ಕೇರಳ: ‘ಬ್ಯಾಸಿಲಸ್ ಸಬ್ಟಿಲಿಸ್’ ರಾಜ್ಯ ಸೂಕ್ಷ್ಮಜೀವಿ ಎಂದು ಘೋಷಣೆ
ಆರೋಗ್ಯ/ ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಮಣ್ಣಿನಲ್ಲಿ ವಾಸಿಸುವ ಪ್ರಯೋಜನಕಾರಿ ಬ್ಯಾಕ್ಟೀರಿಯಾವಾದ ಬ್ಯಾಸಿಲಸ್ ಸಬ್ಟಿಲಿಸ್ (Bacillus subtilis) ಅನ್ನು ಅಧಿಕೃತ “ರಾಜ್ಯ ಸೂಕ್ಷ್ಮಜೀವಿ” ಎಂದು ನೇಮಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ.
‘ಬ್ಯಾಸಿಲಸ್ ಸಬ್ಟಿಲಿಸ್’ ನ ಬಗ್ಗೆ:
- ಇದು ರೋಗಕಾರಕವಲ್ಲದ, ದಂಡಾಕಾರದ, ಗ್ರಾಮ್-ಧನಾತ್ಮಕ ಬ್ಯಾಕ್ಟೀರಿಯಾ ಆಗಿದೆ.
- ಇದು ಸಾಮಾನ್ಯವಾಗಿ ಮಣ್ಣು, ನೀರು ಮತ್ತು ಮಾನವನ ಕರುಳಿನಲ್ಲಿ ಕಂಡುಬರುತ್ತದೆ.
- ಪ್ರೋಬಯಾಟಿಕ್ (ಒಳ್ಳೆಯ ಬ್ಯಾಕ್ಟೀರಿಯಾ) ಆಗಿದೆ:- ಇದು, ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಒಂದು ಬ್ಯಾಕ್ಟೀರಿಯಾ ಆಗಿದೆ.
- ಜೈವಿಕ ಗೊಬ್ಬರ ಮತ್ತು ಜೈವಿಕ ನಿಯಂತ್ರಣ ಕಾರಕವಾಗಿ ಬಳಕೆ:- ಬೆಳೆ ಇಳುವರಿ ಹೆಚ್ಚಿಸಲು ಮತ್ತು ಸಸ್ಯ ರೋಗಗಳನ್ನು ಹತ್ತಿಕ್ಕಲು ಇದನ್ನು ಕೃಷಿಯಲ್ಲಿ ಜೈವಿಕ ಗೊಬ್ಬರ ಮತ್ತು ಜೈವಿಕ ನಿಯಂತ್ರಣ ಕಾರಕವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.
- ಇದು ಹೊಂದಿರುವ ಪರಿಸರ ಸಹಿಷ್ಣುತೆ ಮತ್ತು ಬೀಜಕ-ರೂಪುಗೊಳ್ಳುವ ಸಾಮರ್ಥ್ಯದಿಂದಾಗಿ, ಇದು ಗಮನಾರ್ಹವಾದ ಕೈಗಾರಿಕಾ ಮತ್ತು ಜೈವಿಕ ತಂತ್ರಜ್ಞಾನದ ಅನ್ವಯಿಕೆಗಳನ್ನು ಹೊಂದಿದೆ.
|
ನಿಮಗಿದು ತಿಳಿದಿದೆಯೇ? ಮೈಕ್ರೋಬಯೋಮ್ ಶ್ರೇಷ್ಠತಾ ಕೇಂದ್ರ
|
ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್ (Quad -ಕ್ವಾಡ್)
ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಇತ್ತೀಚೆಗೆ, ಅಮೆರಿಕದ ಹಿರಿಯ ಅಧಿಕಾರಿಗಳು ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್ (Quad- ಚತುರ್ಭುಜ ಭದ್ರತಾ ಸಂವಾದ) ಅನ್ನು “ಅತ್ಯಂತ ಪ್ರಮುಖ ವೇದಿಕೆ” ಎಂದು ಮತ್ತು ಭಾರತವನ್ನು ಅದರಲ್ಲಿನ “ಸಕ್ರಿಯ ಪಾಲುದಾರ” ಎಂದು ಬಣ್ಣಿಸಿದ್ದಾರೆ.
ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್ (Quad) ನ ಬಗ್ಗೆ:
- ಅನೌಪಚಾರಿಕ ಕಾರ್ಯತಂತ್ರದ ಸಂವಾದ ವೇದಿಕೆಯಾಗಿದೆ:- ಇದು ಭಾರತ, ಅಮೆರಿಕ (USA), ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳ ನಡುವಿನ ಒಂದು ವೇದಿಕೆಯಾಗಿದೆ.
- ಉದ್ದೇಶ:- ಒಂದು ಸ್ವತಂತ್ರ, ಮುಕ್ತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶವನ್ನು ಖಚಿತಪಡಿಸುವುದು ಮತ್ತು ಬೆಂಬಲಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಮಲಬಾರ್ ನೌಕಾಭ್ಯಾಸದ ಬಗ್ಗೆ:
- ಪ್ರಾರಂಭ:- ಇದು 1992ರಲ್ಲಿ ಪ್ರಾರಂಭವಾದ ಬಹುಪಕ್ಷೀಯ ನೌಕಾಭ್ಯಾಸವಾಗಿದೆ. ಈ ವ್ಯಾಯಾಮವು ಆರಂಭದಲ್ಲಿ ಭಾರತ ಮತ್ತು ಅಮೆರಿಕದ ನೌಕಾಪಡೆಗಳ ನಡುವೆ ದ್ವಿಪಕ್ಷೀಯ ಸಮರಾಭ್ಯಾಸವಾಗಿ ಪ್ರಾರಂಭವಾಯಿತು.
- ಭಾಗವಹಿಸುವ ರಾಷ್ಟ್ರಗಳು:- 2002ರಿಂದೀಚೆಗೆ, ಈ ನೌಕಾಭ್ಯಾಸವನ್ನು ಪ್ರತಿ ವರ್ಷ ನಡೆಸಲಾಗುತ್ತಿದೆ. ಜಪಾನ್ ಮತ್ತು ಆಸ್ಟ್ರೇಲಿಯಾ ಮೊದಲ ಬಾರಿಗೆ 2007ರಲ್ಲಿ ಇದರಲ್ಲಿ ಭಾಗವಹಿಸಿದವು. 2014ರಿಂದ, ಭಾರತ, ಅಮೆರಿಕ ಮತ್ತು ಜಪಾನ್ ಇದರಲ್ಲಿ ಭಾಗವಹಿಸುತ್ತಿವೆ. 2020ರಲ್ಲಿ ಆಸ್ಟ್ರೇಲಿಯಾ ಕೂಡ ಮಲಬಾರ್ ಸಮರಾಭ್ಯಾಸಕ್ಕೆ ಸೇರಿಕೊಂಡಿತು.
- ಗುರಿ:- ಸ್ವತಂತ್ರ, ಮುಕ್ತ ಮತ್ತು ಸಮೃದ್ಧ ಮತ್ತು ಎಲ್ಲರನ್ನೂ ಒಳಗೊಳ್ಳುವ ಇಂಡೋ-ಪೆಸಿಫಿಕ್ ಪ್ರದೇಶವನ್ನು ಬೆಂಬಲಿಸುವುದು ಮತ್ತು ನಿಯಮಾಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಗೆ ಬದ್ಧವಾಗಿರುವುದು ಇದರ ಗುರಿಯಾಗಿದೆ.
ಆಫ್ರಿಕಾ ಒಕ್ಕೂಟ (AU)
ಪ್ರಾದೇಶಿಕ ಗುಂಪುಗಳು
ಇದೀಗ ಸುದ್ದಿಯಲ್ಲಿದೆ:
- ಆಫ್ರಿಕಾ ಒಕ್ಕೂಟವು ವ್ಯಾಪಕವಾದ ಅಸಮಾಧಾನವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಆಫ್ರಿಕಾ ಖಂಡದ ಭವಿಷ್ಯದ ಕುರಿತು ಚರ್ಚಿಸಲು ಇಥಿಯೋಪಿಯಾದಲ್ಲಿ ತನ್ನ ವಾರ್ಷಿಕ ಶೃಂಗಸಭೆಯನ್ನು ಆಯೋಜಿಸುತ್ತಿದೆ.
ಆಫ್ರಿಕಾ ಒಕ್ಕೂಟ (AU)ದ ಬಗ್ಗೆ:
- ಖಂಡಾಂತರ ಸಂಸ್ಥೆಯಾಗಿದೆ:- ಇದು ಆಫ್ರಿಕಾ ಖಂಡದ 55 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಒಂದು ಖಂಡಾಂತರ ಸಂಸ್ಥೆಯಾಗಿದೆ.
- ಆಫ್ರಿಕಾದ ಏಕತಾ ಸಂಘಟನೆಯ (OAU, 1963-1999) ಉತ್ತರವರ್ತಿ ಸಂಸ್ಥೆಯಾಗಿ ಇದು 2002ರಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು.
- ಗುರಿ:- ಆಫ್ರಿಕಾ ಖಂಡದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು ಈ ಒಕ್ಕೂಟದ ಪ್ರಮುಖ ಗುರಿಯಾಗಿದೆ.
- ಪ್ರಧಾನ ಕಚೇರಿ:- ಇಥಿಯೋಪಿಯಾದ ಅಡಿಸ್ ಅಬಾಬಾದಲ್ಲಿದೆ.
ಉಪಕ್ರಮಗಳು:
- ಆಫ್ರಿಕಾ ಖಂಡಾಂತರ ಮುಕ್ತ ವ್ಯಾಪಾರ ವಲಯ (AfCFTA) ಒಪ್ಪಂದ:- ಈ ಒಪ್ಪಂದವು ಇಡೀ ಆಫ್ರಿಕಾ ಖಂಡದಾದ್ಯಂತ ಸರಕು ಮತ್ತು ಸೇವೆಗಳಿಗೆ ಏಕರೂಪದ ಮಾರುಕಟ್ಟೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
- ಅಜೆಂಡಾ 2063:- ಇದು ಮುಂದಿನ 50 ವರ್ಷಗಳಲ್ಲಿ ಆಫ್ರಿಕಾ ಖಂಡದ ಸಾಮಾಜಿಕ-ಆರ್ಥಿಕ ಪರಿವರ್ತನೆಗಾಗಿ ಸಿದ್ಧಪಡಿಸಲಾದ ಒಂದು ಕಾರ್ಯತಂತ್ರದ ಚೌಕಟ್ಟಾಗಿದೆ.
ಸೇವಾ ತೀರ್ಥ
ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಪ್ರಧಾನ ಮಂತ್ರಿಯವರು ನವದೆಹಲಿಯಲ್ಲಿ ಕರ್ತವ್ಯ ಭವನ-1 ಮತ್ತು 2 ರ ಜೊತೆಗೆ ಸೇವಾ ತೀರ್ಥ ಸಂಕೀರ್ಣವನ್ನು ಉದ್ಘಾಟಿಸಿದರು.
ಸೇವಾ ತೀರ್ಥ ಮತ್ತು ಕರ್ತವ್ಯ ಭವನ-1 ಮತ್ತು 2 ರ ಬಗ್ಗೆ:
- ಸೇವಾ ತೀರ್ಥ:- ಇದು ಪ್ರಧಾನ ಮಂತ್ರಿ ಕಾರ್ಯಾಲಯ (PMO), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ (NSCS) ಮತ್ತು ಕ್ಯಾಬಿನೆಟ್ ಸಚಿವಾಲಯಗಳನ್ನು ಒಳಗೊಂಡಿದೆ. ಇವು ಹಿಂದೆ ವಿವಿಧ ಸ್ಥಳಗಳಲ್ಲಿ ಹಂಚಿಹೋಗಿದ್ದವು.
- ಇದು ಆಧುನಿಕ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಸೌಲಭ್ಯಗಳೊಂದಿಗೆ ಆಡಳಿತಾತ್ಮಕ ಕಾರ್ಯಗಳನ್ನು ಇದು ಕ್ರೂಢೀಕರಿಸುತ್ತದೆ.
- ಕರ್ತವ್ಯ ಭವನ-1 ಮತ್ತು 2:- ಇವು ಹಣಕಾಸು ಸಚಿವಾಲಯ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಶಿಕ್ಷಣ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೇರಿದಂತೆ ಹಲವಾರು ಪ್ರಮುಖ ಸಚಿವಾಲಯಗಳಿಗೆ ಸ್ಥಳಾವಕಾಶ ಕಲ್ಪಿಸುತ್ತವೆ.
- ಎರಡೂ ಕಟ್ಟಡ ಸಂಕೀರ್ಣಗಳು ಡಿಜಿಟಲ್ ಸಂಯೋಜಿತ ಕಚೇರಿಗಳು, ರಚನಾತ್ಮಕ ಸಾರ್ವಜನಿಕ ಸಂಪರ್ಕ ವಲಯಗಳು ಮತ್ತು ಕೇಂದ್ರೀಕೃತ ಸ್ವಾಗತ ಸೌಲಭ್ಯಗಳನ್ನು ಹೊಂದಿವೆ.
ಮಹತ್ವ:
- ಈ ವೈಶಿಷ್ಟ್ಯಗಳು ಸಹಯೋಗ, ದಕ್ಷತೆ, ಸುಗಮ ಆಡಳಿತ, ಸುಧಾರಿತ ನಾಗರಿಕ ಸಂಪರ್ಕ ಮತ್ತು ಉದ್ಯೋಗಿಗಳ ಯೋಗಕ್ಷೇಮವನ್ನು ಉತ್ತೇಜಿಸುತ್ತವೆ.
ಜನವರಿ 2026ರ CPI: ಹೊಸ ಆಧಾರ ವರ್ಷ (2024=100)
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು ಆಧಾರ ವರ್ಷ 2024=100 ರೊಂದಿಗೆ ತಾತ್ಕಾಲಿಕ ಗ್ರಾಹಕ ಬೆಲೆ ಸೂಚ್ಯಂಕವನ್ನು (CPI) ಬಿಡುಗಡೆ ಮಾಡಿದೆ.
ವಿವರಗಳು:
- 2023-24ರ ಕೌಟುಂಬಿಕ ಅನುಭೋಗ ವೆಚ್ಚದ ಸಮೀಕ್ಷೆಯನ್ನು ಬಳಸಿಕೊಂಡು ಆಧಾರ ವರ್ಷವನ್ನು 2012 ರಿಂದ 2024 ಕ್ಕೆ ಪರಿಷ್ಕರಿಸಲಾಗಿದೆ.
ಗ್ರಾಹಕ ಬೆಲೆ ಸೂಚ್ಯಂಕ (CPI)ದ ಬಗ್ಗೆ:
- ಚಿಲ್ಲರೆ ಹಣದುಬ್ಬರವನ್ನು ವಿಶ್ಲೇಷಿಸುತ್ತದೆ:- ಇದು ಗ್ರಾಹಕರು ಸರಕು ಮತ್ತು ಸೇವೆಗಳ ಬುಟ್ಟಿಗೆ ಗುಚ್ಛಕ್ಕೆ ಪಾವತಿಸುವ ಬೆಲೆಗಳಲ್ಲಿನ ಸರಾಸರಿ ಬದಲಾವಣೆಯನ್ನು ಅಳೆಯುತ್ತದೆ.
- ಇದು ಜೀವನ ವೆಚ್ಚ ಮತ್ತು ಕೊಳ್ಳುವ ಶಕ್ತಿಯಲ್ಲಿನ ಏರಿಳಿತಗಳನ್ನು ಅವಲೋಕಿಸುತ್ತದೆ.
- ಇದು ಆಹಾರ, ವಸತಿ, ಉಡುಪು, ಸಾರಿಗೆಯಂತಹ ಪ್ರಮುಖ ಘಟಕಗಳನ್ನು ಒಳಗೊಂಡಿದೆ.
- ಮಾಸಿಕವಾಗಿ ಪ್ರಕಟಿಸಲಾಗುತ್ತದೆ:- ಇದರ ಹಿಂದಿನ ಆಧಾರ ವರ್ಷ 2012 ಆಗಿದ್ದು, ಅದನ್ನು ಈಗ 2024ಕ್ಕೆ ಪರಿಷ್ಕರಿಸಲಾಗಿದೆ.
- ಬಿಡುಗಡೆ ಮಾಡುವವರು:- ಇದನ್ನು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI) ಅಡಿಯಲ್ಲಿರುವ ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಛೇರಿಯು (NSO) ಬಿಡುಗಡೆ ಮಾಡುತ್ತದೆ.
ಲೀಡ್ ಬ್ಯಾಂಕ್ ಯೋಜನೆ (LBS)
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಸ್ತಾಪಿಸಿರುವ ಮಾರ್ಗಸೂಚಿಗಳು, ವಿವಿಧ ಸಮಿತಿಗಳ ರಚನೆ, ಸದಸ್ಯತ್ವ ಮತ್ತು ಪಾತ್ರಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವ ಮೂಲಕ ಲೀಡ್ ಬ್ಯಾಂಕ್ ಯೋಜನೆಯನ್ನು ಬಲಪಡಿಸುವ ಮತ್ತು ಸರಳೀಕರಿಸುವ ಗುರಿಯನ್ನು ಹೊಂದಿವೆ.
ಲೀಡ್ ಬ್ಯಾಂಕ್ ಯೋಜನೆ (LBS)ಯ ಬಗ್ಗೆ:
- ಸಾಂಸ್ಥಿಕ ಕಾರ್ಯವಿಧಾನವಾಗಿದೆ:- ಇದು ಡಿಸೆಂಬರ್ 1969ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪರಿಚಯಿಸಿದ ಸಾಂಸ್ಥಿಕ ಕಾರ್ಯವಿಧಾನವಾಗಿದೆ.
- ಉದ್ದೇಶ:- ಜಿಲ್ಲಾ ಮಟ್ಟದಲ್ಲಿ ಬ್ಯಾಂಕಿಂಗ್ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಸಂಯೋಜಿಸುವುದು ಇದರ ಉದ್ದೇಶವಾಗಿದೆ.
- ಮಹತ್ವ:- ಕೃಷಿ ಮತ್ತು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳಂತಹ (MSMEs) ಆದ್ಯತಾ ವಲಯಗಳಿಗೆ ಸಾಲದ ಹರಿವನ್ನು ಹೆಚ್ಚಿಸುವುದು, ಪ್ರಾದೇಶಿಕ ಅಸಮತೋಲನವನ್ನು ಕಡಿಮೆ ಮಾಡುವುದು ಮತ್ತು ಒಟ್ಟಾರೆ ಗ್ರಾಮೀಣಾಭಿವೃದ್ಧಿಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.
- ಫೆಬ್ರವರಿ 2026 ರ ಹೊತ್ತಿಗೆ, ಡಿಜಿಟಲ್ ಯುಗಕ್ಕೆ ಅನುಗುಣವಾಗಿ ಕಾರ್ಯಾಚರಣೆಗಳನ್ನು ಆಧುನೀಕರಿಸಲು ಹೊಸ ಕರಡು ಮಾರ್ಗಸೂಚಿಗಳ ಮೂಲಕ ಈ ಯೋಜನೆಯ ಪ್ರಮುಖ ಪರಿಷ್ಕರಣೆಯನ್ನು RBI ಪ್ರಸ್ತಾಪಿಸಿದೆ.
ಪ್ರಮುಖ ಉದ್ದೇಶಗಳು:
- ಪ್ರಾದೇಶಿಕ ವಿಧಾನ:- ತೀವ್ರತರವಾದ ಬ್ಯಾಂಕಿಂಗ್ ಅಭಿವೃದ್ಧಿಗಾಗಿ ನಿರ್ದಿಷ್ಟ ಭೌಗೋಳಿಕ ಪ್ರದೇಶವನ್ನು (ಜಿಲ್ಲೆ) ಮೂಲ ಘಟಕವಾಗಿ ಅಳವಡಿಸಿಕೊಳ್ಳುವುದು.
- ಹಣಕಾಸು ಸೇರ್ಪಡೆ:- ಬ್ಯಾಂಕಿಂಗ್ ರಹಿತ ಮತ್ತು ಕಡಿಮೆ ಬ್ಯಾಂಕಿಂಗ್ ಸೌಲಭ್ಯವಿರುವ ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶದ ಜನರಿಗೆ ಬ್ಯಾಂಕಿಂಗ್ ಸೇವೆಗಳನ್ನು ವಿಸ್ತರಿಸುವುದು.
- ಸಂಘಟಿತ ಯೋಜನೆ:- ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRBs), ಸಹಕಾರಿ ಬ್ಯಾಂಕುಗಳು ಮತ್ತು ಸರ್ಕಾರಿ ಸಂಸ್ಥೆಗಳ ಪ್ರಯತ್ನಗಳನ್ನು ಒಗ್ಗೂಡಿಸಲು “ಒಕ್ಕೂಟದ ನಾಯಕ”ನಾಗಿ ಕಾರ್ಯನಿರ್ವಹಿಸುವುದು.
- ಸಾಲದ ನಿಯೋಜನೆ:- ಸ್ಥಳೀಯ ಆದಾಯ ಮಟ್ಟಗಳು ಮತ್ತು ಉತ್ಪಾದಕತೆಯನ್ನು ಸುಧಾರಿಸಲು ಉತ್ಪಾದಕ ವಲಯಗಳಿಗೆ ಸಾಲ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು.



ನಿಮ್ಮದೊಂದು ಉತ್ತರ