ಸಕಾಲ ಯೋಜನೆ
ಇದೀಗ ಸುದ್ದಿಯಲ್ಲಿದೆ:
- ಪ್ರಸಕ್ತ ವರ್ಷದಲ್ಲಿ ರಾಜ್ಯದ ಸಕಾಲ ಯೋಜನೆಯಡಿ ಸ್ವೀಕರಿಸಲಾದ ಶೇಕಡಾ 99.35% ರಷ್ಟು ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಲಾಗಿದೆ ಎಂದು ಕರ್ನಾಟಕದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಪ್ರಕಟಿಸಿದ್ದಾರೆ.
ಸಕಾಲ ಯೋಜನೆಯ ಬಗ್ಗೆ:
- ಈ ಯೋಜನೆಯನ್ನು ಅಧಿಕೃತವಾಗಿ ‘ಕರ್ನಾಟಕ ನಾಗರಿಕರಿಗೆ ಸೇವೆಗಳ ಖಾತರಿ ಕಾಯ್ದೆ, 2011’ ಎಂದು ಕರೆಯಲಾಗುತ್ತದೆ.
- ಉದ್ದೇಶ:- ಸರ್ಕಾರಿ ಸೇವೆಗಳನ್ನು ನಾಗರಿಕರಿಗೆ ಸಕಾಲದಲ್ಲಿ (ನಿಗದಿತ ಸಮಯದಲ್ಲಿ) ಒದಗಿಸುವುದನ್ನು ಖಚಿತಪಡಿಸುವುದು.
- ಕನ್ನಡದಲ್ಲಿ “ಸಕಾಲ” ಎಂದರೆ “ಸರಿಯಾದ ಸಮಯಕ್ಕೆ” ಅಥವಾ “ಸೂಕ್ತ ಸಮಯದಲ್ಲಿ” ಎಂದರ್ಥವಾಗಿದೆ.
ಸಕಾಲ ಯೋಜನೆಯ ಪ್ರಮುಖ ಲಕ್ಷಣಗಳು:
- ಕಾಲಮಿತಿಯ ಸೇವೆ ವಿತರಣೆ:- ಈ ಯೋಜನೆಯಡಿಯ ಪ್ರತಿಯೊಂದು ಸೇವೆಗೂ ನಿರ್ದಿಷ್ಟವಾದ ಮತ್ತು ಪೂರ್ವ-ನಿಗದಿತ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ.
- 15-ಅಂಕಿಯ ಖಾತರಿ ಸೇವಾ ಸಂಖ್ಯೆ (GSC):- ಅರ್ಜಿಯನ್ನು ಸಲ್ಲಿಸಿದ ನಂತರ, ನಾಗರಿಕರಿಗೆ 15-ಅಂಕಿಯ ವಿಶಿಷ್ಟವಾದ ‘ಖಾತರಿ ಸೇವಾ ಸಂಖ್ಯೆ’ಯನ್ನು ನೀಡಲಾಗುತ್ತದೆ.
- ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ:- ನಾಗರಿಕರು ತಮ್ಮ GSC ಸಂಖ್ಯೆಯನ್ನು ಬಳಸಿಕೊಂಡು, ಅಧಿಕೃತ ಸಕಾಲ ಪೋರ್ಟಲ್ ಮೂಲಕ ತಮ್ಮ ಅರ್ಜಿಯ ಸ್ಥಿತಿಗತಿಗಳನ್ನು ಆನ್ಲೈನ್ನಲ್ಲಿ ಪರಿಶೀಲಿಸಬಹುದು.
- ವಿಳಂಬಕ್ಕೆ ದಂಡ:- ನಿಗದಿತ ಸಮಯದೊಳಗೆ ಸೇವೆಯನ್ನು ಒದಗಿಸದಿದ್ದರೆ, ಅದಕ್ಕೆ ಕಾರಣರಾದ ಸಂಬಂಧಪಟ್ಟ ಅಧಿಕಾರಿಗೆ ದಂಡ ವಿಧಿಸಲಾಗುತ್ತದೆ. ಉದ್ದೇಶಿತ ಸಕಾಲ 2.0 ಯೋಜನೆಯ ಅಡಿಯಲ್ಲಿ, ವಿಳಂಬವಾದ ಪ್ರತಿ ದಿನಕ್ಕೆ ಅಂದಾಜು ₹250 ದಂಡವನ್ನು ವಿಧಿಸಲು ಪ್ರಸ್ತಾಪಿಸಲಾಗಿದೆ.
- ವ್ಯಾಪಕ ವ್ಯಾಪ್ತಿ:- ಈ ಯೋಜನೆಯು ಕಂದಾಯ, ಸಾರಿಗೆ, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಾದ್ಯಂತ 725 ಕ್ಕೂ ಹೆಚ್ಚು ಸೇವೆಗಳನ್ನು ಒಳಗೊಂಡಿದೆ.



ನಿಮ್ಮದೊಂದು ಉತ್ತರ