“ಪಿಎಂ ರಾಹತ್” (PM RAHAT) ಯೋಜನೆ
ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಪ್ರಧಾನಿ ಮೋದಿಯವರು ‘ಪಿಎಂ ರಾಹತ್’ (RAHAT- ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆ ದಾಖಲಾತಿ ಮತ್ತು ಖಚಿತ ಚಿಕಿತ್ಸೆ) ಯೋಜನೆ ಜಾರಿಗೆ ಅನುಮೋದನೆ ನೀಡಿದ್ದಾರೆ.
ಪಿಎಂ ರಾಹತ್ ಯೋಜನೆಯ ಬಗ್ಗೆ:
- PM RAHAT ಸಂಪೂರ್ಣ ರೂಪ:- ಪ್ರೈಮ್ ಮಿನಿಸ್ಟರ್ ರೋಡ್ ಆಕ್ಸಿಡೆಂಟ್ ವಿಕ್ಟಿಮ್ ಹಾಸ್ಪಿಟಲೈಝಷನ್ ಅಂಡ್ ಅಶ್ಯೂರ್ಡ್ ಟ್ರೀಟ್ಮೆಂಟ್.
- ಇದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನೂತನವಾಗಿ ಪ್ರಾರಂಭಿಸಿರುವ ಒಂದು ಉಪಕ್ರಮವಾಗಿದೆ.
- ಉದ್ದೇಶ:- ಭಾರತದಾದ್ಯಂತ ರಸ್ತೆ ಅಪಘಾತಕ್ಕೊಳಗಾದ ಸಂತ್ರಸ್ತರಿಗೆ ತಕ್ಷಣದ, ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವುದು.
- ಪ್ರಾಮುಖ್ಯತೆ:- ಅಪಘಾತ ಸಂಭವಿಸಿದ ತಕ್ಷಣದ ಅತ್ಯಂತ ನಿರ್ಣಾಯಕ ಮೊದಲ ಒಂದು ಗಂಟೆಯನ್ನು ‘ಸುವರ್ಣ ಅವಧಿ’ (ಗೋಲ್ಡನ್ ಅವರ್) ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ತ್ವರಿತ ವೈದ್ಯಕೀಯ ಸ್ಪಂದನೆಯ ಮೂಲಕ ಸಂಭವನೀಯ ಪ್ರಾಣಹಾನಿಯನ್ನು ಗಣನೀಯವಾಗಿ ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಆಶಯವಾಗಿದೆ.
ಯೋಜನೆಯ ಪ್ರಮುಖ ಲಕ್ಷಣಗಳು:
-
- ಇದು 7 ದಿನಗಳವರೆಗೆ ಮತ್ತು 1.5 ಲಕ್ಷ ರೂಪಾಯಿಗಳವರೆಗಿನ ನಗದು ರಹಿತ ಚಿಕಿತ್ಸೆಯನ್ನು ಒಳಗೊಂಡಿದೆ.
- ಇದು ಪ್ರಾಣಾಪಾಯವಿಲ್ಲದ ಪ್ರಕರಣಗಳಲ್ಲಿ ಗರಿಷ್ಠ 24 ಗಂಟೆಗಳವರೆಗೆ ಮತ್ತು ಪ್ರಾಣಾಪಾಯವಿರುವ ತುರ್ತು ಸಂದರ್ಭಗಳಲ್ಲಿ 48 ಗಂಟೆಗಳವರೆಗೆ ಸ್ಥಿರೀಕರಣ ಆರೈಕೆಯನ್ನು ನೀಡುತ್ತದೆ.
- ಈ ಯೋಜನೆಯು ಎಲ್ಲಾ ರೀತಿಯ ರಸ್ತೆಗಳಲ್ಲಿ ಅಪಘಾತಕ್ಕೊಳಗಾಗುವ ಎಲ್ಲಾ ರಸ್ತೆ ಅಪಘಾತ ಸಂತ್ರಸ್ತರನ್ನು ಒಳಗೊಳ್ಳುತ್ತದೆ.
- ತುರ್ತು ಸ್ಥಿರೀಕರಣ ಚಿಕಿತ್ಸೆಗಾಗಿ ಆಸ್ಪತ್ರೆಗಳು ಮುಂಗಡ ಹಣವನ್ನು ಕೇಳುವಂತಿಲ್ಲ.
- ತುರ್ತು ಸ್ಪಂದನೆಗಾಗಿ ಈ ಯೋಜನೆಯ ಅನುಷ್ಠಾನವನ್ನು 112 ಸಂಖ್ಯೆಯ ಸಹಾಯವಾಣಿಯೊಂದಿಗೆ ಸಂಯೋಜಿಸಲಾಗಿದೆ.
- ಆಯುಷ್ಮಾನ್ ಭಾರತ್ (PM-JAY) ಯೋಜನೆಯ ಅಡಿಯಲ್ಲಿ ನೋಂದಾಯಿತವಾಗಿರುವ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಯು ಲಭ್ಯವಿರುತ್ತದೆ.
- ವರದಿ ಮಾಡುವಿಕೆ ಮತ್ತು ಹಕ್ಕು ಪ್ರಕ್ರಿಯೆಗಾಗಿ ಡಿಜಿಟಲ್ ವ್ಯವಸ್ಥೆಯು eDAR ಮತ್ತು TMS 2.0 ಅನ್ನು ಸಂಪರ್ಕಿಸುತ್ತದೆ.
- ಮೋಟಾರು ವಾಹನ ಅಪಘಾತ ನಿಧಿಯಿಂದ (MVAF) ಇದಕ್ಕೆ ಧನಸಹಾಯ ಲಭ್ಯವಾಗುತ್ತದೆ.
- ಕುಂದುಕೊರತೆಗಳನ್ನು ಜಿಲ್ಲಾ ಮಟ್ಟದಲ್ಲಿ ‘ಕುಂದುಕೊರತೆ ನಿವಾರಣಾ ಅಧಿಕಾರಿ’ಯು ನಿಭಾಯಿಸುತ್ತಾರೆ.
‘ಜಪಾನಿನ ‘ಗಾಡ್ಸ್ ಕ್ರಾಸಿಂಗ್’ (ದೇವರ ಪಥ)
ಪರಿಸರ

ಇದೀಗ ಸುದ್ದಿಯಲ್ಲಿದೆ:
- ಜಪಾನ್ನ ‘ಸುವಾ ಸರೋವರ’ದಲ್ಲಿ ಶತಮಾನಗಳಿಂದಲೂ ಚಳಿಗಾಲದಲ್ಲಿ ನಡೆಯುತ್ತಿದ್ದ “ಮಿವತಾರಿ” (ದೇವರ ಪಥ) ಎಂಬ ನೈಸರ್ಗಿಕ ವಿಸ್ಮಯವು ಸತತ ಹಲವಾರು ವರ್ಷಗಳಿಂದ ಕಾಣಿಸಿಕೊಂಡಿಲ್ಲ.
- ಇದು ಪೂರ್ವ ಏಷ್ಯಾದಲ್ಲಿ ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ಪರಿಣಾಮವನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
‘ಮಿವತಾರಿ’ಯ ಬಗ್ಗೆ:
- ಜಪಾನ್ನ ಸುವಾ ಸರೋವರದ ಸಂಪೂರ್ಣ ಮೇಲ್ಮೈ ಹೆಪ್ಪುಗಟ್ಟಿದಾಗ ರೂಪುಗೊಳ್ಳುವ ವಿಶಿಷ್ಟ ನೈಸರ್ಗಿಕ ಮಂಜುಗಡ್ಡೆ(ಹಿಮ)ಯ ಉಬ್ಬುಸಾಲನ್ನು ಮಿವತಾರಿ ಎಂದು ಕರೆಯಲಾಗುತ್ತದೆ.
- ವಾತಾವರಣದ ತಾಪಮಾನವು ಸತತ ಹಲವಾರು ದಿನಗಳವರೆಗೆ –10°C ಗಿಂತ ಕಡಿಮೆಯಿದ್ದಾಗ ಮಾತ್ರ ಈ ವಿದ್ಯಮಾನ ಸಂಭವಿಸುತ್ತದೆ.
- ಹೆಪ್ಪುಗಟ್ಟಿದ ಮಂಜುಗಡ್ಡೆಯ ಮೇಲ್ಮೈಯಲ್ಲಿ ಉಂಟಾಗುವ ಉಷ್ಣ ವಿಸ್ತರಣೆ ಮತ್ತು ಸಂಕೋಚನದಿಂದಾಗಿ ಬಿರುಕುಗಳು ಸೃಷ್ಟಿಯಾಗುತ್ತವೆ; ಪರಿಣಾಮವಾಗಿ ಹೊಸದಾಗಿ ರೂಪುಗೊಂಡ ಮಂಜುಗಡ್ಡೆಯ ಚೂರುಗಳು ಮೇಲ್ಮುಖವಾಗಿ ತಳ್ಳಲ್ಪಟ್ಟು, ಎತ್ತರದ ಮಂಜುಗಡ್ಡೆಯ ಉಬ್ಬುಸಾಲನ್ನು ನಿರ್ಮಿಸುತ್ತವೆ.
- ಸಾಂಪ್ರದಾಯಿಕವಾಗಿ, ಇದು ದೇವರೊಬ್ಬನು ತನ್ನ ಪತ್ನಿಯನ್ನು ಭೇಟಿಯಾಗಲು ಸರೋವರವನ್ನು ದಾಟಿಹೋಗುವ ಮಾರ್ಗವನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ.
ಹವಾಮಾನ ಬದಲಾವಣೆಯ ಪುರಾವೆ:
- 1980 ರ ದಶಕದವರೆಗೆ ಬಹುತೇಕ ಪ್ರತಿ ಚಳಿಗಾಲದಲ್ಲಿಯೂ ಈ ‘ಮಿವತಾರಿ’ ಕಾಣಿಸಿಕೊಳ್ಳುತ್ತಿತ್ತು. ಆದರೆ ಅಂದಿನಿಂದ ಇದರ ಆವರ್ತನವು ತೀವ್ರವಾಗಿ ಕುಸಿದಿದ್ದು, 2018 ರ ನಂತರ ಸುವಾ ಸರೋವರದಲ್ಲಿ ಇದು ಒಮ್ಮೆಯೂ ಕಾಣಿಸಿಕೊಂಡಿಲ್ಲ.
- ಪ್ರಮುಖವಾಗಿ ಜಾಗತಿಕ ತಾಪಮಾನ ಏರಿಕೆಯೇ ಕಾರಣದಿಂದಾಗಿ ಸರೋವರವು ಸಂಪೂರ್ಣವಾಗಿ ಹೆಪ್ಪುಗಟ್ಟಲು ಅಗತ್ಯವಿರುವಷ್ಟು ಮಟ್ಟಕ್ಕೆ ಚಳಿಗಾಲದ ಬೆಳಗಿನ ತಾಪಮಾನವು ಈಗ ಕುಸಿಯುತ್ತಿಲ್ಲ.
ಕಮಲಾ ಜಲವಿದ್ಯುತ್ ಯೋಜನೆ
ಪರಿಸರ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ , ಭಾರತದ ‘ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ’ದ (MoEFCC) ತಜ್ಞರ ಸಮಿತಿಯು ಅರುಣಾಚಲ ಪ್ರದೇಶದಲ್ಲಿ ಉದ್ದೇಶಿಸಲಾಗಿರುವ ‘ಕಮಲಾ ಜಲವಿದ್ಯುತ್ ಯೋಜನೆ’ಗೆ ಅನುಮತಿಯನ್ನು ಶಿಫಾರಸು ಮಾಡಿದೆ. ಈ ಬೃಹತ್ ಯೋಜನೆಗಾಗಿ ಸುಮಾರು 23.4 ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ.
ಕಮಲಾ ಜಲವಿದ್ಯುತ್ ಯೋಜನೆಯ ಬಗ್ಗೆ:
- ಯೋಜನೆಯ ಸ್ವರೂಪ:- ಇದು ವಿದ್ಯುತ್ ಉತ್ಪಾದನೆ ಮತ್ತು ಪ್ರವಾಹದ ತೀವ್ರತೆಯನ್ನು ತಗ್ಗಿಸುವ ಪ್ರಮುಖ ಉದ್ದೇಶಗಳನ್ನು ಹೊಂದಿರುವ ‘ಬಹು-ಉದ್ದೇಶಿತ ಯೋಜನೆ’ಯಾಗಿದೆ.
- ಪ್ರಸ್ತಾಪಿಸಿದ ಸಂಸ್ಥೆ:- ಈ ಯೋಜನೆಯನ್ನು ‘ರಾಷ್ಟ್ರೀಯ ಜಲವಿದ್ಯುತ್ ನಿಗಮ ನಿಯಮಿತ‘ವು ಪ್ರಸ್ತಾಪಿಸಿದೆ.
- ಸ್ಥಳ:- ಈ ಯೋಜನೆಯು ‘ಕಮಲಾ ನದಿ’ಗೆ ಅಡ್ಡಲಾಗಿ ನಿರ್ಮಾಣವಾಗಲಿದೆ. ಕಮಲಾ ನದಿಯು ಸುಬಾನ್ಸಿರಿ ನದಿಯ ಬಲದಂಡೆಯ ಉಪನದಿಯಾಗಿದೆ. ಸುಬಾನ್ಸಿರಿ ನದಿಯು ಬ್ರಹ್ಮಪುತ್ರ ನದಿಯ ಪ್ರಮುಖ ಉಪನದಿಗಳಲ್ಲಿ ಒಂದಾಗಿದೆ.
ತುರ್ತು ಭೂಸ್ಪರ್ಶ ಸೌಲಭ್ಯ
ರಕ್ಷಣೆ

ಇದೀಗ ಸುದ್ದಿಯಲ್ಲಿದೆ:
- ಪ್ರಧಾನಿ ನರೇಂದ್ರ ಮೋದಿಯವರು ಅಸ್ಸಾಂನ ಮೊರಾನ್ ಬೈಪಾಸ್ನಲ್ಲಿ 4.2 ಕಿಲೋಮೀಟರ್ ಉದ್ದದ ‘ತುರ್ತು ಭೂಸ್ಪರ್ಶ ಸೌಲಭ್ಯ’ವನ್ನು ಉದ್ಘಾಟಿಸಿದರು, ಇದು ಈಶಾನ್ಯ ಭಾರತದಲ್ಲಿ ನಿರ್ಮಾಣವಾದ ಮೊದಲ ತುರ್ತು ಭೂಸ್ಪರ್ಶ ಸೌಲಭ್ಯವಾಗಿದೆ.
ತುರ್ತು ಭೂಸ್ಪರ್ಶ ಸೌಲಭ್ಯದ ಬಗ್ಗೆ:
- ತುರ್ತು ಭೂಸ್ಪರ್ಶ ಸೌಲಭ್ಯವು ಭಾರತೀಯ ವಾಯುಪಡೆಗೆ ಪರ್ಯಾಯ ಪಥವಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ಹೆದ್ದಾರಿಯ ಒಂದು ಬಲವರ್ಧಿತ ಭಾಗವಾಗಿದೆ.
- ವಾಸ್ತವಿಕ ನಿಯಂತ್ರಣ ರೇಖೆಯಿಂದ (LAC) ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಮೊರಾನ್ ತುರ್ತು ಭೂಸ್ಪರ್ಶ ಸೌಲಭ್ಯವು, ಸಂಘರ್ಷದ ಸಂದರ್ಭಗಳಲ್ಲಿ ನಿರ್ಣಾಯಕ ಬೆಂಬಲವನ್ನು ಒದಗಿಸುತ್ತದೆ ಮತ್ತು ದುರ್ಗಮ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ಕಾರ್ಯಾಚರಣೆಗಳನ್ನು ಬಲಪಡಿಸುತ್ತದೆ.
- ಇದು 40 ಟನ್ಗಳವರೆಗಿನ ತೂಕದ ಯುದ್ಧವಿಮಾನಗಳನ್ನು ಮತ್ತು 74 ಟನ್ಗಳವರೆಗಿನ ತೂಕದ ಸಾರಿಗೆ ವಿಮಾನಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.
- ಪ್ರಸ್ತುತ ಇಂತಹ ಸುಮಾರು 15 ಸೌಲಭ್ಯಗಳು ಕಾರ್ಯಾಚರಣೆಯಲ್ಲಿದ್ದು, ಈ ಕಾರ್ಯತಂತ್ರದ ಜಾಲವು ರಾಜಸ್ಥಾನದ ಮರುಭೂಮಿಗಳಿಂದ ಹಿಡಿದು ಉತ್ತರ ಪ್ರದೇಶದ ಎಕ್ಸ್ಪ್ರೆಸ್ವೇ (ಶೀಘ್ರಗತಿ ಹೆದ್ದಾರಿ)ಗಳವರೆಗೆ ಮತ್ತು ಈಗ ಈಶಾನ್ಯದ ಕಾರ್ಯತಂತ್ರದ ಗಡಿಗಳವರೆಗೂ ವಿಸ್ತರಿಸಿದೆ.



ನಿಮ್ಮದೊಂದು ಉತ್ತರ