ಮುಖ್ಯ ಚುನಾವಣಾ ಆಯುಕ್ತರ ವಜಾಗೊಳಿಸುವ ಪ್ರಕ್ರಿಯೆ
ರಾಜಕೀಯ
ಇದೀಗ ಸುದ್ದಿಯಲ್ಲಿದೆ:
- ವಿರೋಧ ಪಕ್ಷಗಳು ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾದ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸಂಸತ್ತಿನಲ್ಲಿ ಅವರನ್ನು ವಜಾಗೊಳಿಸಲು ಮಹಾಭಿಯೋಗ ನಿರ್ಣಯವನ್ನು ಮಂಡಿಸಲು ಚಿಂತನೆ ನಡೆಸುತ್ತಿವೆ.
‘ಸಂವಿಧಾನದ 324ನೇ ವಿಧಿ’ಯ ಬಗ್ಗೆ:
-
- ಭಾರತದ ಸಂವಿಧಾನದ 324ನೇ ವಿಧಿಯ ಪ್ರಕಾರ, ಭಾರತದ ಚುನಾವಣಾ ಆಯೋಗವು (ECI) ಒಬ್ಬರು ಮುಖ್ಯ ಚುನಾವಣಾ ಆಯುಕ್ತರನ್ನು (CEC) ಹಾಗೂ ರಾಷ್ಟ್ರಪತಿಗಳು ನಿರ್ಧರಿಸುವಷ್ಟು ಸಂಖ್ಯೆಯ ಇತರ ಚುನಾವಣಾ ಆಯುಕ್ತರನ್ನು (ECs) ಒಳಗೊಂಡಿರುತ್ತದೆ.
- ಭಾರತದ ಚುನಾವಣಾ ಆಯೋಗವು ಈ ಕೆಳಗಿನ ಜವಾಬ್ದಾರಿಗಳನ್ನು ಹೊಂದಿದೆ:
- ಸಂಸತ್ತು, ರಾಜ್ಯ ಶಾಸಕಾಂಗಗಳು ಹಾಗೂ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ನಡೆಸುವುದು ಹಾಗೂ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು.
- ಚುನಾವಣಾ ಆಯುಕ್ತರನ್ನು ನೇಮಕ:- ಸಂಸತ್ತಿನ ಕಾಯ್ದೆಯ ನಿಬಂಧನೆಗಳಿಗೆ ಒಳಪಟ್ಟು, ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ ಎಂದು ಸಂವಿಧಾನವು ಸ್ಪಷ್ಟಪಡಿಸುತ್ತದೆ.
ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸುವ ಸಾಂವಿಧಾನಿಕ ನಿಬಂಧನೆಗಳು:
-
- ಭಾರತದ ಸಂವಿಧಾನದ 324(5) ನೇ ವಿಧಿಯ ಅನ್ವಯ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ವಜಾಗೊಳಿಸುವ ಪ್ರಕ್ರಿಯೆಯ ರೀತಿಯಲ್ಲಿಯೇ ಮತ್ತು ಅದೇ ಆಧಾರಗಳ ಮೇರೆಗೆ ಮಾತ್ರ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ವಜಾಗೊಳಿಸಬಹುದು (ಪದಚ್ಯುತಿಗೊಳಿಸಬಹುದು).
- ಮುಖ್ಯ ಚುನಾವಣಾ ಆಯುಕ್ತರ ವಜಾ ಕೋರುವ ನಿರ್ಣಯವನ್ನು ಸಂಸತ್ತಿನ ಯಾವುದೇ ಸದನದಲ್ಲಿ (ಲೋಕಸಭೆ ಅಥವಾ ರಾಜ್ಯಸಭೆ) ಮಂಡಿಸಬಹುದು. ಆದರೆ, ಆ ನಿರ್ಣಯದಲ್ಲಿ ವಜಾಗೊಳಿಸಲು ಇರುವ ನಿಖರವಾದ ಕಾರಣಗಳನ್ನು ಸ್ಪಷ್ಟವಾಗಿ ನಮೂದಿಸಿರಬೇಕು.
- ಈ ನಿರ್ಣಯವನ್ನು ಮಂಡಿಸಲು ಕೆಳಕಂಡ ರೀತಿಯಲ್ಲಿ ಬೆಂಬಲ ಅಗತ್ಯವಿರುತ್ತದೆ:
-
-
- ಲೋಕಸಭೆಯ ಕನಿಷ್ಠ 100 ಸದಸ್ಯರ ಬೆಂಬಲ, ಅಥವಾ
-
- ರಾಜ್ಯಸಭೆಯ ಕನಿಷ್ಠ 50 ಸದಸ್ಯರ ಬೆಂಬಲ.
- ಒಮ್ಮೆ ಈ ನಿರ್ಣಯವನ್ನು ಅಂಗೀಕರಿಸಿದ ನಂತರ, ಆರೋಪಗಳ ಕುರಿತು ತನಿಖೆ ನಡೆಸಲು ಲೋಕಸಭೆಯ ಸಭಾಧ್ಯಕ್ಷರು ಅಥವಾ ರಾಜ್ಯಸಭೆಯ ಸಭಾಪತಿಯವರು ಒಂದು ವಿಚಾರಣಾ ಸಮಿತಿಯನ್ನು ರಚಿಸುತ್ತಾರೆ.
- ಒಂದು ವೇಳೆ ಈ ಸಮಿತಿಯು ಆರೋಪಗಳು ಸಾಬೀತಾಗಿವೆ ಎಂದು ವರದಿ ನೀಡಿದರೆ, ಆ ನಿರ್ಣಯವನ್ನು ಸಂಸತ್ತಿನಲ್ಲಿ ಮತದಾನಕ್ಕೆ ತೆಗೆದುಕೊಳ್ಳಲಾಗುತ್ತದೆ.
- ನಂತರ, ಎರಡೂ ಸದನಗಳು ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಪೈಕಿ ಮೂರನೇ ಎರಡರಷ್ಟು (2/3ರಷ್ಟು) ‘ವಿಶೇಷ ಬಹುಮತ’ದೊಂದಿಗೆ ಆ ನಿರ್ಣಯವನ್ನು ಅಂಗೀಕರಿಸಬೇಕು. ಎರಡೂ ಸದನಗಳು ಈ ನಿರ್ಣಯವನ್ನು ಒಪ್ಪಿದ ನಂತರ, ಅಂತಿಮವಾಗಿ ರಾಷ್ಟ್ರಪತಿಗಳು ವಜಾಗೊಳಿಸುವ ಆದೇಶವನ್ನು ಹೊರಡಿಸುತ್ತಾರೆ.
ಮೇಘಾಲಯದಲ್ಲಿ ಸ್ವಾಯತ್ತ ಜಿಲ್ಲಾ ಮಂಡಳಿಗಳು
ರಾಜಕೀಯ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿದೆ:
- ‘ಪಶ್ಚಿಮ ಗಾರೊ ಹಿಲ್ಸ್’ ಜಿಲ್ಲೆಯಲ್ಲಿ ನಡೆಯುತ್ತಿರುವ ನಿರಂತರ ಹಿಂಸಾಚಾರ ಮತ್ತು ಅಶಾಂತಿಯ ಹಿನ್ನೆಲೆಯಲ್ಲಿ, ಮೇಘಾಲಯದ ‘ಗಾರೊ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ’ಯ ಚುನಾವಣೆಯನ್ನು ಮುಂದೂಡಲಾಗಿದೆ.
ಸ್ವಾಯತ್ತ ಜಿಲ್ಲಾ ಮಂಡಳಿಗಳ ಬಗ್ಗೆ ಸಾಂವಿಧಾನಿಕ ನಿಬಂಧನೆಗಳು:
- ಭಾರತದ ಸಂವಿಧಾನದ 6ನೇ ಅನುಸೂಚಿಯ ವಿಧಿ 244(2) ಮತ್ತು 275(1) ರನ್ವಯ ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂನಂತಹ ಈಶಾನ್ಯ ರಾಜ್ಯಗಳಲ್ಲಿರುವ ಬುಡಕಟ್ಟು ಪ್ರದೇಶಗಳಿಗೆ ವಿಶಿಷ್ಟವಾದ ಸ್ವಾಯತ್ತ ಆಡಳಿತ ವ್ಯವಸ್ಥೆಗಳನ್ನು ಒದಗಿಸುತ್ತದೆ.
- ಮೇಘಾಲಯದಲ್ಲಿರುವ ‘ಸ್ವಾಯತ್ತ ಜಿಲ್ಲಾ ಮಂಡಳಿ’ಗಳು (ADCs) ಸ್ಥಳೀಯ ಬುಡಕಟ್ಟು ಸಮುದಾಯಗಳ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಹಕ್ಕುಗಳನ್ನು ರಕ್ಷಿಸಲು ಸಂವಿಧಾನದ 6ನೇ ಅನುಸೂಚಿಯ ಅಡಿಯಲ್ಲಿ ರಚಿಸಲಾದ ವಿಶೇಷ ಸ್ಥಳೀಯ ಸಾಯತ್ತ ಆಡಳಿತ ಸಂಸ್ಥೆಗಳಾಗಿವೆ.
- ಈ ಮಂಡಳಿಗಳು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಹಣಕಾಸಿನ ಅಧಿಕಾರಗಳನ್ನು ಹೊಂದಿವೆ.
ಪ್ರಮುಖ ಉದ್ದೇಶಗಳು:
- ಬುಡಕಟ್ಟು ಜನಾಂಗದವರ ಭೂಮಿ ಮತ್ತು ಅವರ ಸಾಂಪ್ರದಾಯಿಕ ಪದ್ಧತಿಗಳನ್ನು ರಕ್ಷಿಸುವುದು.
- ಸ್ಥಳೀಯ ಬುಡಕಟ್ಟು ಸಮುದಾಯಗಳಿಗೆ ಸ್ವಾಯತ್ತ ಆಡಳಿತವನ್ನು ಒದಗಿಸುವುದು.
- ಬಾಹ್ಯ ಗುಂಪುಗಳಿಂದ ಈ ಸಮುದಾಯಗಳ ಮೇಲೆ ಆಗಬಹುದಾದ ಶೋಷಣೆಯನ್ನು ತಡೆಯಲು ಈ ಮಂಡಳಿಗಳು ಕಾರ್ಯನಿರ್ವಹಿಸುತ್ತವೆ.
ಸೈಟ್ಸ್ (CITES)
ಪರಿಸರ
ಇದೀಗ ಸುದ್ದಿಯಲ್ಲಿದೆ:
- ‘ಅಳಿವಿನಂಚಿನಲ್ಲಿರುವ ವನ್ಯಜೀವಿಗಳು ಮತ್ತು ಸಸ್ಯ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದ‘ದ (CITES) ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ವಜಾಗೊಳಿಸಿದೆ.
CITES ಒಪ್ಪಂದದ ಬಗ್ಗೆ:
- CITES ಸಂಪೂರ್ಣ ರೂಪ:- ಕಾನ್ವೆಂಷನ್ ಆನ್ ಇಂಟರ್ನ್ಯಾಷನಲ್ ಟ್ರೇಡ್ ಇನ್ ಎಂಡೇಂಜೆರ್ಡ್ ಸ್ಪೆಷಿಸ್ ಆಫ್ ವೈಲ್ಡ್ ಫಾನಾ ಅಂಡ್ ಫ್ಲೋರಾ (ಅಳಿವಿನಂಚಿನಲ್ಲಿರುವ ವನ್ಯಜೀವಿಗಳು ಮತ್ತು ಸಸ್ಯ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದ).
- ಕಾನೂನುಬದ್ಧವಾದ ಒಪ್ಪಂದ:- ಕಾಡು ಪ್ರಾಣಿಗಳ ಮತ್ತು ಸಸ್ಯಗಳ ಅಂತರರಾಷ್ಟ್ರೀಯ ವ್ಯಾಪಾರವು ಆ ಪ್ರಭೇದಗಳ ಉಳಿವಿಗೆ ಅಪಾಯವಾಗದಂತೆ ನೋಡಿಕೊಳ್ಳುವ ಉದ್ದೇಶವನ್ನು ಹೊಂದಿದೆ.
- ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ:- ಇದು ವನ್ಯಜೀವಿಗಳ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ; ಬದಲಾಗಿ, ಪರವಾನಗಿಗಳು ಮತ್ತು ವರ್ಗೀಕರಣಗಳ ವ್ಯವಸ್ಥೆಯ ಮೂಲಕ ಅದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ.
- ಸಹಿ ಮತ್ತು ಜಾರಿ:- ಈ ಒಪ್ಪಂದಕ್ಕೆ 1973 ರಲ್ಲಿ ವಾಷಿಂಗ್ಟನ್ ಸಮ್ಮೇಳನದಲ್ಲಿ ಸಹಿ ಹಾಕಲಾಯಿತು ಹಾಗೂ ಇದು 1975 ರಲ್ಲಿ ಅಧಿಕೃತವಾಗಿ ಜಾರಿಗೆ ಬಂದಿತು.
- ಆಡಳಿತ ನಿರ್ವಹಣೆ:- ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿರುವ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)ದ ಸಚಿವಾಲಯವು ಇದರ ಆಡಳಿತವನ್ನು ನಿರ್ವಹಿಸುತ್ತದೆ.
- ಸದಸ್ಯ ರಾಷ್ಟ್ರಗಳು:- ಭಾರತವು ಸಹ ಸೇರಿದಂತೆ 180 ಕ್ಕೂ ಹೆಚ್ಚು ರಾಷ್ಟ್ರಗಳು.
- ಸ್ವರೂಪ:- ಇದು ಸದಸ್ಯ ರಾಷ್ಟ್ರಗಳ ಮೇಲೆ ಕಾನೂನುಬದ್ಧವಾಗಿ ಬದ್ಧವಾಗಿರುತ್ತದೆ. ಆದರೆ, ಇದರ ಅನುಷ್ಠಾನವನ್ನು ಆಯಾ ದೇಶಗಳು ತಮ್ಮದೇ ಆದ ರಾಷ್ಟ್ರೀಯ ಕಾನೂನುಗಳ ಮೂಲಕ ಮಾಡಬೇಕಾಗುತ್ತದೆ.
- ಸಾಂಸ್ಥಿಕ ಸ್ವರೂಪ:- ‘ಪಕ್ಷಗಳ ಸಮ್ಮೇಳನ’ (CoP) ಎಂಬುದು ಇದರ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ಪ್ರತಿ 2-3 ವರ್ಷಗಳಿಗೊಮ್ಮೆ ಸಭೆ ಸೇರುತ್ತದೆ.
ಮೂರು ಅನುಬಂಧಗಳು:
- ಅನುಬಂಧ 1 – ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಒಳಗೊಂಡಿದೆ:- ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಇವುಗಳ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತದೆ.
- ಉದಾಹರಣೆ:- ಹುಲಿ, ಆನೆ (ಕೆಲವು ನಿರ್ದಿಷ್ಟ ಪ್ರಭೇದಗಳು) ಮತ್ತು ಖಡ್ಗಮೃಗ.
- ಅನುಬಂಧ 2 – ತಕ್ಷಣವೆ ಅಳಿವಿನಂಚಿನಲ್ಲಿಲ್ಲದ, ಆದರೆ ಭವಿಷ್ಯದಲ್ಲಿ ಅಂತಹ ಅಪಾಯಕ್ಕೆ ಸಿಲುಕಬಹುದಾದ ಪ್ರಭೇದಗಳನ್ನು ಒಳಗೊಂಡಿದೆ:- ಇವುಗಳ ನಿಯಂತ್ರಿತ ವ್ಯಾಪಾರಕ್ಕೆ ಮಾತ್ರ ಅವಕಾಶವಿದೆ.
- ಉದಾಹರಣೆ:- ಅನೇಕ ಮರಮಟ್ಟುಗಳ ಪ್ರಭೇದಗಳು ಹಾಗೂ ಸಮುದ್ರ ಜೀವಿಗಳು (ಉದಾಹರಣೆಗೆ: ಶಾರ್ಕ್).
- ಅನುಬಂಧ 3 – ಕನಿಷ್ಠ ಒಂದು ದೇಶದಲ್ಲಾದರೂ ಸಂರಕ್ಷಿಸಲ್ಪಟ್ಟಿರುವ ಪ್ರಭೇದಗಳನ್ನು ಒಳಗೊಂಡಿದೆ:- ಇವುಗಳ ವ್ಯಾಪಾರವನ್ನು ನಿಯಂತ್ರಿಸಲು ಇತರ ಸದಸ್ಯ ದೇಶಗಳು ಸಹಾಯ ಮಾಡುತ್ತವೆ.
ಭಾರತ ಮತ್ತು CITES:
- ಭಾರತವು 1976 ರಿಂದಲೇ ಈ ಒಪ್ಪಂದಕ್ಕೆ ಸಹಿ ಹಾಕಿದೆ:- ‘ವನ್ಯಜೀವಿ ಸಂರಕ್ಷಣಾ ಕಾಯ್ದೆ 1972’ ರ ಮೂಲಕ ಇದನ್ನು ಭಾರತದಲ್ಲಿ ಜಾರಿಗೆ ತರಲಾಗಿದೆ.
- ಪ್ರಮುಖ ಪ್ರಾಧಿಕಾರಗಳು:-
- ನಿರ್ವಹಣಾ ಪ್ರಾಧಿಕಾರ:- ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC).
- ವೈಜ್ಞಾನಿಕ ಪ್ರಾಧಿಕಾರ:- ಭಾರತೀಯ ವನ್ಯಜೀವಿ ಸಂಸ್ಥೆ (WII).
ನೀಲಗಿರಿ ತಾಹರ್ (Nilgiri Tahr)
ಪರಿಸರ
ಇದೀಗ ಸುದ್ದಿಯಲ್ಲಿದೆ:
- ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಬಳಿಯಿರುವ ಚೊಕ್ರಮುಡಿ ಬೆಟ್ಟಗಳು ಇದೀಗ ‘ನೀಲಗಿರಿ ತಾಹರ್’ಗಳ ಅತ್ಯುತ್ತಮ ನೈಸರ್ಗಿಕ ಆವಾಸಸ್ಥಾನವಾಗಿ ಮಾರ್ಪಟ್ಟಿವೆ.
ನೀಲಗಿರಿ ತಾಹರ್ ಬಗ್ಗೆ:
- ವೈಜ್ಞಾನಿಕ ಹೆಸರು:- ನೀಲಗಿರಿಟ್ರಾಗಸ್ ಹೈಲೋಕ್ರಿಯಸ್ (Nilgiritragus hylocrius).
- ದೃಢಕಾಯದ ಪರ್ವತ ಕಾಡು ಮೇಕೆಯಾಗಿದೆ:- ಚಿಕ್ಕದಾದ ಮತ್ತು ಹಳದಿ-ಕಂದು ಬಣ್ಣದ ತುಪ್ಪಳವನ್ನು ಹೊಂದಿದೆ.
- ಇದು ತಮಿಳುನಾಡಿನ ರಾಜ್ಯ ಪ್ರಾಣಿಯಾಗಿದೆ.
- ಆವಾಸಸ್ಥಾನ ಮತ್ತು ಭೌಗೋಳಿಕ ವ್ಯಾಪ್ತಿ:- ಇದು ಪ್ರಾಥಮಿಕವಾಗಿ ಕೇರಳ ಮತ್ತು ತಮಿಳುನಾಡಿನಾದ್ಯಂತ ಪಶ್ಚಿಮ ಘಟ್ಟಗಳ 400 ಕಿ.ಮೀ. ಉದ್ದದ ಪ್ರದೇಶಕ್ಕೆ ಮಾತ್ರ ಸೀಮಿತವಾದ (ಸ್ಥಳೀಯ) ಪ್ರಾಣಿಯಾಗಿದೆ.
- ಸಂಪೂರ್ಣ ಸಸ್ಯಾಹಾರಿಯಾಗಿದೆ:- 120 ಕ್ಕೂ ಹೆಚ್ಚು ಪ್ರಭೇದದ ಹುಲ್ಲು, ಗಿಡಮೂಲಿಕೆಗಳು ಮತ್ತು ಪೊದೆಗಳನ್ನು ತಿನ್ನುತ್ತದೆ.
- ಎದುರಿಸುತ್ತಿರುವ ಅಪಾಯಗಳು:- ಆವಾಸಸ್ಥಾನದ ನಾಶ (ಅರಣ್ಯನಾಶ, ತೋಟಗಾರಿಕೆ ವಿಸ್ತರಣೆ, ಜಲವಿದ್ಯುತ್ ಯೋಜನೆಗಳು), ಸಾಕುಪ್ರಾಣಿಗಳೊಂದಿಗಿನ ಸ್ಪರ್ಧೆ ಮತ್ತು ಬೇಟೆಯಾಡುವಿಕೆ.
- ಸಂರಕ್ಷಣಾ ಸ್ಥಾನಮಾನ:-
- IUCN ಕೆಂಪು ಪಟ್ಟಿಯಲ್ಲಿ:- ‘ಅಳಿವಿನಂಚಿನಲ್ಲಿರುವ’ (EN).
- ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ:- 1ನೇ ಅನುಸೂಚಿ.
- ಕೇರಳದ ಎರವಿಕುಲಂ ರಾಷ್ಟ್ರೀಯ ಉದ್ಯಾನವನವು ಈ ಪ್ರಭೇದದ ಅತಿ ಹೆಚ್ಚು ಜನಸಂಖ್ಯೆ ಮತ್ತು ಅತಿ ಹೆಚ್ಚಿನ ಸಾಂದ್ರತೆಯನ್ನು ಹೊಂದಿದೆ.
ಲೋಕಪಾಲ್ನ ತನಿಖಾ ಮತ್ತು ಅಭಿಯೋಜನಾ (ದೋಷಾರೋಪ) ವಿಭಾಗ
ರಾಜಕೀಯ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿದೆ:
- ‘ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ, 2013’ರ ಅನ್ವಯ ‘ತನಿಖಾ ಮತ್ತು ಅಭಿಯೋಜನಾ ವಿಭಾಗ’ಗಳ ಕಾರ್ಯಾಚರಣೆಯ ಕುರಿತಂತೆ ಸಂಸದೀಯ ಸ್ಥಾಯಿ ಸಮಿತಿಯು ಕೇಂದ್ರ ಸರ್ಕಾರದಿಂದ ವಿವರಗಳನ್ನು ಕೋರಿದೆ.
- ಕಾಯ್ದೆ ಜಾರಿಯಾಗಿ ಒಂದು ದಶಕವೇ ಕಳೆದರೂ, ಈ ವಿಭಾಗಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡದಿರುವ ಕುರಿತು ಸಮಿತಿಯು ಕಳವಳ ವ್ಯಕ್ತಪಡಿಸಿದೆ.
ಲೋಕಪಾಲ್ ಬಗ್ಗೆ:
- ಕೇಂದ್ರ ಮಟ್ಟದ ‘ಶಾಸನಬದ್ಧ ಭ್ರಷ್ಟಾಚಾರ ನಿಗ್ರಹ ಸಂಸ್ಥೆ’ಯಾಗಿದೆ:- ಇದು “ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ, 2013”ರ ಅಡಿಯಲ್ಲಿ ರಚನೆಯಾಗಿದೆ. ಇದು 2019 ರಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಿತು.
- ಉದ್ದೇಶ:- ಸಾರ್ವಜನಿಕ ಹುದ್ದೆಗಳಲ್ಲಿರುವವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ತನಿಖೆ ಮಾಡುವ ಶಾಸನಬದ್ಧ ಜವಾಬ್ದಾರಿಯನ್ನು ಇದು ಹೊಂದಿದೆ.
- ಸಾಂಸ್ಥಿಕ ರಚನೆ:- ಇದು,
- ಒಬ್ಬ ಅಧ್ಯಕ್ಷರನ್ನು (ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ, ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರು ಅಥವಾ ಗಣ್ಯ ವ್ಯಕ್ತಿಗಳು ಆಗಿರುತ್ತಾರೆ).
- 8 ಜನ ಸದಸ್ಯರು:- ಈ 8 ಜನ ಸದಸ್ಯರ ಪೈಕಿ 4 ಜನ ‘ನ್ಯಾಯಾಂಗ ಸದಸ್ಯರು’ ಆಗಿರಬೇಕು. ಮತ್ತು ಮಂಡಳಿಯ ಕನಿಷ್ಠ ಶೇ.50ರಷ್ಟು ಸದಸ್ಯರು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಇತರ ಹಿಂದುಳಿದ ವರ್ಗ (OBC), ಅಲ್ಪಸಂಖ್ಯಾತರು ಅಥವಾ ಮಹಿಳಾ ವರ್ಗಕ್ಕೆ ಸೇರಿದವರಾಗಿರಬೇಕು.
- ನೇಮಕಾತಿ:- ಪ್ರಧಾನ ಮಂತ್ರಿಯವರ ನೇತೃತ್ವದ ಉನ್ನತಾಧಿಕಾರ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಇವರನ್ನು ನೇಮಕ ಮಾಡುತ್ತಾರೆ.
- ಅಧಿಕಾರಾವಧಿ:- 5 ವರ್ಷಗಳು ಅಥವಾ 70 ವರ್ಷ ವಯಸ್ಸಾಗುವವರೆಗೆ (ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ಇರುತ್ತದೆ.
- ಅಧಿಕಾರ ವ್ಯಾಪ್ತಿ:- ಹಾಲಿ ಅಥವಾ ಮಾಜಿ ಪ್ರಧಾನ ಮಂತ್ರಿ, ಕೇಂದ್ರ ಸಚಿವರು, ಸಂಸತ್ ಸದಸ್ಯರು (MPs) ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು (ಎ, ಬಿ, ಸಿ ಮತ್ತು ಡಿ ವೃಂದಗಳು) ಇದರ ವ್ಯಾಪ್ತಿಗೆ ಬರುತ್ತಾರೆ. ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಧನಸಹಾಯ ಪಡೆಯುವ ಅಥವಾ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ವಿದೇಶಿ ದೇಣಿಗೆ ಪಡೆಯುವ ಸಂಸ್ಥೆಗಳ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಯ ಸದಸ್ಯರು ಸಹ ಇದರ ತನಿಖಾ ವ್ಯಾಪ್ತಿಗೆ ಒಳಪಡುತ್ತಾರೆ.
- ಅಧಿಕಾರಗಳು:- ಕೇಂದ್ರೀಯ ತನಿಖಾ ದಳದ (CBI) ಮೇಲೆ ಮೇಲ್ವಿಚಾರಣೆ ನಡೆಸುವ ಮತ್ತು ಅದಕ್ಕೆ ನಿರ್ದೇಶನಗಳನ್ನು ನೀಡುವ ಅಧಿಕಾರವನ್ನು ಇದು ಹೊಂದಿದೆ. ಕೇಂದ್ರ ಸರ್ಕಾರಿ ನೌಕರರ ಮೇಲಿನ ದೂರುಗಳನ್ನು ‘ಕೇಂದ್ರ ಜಾಗೃತ ಆಯೋಗ’ಕ್ಕೆ (CVC) ವರ್ಗಾಯಿಸುವ ಅಧಿಕಾರವನ್ನೂ ಇದು ಹೊಂದಿದೆ.
- ಪ್ರಧಾನಮಂತ್ರಿ ಹುದ್ದೆಗೆ ಇರುವ ವಿನಾಯಿತಿಗಳು:- ಅಂತರರಾಷ್ಟ್ರೀಯ ಸಂಬಂಧಗಳು, ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಪರಮಾಣು ಶಕ್ತಿ ಅಥವಾ ಬಾಹ್ಯಾಕಾಶ ಇಲಾಖೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಯವರ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಇದು ವಿಚಾರಣೆ ಮಾಡುವಂತಿಲ್ಲ.
- ಪ್ರಧಾನ ಮಂತ್ರಿಯವರ ವಿರುದ್ಧ ಯಾವುದೇ ವಿಚಾರಣೆಯನ್ನು ಪ್ರಾರಂಭಿಸಲು ಸಂಪೂರ್ಣ ಲೋಕಪಾಲ್ ಪೀಠದ ಪರಿಶೀಲನೆ ಮತ್ತು ಕನಿಷ್ಠ ಮೂರನೇ ಎರಡರಷ್ಟು (2/3) ಸದಸ್ಯರ ಅನುಮೋದನೆ ಕಡ್ಡಾಯವಾಗಿ ಅಗತ್ಯವಿರುತ್ತದೆ.



ನಿಮ್ಮದೊಂದು ಉತ್ತರ