ಭೂ ವ್ಯವಸ್ಥೆ ವಿಜ್ಞಾನ ಮಂಡಳಿ
ಪಠ್ಯಕ್ರಮ: ಜಿ.ಎಸ್-2/ ಆಡಳಿತ
ಸಂದರ್ಭ:
ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿರುವ ಐದು ಪ್ರತ್ಯೇಕ ಸಂಸ್ಥೆಗಳನ್ನು ವಿಲೀನಗೊಳಿಸಿ, ಭೂ ವ್ಯವಸ್ಥೆ ವಿಜ್ಞಾನ ಮಂಡಳಿ ಎಂದು ಏಕೀಕೃತಗೊಳಿಸಿ ಒಂದೇ ಸೂರಿನಡಿ ತರಲಾಗಿದೆ.
ಭೂ ವ್ಯವಸ್ಥೆ ವಿಜ್ಞಾನ ಮಂಡಳಿ (“ಅರ್ತ್ ಸಿಸ್ಟಮ್ ಸೈನ್ಸಸ್ ಕೌನ್ಸಿಲ್” -ESSC) ಯ ಬಗ್ಗೆ:
- ಗುರಿ: ಆಡಳಿತವನ್ನು ಸುಗಮಗೊಳಿಸುವುದು ಮತ್ತು ಬದಲಾಗುತ್ತಿರುವ ಹವಾಮಾನ, ಏರುಪೇರಾಗುವ ಮಾನ್ಸೂನ್ (ಮುಂಗಾರು) ಮತ್ತು ಕರಗುತ್ತಿರುವ ಧ್ರುವ ಪ್ರದೇಶಗಳಿಂದ ಎದುರಾಗುವ ವೈಜ್ಞಾನಿಕ ಮತ್ತು ಮಾನವೀಯ ಸಮಸ್ಯೆಗಳನ್ನು ಒಗ್ಗೂಡಿಸಿ ಪರಿಹರಿಸುವುದು.
ವಿಲೀನಗೊಂಡ ಸಂಸ್ಥೆಗಳು:
- ಭಾರತೀಯ ಉಷ್ಣವಲಯದ ಹವಾಮಾನಶಾಸ್ತ್ರ ಸಂಸ್ಥೆ (IITM), ಪುಣೆ
- ರಾಷ್ಟ್ರೀಯ ಧ್ರುವೀಯ ಮತ್ತು ಸಾಗರ ಸಂಶೋಧನಾ ಕೇಂದ್ರ (NCPOR), ಗೋವಾ
- ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (NIOT), ಚೆನ್ನೈ
- ರಾಷ್ಟ್ರೀಯ ಭೂ ವಿಜ್ಞಾನ ಅಧ್ಯಯನ ಕೇಂದ್ರ (NCESS), ತಿರುವನಂತಪುರಂ
- ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಮತ್ತು ಸೇವೆಗಳ ಕೇಂದ್ರ (INCOIS), ಹೈದರಾಬಾದ
ಭೂ ವ್ಯವಸ್ಥೆ ವಿಜ್ಞಾನ ಮಂಡಳಿ (ESSC) ಯು ಎರಡು ಅಧೀನ ಕಚೇರಿಗಳನ್ನು ಒಳಗೊಂಡಿದೆ:
- ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಗಾಗಿ ರಾಷ್ಟ್ರೀಯ ಕೇಂದ್ರ (NCMRWF).
- ESSC 2023 ರಲ್ಲಿ ಔಪಚಾರಿಕವಾಗಿ ಒಂದು ಮಂಡಳಿಯಾಗಿ ನೋಂದಾಯಿಸಲ್ಪಟ್ಟಿತು. ಭೂ ವಿಜ್ಞಾನ ಸಚಿವಾಲಯದ (MoES) ಕಾರ್ಯದರ್ಶಿಯವರು ESSC ಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಭೂ ವಿಜ್ಞಾನ ಸಚಿವರು ESSC ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.
ಎಲ್ಲರಿಗಾಗಿ ಯುವ ಎ ಐ (AI)
ಪಠ್ಯಕ್ರಮ: ಜಿ.ಎಸ್-3/ ವಿಜ್ಞಾನ ಮತ್ತು ತಂತ್ರಜ್ಞಾನ

ಸಂದರ್ಭ:
- ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY), ‘ಇಂಡಿಯಾ ಎಐ ಮಿಷನ್’ ಅಡಿಯಲ್ಲಿ “ಎಲ್ಲರಿಗಾಗಿ ಯುವ ಎ ಐ” (YUVA AI for ALL) ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ. ಇದು ಎಲ್ಲಾ ಭಾರತೀಯರಿಗೆ ಕೃತಕ ಬುದ್ಧಿಮತ್ತೆಯ (AI) ಪ್ರಪಂಚವನ್ನು ಪರಿಚಯಿಸುವ, ತನ್ನದೇ ಆದ ರೀತಿಯ ಮೊದಲ ಉಚಿತ ತರಗತಿ ನೀಡುವುದಾಗಿದೆ.
ಎಲ್ಲರಿಗಾಗಿ ಯುವ ಎ ಐ (YUVA AI for ALL) ನ ಬಗ್ಗೆ:
- ಇದು 4.5 ಗಂಟೆಗಳ ಅಲ್ಪಾವಧಿಯ, ಸ್ವಯಂ-ವೇಗದ ತರಗತಿ ಆಗಿದೆ. ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಕಲಿಯಲು ಆಸಕ್ತಿಯಿರುವ ಇತರರಿಗೆ ಎಐ (AI) ನ ಮೂಲಭೂತ ವಿಷಯಗಳನ್ನು ಸುಲಭವಾಗಿಸಲು ಮತ್ತು ಅದು ಪ್ರಪಂಚವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ತೋರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
- ಗುರಿ: 1 ಕೋಟಿ ನಾಗರಿಕರಿಗೆ ಮೂಲಭೂತ ಎಐ ಕೌಶಲ್ಯಗಳನ್ನು ನೀಡಿ ಸಬಲೀಕರಣಗೊಳಿಸುವುದು. ಇದು ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು, ನೈತಿಕ ಎಐ ಬಳಕೆಯನ್ನು ಉತ್ತೇಜಿಸಲು ಮತ್ತು ಭವಿಷ್ಯಕ್ಕಾಗಿ ಭಾರತದ ಉದ್ಯೋಗಿಗಳನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ.
ಇಂಡಿಯಾ ಎಐ (AI) ಮಿಷನ್ ಬಗ್ಗೆ:
- ಪ್ರಾರಂಭ: ಮಾರ್ಚ್ 2024.
- ಉದ್ದೇಶ : ಇದು ಭಾರತದಲ್ಲಿ ಎಐ ಸಂಶೋಧನೆ, ಅಭಿವೃದ್ಧಿ ಮತ್ತು ನಾವಿನ್ಯತೆಯನ್ನು ಉತ್ತೇಜಿಸುವ ಅನುಷ್ಠಾನ ಸಂಸ್ಥೆ: ಡಿಜಿಟಲ್ ಇಂಡಿಯಾ ಕಾರ್ಪೊರೇಶನ್ ಅಡಿಯಲ್ಲಿರುವ ‘ಇಂಡಿಯಾ ಎಐ’ ಸ್ವತಂತ್ರ ವಹಿವಾಟು ವಿಭಾಗ.
ಹನೋಯಿ ಸಮಾವೇಶ
ಪಠ್ಯಕ್ರಮ: ಜಿ.ಎಸ್-3/ ಸೈಬರ್ ಭದ್ರತೆ

ಸಂದರ್ಭ:
ಸೈಬರ್ ಅಪರಾಧಗಳನ್ನು ಎದುರಿಸುವ ಗುರಿಯೊಂದಿಗೆ ವಿಯೆಟ್ನಾಂ ದೇಶದ ರಾಜಧಾನಿ ಹನೋಯಿ ನಗರದಲ್ಲಿ ನಡೆದ ಐತಿಹಾಸಿಕ ವಿಶ್ವಸಂಸ್ಥೆಯ ‘ಸೈಬರ್ ಅಪರಾಧಗಳ ವಿರುದ್ಧದ ಸಮಾವೇಶ’ದ ಒಪ್ಪಂದಕ್ಕೆ 72 ರಾಷ್ಟ್ರಗಳು ಸಹಿ ಹಾಕಿವೆ.
ಹನೋಯಿ ಸಮಾವೇಶದ ಕುರಿತು:
- ಉದ್ದೇಶ: ಕಾನೂನು ಜಾರಿ ಸಂಸ್ಥೆಗಳ ನಡುವೆ ಅಂತರರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಲು ಇದು ಶಾಸಕಾಂಗ ಚೌಕಟ್ಟನ್ನು ಪ್ರಸ್ತಾಪಿಸುತ್ತದೆ. ಅಷ್ಟೇ ಅಲ್ಲದೆ, ಸೈಬರ್ ಅಪರಾಧಗಳನ್ನು ಎದುರಿಸಲು ಸಾಕಷ್ಟು ಮೂಲಸೌಕರ್ಯಗಳಿಲ್ಲದ ದೇಶಗಳಿಗೆ ತಾಂತ್ರಿಕ ನೆರವನ್ನು ಒದಗಿಸುತ್ತದೆ.
- ಮೊದಲ ಸಾರ್ವತ್ರಿಕ ಸಮಾವೇಶ: ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಅಪರಾಧಗಳನ್ನು ತನಿಖೆ ಮಾಡಲು ಮತ್ತು ವಿಚಾರಣೆ ನಡೆಸಲು ಈ ಸಮಾವೇಶವು ಮೊದಲ ಸಾರ್ವತ್ರಿಕ ಚೌಕಟ್ಟನ್ನು ಸ್ಥಾಪಿಸುತ್ತದೆ.
- ಕಾನೂನು ಬದ್ಧ: ವಿಶ್ವಸಂಸ್ಥೆಯ ಸೈಬರ್ ಅಪರಾಧ ಸಮಾವೇಶವು ಪ್ರಬಲವಾದ, ಕಾನೂನು ಬದ್ಧವಾಗಿರುವ ಸಾಧನವಾಗಿದೆ.
- ಅಳವಡಿಕೆ: ಐದು ವರ್ಷಗಳ ಮಾತುಕತೆಯ ನಂತರ 2024 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇದನ್ನು ಅಳವಡಿಸಿಕೊಂಡಿತು.
- ಇದಕ್ಕೆ ಸಹಿ ಹಾಕುವ ಪ್ರಕ್ರಿಯೆಯು ಮುಂದಿನ ವರ್ಷದವರೆಗೂ ತೆರೆದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಪ್ರಮುಖ ನಿಬಂಧನೆಗಳು: ಇದು ಈ ಕೆಳಗಿನ ರೀತಿಯ ಅಪರಾಧವನ್ನು ಅಪರಾಧಗಳನ್ನಾಗಿ ಮಾಡುತ್ತದೆ:
- ಸೈಬರ್-ಅವಲಂಬಿತ ಅಪರಾಧಗಳು : ಅನಧಿಕೃತ ಪ್ರವೇಶ (ಹ್ಯಾಕಿಂಗ್), ದತ್ತಾಂಶ (ಡೇಟಾ) ಹಸ್ತಕ್ಷೇಪ.
- ಸೈಬರ್-ಶಕ್ತಗೊಂಡ ಅಪರಾಧಗಳು: ಆನ್ಲೈನ್ ವಂಚನೆ, ಅನ್ಯೋನ್ಯ ಚಿತ್ರಗಳ ಒಪ್ಪಿಗೆಯಿಲ್ಲದ ಹಂಚಿಕೆ.
- ಮಕ್ಕಳ ಶೋಷಣೆ: ಆನ್ಲೈನ್ ಲೈಂಗಿಕ ದೌರ್ಜನ್ಯ, ನಿಂದನಾತ್ಮಕ ವಿಷಯಗಳ ವಿತರಣೆ, ಅಮಿಷವೊಡ್ಡುವುದು.
- ಇದು ಗಡಿಗಳನ್ನು ಮೀರಿ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಹಂಚಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ ಮತ್ತು ಸದಸ್ಯ ರಾಷ್ಟ್ರಗಳ ನಡುವೆ 24/7 ಸಹಕಾರ ಜಾಲವನ್ನು ಸ್ಥಾಪಿಸುತ್ತದೆ.
- ಐತಿಹಾಸಿಕ ಕ್ರಮ: ಅನ್ಯೋನ್ಯ ಚಿತ್ರಗಳ ಒಪ್ಪಿಗೆಯಿಲ್ಲದ ಹಂಚಿಕೆಯನ್ನು ಅಪರಾಧವೆಂದು ಗುರುತಿಸಿದ ಮೊದಲ ಅಂತರರಾಷ್ಟ್ರೀಯ ಒಪ್ಪಂದ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಇದು ಆನ್ಲೈನ್ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಸಿಕ್ಕ ಮಹತ್ವದ ಗೆಲುವಾಗಿದೆ.
- ಜಾರಿ: 40 ನೇ ರಾಷ್ಟ್ರವು ತನ್ನ ಅನುಮೋದನೆಯನ್ನು ಸಲ್ಲಿಸಿದ 90 ದಿನಗಳ ನಂತರ ಇದು ಜಾರಿಗೆ ಬರುತ್ತದೆ.
- ಸದಸ್ಯ ರಾಷ್ಟ್ರಗಳ ಸಮ್ಮೇಳನ: ಜಾರಿಗೆ ಬಂದ ನಂತರ, ಸದಸ್ಯ ರಾಷ್ಟ್ರಗಳ ನಡುವಿನ ಸಾಮರ್ಥ್ಯ ಮತ್ತು ಸಹಕಾರವನ್ನು ಸುಧಾರಿಸಲು ‘ಸದಸ್ಯ ರಾಷ್ಟ್ರಗಳ ಸಮ್ಮೇಳನ’ವು ನಿಯತಕಾಲಿಕವಾಗಿ ನಡೆಯಲಿದೆ.
- ಸಚಿವಾಲಯ: ವಿಶ್ವಸಂಸ್ಥೆಯ ಮಾದಕ ದ್ರವ್ಯ ಮತ್ತು ಅಪರಾಧ ಕಚೇರಿಯು (UNODC) ಇದರ ಸಚಿವಾಲಯವಾಗಿ ಕಾರ್ಯನಿರ್ವಹಿಸುತ್ತದೆ.
ಸೈಬರ್ ದಾಳಿಗಳ ವಿಧಗಳು:
- ಮಾಲ್ವೇರ್ (Malware): ಇದು ‘ದುರುದ್ದೇಶಪೂರಿತ ತಂತ್ರಾಂಶ’ದ ಸಂಕ್ಷಿಪ್ತ ರೂಪವಾಗಿದೆ. ಕಂಪ್ಯೂಟರ್, ಸರ್ವರ್ ಅಥವಾ ಕಂಪ್ಯೂಟರ್ ನೆಟ್ವರ್ಕ್ಗೆ ಹಾನಿ ಮಾಡಲು ವಿನ್ಯಾಸಗೊಳಿಸಲಾದ ಯಾವುದೇ ರೀತಿಯ ತಂತ್ರಾಂಶವನ್ನು ಇದು ಸೂಚಿಸುತ್ತದೆ.
- ಉದಾಹರಣೆ: ರಾನ್ಸಮ್ವೇರ್, ಸ್ಪೈವೇರ್, ವರ್ಮ್ಗಳು, ವೈರಸ್ಗಳು ಮತ್ತು ಟ್ರೋಜನ್ಗಳು ಇವೆಲ್ಲವೂ ಮಾಲ್ವೇರ್ನ ವಿಧಗಳಾಗಿವೆ.
- ಫಿಶಿಂಗ್ (Phishing): ಮೋಸದ ಇಮೇಲ್ಗಳು ಮತ್ತು ವೆಬ್ಸೈಟ್ಗಳನ್ನು ಬಳಸಿಕೊಂಡು ವೈಯಕ್ತಿಕ ಮಾಹಿತಿಯನ್ನು ಕದಿಯಲು ಪ್ರಯತ್ನಿಸುವ ವಿಧಾನ ಇದಾಗಿದೆ.
ಮಾಲ್ವೇರ್ (Malware) ನ ವಿಧಗಳು:
- ಸ್ಪೈವೇರ್ (Spyware): ಇದು ನಿಮ್ಮ ಮೇಲೆ ಕಣ್ಣಿಡುವ ತಂತ್ರಾಂಶವಾಗಿದೆ. ಜಾಹೀರಾತುಗಳನ್ನು ನಿಮ್ಮ ಯಂತ್ರಣಕ್ಕೆ ಕಳುಹಿಸಲು ಇದು ನಿಮ್ಮ ಇಂಟರ್ನೆಟ್ ಚಟುವಟಿಕೆಗಳನ್ನು ಹುಡುಕಾಟ ಮಾಡುತ್ತಾ ಗಮನಿಸುತ್ತದೆ.
- ವೈರಸ್ (Virus): ಇದೊಂದು ಸಾಂಕ್ರಾಮಿಕ ಕಾರ್ಯಕ್ರಮ ಅಥವಾ ಕೋಡ್ ಆಗಿದ್ದು, ಮತ್ತೊಂದು ತಂತ್ರಾಂಶಕ್ಕೆ ಅಂಟಿಕೊಳ್ಳುತ್ತದೆ ಮತ್ತು ಆ ತಂತ್ರಾಂಶ ಚಾಲನೆಯಾದಾಗ ತನ್ನನ್ನು ತಾನೇ ಪುನರುತ್ಪಾದಿಸಿಕೊಳ್ಳುತ್ತದೆ.
- ಸಾಮಾನ್ಯವಾಗಿ ಕಂಪ್ಯೂಟರ್ಗಳ ನಡುವೆ ಸಾಫ್ಟ್ವೇರ್ ಅಥವಾ ಫೈಲ್ಗಳನ್ನು ಹಂಚಿಕೊಳ್ಳುವ ಮೂಲಕ ಇದು ಹರಡುತ್ತದೆ.
- ವರ್ಮ್ (Worm): ಇದು ತನ್ನನ್ನು ತಾನೇ ನಕಲು ಮಾಡಿಕೊಳ್ಳುವ ಮತ್ತು ಕಂಪ್ಯೂಟರ್ನಲ್ಲಿನ ದತ್ತಾoಶ ಮತ್ತು ಫೈಲ್ಗಳನ್ನು ನಾಶಪಡಿಸುವ ಕಾರ್ಯಕ್ರಮವಾಗಿದೆ.
- ಡ್ರೈವ್ ಖಾಲಿಯಾಗುವವರೆಗೂ ವ್ಯವಸ್ಥೆಯನ್ನು ಕಾರ್ಯಗೊಳಿಸುವ ಕಡತಗಳು ಮತ್ತು ದತ್ತಾoಶದ ಕಡತಗಳನ್ನು “ತಿನ್ನುವ” ಕೆಲಸವನ್ನು ವರ್ಮ್ಗಳು ಮಾಡುತ್ತವೆ.
ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತದಲ್ಲಿ ಇತ್ತೀಚೆಗೆ ತೆಗೆದುಕೊಂಡ ಕ್ರಮಗಳು:
- ಸೈಬರ್ ಸುರಕ್ಷಿತ್ ಭಾರತ ಉಪಕ್ರಮ: ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಐಟಿ ಸಿಬ್ಬಂದಿಗೆ ಸುರಕ್ಷತಾ ಕ್ರಮಗಳ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯೊಂದಿಗೆ 2018 ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
- ರಾಷ್ಟ್ರೀಯ ಸೈಬರ್ ಭದ್ರತಾ ಸಮನ್ವಯ ಕೇಂದ್ರ (NCCC): ನೈಜ ಸಮಯದ ಸೈಬರ್ ಬೆದರಿಕೆಗಳನ್ನು ಪತ್ತೆಹಚ್ಚಲು, ದೇಶಕ್ಕೆ ಬರುವ ಇಂಟರ್ನೆಟ್ ಟ್ರಾಫಿಕ್ ಮತ್ತು ಸಂವಹನ ಮೆಟಾಡೇಟಾವನ್ನು ಸ್ಕ್ಯಾನ್ ಮಾಡಲು 2017 ರಲ್ಲಿ NCCC ಅನ್ನು ಅಭಿವೃದ್ಧಿಪಡಿಸಲಾಯಿತು.
- ಸೈಬರ್ ಸ್ವಚ್ಛತಾ ಕೇಂದ್ರ: ವೈರಸ್ಗಳು ಮತ್ತು ಮಾಲ್ವೇರ್ಗಳನ್ನು ಅಳಿಸಿಹಾಕುವ ಮೂಲಕ ಇಂಟರ್ನೆಟ್ ಬಳಕೆದಾರರು ತಮ್ಮ ಕಂಪ್ಯೂಟರ್ ಮತ್ತು ಸಾಧನಗಳನ್ನು ಸ್ವಚ್ಛಗೊಳಿಸಲು 2017 ರಲ್ಲಿ ಈ ವೇದಿಕೆಯನ್ನು ಪರಿಚಯಿಸಲಾಯಿತು.
- ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ – ಇಂಡಿಯಾ (CERT-IN): ಹ್ಯಾಕಿಂಗ್ ಮತ್ತು ಫಿಶಿಂಗ್ನಂತಹ ಸೈಬರ್ ಭದ್ರತಾ ಬೆದರಿಕೆಗಳನ್ನು ನಿರ್ವಹಿಸುವ ನೋಡಲ್ ಏಜೆನ್ಸಿ ಇದಾಗಿದೆ.
ಸಂಬಂಧಿತ ಕಾನೂನುಗಳು
- ಮಾಹಿತಿ ತಂತ್ರಜ್ಞಾನ ಕಾಯಿದೆ, 2000.
- ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ, 2019 (2022ರಲ್ಲಿ ಹಿಂಪಡೆಯಲಾಗಿದೆ).
- ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯಿದೆ, 2023 (DPDP ಕಾಯಿದೆ).
- ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ನಿಯಮಗಳು, 2025.
ಅಂತರರಾಷ್ಟ್ರೀಯ ಕಾರ್ಯವಿಧಾನಗಳು
- ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ITU): ಇದು ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದ್ದು, ದೂರಸಂಪರ್ಕ ಮತ್ತು ಸೈಬರ್ ಸುರಕ್ಷತೆಯ ವಿಷಯಗಳ ಪ್ರಮಾಣೀಕರಣ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸೈಬರ್ ಅಪರಾಧಗಳಿಗಾಗಿ ಬುಡಾಪೆಸ್ಟ್ ಸಮಾವೇಶ:
-
- ರಾಷ್ಟ್ರೀಯ ಕಾನೂನುಗಳನ್ನು ಸಮನ್ವಯಗೊಳಿಸುವುದು, ತನಿಖಾ ತಂತ್ರಗಳನ್ನು ಸುಧಾರಿಸುವುದು ಮತ್ತು ರಾಷ್ಟ್ರಗಳ ನಡುವಿನ ಸಹಕಾರವನ್ನು ಹೆಚ್ಚಿಸುವ ಮೂಲಕ ಇಂಟರ್ನೆಟ್ ಮತ್ತು ಕಂಪ್ಯೂಟರ್ ಅಪರಾಧಗಳನ್ನು (ಸೈಬರ್ ಅಪರಾಧ) ಎದುರಿಸಲು ಪ್ರಯತ್ನಿಸುವ ಅಂತರರಾಷ್ಟ್ರೀಯ ಒಪ್ಪಂದ ಇದಾಗಿದೆ.
- ಇದು 1 ಜುಲೈ 2004 ರಂದು ಜಾರಿಗೆ ಬಂದಿತು.
- ಭಾರತವು ಈ ಸಮಾವೇಶಕ್ಕೆ ಸಹಿಯನ್ನು ಹಾಕಿಲ್ಲ.
ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ (PPV&FRA Act))
ಪಠ್ಯಕ್ರಮ: ಜಿ.ಎಸ್-3/ ಕೃಷಿ
ಸಂದರ್ಭ:
- ಕೇಂದ್ರ ಸರ್ಕಾರವು ‘ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ’ (PPV&FRA Act) ಯನ್ನು ಪಾಲುದಾರರಿಂದ ಸಲಹೆಗಳನ್ನು ಅಳವಡಿಸಿಕೊಳ್ಳಲು ತಿದ್ದುಪಡಿ ಮಾಡಲಿದೆ ಎಂದು ಕೇಂದ್ರ ಕೃಷಿ ಸಚಿವರು ತಿಳಿಸಿದ್ದಾರೆ.
ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ (ಪ್ರೊಟೆಕ್ಷನ್ ಆಫ್ ಪ್ಲಾಂಟ್ ವೆರೈಟಿ ಅಂಡ್ ಫಾರ್ಮರ್ಸ್ ರೈಟ್ಸ್ ಆಕ್ಟ್ – PPV&FRA Act), 2001 ರ ಬಗ್ಗೆ:
- ಉದ್ದೇಶ: ಈ ಕೆಳಗಿನವುಗಳಿಗೆ ಪರಿಣಾಮಕಾರಿ ವ್ಯವಸ್ಥೆಯನ್ನು ಸ್ಥಾಪಿಸುವುದು:
- ಸಸ್ಯ ತಳಿಗಳ ಸಂರಕ್ಷಣೆ.
- ರೈತರು ಮತ್ತು ಸಸ್ಯ ತಳಿಗಳನ್ನು ಅಭಿವೃದ್ಧಿಪಡಿಸುವವರ ಹಕ್ಕುಗಳ ರಕ್ಷಣೆ
- ಹೊಸ ತಳಿಯ ಸಸ್ಯಗಳ ಅಭಿವೃದ್ಧಿಯನ್ನು ಉತ್ತೇಜಿಸುವುದು.
ಮಹತ್ವ :
- ಇದು ನಾವೀನ್ಯತೆ ಮತ್ತು ರೈತರ ಸಾಂಪ್ರದಾಯಿಕ ಹಕ್ಕುಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.
- ಕೃಷಿ ಜೀವವೈವಿಧ್ಯದ ಸಂರಕ್ಷಣೆಯನ್ನು ಉತ್ತೇಜಿಸುತ್ತದೆ.
- ಗ್ರಾಮೀಣ ಜೀವನೋಪಾಯವನ್ನು ರಕ್ಷಿಸುವ ಜೊತೆಗೆ ಬೀಜ ಉದ್ಯಮದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಅಪಾಯದಲ್ಲಿರುವ ಭಾರತದ ಡುಗಾಂಗ್ಗಳು (ಕಡಲ ಹಸುಗಳು)
ಪಠ್ಯಕ್ರಮ: ಜಿ.ಎಸ್-3/ ಸುದ್ದಿಯಲ್ಲಿರುವ ಪ್ರಭೇದಗಳು

ಸಂದರ್ಭ:
- ಅಬುಧಾಬಿಯಲ್ಲಿ ನಡೆದ ಐಯುಸಿಎನ್ (IUCN) ಸಂರಕ್ಷಣಾ ಕಾಂಗ್ರೆಸ್ನಲ್ಲಿ ಬಿಡುಗಡೆಯಾದ ಇತ್ತೀಚಿನ ವರದಿಯು ಭಾರತದ ಡುಗಾಂಗ್ ಜನಸಂಖ್ಯೆಗೆ ಎದುರಾಗಿರುವ ಅಪಾಯದ ಬಗ್ಗೆ ಎಚ್ಚರಿಸಿದೆ.
ಡುಗಾಂಗ್ಗಳು (ಡುಗಾಂಗ್ ಡುಗಾನ್)
- ಡುಗಾಂಗ್ಗಳು ಪ್ರಮುಖವಾಗಿ ಸಸ್ಯಾಹಾರಿಗಳಾಗಿದ್ದು, ದಿನಕ್ಕೆ 30 ರಿಂದ 40 ಕೆಜಿ ಕಡಲ ಹುಲ್ಲನ್ನು (seagrass) ತಿನ್ನುತ್ತವೆ.
- ಇವುಗಳನ್ನು “ಕಡಲ ಹಸುಗಳು” ಎಂದು ಕರೆಯಲಾಗುತ್ತದೆ. ಇವು ಹಿಂದೂ ಮಹಾಸಾಗರ ಮತ್ತು ಪಶ್ಚಿಮ ಪೆಸಿಫಿಕ್ ಮಹಾಸಾಗರದ ಆಳವಿಲ್ಲದ ಕರಾವಳಿ ನೀರಿನಲ್ಲಿ ಶಾಂತಿಯಿಂದ ಕಡಲ ಹುಲ್ಲನ್ನು ಮೇಯುತ್ತವೆ.
- ಕರಾವಳಿ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವಲ್ಲಿ ಮತ್ತು ಮೀನು ಉತ್ಪಾದನೆಗೆ ಸಹಾಯ ಮಾಡುವಲ್ಲಿ ಅವು ಪ್ರಮುಖ ಪಾತ್ರವಹಿಸುವುದರಿಂದ, ಇವುಗಳನ್ನು “ಸಮುದ್ರದ ರೈತರು ಅಥವಾ ತೋಟಗಾರರು” ಎಂದು ಕರೆಯಲಾಗುತ್ತದೆ.
- ಭೌಗೋಳಿಕ ವ್ಯಾಪ್ತಿ: ಈ ಶಾಂತ ಸ್ವಭಾವದ ದೈತ್ಯ ಜೀವಿಗಳು ಕರಾವಳಿಯುದ್ದಕ್ಕೂ ಬೆಚ್ಚಗಿನ ನೀರಿನಲ್ಲಿ ಕಂಡುಬರುತ್ತವೆ. ಇವು ಮುಖ್ಯವಾಗಿ ಕೊಲ್ಲಿಗಳು ಮತ್ತು ಲಗೂನ್ಗಳಂತಹ ಶಾಂತವಾದ ಆವಾಸಸ್ಥಾನಗಳಲ್ಲಿ ಕಂಡುಬರುವ ಕಡಲ ಹುಲ್ಲು ಹಾಸುಗಳಿಗೆ ಸೀಮಿತವಾಗಿವೆ.
- ಹಂಚಿಕೆ: ಇವು ಭಾರತದಲ್ಲಿ ಮನ್ನಾರ್ ಕೊಲ್ಲಿ, ಪಾಕ್ ಕೊಲ್ಲಿ, ಕಚ್ ಕೊಲ್ಲಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಂಡುಬರುತ್ತವೆ.
- ಬೆದರಿಕೆಗಳು: ಮಾಂಸಕ್ಕಾಗಿ ಬೇಟೆಯಾಡುವುದು, ವಾಣಿಜ್ಯ ಮೀನುಗಾರಿಕೆಯಿಂದಾಗಿ ಆಕಸ್ಮಿಕವಾಗಿ ಬಲೆಯಲ್ಲಿ ಸಿಲುಕಿ ಸಾವು ಮತ್ತು ಆವಾಸಸ್ಥಾನದ ನಾಶ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕಳೆದ ಹಲವಾರು ದಶಕಗಳಲ್ಲಿ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ.
ಸಂರಕ್ಷಣಾ ಸ್ಥಿತಿ:
- IUCN ಕೆಂಪು ಪಟ್ಟಿ – ದುರ್ಬಲ (Vulnerable).
- ವನ್ಯಜೀವಿ (ಸಂರಕ್ಷಣೆ) ಕಾಯಿದೆ, 1972 –ಅನುಸೂಚಿ I
ಭಾರತದಲ್ಲಿ ಸಂರಕ್ಷಣಾ ಪ್ರಯತ್ನಗಳು
- ಡುಗಾಂಗ್ ಸಂರಕ್ಷಣಾ ಮೀಸಲು: ತಮಿಳುನಾಡಿನ ಪಾಕ್ ಕೊಲ್ಲಿಯಲ್ಲಿ ಭಾರತದ ಮೊದಲ ಡುಗಾಂಗ್ ಸಂರಕ್ಷಣಾ ಮೀಸಲು ಪ್ರದೇಶವನ್ನು ಸ್ಥಾಪಿಸಲಾಗಿದೆ. ಇದನ್ನು ಸಾಗರ ಜೀವವೈವಿಧ್ಯ ಸಂರಕ್ಷಣೆಗೆ ಜಾಗತಿಕ ಮಾದರಿ ಎಂದು ಐಯುಸಿಎನ್ (IUCN) ಗುರುತಿಸಿದೆ.
- ರಾಷ್ಟ್ರೀಯ ಡುಗಾಂಗ್ ಚೇತರಿಕೆ ಕಾರ್ಯಕ್ರಮ: ಆವಾಸಸ್ಥಾನಗಳನ್ನು ಸಂರಕ್ಷಿಸಲು ಮತ್ತು ಡುಗಾಂಗ್ ಸಂರಕ್ಷಣೆಯನ್ನು ಉತ್ತೇಜಿಸಲು ತಮಿಳುನಾಡು, ಗುಜರಾತ್ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಹಯೋಗದೊಂದಿಗೆ ಇದನ್ನು ಪ್ರಾರಂಭಿಸಲಾಗಿದೆ.
- ಅಂತರರಾಷ್ಟ್ರೀಯ ಸಹಕಾರ: ಭಾರತದ ಪ್ರಯತ್ನಗಳು CITES ಮತ್ತು ವಲಸೆ ಪ್ರಭೇದಗಳ ಸಮಾವೇಶದಂತಹ (CMS) ಜಾಗತಿಕ ಸಂರಕ್ಷಣಾ ಚೌಕಟ್ಟುಗಳೊಂದಿಗೆ ಹೊಂದಿಕೆಯಾಗುತ್ತವೆ.
ಗಿಂಕ್ಗೊ-ಹಲ್ಲಿನ ಕೊಕ್ಕಿನ ತಿಮಿಂಗಿಲಗಳು
ಪಠ್ಯಕ್ರಮ: ಜಿ.ಎಸ್-3/ ಸುದ್ದಿಯಲ್ಲಿರುವ ಪ್ರಭೇದಗಳು

ಸಂದರ್ಭ:
- ಇತ್ತೀಚೆಗೆ, ವಿಜ್ಞಾನಿಗಳ ತಂಡವೊಂದು ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಅಪರೂಪದ ‘ಗಿಂಕ್ಗೊ-ಹಲ್ಲಿನ ಕೊಕ್ಕಿನ ತಿಮಿಂಗಿಲಗಳನ್ನು’ ಪತ್ತೆಹಚ್ಚಿದೆ.
ಗಿಂಕ್ಗೊ-ಹಲ್ಲಿನ ಕೊಕ್ಕಿನ ತಿಮಿಂಗಿಲ (ಮೆಸೊಪ್ಲೋದೊಂ ಗಿಂಕ್ಗೋಡೆನ್ಸ್) ಗಳ ಬಗ್ಗೆ:
- ಇವು ಕೊಕ್ಕಿನ ತಿಮಿಂಗಿಲಗಳ 24 ಪ್ರಭೇದಗಳಲ್ಲಿ ಒಂದಾಗಿವೆ.
- ಕೊಕ್ಕಿನ ತಿಮಿಂಗಿಲಗಳು ಭೂಮಿಯ ಮೇಲಿರುವ ಅತ್ಯಂತ ಆಳವಾಗಿ ಧುಮುಕುವ ಸಸ್ತನಿಗಳಾಗಿವೆ.
- ಇವು ತಮ್ಮ ಜೀವನದ ಹೆಚ್ಚಿನ ಸಮಯವನ್ನು ಸಾಗರಗಳಲ್ಲಿ ಕಳೆಯುತ್ತವೆ. ಉಸಿರಾಡಲು ಕೇವಲ ಕೆಲವೇ ನಿಮಿಷಗಳ ಕಾಲ ಮೇಲೆ ಬರುತ್ತವೆ, ಸಾಮಾನ್ಯವಾಗಿ ಕರಾವಳಿಯಿಂದ ಬಹಳ ದೂರದಲ್ಲಿರುತ್ತವೆ.
- ಇವು ಪಶ್ಚಿಮ ಪೆಸಿಫಿಕ್ನ ಉಷ್ಣವಲಯದ ಮತ್ತು ಬೆಚ್ಚಗಿನ-ಸಮಶೀತೋಷ್ಣ ನೀರಿನಲ್ಲಿ ಕಂಡುಬರುತ್ತವೆ.
- IUCN ಸ್ಥಿತಿ: ದತ್ತಾಂಶದ ಕೊರತೆ (DD).
ಲೀಡ್ ಐಟಿ (LeadIT)
ಪಠ್ಯಕ್ರಮ: ಜಿ.ಎಸ್-3/ ಪರಿಸರ
ಸಂದರ್ಭ
- ಬ್ರೆಜಿಲ್ನ ಬೆಲೆಮ್ನಲ್ಲಿ ನಡೆದ COP30 ಶೃಂಗಸಭೆಯಲ್ಲಿ, ಭಾರತದ ಕೇಂದ್ರ ಪರಿಸರ ಸಚಿವರು ಲೀಡ್ಐಟಿ ಉದ್ಯಮ ನಾಯಕರ ದುಂಡುಮೇಜಿನ ಸಭೆ’ ಯನ್ನು ಉದ್ದೇಶಿಸಿ ಮಾತನಾಡಿದರು. ಕಡಿಮೆ ಇಂಗಾಲದ ಕೈಗಾರಿಕಾ ಪರಿವರ್ತನೆಗಳನ್ನು ಚಾಲನೆ ಮಾಡುವಲ್ಲಿ ಭಾರತದ ಪಾತ್ರವನ್ನು ಅವರು ಪುನರುಚ್ಚರಿಸಿದರು.
ಲೀಡ್ಐಟಿ (LeadIT) ಯ ಬಗ್ಗೆ:
- ಪ್ರಾರಂಭ: ವಿಶ್ವಸಂಸ್ಥೆಯ ಹವಾಮಾನ ಕ್ರಿಯೆ ಶೃಂಗಸಭೆಯಲ್ಲಿ, ವಿಶ್ವ ಆರ್ಥಿಕ ವೇದಿಕೆಯ ಬೆಂಬಲದೊಂದಿಗೆ, ಭಾರತ ಮತ್ತು ಸ್ವೀಡನ್ ಜಂಟಿಯಾಗಿ 2019 ರಲ್ಲಿ ಇದನ್ನು ಪ್ರಾರಂಭಿಸಿದವು.
- ಉದ್ದೇಶ: ಉಕ್ಕು, ಸಿಮೆಂಟ್, ಅಲ್ಯೂಮಿನಿಯಂ, ರಾಸಾಯನಿಕಗಳು ಮತ್ತು ಭಾರೀ ಸಾರಿಗೆಯಂತಹ ‘ನಿಯಂತ್ರಿಸಲು ಕಷ್ಟಕರವಾದ’ ಹಾಗೂ ಹೆಚ್ಚು ಇಂಗಾಲ ಹೊರಸೂಸುವ ಕೈಗಾರಿಕೆಗಳನ್ನು, 2050 ರ ವೇಳೆಗೆ ‘ನಿವ್ವಳ-ಶೂನ್ಯ’ ಹೊರಸೂಸುವಿಕೆ ಸ್ಥಿತಿಗೆ ಪರಿವರ್ತಿಸುವುದನ್ನು ತ್ವರಿತಗೊಳಿಸುವುದು ಇದರ ಉದ್ದೇಶವಾಗಿದೆ.
- ಇದು ನಿರ್ದಿಷ್ಟವಾಗಿ ‘ಕೈಗಾರಿಕಾ ಇಂಗಾಲ ಮುಕ್ತಗೊಳಿಸುವಿಕೆ’ಯ ಮೇಲೆ ಗಮನಹರಿಸಿದ ಪ್ರಪ್ರಥಮ ಜಾಗತಿಕ ಉನ್ನತ ಮಟ್ಟದ ಉಪಕ್ರಮಗಳಲ್ಲಿ ಒಂದಾಗಿದೆ.
- ಲೀಡ್ಐಟಿ 2.0 (2024–2026): ದುಬೈನಲ್ಲಿ ನಡೆದ COP28 ಶೃಂಗಸಭೆಯಲ್ಲಿ ಇದನ್ನು ಅಂಗೀಕರಿಸಲಾಯಿತು. ಇದು ಕೇವಲ ‘ಸಂವಾದ’ದಿಂದ ಪ್ರಾಯೋಗಿಕ ‘ಅನುಷ್ಠಾನ’ದ ಹಂತಕ್ಕೆ ಸಾಗುವ ಧ್ಯೇಯವನ್ನು ಹೊಂದಿದೆ.
ಕ್ರಿಸ್ಪರ್-ಕ್ಯಾಸ್ ವ್ಯವಸ್ಥೆಗಳು (CRISPR-Cas systems)
ವಿಜ್ಞಾನ ಮತ್ತು ತಂತ್ರಜ್ಞಾನ
ಸಂದರ್ಭ:
- ಅಂತರರಾಷ್ಟ್ರೀಯ ಮಟ್ಟದಲ್ಲಿ ಪೇಟೆಂಟ್ ಹೊಂದಿರುವ ‘ಕ್ರಿಸ್ಪರ್-ಕ್ಯಾಸ್’ (CRISPR-Cas) ವ್ಯವಸ್ಥೆಗಳಿಗೆ ಪರ್ಯಾಯವಾಗಿ, ಐಸಿಎಆರ್ (ICAR) ನ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ (IIRR) ಯ ವಿಜ್ಞಾನಿಗಳು ‘ಟಿಎನ್ಪಿಬಿ ಪ್ರೋಟೀನ್ಗಳನ್ನು’ (TnpB proteins) ಬಳಸಿಕೊಂಡು, ಸಂಪೂರ್ಣ ಸ್ವದೇಶಿ ನಿರ್ಮಿತ ವಂಶವಾಹಿ ತಿದ್ದುವಿಕೆ (ಜಿನೋಮ್-ಎಡಿಟಿಂಗ್ -GE) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ನಿಮಗಿದು ತಿಳಿದಿದೆಯೇ?
- ಮೇ 2025 ರಲ್ಲಿ, ಭಾರತೀಯ ಭತ್ತ ಸಂಶೋಧನಾ ಸಂಸ್ಥೆ (IIRR) ಮತ್ತು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI) ಅಭಿವೃದ್ಧಿಪಡಿಸಿದ ವಂಶವಾಹಿ ತಿದ್ದುಪಡಿ ಮಾಡಿದ ಎರಡು ಭತ್ತದ ಪ್ರಭೇದಗಳನ್ನು ICAR ಬಿಡುಗಡೆ ಮಾಡಿತು.
- IIRR ಸಂಸ್ಥೆಯು CRISPR-Cas12a ತಂತ್ರಜ್ಞಾನ ಬಳಸಿ, ‘ಸೈಟೊಕಿನಿನ್ ಆಕ್ಸಿಡೇಸ್ 2’ ವಂಶವಾಹಿಯನ್ನು ಮಾರ್ಪಾಡು ಮಾಡುವ ಮೂಲಕ ಸಾಂಬಾ ಮಸೂರಿ ಭತ್ತದ ಇಳುವರಿಯನ್ನು ಹೆಚ್ಚಿಸಿದೆ. ಹಾಗೆಯೇ, IARI ಸಂಸ್ಥೆಯು CRISPR-Cas9 ಬಳಸಿ, ‘DST’ ಜೀನ್ ಅನ್ನು ತಿದ್ದುಪಡಿ ಮಾಡುವ ಮೂಲಕ ಎಂಟಿಯು-1010 (ಕಾಟನ್ದೊರ ಸನ್ನಲು) ತಳಿಯಲ್ಲಿ ಬರಗಾಲ ಮತ್ತು ಉಪ್ಪಿನಂಶವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದೆ.
ಟಿಎನ್ಪಿಬಿ (TnpB) ಅಥವಾ ಟ್ರಾನ್ಸ್ಪೋಸನ್-ಸಂಬಂಧಿತ ಪ್ರೋಟೀನ್ಗಳು (Transposon-associated proteins):
- ಇದು ಒಂದು ರೀತಿಯ “ಆಣ್ವಿಕ ಕತ್ತರಿ” (molecular scissors) ಯಂತೆ ಕೆಲಸ ಮಾಡುತ್ತದೆ. ಇದು ಸಸ್ಯದ ಡಿಎನ್ಎ ಅನ್ನು ಅತ್ಯಂತ ನಿಖರವಾಗಿ ಕತ್ತರಿಸಿ, ಮಾರ್ಪಡಿಸುತ್ತದೆ. ವಿಶೇಷವೆಂದರೆ, ಇದು ಯಾವುದೇ ಹೊರಗಿನ ಜೀನ್ಗಳನ್ನು ಸೇರಿಸದೆಯೇ, ನಮಗೆ ಬೇಕಾದ ಗುಣಲಕ್ಷಣಗಳನ್ನು ಸಸ್ಯದಲ್ಲಿ ತರುತ್ತದೆ.
- ಗಾತ್ರದಲ್ಲಿ ದೊಡ್ಡದಾದ Cas9 ಮತ್ತು Cas12a ಪ್ರೋಟೀನ್ಗಳಿಗೆ ಹೋಲಿಸಿದರೆ, TnpB ತುಂಬಾ ಚಿಕ್ಕದಾಗಿದೆ (ಕೇವಲ 408 ಅಮೈನೋ ಆಮ್ಲಗಳು). ಆದ್ದರಿಂದ, ಇದನ್ನು ವೈರಲ್ ವಾಹಕಗಳ ಮೂಲಕ ಸಸ್ಯದ ಜೀವಕೋಶದೊಳಗೆ ಕಳುಹಿಸುವುದು ಸುಲಭ. ಇದರಿಂದ ಪ್ರಯೋಗಾಲಯದ ಸಂಕೀರ್ಣ ಅಂಗಾಂಶ ಕೃಷಿ ವಿಧಾನಗಳನ್ನು ಅವಲಂಬಿಸುವುದು ತಪ್ಪುತ್ತದೆ.
ವಂಶವಾಹಿ ತಿದ್ದುವಿಕೆ ತಂತ್ರಜ್ಞಾನ (Gene Editing Technology) ದ ಬಗ್ಗೆ:
- ಇದು ಒಂದು ಜೀವಿಯ ಡಿಎನ್ಎ ನಲ್ಲಿ ಬದಲಾವಣೆ ಮಾಡಲು ಬಳಸುವ ತಂತ್ರಜ್ಞಾನವಾಗಿದೆ. ಇದರ ಮೂಲಕ ವಂಶವಾಹಿಯ (ಜೀನೋಮ್) ನಿರ್ದಿಷ್ಟ ಭಾಗಗಳಲ್ಲಿ ಆನುವಂಶಿಕ ಅಂಶಗಳನ್ನು ಸೇರಿಸಬಹುದು, ತೆಗೆದುಹಾಕಬಹುದು ಅಥವಾ ಮಾರ್ಪಡಿಸಬಹುದಾಗಿದೆ.
ಕ್ರಿಸ್ಪರ್-ಕ್ಯಾಸ್ 9 ತಂತ್ರಜ್ಞಾನ (CRISPR Cas9 Technology) ದ ಬಗ್ಗೆ:
- ಸಂಕ್ಷಿಪ್ತ ರೂಪ: ಕ್ಲಸ್ಟರ್ಡ್ ರೆಗ್ಯುಲರ್ಲಿ ಇಂಟರ್ಸ್ಪೇಸ್ಡ್ ಶಾರ್ಟ್ ಪ್ಯಾಲಿಂಡ್ರೊಮಿಕ್ ರಿಪೀಟ್ಸ್ (Clustered Regularly Interspaced Short Palindromic Repeats).
- ಮಹತ್ವ: ಈ ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ಬಳಸಿ, ವಿಜ್ಞಾನಿಗಳು ಜೀವಿಗಳ ಡಿಎನ್ಎಯಲ್ಲಿ ಬೇಕಾದ ಬದಲಾವಣೆಗಳನ್ನು ಮಾಡಬಹುದು.
- ಇದರಲ್ಲಿರುವ ‘ಕ್ಯಾಸ್ 9 (Cas9)’ ಎಂಬ ಕಿಣ್ವವು ಒಂದು ಅಣು ಕತ್ತರಿಯಂತೆ ಕೆಲಸ ಮಾಡುತ್ತದೆ. ಎಲ್ಲಿ ಕತ್ತರಿಸಬೇಕು ಎಂಬುದನ್ನು, ನಿರ್ದಿಷ್ಟ ಡಿಎನ್ಎ ವಿನ್ಯಾಸಕ್ಕೆ ಹೊಂದಿಕೆಯಾಗುವಂತೆ ಸಿದ್ಧಪಡಿಸಿದ ಆರ್ಎನ್ಎ (RNA) ಅಣುಗಳು ತೋರಿಸಿಕೊಡುತ್ತವೆ.
- ವಂಶವಾಹಿ ತಿದ್ದುವಿಕೆ (ಜಿನೋಮ್ ಎಡಿಟಿಂಗ್): ಇದು ಜೀವಿಯೊಂದರ ಜೀನೋಮ್ನಲ್ಲಿರುವ ಜೀನ್ (ವಂಶವಾಹಿ) ಗಳನ್ನೇ ತಿದ್ದುಪಡಿ ಮಾಡುವುದಾಗಿದೆ. ಇದರಲ್ಲಿ ಹೊರಗಿನ ಯಾವುದೇ ವಿದೇಶಿ ವಂಶವಾಹಿಗಳನ್ನು ಸೇರಿಸುವುದಿಲ್ಲ; ಬದಲಿಗೆ ನಮಗೆ ಬೇಕಾದ ಬದಲಾವಣೆಗಳನ್ನು ಅಸ್ತಿತ್ವದಲ್ಲಿರುವ ವಂಶವಾಹಿಗಳಲ್ಲೇ ಮಾಡಲಾಗುತ್ತದೆ.
- ಕುಲಾಂತರಿ (ಜನಟಿಕಲಿ ಮೋಡಿಫೈಡ್): ಇದರಲ್ಲಿ ಒಂದು ಜೀವಿಗೆ ಹೊಸ ಗುಣವನ್ನು ನೀಡಲು, ಅದಕ್ಕೆ ಸಂಬಂಧವಿಲ್ಲದ ಬೇರೊಂದು ಜೀವಿಯ ವಿದೇಶಿ ಜೀನ್ಗಳನ್ನು ತಂದು ಸೇರಿಸಲಾಗುತ್ತದೆ.
ನಿಯಂತ್ರಕ ಸಂಸ್ಥೆಗಳು:
- ಜನಟಿಕ್ ಇಂಜಿನಿಯರಿಂಗ್ ಅಪ್ಪರೈಸಲ್ ಸಮಿತಿ (GEAC): ಇದು ಕೇಂದ್ರ ಪರಿಸರ ಸಚಿವಾಲಯದ (MoEFCC) ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ನಿಯಂತ್ರಕ ಸಂಸ್ಥೆಯಾಗಿದೆ. ಕುಲಾಂತರಿ ಜೀವಿಗಳನ್ನು (GMOs) ಪರಿಶೀಲಿಸುವುದು ಮತ್ತು ಅವುಗಳಿಗೆ ಅನುಮತಿ ನೀಡುವುದು ಇದರ ಕಾರ್ಯವಾಗಿದೆ.
- ಜೈವಿಕ ಸುರಕ್ಷತೆಗಾಗಿ ಕಾರ್ಟಜೆನಾ ಶಿಷ್ಟಾಚಾರ (Cartagena Protocol on Biosafety): ಇದು ಜೀವವೈವಿಧ್ಯತೆಯ ಸಂರಕ್ಷಣೆಗಿರುವ ಒಂದು ಅಂತರರಾಷ್ಟ್ರೀಯ ಒಪ್ಪಂದವಾಗಿದೆ. ಕುಲಾಂತರಿ ಜೀವಿಗಳಿಂದ (GMOs) ಪರಿಸರಕ್ಕೆ ಹಾನಿಯಾಗದಂತೆ ಅವುಗಳನ್ನು ಸುರಕ್ಷಿತವಾಗಿ ನಿರ್ವಹಿಸುವುದನ್ನು ಇದು ಖಚಿತಪಡಿಸುತ್ತದೆ.
- ನಗೋಯಾ-ಕೌಲಾಲಂಪುರ (Nagoya-Kuala Lumpur): ಇದು ಕಾರ್ಟಜೆನಾ ಶಿಷ್ಟಾಚಾರಕ್ಕೆ ಸೇರಿಸಲಾದ ಒಂದು ಹೆಚ್ಚುವರಿ ಒಪ್ಪಂದವಾಗಿದೆ. ಒಂದು ವೇಳೆ ಕುಲಾಂತರಿ ಜೀವಿಗಳಿಂದ ಹಾನಿ ಸಂಭವಿಸಿದರೆ, ಅದಕ್ಕೆ ಯಾರು ಹೊಣೆ ಮತ್ತು ಅದಕ್ಕೆ ಏನು ಪರಿಹಾರ ಎಂಬುದನ್ನು ಇದು ನಿರ್ಧರಿಸುತ್ತದೆ.



ನಿಮ್ಮದೊಂದು ಉತ್ತರ