶವನ್ನು ಆವರಿಸಿಕೊಂಡಿದೆ ಹಾಗೂ ಜಾಗತಿಕ ಸಿಹಿನೀರಿನ ಲಭ್ಯತೆಯಲ್ಲಿ 72% ರಷ್ಟು ಪಾಲನ್ನು ಬಳಸಿಕೊಳ್ಳುತ್ತಿದೆ.
- ಭೂಮಿಯ ಅವನತಿ: ಕೃಷಿಯ ತೀವ್ರತೆಯು ನೀರಿನ ಅಭಾವ, ಅಂತರ್ಜಲದ ಅತಿಯಾದ ಬಳಕೆ ಮತ್ತು 1.6 ಶತಕೋಟಿ ಹೆಕ್ಟೇರ್‌ಗಿಂತಲೂ ಹೆಚ್ಚು ಭೂಮಿಯ (ಇದರಲ್ಲಿ ಬಹುಪಾಲು ಕೃಷಿ ಭೂಮಿಯೇ ಆಗಿದೆ) ಅವನತಿಗೆ ಕಾರಣವಾಗಿದೆ.
- ವಿಷವರ್ತುಲದ ಪರಿಣಾಮ: ಮಣ್ಣಿನ ಸಾರಗುಂದುವಿಕೆ, ಕ್ಷೀಣಿಸುತ್ತಿರುವ ಜಲ ಸಂಪನ್ಮೂಲ ಮತ್ತು ಅರಣ್ಯನಾಶದ ಈ ‘ವಿಷವರ್ತುಲ’ವು ಕೃಷಿಯ ತಳಹದಿಯನ್ನೇ ದುರ್ಬಲಗೊಳಿಸುತ್ತಿದೆ. ಅಲ್ಲದೆ, ಇದು ಜಾಗತಿಕ ಆಹಾರ ವ್ಯವಸ್ಥೆಯ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಅಥವಾ ಸ್ಥಿತಿಸ್ಥಾಪಕತ್ವವನ್ನು ಕುಂದಿಸುತ್ತಿದೆ.
ಡಾ. ರಾಜೇಂದ್ರ ಪ್ರಸಾದ್
ಸಾಮಾನ್ಯ ಅಧ್ಯಯನ- 1 / ಪ್ರಮುಖ ವ್ಯಕ್ತಿಗಳು
ಇದೀಗ ಸುದ್ದಿಯಲ್ಲಿ:
- ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮ ಜಯಂತಿಯ ಸ್ಮರಣಾರ್ಥವಾಗಿ, ರಾಷ್ಟ್ರಪತಿಗಳು ಅವರಿಗೆ ಭಾವಪೂರ್ಣ ಗೌರವ ನಮನ ಸಲ್ಲಿಸಿದರು.
ಆರಂಭಿಕ ಜೀವನ ಮತ್ತು ಶಿಕ್ಷಣ:
- ಜನನ:– ಇವರು 1884ರಲ್ಲಿ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜನಿಸಿದರು.
- ಶಿಕ್ಷಣ:- ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತಮ್ಮ ಪದವಿ ವ್ಯಾಸಂಗವನ್ನು ಪೂರೈಸಿದರು. 1915ರಲ್ಲಿ, ಕಾನೂನು ವಿಷಯದಲ್ಲಿ ‘ಸ್ನಾತಕೋತ್ತರ ಪದವಿ’ಯನ್ನು (LLM) ಗೌರವಗಳೊಂದಿಗೆ ಪೂರ್ಣಗೊಳಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರ ಪಾತ್ರ:
- ಚಂಪಾರಣ್ ಸತ್ಯಾಗ್ರಹ (1917): ಮಹಾತ್ಮ ಗಾಂಧೀಜಿಯವರ ಕರೆಯ ಮೇರೆಗೆ ಇವರು ಚಂಪಾರಣ್ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಈ ಘಟನೆಯು ಇವರ ಜೀವನಕ್ಕೆ ಮಹತ್ವದ ತಿರುವನ್ನು ನೀಡಿತು ಮತ್ತು ಇವರನ್ನು ರಾಷ್ಟ್ರ ಸೇವೆಯತ್ತ ಪ್ರೇರೇಪಿಸಿತು.
- ಅಸಹಕಾರ ಚಳುವಳಿ (1920–22): ತಮ್ಮ ಯಶಸ್ವಿ ವಕೀಲ ವೃತ್ತಿಯನ್ನು ತ್ಯಜಿಸಿ, 1921ರಲ್ಲಿ ಪಾಟ್ನಾದಲ್ಲಿ ‘ನ್ಯಾಷನಲ್ ಕಾಲೇಜ್’ ಅನ್ನು ಸ್ಥಾಪಿಸಿದರು.
- ಚೌರಿಚೌರಾ ಘಟನೆಯ ನಂತರವೂ ಇವರು ಗಾಂಧೀಜಿಯವರ ನಿರ್ಧಾರಕ್ಕೆ ಬದ್ಧರಾಗಿ ದೃಢವಾಗಿ ನಿಂತರು.
- ಉಪ್ಪಿನ ಸತ್ಯಾಗ್ರಹ (1930): ಬಿಹಾರದ ಪಾಟ್ನಾದಲ್ಲಿರುವ ‘ನಖಾಸ್ ಹೊಂಡ’ಗಳಲ್ಲಿ ಉಪ್ಪಿನ ಸತ್ಯಾಗ್ರಹದ ನೇತೃತ್ವ ವಹಿಸಿದರು. ಅಲ್ಲಿ ಸ್ವಯಂಸೇವಕರೊಂದಿಗೆ ಉಪ್ಪನ್ನು ತಯಾರಿಸಿ ಬಂಧನಕ್ಕೊಳಗಾದರು.
- ಕಾಂಗ್ರೆಸ್ ಅಧ್ಯಕ್ಷತೆ: 1934ರಲ್ಲಿ ಬಾಂಬೆಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಅಧಿವೇಶನದ ಅಧ್ಯಕ್ಷತೆಯನ್ನು ಇವರು ವಹಿಸಿದ್ದರು. ತದನಂತರ, 1939ರಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ, ಡಾ. ಪ್ರಸಾದ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.
- ಸಂವಿಧಾನ ರಚನಾ ಸಭೆಯ ಅಧ್ಯಕ್ಷತೆ: ಜುಲೈ 1946ರಲ್ಲಿ, ಭಾರತದ ಸಂವಿಧಾನವನ್ನು ರೂಪಿಸಲು ರಚಿಸಲಾದ ‘ಸಂವಿಧಾನ ರಚನಾ ಸಭೆ’ಯ ಅಧ್ಯಕ್ಷರಾಗಿ ಇವರು ಅವಿರೋಧವಾಗಿ ಆಯ್ಕೆಯಾದರು.
- ಭಾರತ ರತ್ನ: ದೇಶಕ್ಕೆ ಸಲ್ಲಿಸಿದ ಅಪ್ರತಿಮ ಸೇವೆಗಾಗಿ 1962ರಲ್ಲಿ ಇವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ನೀಡಿ ಗೌರವಿಸಲಾಯಿತು.
ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿದ್ದ ಸಂವಿಧಾನ ರಚನಾ ಸಭೆಯ ಪ್ರಮುಖ ಸಮಿತಿಗಳು:
- ಕಾರ್ಯವಿಧಾನದ ನಿಯಮಗಳ ಸಮಿತಿ
- ಸಂಚಾಲನಾ ಸಮಿತಿ
- ಹಣಕಾಸು ಮತ್ತು ಸಿಬ್ಬಂದಿ ಸಮಿತಿ
- ರಾಷ್ಟ್ರಧ್ವಜದ ಮೇಲಿನ ತಾತ್ಕಾಲಿಕ ಸಮಿತಿ
ಸಾಹಿತ್ಯಿಕ ಕೊಡುಗೆಗಳು:
-
- ಸತ್ಯಾಗ್ರಹ ಅಟ್ ಚಂಪಾರಣ್ (1922)
- ಇಂಡಿಯಾ ಡಿವೈಡೆಡ್ (1946)
- ಆತ್ಮಕಥಾ (1946)
- ಮಹಾತ್ಮ ಗಾಂಧಿ ಅಂಡ್ ಬಿಹಾರ್, ಸಮ್ ರೆಮಿನಿಸೆನ್ಸಸ್ (1949)
- ಬಾಪು ಕೆ ಕದಮೋಂ ಮೇ (1954)



ನಿಮ್ಮದೊಂದು ಉತ್ತರ