‘ಅನುಪಮ್’ – ತ್ಯಾಜ್ಯ ನಿರ್ವಹಣಾ ಮಾದರಿ | ಓಲ್ ಚಿಕಿ ಲಿಪಿ | ಭೂ-ಆಧಾರ್ (ULPIN)

‘ಅನುಪಮ್’ – ತ್ಯಾಜ್ಯ ನಿರ್ವಹಣಾ ಮಾದರಿ

ಪರಿಸರ

ಇದೀಗ ಸುದ್ದಿಯಲ್ಲಿದೆ:

  • ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಗೃಹಬಳಕೆಯ ತ್ಯಾಜ್ಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ನಿರ್ಧರಿಸಿದ ಹಿನ್ನೆಲೆಯಲ್ಲಿ, ‘ಅನುಪಮ್’ ವಸತಿ ಸಮುಚ್ಚಯಗಳು ಈಗ ತಮ್ಮ ಸ್ವಂತ ಆವರಣದೊಳಗೆಯೇ ತ್ಯಾಜ್ಯವನ್ನು ವಿಂಗಡಿಸಿ, ಸಂಸ್ಕರಿಸುವ ಕಾರ್ಯಕ್ಕೆ ಚಾಲನೆ ನೀಡಿವೆ.

‘ಅನುಪಮ್’ – ತ್ಯಾಜ್ಯ ನಿರ್ವಹಣಾ ಮಾದರಿಯ ಬಗ್ಗೆ:

  • ಇದು ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) 2025 ರಲ್ಲಿ ಪ್ರಾರಂಭಿಸಿದ ಒಂದು ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣಾ ಕಾರ್ಯತಂತ್ರವಾಗಿದೆ.
  • ಉದ್ದೇಶ:- ಶೂನ್ಯ-ತ್ಯಾಜ್ಯ  ಮತ್ತು ಸ್ವಯಂ-ಸುಸ್ಥಿರ ನಗರ ಜೀವನವನ್ನು ಸಾಧಿಸುವುದು.
  • ಅನುಪಮ್ ಪದದ ಅರ್ಥ:- ‘ಅನುಪಮ್’ ಎಂಬ ಹಿಂದಿ ಪದವನ್ನು, ಈ ವಸತಿ ಸಮುಚ್ಚಯಗಳ ತ್ಯಾಜ್ಯ ನಿರ್ವಹಣಾ ಪದ್ಧತಿಗಳು ಅದ್ವಿತೀಯ ಹಾಗೂ ಅನುಪಮ ಎಂದು ಬಿಂಬಿಸಲು ಆಯ್ಕೆ ಮಾಡಲಾಗಿದೆ.

ಮೂಲ ತತ್ವಗಳು ಮತ್ತು ವೈಶಿಷ್ಟ್ಯಗಳು:

  • ವಿಶಿಷ್ಟತೆ:- ಈ ಮಾದರಿಯು ಸಾಂಪ್ರದಾಯಿಕವಾದ ‘ಕೇಂದ್ರೀಕೃತ ತ್ಯಾಜ್ಯ ವಿಲೇವಾರಿ’ ಪದ್ಧತಿಯಿಂದ ಹೊರಬಂದು, ‘ಸ್ಥಳದಲ್ಲೇ ಸಂಪನ್ಮೂಲ ನಿರ್ವಹಣೆ’ ಮಾಡುವತ್ತ ಗಮನಹರಿಸುತ್ತದೆ.
  • ಮೂಲದಲ್ಲೇ 100% ವಿಂಗಡಣೆ:- ನಿವಾಸಿಗಳು ತಮ್ಮ ತ್ಯಾಜ್ಯವನ್ನು 3 ಪ್ರಾಥಮಿಕ ವಿಭಾಗಗಳಾಗಿ ವಿಂಗಡಿಸುವುದು ಕಡ್ಡಾಯವಾಗಿದೆ: 
  1. ಹಸಿ ತ್ಯಾಜ್ಯ , 
  2. ಒಣ ತ್ಯಾಜ್ಯ, 
  3. ನೈರ್ಮಲ್ಯ ತ್ಯಾಜ್ಯ.

ವೈಜ್ಞಾನಿಕ ಸಂಸ್ಕರಣೆ:

  • ಹಸಿ ತ್ಯಾಜ್ಯ:- ತಂತಿಜಾಲದ ತೊಟ್ಟಿಗಳು ಅಥವಾ ಸಾವಯವ ತ್ಯಾಜ್ಯ ಪರಿವರ್ತಕಗಳನ್ನು (OWC) ಬಳಸಿ ಸ್ಥಳದಲ್ಲೇ ಗೊಬ್ಬರ (ಕಾಂಪೋಸ್ಟ್) ಮಾಡಲಾಗುತ್ತದೆ.
  • ಒಣ ತ್ಯಾಜ್ಯ:- ಸ್ಥಳೀಯ ಸಂಪನ್ಮೂಲ ಮರುಪಡೆಯುವಿಕೆ ಕೇಂದ್ರಗಳಲ್ಲಿ (MRF) ಕಾಗದ, ಲೋಹ, ಗಾಜು, ಇ-ತ್ಯಾಜ್ಯ ಮುಂತಾದ 12 ವಿಭಿನ್ನ ವರ್ಗಗಳಾಗಿ ಸೂಕ್ಷ್ಮವಾಗಿ ವಿಂಗಡಿಸಲಾಗುತ್ತದೆ.
  • ತೋಟಗಾರಿಕಾ ತ್ಯಾಜ್ಯ:- ವಸತಿ ಸಮುಚ್ಚಯದೊಳಗೆ ಗೊಬ್ಬರ (ಕಾಂಪೋಸ್ಟ್) ಅಥವಾ ಪರಿಸರ ಸ್ನೇಹಿ ಜೈವಿಕ ಇಂಧನ ಗಟ್ಟಿಗಳಾಗಿ ಪರಿವರ್ತಿಸಲಾಗುತ್ತದೆ.

ಇತರ ಪ್ರಮುಖ ಆಯಾಮಗಳು:

  • ಸಮುದಾಯ-ನೇತೃತ್ವದ ಆಡಳಿತ:- ಸಾಂಪ್ರದಾಯಿಕ ಶ್ರೇಣೀಕೃತ ಆದೇಶಾಧಾರಿತ (Top-down) ನಗರ ಸ್ಥಳೀಯ ಸಂಸ್ಥೆ ಆಡಳಿತದ ಬದಲಾಗಿ, ಇದರ ನಿರ್ವಹಣೆಯನ್ನು ಸ್ಥಳೀಯ ‘ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು’  ಮತ್ತು ಸರ್ಕಾರೇತರ ಸಂಸ್ಥೆಗಳು ನೋಡಿಕೊಳ್ಳುತ್ತವೆ. ಇದು ವಿಕೇಂದ್ರೀಕೃತ ಆಡಳಿತಕ್ಕೆ ಉತ್ತಮ ಉದಾಹರಣೆಯಾಗಿದೆ.
  • RRR ಕೇಂದ್ರಗಳು ಮತ್ತು “ನೇಕಿ ಕೀ ದೀವಾರ್” (ಉದಾರತೆಯ ಗೋಡೆ):- ಈ ಕೇಂದ್ರಗಳು ಪರಿಸರ ಸಂರಕ್ಷಣೆಯ ಜಾಗತಿಕ ಸೂತ್ರವಾದ ‘RRR’ (ಬಳಕೆ ಕಡಿತ – Reduce, ಮರುಬಳಕೆ – Reuse, ಮತ್ತು ಮರುಸಂಸ್ಕರಣೆ – Recycle) ತತ್ವವನ್ನು ಅಳವಡಿಸಿಕೊಂಡಿರುವ ವಿಶಿಷ್ಟ ತಾಣಗಳಾಗಿವೆ. ಇವು ತ್ಯಾಜ್ಯ ಉತ್ಪಾದನೆಯನ್ನು ತಡೆಗಟ್ಟುವಲ್ಲಿ ಮತ್ತು ಸಂಪನ್ಮೂಲಗಳ ಸಮರ್ಪಕ ಬಳಕೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
  • ತ್ಯಾಜ್ಯದಿಂದ ಸಂಪತ್ತು:- ಈ ಪ್ರಕ್ರಿಯೆಯಲ್ಲಿ ಉತ್ಪಾದನೆಯಾದ ಗೊಬ್ಬರವನ್ನು ನಿವಾಸಿಗಳಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಮರುಸಂಸ್ಕರಣೆಗೆ ಯೋಗ್ಯವಾದ ವಸ್ತುಗಳನ್ನು ಮಾರಾಟ ಮಾಡುವುದರಿಂದ ಬರುವ ಆದಾಯವನ್ನು ಅದೇ ವಸತಿ ಸಮುಚ್ಚಯದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ.

ಓಲ್ ಚಿಕಿ ಲಿಪಿ

ಸಂಸ್ಕೃತಿ

ಇದೀಗ ಸುದ್ದಿಯಲ್ಲಿದೆ:

  • ಇತ್ತೀಚಿಗೆ, ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಓಲ್ ಚಿಕಿ’ ಲಿಪಿಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿದರು. ಈ ವೇಳೆ ಅವರು ‘ಸಂತಾಲ್’ ಬುಡಕಟ್ಟು ಪರಂಪರೆಯನ್ನು ಸಂರಕ್ಷಿಸುವಲ್ಲಿ ಈ ಲಿಪಿಯ ಪ್ರಾಮುಖ್ಯತೆಯನ್ನು ಸಾರಿ ಹೇಳಿದರು.

ಓಲ್ ಚಿಕಿ ಲಿಪಿಯ ಬಗ್ಗೆ:

  • ಅಭಿವೃದ್ಧಿ:- ಸಂತಾಲಿ ಭಾಷೆಗಾಗಿ ಒಂದು ಪ್ರತ್ಯೇಕ ಹಾಗೂ ಮೀಸಲಾದ ಬರವಣಿಗೆಯ ವ್ಯವಸ್ಥೆಯನ್ನು ಒದಗಿಸುವ ಉದ್ದೇಶದಿಂದ, 1925 ರಲ್ಲಿ ಪಂಡಿತ್ ರಘುನಾಥ್ ಮುರ್ಮು ಅವರು ಈ ‘ಓಲ್ ಚಿಕಿ’ ಲಿಪಿಯನ್ನು ಅಭಿವೃದ್ಧಿಪಡಿಸಿದರು.
  • ಅಕ್ಷರಗಳ ವಿನ್ಯಾಸ:- ಇದು ಒಟ್ಟು 30 ಅಕ್ಷರಗಳನ್ನು ಒಳಗೊಂಡಿದೆ.
  • ವೈಶಿಷ್ಟ್ಯ:- ಸಂತಾಲಿ ಭಾಷೆಯ ವಿಶಿಷ್ಟ ಧ್ವನಿ ವಿಜ್ಞಾನವನ್ನು ನಿಖರವಾಗಿ ಸೆರೆಹಿಡಿಯಲು ಮತ್ತು ಅದರ ಶಬ್ದಕೋಶ ಹಾಗೂ ವ್ಯಾಕರಣವನ್ನು ವ್ಯವಸ್ಥಿತವಾಗಿ ದಾಖಲಿಸಲು ಅನುಕೂಲವಾಗುವಂತೆ ಈ ಲಿಪಿಯನ್ನು ಅತ್ಯಂತ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ.

ಸಂತಾಲಿ ಭಾಷೆಯ ಬಗ್ಗೆ:

  • ಭಾಷಾ ಕುಟುಂಬ:- ಸಂತಾಲಿ ಭಾಷೆಯು ‘ಆಸ್ಟ್ರೋ-ಏಷ್ಯಾಟಿಕ್’ ಭಾಷಾ ಕುಟುಂಬಕ್ಕೆ ಸೇರಿದೆ.
  • ಹಂಚಿಕೆ:- ಈ ಭಾಷೆಯನ್ನು ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಬಿಹಾರ ರಾಜ್ಯಗಳಲ್ಲಿ ವ್ಯಾಪಕವಾಗಿ ಮಾತನಾಡಲಾಗುತ್ತದೆ.
  • ಸಾಂವಿಧಾನಿಕ ಮಾನ್ಯತೆ:- ಸಂತಾಲಿ ಭಾಷೆಯನ್ನು 2003 ರಲ್ಲಿ (92ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ) ಭಾರತೀಯ ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಲಾಯಿತು.

ಭೂ-ಆಧಾರ್ (ULPIN)

ಆಡಳಿತ

ಇದೀಗ ಸುದ್ದಿಯಲ್ಲಿದೆ: 

  • ಇತ್ತೀಚಿಗೆ, ದೆಹಲಿ ಸರ್ಕಾರವು ರಾಜಧಾನಿ ಪ್ರದೇಶದ  ಪ್ರತಿಯೊಂದು ಜಮೀನು ಹಾಗೂ ನಿವೇಶನಕ್ಕೂ 14-ಅಂಕಿಯ ‘ವಿಶಿಷ್ಟ ಭೂ-ನಿರ್ದಿಷ್ಟ ಭಾಗದ ಗುರುತಿನ ಸಂಖ್ಯೆ’ (ULPIN) ಅನ್ನು ನಿಯೋಜಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದನ್ನು ಜನಪ್ರಿಯವಾಗಿ ‘ಭೂ-ಆಧಾರ್’ ಎಂದು ಕರೆಯಲಾಗುತ್ತದೆ.

ಭೂ-ಆಧಾರ್ (ULPIN) ಬಗ್ಗೆ:

  • ULPIN ಸಂಪೂರ್ಣ ರೂಪ:- ಯೂನಿಕ್ ಲ್ಯಾಂಡ್ ಪಾರ್ಸೆಲ್ ಐಡೆಂಟಿಫಿಕೇಷನ್ ನಂಬರ್.
  • ಇದು ಕೇಂದ್ರ ಸರ್ಕಾರದ ‘ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮ’ದ (DILRMP) ಒಂದು ಪ್ರಮುಖ ಭಾಗವಾಗಿದೆ.
  • ಇದು ಆಯಾ ಜಮೀನಿನ ಭೌಗೋಳಿಕ ರೇಖಾಂಶ ಮತ್ತು ಅಕ್ಷಾಂಶಗಳ ನಿರ್ದೇಶಾಂಕಗಳ ಆಧಾರದ ಮೇಲೆ ನೀಡಲಾಗುವ ಭೂ-ನಿರ್ದಿಷ್ಟ ಭಾಗದ 14-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ.
  • ಈ ವ್ಯವಸ್ಥೆಯಲ್ಲಿ ಹೆಚ್ಚಿನ ನಿಖರತೆಯನ್ನು ಸಾಧಿಸುವ ಸಲುವಾಗಿ ಭೂಪಟ ಚಿತ್ರಣ (ಜಿಐಎಸ್ ಮ್ಯಾಪಿಂಗ್), ಡ್ರೋನ್ ಸಮೀಕ್ಷೆಗಳು ಮತ್ತು ಜ್ಯಾಮಿತೀಯವಾಗಿ ದೋಷಮುಕ್ತಗೊಳಿಸಿದ (ಆರ್ಥೋ-ರೆಕ್ಟಿಫೈಡ್) ಸಂಯೋಜಿಸಿ ಬಳಸಲಾಗುತ್ತದೆ.
  • ಭಾರತದ ಪ್ರಜೆಗಳಿಗೆ ‘ಆಧಾರ್’ ಕಾರ್ಡ್ ಇರುವಂತೆಯೇ, ಇದು ಪ್ರತಿಯೊಂದು ಭೂ-ನಿರ್ದಿಷ್ಟ ಭಾಗಗಳಿಗೆ ‘ಡಿಜಿಟಲ್ ಗುರುತಿನ ಚೀಟಿ’ಯಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಾಮುಖ್ಯತೆ ಮತ್ತು ಮಹತ್ವ:

  • ಪಾರದರ್ಶಕತೆ ಮತ್ತು ಭದ್ರತೆ:- ಭೂ-ಸ್ಥಳೀಯ (ಜಿಯೋ-ಸ್ಪೇಷಿಯಲ್) ತಂತ್ರಜ್ಞಾನದ ಮೂಲಕ ಭೂ ದಾಖಲೆಗಳನ್ನು ಆಧುನೀಕರಿಸುವುದು, ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು ಮತ್ತು ನಕಲಿ ದಾಖಲೆಗಳ ಸೃಷ್ಟಿ ಹಾಗೂ ವಂಚನೆಯ ಭೂ-ವಹಿವಾಟುಗಳನ್ನು ತಡೆಗಟ್ಟುವುದು ಇದರ ಪ್ರಮುಖ ಉದ್ದೇಶವಾಗಿದೆ.
  • ಸ್ವಾಮಿತ್ವ ಯೋಜನೆಗೆ ಪೂರಕ:- ಈ ಉಪಕ್ರಮವು ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ಹಕ್ಕುಗಳನ್ನು ಒದಗಿಸುವ ‘ಸ್ವಾಮಿತ್ವ ಯೋಜನೆ’ಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. (ಈಗಾಗಲೇ ದೆಹಲಿಯ 48 ಹಳ್ಳಿಗಳನ್ನು ಈ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ).

ಚೀರ್ ಫೆಸೆಂಟ್ (Cheer Pheasant)

ಪರಿಸರ

ಇದೀಗ ಸುದ್ದಿಯಲ್ಲಿದೆ:

  • ಇತ್ತೀಚಿಗೆ, ‘ಬರ್ಡ್‌ಲೈಫ್ ಇಂಟರ್‌ನ್ಯಾಷನಲ್’  ಮತ್ತು ‘ಅಂತರರಾಷ್ಟ್ರೀಯ ನಿಸರ್ಗ ಸಂರಕ್ಷಣೆ ಒಕ್ಕೂಟ (IUCN) ಈ ‘ಚೀರ್ ಫೆಸೆಂಟ್’ ಪಕ್ಷಿಯನ್ನು ‘ದುರ್ಬಲ’ (VU) ಪ್ರಭೇದಗಳ ಪಟ್ಟಿಗೆ ಸೇರಿಸಿವೆ.

ಚೀರ್ ಫೆಸೆಂಟ್ ಪಕ್ಷಿಯ ಬಗ್ಗೆ:

  • ವೈಜ್ಞಾನಿಕ ಹೆಸರು:- ಕ್ಯಾಟ್ರಿಯಸ್ ವಾಲೈಚೈ. + ಇದನ್ನು ‘ವಾಲೈಚ್‌ನ ಫೆಸೆಂಟ್’ ಅಥವಾ ‘ಚಿರ್ ಫೆಸೆಂಟ್’ ಎಂದೂ ಕರೆಯಲಾಗುತ್ತದೆ.
  • ಆವಾಸಸ್ಥಾನ:- ಇದು ಕೇವಲ ಪಶ್ಚಿಮ ಹಿಮಾಲಯ ಪ್ರದೇಶಕ್ಕೆ ಮಾತ್ರ ಸೀಮಿತವಾದ (ಸ್ಥಳೀಯ) ಹಾಗೂ ನೆಲದ ಮೇಲೆಯೇ ವಾಸಿಸುವ ಪಕ್ಷಿಯಾಗಿದೆ. ಇದು ಪ್ರಮುಖವಾಗಿ ಪಾಕಿಸ್ತಾನ, ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯ ನೇಪಾಳದಲ್ಲಿ ಕಂಡುಬರುತ್ತದೆ.
  • ಆಹಾರ ಪದ್ಧತಿ:- ಇದು ಮುಖ್ಯವಾಗಿ ಸಸ್ಯಗಳ ಬೇರುಗಳು, ಗೆಡ್ಡೆಗಳು, ಬೀಜಗಳು, ಕಾಡುಹಣ್ಣುಗಳು ಮತ್ತು ಕೆಲವೊಮ್ಮೆ ಕೀಟಗಳು ಅಥವಾ ಹುಳುಗಳನ್ನು ಸೇವಿಸುತ್ತದೆ.
  • ವಿಶಿಷ್ಟ ನಡವಳಿಕೆ:-
    • ಜನ್ಮಸ್ಥಳದ ನಿಷ್ಠೆ:- ಈ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ತಾವು ಜನಿಸಿದ ಸ್ಥಳಕ್ಕೇ ಮರಳುವ ಅತ್ಯಂತ ವಿಶಿಷ್ಟವಾದ ನಡವಳಿಕೆಯನ್ನು ಹೊಂದಿವೆ. (ಪರಿಸರ ವಿಜ್ಞಾನದಲ್ಲಿ ಇದನ್ನು ‘ನ್ಯಾಟಲ್ ಫಿಲೋಪ್ಯಾಟ್ರಿ’ ಎನ್ನುತ್ತಾರೆ).
    • ಏಕಸಂಗಾತಿ ಪದ್ಧತಿ:- ಇವು ಬಹುಪಾಲು ತಮ್ಮ ಜೀವಿತಾವಧಿಯಲ್ಲಿ ಕೇವಲ ಒಬ್ಬ ಸಂಗಾತಿಯನ್ನು ಮಾತ್ರ ಹೊಂದಿರುತ್ತವೆ.

ಸಂರಕ್ಷಣೆಗೆ ಇರುವ ಪ್ರಮುಖ ಅಪಾಯಗಳು:

  • ಬೇಟೆ:- ಮಾಂಸಕ್ಕಾಗಿ ಮತ್ತು ಇತರ ಕಾರಣಗಳಿಗಾಗಿ ಅಕ್ರಮ ಬೇಟೆಯು ಪ್ರಮುಖ ಬೆದರಿಕೆಯಾಗಿದೆ. 
  • ಆವಾಸಸ್ಥಾನದ ಅವನತಿ:- ನೈಸರ್ಗಿಕ ಹುಲ್ಲುಗಾವಲುಗಳನ್ನು ಕೃಷಿ ಭೂಮಿಯಾಗಿ ಪರಿವರ್ತಿಸುತ್ತಿರುವುದು ಇವುಗಳ ನೆಲೆಗೆ ಸಂಚಕಾರ ತಂದಿದೆ.
  • ಕಾಡ್ಗಿಚ್ಚು:- ಇವು ನೆಲದ ಮೇಲೆಯೇ ಗೂಡು ಕಟ್ಟುವುದರಿಂದ, ಸಂತಾನೋತ್ಪತ್ತಿ ಅವಧಿಯಲ್ಲಿ (ಏಪ್ರಿಲ್-ಜೂನ್) ಉಂಟಾಗುವ ಕಾಡ್ಗಿಚ್ಚುಗಳು ಇವುಗಳ ಗೂಡುಗಳನ್ನು ಮತ್ತು ಮೊಟ್ಟೆಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತವೆ.

ಸಂರಕ್ಷಣಾ ಪ್ರಯತ್ನಗಳು:

  • ಈ ಪ್ರಭೇದದ ರಕ್ಷಣೆಗಾಗಿ ಹಿಮಾಚಲ ಪ್ರದೇಶದ ‘ಚೈಲ್’ ನಲ್ಲಿ ಈ ಪಕ್ಷಿಗೆಂದೇ ಮೀಸಲಾದ ಪ್ರತ್ಯೇಕ ‘ಸಂರಕ್ಷಣಾ ತಳಿ/ಸಂತಾನೋತ್ಪತ್ತಿ ಕೇಂದ್ರ’ವನ್ನು ಸ್ಥಾಪಿಸಲಾಗಿದೆ.

ಸಂರಕ್ಷಣಾ ಸ್ಥಾನಮಾನ:

  • IUCN ಕೆಂಪು ಪಟ್ಟಿ:-  ದುರ್ಬಲ (VU).
  • ಭಾರತೀಯ ವನ್ಯಜೀವಿ (ರಕ್ಷಣೆ) ಕಾಯ್ದೆ, 1972:- ಅನುಸೂಚಿ I.

CITES:- ಅನುಬಂಧ  I

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts