ನಗೋಯಾ ಶಿಷ್ಟಾಚಾರದ ಕುರಿತು ಭಾರತದ ಮೊದಲ ರಾಷ್ಟ್ರೀಯ ವರದಿ (NR1)
ಪರಿಸರ
ಇದೀಗ ಸುದ್ದಿಯಲ್ಲಿದೆ:
- ಜೈವಿಕ ವೈವಿಧ್ಯತೆಯ ಆಡಳಿತದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿರುವ ‘ನಗೋಯಾ ಶಿಷ್ಟಾಚಾರ’ದ ಅನುಷ್ಠಾನದ ಕುರಿತಾದ ತನ್ನ ಮೊದಲ ರಾಷ್ಟ್ರೀಯ ವರದಿಯನ್ನು (NR1) ಭಾರತವು ಇತ್ತೀಚಿಗೆ ‘ಜೈವಿಕ ವೈವಿಧ್ಯತಾ ಸಮಾವೇಶದ ಸಚಿವಾಲಯ’ಕ್ಕೆ ಸಲ್ಲಿಸಿದೆ.
ನಗೋಯಾ ಶಿಷ್ಟಾಚಾರದ ಬಗ್ಗೆ:
- ಅಂಗೀಕಾರ:- 2010 ರ ಅಕ್ಟೋಬರ್ 29 ರಂದು ಜಪಾನ್ನ ‘ನಗೋಯಾ’ದಲ್ಲಿ ಈ ಅಂತರರಾಷ್ಟ್ರೀಯ ಶಿಷ್ಟಾಚಾರವನ್ನು ಅಂಗೀಕರಿಸಲಾಯಿತು.
- ಜಾರಿ:- ಈ ಶಿಷ್ಟಾಚಾರವು 2014 ರ ಅಕ್ಟೋಬರ್ 12 ರಿಂದ ಜಾಗತಿಕವಾಗಿ ಜಾರಿಗೆ ಬಂದಿದೆ.
- ಉದ್ದೇಶ:- ಜೈವಿಕ ಅಥವಾ ಆನುವಂಶಿಕ ಸಂಪನ್ಮೂಲಗಳ ನ್ಯಾಯಸಮ್ಮತ ಮತ್ತು ಸಮಾನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ.
- ಭಾರತವು ತನ್ನ ‘ಜೈವಿಕ ವೈವಿಧ್ಯತಾ ಕಾಯ್ದೆ, 2002’ ಕ್ಕೆ ಅನುಗುಣವಾಗಿ 2012 ರಲ್ಲಿಯೇ ಈ ಶಿಷ್ಟಾಚಾರವನ್ನು ಅಧಿಕೃತವಾಗಿ ಅಂಗೀಕರಿಸಿದೆ.
2027ರ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಪ್ರಕ್ರಿಯೆ ಆರಂಭ
ಪ್ರಶಸ್ತಿಗಳು/ಇತರೆ
ಇದೀಗ ಸುದ್ದಿಯಲ್ಲಿದೆ:
- ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ‘2027ರ ಪದ್ಮ ಪ್ರಶಸ್ತಿ’ಗಳಿಗಾಗಿ ಕೇಂದ್ರ ಸರ್ಕಾರವು ನಾಮನಿರ್ದೇಶನ ಮತ್ತು ಶಿಫಾರಸುಗಳನ್ನು ಆಹ್ವಾನಿಸಿದೆ.
ಪದ್ಮ ಪ್ರಶಸ್ತಿಗಳ ಬಗ್ಗೆ:
- 1954 ರಲ್ಲಿ ಸ್ಥಾಪಿಸಲಾದ ಪದ್ಮ ಪ್ರಶಸ್ತಿಗಳು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿವೆ.
- ಇವುಗಳನ್ನು ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ಪ್ರದಾನ ಮಾಡಲಾಗುತ್ತದೆ.
- ‘ಪದ್ಮ ವಿಭೂಷಣ’ ಪ್ರಶಸ್ತಿಯನ್ನು ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ.
- ‘ಪದ್ಮಭೂಷಣ’ ಪ್ರಶಸ್ತಿಯನ್ನು ಉನ್ನತ ಮಟ್ಟದ ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ.
- ‘ಪದ್ಮಶ್ರೀ’ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿನ ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ.
- ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವಾಣಿಜ್ಯ ಮತ್ತು ಕೈಗಾರಿಕೆ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿನ ಅಸಾಧಾರಣ ಸಾಧನೆಗಳು ಅಥವಾ “ವಿಶಿಷ್ಟ ಕಾರ್ಯ”ಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
- ಜಾತಿ, ಧರ್ಮ.ವೃತ್ತಿ, ಸ್ಥಾನಮಾನ ಅಥವಾ ಲಿಂಗ ಭೇದವಿಲ್ಲದೆ ಎಲ್ಲಾ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ.
- ಗಮನಿಸಿ: ಸಾರ್ವಜನಿಕ ವಲಯದ ಉದ್ಯಮಗಳ (PSU) ನೌಕರರು ಸೇರಿದಂತೆ ಯಾವುದೇ ಸರ್ಕಾರಿ ನೌಕರರು ಸಾಮಾನ್ಯವಾಗಿ ಈ ಪ್ರಶಸ್ತಿಗಳಿಗೆ ಅರ್ಹರಾಗಿರುವುದಿಲ್ಲ; ಆದರೆ, ವೈದ್ಯರು ಮತ್ತು ವಿಜ್ಞಾನಿಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.
- ಪದ್ಮ ಪ್ರಶಸ್ತಿಗಳನ್ನು “ಜನಸಾಮಾನ್ಯರ ಪದ್ಮ” ಪ್ರಶಸ್ತಿಗಳನ್ನಾಗಿ ಪರಿವರ್ತಿಸಲು ಸರ್ಕಾರವು ಬದ್ಧವಾಗಿದ್ದು, ಅರ್ಹ ಸಾಧಕರನ್ನು ನಾಮನಿರ್ದೇಶನ ಮಾಡಲು ನಾಗರಿಕರನ್ನು ಪ್ರೋತ್ಸಾಹಿಸುತ್ತಿದೆ.
- ಈ ಪ್ರಕ್ರಿಯೆಯಲ್ಲಿ ವ್ಯಕ್ತಿಗಳು ತಮ್ಮನ್ನು ತಾವೇ ನಾಮನಿರ್ದೇಶನ ಮಾಡಿಕೊಳ್ಳಲು ಕೂಡ ಅವಕಾಶ ಕಲ್ಪಿಸಲಾಗಿದೆ.
- ಈ ನಾಮನಿರ್ದೇಶನಗಳು, ಆಯಾ ಕ್ಷೇತ್ರಗಳಲ್ಲಿ ನಾಮನಿರ್ದೇಶಿತ ವ್ಯಕ್ತಿ ಮಾಡಿರುವ ವಿಶಿಷ್ಟ ಸಾಧನೆಗಳ ಕುರಿತಾದ ವಿವರವಾದ ಮಾಹಿತಿಯನ್ನು ಕಡ್ಡಾಯವಾಗಿ ಒಳಗೊಂಡಿರಬೇಕು.
- ನಾಮನಿರ್ದೇಶನಗಳನ್ನು ಆನ್ಲೈನ್ ಮೂಲಕ ಕೇವಲ ‘ರಾಷ್ಟ್ರೀಯ ಪುರಸ್ಕಾರ ಪೋರ್ಟಲ್’ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ.
- ಪ್ರತಿ ವರ್ಷ ಗಣರಾಜ್ಯೋತ್ಸವದ (ಜನವರಿ 26) ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.
- ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಧ್ಯುಕ್ತ ಸಮಾರಂಭಗಳಲ್ಲಿ ಭಾರತದ ರಾಷ್ಟ್ರಪತಿಗಳು ಈ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆ.
ಗುಂಟೂರಿನಲ್ಲಿ ಗಜಪತಿ ರಾಜವಂಶದ ಶಾಸನ ಪತ್ತೆ
ಇತಿಹಾಸ
ಇದೀಗ ಸುದ್ದಿಯಲ್ಲಿದೆ:
- ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಗಜಪತಿ ರಾಜವಂಶಕ್ಕೆ ಸೇರಿದ ಮಧ್ಯಕಾಲೀನ ಶಾಸನವೊಂದು ಇತ್ತೀಚಿಗೆ ಪತ್ತೆಯಾಗಿದೆ.
- ದೇವಾಲಯದ ಮಂಟಪದಲ್ಲಿರುವ ಕಲ್ಲಿನ ಕಂಬವೊಂದರ ಮೇಲೆ ಈ ಶಾಸನವನ್ನು ಕೆತ್ತಲಾಗಿದೆ.
- ಸಾ.ಶ. 15ನೇ ಶತಮಾನದಲ್ಲಿ ಪುರುಷೋತ್ತಮ ದೇವನ ಆಳ್ವಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ‘ಕುಮಾರಗುರು ಮಹಾಪಾತ್ರ’ ಎಂಬ ಅಧಿಕಾರಿಯ ಕುರಿತು ಈ ಶಾಸನವು ಉಲ್ಲೇಖಿಸುತ್ತದೆ.
- ಆ ಕಾಲಘಟ್ಟದಲ್ಲಿ ನಡೆದ ಸತತ ಆಕ್ರಮಣಗಳ ಹಿನ್ನೆಲೆಯಲ್ಲಿ, ಕೊಂಡವೀಡು ಕೋಟೆಯಿಂದ ನರಸಿಂಹ ಸ್ವಾಮಿಯ ವಿಗ್ರಹ ಹಾಗೂ ಮಂಟಪದ ಕಂಬಗಳನ್ನು ಗುಂಟೂರಿಗೆ ಸ್ಥಳಾಂತರಿಸಲಾಯಿತು ಎಂಬ ಐತಿಹಾಸಿಕ ಮಾಹಿತಿಯನ್ನು ಈ ಶಾಸನವು ಒದಗಿಸುತ್ತದೆ.
- ಮೂಲತಃ ಕೊಂಡವೀಡಿನ ಮಲ್ಲಿಕಾರ್ಜುನ ಸ್ವಾಮಿಗೆ ಸಮರ್ಪಿಸಲಾಗಿದ್ದ ಈ ಶಾಸನವನ್ನು, ತರುವಾಯ ಗುಂಟೂರು ದೇವಾಲಯಕ್ಕೆ ತಂದು ನಿಲ್ಲಿಸಲಾಗಿದೆ.
‘ಗಜಪತಿ ರಾಜವಂಶ’ದ ಬಗ್ಗೆ:

- ಗಜಪತಿ ರಾಜವಂಶವು ಒಡಿಶಾದಲ್ಲಿ ಉಗಮಿಸಿ, 15 ಮತ್ತು 16ನೇ ಶತಮಾನಗಳಲ್ಲಿ ಪ್ರವರ್ಧಮಾನಕ್ಕೆ ಬಂದ ಪ್ರಬಲ ಮಧ್ಯಕಾಲೀನ ಸಾಮ್ರಾಜ್ಯವಾಗಿದೆ.
- ಪೂರ್ವ ಗಂಗಾ ರಾಜವಂಶದ ಪತನದ ನಂತರ, ‘ಕಪಿಲೇಂದ್ರ ದೇವ’ ಎಂಬ ರಾಜನು ಈ ಗಜಪತಿ ರಾಜವಂಶವನ್ನು ಸ್ಥಾಪಿಸಿದನು.
- ಈ ಸಾಮ್ರಾಜ್ಯವು ತನ್ನ ಉತ್ತುಂಗದ ಕಾಲದಲ್ಲಿ, ಪ್ರಸ್ತುತ ಪಶ್ಚಿಮ ಬಂಗಾಳದ ಕೆಲವು ಭಾಗಗಳಿಂದ ತಮಿಳುನಾಡಿನ ತಿರುಚಿರಾಪಳ್ಳಿಯವರೆಗೆ ವಿಸ್ತರಿಸಿತ್ತು. ‘ಕಟಕ’ (ಇಂದಿನ ಕಟಕ್) ನಗರವು ಈ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
- ಗಜಪತಿ ಆಡಳಿತಗಾರರು ಕಲೆ, ವಾಸ್ತುಶಿಲ್ಪ ಮತ್ತು ಸಾಹಿತ್ಯಕ್ಕೆ ನೀಡಿದ ಅಪಾರ ಪ್ರೋತ್ಸಾಹಕ್ಕಾಗಿ ಇತಿಹಾಸದಲ್ಲಿ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ವಿಜಯನಗರ ಸಾಮ್ರಾಜ್ಯದೊಂದಿಗೆ ಇವರು ನಿರಂತರ ರಾಜಕೀಯ ಪೈಪೋಟಿಯನ್ನು ಹೊಂದಿದ್ದರು.
ಲಡಾಖ್ ಮ್ಯಾಗ್ಮ್ಯಾಟಿಕ್ ಆರ್ಕ್ (Ladakh Magmatic Arc)
ಭೂಗೋಳ

ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ‘ಹಿಮಾಲಯನ್ ಭೂವಿಜ್ಞಾನದ ವಾಡಿಯಾ ಸಂಸ್ಥೆಯ’ ವಿಜ್ಞಾನಿಗಳು ವಾಯುವ್ಯ ಹಿಮಾಲಯದಲ್ಲಿರುವ ‘ಲಡಾಖ್ ಮ್ಯಾಗ್ಮ್ಯಾಟಿಕ್ ಆರ್ಕ್’ನ (LMA) ವಿಕಸನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಭೇದಿಸಿದ್ದಾರೆ (ಅರ್ಥೈಸಿದ್ದಾರೆ).
‘ಲಡಾಖ್ ಮ್ಯಾಗ್ಮ್ಯಾಟಿಕ್ ಆರ್ಕ್’ನ ಬಗ್ಗೆ:
- ಇದು ಭಾರತದ ಟ್ರಾನ್ಸ್-ಹಿಮಾಲಯನ್ ಪ್ರದೇಶದಲ್ಲಿ (ಹಿಮಾಲಯ ಶ್ರೇಣಿಯಾಚೆಯ ಪ್ರದೇಶ ) (ಮುಖ್ಯವಾಗಿ ಲಡಾಖ್) ಕಂಡುಬರುವ ಅಗ್ನಿಶಿಲೆಗಳ ಒಂದು ಬೃಹತ್ ವಲಯವಾಗಿದೆ.
- ಇದು ಬಹುಕಾಲದ ಹಿಂದೆಯೇ ಅಳಿದುಹೋದ ಪ್ರಾಚೀನ ‘ಜ್ವಾಲಾಮುಖಿ ಕಮಾನಿನ ವ್ಯವಸ್ಥೆ’ಯನ್ನು ಪ್ರತಿನಿಧಿಸುತ್ತದೆ.
- ಪ್ರಸ್ತುತ ಅಸ್ತಿತ್ವದಲ್ಲಿರುವ ಲಡಾಖ್ ಪ್ರದೇಶವು ಒಂದು ಕಾಲದಲ್ಲಿ ‘ನಿಯೋ-ಟೆಥಿಸ್ ಮಹಾಸಾಗರ’ದ ಮೇಲ್ಭಾಗದಲ್ಲಿ ನೆಲೆಗೊಂಡಿತ್ತು ಎಂದು ಭೂವಿಜ್ಞಾನಿಗಳು ವಿವರಿಸಿದ್ದಾರೆ.
- ಈ ಮಹಾಸಾಗರದ ತಳಭಾಗದಲ್ಲಿ, ‘ಭಾರತೀಯ ಭೂಫಲಕ’ದ ಸಾಗರ ಕವಚವು ‘ಯುರೇಷಿಯನ್ ಭೂಫಲಕ’ದ ಕಡೆಗೆ ನಿರಂತರವಾಗಿ ಚಲಿಸುತ್ತಿತ್ತು.
- ಈ ಚಲನೆಯಿಂದಾಗಿ, ಹೆಚ್ಚಿನ ಸಾಂದ್ರತೆಯನ್ನು ಹೊಂದಿದ್ದ ಸಾಗರ ಫಲಕವು ಯುರೇಷಿಯನ್ ಫಲಕದ ಕೆಳಗೆ ಮುಳುಗಿತು/ನುಸುಳಿತು. (Subduction ಪ್ರಕ್ರಿಯೆ).
- ಈ ಭೌಗೋಳಿಕ ಪ್ರಕ್ರಿಯೆಯು ಭೂಮಿಯ ಒಳಪದರವಾದ ‘ಮ್ಯಾಂಟಲ್’ (ಶಿಲಾಪಾಕ) ವಸ್ತುಗಳ ಕರಗುವಿಕೆಗೆ ಹಾಗೂ ‘ಮ್ಯಾಗ್ಮಾ’ (ಶಿಲಾರಸ) ಸೃಷ್ಟಿಗೆ ಕಾರಣವಾಯಿತು. ತದನಂತರ ಈ ಮ್ಯಾಗ್ಮಾ ಮೇಲಕ್ಕೆ ಚಿಮ್ಮಿ, ಜ್ವಾಲಾಮುಖಿ ಕಮಾನುಗಳು ರೂಪುಗೊಂಡವು.
ದತ್ತು ಪಡೆಯುವ ತಾಯಂದಿರಿಗೆ ಸಮಾನ ಹೆರಿಗೆ ರಜೆ ಹಕ್ಕುಗಳು
ಆಡಳಿತ ಮತ್ತು ಸಂವಿಧಾನ
ಇದೀಗ ಸುದ್ದಿಯಲ್ಲಿದೆ:
- ಮಕ್ಕಳನ್ನು ದತ್ತು ಪಡೆಯುವ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ, ಮಗುವಿನ ವಯಸ್ಸನ್ನು ಪರಿಗಣಿಸದೆ 12 ವಾರಗಳ ‘ವೇತನ ಸಹಿತ ಹೆರಿಗೆ ರಜೆ’ ಪಡೆಯುವ ಹಕ್ಕಿದೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
ಕಾನೂನಿನ ಹಿನ್ನೆಲೆ:
- ಭಾರತದಲ್ಲಿ ಹೆರಿಗೆ ಸೌಲಭ್ಯಗಳನ್ನು ಒದಗಿಸುವ ಕಾನೂನು ಚೌಕಟ್ಟು ‘ಹೆರಿಗೆ ಸೌಲಭ್ಯ ಕಾಯ್ದೆ, 1961’ರ ಅಡಿಯಲ್ಲಿ ರೂಪುಗೊಂಡಿದೆ. 2017ರಲ್ಲಿ ಈ ಕಾಯ್ದೆಗೆ ತರಲಾದ ತಿದ್ದುಪಡಿಯ ಮೂಲಕ, ಮೊದಲ ಬಾರಿಗೆ ದತ್ತು ಪಡೆಯುವ ತಾಯಂದಿರು ಮತ್ತು ಬಾಡಿಗೆ ತಾಯಂದಿರಿಗೆ 12 ವಾರಗಳ ಹೆರಿಗೆ ರಜೆಯನ್ನು ಮಂಜೂರು ಮಾಡಲಾಯಿತು.
- ಆದಾಗ್ಯೂ, ದತ್ತು ಪಡೆದ ಮಗುವಿನ ವಯಸ್ಸು 3 ತಿಂಗಳಿಗಿಂತ ಕಡಿಮೆಯಿದ್ದರೆ ಮಾತ್ರ ಈ ಹೆರಿಗೆ ರಜೆ ಅನ್ವಯವಾಗುತ್ತದೆ ಎಂಬ ‘ನಿರ್ಬಂಧಿತ ಷರತ್ತನ್ನು’ ಕಾನೂನಿನಲ್ಲಿ ವಿಧಿಸಲಾಗಿತ್ತು.
ಸರ್ವೋಚ್ಚ ನ್ಯಾಯಾಲಯದ ತೀರ್ಪು:
- ಕಳವಳ:- ‘ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ’ದ (CARA) ಮಾರ್ಗಸೂಚಿಗಳಿಗೆ ಅನುಗುಣವಾಗಿ ನಡೆಯುವ ಭಾರತದ ದತ್ತು ಪ್ರಕ್ರಿಯೆಯಲ್ಲಿ, ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಲು ಅವಕಾಶ ಸಿಗುವುದು ಅತ್ಯಂತ ವಿರಳವಾಗಿದೆ.
- ಇದರ ಪರಿಣಾಮವಾಗಿ, ದತ್ತು ಪಡೆಯುವ ಬಹುಪಾಲು ತಾಯಂದಿರಿಗೆ ಹೆರಿಗೆ ರಜೆಯ ಸೌಲಭ್ಯಗಳನ್ನು ವಾಸ್ತವವಾಗಿ ನಿರಾಕರಿಸಿದಂತಾಗಿತ್ತು. ಇದು ಕಾಯ್ದೆಯ ಮೂಲ ಉದ್ದೇಶವನ್ನೇ ವಿಫಲಗೊಳಿಸಿ, ನಿಬಂಧನೆಯನ್ನು ಕೇವಲ ಭ್ರಮೆಯನ್ನಾಗಿಸಿತ್ತು.
- ಮಗುವಿನ ವಯಸ್ಸಿನ ಆಧಾರದ ಮೇಲೆ ಮಾಡುವ ಇಂತಹ ವರ್ಗೀಕರಣವು ತಾರತಮ್ಯದಿಂದ ಕೂಡಿದ್ದು, ಸಂವಿಧಾನದ 14 ಮತ್ತು 21ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
- ‘ದತ್ತು ಪಡೆಯುವಿಕೆ’ಯು ತಾಯ್ತನವನ್ನು ಹೊಂದುವ ಒಂದು ಸಮಾನ ಹಾಗೂ ಮಾನ್ಯವಾದ ಮಾರ್ಗವಾಗಿದೆ. ಹೀಗಾಗಿ, ದತ್ತು ಪಡೆಯುವ ತಾಯಂದಿರ ಹಕ್ಕುಗಳನ್ನು ‘ನೈಸರ್ಗಿಕ/ಜೈವಿಕ ಹೆರಿಗೆ’ಯ ಹಕ್ಕುಗಳಿಗಿಂತ ಭಿನ್ನವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.



ನಿಮ್ಮದೊಂದು ಉತ್ತರ