ಇಂಡೋ-ಪೆಸಿಫಿಕ್ ಸಾಗರ ಉಪಕ್ರಮಕ್ಕೆ (IPOI)- ಸ್ಪೇನ್ ಸೇರ್ಪಡೆ
ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಭಾರತದ ನೇತೃತ್ವದ ‘ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ’ಕ್ಕೆ (IPOI) ಸ್ಪೇನ್ ಅಧಿಕೃತವಾಗಿ ಸೇರ್ಪಡೆಗೊಂಡಿರುವುದನ್ನು ಭಾರತವು ಸ್ವಾಗತಿಸಿದೆ.
ಇಂಡೋ-ಪೆಸಿಫಿಕ್ ಸಾಗರ ಉಪಕ್ರಮದ (IPOI) ಬಗ್ಗೆ:
-
- ಪ್ರಾರಂಭ:- 2019ರ ನವೆಂಬರ್ನಲ್ಲಿ ಬ್ಯಾಂಕಾಕ್ನಲ್ಲಿ ಜರುಗಿದ ಆಸಿಯಾನ್ (ASEAN) ನೇತೃತ್ವದ ‘ಪೂರ್ವ ಏಷ್ಯಾ ಶೃಂಗಸಭೆ’ಯಲ್ಲಿ (EAS) ಭಾರತವು ಈ ಮಹತ್ವಾಕಾಂಕ್ಷಿ ಉಪಕ್ರಮವನ್ನು ಘೋಷಿಸಿತು.
- ಪ್ರಮುಖ ಉದ್ದೇಶಗಳು:
- ಮುಕ್ತ ಮತ್ತು ಒಳಗೊಳ್ಳುವ ವಲಯ:- ‘ಮುಕ್ತ, ತೆರೆದ ಮತ್ತು ಒಳಗೊಳ್ಳುವ ಇಂಡೋ-ಪೆಸಿಫಿಕ್’ ವಲಯವನ್ನು ಉತ್ತೇಜಿಸುವುದು.
- ನಿಯಮಾಧಾರಿತ ವ್ಯವಸ್ಥೆ:- ನಿಯಮಾಧಾರಿತ ಪ್ರಾದೇಶಿಕ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಸಮಾನ ಮನಸ್ಕ ರಾಷ್ಟ್ರಗಳ ನಡುವೆ ಸಹಕಾರವನ್ನು ವೃದ್ಧಿಸುವುದು.
- ಸಮಗ್ರ ಅಭಿವೃದ್ಧಿ:- ಸಾಗರ ಕಡಲ ವಲಯದಲ್ಲಿ ಸುರಕ್ಷತೆ, ಭದ್ರತೆ, ಸುಸ್ಥಿರತೆ ಮತ್ತು ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವುದು.
- ಕಾರ್ಯತಂತ್ರದ ಚೌಕಟ್ಟು:- ಈ ಉಪಕ್ರಮವು ಪ್ರಾದೇಶಿಕ ಸಹಕಾರದ ಅಸ್ತಿತ್ವದಲ್ಲಿರುವ ಚೌಕಟ್ಟುಗಳು ಮತ್ತು ಕಾರ್ಯವಿಧಾನಗಳ ಆಧಾರದ ಮೇಲೆ ರೂಪುಗೊಂಡಿದ್ದು, ಪ್ರಮುಖವಾಗಿ 7 ಆದ್ಯತಾ ಕ್ಷೇತ್ರಗಳ ಮೇಲೆ ಗಮನ ಹರಿಸುತ್ತದೆ. ಅವುಗಳೆಂದರೆ,
- ಕಡಲ ಭದ್ರತೆ
- ಕಡಲ ಪರಿಸರ ವಿಜ್ಞಾನ
- ಕಡಲ ಸಂಪನ್ಮೂಲಗಳು
- ಸಾಮರ್ಥ್ಯ ವೃದ್ಧಿ ಮತ್ತು ಸಂಪನ್ಮೂಲ ಹಂಚಿಕೆ
- ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣೆ
- ವಿಜ್ಞಾನ, ತಂತ್ರಜ್ಞಾನ ಮತ್ತು ಶೈಕ್ಷಣಿಕ ಸಹಕಾರ
- ವ್ಯಾಪಾರ, ಸಂಪರ್ಕ ಮತ್ತು ಕಡಲ ಸಾರಿಗೆ
ದೀರ್ಘ ಶ್ರೇಣಿಯ ನೌಕಾ ವಿರೋಧಿ ಅತಿವೇಗ (ಹೈಪರ್ಸಾನಿಕ್) ಕ್ಷಿಪಣಿ (LR-AShM)
ರಕ್ಷಣೆ

ಇದೀಗ ಸುದ್ದಿಯಲ್ಲಿದೆ:
- ನವದೆಹಲಿಯ ಕರ್ತವ್ಯ ಪಥದಲ್ಲಿ ಜರುಗಿದ 77ನೇ ಗಣರಾಜ್ಯೋತ್ಸವದ ಪರೇಡ್ನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ತನ್ನ ‘ದೀರ್ಘ ಶ್ರೇಣಿಯ ನೌಕಾ ವಿರೋಧಿ ಅತಿವೇಗ (ಹೈಪರ್ಸಾನಿಕ್) ಕ್ಷಿಪಣಿ’ಯನ್ನು (LR-AShM) ಅದರ ಉಡಾವಣಾ ವಾಹನದೊಂದಿಗೆ ಅಧಿಕೃತವಾಗಿ ಪ್ರದರ್ಶಿಸಿತು.
ದೀರ್ಘ ಶ್ರೇಣಿಯ ನೌಕಾ ವಿರೋಧಿ ಅತಿವೇಗ (ಹೈಪರ್ಸಾನಿಕ್) ಕ್ಷಿಪಣಿ (LR-AShM)ಯ ಬಗ್ಗೆ:
- ಅಭಿವೃದ್ಧಿಪಡಿಸಿದ ಸಂಸ್ಥೆ:- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO).
- ವಿನ್ಯಾಸ ಮತ್ತು ಉದ್ದೇಶ:- ಇದು ಪ್ರಮುಖವಾಗಿ ಭಾರತೀಯ ನೌಕಾಪಡೆಯ ಕರಾವಳಿ ರಕ್ಷಣೆ ಮತ್ತು ನಿಖರ ದಾಳಿಯ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ‘ಹೈಪರ್ಸಾನಿಕ್ ಗ್ಲೈಡ್ ಕ್ಷಿಪಣಿ’ ಆಗಿದೆ.
- ಸ್ವದೇಶಿ ತಂತ್ರಜ್ಞಾನ:- ಇದು ತನ್ನದೇ ಮಾದರಿಯ ಚೊಚ್ಚಲ ಸ್ವದೇಶಿ ವ್ಯವಸ್ಥೆಯಾಗಿದ್ದು, ಸಂಪೂರ್ಣ ದೇಶೀಯ ವಿಮಾನಯಾನ ವಿದ್ಯುನ್ಮಾನ ಮತ್ತು ಅತ್ಯಂತ ನಿಖರವಾದ ಸಂವೇದಕ ವ್ಯವಸ್ಥೆಗಳನ್ನು ಹೊಂದಿದೆ.
- ವೇಗ:- ಈ ಕ್ಷಿಪಣಿಯು ‘ಮ್ಯಾಕ್ 10’ (ಶಬ್ದದ ವೇಗಕ್ಕಿಂತ 10 ಪಟ್ಟು ಹೆಚ್ಚು) ವರೆಗಿನ ಗರಿಷ್ಠ ವೇಗವನ್ನು ತಲುಪಬಲ್ಲದು ಹಾಗೂ ‘ಮ್ಯಾಕ್ 5’ ರ ಸರಾಸರಿ ಹೈಪರ್ಸಾನಿಕ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
ಈ ಕ್ಷಿಪಣಿಯ ಮಹತ್ವ:
- ರಹಸ್ಯ ಕಾರ್ಯಾಚರಣೆ:- ಇದರ ಕಡಿಮೆ ಎತ್ತರದ ಹಾರಾಟ, ಅತಿ ಹೆಚ್ಚಿನ ವೇಗ ಮತ್ತು ಅಸಾಧಾರಣ ಚಲನಾ ನಮ್ಯತೆಯು (ತ್ವರಿತವಾಗಿ ದಿಕ್ಕು ಬದಲಿಸುವ ಸಾಮರ್ಥ್ಯ) ಶತ್ರುಗಳ ನೆಲ-ಆಧಾರಿತ ಮತ್ತು ಹಡಗು-ಆಧಾರಿತ ರೇಡಾರ್ಗಳ ಕಣ್ಣಿಗೆ ಬೀಳದಂತೆ ಗುರಿಯತ್ತ ತಲುಪಲು ಗಣನೀಯವಾಗಿ ಸಹಾಯ ಮಾಡುತ್ತದೆ. (ಇದರಿಂದ ಶತ್ರುಗಳು ಈ ಕ್ಷಿಪಣಿಯನ್ನು ತಡೆಯುವುದು ಅಸಾಧ್ಯವಾಗುತ್ತದೆ).



ನಿಮ್ಮದೊಂದು ಉತ್ತರ