ಭಾರತದ ಹಸ್ತಪ್ರತಿ ಪರಂಪರೆಯ ಸಮೀಕ್ಷೆ ಮತ್ತು ದಾಖಲೀಕರಣ
ಸಂಸ್ಕೃತಿ
ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಸಂಸ್ಕೃತಿ ಸಚಿವಾಲಯವು ಭಾರತದ ಅಗಾಧವಾದ ಹಸ್ತಪ್ರತಿ ಪರಂಪರೆಯನ್ನು ಗುರುತಿಸಲು ಮತ್ತು ಸಮಗ್ರವಾಗಿ ದಾಖಲಿಸಲು ಇದೇ ಮೊದಲ ಬಾರಿಗೆ ಮೂರು ತಿಂಗಳ ಅವಧಿಯ ‘ರಾಷ್ಟ್ರವ್ಯಾಪಿ ಸಮೀಕ್ಷೆ’ಯನ್ನು ಆರಂಭಿಸಿದೆ.
- ಈ ಉಪಕ್ರಮವು 2025-26ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ‘ಜ್ಞಾನ ಭಾರತಂ ಅಭಿಯಾನ’ದ ಒಂದು ಪ್ರಮುಖ ಭಾಗವಾಗಿದೆ.
ಈ ಉಪಕ್ರಮದ ಮಹತ್ವ:
- ಪರಂಪರೆಯ ಸಂರಕ್ಷಣೆ:- ಡಿಜಿಟಲೀಕರಣ ಮತ್ತು ದಾಖಲೀಕರಣವು ನಶಿಸುತ್ತಿರುವ ಹಾಗೂ ಶಿಥಿಲಾವಸ್ಥೆಯಲ್ಲಿರುವ ಸೂಕ್ಷ್ಮ ಹಸ್ತಪ್ರತಿಗಳನ್ನು ಸಂರಕ್ಷಿಸಲು ನೆರವಾಗುತ್ತದೆ.
- ಸಂಶೋಧನೆಗೆ ಸುಲಭ ಲಭ್ಯತೆ:- ಕೇಂದ್ರೀಕೃತ ದತ್ತಾಂಶ ಸಂಗ್ರಹಣೆಯ ಸ್ಥಾಪನೆಯಿಂದಾಗಿ ಸಂಶೋಧಕರಿಗೆ ಹಾಗೂ ಸಾರ್ವಜನಿಕರಿಗೆ ಈ ಹಸ್ತಪ್ರತಿಗಳು ಅತ್ಯಂತ ಸುಲಭವಾಗಿ ಲಭ್ಯವಾಗಲಿವೆ.
- ಬೌದ್ಧಿಕ ಚೌರ್ಯದ ತಡೆ:- ಕರಾರುವಕ್ಕಾದ ದಾಖಲೆಗಳು ಮತ್ತು ಮೆಟಾಡೇಟಾ ವ್ಯವಸ್ಥೆಯು ಹಸ್ತಪ್ರತಿಗಳ ಅಧಿಕೃತತೆಯನ್ನು ದೃಢೀಕರಿಸಲು ಹಾಗೂ ಅವುಗಳ ದುರ್ಬಳಕೆಯನ್ನು ತಡೆಯಲು ಸಹಾಯ ಮಾಡುತ್ತದೆ.
- ಸಾಂಸ್ಕೃತಿಕ ಪುನರುಜ್ಜೀವನ:- ಈ ಉಪಕ್ರಮದ ಮೂಲಕ ಭಾರತದ ಪ್ರಾಚೀನ ಜ್ಞಾನ ಮತ್ತು ಸಾಹಿತ್ಯ ಪರಂಪರೆಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಮಾನ್ಯತೆ ದೊರೆಯಲಿದೆ.
ಜ್ಞಾನ ಭಾರತಂ ಅಭಿಯಾನದ ಬಗ್ಗೆ:
- ಪ್ರಮುಖ ಉದ್ದೇಶ:- ದೇಶದಾದ್ಯಂತ ಹಂಚಿಹೋಗಿರುವ ಐತಿಹಾಸಿಕ ಹಸ್ತಪ್ರತಿಗಳನ್ನು ಗುರುತಿಸಿ, ಸಂರಕ್ಷಿಸುವುದು.
- ಗುರಿ:- ಶೈಕ್ಷಣಿಕ ಸಂಸ್ಥೆ, ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯಗಳಲ್ಲಿ ಲಭ್ಯವಿರುವ 1 ಕೋಟಿಗೂ ಅಧಿಕ ಹಸ್ತಪ್ರತಿಗಳ “ಸಮೀಕ್ಷೆ, ದಾಖಲೀಕರಣ ಮತ್ತು ಸಂರಕ್ಷಣೆ” ಕೈಗೊಳ್ಳುವುದು.
- ಮಹತ್ವ:- ಐತಿಹಾಸಿಕ ಮೌಲ್ಯಗಳನ್ನು ಕಾಪಾಡುವುದು, ಪ್ರಾಚೀನ ಭಾರತೀಯ ಜ್ಞಾನ ಭಂಡಾರವನ್ನು ಜಗತ್ತಿಗೆ ಪರಿಚಯಿಸುವುದು ಹಾಗೂ ಹಸ್ತಪ್ರತಿಗಳ ದೀರ್ಘಕಾಲೀನ ಉಳಿವು ಮತ್ತು ಸಾರ್ವಕಾಲಿಕ ಲಭ್ಯತೆಯನ್ನು ಖಚಿತಪಡಿಸುವುದು..
ಹಸ್ತಪ್ರತಿಗಳು ಎಂದರೇನು?
- ಕೈಯಿಂದ ಬರೆಯಲಾದ ಪ್ರಾಚೀನ ಕೃತಿಗಳು:- ಕಾಗದ, ಮರದ ತೊಗಟೆ, ತಾಳೆಗರಿಗಳ ಮೇಲೆ ಕೈಯಿಂದ ಬರೆಯಲಾದ, ಕನಿಷ್ಠ 75 ವರ್ಷಗಳಷ್ಟು ಹಳೆಯದಾದ ಹಾಗೂ ಗಮನಾರ್ಹ ವೈಜ್ಞಾನಿಕ, ಐತಿಹಾಸಿಕ ಅಥವಾ ಸೌಂದರ್ಯಾತ್ಮಕ ಮೌಲ್ಯವನ್ನು ಹೊಂದಿರುವ ಪ್ರಾಚೀನ ಕೃತಿಗಳನ್ನು ‘ಹಸ್ತಪ್ರತಿ’ ಎಂದು ಕರೆಯಲಾಗುತ್ತದೆ.
- ಉದಾಹರಣೆ:- ಭೂರ್ಜ ಮರದ ತೊಗಟೆಯ ಮೇಲೆ ರಚಿಸಲಾದ, 3 ಅಥವಾ 4ನೇ ಶತಮಾನದ ‘ಬಕ್ಷಾಲಿ ಹಸ್ತಪ್ರತಿ’ಯು ಪ್ರಾಚೀನ ಭಾರತದ ಗಣಿತಶಾಸ್ತ್ರದ ಪಠ್ಯವಾಗಿದೆ. ಗಣಿತದಲ್ಲಿ ‘ಶೂನ್ಯದ’ (Zero) ಬಳಕೆಯನ್ನು ಉಲ್ಲೇಖಿಸಿರುವ ಅತ್ಯಂತ ಹಳೆಯ ಲಿಖಿತ ದಾಖಲೆ ಇದಾಗಿದೆ ಎಂದು ಪರಿಗಣಿಸಲಾಗಿದೆ.
- ಬ್ರಾಹ್ಮಿ, ಕುಶಾನ್, ಗೌಡಿ, ಲೆಪ್ಚಾ ಮತ್ತು ಮೈಥಿಲಿ ಸೇರಿದಂತೆ ಸುಮಾರು 80 ಪ್ರಾಚೀನ ಲಿಪಿಗಳಲ್ಲಿ ರಚನೆಯಾಗಿರುವ ಅಂದಾಜು 1 ಕೋಟಿ ಹಸ್ತಪ್ರತಿಗಳನ್ನು ಭಾರತ ಹೊಂದಿದೆ.
ಭಾರತದಲ್ಲಿ ಹಸ್ತಪ್ರತಿ ಸಂರಕ್ಷಣೆಗಾಗಿರುವ ಇತರ ಉಪಕ್ರಮಗಳು:
- ರಾಷ್ಟ್ರೀಯ ಹಸ್ತಪ್ರತಿ ಅಭಿಯಾನ (NMM):- ಹಸ್ತಪ್ರತಿಗಳನ್ನು ಪತ್ತೆಹಚ್ಚಲು ಮತ್ತು ಸಂರಕ್ಷಿಸಲು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವು 2003ರಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಿತು.
- ಭಾರತೀಯ ರಾಷ್ಟ್ರೀಯ ಗ್ರಂಥಾಲಯ, ಕೋಲ್ಕತ್ತಾ:- ಈ ಗ್ರಂಥಾಲಯವು ಸುಮಾರು 3,600 ಅಪರೂಪದ ಹಾಗೂ ಐತಿಹಾಸಿಕವಾಗಿ ಅತ್ಯಂತ ಪ್ರಮುಖವಾದ ಹಸ್ತಪ್ರತಿಗಳ ಸಂಗ್ರಹವನ್ನು ಹೊಂದಿದೆ.
- ಬಂಗಾಳದ ಏಷ್ಯಾಟಿಕ್ ಸೊಸೈಟಿ:- ಸರ್ ವಿಲಿಯಂ ಜೋನ್ಸ್ ಅವರು 1784ರ ಜನವರಿ 15ರಂದು ಇದನ್ನು ಸ್ಥಾಪಿಸಿದರು. ಇದು ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣ ಕಾರ್ಯವನ್ನು ಕೈಗೊಳ್ಳುತ್ತದೆ.
- ಅಭಿಲೇಖ್ ಪಟಲ್:- ಇದು ಹಸ್ತಪ್ರತಿಗಳು, ಪ್ರಾಚ್ಯ ದಾಖಲೆಗಳು ಮತ್ತು ಖಾಸಗಿ ಪತ್ರಗಳ ಅಪರೂಪದ ಸಂಗ್ರಹ ಸೇರಿದಂತೆ 1 ದಶಲಕ್ಷಕ್ಕೂ ಅಧಿಕ ಕಡತಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲು ‘ಭಾರತೀಯ ರಾಷ್ಟ್ರೀಯ ಅಭಿಲೇಖಾಗಾರ’ವು ರೂಪಿಸಿರುವ ಡಿಜಿಟಲ್ ವೇದಿಕೆಯಾಗಿದೆ.
- ಜ್ಞಾನ-ಸೇತು:- ಹಸ್ತಪ್ರತಿಗಳ ಸಂರಕ್ಷಣೆ, ಲಿಪಿಗಳ ಅರ್ಥೈಸುವಿಕೆ, ಮರುಸ್ಥಾಪನೆ ಮತ್ತು ಸುಲಭ ಲಭ್ಯತೆಗಾಗಿ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನದ ಪರಿಹಾರಗಳನ್ನು ಕಂಡುಕೊಳ್ಳಲು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಾಗಿ ಇದನ್ನು ಪ್ರಾರಂಭಿಸಲಾಗಿದೆ.
- ಪ್ರಾಚೀನ ವಸ್ತುಗಳು ಮತ್ತು ಕಲಾ ನಿಧಿಗಳ ಕಾಯ್ದೆ, 1972:- ಬೆಲೆಬಾಳುವ ಹಸ್ತಪ್ರತಿಗಳು ಸೇರಿದಂತೆ ಭಾರತದ ಸಾಂಸ್ಕೃತಿಕ ಪರಂಪರೆಯ ಅಕ್ರಮ ರಫ್ತು ಮತ್ತು ಕಳ್ಳಸಾಗಣೆಯನ್ನು ತಡೆಯುವ ಪ್ರಮುಖ ಗುರಿಯನ್ನು ಈ ಕಾಯ್ದೆ ಹೊಂದಿದೆ.
ಟ್ರಾಪಿಕಲ್ ಫಾರೆಸ್ಟ್ ಫಾರೆವರ್ ಫೆಸಿಲಿಟಿ (TFFF)
ಪರಿಸರ
ಇದೀಗ ಸುದ್ದಿಯಲ್ಲಿದೆ:
- ‘ಬೆಲೆಮ್’ನಲ್ಲಿ ಜರುಗಿದ “ಪಕ್ಷಗಳ ಸಮ್ಮೇಳನ- 30” (COP30) ಹವಾಮಾನ ಶೃಂಗಸಭೆಯು ಜಾಗತಿಕ ಅರಣ್ಯ ಸಂರಕ್ಷಣೆಯ ಕುರಿತು ಮಹತ್ವದ ಸಂದೇಶವನ್ನು ರವಾನಿಸಿದೆ. ಪರಿಣಾಮಕಾರಿ ಅರಣ್ಯ ಸಂರಕ್ಷಣೆಗೆ ಕೇವಲ ಆರ್ಥಿಕ ಬದ್ಧತೆಗಳಷ್ಟೇ ಸಾಲದು, ಬದಲಾಗಿ ‘ನಿರ್ಧಾರ ಕೈಗೊಳ್ಳುವ ಅಧಿಕಾರಗಳ’ ಮರುಹಂಚಿಕೆಯೂ ಅತ್ಯಗತ್ಯ ಎಂಬುದರತ್ತ ಜಾಗತಿಕ ಗಮನ ಸೆಳೆದಿದೆ.
- ಈ ನಿಟ್ಟಿನಲ್ಲಿ, ಅರಣ್ಯ ಸಂರಕ್ಷಣಾ ಪ್ರಯತ್ನಗಳಿಗೆ ಹೊಸ ರೂಪು ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಬ್ರೆಜಿಲ್ ದೇಶವು ‘ಟ್ರಾಪಿಕಲ್ ಫಾರೆಸ್ಟ್ ಫಾರೆವರ್ ಫೆಸಿಲಿಟಿ’ (TFFF) ಎಂಬ ನೂತನ ಅರಣ್ಯ ಹಣಕಾಸು ವ್ಯವಸ್ಥೆಯನ್ನು ಪರಿಚಯಿಸಿದೆ.
ಟ್ರಾಪಿಕಲ್ ಫಾರೆಸ್ಟ್ ಫಾರೆವರ್ ಫೆಸಿಲಿಟಿ (TFFF)ಯ ಬಗ್ಗೆ:
- ‘ಕಾರ್ಯಕ್ಷಮತೆ-ಆಧಾರಿತ ಹಣಕಾಸು ಕಾರ್ಯವಿಧಾನವಾಗಿದೆ:- ಕೇವಲ ಅರಣ್ಯನಾಶದ ಪ್ರಮಾಣವನ್ನು ತಗ್ಗಿಸುವ ಗುರಿಗೆ ಸೀಮಿತವಾಗದೆ, ಅಸ್ತಿತ್ವದಲ್ಲಿರುವ ಅರಣ್ಯಗಳನ್ನು ಯಶಸ್ವಿಯಾಗಿ ಸಂರಕ್ಷಿಸಿ ಉಳಿಸುವ ರಾಷ್ಟ್ರಗಳಿಗೆ ಪ್ರೋತ್ಸಾಹ ನೀಡುವುದನ್ನು ಉದ್ದೇಶಿಸುತ್ತದೆ.
- ದೀರ್ಘಕಾಲೀನ ಅರಣ್ಯ ಸಂರಕ್ಷಣೆಯನ್ನು ಬೆಂಬಲಿಸುವುದರ ಜೊತೆಗೆ, ಪಾಲುದಾರರಿಗೆ ಆರ್ಥಿಕ ಲಾಭವನ್ನು ತಂದುಕೊಡುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ.
- ಈ ನಿಧಿಗೆ ನಾರ್ವೆ ದೇಶವು $ 3 ಶತಕೋಟಿ ಡಾಲರ್‌ಗಳ ಗಣನೀಯ ಕೊಡುಗೆ ನೀಡಿದೆ. ಇದರೊಂದಿಗೆ ಈ ನಿಧಿಯು $ 5.5 ಶತಕೋಟಿ ಡಾಲರ್‌ಗಳಿಗೂ ಅಧಿಕ ಆರಂಭಿಕ ಬಂಡವಾಳವನ್ನು ಈಗಾಗಲೇ ಕ್ರೋಡೀಕರಿಸಿದೆ.
ಬುಡಕಟ್ಟು ಕಲಾ ಉತ್ಸವ, 2026
ಕಲೆ ಮತ್ತು ಸಂಸ್ಕೃತಿ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ನವದೆಹಲಿಯ ‘ಟ್ರಾವಂಕೂರ್ ಅರಮನೆ’ಯಲ್ಲಿ ಆಯೋಜಿಸಲಾಗಿದ್ದ ‘ಬುಡಕಟ್ಟು ಕಲಾ ಉತ್ಸವ 2026’ ಭಾರತದ ಶ್ರೀಮಂತ ಬುಡಕಟ್ಟು ಕಲಾ ಪರಂಪರೆಯನ್ನು ಜಗತ್ತಿಗೆ ಅನಾವರಣಗೊಳಿಸಿತು.
ಪ್ರದರ್ಶನಗೊಂಡ ಪ್ರಮುಖ ಬುಡಕಟ್ಟು ಕಲಾ ಪ್ರಕಾರಗಳು:
- ವಾರ್ಲಿ ಚಿತ್ರಕಲೆ (Warli Painting):

- ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡಿರುವ ಈ ಕಲೆಯನ್ನು ಪ್ರಮುಖವಾಗಿ ‘ವಾರ್ಲಿ’ ಬುಡಕಟ್ಟು ಜನಾಂಗದವರು ರೂಢಿಸಿಕೊಂಡಿದ್ದಾರೆ.
- ಇದರ ಮೂಲವು ನವಶಿಲಾಯುಗಕ್ಕೆ (ಕ್ರಿ. ಪೂ. 2500–3000) ಸೇರಿದೆ ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ.
- ಪ್ರಮುಖ ಲಕ್ಷಣಗಳು:-
- ಮಣ್ಣಿನ ಗೋಡೆಗಳ ಮೇಲೆ ಅಕ್ಕಿ ಹಿಟ್ಟಿನಿಂದ ತಯಾರಿಸಿದ ಬಿಳಿ ಬಣ್ಣವನ್ನು ಬಳಸಿ ಚಿತ್ರಗಳನ್ನು ರಚಿಸಲಾಗುತ್ತದೆ.
- ವೃತ್ತಗಳು, ತ್ರಿಕೋನಗಳು ಮತ್ತು ಚೌಕಗಳಂತಹ ಮೂಲಭೂತ ಜ್ಯಾಮಿತೀಯ ಆಕಾರಗಳ ಮೂಲಕ ಮಾನವ ಹಾಗೂ ಪ್ರಕೃತಿಯ ನಡುವಿನ ಒಡನಾಟವನ್ನು ಬಿಂಬಿಸಲಾಗುತ್ತದೆ.
- ಕೃಷಿ, ಧಾರ್ಮಿಕ ಆಚರಣೆಗಳು, ಬೇಟೆ ಮತ್ತು ‘ತರ್ಪಾ’ ನೃತ್ಯವು ಈ ಚಿತ್ರಕಲೆಯ ಪ್ರಮುಖ ಕಥಾವಸ್ತುಗಳಾಗಿವೆ.
- ರಾಭಾ ಮತ್ತು ತಮಾಂಗ್ ಮುಖಗವಸುಗಳು/ ಮುಖವಾಡಗಳು:
-
- ಅಸ್ಸಾಂ ಮತ್ತು ಉತ್ತರ ಬಂಗಾಳದ ‘ರಾಭಾ’ ಬುಡಕಟ್ಟು ಜನಾಂಗದಲ್ಲಿ ಮುಖಗವಸುಗಳ ತಯಾರಿಕೆಯು ಅತ್ಯಂತ ಪ್ರಮುಖ ಕಲಾ ಪ್ರಕಾರವಾಗಿದೆ.
- ಪ್ರಮುಖ ಲಕ್ಷಣಗಳು:-
- ಮರ, ಬಿದಿರು, ಸೋರೆಕಾಯಿ ಅಥವಾ ಜೇಡಿಮಣ್ಣನ್ನು ಬಳಸಿ ತಯಾರಿಸುವ ಈ ಮುಖಗವಸುಗಳನ್ನು ಆಕರ್ಷಕ ಬಣ್ಣಗಳಿಂದ ಸಿಂಗರಿಸಲಾಗುತ್ತದೆ.
- ದೇವರು, ದುಷ್ಟಶಕ್ತಿಗಳು, ಪ್ರಾಣಿಗಳು ಹಾಗೂ ಪೌರಾಣಿಕ ಜೀವಿಗಳನ್ನು ಪ್ರತಿನಿಧಿಸುವ ಈ ಮುಖಗವಸುಗಳನ್ನು ಹೆಚ್ಚಾಗಿ ಧಾರ್ಮಿಕ ನೃತ್ಯಗಳು ಮತ್ತು ಜಾನಪದ ನಾಟಕಗಳಲ್ಲಿ ಬಳಸಲಾಗುತ್ತದೆ.
- ಗೋಂಡ ಕಲೆ:
- ಗೋಂಡ ಚಿತ್ರಕಲೆಯು ಮಧ್ಯ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಮಧ್ಯಪ್ರದೇಶದಲ್ಲಿ ಉಗಮಿಸಿದೆ.
- ಇದು ‘ಭೌಗೋಳಿಕ ಸೂಚ್ಯಂಕ’’ (GI ಟ್ಯಾಗ್) ಮಾನ್ಯತೆಯನ್ನು ಪಡೆದಿದ್ದು, ಕಾನೂನಾತ್ಮಕ ಸಂರಕ್ಷಣೆ ಹಾಗೂ ಜಾಗತಿಕ ಮನ್ನಣೆಯನ್ನು ಗಳಿಸಿದೆ.
- ಪ್ರಮುಖ ಲಕ್ಷಣಗಳು:-
- ಆಕರ್ಷಕ ಹಾಗೂ ಸಂಕೀರ್ಣ ವಿನ್ಯಾಸಗಳನ್ನು ರಚಿಸಲು ಚುಕ್ಕೆಗಳು ಮತ್ತು ರೇಖೆಗಳನ್ನು ಬಳಸುವುದು ಇದರ ವಿಶಿಷ್ಟತೆಯಾಗಿದೆ.
- ಜಾನಪದ ಕಥೆಗಳು, ಪ್ರಾಣಿಗಳು, ಅರಣ್ಯ ಹಾಗೂ ಪರಿಸರ ವ್ಯವಸ್ಥೆಯನ್ನು ಆಧರಿಸಿದ ಕಥಾವಸ್ತುಗಳು ಈ ಕಲೆಯಲ್ಲಿ ಹಾಸುಹೊಕ್ಕಾಗಿವೆ.
- ಭಿಲ್ ಚಿತ್ರಕಲೆ:

- ಇದು ಭಾರತದ ಅತ್ಯಂತ ಪ್ರಾಚೀನ ಬುಡಕಟ್ಟು ಕಲಾ ಸಂಪ್ರದಾಯಗಳಲ್ಲಿ ಒಂದಾಗಿದೆ.
- ಭಾರತದ ಅತಿದೊಡ್ಡ ಮೂಲನಿವಾಸಿ ಬುಡಕಟ್ಟು ಗುಂಪುಗಳಲ್ಲಿ ಒಂದಾದ ‘ಭಿಲ್’ ಬುಡಕಟ್ಟು ಜನಾಂಗವು ಈ ಕಲೆಯನ್ನು ರೂಢಿಸಿಕೊಂಡಿದೆ.
- ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ ಮತ್ತು ರಾಜಸ್ಥಾನದಲ್ಲಿ ಇದನ್ನು ಪ್ರಮುಖವಾಗಿ ಕಾಣಬಹುದು.
- ಪ್ರಮುಖ ಲಕ್ಷಣಗಳು:-
- ಬೀಜಗಳು ಮತ್ತು ಪ್ರಕೃತಿಯ ಲಯವನ್ನು ಸಂಕೇತಿಸುವ ಸಾವಿರಾರು ಬಣ್ಣ-ಬಣ್ಣದ ಚುಕ್ಕೆಗಳನ್ನು ಈ ಚಿತ್ರಕಲೆಯಲ್ಲಿ ಬಳಸಲಾಗುತ್ತದೆ.
- ದೇವತೆಗಳು, ಪ್ರಾಣಿಗಳು, ದಟ್ಟ ಅರಣ್ಯಗಳು ಮತ್ತು ದೈನಂದಿನ ಜೀವನದ ಚಿತ್ರಣವು ಈ ಕಲೆಯ ಕಥಾವಸ್ತುಗಳಾಗಿವೆ.
ಎನ್.ಎಂ.ಡಿ.ಸಿ (NMDC) ಯಿಂದ ಕಬ್ಬಿಣದ ಅದಿರು ಉತ್ಪಾದನೆ
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ‘ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು’ (NMDC Limited) ಒಂದೇ ಆರ್ಥಿಕ ವರ್ಷದಲ್ಲಿ (2025-26) 50 ಮಿಲಿಯನ್ ಟನ್ (MT) ಕಬ್ಬಿಣದ ಅದಿರನ್ನು ಉತ್ಪಾದಿಸಿದೆ. ಈ ಮೂಲಕ, ಇಂತಹ ಬೃಹತ್ ಸಾಧನೆ ಮಾಡಿದ ಭಾರತದ ‘ಮೊದಲ ಗಣಿಗಾರಿಕಾ ಕಂಪನಿ’ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಬ್ಬಿಣದ ಅದಿರಿನ ಬಗ್ಗೆ:
- ಲೋಹೀಯ ಕಬ್ಬಿಣವನ್ನು ಹೊರತೆಗೆಯಲು ಬಳಸುವ ಶಿಲೆಗಳು ಮತ್ತು ಖನಿಜಗಳನ್ನು ‘ಕಬ್ಬಿಣದ ಅದಿರು’ ಎಂದು ಕರೆಯಲಾಗುತ್ತದೆ.
- ಅದಿರಿನಲ್ಲಿರುವ ಕಬ್ಬಿಣದ ಅಂಶ ಹಾಗೂ ಗುಣಮಟ್ಟದ ಆಧಾರದ ಮೇಲೆ ಇದನ್ನು ನಾಲ್ಕು ಮುಖ್ಯ ಪ್ರಕಾರಗಳಾಗಿ ವಿಂಗಡಿಸಲಾಗಿದೆ:
- ಮ್ಯಾಗ್ನೆಟೈಟ್:- ಇದು ಅತ್ಯುತ್ತಮ ಗುಣಮಟ್ಟದ ಅದಿರಾಗಿದ್ದು, ಶೇ 70 ಕ್ಕಿಂತ ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿರುತ್ತದೆ.
- ಹೆಮಟೈಟ್:- ಇದು ಅತ್ಯಂತ ಪ್ರಮುಖ ಕೈಗಾರಿಕಾ ಅದಿರಾಗಿದ್ದು, ಶೇ 60 ರಿಂದ 70 ರಷ್ಟು ಕಬ್ಬಿಣದ ಅಂಶವನ್ನು ಹೊಂದಿದೆ.
- ಲಿಮೋನೈಟ್:- ಇದು ಕಡಿಮೆ ಗುಣಮಟ್ಟದ ಅದಿರಾಗಿದ್ದು, ಶೇ 40 ರಿಂದ 60 ರಷ್ಟು ಕಬ್ಬಿಣದ ಅಂಶವನ್ನು ಹೊಂದಿರುತ್ತದೆ.
- ಸಿಡೆರೈಟ್:- ಇದು ಅತ್ಯಂತ ಕಳಪೆ ಗುಣಮಟ್ಟದ ಅದಿರಾಗಿದ್ದು, ಶೇ 40 ಕ್ಕಿಂತ ಕಡಿಮೆ ಕಬ್ಬಿಣದ ಅಂಶವನ್ನು ಹೊಂದಿರುತ್ತದೆ.
- ಆಸ್ಟ್ರೇಲಿಯಾ, ಬ್ರೆಜಿಲ್ ಮತ್ತು ಚೀನಾ ರಾಷ್ಟ್ರಗಳ ನಂತರ, ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ 4ನೇ ಅತಿದೊಡ್ಡ ರಾಷ್ಟ್ರವಾಗಿದೆ.
- ಭಾರತದಲ್ಲಿ ಉತ್ಪಾದನೆಯ ದೃಷ್ಟಿಯಿಂದ ‘ಒಡಿಶಾ’ ರಾಜ್ಯವು ಮುಂಚೂಣಿಯಲ್ಲಿದ್ದು, ‘ಛತ್ತೀಸ್‌ಗಢ’ ಮತ್ತು ‘ಕರ್ನಾಟಕ’ ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ.
ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (NMDC) ಬಗ್ಗೆ:
- ಭಾರತದ ಕಬ್ಬಿಣದ ಅದಿರು ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ 1958 ರಲ್ಲಿ ಈ ನಿಗಮವನ್ನು ಸ್ಥಾಪಿಸಲಾಯಿತು. ಇದು ಭಾರತದ ಅತಿದೊಡ್ಡ ಕಬ್ಬಿಣದ ಅದಿರು ಉತ್ಪಾದಕ ಸಂಸ್ಥೆಯಾಗಿದೆ.
- ಇದು ಕೇಂದ್ರ ಉಕ್ಕು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣಕ್ಕೆ ಒಳಪಡುವ ‘ನವರತ್ನ’ ಸ್ಥಾನಮಾನ ಹೊಂದಿರುವ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದೆ (CPSE).
- 2030ರ ವೇಳೆಗೆ 300 ದಶಲಕ್ಷ ಟನ್ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ತಲುಪುವ ಭಾರತದ ಗುರಿಯನ್ನು ಸಾಕಾರಗೊಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತಿದೆ.
ಗೈನಾಂಡ್ರೊಮಾರ್ಫಿ (Gynandromorphy)
ಪರಿಸರ
ಇದೀಗ ಸುದ್ದಿಯಲ್ಲಿದೆ:
- ಪಶ್ಚಿಮ ಘಟ್ಟಗಳಲ್ಲಿರುವ ಕೇರಳದ ‘ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನ’ದಲ್ಲಿ ಕಂಡುಬರುವ ‘ವೆಲಾ ಕಾರ್ಲಿ’ ಎಂಬ ಸಿಹಿನೀರಿನ ಏಡಿ ಪ್ರಭೇದದಲ್ಲಿ ಅತ್ಯಂತ ಅಪರೂಪದ ‘ಗೈನಾಂಡ್ರೊಮಾರ್ಫಿ’ ಪ್ರಕರಣವು ಇತ್ತೀಚಿಗೆ ವರದಿಯಾಗಿದೆ.
ಗೈನಾಂಡ್ರೊಮಾರ್ಫಿ ಎಂದರೆ ಏನು?
- ‘ಗೈನಾಂಡ್ರೊಮಾರ್ಫಿ’ ಎಂದರೆ ಒಂದೇ ಜೀವಿಯಲ್ಲಿ ಗಂಡು ಮತ್ತು ಹೆಣ್ಣಿನ ಲಕ್ಷಣಗಳೆರಡೂ ಏಕಕಾಲದಲ್ಲಿ ಅಸ್ತಿತ್ವದಲ್ಲಿರುವ (ಕಂಡುಬರುವ) ಒಂದು ಅತ್ಯಂತ ಅಪರೂಪದ ಜೈವಿಕ ಸ್ಥಿತಿಯಾಗಿದೆ.
- ಕಾರಣಗಳು:- ಈ ಅಪರೂಪದ ಸ್ಥಿತಿಯು ಪ್ರಮುಖವಾಗಿ ಜೀವಕೋಶ ವಿಭಜನೆಯ ಪ್ರಕ್ರಿಯೆಯಲ್ಲಿನ (ಮೈಟೋಸಿಸ್ ಅಥವಾ ಮಿಯೋಸಿಸ್) ದೋಷಗಳಿಂದಾಗಿ ಅಥವಾ ಭ್ರೂಣದ ಆರಂಭಿಕ ಬೆಳವಣಿಗೆಯ ಹಂತದಲ್ಲಿ ಉಂಟಾಗುವ ವರ್ಣತಂತುಗಳ ವೈಪರೀತ್ಯಗಳಿಂದಾಗಿ ಸಂಭವಿಸುತ್ತದೆ.
ಗೈನಾಂಡ್ರೊಮಾರ್ಫಿ ಸ್ಥಿತಿಯು ಈ ಕೆಳಗಿನ ಜೈವಿಕ ಸ್ಥಿತಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ:
- ಹರ್ಮಾಫ್ರೋಡಿಟಿಸಂ (Hermaphroditism):- ಹರ್ಮಾಫ್ರೋಡಿಟಿಸಂ ಎಂಬ ಸ್ಥಿತಿಯಲ್ಲಿ ಜೀವಿಯು ಗಂಡು ಮತ್ತು ಹೆಣ್ಣು ಎರಡೂ ಲಿಂಗಗಳ ಕ್ರಿಯಾತ್ಮಕ ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿರುತ್ತದೆ.
- ಅಂತರ್ಲಿಂಗಿ (Intersex):- ಇಂಟರ್‌ಸೆಕ್ಸ್ ಎಂಬ ಸ್ಥಿತಿಯಲ್ಲಿ ಜೀವಿಯ ಲೈಂಗಿಕ ಗುಣಲಕ್ಷಣಗಳು ಮಿಶ್ರವಾಗಿರುತ್ತವೆಯೇ ಹೊರತು, ಅದರಲ್ಲಿ ಗಂಡು ಮತ್ತು ಹೆಣ್ಣಿನ ಲಕ್ಷಣಗಳ ಸ್ಪಷ್ಟವಾದ ಹಾಗೂ ಪ್ರತ್ಯೇಕವಾದ ಭಾಗಗಳು ಕಂಡುಬರುವುದಿಲ್ಲ.
ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದ ಬಗ್ಗೆ:
- ಈ ರಾಷ್ಟ್ರೀಯ ಉದ್ಯಾನವು ಕೇರಳ ರಾಜ್ಯದ ‘ನೀಲಗಿರಿ ಬೆಟ್ಟ’ಗಳ ಸಾಲಿನಲ್ಲಿ ನೆಲೆಗೊಂಡಿದೆ.
- ಸೈಲೆಂಟ್ ವ್ಯಾಲಿಯನ್ನು 1984 ರಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು ಹಾಗೂ 1985 ರಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.
- ನದಿಗಳು:- ಕಾವೇರಿ ನದಿಯ ಉಪನದಿಯಾದ ‘ಭವಾನಿ ನದಿ’ ಮತ್ತು ಭರತಪುಳ ನದಿಯ ಉಪನದಿಯಾದ ‘ಕುಂತಿಪುಳ ನದಿ’ಯು ಈ ಸೈಲೆಂಟ್ ವ್ಯಾಲಿಯ ಸಮೀಪದಲ್ಲಿಯೇ ಉಗಮಿಸುತ್ತವೆ.
- ಬುಡಕಟ್ಟು ಜನಾಂಗ:- ಈ ಉದ್ಯಾನವನದ ಗಡಿಯೊಳಗೆ ವಾಸಿಸುವ ಪ್ರಮುಖ ಸ್ಥಳೀಯ ಬುಡಕಟ್ಟು ಗುಂಪುಗಳಲ್ಲಿ ಇರುಳರು, ಕುರುಂಬರು, ಮುಡುಗರು ಮತ್ತು ಕಾಟ್ಟುನಾಯ್ಕರು ಸೇರಿದ್ದಾರೆ.



ನಿಮ್ಮದೊಂದು ಉತ್ತರ