ಸಂಪೂರ್ಣತಾ ಅಭಿಯಾನ 2.0
ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ನೀತಿ ಆಯೋಗವು ‘ಸಂಪೂರ್ಣತಾ ಅಭಿಯಾನ 2.0’ ಎಂಬ ವಿನೂತನ ಅಭಿಯಾನವನ್ನು ಜಾರಿಗೊಳಿಸಿದೆ.
ಸಂಪೂರ್ಣತಾ ಅಭಿಯಾನ 2.0 ರ ಬಗ್ಗೆ:
- ದೇಶದಾದ್ಯಂತ ಗುರುತಿಸಲಾಗಿರುವ ‘ಮಹತ್ವಾಕಾಂಕ್ಷೆಯ ಜಿಲ್ಲೆಗಳು’ ಮತ್ತು ‘ಮಹತ್ವಾಕಾಂಕ್ಷೆಯ ಬ್ಲಾಕ್ಗಳಲ್ಲಿ’ ನಿರ್ಣಾಯಕ ಅಭಿವೃದ್ಧಿ ಸೂಚಕಗಳ 100% ರಷ್ಟು ಸಾಧನೆಯನ್ನು ಖಚಿತಪಡಿಸಿಕೊಳ್ಳುವ ಗುರಿಯೊಂದಿಗೆ ಈ ಅಭಿಯಾನವನ್ನು ರೂಪಿಸಲಾಗಿದೆ.
- ನಿರ್ದಿಷ್ಟ ‘ಪ್ರಮುಖ ಕಾರ್ಯಕ್ಷಮತಾ ಸೂಚಕಗಳನ್ನು’ (KPIs) ಸಾಧಿಸುವ ಉದ್ದೇಶದಿಂದ, ಈ ಅಭಿಯಾನವು ದೇಶದ 112 ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು 513 ಮಹತ್ವಾಕಾಂಕ್ಷೆಯ ಬ್ಲಾಕ್ಗಳನ್ನು ಗುರಿಯಾಗಿಸಿಕೊಂಡಿದೆ.
ಮಹತ್ವಾಕಾಂಕ್ಷೆಯ ಬ್ಲಾಕ್ಗಳಿಗಾಗಿ ಪ್ರಮುಖ ಕಾರ್ಯಕ್ಷಮತಾ ಸೂಚಕಗಳು:
- ಪೌಷ್ಟಿಕಾಂಶ:- ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಡಿ (ICDS) 6 ತಿಂಗಳಿನಿಂದ 6 ವರ್ಷದೊಳಗಿನ ಮಕ್ಕಳಿಗೆ ನಿಯಮಿತವಾಗಿ ಪೂರಕ ಪೌಷ್ಟಿಕಾಂಶವನ್ನು ಒದಗಿಸುವುದು.
- ಮೇಲ್ವಿಚಾರಣೆ:- ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಬೆಳವಣಿಗೆಯ ಮಾಸಿಕ ಅಳತೆ ಮತ್ತು ದಾಖಲಾತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು.
- ಮೂಲಸೌಕರ್ಯ:- ಕುಡಿಯುವ ನೀರು ಮತ್ತು ಕಾರ್ಯನಿರ್ವಹಿಸುವ ಶೌಚಾಲಯದ ಸೌಲಭ್ಯವನ್ನು ಹೊಂದಿರುವ ಸುಸಜ್ಜಿತ ಅಂಗನವಾಡಿ ಕೇಂದ್ರಗಳನ್ನು ಹೊಂದುವುದು.
- ಶಿಕ್ಷಣ:- ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಸಾಕಷ್ಟು ಪ್ರಮಾಣದಲ್ಲಿ ಶೌಚಾಲಯ ಸೌಲಭ್ಯಗಳನ್ನು ಕಲ್ಪಿಸುವುದು.
- ಕೃಷಿ ಮತ್ತು ಪಶುಸಂಗೋಪನೆ:- ಕಾಲು ಮತ್ತು ಬಾಯಿ ರೋಗವನ್ನು (FMD) ತಡೆಗಟ್ಟಲು ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕುವುದು.
ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗಾಗಿ ಪ್ರಮುಖ ಕಾರ್ಯಕ್ಷಮತಾ ಸೂಚಕಗಳು:
- ಇದು ಪ್ರಾಥಮಿಕವಾಗಿ ಆರೋಗ್ಯ, ಪೌಷ್ಟಿಕಾಂಶ ಮತ್ತು ಶಿಕ್ಷಣ ಕ್ಷೇತ್ರಗಳ ಮೇಲೆ ವಿಶೇಷ ಗಮನ ಹರಿಸುತ್ತದೆ. ಜನನದ ಸಮಯದಲ್ಲಿ ತೂಕ ಮಾಡಲಾದ ಶಿಶುಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಕ್ಷಯರೋಗ (TB) ಪ್ರಕರಣಗಳ ವರದಿ ಮಾಡುವಿಕೆಯನ್ನು ಸುಧಾರಿಸುವುದು ಈ ಸೂಚಕಗಳಲ್ಲಿ ಸೇರಿದೆ.
‘ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ’ದ ಬಗ್ಗೆ:
- ಪ್ರಾರಂಭ:- 2018
- ಉದ್ದೇಶ:- ದೇಶಾದ್ಯಂತ ಹಿಂದುಳಿದಿರುವ 112 ಜಿಲ್ಲೆಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ.
- 5 ಆದ್ಯತಾ ಕ್ಷೇತ್ರಗಳು:- ಆರೋಗ್ಯ ಮತ್ತು ಪೌಷ್ಟಿಕಾಂಶ, ಶಿಕ್ಷಣ, ಕೃಷಿ ಮತ್ತು ಜಲ ಸಂಪನ್ಮೂಲ, ಆರ್ಥಿಕ ಸೇರ್ಪಡೆ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಮೂಲಸೌಕರ್ಯ.
ಮಹತ್ವಾಕಾಂಕ್ಷೆಯ ಬ್ಲಾಕ್ಗಳ ಕಾರ್ಯಕ್ರಮ’ದ ಬಗ್ಗೆ:
- ಪ್ರಾರಂಭ:- 2023
- ಉದ್ದೇಶ:- ದೇಶಾದ್ಯಂತ 513 ಬ್ಲಾಕ್ಗಳಲ್ಲಿ (329 ಜಿಲ್ಲೆಗಳ ವ್ಯಾಪ್ತಿಯಲ್ಲಿ) ಅಗತ್ಯ ಸರ್ಕಾರಿ ಸೇವೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ (ಸಂಪೂರ್ಣ ಅನುಷ್ಠಾನ) ಉದ್ದೇಶವನ್ನು ಹೊಂದಿದೆ.
- 5 ಆದ್ಯತಾ ಕ್ಷೇತ್ರಗಳು:- ಆರೋಗ್ಯ ಮತ್ತು ಪೌಷ್ಟಿಕಾಂಶ, ಶಿಕ್ಷಣ, ಕೃಷಿ ಮತ್ತು ಸಂಬಂಧಿತ ಸೇವೆಗಳು, ಮೂಲಸೌಕರ್ಯ ಹಾಗೂ ಸಾಮಾಜಿಕ ಅಭಿವೃದ್ಧಿ.
ಮಾಸಿಕ ಋತುಚಕ್ರದ ಆರೋಗ್ಯವು ಮೂಲಭೂತ ಹಕ್ಕಾಗಿದೆ: ಸರ್ವೋಚ್ಚ ನ್ಯಾಯಾಲಯ
ರಾಜಕೀಯ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿದೆ:
- ‘ಡಾ. ಜಯಾ ಠಾಕೂರ್ v/s ಭಾರತ ಸರ್ಕಾರ’ ಪ್ರಕರಣದಲ್ಲಿ, ಮಾಸಿಕ ಋತುಚಕ್ರದ ನೈರ್ಮಲ್ಯದ ಹಕ್ಕು ಸಂವಿಧಾನದ 21ನೇ ವಿಧಿಯಡಿ ‘ಜೀವಿಸುವ ಹಕ್ಕಿನ’ ಅವಿಭಾಜ್ಯ ಅಂಗವಾಗಿದೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
ನ್ಯಾಯಾಂಗದ ಮಧ್ಯಪ್ರವೇಶದ ಪ್ರಮುಖ ಮುಖ್ಯಾಂಶಗಳು:
- ಮೂಲಭೂತ ಹಕ್ಕು:- ಮಾಸಿಕ ಋತುಚಕ್ರದ ಆರೋಗ್ಯವನ್ನು ಇದೀಗ ಸಂವಿಧಾನದ ವಿಧಿ 21ರ ‘ಜೀವಿಸುವ ಹಕ್ಕು’ ಮತ್ತು ವಿಧಿ 21 A ಯ ‘ಶಿಕ್ಷಣದ ಹಕ್ಕಿನ’ ಅತ್ಯಾವಶ್ಯಕ ಭಾಗವೆಂದು ಕಾನೂನುಬದ್ಧವಾಗಿ ಗುರುತಿಸಲಾಗಿದೆ.
- ಉಚಿತ ಜೈವಿಕ-ವಿಘಟಣೆಯ ಪ್ಯಾಡ್ಗಳು:- ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು 6 ರಿಂದ 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಜೈವಿಕ-ವಿಘಟಣೆಯ ಮಾಸಿಕ ಸ್ವಚ್ಛತಾ (ಸ್ಯಾನಿಟರಿ) ಪ್ಯಾಡ್ಗಳನ್ನು ಕಡ್ಡಾಯವಾಗಿ ವಿತರಿಸಬೇಕು.
- ಕಡ್ಡಾಯ ಮೂಲಸೌಕರ್ಯ:- ಶಾಲೆಗಳಲ್ಲಿ ನೀರಿನ ಸೌಲಭ್ಯವಿರುವ ಹಾಗೂ ಲಿಂಗಾಧಾರಿತ ಪ್ರತ್ಯೇಕ ಶೌಚಾಲಯಗಳನ್ನು ಹೊಂದುವುದು ಕಡ್ಡಾಯವಾಗಿದೆ. ಈ ನಿಯಮವನ್ನು ಉಲ್ಲಂಘಿಸುವ ಖಾಸಗಿ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸುವ ಅಧಿಕಾರವಿದೆ.
- ಕಳಂಕ ನಿವಾರಣೆ:- ಮಾಸಿಕ ಋತುಚಕ್ರದ ಕುರಿತಾದ ಮುಜುಗರ ಮತ್ತು ಕಳಂಕವನ್ನು ಹೋಗಲಾಡಿಸಲು, ಹುಡುಗರು ಮತ್ತು ಹುಡುಗಿಯರಿಬ್ಬರಿಗೂ ಸಮರ್ಪಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಲಿಂಗ-ಸೂಕ್ಷ್ಮ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವಂತೆ ನ್ಯಾಯಾಲಯವು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಗೆ (NCERT) ನಿರ್ದೇಶನ ನೀಡಿದೆ.
ಸಂವಿಧಾನದ 21ನೇ ವಿಧಿಯ ವಿವರಣೆ:
-
- 21ನೇ ವಿಧಿಯು ಭಾರತದ ಸಂವಿಧಾನದ ಭಾಗ-III ರಲ್ಲಿನ ಮೂಲಭೂತ ಹಕ್ಕುಗಳ ಅಡಿಯಲ್ಲಿ ಬರುತ್ತದೆ.
- ಇದು ನಾಗರಿಕರು ಮತ್ತು ನಾಗರಿಕರಲ್ಲದವರು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುತ್ತದೆ.
- ಕಾನೂನಿನಿಂದ ಸ್ಥಾಪಿಸಲ್ಪಟ್ಟ ಪ್ರಕ್ರಿಯೆಯ ಮೂಲಕ ಹೊರತುಪಡಿಸಿ, ಯಾವುದೇ ವ್ಯಕ್ತಿಯನ್ನು ಅವನ ಜೀವಿಸುವ ಹಕ್ಕು ಅಥವಾ ವೈಯಕ್ತಿಕ ಸ್ವಾತಂತ್ರ್ಯದಿಂದ ವಂಚಿಸುವಂತಿಲ್ಲ ಎಂದು ಈ ವಿಧಿಯು ಸ್ಪಷ್ಟಪಡಿಸುತ್ತದೆ.
- ಯಾವುದಾದರೂ ವ್ಯಕ್ತಿಯ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಸರ್ಕಾರವು ಅನಿಯಂತ್ರಿತವಾಗಿ ಹಸ್ತಕ್ಷೇಪ ಮಾಡುವುದನ್ನು ಇದು ಕಟ್ಟುನಿಟ್ಟಾಗಿ ನಿರ್ಬಂಧಿಸುತ್ತದೆ.
-
- ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಮೂಲಕ 21ನೇ ವಿಧಿಯ ವಿಸ್ತೃತ ವ್ಯಾಪ್ತಿ:- ಘನತೆಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಮೇಲೆ ಸಕಾರಾತ್ಮಕ ಜವಾಬ್ದಾರಿಗಳನ್ನು ವಿಧಿಸುವಂತೆ ನ್ಯಾಯಾಲಯಗಳು ಈ ವಿಧಿಯನ್ನು ವಿಸ್ತೃತವಾಗಿ ಕಾಲಕಾಲಕ್ಕೆ ಅರ್ಥೈಸಿವೆ. ಈ ಕೆಳಗಿನ ಹಕ್ಕುಗಳು 21ನೇ ವಿಧಿಯ ವ್ಯಾಪ್ತಿಗೆ ಬರುತ್ತವೆ:
- ಮಾನವ ಘನತೆಯೊಂದಿಗೆ ಜೀವಿಸುವ ಹಕ್ಕು.
- ಖಾಸಗಿತನದ ಹಕ್ಕು (ಪುಟ್ಟಸ್ವಾಮಿ ಪ್ರಕರಣ, 2017).
- ಜೀವನೋಪಾಯದ ಹಕ್ಕು (ಓಲ್ಗಾ ಟೆಲ್ಲಿಸ್ ಪ್ರಕರಣ).
- ಆರೋಗ್ಯ ಮತ್ತು ವೈದ್ಯಕೀಯ ಆರೈಕೆಯ ಹಕ್ಕು.
- ಸ್ವಚ್ಛ ಪರಿಸರದ ಹಕ್ಕು.
- ಕಾನೂನು ನೆರವು ಮತ್ತು ತ್ವರಿತ ವಿಚಾರಣೆಯ ಹಕ್ಕು.
- ಶಿಕ್ಷಣದ ಹಕ್ಕು (ನಂತರ 21 A ವಿಧಿಯ ಮೂಲಕ ಇದನ್ನು ಸ್ಪಷ್ಟಪಡಿಸಲಾಗಿದೆ).
- ಪೊಲೀಸ್ ಬಂಧನದಲ್ಲಿನ ಚಿತ್ರಹಿಂಸೆಯ ವಿರುದ್ಧದ ರಕ್ಷಣೆಯ ಹಕ್ಕು.
- ನಿದ್ರೆ, ಆಶ್ರಯ ಮತ್ತು ಆಹಾರದ ಹಕ್ಕು.
ಮಾಸಿಕ ಋತುಚಕ್ರದ ಆರೋಗ್ಯಕ್ಕೆ ಸಂಬಂಧಿಸಿದ ಭಾರತ ಸರ್ಕಾರದ ನೀತಿಗಳು ಮತ್ತು ಯೋಜನೆಗಳು:
- ಮಾಸಿಕ ಋತುಚಕ್ರ ನೈರ್ಮಲ್ಯ ಯೋಜನೆ (MHS):- ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಬೆಂಬಲದೊಂದಿಗೆ, ಆಶಾ (ASHA) ಕಾರ್ಯಕರ್ತೆಯರು 6 ಪ್ಯಾಡ್ಗಳಿರುವ ‘ಫ್ರೀಡೇಸ್’ ಪೊಟ್ಟಣವನ್ನು 6 ರೂಪಾಯಿಗಳ ರಿಯಾಯಿತಿ ದರದಲ್ಲಿ ವಿತರಿಸುತ್ತಾರೆ.
- ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆ:- ದೇಶದಾದ್ಯಂತ 16,000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ‘ಸುವಿಧಾ’ (ಆಮ್ಲಜನಕ ಪ್ರೇರಿತ -ಜೈವಿಕ ವಿಘಟಣೆಯ) ಪ್ಯಾಡ್ಗಳನ್ನು ಕೇವಲ 1 ರೂಪಾಯಿಗೆ ಒದಗಿಸುತ್ತಿವೆ.
- ಸಮಗ್ರ ಶಿಕ್ಷಣ:- ಶಾಲೆಗಳಲ್ಲಿ ವಿತರಣಾ (ವೆಂಡಿಂಗ್) ಯಂತ್ರಗಳು ಮತ್ತು ತ್ಯಾಜ್ಯ ಸುಡುವ ಯಂತ್ರ (ಇನ್ಸಿನರೇಟರ್)ಗಳನ್ನು ಅಳವಡಿಸಲು ಈ ಯೋಜನೆಯು ಹಣಕಾಸು ಒದಗಿಸುತ್ತದೆ. 2026ರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯಗಳು ಇದೀಗ ಜೈವಿಕ-ವಿಘಟಣೆಯ ಆಯ್ಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.
- ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹಂತ 2:- ಪರಿಸರ ಮಾಲಿನ್ಯವನ್ನು ತಡೆಗಟ್ಟಲು, ಸಣ್ಣ-ಪ್ರಮಾಣದ ತ್ಯಾಜ್ಯ ಸುಡುವ ಯಂತ್ರ (ಇನ್ಸಿನರೇಟರ್)ಗಳು ಮತ್ತು ಆಳವಾದ ಹೂಳುವ ಗುಂಡಿಗಳನ್ನು ಬಳಸಿಕೊಂಡು ‘ಮಾಸಿಕ ಋತುಚಕ್ರದ ತ್ಯಾಜ್ಯ ನಿರ್ವಹಣೆ’ಯ (MWM) ಕಡೆಗೆ ಇದು ಗಮನ ಹರಿಸುತ್ತದೆ.
- ಮಾಸಿಕ ಋತುಚಕ್ರ ನೈರ್ಮಲ್ಯ ನೀತಿ (2024-25):- ಆರೋಗ್ಯ ಸಚಿವಾಲಯವು ರೂಪಿಸಿರುವ ಈ ನೀತಿಯು ಕಡಿಮೆ-ವೆಚ್ಚದ ಉತ್ಪನ್ನಗಳ ಲಭ್ಯತೆಯನ್ನು ಸುಗಮಗೊಳಿಸುತ್ತದೆ, “ಹಸಿರು” (ಜೈವಿಕ-ವಿಘಟಣೆಯ) ಉಪಕ್ರಮಗಳಿಗೆ ಆದ್ಯತೆ ನೀಡುತ್ತದೆ ಮತ್ತು ಶಾಲಾ ಪಠ್ಯಕ್ರಮದಲ್ಲಿ ಮಾಸಿಕ ಋತುಚಕ್ರದ ನೈರ್ಮಲ್ಯ ನಿರ್ವಹಣೆಯನ್ನು (MHM) ವ್ಯವಸ್ಥಿತವಾಗಿ ಸಂಯೋಜಿಸುತ್ತದೆ.
- ಉತ್ಪನ್ನಗಳ ಪ್ರಮಾಣೀಕರಣ:- ಗ್ರಾಮೀಣ ಮಹಿಳೆಯರಲ್ಲಿ ಮಾಸಿಕ ಋತುಚಕ್ರದ ಕಪ್ಗಳು ಮತ್ತು ಮರುಬಳಕೆ ಮಾಡಬಹುದಾದ ಪ್ಯಾಡ್ಗಳಂತಹ ಸುಸ್ಥಿರ ಪರ್ಯಾಯಗಳ ಸುರಕ್ಷತೆ ಮತ್ತು ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡಲು ‘ಆರೋಗ್ಯ ಸಂಶೋಧನಾ ಇಲಾಖೆ’ಯು ಅಧ್ಯಯನ ನಡೆಸುತ್ತಿದೆ.
ಕಲ್ಬೇಲಿಯಾ ಸಮುದಾಯ
ಸಂಸ್ಕೃತಿ
ಇದೀಗ ಸುದ್ದಿಯಲ್ಲಿದೆ:
- ರಾಜಸ್ಥಾನದ ಬಾರ್ಮರ್ನಲ್ಲಿ ‘ಕಾಲ್ಬೇಲಿಯಾ’ ಸಮುದಾಯದವರು ತಮ್ಮದೇ ಆದ ಪ್ರತ್ಯೇಕ ಸ್ಮಶಾನ ಒದಗಿಸುವಂತೆ ಆಗ್ರಹಿಸಿ, ರಸ್ತೆಯ ಮೇಲೆ ಶವವನ್ನಿಟ್ಟು ತೀವ್ರ ಪ್ರತಿಭಟನೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ರಾಜಸ್ಥಾನ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕಲ್ಬೇಲಿಯಾ ಸಮುದಾಯದ ಬಗ್ಗೆ:
- ಕಲ್ಬೇಲಿಯಾ ಸಮುದಾಯವು ಭಾರತದ ರಾಜಸ್ಥಾನ ಮೂಲದ ಪ್ರಸಿದ್ಧ ಜಾನಪದ ಸಮುದಾಯವಾಗಿದ್ದು, ಇವರು ಸಾಂಪ್ರದಾಯಿಕವಾಗಿ ಹಾವು ಆಡಿಸುವ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ.
- ಹಾವುಗಳನ್ನು ಹಿಡಿಯುವುದು ಮತ್ತು ಹಾವಿನ ವಿಷವನ್ನು ವ್ಯಾಪಾರ ಮಾಡುವುದು ಇವರ ಸಾಂಪ್ರದಾಯಿಕ ಕಸುಬಾಗಿತ್ತು.
- ಈ ಸಮುದಾಯವು ತನ್ನ ರೋಮಾಂಚಕ ಜಾನಪದ ನೃತ್ಯಗಳು ಹಾಗೂ ವಿಶಿಷ್ಟವಾದ ಕಪ್ಪು ಬಣ್ಣದ ಕಸೂತಿ ಉಡುಪುಗಳಿಗೆ ಹೆಸರುವಾಸಿಯಾಗಿದೆ.
ಕಲ್ಬೇಲಿಯಾ ನೃತ್ಯದ ಬಗ್ಗೆ:
- ಕಲ್ಬೇಲಿಯಾ ನೃತ್ಯವನ್ನು ‘ಸಪೇರಾ ನೃತ್ಯ’ ಎಂತಲೂ ಕರೆಯಲಾಗುತ್ತದೆ. ಸಾಂಪ್ರದಾಯಿಕವಾಗಿ ಹಾವು ಆಡಿಸುವವರು ಎಂದು ಕರೆಯಲ್ಪಡುವ ಈ ಅಲೆಮಾರಿ ಬುಡಕಟ್ಟಿನ ಸಂಸ್ಕೃತಿಯ ಕೇಂದ್ರಬಿಂದುವೇ ಈ ಜಾನಪದ ನೃತ್ಯವಾಗಿದೆ.
- ಈ ನೃತ್ಯದ ಹಾವಭಾವಗಳು, ಚಲನೆಗಳು ಮತ್ತು ವೇಷಭೂಷಣಗಳು ಹಾವುಗಳೊಂದಿಗಿನ ಅವರ ನಿಕಟ ಒಡನಾಟವನ್ನು ಅದ್ಭುತವಾಗಿ ಪ್ರತಿಬಿಂಬಿಸುತ್ತವೆ.
- ಯುನೆಸ್ಕೋ ಮಾನ್ಯತೆ:- ಅವರ ಅಸ್ಮಿತೆಯ ಪ್ರಮುಖ ಸಂಕೇತವೆಂದು ಗುರುತಿಸಿ 2010 ರಲ್ಲಿ ಅವರ ಹಾಡುಗಳು ಮತ್ತು ನೃತ್ಯಗಳನ್ನು ಯುನೆಸ್ಕೋದ ‘ಅಮೂರ್ತ ಸಾಂಸ್ಕೃತಿಕ ಪರಂಪರೆಯ’ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.



ನಿಮ್ಮದೊಂದು ಉತ್ತರ