ಕರ್ನಾಟಕ ವಿಕಲಚೇತನರ ಹಕ್ಕುಗಳ ಮಸೂದೆ, 2025
ಇದೀಗ ಸುದ್ದಿಯಲ್ಲಿದೆ:
- ಹೊಸ ಕರ್ನಾಟಕ ವಿಕಲಚೇತನರ ಹಕ್ಕುಗಳ ಮಸೂದೆ, 2025 ರ ಮೂಲಕ ವಿಕಲಚೇತನರ ಹಕ್ಕುಗಳನ್ನು ವಿಸ್ತರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಮಸೂದೆಯ ಪ್ರಮುಖಾಂಶಗಳು:
- ಉದ್ಯೋಗ ಮೀಸಲಾತಿ: 20 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ರಾಜ್ಯದ ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ವಿಕಲಚೇತನರಿಗೆ ಶೇ. 5 ರಷ್ಟು ಮೀಸಲಾತಿಯನ್ನು ಕಲ್ಪಿಸುವ ‘ಉದ್ಯೋಗ ಮತ್ತು ಶಿಕ್ಷಣದಲ್ಲಿ ಕರ್ನಾಟಕ ವಿಕಲಚೇತನರ ಹಕ್ಕುಗಳ ಮಸೂದೆ, 2025’ ರ ಕರಡನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ.
- ಶೈಕ್ಷಣಿಕ ಮೀಸಲಾತಿ: ಶಿಕ್ಷಣ ಸಂಸ್ಥೆಗಳು ಪ್ರತಿ ಕೋರ್ಸ್‌ನಲ್ಲಿ ಶೇ. 10 ರಷ್ಟು ಆಸನಗಳನ್ನು ವಿಕಲಚೇತನ ವಿದ್ಯಾರ್ಥಿಗಳಿಗೆ ಕಾಯ್ದಿರಿಸುವುದನ್ನು ಈ ಕರಡು ಮಸೂದೆ ಕಡ್ಡಾಯಗೊಳಿಸಿದೆ. ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಒಳಗೊಳ್ಳುವಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಅನುಷ್ಠಾನದ ವಿವರಗಳು
- ಹಂತ-ಹಂತವಾಗಿ ಜಾರಿ: ಕರಡು ಮಸೂದೆಯು ಖಾಸಗಿ ವಲಯದಲ್ಲಿ ಶೇ. 5 ರಷ್ಟು ಉದ್ಯೋಗ ಮೀಸಲಾತಿಯನ್ನು ಹಂತಹಂತವಾಗಿ ಜಾರಿಗೆ ತರಲು ನಿರ್ಧರಿಸಿದೆ.
- ನಿಯಂತ್ರಣ ಮತ್ತು ವರದಿ: ಪ್ರಸ್ತಾಪಿತ ರಾಜ್ಯ ನಿಯಂತ್ರಕ ಪ್ರಾಧಿಕಾರವು ಸೂಚಿಸುವ ಮಾನದಂಡಗಳ ಆಧಾರದ ಮೇಲೆ ಕಂಪನಿಗಳು ಈ ಹುದ್ದೆಗಳನ್ನು ಹಂಚಿಕೆ ಮಾಡಬೇಕು. ಸಂಸ್ಥೆಗಳು ವಾರ್ಷಿಕ ಅನುಸರಣಾ ವರದಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಭರ್ತಿಯಾಗದ ಹುದ್ದೆಗಳನ್ನು ಮುಂದಿನ ಮೂರು ನೇಮಕಾತಿಗಳವರೆಗೆ ಮುಂದುವರೆಸಲು ಅವಕಾಶವಿದೆ.
- ವಿನಾಯಿತಿಗಳು : ಸಮಂಜಸವಾದ ಸೌಕರ್ಯಗಳನ್ನು ಒದಗಿಸಿದಾಗಲೂ, ಅತ್ಯಗತ್ಯ ಉದ್ಯೋಗ ಕಾರ್ಯಗಳನ್ನು ನಿರ್ವಹಿಸಲು ಅಸಾಧ್ಯವಾದ ಸಂದರ್ಭಗಳಲ್ಲಿ ಮಾತ್ರ ವಿನಾಯಿತಿಗಳನ್ನು ನೀಡಲಾಗುತ್ತದೆ.
- ಶಿಕ್ಷಣದಲ್ಲಿ ನಿರ್ದಿಷ್ಟತೆ: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಮಸೂದೆಯು ಶೇ. 10 ರಷ್ಟು ಮೀಸಲಾತಿಯನ್ನು ‘ಸಂಸ್ಥೆಯ ಮಟ್ಟದಲ್ಲಿ’ ಅನ್ವಯಿಸದೆ, ‘ಕೋರ್ಸ್-ನಿರ್ದಿಷ್ಟವಾಗಿ’ ಜಾರಿಗೊಳಿಸಲು ಸೂಚಿಸಿದೆ. ಕಾಲೇಜುಗಳು ವಿವಿಧ ವಿಭಾಗಗಳ ಸೀಟುಗಳನ್ನು ಸರಾಸರಿ ಮಾಡಿ ಮೀಸಲಾತಿ ಪ್ರಮಾಣವನ್ನು ತಗ್ಗಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.



ನಿಮ್ಮದೊಂದು ಉತ್ತರ