ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2025
ಇದೀಗ ಸುದ್ದಿಯಲ್ಲಿದೆ:
- ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ‘ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ-2025’ ಅನ್ನು ಮತ್ತಷ್ಟು ಬಲಪಡಿಸುವಂತೆ ‘ಕರ್ನಾಟಕ ಗೃಹ ಕಾರ್ಮಿಕರ ಹಕ್ಕುಗಳ ಒಕ್ಕೂಟ’ವು ಸರ್ಕಾರವನ್ನು ಒತ್ತಾಯಿಸಿದೆ.
ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2025 ರ ಬಗ್ಗೆ:
- ಪ್ರಸ್ತುತ ಅಸಂಘಟಿತ (ಅನೌಪಚಾರಿಕ) ವಾಗಿರುವ ಗೃಹ ಕೆಲಸದ ವಲಯವನ್ನು ಸಂಘಟಿತ (ಔಪಚಾರಿಕ) ಗೊಳಿಸುವುದು ಮತ್ತು ರಾಜ್ಯದ ಅಂದಾಜು 15 ಲಕ್ಷ ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಸವಲತ್ತುಗಳನ್ನು ಒದಗಿಸುವುದು ಈ ಮಸೂದೆಯ ಪ್ರಮುಖ ಗುರಿಯಾಗಿದೆ.
ಕರಡು ಮಸೂದೆಯ ಪ್ರಮುಖ ನಿಬಂಧನೆಗಳು
- ಕಡ್ಡಾಯ ನೋಂದಣಿ: ಗೃಹ ಕಾರ್ಮಿಕರು ಮತ್ತು ಅವರನ್ನು ನೇಮಿಸಿಕೊಳ್ಳುವ ಉದ್ಯೋಗದಾತರು (ಗೃಹ ಮಾಲೀಕರು, ಏಜೆನ್ಸಿಗಳು ಮತ್ತು ಡಿಜಿಟಲ್ ವೇದಿಕೆಗಳು ಸೇರಿದಂತೆ) ನಿಗದಿತ ಸರ್ಕಾರಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
- ಕಡ್ಡಾಯ ಲಿಖಿತ ಉದ್ಯೋಗ ಒಪ್ಪಂದಗಳು: ಉದ್ಯೋಗದಾತರು ಕಾರ್ಮಿಕರಿಗೆ ವೇತನ, ಕೆಲಸದ ಅವಧಿ, ಸೌಲಭ್ಯಗಳು ಮತ್ತು ಕೆಲಸದ ಷರತ್ತುಗಳನ್ನು ಸ್ಪಷ್ಟಪಡಿಸುವ ಲಿಖಿತ ಒಪ್ಪಂದವನ್ನು ಕಡ್ಡಾಯವಾಗಿ ನೀಡಬೇಕು. ನೋಂದಾಯಿಸದ ಉದ್ಯೋಗವನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ.
- ಕಡ್ಡಾಯವಾಗಿ ಕನಿಷ್ಠ ವೇತನ ಮತ್ತು ಕೆಲಸದ ಅವಧಿ: ಕಾರ್ಮಿಕರು ನಿಗದಿತ ಕನಿಷ್ಠ ವೇತನಕ್ಕೆ ಅರ್ಹರಾಗಿರುತ್ತಾರೆ. ವಾರಕ್ಕೆ ಗರಿಷ್ಠ 48 ಗಂಟೆಗಳ ಕೆಲಸದ ಅವಧಿ, ಅಧಿಕ ಅವಧಿಯ ಕೆಲಸಕ್ಕೆ ವೇತನ , ವಿಶ್ರಾಂತಿ ಅವಧಿಗಳು ಮತ್ತು ವಾರಕ್ಕೊಮ್ಮೆ ರಜೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
- ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಂಡಳಿ: ಕಲ್ಯಾಣ ನಿಧಿಯನ್ನು ನಿರ್ವಹಿಸಲು ‘ಕರ್ನಾಟಕ ರಾಜ್ಯ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಂಡಳಿ’ಯನ್ನು ಸ್ಥಾಪಿಸಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ. ಈ ನಿಧಿಯ ಮೂಲಕ ಆರೋಗ್ಯ ವಿಮೆ, ಹೆರಿಗೆ/ಪಿತೃತ್ವ ಸವಲತ್ತುಗಳು, ಪಿಂಚಣಿ, ಅಪಘಾತ ಪರಿಹಾರ ಮತ್ತು ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಧನಸಹಾಯದಂತಹ ಪ್ರಯೋಜನಗಳನ್ನು ಒದಗಿಸಲಾಗುತ್ತದೆ.
- ದಂಡನೆಗಳು : ಮಸೂದೆಯ ನಿಯಮಗಳನ್ನು ಪಾಲಿಸದ ಉದ್ಯೋಗದಾತರು ಅಥವಾ ಏಜೆನ್ಸಿಗಳಿಗೆ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ. ಬಾಲ ಕಾರ್ಮಿಕ ಪದ್ಧತಿ ಅಥವಾ ಮಾನವ ಕಳ್ಳಸಾಗಣೆಯಂತಹ ಗಂಭೀರ ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು (7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹50,000 ದಂಡ) ಪ್ರಸ್ತಾಪಿಸಲಾಗಿದೆ.
- ಕುಂದುಕೊರತೆ ನಿವಾರಣೆ : ಕಾರ್ಮಿಕರು ಮತ್ತು ಉದ್ಯೋಗದಾತರ ನಡುವಿನ ವಿವಾದಗಳನ್ನು ಇತ್ಯರ್ಥಪಡಿಸಲು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲು ಪ್ರಸ್ತಾಪಿಸಲಾಗಿದೆ.
ರಾಜ್ಯದ ಕಾರಾಗೃಹಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚನೆ

ಇದೀಗ ಸುದ್ದಿಯಲ್ಲಿದೆ:
- ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಅಕ್ರಮ ಚಟುವಟಿಕೆಗಳು ಮತ್ತು ವಿಶೇಷ ಆತಿಥ್ಯದ ವರದಿಗಳ ನಂತರ, ಕರ್ನಾಟಕದಾದ್ಯಂತ ಕಾರಾಗೃಹಗಳ ಕಾರ್ಯನಿರ್ವಹಣೆ, ಆಡಳಿತ ಮತ್ತು ಭದ್ರತೆಯನ್ನು ಪರಿಶೀಲಿಸಲು ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
ಉನ್ನತ ಮಟ್ಟದ ಸಮಿತಿಯ ಸದಸ್ಯರು:
- ಅಧ್ಯಕ್ಷತೆ:- ಹಿತೇಂದ್ರ (ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ)).
- ಇತರೆ ಸದಸ್ಯರು:
- ಸಂದೀಪ್ ಪಾಟೀಲ್ (ಪೊಲೀಸ್ ಮಹಾನಿರೀಕ್ಷಕ).
- ಅಮರನಾಥ್ ರೆಡ್ಡಿ ಮತ್ತು ರಿಷ್ಯಂತ್ (ಪೊಲೀಸ್ ವರಿಷ್ಠಾಧಿಕಾರಿಗಳು)



ನಿಮ್ಮದೊಂದು ಉತ್ತರ