ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರ (FNTA)
ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಪೂರ್ವ ನಾಗಾಲ್ಯಾಂಡ್‌ನ ಜನತಾ ಸಂಸ್ಥೆ (ENPO), ನಾಗಾಲ್ಯಾಂಡ್ ಸರ್ಕಾರ ಮತ್ತು ಭಾರತ ಸರ್ಕಾರ ಇತ್ತೀಚೆಗೆ ಐತಿಹಾಸಿಕ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ, ಗಡಿನಾಡು ನಾಗಾಲ್ಯಾಂಡ್‌ಗಾಗಿ ಪ್ರಾದೇಶಿಕ ಪ್ರಾಧಿಕಾರವನ್ನು (FNTA) ಸ್ಥಾಪಿಸಲಾಗುವುದು.
ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರ (FNTA)ದ ಬಗ್ಗೆ:
- ವ್ಯಾಪ್ತಿ:- ಇದರಲ್ಲಿ 6 ಜಿಲ್ಲೆಗಳು ಒಳಗೊಂಡಿವೆ – ಟ್ಯುಯೆನ್ಸಾಂಗ್, ಮೋನ್, ಕಿಫಿರೆ, ಲಾಂಗ್ಲೆಂಗ್, ನೋಕ್ಲಾಕ್ ಮತ್ತು ಶಾಮಟೋರ್. ಇಲ್ಲಿ 8 ಪ್ರಮುಖ ನಾಗಾ ಬುಡಕಟ್ಟುಗಳು ನೆಲೆಸಿವೆ.
- ಉದ್ದೇಶ:- ಆಡಳಿತಾತ್ಮಕ ಮತ್ತು ಅಭಿವೃದ್ಧಿ ಸ್ವಾಯತ್ತತೆಯನ್ನು ಹೆಚ್ಚಿಸುವ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೆ ಈ ಒಪ್ಪಂದವು ಅವಕಾಶ ಕಲ್ಪಿಸುತ್ತದೆ.
- ಕಿರು-ಸಚಿವಾಲಯ:- ಇದು ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿರುತ್ತದೆ.
- ಮಹತ್ವ:- ಐತಿಹಾಸಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ, ಆರ್ಥಿಕ ಸ್ವಾಯತ್ತತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.
- ಗಮನಿಸಿ:- ಆದಾಗ್ಯೂ, ಈ ವ್ಯವಸ್ಥೆಯು ಸಂವಿಧಾನದ ವಿಧಿ 371(A) ಅಡಿಯಲ್ಲಿ ನಾಗಾ ಸಾಂಪ್ರದಾಯಿಕ ಆಚರಣೆಗಳು, ಭೂ ಹಕ್ಕುಗಳು ಮತ್ತು ಸಾಮಾಜಿಕ ಸಂಸ್ಥೆಗಳಿಗೆ ಒದಗಿಸಲಾದ ರಕ್ಷಣೆಗಳನ್ನು ದುರ್ಬಲಗೊಳಿಸುವುದಿಲ್ಲ.
ವಿಝಿಂಜಂ ಬಂದರು
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಸರಕು ಪೆಟ್ಟಿಗೆಗಳ (ಕಂಟೈನರ್) ನಿರ್ವಹಣೆಯಲ್ಲಿ ಕೇರಳದ ವಿಝಿಂಜಂ ಅಂತರರಾಷ್ಟ್ರೀಯ ಬಂದರು ಜಾಗತಿಕವಾಗಿ 83ನೇ ಸ್ಥಾನಕ್ಕೇರಿದೆ. ಈ ಸಾಧನೆಯು ಭಾರತದ ಅತ್ಯಂತ ಹೊಸ ಆಳಸಮುದ್ರದ ಸರಕು ವರ್ಗಾವಣೆ ಕೇಂದ್ರದ ತ್ವರಿತ ವಿಸ್ತರಣೆಯನ್ನು ಪ್ರತಿಬಿಂಬಿಸುತ್ತದೆ.
ವಿಝಿಂಜಂ ಬಂದರಿನ ಬಗ್ಗೆ:
- ಸ್ಥಳ:- ತಿರುವನಂತಪುರಂ, (ಕೇರಳ)
ಪ್ರಮುಖ ವೈಶಿಷ್ಟ್ಯಗಳು:
- ಇದು ಭಾರತದ ಅತ್ಯಂತ ಆಳವಾದ ಬಂದರುಗಳಲ್ಲಿ ಒಂದಾಗಿದೆ.
- ಇದು ಬೃಹತ್ ಸರಕು ಪೆಟ್ಟಿಗೆಗಳ ಹಡಗು (ULCVs- ಅಲ್ಟ್ರಾ ಲಾರ್ಜ್ ಕಂಟೈನರ್ ವೆಸೆಲ್ )ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
- ಇದನ್ನು ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ಹಸ್ತಾಂತರ (DBFOT) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಮಹತ್ವ:
- ಪರಿಣಾಮಕಾರಿ ಸರಕು ಸಾಗಣೆ.
- ಸರಕು ವರ್ಗಾವಣೆ (ಟ್ರಾನ್ಸ್‌ಶಿಪ್‌ಮೆಂಟ್)ಗಾಗಿ ಕೊಲಂಬೊ (ಶ್ರೀಲಂಕಾ), ಸಿಂಗಾಪುರ ಮತ್ತು ಯುಎಇಯಂತಹ ವಿದೇಶಿ ಬಂದರುಗಳ ಮೇಲಿನ ಭಾರತದ ಅವಲಂಬನೆಯನ್ನು ಇದು ಕಡಿಮೆ ಮಾಡುತ್ತದೆ.
- ಭಾರತದ ಕಡಲ ಭದ್ರತೆಯನ್ನು ಬಲಪಡಿಸುತ್ತದೆ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)
ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
- ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ISS) 2030ರಲ್ಲಿ ಕಕ್ಷೆಯಿಂದ ಕೆಳಗಿಳಿಸಲು ನಿರ್ಧರಿಸಲಾಗಿದೆ. ಇದು ಬಾಹ್ಯಾಕಾಶದಲ್ಲಿ ಮಾನವನ ಸುಮಾರು ಮೂರು ದಶಕಗಳ ನಿರಂತರ ಉಪಸ್ಥಿತಿಯ ಅಂತ್ಯವನ್ನು ಸೂಚಿಸುತ್ತದೆ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ದ ಬಗ್ಗೆ:
- ಇದು ಭೂ ಮೇಲ್ಮೈಯಿಂದ 400 ಕಿ.ಮೀ ಎತ್ತರದಲ್ಲಿರುವ ‘ಭೂಮಿಗೆ ಸನಿಹದ ಕಕ್ಷೆ’ಯಲ್ಲಿ (LEO) ಸುತ್ತುತ್ತಿರುವ, ವಾಸಯೋಗ್ಯವಾದ ಮತ್ತು ವಿವಿಧ ಘಟಕಗಳ ಜೋಡಣೆಯ ಒಂದು ‘ಸೂಕ್ಷ್ಮ ಗುರುತ್ವ ಪ್ರಯೋಗಾಲಯ‘ವಾಗಿದೆ.
- ಇದನ್ನು 1998ರಲ್ಲಿ ಉಡಾವಣೆ ಮಾಡಲಾಯಿತು ಮತ್ತು 2000ನೇ ಇಸವಿಯಿಂದ ಇಲ್ಲಿ ಮಾನವರು ನಿರಂತರವಾಗಿ ನೆಲೆಸಿದ್ದಾರೆ. ಇದು ಇತಿಹಾಸದಲ್ಲಿಯೇ ಅತಿ ದೀರ್ಘಕಾಲ ನಡೆದ ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳಲ್ಲಿ ಒಂದಾಗಿದೆ.
- 5 ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳು ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತದೆ:- ನಾಸಾ (ಅಮೆರಿಕ), ರಾಸ್‌ಕಾಸ್ಮೋಸ್ (ರಷ್ಯಾ), ಇಎಸ್‌ಎ (ಯುರೋಪ್), ಜಾಕ್ಸಾ (ಜಪಾನ್) ಮತ್ತು ಸಿಎಸ್‌ಎ (ಕೆನಡಾ).
ಪ್ರಮುಖ ವೈಶಿಷ್ಟ್ಯಗಳು:
- ಬಾಹ್ಯಾಕಾಶದಲ್ಲಿರುವ ಮಾನವ ನಿರ್ಮಿತ ಅತ್ಯಂತ ದೊಡ್ಡ ರಚನೆಯಾಗಿದೆ:- ಇದರ ದ್ರವ್ಯರಾಶಿ 4,00,000 ಕೆ.ಜಿ.ಗೂ ಅಧಿಕವಿದ್ದು, ಸುಮಾರು 109 ಮೀಟರ್ ಉದ್ದವಿದೆ.
- ಹತ್ತಾರು ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುವ ಸೌರ ಫಲಕಗಳ ಮೂಲಕ ಇದಕ್ಕೆ ವಿದ್ಯುತ್ ಪೂರೈಕೆಯಾಗುತ್ತದೆ.
- ಮಹತ್ವ:- ದೀರ್ಘಕಾಲದ ಬಾಹ್ಯಾಕಾಶ ವಿಕಿರಣ ಮತ್ತು ಸೂಕ್ಷ್ಮ ಗುರುತ್ವವು ಮಾನವನ ದೇಹದ ಮೇಲೆ ಬೀರುವ ಪರಿಣಾಮಗಳನ್ನು ಅಧ್ಯಯನ ಮಾಡುವಲ್ಲಿ ISS ನಿರ್ಣಾಯಕ ಪಾತ್ರ ವಹಿಸುತ್ತದೆ. ವಿಜ್ಞಾನಿಗಳಿಗೆ ಮೂಳೆ ಸವೆತ, ಸ್ನಾಯು ಕ್ಷೀಣತೆ ಮತ್ತು ರೋಗನಿರೋಧಕ ವ್ಯವಸ್ಥೆಯಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
ವಿಪತ್ತು ಸಂತ್ರಸ್ತರ ಗುರುತಿಸುವಿಕೆಗಾಗಿ NDMAಯ ಮೊದಲ ಮಾರ್ಗಸೂಚಿಗಳು
ವಿಪತ್ತು ನಿರ್ವಹಣೆ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ‘ಸಾಮೂಹಿಕ ಸಾವು ಸಂಭವಿಸುವ ಘಟನೆಗಳ’ ಸಂದರ್ಭದಲ್ಲಿ ಸಂತ್ರಸ್ತರನ್ನು ಗುರುತಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (NDMA) ದೇಶದ ಮೊಟ್ಟಮೊದಲ ‘ಪ್ರಮಾಣಿತ ಕಾರ್ಯಾಚರಣಾ ವಿಧಾನ’ವನ್ನು (SOP) ಮಾರ್ಗಸೂಚಿಗಳೊಂದಿಗೆ ಬಿಡುಗಡೆ ಮಾಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA)ದ ಬಗ್ಗೆ:
- ಮುಖ್ಯಸ್ಥರು:- ಭಾರತದ ಪ್ರಧಾನ ಮಂತ್ರಿಗಳು.
- ಇದು ಭಾರತದಲ್ಲಿ ವಿಪತ್ತು ನಿರ್ವಹಣೆಗಾಗಿ ಇರುವ ಅತ್ಯುನ್ನತ ಸಂಸ್ಥೆಯಾಗಿದೆ.
- ಇದನ್ನು ವಿಪತ್ತು ನಿರ್ವಹಣಾ ಕಾಯ್ದೆ, 2005ರ ಅಡಿಯಲ್ಲಿ ಸ್ಥಾಪಿಸಲಾಗಿದೆ.
- ಉದ್ದೇಶ:- ವಿಪತ್ತು ನಿರ್ವಹಣೆಗಾಗಿ ನೀತಿಗಳು, ಯೋಜನೆಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸುವುದು ಹಾಗೂ ತಡೆಗಟ್ಟುವಿಕೆ, ಉಪಶಮನ, ಸನ್ನದ್ಧತೆ ಮತ್ತು ಪ್ರತಿಕ್ರಿಯೆಯ ನೀತಿಯನ್ನು ಉತ್ತೇಜಿಸುವುದು ಇದರ ಜವಾಬ್ದಾರಿಯಾಗಿದೆ.
ಸಿಎಆರ್ ಟಿ-ಕೋಶ ಚಿಕಿತ್ಸೆ (CAR T-cell therapy)
ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
- ಐಐಟಿ ಬಾಂಬೆಯ ಸಂಶೋಧಕರು ‘ಸಿಎಆರ್ ಟಿ-ಕೋಶ’ (CAR T-cell) ಮತ್ತು ಇತರೆ ‘ಅಡಾಪ್ಟಿವ್ ಟಿ-ಕೋಶ ವರ್ಗಾವಣೆ’ (Adoptive T-cell Transfer – ACT) ಚಿಕಿತ್ಸೆಗಳಲ್ಲಿನ ನಿರ್ಣಾಯಕ ಸವಾಲೊಂದನ್ನು ಪರಿಹರಿಸಿದ್ದಾರೆ.
ಟಿ-ಕೋಶಗಳ ಬಗ್ಗೆ:
- ಇವು ದೇಹದ ಮುಂಚೂಣಿ ರಕ್ಷಕರಂತೆ ಕಾರ್ಯನಿರ್ವಹಿಸುವ ಬಿಳಿ ರಕ್ತಕಣಗಳಾಗಿವೆ.
- ಇವು ಸೋಂಕುಗಳು ಅಥವಾ ಕ್ಯಾನ್ಸರ್‌ನಂತಹ ಅಸಹಜ ಕೋಶಗಳನ್ನು ಪತ್ತೆಹಚ್ಚಿ ನಾಶಪಡಿಸುತ್ತವೆ ಹಾಗೂ ಪ್ರತಿಕ್ರಿಯಿಸಲು ಇತರ ರೋಗನಿರೋಧಕ ಕೋಶಗಳನ್ನು ಸಂಯೋಜಿಸುತ್ತವೆ. ಈ ಕಾರಣದಿಂದಾಗಿ, ರೋಗನಿರೋಧಕ ಚಿಕಿತ್ಸೆಯಲ್ಲಿ ಇವು ನಿರ್ಣಾಯಕ ಪಾತ್ರ ವಹಿಸುತ್ತವೆ.
ಸಿಎಆರ್ ಟಿ-ಕೋಶ ಚಿಕಿತ್ಸೆಯ ಬಗ್ಗೆ:
- ಸುಧಾರಿತ ಚಿಕಿತ್ಸೆ:- ಇದು ಕ್ಯಾನ್ಸರ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ರೋಗಿಯ ಟಿ-ಕೋಶಗಳನ್ನು ಮಾರ್ಪಡಿಸುವ ಒಂದು ಸುಧಾರಿತ ಚಿಕಿತ್ಸೆಯಾಗಿದೆ.
- ಕಾರ್ಯ ವಿಧಾನ:-
- ವೈದ್ಯರು ಮೊದಲು ರೋಗಿಯ ರಕ್ತದಿಂದ ಟಿ-ಕೋಶಗಳನ್ನು ಸಂಗ್ರಹಿಸುತ್ತಾರೆ ಮತ್ತು ನಂತರ ಅವುಗಳಿಗೆ ‘ಕೈಮೆರಿಕ್ ಆಂಟಿಜೆನ್ ರಿಸೆಪ್ಟರ್‌ಗಳು’ (CARs – Chimeric Antigen Receptors) ಎಂದು ಕರೆಯಲ್ಪಡುವ ವಿಶೇಷ ಗ್ರಾಹಕಗಳನ್ನು ನೀಡುವ ವಂಶವಾಹಿಯನ್ನು ಸೇರಿಸುತ್ತಾರೆ.
- ಈ ಗ್ರಾಹಕಗಳು ಜಿಪಿಎಸ್ (GPS) ನಂತೆ ಕಾರ್ಯನಿರ್ವಹಿಸುತ್ತವೆ; ಅಂದರೆ, ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚಲು ಮತ್ತು ಗುರಿಯಾಗಿಸಲು ಇವು ಟಿ-ಕೋಶಗಳಿಗೆ ನಿರ್ದೇಶನ ನೀಡುತ್ತವೆ.
- ಹೀಗೆ ತಾಂತ್ರಿಕವಾಗಿ ಮಾರ್ಪಡಿಸಿದ ನಂತರ, ಈ ಟಿ-ಕೋಶಗಳನ್ನು ಪ್ರಯೋಗಾಲಯದಲ್ಲಿ ವಿಸ್ತರಿಸಲಾಗುತ್ತದೆ (ಸಂಖ್ಯಾಭಿವೃದ್ಧಿ ಮಾಡಲಾಗುತ್ತದೆ) ಮತ್ತು ನಂತರ ರೋಗಿಯ ದೇಹಕ್ಕೆ ಮರು-ಸೇರ್ಪಡೆ ಮಾಡಲಾಗುತ್ತದೆ.
ನೆಕ್ಸ್‌ಕಾರ್19 (NexCAR 19):-
- ಎಂಬುದು ‘ಇಮ್ಯುನೊ ಎಸಿಟಿ’ (Immune ACT) ಸಂಸ್ಥೆ ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಹ್ಯೂಮನೈಸ್ಡ್ ಸಿಎಆರ್-ಟಿ ಚಿಕಿತ್ಸೆಯಾಗಿದೆ.
ಪ್ರಯೋಜನಗಳು:
- ನಿಖರ ಗುರಿ:- ಸಿಎಆರ್-ಟಿ ಕೋಶ ಚಿಕಿತ್ಸೆಯು ನಿರ್ದಿಷ್ಟವಾಗಿ ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ಮಾಡುತ್ತದೆ ಮತ್ತು ಆರೋಗ್ಯಕರ ಕೋಶಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ‘ಕೀಮೋಥೆರಪಿ’ಗೆ (ರಾಸಾಯನಿಕ ಚಿಕಿತ್ಸೆ) ಹೋಲಿಸಿದರೆ ಅಡ್ಡಪರಿಣಾಮಗಳು ಕಡಿಮೆಯಾಗಿರುತ್ತವೆ.
- ವೈಯಕ್ತೀಕರಿಸಿದ ಚಿಕಿತ್ಸೆ:- ಇದು ರೋಗಿಯ ಸ್ವಂತ ಟಿ-ಕೋಶಗಳನ್ನು ಬಳಸುತ್ತದೆ ಮತ್ತು ಅವರ ವಿಶಿಷ್ಟ ಕ್ಯಾನ್ಸರ್ ಅನ್ನು ಗುರಿಯಾಗಿಸಲು ವಿನ್ಯಾಸಗೊಳಿಸಲಾಗಿರುವುದರಿಂದ, ಚಿಕಿತ್ಸೆಯ ಪರಿಣಾಮಕಾರಿತ್ವ ಹೆಚ್ಚುತ್ತದೆ.
- ದೀರ್ಘಕಾಲೀನ ಪರಿಣಾಮಗಳು:- ಮಾರ್ಪಡಿಸಿದ ಟಿ-ಕೋಶಗಳು ದೇಹದಲ್ಲಿ ಉಳಿಯಬಲ್ಲವು. ಈ ಮೂಲಕ ಕ್ಯಾನ್ಸರ್ ಮರುಕಳಿಸದಂತೆ ದೀರ್ಘಕಾಲದ ರಕ್ಷಣೆ ಒದಗಿಸುತ್ತವೆ.
- ಕಡಿಮೆ ಆಸ್ಪತ್ರೆ ವಾಸ ಮತ್ತು ವೆಚ್ಚಗಳು:- ಆಸ್ಪತ್ರೆಯಲ್ಲಿ ಉಳಿಯುವ ಅವಧಿ ಕಡಿಮೆ ಮತ್ತು ಕಡಿಮೆ ಬೆಂಬಲ ಚಿಕಿತ್ಸೆ ಅಗತ್ಯವಿರುವುದರಿಂದ, ಇದು ಸಂಭಾವ್ಯ ವೆಚ್ಚದ ಉಳಿತಾಯಕ್ಕೆ ಕಾರಣವಾಗುತ್ತದೆ.
- ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಪ್ರಗತಿ:- ಇದು ರೋಗನಿರೋಧಕ ಚಿಕಿತ್ಸೆಯಲ್ಲಿ ಹೊಸ ಮಾರ್ಗಗಳನ್ನು ತೆರೆಯುತ್ತದೆ ಹಾಗೂ ಚಿಕಿತ್ಸಾ ಆಯ್ಕೆಗಳು ಮತ್ತು ಸಂಶೋಧನಾ ಸಾಧ್ಯತೆಗಳನ್ನು ವಿಸ್ತರಿಸುತ್ತದೆ.
- ತಾಂತ್ರಿಕ ವಿಕಸನ:- ಸಿಎಆರ್ ರಚನೆಗಳ ನಿರಂತರ ಅಭಿವೃದ್ಧಿಯು ವಿವಿಧ ರೀತಿಯ ಕ್ಯಾನ್ಸರ್‌ಗಳನ್ನು ಗುರಿಯಾಗಿಸಲು ಮತ್ತು ಸಂಯೋಜಿತ ಚಿಕಿತ್ಸೆಗಳಿಗೆ ಅವಕಾಶ ನೀಡುತ್ತದೆ.
- ಕೈಗೆಟುಕುವ ದರ:- ಭಾರತದಲ್ಲಿ ನೆಕ್ಸ್‌ಕಾರ್19 (NexCAR 19) ನಂತಹ ಸ್ವದೇಶಿ ಚಿಕಿತ್ಸೆಗಳು ಸಿಎಆರ್-ಟಿ ಚಿಕಿತ್ಸೆಯನ್ನು ಹೆಚ್ಚು ಲಭ್ಯವಾಗುವಂತೆ ಮತ್ತು ಕಡಿಮೆ ವೆಚ್ಚದಾಯಕವಾಗಿಸುತ್ತವೆ.
ಅಗ್ನಿ-3 ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ
ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
- ಒಡಿಶಾದ ಚಂಡಿಪುರದಿಂದ 3,000 ಕಿ.ಮೀ.ಗೂ ಅಧಿಕ ದಾಳಿ ವ್ಯಾಪ್ತಿಯನ್ನು ಹೊಂದಿರುವ, ಅಣ್ವಸ್ತ್ರ ಸಾಮರ್ಥ್ಯದ ‘ಅಗ್ನಿ-3 ಬ್ಯಾಲಿಸ್ಟಿಕ್ ಕ್ಷಿಪಣಿ’ಯನ್ನು ಭಾರತವು ಯಶಸ್ವಿಯಾಗಿ ಪರೀಕ್ಷಿಸಿದೆ.
ಅಗ್ನಿ-3 ಬ್ಯಾಲಿಸ್ಟಿಕ್ ಕ್ಷಿಪಣಿಯ ಬಗ್ಗೆ:
- ಅಭಿವೃದ್ಧಿಪಡಿಸಿದವರು:- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO).
- ದಾಳಿ ವ್ಯಾಪ್ತಿ:- 3,000 ಕಿ.ಮೀ.
- ವಿಶಿಷ್ಟತೆ:- ಇದು ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಸಿಡಿತಲೆಗಳೆರಡನ್ನೂ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಅಗ್ನಿ ಕ್ಷಿಪಣಿ ಸರಣಿಯ ಬಗ್ಗೆ:
- ಇದು ಡಿಆರ್‌ಡಿಒ (DRDO) ಅಭಿವೃದ್ಧಿಪಡಿಸಿದ ಸ್ವದೇಶಿ ನಿರ್ಮಿತ ದೀರ್ಘ-ಶ್ರೇಣಿಯ ಕ್ಷಿಪಣಿ ವ್ಯವಸ್ಥೆಯಾಗಿದೆ.
- ಅಗ್ನಿ-I ರಿಂದ ಅಗ್ನಿ-IV:- 1990ರ ದಶಕದಲ್ಲಿ ಅಭಿವೃದ್ಧಿಪಡಿಸಲಾಯಿತು ಮತ್ತು 2000ರ ದಶಕದ ಮಧ್ಯಭಾಗದಲ್ಲಿ ನಿಯೋಜಿಸಲಾಯಿತು.
- ವ್ಯಾಪ್ತಿ:- 700–3,500 ಕಿ.ಮೀ.
- ಸಿಡಿತಲೆ (ಪೇಲೋಡ್):- 12–40 kt,
- ಅಗ್ನಿ-V:-
- 3 ಹಂತದ ಘನ ಇಂಧನ ವ್ಯವಸ್ಥೆಯನ್ನು ಹೊಂದಿದೆ.
- ‘ಎಂಐಆರ್‌ವಿ’ (MIRV – ಒಂದೇ ಕ್ಷಿಪಣಿಯಲ್ಲಿ ಹಲವು ಸಿಡಿತಲೆಗಳನ್ನು ಅಳವಡಿಸಿ ಬೇರೆ ಬೇರೆ ಗುರಿಗಳನ್ನು ತಲುಪುವ ತಂತ್ರಜ್ಞಾನ) ಸಾಮರ್ಥ್ಯವನ್ನು ಒಳಗೊಂಡಿದೆ.
- ದಾಳಿ ವ್ಯಾಪ್ತಿ:- 5,000 ಕಿ.ಮೀ.
- 5,500 ಕಿ.ಮೀ.ಗೂ ಅಧಿಕ ದೂರ ಕ್ರಮಿಸಬಲ್ಲ ಸಂಭಾವ್ಯ ಖಂಡಾಂತರ ಕ್ಷಿಪಣಿಯಾಗಿದೆ.
- ಅಗ್ನಿ-ಪಿ (Agni-P):-
- 2 ಹಂತದ ಘನ ಇಂಧನ ವ್ಯವಸ್ಥೆಯನ್ನು ಹೊಂದಿದ್ದು, 11,000 ಕೆ.ಜಿ. ತೂಕವನ್ನು ಹೊಂದಿದೆ.
- ದಾಳಿ ವ್ಯಾಪ್ತಿ:- 1,000 ದಿಂದ 2,000 ಕಿ.ಮೀ.
- ಇದು ಸುಧಾರಿತ ನೋದನ ಮತ್ತು ಪಥ ನಿರ್ದೇಶನ (Propulsion and Navigation) ವ್ಯವಸ್ಥೆಯನ್ನು ಒಳಗೊಂಡಿದೆ.
- ಇದು ತೀವ್ರ ಸ್ಫೋಟಕ, ಥರ್ಮೋಬ್ಯಾರಿಕ್ ಅಥವಾ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.



ನಿಮ್ಮದೊಂದು ಉತ್ತರ