ಉಚಿತ ಅಂಗಾಂಗ ಕಸಿಗಾಗಿ ಬೆಂಗಳೂರಿನಲ್ಲಿ 1,000 ಹಾಸಿಗೆಯ ಆಸ್ಪತ್ರೆ

ಉಚಿತ ಅಂಗಾಂಗ ಕಸಿಗಾಗಿ ಬೆಂಗಳೂರಿನಲ್ಲಿ 1,000 ಹಾಸಿಗೆಯ ಆಸ್ಪತ್ರೆ

ಇದೀಗ ಸುದ್ದಿಯಲ್ಲಿದೆ:

  • ಬೆಂಗಳೂರಿನಲ್ಲಿ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಸಹಯೋಗದೊಂದಿಗೆ ಉಚಿತ ಅಂಗಾಂಗ ಕಸಿಗಾಗಿ 1,000 ಹಾಸಿಗೆಗಳ ಬಹು ಸೌಲಭ್ಯ ಆಧಾರಿತ  (ಮಲ್ಟಿ ಸ್ಪೆಷಾಲಿಟಿ) ಆಸ್ಪತ್ರೆಯನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರ ಅನುವು ಮಾಡಿಕೊಡಲಿದೆ.

ಪ್ರಮುಖ ಅಂಶಗಳು:

  • ಉದ್ದೇಶ:- ಬಡವರಿಗಾಗಿ ಉಚಿತ ಅಂಗಾಂಗ ಕಸಿ (ಮೂತ್ರಪಿಂಡ, ಯಕೃತ್ತು, ಶ್ವಾಸಕೋಶ ಮತ್ತು ಇತರ) ಸೌಲಭ್ಯವನ್ನು ಒದಗಿಸಲು ಮೀಸಲಾದ ಆರೋಗ್ಯ ಕೇಂದ್ರವನ್ನು ಸ್ಥಾಪಿಸುವುದು ಇದರ ಉದ್ದೇಶವಾಗಿದೆ. ನಿಮ್ಹಾನ್ಸ್‌ಗೆ (NIMHANS) ಹತ್ತಿರದಲ್ಲಿರುವುದರಿಂದ ಅಂಗಾಂಗ ಜೋಡಣೆ ಮತ್ತು ಸಾಗಣೆಗೆ ಇದು ಸುಗಮವಾಗಲಿದೆ.
  • ಸ್ಥಳ:- ಬೆಂಗಳೂರಿನ ನಿಮ್ಹಾನ್ಸ್ ಪಕ್ಕದಲ್ಲಿ ಸರ್ಕಾರ ಒದಗಿಸಿದ 10 ಎಕರೆ ಭೂಮಿಯಲ್ಲಿ 99 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಈ ಸೌಲಭ್ಯವನ್ನು ನಿರ್ಮಿಸಲಾಗುವುದು.
  • ಹೂಡಿಕೆ ಮತ್ತು ನಿರ್ವಹಣೆ:- ಈ ಸೌಲಭ್ಯವನ್ನು ಸ್ಥಾಪಿಸಲು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ₹1,000 ಕೋಟಿ ಹೂಡಿಕೆ ಮಾಡಲಿದ್ದು, ನಿರ್ವಹಣೆಗಾಗಿ ವಾರ್ಷಿಕವಾಗಿ ₹350 ಕೋಟಿ ವೆಚ್ಚ ಮಾಡುವ ಅಂದಾಜಿದೆ. ಮೂವರು ಸರ್ಕಾರಿ ಪ್ರತಿನಿಧಿಗಳನ್ನು ಒಳಗೊಂಡ ಮಂಡಳಿಯು ಆಸ್ಪತ್ರೆಯನ್ನು ನಿರ್ವಹಿಸಲಿದೆ.
  • ಸಾಮರ್ಥ್ಯ ಮತ್ತು ಕಾಲಮಿತಿ:- ಮುಂದಿನ 3 ವರ್ಷಗಳಲ್ಲಿ 350 ಹಾಸಿಗೆಗಳ ಸೌಲಭ್ಯ ಪೂರ್ಣಗೊಳ್ಳಲಿದ್ದು, ಮುಂದಿನ 5 ವರ್ಷಗಳಲ್ಲಿ ಇದನ್ನು 1,000 ಹಾಸಿಗೆಗಳ ಬಹು ಸೌಲಭ್ಯ ಆಧಾರಿತ ಸೌಲಭ್ಯಕ್ಕೆ ವಿಸ್ತರಿಸಲಾಗುವುದು.
  • ಆರೋಗ್ಯ ವೆಚ್ಚದ ಮಾದರಿ:- 
  • 70% ರಷ್ಟು ಹಾಸಿಗೆಗಳು ಉಚಿತವಾಗಿವೆ,  
  • 30% ರಷ್ಟು ಹಾಸಿಗೆಗಳು ಕಡಿಮೆ ದರದಲ್ಲಿ ಅಂದರೆ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಲಭ್ಯವಿರುತ್ತವೆ.
  • ಪ್ರಸ್ತುತ ಸಂದರ್ಭ ಮತ್ತು ಬೇಡಿಕೆ:– ರಾಜ್ಯದಲ್ಲಿ ಮೂತ್ರಪಿಂಡ ಕಸಿಗಾಗಿ ಕಾಯುತ್ತಿರುವ 5,000 ಕ್ಕೂ ಹೆಚ್ಚು ರೋಗಿಗಳು ಮತ್ತು ಯಕೃತ್ತು ಕಸಿಗಾಗಿ ಕಾಯುತ್ತಿರುವ 1,000 ಕ್ಕೂ ಹೆಚ್ಚು ರೋಗಿಗಳಿರುವ ಹಿನ್ನೆಲೆಯಲ್ಲಿ ಈ ಉಪಕ್ರಮವು ಮಹತ್ವದ್ದಾಗಿದೆ. ಇದು 2016 ರಿಂದ ಗ್ಯಾಸ್ಟ್ರೋ ಎಂಟರಾಲಜಿ ವಿಜ್ಞಾನ ಮತ್ತು ಅಂಗಾಂಗ ಕಸಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸ್ತಿತ್ವದಲ್ಲಿರುವ ಯಕೃತ್ತು ಕಸಿ ಸೌಲಭ್ಯಗಳಿಗೆ ಪೂರಕವಾಗಿರಲಿದೆ.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಬಗ್ಗೆ:

  • ಇದನ್ನು ಮೂಲತಃ ಕರ್ನಾಟಕ ಸರ್ಕಾರವು ಮಾರ್ಚ್ 2, 2018 ರಂದು “ಆರೋಗ್ಯ ಕರ್ನಾಟಕ” ಎಂದು ಪರಿಚಯಿಸಿತು ಮತ್ತು ನಂತರ ಅಕ್ಟೋಬರ್ 30, 2018 ರಂದು ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್‌ ಯೋಜನೆಯೊಂದಿಗೆ ಸಂಯೋಜಿಸಲಾಯಿತು.
  • ಈ ಯೋಜನೆಯನ್ನು ರಾಜ್ಯ ಸರ್ಕಾರವು “ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ” ಎಂಬ ಹೆಸರಿನಲ್ಲಿ “ಅಶ್ಯೂರೆನ್ಸ್ ಮೋಡ್” (ಭರವಸೆ ಮಾದರಿ) ನಲ್ಲಿ ಅನುಷ್ಠಾನಗೊಳಿಸುತ್ತಿದೆ.
  • ಪ್ರಾಥಮಿಕ ಗುರಿ:- ರಾಜ್ಯದ ಎಲ್ಲಾ ನಿವಾಸಿಗಳಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು (UHC) ಒದಗಿಸುವುದು.
  • ಉದ್ದೇಶ:- ಸರಳ ದ್ವಿತೀಯ, ಕಷ್ಟ ಕರವಾಗಿರುವ ದ್ವಿತೀಯ, ತೃತೀಯ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಗಳ ವೆಚ್ಚದ ವಿರುದ್ಧ ಆರ್ಥಿಕ ರಕ್ಷಣೆ ಒದಗಿಸುವುದು ಇದರ ಉದ್ದೇಶವಾಗಿದೆ.

ಪ್ರಯೋಜನಗಳು:

  • ಅರ್ಹ ಕುಟುಂಬಗಳು (ಬಿಪಿಎಲ್ ಮತ್ತು ಆರ್‌ಎಸ್‌ಬಿವೈ ಫಲಾನುಭವಿಗಳು):- ಪ್ರತಿ ಕುಟುಂಬಕ್ಕೆ ವಾರ್ಷಿಕ ₹5,00,000 ಮೂಲ ವಿಮಾ ಮೊತ್ತದೊಂದಿಗೆ 100% ರಷ್ಟು ರಕ್ಷಣೆಯನ್ನು ಒದಗಿಸುತ್ತದೆ. ಪಡೆಯುತ್ತವೆ.
  • ಸಾಮಾನ್ಯ ಕುಟುಂಬಗಳು (ಎಪಿಎಲ್):- ಸಹ-ಪಾವತಿ ಆಧಾರದ ಮೇಲೆ ಪ್ರತಿ ಕುಟುಂಬಕ್ಕೆ ವಾರ್ಷಿಕ ₹1.5 ಲಕ್ಷದ ಮಿತಿಯವರೆಗೆ ಪ್ಯಾಕೇಜ್ ದರದ 30% ರಷ್ಟು ಸರ್ಕಾರಿ ಸಹಾಯಧನವನ್ನು ಪಡೆಯುತ್ತವೆ.
  • ಫಲಾನುಭವಿಗಳು ಯಾವುದೇ ನೋಂದಾಯಿತ ಆಸ್ಪತ್ರೆಯಲ್ಲಿ (ಸಾರ್ವಜನಿಕ ಅಥವಾ ಖಾಸಗಿ) ಹಣ ಪಾವತಿಸದೆ ಮತ್ತು ಯಾವುದೇ ಶಿಫಾರಸಿನ ಅಗತ್ಯವಿಲ್ಲದೆ ನೇರವಾಗಿ ತುರ್ತು ಚಿಕಿತ್ಸೆಗಳನ್ನು ಪಡೆಯಬಹುದು.

ಮಾನದಂಡಗಳು:

  • “ಅರ್ಹ ಕುಟುಂಬಗಳು” ಎಂದರೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ, 2013 ಅಡಿಯಲ್ಲಿ ಬರುವವರು, BPL ಪಡಿತರ ಚೀಟಿ ಹೊಂದಿರುವವರು ಅಥವಾ ನೋಂದಾಯಿತ RSBY ಫಲಾನುಭವಿಗಳು.
  • “ಸಾಮಾನ್ಯ ಕುಟುಂಬಗಳು” ಎಂದರೆ ಅರ್ಹ ಕುಟುಂಬಗಳ ವ್ಯಾಪ್ತಿಗೆ ಬಾರದ ನಿವಾಸಿಗಳು, ಸಾಮಾನ್ಯವಾಗಿ ಎಪಿಎಲ್ ಪಡಿತರ ಚೀಟಿ ಹೊಂದಿರುವವರು.
  • ಪ್ರಾಥಮಿಕ ಚಿಕಿತ್ಸೆಗಳು ಮತ್ತು ಸರಳ ದ್ವಿತೀಯ ಹಂತದ ಚಿಕಿತ್ಸೆಗಳು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ (PHIs) ಮಾತ್ರ ಸೀಮಿತವಾಗಿವೆ.
  • ಖಾಸಗಿ ಆಸ್ಪತ್ರೆಗಳಲ್ಲಿ ಕಷ್ಟ ಕರವಾಗಿರುವ ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸೆಗಳನ್ನು ಪಡೆಯಲು ಸಾರ್ವಜನಿಕ ಆರೋಗ್ಯ ಸಂಸ್ಥೆಯಿಂದ ಶಿಫಾರಸು ಪಡೆಯುವುದು ಕಡ್ಡಾಯವಾಗಿದೆ.
  • ತುರ್ತು ಚಿಕಿತ್ಸೆಗೆ ಶಿಫಾರಸು ಅಗತ್ಯವಿಲ್ಲ ಮತ್ತು ಯಾವುದೇ ನೋಂದಾಯಿತ ಆಸ್ಪತ್ರೆಯಲ್ಲಿ ಇದನ್ನು ಪಡೆಯಬಹುದು.

ವೈಶಿಷ್ಟ್ಯಗಳು:

  • ಭರವಸೆ ಮಾದರಿ (ಅಶ್ಯೂರೆನ್ಸ್ ಮೋಡ್):- ಈ ಯೋಜನೆಯು ಸಾಂಪ್ರದಾಯಿಕ ವಿಮಾ ಮಾದರಿಗಿಂತ ಭಿನ್ನವಾಗಿ ಭರವಸೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.
  • ಫಲಾನುಭವಿಗಳಿಗೆ AB-ArK ಚೀಟಿ:- ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಅಥವಾ ನಾಗರಿಕ ಸೇವಾ ಕೇಂದ್ರಗಳಲ್ಲಿ ₹10 ಶುಲ್ಕದಲ್ಲಿ ಕಾಗದದ ಅಥವಾ ₹35 ಶುಲ್ಕದಲ್ಲಿ ಪ್ಲಾಸ್ಟಿಕ್ ನ AB-ArK ಚೀಟಿ ನೀಡಲಾಗುತ್ತದೆ.
  • SECC 2011 ಮತ್ತು RSBY ಕುಟುಂಬಗಳಿಗೆ 60% ರಷ್ಟು ವೆಚ್ಚವನ್ನು ಭಾರತ ಸರ್ಕಾರ ಭರಿಸಿದರೆ, ಉಳಿದ 40% ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತದೆ.
  • ಉಳಿದ ಎಲ್ಲಾ ಅರ್ಹ ಕುಟುಂಬಗಳ 100% ರಷ್ಟು ವೆಚ್ಚವನ್ನು ಮತ್ತು ಕೇಂದ್ರ ಯೋಜನೆಯ ವ್ಯಾಪ್ತಿಗೆ ಬಾರದ 19 ಲಕ್ಷ ಎಪಿಎಲ್ ಕುಟುಂಬಗಳಿಗೆ ಸಹಾಯಧನವನ್ನು ಕರ್ನಾಟಕ ಸರ್ಕಾರವೇ ಭರಿಸುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts