ಚಾಮರಾಜನಗರದಲ್ಲಿ ಬೃಹತ್ ಶಿಲಾಯುಗದ ಉತ್ಖನನ: ಅಪರೂಪದ ಶವಸಂಸ್ಕಾರ ಪದ್ಧತಿ ಮತ್ತು ಶಿಲಾ ಕಲೆ ಪತ್ತೆ
ಇದೀಗ ಸುದ್ದಿಯಲ್ಲಿದೆ:
- ಚಾಮರಾಜನಗರ ಜಿಲ್ಲೆಯ ದೊಡ್ಡಾಲತ್ತೂರಿನಲ್ಲಿ ನಡೆದ ಇತ್ತೀಚಿನ ಉತ್ಖನನಗಳು, ದಕ್ಷಿಣ ಕರ್ನಾಟಕದ ಆರಂಭಿಕ ಬೃಹತ್ ಶಿಲಾಯುಗದ ಶವಸಂಸ್ಕಾರ ಪದ್ಧತಿ ಮತ್ತು ಸಂಪ್ರದಾಯಗಳ ಮೇಲೆ ಹೊಸ ಬೆಳಕು ಚೆಲ್ಲಿವೆ.
- ಇಲ್ಲಿ ಕಂಡುಬಂದಿರುವ ಅಸಾಮಾನ್ಯ ವಿನ್ಯಾಸಗಳು ಮತ್ತು ಬಂಡೆಗಳ ಮೇಲಿನ ಅಪರೂಪದ ಕೆತ್ತನೆಗಳು ಐತಿಹಾಸಿಕವಾಗಿ ಮಹತ್ವದ್ದಾಗಿವೆ.
ಸ್ಥಳ ಮತ್ತು ಹಿನ್ನೆಲೆ:
- ಹನೂರು ತಾಲೂಕಿನ ಕೌದಳ್ಳಿಯ ನೈಋತ್ಯಕ್ಕೆ 5 ಕಿ.ಮೀ ದೂರದಲ್ಲಿರುವ ದೊಡ್ಡಾಲತ್ತೂರು, ಈ ಪ್ರದೇಶದಲ್ಲಿ ಸುಸ್ಥಿತಿಯಲ್ಲಿರುವ ಕೆಲವೇ ಕೆಲವು ಬೃಹತ್ ಶಿಲಾಯುಗದ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಸಮಾಧಿಗಳು ಕಂಡು ಬರುತ್ತವೆ.
ಉತ್ಖನನದ ಪ್ರಮುಖಾಂಶಗಳು
- ಸಮಾಧಿಗಳ ವಿಧಗಳು:- ಉತ್ಖನನದಲ್ಲಿ ಒಟ್ಟು 13 ಸಮಾಧಿಗಳನ್ನು ಪತ್ತೆಹಚ್ಚಲಾಗಿದೆ. ಇವು ವಿವಿಧ ವ್ಯಾಸದ ನೈಸರ್ಗಿಕ ಬಂಡೆಗಳಿಂದ ನಿರ್ಮಿಸಲಾದ ‘ಶಿಲಾವೃತ್ತಗಳು’ ಮತ್ತು ‘ಶಿಲೆಗಳ ರಾಶಿಯ ವೃತ್ತಗಳನ್ನು’ ಒಳಗೊಂಡಿವೆ.
- ಇವುಗಳಲ್ಲಿ ನಾಲ್ಕು ‘ಕಲ್ಮನೆ ಸಮಾಧಿಗಳು’ ಆಗಿದ್ದರೆ, ಉಳಿದವು ‘ಬರಣಿ ಸಮಾಧಿಗಳು’ ಆಗಿವೆ.
- ಪತ್ತೆಯಾದ ಅವಶೇಷಗಳು:- ಬೃಹತ್ ಶಿಲಾಯುಗಕ್ಕೆ ವಿಶಿಷ್ಟವಾದ ಕಪ್ಪು ಮತ್ತು ಕೆಂಪು ಮಡಕೆಗಳು , ಕಪ್ಪು ಮಡಕೆಗಳು, ಕೆಂಪು ಮಡಕೆಗಳು ಹಾಗೂ ಕಬ್ಬಿಣದ ವಸ್ತುಗಳು ಇಲ್ಲಿ ದೊರೆತಿವೆ. ಜೊತೆಗೆ ಅಸ್ಥಿಪಂಜರ ಮತ್ತು ಪ್ರಾಣಿಗಳ ಅವಶೇಷಗಳು ಹಾಗೂ ಕೆಲವು ಮಣಿಗಳು ಕೂಡ ಲಭ್ಯವಾಗಿವೆ.
- ವಿಶೇಷ ಆವಿಷ್ಕಾರ: ಸಂಶೋಧಕರ ಪ್ರಕಾರ, ಇಲ್ಲಿ ಪತ್ತೆಯಾದ ಅತ್ಯಂತ ಕುತೂಹಲಕಾರಿ ವಸ್ತುವೆಂದರೆ ಕಬ್ಬಿಣದ ವಸ್ತು. ಇದು ವೃತ್ತಾಕಾರದಲ್ಲಿದ್ದು, ಎರಡೂ ಬದಿಗಳಲ್ಲಿ ಎರಡು ಕುಣಿಕೆಗಳನ್ನು ಹೊಂದಿದೆ ಮತ್ತು ಇದು ಕಬ್ಬಿಣದ ಗುರಾಣಿಯನ್ನು ಹೋಲುತ್ತದೆ.
- ಈ ಸಮಾಧಿಯಲ್ಲಿ ಕೊಡಲಿ, ಬಾಣ ಮತ್ತು ಎರಡು ಬಾಯಿಯ ಕತ್ತಿಯಂತಹ ಕಬ್ಬಿಣದ ಆಯುಧಗಳು ಪತ್ತೆಯಾಗಿವೆ. ಇದೇ ಸಮಾಧಿಯ ಬಂಡೆಗಳ ಮೇಲೆ ಮಾನವ ಆಕೃತಿಗಳನ್ನು ಕೆತ್ತಲಾಗಿದೆ.
- ಕರ್ನಾಟಕದ ಈ ಭಾಗದಲ್ಲಿ ಶಿಲಾ ಕಲೆ ಅಪರೂಪವಾಗಿರುವುದರಿಂದ ಈ ಆವಿಷ್ಕಾರವು ಐತಿಹಾಸಿಕವಾಗಿ ಮಹತ್ವದ್ದಾಗಿದೆ.
- ಕಾಲನಿರ್ಣಯ:- ಬರಣಿ ಮತ್ತು ಕಲ್ಮನೆ ಸಮಾಧಿಗಳಿಂದ ಸಂಗ್ರಹಿಸಲಾದ ಇದ್ದಿಲಿನ ಮಾದರಿಗಳನ್ನು ‘AMS ಕಾರ್ಬನ್-14 ವಿಶ್ಲೇಷಣೆ’ಗೆ ಒಳಪಡಿಸಲಾಗಿದೆ. ಇದರನ್ವಯ, ಈ ಸಮಾಧಿಗಳು ಕ್ರಿ.ಪೂ. 6 ನೇ ಶತಮಾನದಿಂದ ಕ್ರಿ.ಶ. 4 ನೇ ಶತಮಾನದ ಕಾಲಘಟ್ಟಕ್ಕೆ ಸೇರಿವೆ ಎಂದು ನಿರ್ಧರಿಸಲಾಗಿದೆ. ಇದು ಪರ್ಯಾಯ ದ್ವೀಪ ಭಾರತದ ಇತರೆಡೆಗಳಲ್ಲಿ ಕಂಡುಬರುವ ಬೃಹತ್ ಶಿಲಾಯುಗದ ವಾಸಸ್ಥಾನದ ಹಂತಗಳೊಂದಿಗೆ ಹೊಂದಿಕೆಯಾಗುತ್ತದೆ.



ನಿಮ್ಮದೊಂದು ಉತ್ತರ