ಭಾರತ-ಬ್ರೆಜಿಲ್-ದಕ್ಷಿಣ ಆಫ್ರಿಕಾ (IBSA) ನಾಯಕರ ಶೃಂಗಸಭೆ
ಸಾಮಾನ್ಯ ಅಧ್ಯಯನ – 2 / ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಭಾರತ-ಬ್ರೆಜಿಲ್-ದಕ್ಷಿಣ ಆಫ್ರಿಕಾ (IBSA) ನಾಯಕರ ಶೃಂಗಸಭೆಯಲ್ಲಿ ಮಾತನಾಡಿದ ಭಾರತದ ಪ್ರಧಾನ ಮಂತ್ರಿಯವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳು ಇನ್ನು ಮುಂದೆ ಕೇವಲ ಒಂದು ಆಯ್ಕೆಯಾಗಿರದೆ, ಅದೊಂದು ಜಾಗತಿಕ ಅನಿವಾರ್ಯತೆಯಾಗಿದೆ ಎಂದು ಒತ್ತು ನೀಡಿದರು.
ಭಾರತ-ಬ್ರೆಜಿಲ್-ದಕ್ಷಿಣ ಆಫ್ರಿಕಾ (IBSA) ನಾಯಕರ ಶೃಂಗಸಭೆ, 2025 ರ ಬಗ್ಗೆ:
- ಗಮನಿಸಿ: ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲ ಜಿ-20 ಶೃಂಗಸಭೆಯೊಂದಿಗೆ ಇದು ಏಕಕಾಲದಲ್ಲಿ ಜರುಗಿತು.
ಐಬಿಎಸ್‌ಎ (IBSA) ಸಂವಾದ ವೇದಿಕೆಯ ಬಗ್ಗೆ:
- ಸ್ಥಾಪನೆ:- ‘ಗ್ಲೋಬಲ್ ಸೌತ್’ನ (ದಕ್ಷಿಣ ಗೋಳಾರ್ಧದ ರಾಷ್ಟ್ರಗಳ) ಸಾಮೂಹಿಕ ದನಿಯಾಗಿ, 2003 ರ ‘ಬ್ರೆಸಿಲಿಯಾ ಘೋಷಣೆ’ಯ ಮೂಲಕ ಇದನ್ನು ಸ್ಥಾಪಿಸಲಾಯಿತು.
- ಸದಸ್ಯತ್ವ: ಇದು ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾವನ್ನು (ಐಬಿಎಸ್‌ಎ ಟ್ರೋಯಿಕಾ ) ಒಳಗೊಂಡಿದೆ. ಈ ರಾಷ್ಟ್ರಗಳು ಬಹುಪಕ್ಷೀಯತೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಅಂತರ್ಗತ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದವು.
- ಮಹತ್ವ: ಇದು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಖಂಡಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.
- ಪ್ರಮುಖ ಉಪಕ್ರಮಗಳು: ದಕ್ಷಿಣ-ದಕ್ಷಿಣ ಸಹಕಾರವನ್ನು ವರ್ಧಿಸಲು ಸ್ಥಾಪಿತವಾದ “IBSA ಟ್ರಸ್ಟ್ ನಿಧಿ” (2006 ರಲ್ಲಿ ಕಾರ್ಯಾರಂಭ) ಮತ್ತು “ಇಬ್ಸಾಮಾರ್” (IBSAMAR) ಬಹುರಾಷ್ಟ್ರೀಯ ಕಡಲ ಸಮರಾಭ್ಯಾಸಗಳು ಇದರಲ್ಲಿ ಸೇರಿವೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಯ ಬಗ್ಗೆ:
- ಇದು ವಿಶ್ವಸಂಸ್ಥೆಯ (UN) ಪ್ರಮುಖ ಅಂಗ ಸಂಸ್ಥೆಗಳಲ್ಲಿ ಒಂದಾಗಿದ್ದು, ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿದೆ.
- ವಿಶ್ವಸಂಸ್ಥೆಯ ಸನ್ನದಿನ ಅಡಿಯಲ್ಲಿ ಇದನ್ನು 1945 ರಲ್ಲಿ ಸ್ಥಾಪಿಸಲಾಯಿತು.
- ರಚನೆ: ಇದು 15 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಇದರಲ್ಲಿ ವೀಟೋ ಅಧಿಕಾರ ಹೊಂದಿರುವ ಐದು ಕಾಯಂ ಸದಸ್ಯರು (P5) ಮತ್ತು ಸಾಮಾನ್ಯ ಸಭೆಯಿಂದ ಎರಡು ವರ್ಷಗಳ ಅವಧಿಗೆ ಆಯ್ಕೆಯಾದ ಹತ್ತು ಕಾಯಂ ಅಲ್ಲದ ಸದಸ್ಯರು ಇರುತ್ತಾರೆ.
- ಕೇಂದ್ರ ಕಚೇರಿ: ಅಮೆರಿಕದ ನ್ಯೂಯಾರ್ಕ್ ನಗರದಲ್ಲಿದೆ.
ದಕ್ಷಿಣ ಆಫ್ರಿಕಾ ಜಿ-20 ಶೃಂಗಸಭೆ
ಸಾಮಾನ್ಯ ಅಧ್ಯಯನ – 2 / ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ 2025 ರ ಜಿ-20 ಶೃಂಗಸಭೆ ಜರುಗಿತು. ಆಫ್ರಿಕಾ ಖಂಡದ ನೆಲದಲ್ಲಿ ನಡೆದ ಚೊಚ್ಚಲ ಜಿ-20 ಶೃಂಗಸಭೆ ಇದಾಗಿದೆ. “ಒಗ್ಗಟ್ಟು, ಸಮಾನತೆ, ಸುಸ್ಥಿರತೆ” ಎಂಬುದು ಈ ಶೃಂಗಸಭೆಯ ಧ್ಯೇಯವಾಕ್ಯವಾಗಿತ್ತು.
ಶೃಂಗಸಭೆಯ ಮುಖ್ಯಾಂಶಗಳು:
- ಜಿ-20 ನಾಯಕರ ಘೋಷಣೆಯ ಅಂಗೀಕಾರ: ಹವಾಮಾನ ಬದಲಾವಣೆ ತಡೆಗಟ್ಟುವ ಕ್ರಮಗಳಿಗೆ (ಹೊಂದಾಣಿಕೆಗಾಗಿ ಹಣಕಾಸು ಮತ್ತು ನವೀಕರಿಸಬಹುದಾದ ಇಂಧನದ ಮೇಲೆ ಕೇಂದ್ರೀಕರಿಸುವುದು) ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ.
- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಸೇರಿದಂತೆ ಜಾಗತಿಕ ಸಾಂಸ್ಥಿಕ ಸುಧಾರಣೆಗಳಿಗೆ ಒತ್ತು ನೀಡಲಾಯಿತು.
- ಮಹಿಳೆಯರು ಮತ್ತು ಬಾಲಕಿಯರ ಸಬಲೀಕರಣಕ್ಕೆ ವಿಶೇಷ ಪ್ರಾಧಾನ್ಯತೆ ಹಾಗೂ ಭಯೋತ್ಪಾದನೆಯ ತೀವ್ರ ಖಂಡನೆ ಮಾಡಲಾಯಿತು.
- ಜಿ- 20 ಒಕ್ಕೂಟದಲ್ಲಿ ‘ಆಫ್ರಿಕಾದ ಒಕ್ಕೂಟ’ಕ್ಕೆ ಖಾಯಂ ಸದಸ್ಯತ್ವ ನೀಡಲಾಯಿತು.
ಭಾರತದ ನಿಲುವು/ಉಪಕ್ರಮಗಳು
- ಸಾಮೂಹಿಕ ಮಾನವ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ‘ಜಾಗತಿಕ ಸಾಂಪ್ರದಾಯಿಕ ಜ್ಞಾನ ಭಂಡಾರ’ವನ್ನು ಸ್ಥಾಪಿಸಲು ಪ್ರಸ್ತಾಪಿಸಿತು.
- ಆಫ್ರಿಕಾದ ಯುವಜನತೆಗೆ ಕೌಶಲ ತರಬೇತಿ ನೀಡಲು, ಒಂದು ಮಿಲಿಯನ್ ಪ್ರಮಾಣೀಕೃತ ತರಬೇತುದಾರರನ್ನು ರೂಪಿಸುವ ‘ಜಿ-20-ಆಫ್ರಿಕಾ ಸ್ಕಿಲ್ಸ್ ಮಲ್ಟಿಪ್ಲೈಯರ್’ ಉಪಕ್ರಮಕ್ಕೆ ಚಾಲನೆ ನೀಡಲಾಯಿತು.
- ಆರೋಗ್ಯ ಬಿಕ್ಕಟ್ಟುಗಳಿಗೆ ತ್ವರಿತವಾಗಿ ಸ್ಪಂದಿಸಲು ‘ಜಾಗತಿಕ ಆರೋಗ್ಯ ಪ್ರತಿಕ್ರಿಯೆ ತಂಡ’ವನ್ನು ರಚಿಸಲು ಪ್ರತಿಪಾದಿಸಿತು.
- ಕೃಷಿ, ಮೀನುಗಾರಿಕೆ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ದತ್ತಾಂಶ ಹಂಚಿಕೆಗಾಗಿ ‘ಮುಕ್ತ ಉಪಗ್ರಹ ದತ್ತಾಂಶ ಪಾಲುದಾರಿಕೆ’ಯನ್ನು ಆರಂಭಿಸಿತು.
- ಮರುಬಳಕೆ ಮತ್ತು ಸುಸ್ಥಿರ ಪೂರೈಕೆ ಸರಪಳಿಗಳನ್ನು ಉತ್ತೇಜಿಸುವ ‘ನಿರ್ಣಾಯಕ ಖನಿಜಗಳ ಆವರ್ತಕತೆ ಉಪಕ್ರಮ’ವನ್ನು ಮಂಡಿಸಿತು.
- ನಿರ್ಣಾಯಕ ತಂತ್ರಜ್ಞಾನಗಳು, ಕೃತಕ ಬುದ್ಧಿಮತ್ತೆ (AI), ಪೂರೈಕೆ ಸರಪಳಿಗಳು ಮತ್ತು ಶುದ್ಧ ಇಂಧನ ವಲಯದಲ್ಲಿನ ಸಹಕಾರಕ್ಕಾಗಿ ಆಸ್ಟ್ರೇಲಿಯಾ ಮತ್ತು ಕೆನಡಾದೊಂದಿಗೆ ‘ಎಸಿಐಟಿಐ ತ್ರಿಪಕ್ಷೀಯ ಚೌಕಟ್ಟಿಗೆ’ ಚಾಲನೆ ನೀಡಲಾಯಿತು.
ಅಸ್ಸಾಂ ಒಪ್ಪಂದ (1985)
ಸಾಮಾನ್ಯ ಅಧ್ಯಯನ – 2 / ಸರ್ಕಾರಿ ನೀತಿ ಮತ್ತು ಹಸ್ತಕ್ಷೇಪ
ಇದೀಗ ಸುದ್ದಿಯಲ್ಲಿದೆ:
1985 ರ ಅಸ್ಸಾಂ ಒಪ್ಪಂದದ 6ನೇ ಉಪಬಂಧದ ಅನುಷ್ಠಾನದ ಕುರಿತು ವಿಸ್ತಾರವಾದ ಒಮ್ಮತವನ್ನು ಸಾಧಿಸಲಾಗಿದೆ ಎಂದು ಇತ್ತೀಚೆಗೆ ಅಸ್ಸಾಂ ಸರ್ಕಾರವು ಘೋಷಿಸಿದೆ.
ಅಸ್ಸಾಂ ಒಪ್ಪಂದ, 1985 ರ ಬಗ್ಗೆ:
- ಭಾರತ ಸರ್ಕಾರ, ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (AASU) ಮತ್ತು ಆಲ್ ಅಸ್ಸಾಂ ಗಣ ಸಂಗ್ರಾಮ್ ಪರಿಷತ್ (AAGSP) ನಡುವೆ 1985 ರ ಆಗಸ್ಟ್ 15 ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
- ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರ ವಿರುದ್ಧ 1979 ರಿಂದ 1985 ರವರೆಗೆ ಅಸ್ಸಾಂನಲ್ಲಿ ನಡೆದ ಆರು ವರ್ಷಗಳ ಸುದೀರ್ಘ ಆಂದೋಲನಕ್ಕೇ (ವಿದೇಶಿಯರ ವಿರೋಧಿ ಆಂದೋಲನ) ಈ ಒಪ್ಪಂದವು ಅಂತ್ಯ ಹಾಡಿತು. ಅಕ್ರಮ ವಲಸೆಯು ರಾಜ್ಯದ ಜನಸಂಖ್ಯಾ ಸ್ವರೂಪ, ಸಂಸ್ಕೃತಿ ಮತ್ತು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿತ್ತು.
- ಅಸ್ಸಾಂ ಒಪ್ಪಂದದ 6ನೇ ಉಪಬಂಧ : ಅಸ್ಸಾಮಿ ಜನರ ‘ಸಾಂಸ್ಕೃತಿಕ, ಸಾಮಾಜಿಕ ಮತ್ತು ಭಾಷಾ ಅಸ್ಮಿತೆಯನ್ನು’ ಸಂರಕ್ಷಿಸಲು ಅಗತ್ಯವಾದ ‘ಸಂವಿಧಾನಾತ್ಮಕ, ಶಾಸಕಾಂಗೀಯ ಮತ್ತು ಆಡಳಿತಾತ್ಮಕ ರಕ್ಷಣೆಗಳನ್ನು’ ಒದಗಿಸುವ ಭರವಸೆಯನ್ನು ಇದು ನೀಡುತ್ತದೆ.
- ಗಡಿ ಭದ್ರತೆ: ಅಕ್ರಮ ವಲಸೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ಭಾರತ-ಬಾಂಗ್ಲಾದೇಶ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲು ಮತ್ತು ತಂತಿ ಬೇಲಿ ಹಾಕಲು ಈ ಒಪ್ಪಂದವು ಹೇಳುತ್ತದೆ.
ಭಾರತೀಯ ಆಹಾರದಲ್ಲಿ ಔರಮೈನ್
ಸಾಮಾನ್ಯ ಅಧ್ಯಯನ – 2/ ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
- ಭಾರತದಲ್ಲಿ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಕಲಬೆರಕೆ ಪ್ರಕರಣಗಳು ಮರುಕಳಿಸುತ್ತಲೇ ಇದ್ದು, ಇದು ವಿಶೇಷವಾಗಿ, ‘ಔರಮೈನ್ O’ ನಂತಹ ನಿಷೇಧಿತ ಕೃತಕ ವರ್ಣದ್ರವ್ಯಗಳ ಬಳಕೆಯ ಮೂಲಕ ಇದು ಹೆಚ್ಚುತ್ತಿದೆ.
‘ಔರಮೈನ್ O’ ನ ಬಗ್ಗೆ:
- ಇದೊಂದು ಕೃತಕ, ವಾಸನೆ ರಹಿತ, ಹಳದಿ ಬಣ್ಣದ ವರ್ಣದ್ರವ್ಯವಾಗಿದ್ದು. ಇದನ್ನು ಜವಳಿ, ಚರ್ಮ ಸಂಸ್ಕರಣೆ, ಮುದ್ರಣಕ್ಕೆ ಬಳಸುವ ಮಸಿ ಮತ್ತು ಕಾಗದ ತಯಾರಿಕೆಯಂತಹ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
- ಭಾರತ, ಯುರೋಪಿಯನ್ ಒಕ್ಕೂಟ, ಅಮೇರಿಕಾ ಸಹಿತ ಇತರ ಪ್ರಮುಖ ನಿಯಂತ್ರಕ ವ್ಯಾಪ್ತಿಗಳಲ್ಲಿ ‘ಔರಮೈನ್ O’ ಬಣ್ಣವನ್ನು ಆಹಾರದಲ್ಲಿ ಬಳಸಲು ಅನುಮೋದನೆ ನೀಡಲಾಗಿಲ್ಲ.
- ಸಿಹಿ ತಿನಿಸುಗಳ ಮಾದರಿಗಳಲ್ಲಿ ಮೆಟಾನಿಲ್ ಹಳದಿ, ರೋಡಮೈನ್ ಬಿ ಮತ್ತು ಮಲಾಕೈಟ್ ಹಸಿರಿನಂತಹ ಇತರ ಅನುಮೋದನೆ ನೀಡದ ಬಣ್ಣಗಳೂ ಕಂಡುಬರುತ್ತಿವೆ.
- ಇದು ಯಕೃತ್ತು ಮತ್ತು ಮೂತ್ರಪಿಂಡದ ಹಾನಿ, ಗುಲ್ಮದ ಹಿಗ್ಗುವಿಕೆ, ಆನುವಂಶಿಕ ದ್ರವ್ಯವನ್ನು ಬದಲಾಯಿಸಬಲ್ಲ ವಿಕೃತಿಜನ್ಯ ಪರಿಣಾಮಗಳು ಮತ್ತು ಸಂಭಾವ್ಯ ಕ್ಯಾನ್ಸರ್ ಕಾರಕ ಅಪಾಯಗಳನ್ನು ಒಳಗೊಂಡಿದೆ.
ಗಂಭೀರ ವಂಚನೆ ತನಿಖಾ ಕಚೇರಿ (SFIO)
ಸಾಮಾನ್ಯ ಅಧ್ಯಯನ – 3 / ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ‘ಗಂಭೀರ ವಂಚನೆ ತನಿಖಾ ಕಚೇರಿ’ (SFIO) ಯು ತನ್ನ ಹಾಜರಾಗುವ ಕರೆ (ಸಮನ್ಸ್) ಮತ್ತು ಸೂಚನೆ (ನೋಟಿಸ್) ಗಳ ದುರ್ಬಳಕೆಯನ್ನು ತಡೆಯಲು ಹಾಗೂ ಅಧಿಕಾರಿಗಳ ಸೋಗಿನಲ್ಲಿ ನಡೆಯುವ ವಂಚನೆಯನ್ನು ನಿಯಂತ್ರಿಸಲು, ನೂತನ ತಾಂತ್ರಿಕ ಮತ್ತು ಪ್ರಕ್ರಿಯಾತ್ಮಕ ಸುರಕ್ಷತಾ ಕ್ರಮಗಳನ್ನು ಅಳವಡಿಸಿದೆ.
ಗಂಭೀರ ವಂಚನೆ ತನಿಖಾ ಕಚೇರಿ (SFIO) ಯ ಬಗ್ಗೆ:
- ಸ್ಥಾಪನೆ: ಕಂಪನಿಗಳ ಕಾಯ್ದೆ, 2013ರ ಅಡಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ.
- ಕಾರ್ಯನಿರ್ವಹಣೆ: ಇದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
- ಕಾರ್ಯವ್ಯಾಪ್ತಿ: ಇದು ಕೇವಲ ಸಾಮಾನ್ಯ ಕಂಪನಿ ಕಾನೂನು ಉಲ್ಲಂಘನೆಗಳಿಗಿಂತ ಭಿನ್ನವಾಗಿ, ‘ವೈಟ್ ಕಾಲರ್’ ಅಪರಾಧಗಳ (ಗಂಭೀರ ಆರ್ಥಿಕ ಅಪರಾಧಗಳ) ತನಿಖೆಗಾಗಿಯೇ ರಚಿಸಲಾದ ವಿಶೇಷ ಸಂಸ್ಥೆಯಾಗಿದೆ.
- ಮಹತ್ವ: ಸಂಕೀರ್ಣ ಸ್ವರೂಪದ ಮತ್ತು ಗ೦ಭೀರವಾದ ಕಂಪನಿಗೆ ಸಂಬಂಧಿಸಿದ ವಂಚನೆಗಳನ್ನು ಭೇದಿಸಲು, ಇದು ಲೆಕ್ಕಪತ್ರ ನಿರ್ವಹಣೆ, ವಿಧಿವಿಜ್ಞಾನ ಲೆಕ್ಕಪರಿಶೋಧನೆ, ಬ್ಯಾಂಕಿಂಗ್, ಕಾನೂನು, ಮಾಹಿತಿ ತಂತ್ರಜ್ಞಾನ, ಬಂಡವಾಳ ಮಾರುಕಟ್ಟೆಗಳು ಹಾಗೂ ತೆರಿಗೆ ಕ್ಷೇತ್ರಗಳ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುತ್ತದೆ.
ಭಾರತ ನೂತನ (ಹೊಸ) ಕಾರು ಮೌಲ್ಯಮಾಪನ ಕಾರ್ಯಕ್ರಮ (Bharat NCAP)
ಸಾಮಾನ್ಯ ಅಧ್ಯಯನ -3/ ಪರಿಸರ
ಇದೀಗ ಸುದ್ಧಿಯಲ್ಲಿದೆ:
- ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH), ‘ಭಾರತ ನೂತನ ಕಾರು ಮೌಲ್ಯಮಾಪನ ಕಾರ್ಯಕ್ರಮ ‘ 2.0 ನ (Bharat NCAP 2.0) ಪರಿಷ್ಕೃತ ಕರಡನ್ನು ಪ್ರಕಟಿಸಿದೆ.
ಭಾರತ ನೂತನ (ಹೊಸ) ಕಾರು ಮೌಲ್ಯಮಾಪನ ಕಾರ್ಯಕ್ರಮದ ಬಗ್ಗೆ:
- ಈ ಯೋಜನೆಯನ್ನು 2023ರ ಅಕ್ಟೋಬರ್‌ನಲ್ಲಿ ಜಾರಿಗೆ ತರಲಾಯಿತು.
- ಉದ್ದೇಶ: ವಾಹನಗಳ ಅಪಘಾತ ತಡೆ ಪರೀಕ್ಷೆ (‘ಕ್ರ್ಯಾಶ್ ಟೆಸ್ಟಿಂಗ್’) ಮತ್ತು ಮೌಲ್ಯಮಾಪನ ಮಾನದಂಡಗಳನ್ನು ಆಧರಿಸಿ, ವಾಹನಗಳಿಗೆ ಸುರಕ್ಷತಾ ಮೌಲ್ಯಾoಕಗಳನ್ನು ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.
- ಪ್ರಕ್ರಿಯೆ: ವಾಹನ ತಯಾರಕರು ಅಥವಾ ಆಮದುದಾರರು ತಮ್ಮ ವಾಹನಗಳನ್ನು ವಾಹನ ಉದ್ಯಮದ ಮಾನದಂಡಗಳ ಅನ್ವಯ ಪರೀಕ್ಷೆಗೆ ಒಳಪಡಿಸಲು ಅಗತ್ಯವಿರುವ ವಿವರವಾದ ಕಾರ್ಯವಿಧಾನವನ್ನು ಇದು ರೂಪಿಸಿದೆ.
- ನಿಯೋಜಿತ ಸಂಸ್ಥೆ: ಭಾರತ್ NCAP ರೇಟಿಂಗ್‌ಗಳನ್ನು ನೀಡಲು ಪುಣೆಯಲ್ಲಿರುವ ‘ಕೇಂದ್ರ ರಸ್ತೆ ಸಾರಿಗೆ ಸಂಸ್ಥೆ’ಯನ್ನು (CIRT) ಅಧಿಕೃತ ಸಂಸ್ಥೆಯನ್ನಾಗಿ ನಿಯೋಜಿಸಲಾಗಿದೆ.



ನಿಮ್ಮದೊಂದು ಉತ್ತರ