ಅರಾವಳಿ ಪರ್ವತ ಶ್ರೇಣಿಯ ಗಡಿಗಳ ಸ್ಪಷ್ಟೀಕರಣ
ಸಾಮಾನ್ಯ ಅಧ್ಯಯನ -3/ ಪರಿಸರ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚೆಗೆ, ಸರ್ವೋಚ್ಚ ನ್ಯಾಯಾಲಯವು, ತನ್ನ ಆದೇಶದಲ್ಲಿ, ಅರಾವಳಿ ಬೆಟ್ಟಗಳು ಮತ್ತು ಪರ್ವತ ಶ್ರೇಣಿಗಳಿಗೆ ಏಕರೂಪದ ವ್ಯಾಖ್ಯಾನವನ್ನು ಅಂತಿಮಗೊಳಿಸಿದೆ ಮತ್ತು ದೆಹಲಿ, ಹರಿಯಾಣ, ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳಾದ್ಯಂತ ಹೊಸ ಗಣಿಗಾರಿಕೆ ಗುತ್ತಿಗೆಗಳ ಮಂಜೂರಾತಿಯನ್ನು ತಡೆಹಿಡಿದಿದೆ.
ಅರಾವಳಿ ಪರ್ವತ ಶ್ರೇಣಿಯ ಬಗ್ಗೆ:
- ಸ್ಥಳ:- ಸುಮಾರು 692 ಕಿಲೋಮೀಟರ್ (430 ಮೈಲುಗಳು) ನಷ್ಟು ಈಶಾನ್ಯ ದಿಕ್ಕಿನಲ್ಲಿ ವಿಸ್ತರಿಸಿರುವ ಅರಾವಳಿ ಪರ್ವತ ಶ್ರೇಣಿ, ಗುಜರಾತ್, ರಾಜಸ್ಥಾನ ಮತ್ತು ಹರಿಯಾಣ ರಾಜ್ಯಗಳ ಮೂಲಕ ಹಾದುಹೋಗಿ ಕೊನೆಯಲ್ಲಿ ದೆಹಲಿಯಲ್ಲಿ ಅಂತ್ಯಗೊಳ್ಳುತ್ತದೆ.
- ವೈಶಿಷ್ಟ್ಯತೆ :- ಇದು ಭಾರತದ ಅತ್ಯಂತ ಹಳೆಯ ಪರ್ವತ ಶ್ರೇಣಿಯಾಗಿದೆ.
- ಪ್ರಾಮುಖ್ಯತೆ:- ಅರಾವಳಿ ಪರ್ವತ ಶ್ರೇಣಿಯು ಮರುಭೂಮೀಕರಣದ ವಿರುದ್ಧ ನೈಸರ್ಗಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹವಾಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ವೈವಿಧ್ಯಮಯ ಪರಿಸರ ವ್ಯವಸ್ಥೆಗಳಿಗೆ ಆಧಾರವಾಗಿದ್ದು, ಸಾಬರಮತಿ, ಲೂನಿ ಮತ್ತು ಬನಾಸ್ ಸೇರಿದಂತೆ ಹಲವಾರು ನದಿಗಳಿಗೆ ಜಲಾನಯನ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತದೆ.
ಅರಾವಳಿ ಹಸಿರು ಗೋಡೆ ಯೋಜನೆ (AGWP) ಯ ಬಗ್ಗೆ:
- ಈ ಯೋಜನೆಯು ವಾಯುವ್ಯ ಭಾರತದ ನಾಲ್ಕು ರಾಜ್ಯಗಳಲ್ಲಿ (ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ದೆಹಲಿ) 11.5 ಲಕ್ಷ ಹೆಕ್ಟೇರ್ ಹಾಳಾದ (ಅವಸಾನಗೊಂಡ) ಭೂಮಿಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ಪ್ರಮುಖ ಉಪಕ್ರಮವಾಗಿದೆ.
- ರಾಷ್ಟ್ರೀಯ ಗುರಿಗಳು:– 2030ರ ವೇಳೆಗೆ ಹೆಚ್ಚುವರಿಯಾಗಿ 2.5 ಬಿಲಿಯನ್ ಟನ್‌ಗಳಷ್ಟು ‘ಇಂಗಾಲದ ತೊಟ್ಟಿಯನ್ನು ಸೃಷ್ಟಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಈ ಯೋಜನೆಯು ಭಾರತದ ಪ್ರಯತ್ನದ ಭಾಗವಾಗಿದೆ.
- ವ್ಯಾಪಕ ಪ್ರಭಾವ:– ಈ ಯೋಜನೆಯು ಅಂತರರಾಷ್ಟ್ರೀಯ ಸಮಾವೇಶಗಳ ಅಡಿಯಲ್ಲಿನ ಭಾರತದ ಬದ್ಧತೆಗಳಿಗೆ ಕೊಡುಗೆ ನೀಡುತ್ತದೆ, ಅವುಗಳೆಂದರೆ:
- UNCCD– ಮರುಭೂಮೀಕರಣವನ್ನು ತಡೆಗಟ್ಟುವ ವಿಶ್ವಸಂಸ್ಥೆಯ ಸಮಾವೇಶ,
- UNCBD– ಜೈವಿಕ ವೈವಿಧ್ಯತೆ ಕುರಿತ ವಿಶ್ವಸಂಸ್ಥೆಯ ಸಮಾವೇಶ,
- UNFCCC– ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶ.
- ಉದ್ದೇಶಗಳು ಮತ್ತು ವೈಶಿಷ್ಟ್ಯಗಳು:- ಈ ಯೋಜನೆಯು ಮರುಭೂಮೀಕರಣ, ಭೂ ಸವಕಳಿ ಮತ್ತು ಬರ ಪರಿಸ್ಥಿತಿಯನ್ನು ಎದುರಿಸುವುದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ.
ಜಾಗತಿಕ ಉದ್ದೀಪನಾ ಮದ್ದು ಸೇವನೆ ಉಲ್ಲಂಘನೆಯಲ್ಲಿ ಭಾರತಕ್ಕೆ ಅಗ್ರಸ್ಥಾನ: WADA ವರದಿ, 2024
ಸಾಮಾನ್ಯ ಅಧ್ಯಯನ -2/ ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
- ವಿಶ್ವ ಉದ್ದೀಪನಾ ಮದ್ದು ತಡೆ ಸಂಸ್ಥೆ (WADA)ಯ 2024ರ ವರದಿಯು, ಸತತ ಮೂರನೇ ವರ್ಷವೂ ಜಾಗತಿಕವಾಗಿ ಅತಿ ಹೆಚ್ಚು ಉದ್ದೀಪನಾ ಮದ್ದು ಸೇವನೆ (Doping) ಉಲ್ಲಂಘನೆ ಮಾಡಿದ ರಾಷ್ಟ್ರವಾಗಿ ಭಾರತಕ್ಕೆ ಅಗ್ರಸ್ಥಾನ ನೀಡಿದೆ.
ಉದ್ದೀಪನಾ ಮದ್ದು ಸೇವನೆ ಮತ್ತು ಅದರ ಕಾಳಜಿಗಳು:
- ಕ್ರೀಡಾಪಟುಗಳು ‘ಸಾಮರ್ಥ್ಯ ವರ್ಧಕ ಔಷಧಗಳು’ ಎಂದು ಕರೆಯಲ್ಪಡುವ ನಿಷೇಧಿತ ರಾಸಾಯನಿಕ ವಸ್ತುಗಳನ್ನು ಬಳಸುವ ಪದ್ಧತಿಯನ್ನು ‘ಡೋಪಿಂಗ್’ ಅಥವಾ ‘ಉದ್ದೀಪನಾ ಮದ್ದು ಸೇವನೆ’ ಎಂದು ಕರೆಯಲಾಗುತ್ತದೆ.
ಉದ್ದೀಪನಾ ಮದ್ದು ಸೇವನೆಯನ್ನು ತಡೆಗಟ್ಟುವ ಜಾಗತಿಕ ಪ್ರಯತ್ನಗಳು:
ಕೋಪನ್‌ಹೆಗನ್ ಘೋಷಣೆ: ಕ್ರೀಡೆಯಲ್ಲಿನ ಉದ್ದೀಪನಾ ಮದ್ದು ಸೇವನೆಗೆ ತಡೆ
-
- ಹಿನ್ನೆಲೆ:- 2003ರಲ್ಲಿ ಡೆನ್ಮಾರ್ಕ್‌ನ ಕೋಪನ್‌ಹೆಗನ್‌ನಲ್ಲಿ ನಡೆದ ‘ಕ್ರೀಡೆಯಲ್ಲಿನ ಉದ್ದೀಪನಾ ಮದ್ದು ಸೇವನೆ’ ಕುರಿತ ಎರಡನೇ ವಿಶ್ವ ಸಮ್ಮೇಳನದಲ್ಲಿ, ಸರ್ಕಾರಗಳು ‘ಕ್ರೀಡೆಯಲ್ಲಿನ ಉದ್ದೀಪನಾ ಮದ್ದು ಸೇವನೆ ತಡೆ ಕುರಿತ ಕೋಪನ್‌ಹೆಗನ್ ಘೋಷಣೆ’ಗೆ ಒಪ್ಪಿಗೆ ನೀಡಿದವು.
- ಉದ್ದೇಶ:- ಈ ಘೋಷಣೆಯು ಒಂದು ರಾಜಕೀಯ ದಾಖಲೆಯಾಗಿದ್ದು, ಇದರ ಮೂಲಕ ಸರ್ಕಾರಗಳು ವಿಶ್ವ ಉದ್ದೀಪನಾ ಮದ್ದು ತಡೆ ಸಂಹಿತೆಯನ್ನು ಔಪಚಾರಿಕವಾಗಿ ಗುರುತಿಸಲು ಮತ್ತು ಅನುಷ್ಠಾನಗೊಳಿಸಲು ತಮ್ಮ ಇರಾದೆಯನ್ನು ವ್ಯಕ್ತಪಡಿಸಿದವು.
- ಪ್ರಾಮುಖ್ಯತೆ:- ಕ್ರೀಡೆಯಲ್ಲಿನ ಉದ್ದೀಪನಾ ಮದ್ದು ಸೇವನೆ ವಿರುದ್ಧದ ಯುನೆಸ್ಕೋ ಅಂತರರಾಷ್ಟ್ರೀಯ ಸಮಾವೇಶದ ಸಿದ್ಧತೆಯ ಹಾದಿಯಲ್ಲಿ ಈ ಘೋಷಣೆಯು ಮೊದಲ ಹೆಜ್ಜೆಯಾಗಿತ್ತು.
- ಭಾರತವು 2003ರಲ್ಲಿ ಈ ಘೋಷಣೆಗೆ ಒಪ್ಪಿಗೆ ನೀಡಿತು.
ಕ್ರೀಡೆಯಲ್ಲಿನ ಉದ್ದೀಪನಾ ಮದ್ದು ಸೇವನೆ ವಿರುದ್ಧದ ಅಂತರರಾಷ್ಟ್ರೀಯ ಸಮಾವೇಶದ ಬಗ್ಗೆ:
-
- ಇದನ್ನು ‘ಯುನೆಸ್ಕೋ ಉದ್ದೀಪನಾ ಮದ್ದು ತಡೆ ಸಮಾವೇಶ’ ಎಂತಲೂ ಕರೆಯಲಾಗುತ್ತದೆ.
- ಇದನ್ನು 2005ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಯುನೆಸ್ಕೋ ನ ಸಾಮಾನ್ಯ ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು. ಇದು 2007ರಲ್ಲಿ ಜಾರಿಗೆ ಬಂದಿತು.
- ಉದ್ದೇಶ:- ಕ್ರೀಡೆಯಲ್ಲಿ ಉದ್ದೀಪನಾ ಮದ್ದು ಸೇವನೆಯನ್ನು ನಿರ್ಮೂಲನೆ ಮಾಡುವ ದೃಷ್ಟಿಯಿಂದ, ಅದನ್ನು ತಡೆಗಟ್ಟುವ ಮತ್ತು ಅದರ ವಿರುದ್ಧದ ಹೋರಾಟವನ್ನು ಉತ್ತೇಜಿಸುವುದು.
- ಭಾರತವು 2007ರಲ್ಲಿ ಈ ಸಮಾವೇಶವನ್ನು ದೃಢೀಕರಿಸಿತು. ಇದಕ್ಕಾಗಿ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿನ ಸ್ವಾಯತ್ತ ಸಂಸ್ಥೆಯಾದ ‘ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಸಂಸ್ಥೆ'(NADA)ಯು , ಭಾರತದಲ್ಲಿ ಉದ್ದೀಪನಾ ಮದ್ದು ತಡೆ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವ, ಅನುಷ್ಠಾನಗೊಳಿಸುವ ಮತ್ತು ಜಾರಿಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ.
ವಿಶ್ವ ಉದ್ದೀಪನಾ ಮದ್ದು ತಡೆ ಸಂಸ್ಥೆ (WADA)ಯ ಬಗ್ಗೆ:
- ಲೌಸನ್ನೆ ಘೋಷಣೆಯ ನಂತರ 1999ರಲ್ಲಿ ಇದನ್ನು ಸ್ಥಾಪಿಸಲಾಯಿತು.
- ಪ್ರಧಾನ ಕಚೇರಿ:- ಕೆನಡಾದ ಮಾಂಟ್ರಿಯಲ್‌ನಲ್ಲಿದೆ.
- ಪ್ರಾದೇಶಿಕ ಕಚೇರಿಗಳು:- ಲೌಸನ್ನೆ (ಯುರೋಪ್), ಕೇಪ್ ಟೌನ್ (ದ. ಆಫ್ರಿಕಾ) ಮತ್ತು ಮಾಂಟೆವಿಡಿಯೊ (ಲ್ಯಾಟಿನ್ ಅಮೇರಿಕಾ).
- ಪ್ರಕಟಣೆ:- ವಿಶ್ವ ಉದ್ದೀಪನಾ ಮದ್ದು ತಡೆ ಸಂಹಿತೆ ಮತ್ತು ವಾರ್ಷಿಕ ನಿಷೇಧಿತ ಪಟ್ಟಿಯನ್ನು ಪ್ರಕಟಿಸುತ್ತದೆ.
ಉದ್ದೀಪನಾ ಮದ್ದು ಸೇವನೆಯನ್ನು ತಡೆಗಟ್ಟಲು ಭಾರತದ ಪ್ರಯತ್ನಗಳು:
- ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಕಾಯ್ದೆ, 2022: ಈ ಕಾಯ್ದೆಯು ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಸಂಸ್ಥೆ (NADA) ಮತ್ತು ರಾಷ್ಟ್ರೀಯ ಉದ್ದೀಪನಾ ಮದ್ದು ಪರೀಕ್ಷಾ ಪ್ರಯೋಗಾಲಯಕ್ಕೆ ಶಾಸನಬದ್ಧ ಸ್ಥಾನಮಾನವನ್ನು ನೀಡಿತು.
- ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ (ತಿದ್ದುಪಡಿ) ಮಸೂದೆ, 2025: ಸಾಂಸ್ಥಿಕ ಸ್ವಾಯತ್ತತೆಯನ್ನು ಬಲಪಡಿಸಲು ಇದನ್ನು ಇತ್ತೀಚೆಗೆ ಮಂಡಿಸಲಾಗಿದೆ.
- ಭಾರತವು, ‘ಕ್ರೀಡೆಯಲ್ಲಿನ ಉದ್ದೀಪನಾ ಮದ್ದು ಸೇವನೆ ವಿರುದ್ಧದ ಯುನೆಸ್ಕೋ ಅಂತರರಾಷ್ಟ್ರೀಯ ಸಮಾವೇಶ’ಕ್ಕೆ ಸಹಿ ಹಾಕಿದ ರಾಷ್ಟ್ರವಾಗಿದೆ.
- ಕ್ರೀಡಾಪಟುಗಳ ಪಾಸ್‌ಪೋರ್ಟ್ ನಿರ್ವಹಣಾ ಘಟಕ (APMU): ಕ್ರೀಡಾಪಟುಗಳ ಜೈವಿಕ ಪಾಸ್‌ಪೋರ್ಟ್ ಅನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ಉದ್ದೀಪನಾ ಮದ್ದು ಪರೀಕ್ಷಾ ಪ್ರಯೋಗಾಲಯದಲ್ಲಿ ಒಂದು ಮೀಸಲಾದ ಘಟಕವನ್ನು 2025ರಲ್ಲಿ ಉದ್ಘಾಟಿಸಲಾಯಿತು.
- NIDAMS ಪೋರ್ಟಲ್: ‘ನಾಡಾ ಭಾರತೀಯ ದತ್ತಾಂಶ ಆಡಳಿತ ಮತ್ತು ನಿರ್ವಹಣಾ ವ್ಯವಸ್ಥೆ’ಯನ್ನು 2025ರಲ್ಲಿ ಪ್ರಾರಂಭಿಸಲಾಯಿತು. ಇದು ಪರೀಕ್ಷೆಗಳನ್ನು ಯೋಜಿಸುವುದರಿಂದ ಹಿಡಿದು, ಉದ್ದೀಪನಾ ಮದ್ದು ನಿಯಂತ್ರಣಾ ಅಧಿಕಾರಿಗಳಿಗೆ ಕಾರ್ಯಾದೇಶಗಳನ್ನು ರಚಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುತ್ತದೆ.
- “ನೋ ಯುವರ್ ಮೆಡಿಸಿನ್”(KYM) ಆ್ಯಪ್: ಇದೊಂದು ಮೊಬೈಲ್ ಸಾಧನವಾಗಿದ್ದು, ಕ್ರೀಡಾಪಟುಗಳು ಔಷಧಿಗಳನ್ನು ಪತ್ತೇ ಹಚ್ಚಲು ಅಥವಾ ಹುಡುಕಲು ಅನುವು ಮಾಡಿಕೊಡುತ್ತದೆ. WADA ನಿಷೇಧಿಸಿರುವ ಪದಾರ್ಥಗಳು ಆ ಔಷಧಿಯಲ್ಲಿವೆಯೇ ಎಂಬುದನ್ನು ಪರಿಶೀಲಿಸಲು ಇದು ನೆರವಾಗುತ್ತದೆ.
ಪಾಮಿರ್ ಪರ್ವತಗಳು / ಪಾಮಿರ್-ಕಾರಾಕೋರಂ ಅಸಂಗತತೆ
ಸಾಮಾನ್ಯ ಅಧ್ಯಯನ -1/ ಭೂಗೋಳಶಾಸ್ತ್ರ

ಇದೀಗ ಸುದ್ದಿಯಲ್ಲಿದೆ:
- ಜಾಗತಿಕ ತಾಪಮಾನ ಏರಿಕೆಯ ಹೊರತಾಗಿಯೂ ಪಾಮಿರ್ ಪರ್ವತಗಳಲ್ಲಿನ ಹಿಮನದಿಗಳು ಕರಗುವಿಕೆಯನ್ನು ಏಕೆ ಪ್ರತಿರೋಧಿಸಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಅಲ್ಲಿನ ‘ಐಸ್ ಕೋರ್’ಗಳನ್ನು (ಹಿಮದ ಆಳದ ಮಾದರಿಗಳು) ಅಧ್ಯಯನ ಮಾಡಲಾಗುತ್ತಿದೆ.
ಪಾಮಿರ್-ಕಾರಾಕೋರಂ ಅಸಂಗತತೆಯ ಬಗ್ಗೆ:
- ಇದು ಪಾಮಿರ್ ಮತ್ತು ಕಾರಾಕೋರಂ ಪರ್ವತ ಶ್ರೇಣಿಗಳ ಭಾಗಗಳಲ್ಲಿರುವ ಹಿಮನದಿಗಳ ಅಸಾಮಾನ್ಯ ನಡವಳಿಕೆಯನ್ನು ಸೂಚಿಸುತ್ತದೆ.
ವಿಶ್ವದಾದ್ಯಂತ ಇರುವ ಬಹುತೇಕ ಹಿಮನದಿಗಳಿಗಿಂತ ಭಿನ್ನವಾಗಿ, ಇಲ್ಲಿನ ಹಿಮನದಿಗಳು ಈ ಕೆಳಗಿನ ಲಕ್ಷಣಗಳನ್ನು ಸೂಚಿಸುತ್ತಿವೆ:
- ಕರಗುವಿಕೆಗೆ ಪ್ರತಿರೋಧವನ್ನು ತೋರಿವೆ.
- ಇತ್ತೀಚಿನ ದಶಕಗಳಲ್ಲಿ ದ್ರವ್ಯರಾಶಿಯಲ್ಲಿ ಅಲ್ಪ ಪ್ರಮಾಣದ ಏರಿಕೆಯನ್ನು ದಾಖಲಿಸಿವೆ.
- ಇದು ‘ಹಿಮನದಿ ಮತ್ತು ಹವಾಮಾನದ’ ನಡುವಿನ ಪರಸ್ಪರ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುಲು ಮಹತ್ವದ್ದಾಗಿದೆ..
ಪಾಮಿರ್ ಪರ್ವತಗಳ ಬಗ್ಗೆ:
- ಭೂಗರ್ಭಶಾಸ್ತ್ರ:- ಭಾರತೀಯ ಮತ್ತು ಯುರೇಷಿಯನ್ ಭೂಫಲಕಗಳ (ಟೆಕ್ಟೋನಿಕ್ ಪ್ಲೇಟ್‌ಗಳ) ಪರಸ್ಪರ ಘರ್ಷಣೆಯಿಂದ ಇವು ರಚನೆಯಾಗಿದ್ದು, ಇದನ್ನು ಭೂಕಂಪಗಳಿಗೆ ಒಳಗಾಗುವ (ಭೂಕಂಪ ಸಕ್ರಿಯ) ಪ್ರದೇಶವಾಗಿಸಿದೆ.
- ವ್ಯಾಪಿಸಿರುವ ದೇಶಗಳು:- ತಜಕಿಸ್ತಾನ್, ಅಫ್ಘಾನಿಸ್ತಾನ್, ಚೀನಾ ಮತ್ತು ಕಿರ್ಗಿಸ್ತಾನ್.
- ಬೃಹತ್ ಸಂಗಮ ವಲಯ (ಪಾಮಿರ್ ಗಾಂಠ್):- “ಪ್ರಪಂಚದ ಮೇಲ್ಛಾವಣಿ” ಎಂದು ಕರೆಯಲ್ಪಡುವ ಪಾಮಿರ್ ಪರ್ವತಗಳು; ಹಿಮಾಲಯ, ಕಾರಾಕೋರಂ, ಹಿಂದೂಖುಷ್, ಕುನ್ಲುನ್ ಷಾ ಮತ್ತು ತಿಯನ್ ಶಾನ್ ಪರ್ವತ ಶ್ರೇಣಿಗಳೊಂದಿಗೆ ಸೇರಿ ಒಂದು ಬೃಹತ್ ಸಂಗಮ ವಲಯವನ್ನು (ಪಾಮಿರ್ ಗಂಟು) ರೂಪಿಸುತ್ತವೆ.
- ಪ್ರಾಚೀನ ಮಾರ್ಗಗಳು:- 13ನೇ ಶತಮಾನದ ಇಟಲಿಯ ಪ್ರವಾಸಿಗ “ಮಾರ್ಕೊ ಪೊಲೊ” ಅವರು ಉಲ್ಲೇಖಿಸಿರುವ ಈ ಪ್ರದೇಶವು ಐತಿಹಾಸಿಕವಾಗಿ ರೇಷ್ಮೆ ಮಾರ್ಗದ ಭಾಗವಾಗಿತ್ತು.
- ಪ್ರಮುಖ ಶಿಖರಗಳು:- ಇಸ್ಮಾಯಿಲ್ ಸೋಮೋನಿ ಶಿಖರ (ತಜಿಕಿಸ್ತಾನ್), ಕಾಂಗುರ್ ಟಾಗ್ ಮತ್ತು ಮುಜ್ತಾಗ್ ಅಟಾ (ಚೀನಾ) ಮುಂತಾದವುಗಳು.
- ತಜಿಕ್ ರಾಷ್ಟ್ರೀಯ ಉದ್ಯಾನವನ:– ಪಾಮಿರ್‌ನ ಬಹುಭಾಗವನ್ನು ಒಳಗೊಂಡಿರುವ ದೊಡ್ಡ ಸಂರಕ್ಷಿತ ಪ್ರದೇಶವಾಗಿದ್ದು, ಇದೊಂದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.
- ನದಿ ವ್ಯವಸ್ಥೆ: ಪಾಮಿರ್ ಪರ್ವತಗಳು ದಟ್ಟವಾದ ಹಿಮನದಿಗಳನ್ನು ಹೊಂದಿದ್ದು, ಫೆಡ್ಚೆಂಕೊ ಹಿಮನದಿಯು ಮಧ್ಯ ಏಷ್ಯಾದ ಅತಿದೊಡ್ಡ ಹಿಮನದಿಯಾಗಿದೆ.
- ಹಿಮನದಿಗಳು ಕರಗಿದ ನೀರು ಪಂಜ್ ನದಿ ಮತ್ತು ವಾಖ್ಷ್ ನದಿಯಂತಹ ಪ್ರಮುಖ ನದಿಗಳಿಗೆ ಜಲಮೂಲವಾಗಿದೆ. ಈ ನದಿಗಳು ಮಧ್ಯ ಏಷ್ಯಾದ ಪ್ರಮುಖ ನದಿ ವ್ಯವಸ್ಥೆಯಾದ ಅಮುದರ್ಯಾ ನದಿ ವ್ಯವಸ್ಥೆಯ ಭಾಗವಾಗಿವೆ.
‘ಡೆಸರ್ಟ್ ಸೈಕ್ಲೋನ್, 2025’ ಸಮರಾಭ್ಯಾಸ
ಸಾಮಾನ್ಯ ಅಧ್ಯಯನ – 3/ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
- ಭಾರತ ಮತ್ತು ಯುಎಇ ನಡುವಿನ ಜಂಟಿ ಸೇನಾ ಸಮರಾಭ್ಯಾಸ ‘ಡೆಸರ್ಟ್ ಸೈಕ್ಲೋನ್’ ಯುಎಇಯಲ್ಲಿ ಆರಂಭವಾಗಲಿದೆ.
‘ಡೆಸರ್ಟ್ ಸೈಕ್ಲೋನ್’ ಸಮರಾಭ್ಯಾಸದ ಕುರಿತು:
- ‘ಡೆಸರ್ಟ್ ಸೈಕ್ಲೋನ್’ ಸಮರಾಭ್ಯಾಸದ ಮೊದಲ ಆವೃತ್ತಿಯು 2024ರಲ್ಲಿ ಭಾರತದ ರಾಜಸ್ಥಾನದಲ್ಲಿ ಜರುಗಿತ್ತು.
- ಭಾರತೀಯ ಸೇನೆ ಮತ್ತು ಯುಎಇ ಭೂಸೇನೆಗಳ ನಡುವೆ ಪರಸ್ಪರ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ರಕ್ಷಣಾ ಸಹಕಾರವನ್ನು ವೃದ್ಧಿಸುವುದು ಈ ಸಮರಾಭ್ಯಾಸದ ಉದ್ದೇಶವಾಗಿದೆ.
“ಸೀಹಾಕ್ಸ್ ಸ್ಕ್ವಾಡ್ರನ್” ಹೆಲಿಕಾಪ್ಟರ್
ಸಾಮಾನ್ಯ ಅಧ್ಯಯನ – 3/ರಕ್ಷಣೆ

ಇದೀಗ ಸುದ್ದಿಯಲ್ಲಿದೆ:
- ಭಾರತೀಯ ನೌಕಾಪಡೆಯು ತನ್ನ ಎರಡನೇ MH 60R ಹೆಲಿಕಾಪ್ಟರ್ ಸ್ಕ್ವಾಡ್ರನ್ ಆಗಿರುವ ‘INAS 335’ ಅನ್ನು ಗೋವಾದ INS ಹನ್ಸಾದಲ್ಲಿ ಅಧಿಕೃತವಾಗಿ ಸೇರ್ಪಡೆಗೊಳಿಸಿತು.
“ಸೀಹಾಕ್ಸ್ ಸ್ಕ್ವಾಡ್ರನ್” ಹೆಲಿಕಾಪ್ಟರ್ ನ ಬಗ್ಗೆ:
- ಭಾರತವು ಅಮೆರಿಕದಿಂದ ಜಲಾಂತರ್ಗಾಮಿಗಳನ್ನು ಬೇಟೆಯಾಡುವ ಇಂತಹ 24 ಹೆಲಿಕಾಪ್ಟರ್‌ಗಳನ್ನು ಪಡೆದುಕೊಂಡಿದೆ.
- ಇವು ಅಮೆರಿಕ ಮೂಲದ ‘ಸೀಹಾಕ್ಸ್’ ಹೆಲಿಕಾಪ್ಟರ್‌ಗಳಾಗಿದ್ದು, ಇವು ಕಡಲ ಕಾರ್ಯಾಚರಣೆಯ ‘ಬ್ಲ್ಯಾಕ್ ಹಾಕ್’ ಹೆಲಿಕಾಪ್ಟರ್‌ಗಳ ಆವೃತ್ತಿಗಳಾಗಿವೆ.
- ಈ ಹೆಲಿಕಾಪ್ಟರ್ ಅನ್ನು ಜಲಾಂತರ್ಗಾಮಿ ನಿರೋಧಕ ಯುದ್ಧ (ASW), ಮೇಲ್ಮೈ ಯುದ್ಧ (ASuW), ಶೋಧ ಮತ್ತು ರಕ್ಷಣೆ (SAR) ಕಾರ್ಯಾಚರಣೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
- ದೀರ್ಘಕಾಲದಿಂದ ಸೇವೆಯಲ್ಲಿದ್ದ ಬ್ರಿಟನ್ ಮೂಲದ ಹಳೆಯ ‘ಸೀ ಕಿಂಗ್’ ಹೆಲಿಕಾಪ್ಟರ್‌ಗಳನ್ನು ಈ ಹೆಲಿಕಾಪ್ಟರ್‌ಗಳು ಬದಲಾಯಿಸಲಿವೆ.
ಪರಮ ವೀರ ಚಕ್ರ ಪುರಸ್ಕಾರ
ಇತರೆ ವಿಷಯಗಳು -ಪ್ರಶಸ್ತಿಗಳು
ಇದೀಗ ಸುದ್ದಿಯಲ್ಲಿದೆ:
- ರಾಷ್ಟ್ರಪತಿ ಭವನದಲ್ಲಿ, 96 ಬ್ರಿಟಿಷ್ ‘ಏಡ್-ಡಿ-ಕ್ಯಾಂಪ್’ಗಳ (ADCs) ಭಾವಚಿತ್ರಗಳನ್ನು ತೆರವುಗೊಳಿಸಿ, ಅವುಗಳ ಸ್ಥಾನದಲ್ಲಿ ಪರಮ ವೀರ ಚಕ್ರ ಪುರಸ್ಕೃತರಾದ ಎಲ್ಲಾ 21 ವೀರಯೋಧರ ಭಾವಚಿತ್ರಗಳನ್ನು ಅಳವಡಿಸಲಾಗಿದೆ.
- ಈ ಕ್ರಮವು ವಸಾಹತುಶಾಹಿ ಪರಂಪರೆಗಳನ್ನು ನಿರ್ಮೂಲನೆ ಮಾಡುವ ಸರ್ಕಾರದ ವ್ಯಾಪಕ ಪ್ರಯತ್ನದ ಒಂದು ಭಾಗವಾಗಿದೆ.
ಪರಮ ವೀರ ಚಕ್ರ ಪುರಸ್ಕಾರದ ಬಗ್ಗೆ:
- ಇದನ್ನು ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು 1950ರ ಜನವರಿ 26 ರಂದು (ಗಣರಾಜ್ಯೋತ್ಸವ ದಿನ) ಸ್ಥಾಪಿಸಿದರು.
- ‘ಪರಮ ವೀರ ಚಕ್ರ’ ಎಂಬ ಹೆಸರು “ಅತ್ಯುನ್ನತ ಶೂರರ ಚಕ್ರ” ಎಂಬ ಅರ್ಥವನ್ನು ನೀಡುತ್ತದೆ.
- ಈ ಪದಕವನ್ನು ಸಾವಿತ್ರಿ ಖಾನೋಲ್ಕರ್ ಅವರು ವಿನ್ಯಾಸಗೊಳಿಸಿದರು. ಅವರು ತಮ್ಮ ಪ್ರೇರಣೆಯನ್ನು ದೇವತೆಗಳು ವಜ್ರಾಯುಧವನ್ನು ತಯಾರಿಸಲು ಅನುವು ಮಾಡಿಕೊಡುವ ಸಲುವಾಗಿ ತಮ್ಮ ಬೆನ್ನುಮೂಳೆಯನ್ನೇ ತ್ಯಾಗ ಮಾಡಿದ ವೈದಿಕ ಋಷಿ ದಧೀಚಿ ಅವರಿಂದ ಇವರು ಸ್ಫೂರ್ತಿ ಪಡೆದಿದ್ದರು.
- ಈ ಪದಕವನ್ನು ಕಂಚಿನಿಂದ ತಯಾರಿಸಲಾಗಿದೆ. ಇದರ ಮಧ್ಯದಲ್ಲಿ, ಉಬ್ಬಿದ ವೃತ್ತದ ಮೇಲೆ ರಾಷ್ಟ್ರ ಲಾಂಛನವಿದ್ದು, ಇದು ಇಂದ್ರನ ವಜ್ರಾಯುಧದ ನಾಲ್ಕು ಪ್ರತಿಗಳಿಂದ ಆವೃತವಾಗಿದೆ ಹಾಗೂ ಶಿವಾಜಿಯ ಖಡ್ಗ ಚಿತ್ರಿತವಾಗಿದೆ. ಇದನ್ನು ತಿರುಗುವ ಪಟ್ಟಿಕೆಯಿಂದ ತೂಗುಹಾಕಲಾಗಿರುತ್ತದೆ ಮತ್ತು 32 ಮಿಮೀ ಅಳತೆಯ ನೇರಳೆ ಬಣ್ಣದ ರಿಬ್ಬನ್‌ನೊಂದಿಗೆ ಇದನ್ನು ಧರಿಸಲಾಗುತ್ತದೆ.
ಶೌರ್ಯ ಪ್ರಶಸ್ತಿಗಳ ಬಗ್ಗೆ:
- ಗೌರವಿಸುವವರು:- ಭಾರತ ಸರ್ಕಾರ.
- ಸಶಸ್ತ್ರ ಪಡೆಗಳು, ಅರೆಸೇನಾ ಪಡೆಗಳು ಮತ್ತು ನಾಗರಿಕರ ಸಾಹಸ, ತ್ಯಾಗ ಮತ್ತು ಅಪ್ರತಿಮ ಧೈರ್ಯದ ಕಾರ್ಯಗಳನ್ನು ಗೌರವಿಸಲು ಇವುಗಳನ್ನು ನೀಡಲಾಗುತ್ತದೆ.
- ಇವುಗಳನ್ನು ಯುದ್ಧಕಾಲದ (ಶತ್ರುವಿನ ಸಮ್ಮುಖದಲ್ಲಿ ತೋರುವ ಶೌರ್ಯ) ಮತ್ತು ಶಾಂತಿಕಾಲದ ಪ್ರಶಸ್ತಿಗಳೆಂದು ವರ್ಗೀಕರಿಸಲಾಗಿದೆ.
- ನಿರ್ವಹಣೆ:- ರಕ್ಷಣಾ ಸಚಿವಾಲಯ (ಸಶಸ್ತ್ರ ಪಡೆಗಳಿಗೆ) ಮತ್ತು ಗೃಹ ಸಚಿವಾಲಯ (ಪೊಲೀಸ್ ಮತ್ತು ನಾಗರಿಕರಿಗೆ).
- ಪ್ರದಾನ ಮಾಡುವವರು:- ಭಾರತದ ರಾಷ್ಟ್ರಪತಿಗಳು.
- ಈ ಶೌರ್ಯ ಪ್ರಶಸ್ತಿಗಳನ್ನು ವರ್ಷದಲ್ಲಿ ಎರಡು ಬಾರಿ ಘೋಷಿಸಲಾಗುತ್ತದೆ. ಮೊದಲು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮತ್ತು ನಂತರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಲಾಗುತ್ತದೆ.
- ಯುದ್ಧಕಾಲದ ಶೌರ್ಯ ಪ್ರಶಸ್ತಿಗಳು:- ಪರಮ ವೀರ ಚಕ್ರ, ಮಹಾವೀರ ಚಕ್ರ ಮತ್ತು ವೀರ ಚಕ್ರ.
- ಶಾಂತಿಕಾಲದ ಶೌರ್ಯ ಪ್ರಶಸ್ತಿಗಳು: ಅಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರ.
- ಆದ್ಯತೆಯ ಕ್ರಮ: ಪರಮ ವೀರ ಚಕ್ರ (PVC), ಅಶೋಕ ಚಕ್ರ (AC), ಮಹಾವೀರ ಚಕ್ರ (MVC), ಕೀರ್ತಿ ಚಕ್ರ (KC), ವೀರ ಚಕ್ರ (VrC), ಶೌರ್ಯ ಚಕ್ರ (SC).
- ಈ ಎಲ್ಲಾ ಆರೂ ಪ್ರಶಸ್ತಿಗಳನ್ನು ಮರಣೋತ್ತರವಾಗಿಯೂ ನೀಡಬಹುದು.



ನಿಮ್ಮದೊಂದು ಉತ್ತರ