ಜಾಗತಿಕ ಅಪಾಯಗಳ ವರದಿ (GRR), 2026 – WEF | ಉದ್ಯೋಗ ಮತ್ತು ಸಾಮಾಜಿಕ ಪ್ರವೃತ್ತಿಗಳ ವರದಿ, 2026 – ILO | ‘ಕಾರ್ಬನ್ (ಇಂಗಾಲದ) ಕ್ರೆಡಿಟ್’ಗಳಿಂದ ಆದಾಯ ಗಳಿಸಲಿರುವ ದೆಹಲಿ | ಕಾಶಿ-ತಮಿಳು ಸಂಗಮ | ರಫ್ತು ಸಿದ್ಧತೆ ಸೂಚ್ಯಂಕ (EPI), 2024 – ನೀತಿ ಆಯೋಗ | ಜಥಿಯಾ ದೇವಿ | ಕುಕಿ-ಜೋ ಮಂಡಳಿ ಮತ್ತು ಕೇಂದ್ರಾಡಳಿತ ಪ್ರದೇಶಕ್ಕಾಗಿ ಬೇಡಿಕೆ | ಕುರಿಂಜಿ ರಾಜ್‌ಕುಮಾರ್

ಜಾಗತಿಕ ಅಪಾಯಗಳ ವರದಿ (GRR), 2026 – WEF

ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ:

  • ವಿಶ್ವ ಆರ್ಥಿಕ ವೇದಿಕೆಯು (WEF) ತನ್ನ 21ನೇ ಆವೃತ್ತಿಯ “ಜಾಗತಿಕ ಅಪಾಯಗಳ ವರದಿ, 2026” ಅನ್ನು ಬಿಡುಗಡೆ ಮಾಡಿದ್ದು, ಭೌಗೋಳಿಕ-ಆರ್ಥಿಕ ಮುಖಾಮುಖಿಗಳು ಪ್ರಮುಖ ರಾಷ್ಟ್ರಗಳಿಗೆ ಅತಿದೊಡ್ಡ ಅಪಾಯವನ್ನು ತಂದೊಡ್ಡಲಿವೆ ಎಂದು ಎಚ್ಚರಿಸಿದೆ.

ಜಾಗತಿಕ ಅಪಾಯಗಳ ವರದಿ, 2026 ರ ಮುಖ್ಯಾಂಶಗಳು: 

  • ಭೌಗೋಳಿಕ-ಆರ್ಥಿಕ ಮುಖಾಮುಖಿ:- ಇದನ್ನು 2026 ರ ಪ್ರಮುಖ ಅಪಾಯವೆಂದು ಗುರುತಿಸಲಾಗಿದೆ. ಇದು ನಿರ್ಬಂಧ ಮತ್ತು ಸುಂಕಗಳ ಮೂಲಕ ವ್ಯಾಪಾರ, ಹಣಕಾಸು ಮತ್ತು ತಂತ್ರಜ್ಞಾನವನ್ನು “ಅಸ್ತ್ರವನ್ನಾಗಿ” ಬಳಸಿಕೊಳ್ಳುವುದನ್ನು ಒಳಗೊಂಡಿದೆ. ಉದಾಹರಣೆಗೆ ಅಮೆರಿಕ ವಿಧಿಸಿದ ಸುಂಕಗಳು, ಚೀನಾದಿಂದ ನಿರ್ಣಾಯಕ ಖನಿಜಗಳ ನಿಷೇಧ ಇತ್ಯಾದಿ).
  • ರಾಷ್ಟ್ರ-ಆಧಾರಿತ ಸಶಸ್ತ್ರ ಸಂಘರ್ಷ:- ಇದು ಎರಡನೇ ಅತ್ಯುನ್ನತ ಅಪಾಯವಾಗಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದಂತಹ ಯುದ್ಧಗಳು ಮತ್ತು ವೆನೆಜುವೆಲಾ ಹಾಗೂ ಮಧ್ಯಪ್ರಾಚ್ಯದಂತಹ ಪ್ರದೇಶಗಳಲ್ಲಿನ ಇತ್ತೀಚಿನ ಅಸ್ಥಿರತೆಯು ಇದಕ್ಕೆ ಕಾರಣವಾಗಿದೆ.
  • ವೈಪರೀತ್ಯದ ಹವಾಮಾನ:- ಮುಂದಿನ ದಶಕದಲ್ಲಿ ಪರಿಸರ ಸಂಬಂಧಿ ಅಪಾಯಗಳು ಅಗ್ರ ಆದ್ಯತೆಯಾಗಿ ಉಳಿದಿದ್ದರೂ, ಆರ್ಥಿಕ ಮತ್ತು ಸೇನಾ ಸಂಘರ್ಷಗಳ ತುರ್ತು ಪರಿಸ್ಥಿತಿಯಿಂದಾಗಿ, ತಕ್ಷಣದ 2 ವರ್ಷಗಳ ಮುನ್ನೋಟದಲ್ಲಿ ಇವು ಮೂರನೇ ಸ್ಥಾನಕ್ಕೆ (8%) ಕುಸಿದಿವೆ.
  • ಸಾಮಾಜಿಕ ಅಪಾಯಗಳು:- ಧ್ರುವೀಕರಣ, ತಪ್ಪು ಮಾಹಿತಿ ಮತ್ತು ಎಐ ರಚಿತ ‘ಡೀಪ್‌ಫೇಕ್’ಗಳನ್ನು ಸಾಮಾಜಿಕ ಅಸ್ಥಿರತೆಗೆ, ವಿಶೇಷವಾಗಿ ಚುನಾವಣಾ ಸಮಯಗಳಲ್ಲಿ ಎದುರಾಗುವ ಪ್ರಮುಖ ಅಪಾಯಗಳೆಂದು ಉಲ್ಲೇಖಿಸಲಾಗಿದೆ.

ಭಾರತಕ್ಕೆ ಎದುರಾಗಿರುವ ದೊಡ್ಡ ಅಪಾಯಗಳು:

  • ಸೈಬರ್ ಭದ್ರತೆ:- ಇದನ್ನು ಭಾರತಕ್ಕೆ ಎದುರಾಗಿರುವ ಅಗ್ರ ಅಪಾಯವೆಂದು ಪರಿಗಣಿಸಲಾಗಿದೆ ಮತ್ತು ಭಾರತವು ಡಿಜಿಟಲ್ ಪಾವತಿಗಳ ಕಡೆಗೆ ಹೆಚ್ಚು ವಾಲುತ್ತಿದೆ.
  • ಸಂಪತ್ತಿನ ಅಸಮಾನತೆ ಮತ್ತು ಸಾಮಾಜಿಕ ಸುರಕ್ಷತಾ ಜಾಲಗಳು:- ಹೆಚ್ಚುತ್ತಿರುವ ಆದಾಯದ ಅಸಮಾನತೆಯೊಂದಿಗೆ ದೃಢವಾದ ಸಾಮಾಜಿಕ ಕಲ್ಯಾಣ ಯೋಜನೆಗಳ ಕೊರತೆಯು ಆಂತರಿಕ ಸ್ಥಿರತೆಗೆ ಗಮನಾರ್ಹ ಅಪಾಯವನ್ನು ಒಡ್ಡುತ್ತದೆ.
  • ಆರ್ಥಿಕ ಬಾಹ್ಯ ಆಘಾತಗಳು:- ಜಾಗತಿಕ ಪೂರೈಕೆ ಸರಪಳಿ ಅಡಚಣೆಗಳು ಮತ್ತು ಅಂತರರಾಷ್ಟ್ರೀಯ ಸುಂಕಗಳಿಂದ ಉಂಟಾಗುವ ದೇಶೀಯ ಆರ್ಥಿಕ ಕುಸಿತಗಳಿಗೆ ಭಾರತವು ತುತ್ತಾಗುವ ಸಾಧ್ಯತೆಯಿದೆ.
  • ನಿರ್ಣಾಯಕ ಮೂಲಸೌಕರ್ಯ ಮತ್ತು ಸಂಪನ್ಮೂಲ ಭದ್ರತೆ:- ಈ ವರದಿಯು “ಜಲ ಭದ್ರತೆ” ಯನ್ನು ಸಂಭಾವ್ಯ ಸಂಘರ್ಷದ ಬಿಂದು ಎಂದು ಎತ್ತಿ ತೋರಿಸಿದೆ. ನಿರ್ದಿಷ್ಟವಾಗಿ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿದ ನಂತರ, ಸಿಂಧೂ ನದಿ ಜಲಾನಯನ ಪ್ರದೇಶವು ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದದ ಕೇಂದ್ರಬಿಂದುವಾಗಿ ಉಳಿದಿದೆ ಎಂದು ಅದು ಗಮನಸೆಳೆದಿದೆ.

ಉದ್ಯೋಗ ಮತ್ತು ಸಾಮಾಜಿಕ ಪ್ರವೃತ್ತಿಗಳ ವರದಿ, 2026 – ILO

ಸಾಮಾನ್ಯ ಅಧ್ಯಯನ-3/ ಆರ್ಥಿಕತೆ; ಉದ್ಯೋಗ

ಇದೀಗ ಸುದ್ದಿಯಲ್ಲಿದೆ:

  • ಇತ್ತೀಚಿಗೆ, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO)ಯು ತನ್ನ “ವಿಶ್ವ ಉದ್ಯೋಗ ಮತ್ತು ಸಾಮಾಜಿಕ ಮುನ್ನೋಟ” (WESO) ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯು ಜಾಗತಿಕ ಕಾರ್ಮಿಕ ಮಾರುಕಟ್ಟೆಯಲ್ಲಿನ ನಿರಂತರ ಅಸಮಾನತೆಗಳನ್ನು ಎತ್ತಿ ತೋರಿಸಿದೆ.

ಈ ವರದಿಯ ಪ್ರಮುಖ ಅಂಶಗಳು:

  • ಜಾಗತಿಕ ನಿರುದ್ಯೋಗ:- 2026 ರಲ್ಲಿ ಜಾಗತಿಕ ನಿರುದ್ಯೋಗ ದರವು 4.9% ರಷ್ಟು ಉಳಿಯುವ ನಿರೀಕ್ಷೆಯಿದೆ ಮತ್ತು ಇದು ಸುಮಾರು 186 ದಶ ಲಕ್ಷ (18.6 ಕೋಟಿ) ಜನರಿಗೆ ಸಮಾನವಾಗಿದೆ.
  • ಗುಣಮಟ್ಟದ ಹಾಗೂ ಸುರಕ್ಷಿತ ಉದ್ಯೋಗದ ಕೊರತೆ:- ಹಾಗೆಯೇ, ಯೋಗ್ಯವಾದ ಕೆಲಸದ ಕಡೆಗಿನ ಪ್ರಗತಿಯು ಸ್ಥಗಿತಗೊಂಡಿದೆ ಮತ್ತು ಲಕ್ಷಾಂತರ ಜನರು ಇನ್ನೂ ಈ ಕೊರತೆಯನ್ನು ಎದುರಿಸುತ್ತಿದ್ದಾರೆ.
  • ಆರ್ಥಿಕ ಬೆಳವಣಿಗೆಯ ಹೊರತಾಗಿಯೂ ನಿರಂತರ ಬಡತನ:- ಸುಮಾರು 300 ದಶ ಲಕ್ಷ (30 ಕೋಟಿ) ಕಾರ್ಮಿಕರು ದಿನಕ್ಕೆ US $3 ಗಿಂತ ಕಡಿಮೆ ಗಳಿಸುವ ಮೂಲಕ ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ.
  • ತೀವ್ರವಾಗುತ್ತಿರುವ ಯುವ ನಿರುದ್ಯೋಗದ ಬಿಕ್ಕಟ್ಟು: ಯುವ ಜನರ ನಿರುದ್ಯೋಗವು 2025 ರಲ್ಲಿ 12.4% ಕ್ಕೆ ಏರಿಕೆಯಾಗಿದೆ.
  • ನಿರಂತರ ಲಿಂಗ ಅಂತರಗಳು:- ಮಹಿಳೆಯರು ಜಾಗತಿಕ ಉದ್ಯೋಗದಲ್ಲಿ ಕೇವಲ ಐದನೇ ಎರಡರಷ್ಟು (40%) ಪಾಲನ್ನು ಹೊಂದಿದ್ದಾರೆ.

ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO)ಯ ಬಗ್ಗೆ:

    • ಇದು ವಿಶ್ವಸಂಸ್ಥೆಯ ಒಂದು ವಿಶೇಷ ಸಂಸ್ಥೆಯಾಗಿದೆ.
    • ಇದನ್ನು 1919 ರಲ್ಲಿ ವರ್ಸೈಲ್ಸ್ ಒಪ್ಪಂದದ ಮೂಲಕ 
    • “ರಾಷ್ಟ್ರಗಳ ಸಂಘ” (ಲೀಗ್ ಆಫ್ ನೇಷನ್ಸ್) ದ ಅಂಗಸಂಸ್ಥೆಯಾಗಿ ಸ್ಥಾಪಿಸಲಾಯಿತು.
    • ವಿಶೇಷತೆ:- 1946 ರಲ್ಲಿ ಇದು ವಿಶ್ವಸಂಸ್ಥೆಯ ಮೊದಲ ವಿಶೇಷ ಸಂಸ್ಥೆಯಾಯಿತು.
    • ಪ್ರಧಾನ ಕಚೇರಿ:- ‘ಜಿನೀವಾ’ (ಸ್ವಿಟ್ಜರ್ಲೆಂಡ್‌)
  • ಭಾರತವು ILO ನ ಸಂಸ್ಥಾಪಕ ಸದಸ್ಯ ರಾಷ್ಟ್ರವಾಗಿದೆ.
  • ಗುರಿ:- ಕೆಲಸದ ಸ್ಥಳದಲ್ಲಿ ಹಕ್ಕುಗಳು ಮತ್ತು ಯೋಗ್ಯ ಉದ್ಯೋಗಾವಕಾಶಗಳನ್ನು ಉತ್ತೇಜಿಸುವುದು, ಸಾಮಾಜಿಕ ರಕ್ಷಣೆಯನ್ನು ಹೆಚ್ಚಿಸುವುದು ಹಾಗೂ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಂವಾದವನ್ನು ಬಲಪಡಿಸುವುದು.

ILO ನ ಪ್ರಮುಖ ವರದಿಗಳು:

  • ಜಾಗತಿಕ ವೇತನ ವರದಿ (GWR)
  • ವಿಶ್ವ ಉದ್ಯೋಗ ಮತ್ತು ಸಾಮಾಜಿಕ ಮುನ್ನೋಟ (WESO).
  • ವಿಶ್ವ ಸಾಮಾಜಿಕ ರಕ್ಷಣೆ ವರದಿ (WSPR)
  • ಕೆಲಸದ ಜಾಗತಿಕ ವರದಿ (ವರ್ಲ್ಡ್ ಆಫ್ ವರ್ಕ್ ರಿಪೋರ್ಟ್)

‘ಕಾರ್ಬನ್ (ಇಂಗಾಲದ) ಕ್ರೆಡಿಟ್’ಗಳಿಂದ ಆದಾಯ ಗಳಿಸಲಿರುವ ದೆಹಲಿ

ಸಾಮಾನ್ಯ ಅಧ್ಯಯನ- 3/ ಪರಿಸರ

ಇದೀಗ ಸುದ್ದಿಯಲ್ಲಿದೆ:

  • ದೆಹಲಿ ಸರ್ಕಾರವು ‘ಕಾರ್ಬನ್ ಕ್ರೆಡಿಟ್ ನಗದೀಕರಣ’ಕ್ಕಾಗಿ ಒಂದು ನೂತನ ನೀತಿ ಚೌಕಟ್ಟನ್ನು ಅನುಮೋದಿಸಿರುವುದಾಗಿ ಘೋಷಿಸಿದೆ.

ನೂತನ ನೀತಿಯ ಮುಖ್ಯಾಂಶಗಳು:

  • ಪರಿಸರ ಸ್ನೇಹಿ ಯೋಜನೆಗಳು:- ದೆಹಲಿ ಸರ್ಕಾರವು ಜಾರಿಗೊಳಿಸುವ ವಿವಿಧ ಪರಿಸರ ಸ್ನೇಹಿ ಯೋಜನೆಗಳ ಮೂಲಕ ‘ಕಾರ್ಬನ್ ಕ್ರೆಡಿಟ್‌’ಗಳನ್ನು ಉತ್ಪಾದಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ.
  • ಪ್ರಮುಖ ಚಟುವಟಿಕೆಗಳು:- ಈ ನೀತಿಯ ಅಡಿಯಲ್ಲಿ ವಿದ್ಯುತ್ ಚಾಲಿತ ಬಸ್‌ಗಳ ಕಾರ್ಯಾಚರಣೆ, ಸಸಿ ನೆಡುವ ಅಭಿಯಾನಗಳು, ಸೌರಶಕ್ತಿಯ ಉತ್ತೇಜನ ಮತ್ತು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯಂತಹ ಚಟುವಟಿಕೆಗಳನ್ನು ಕಾರ್ಬನ್ ಕ್ರೆಡಿಟ್ ಉತ್ಪಾದನೆಗೆ ಬಳಸಲಾಗುತ್ತದೆ.

ನೂತನ ನೀತಿಯ ಕಾರ್ಯವಿಧಾನ:

  • ವೈಜ್ಞಾನಿಕ ಮಾಪನ:- ಈ ಮೇಲಿನ ಉಪಕ್ರಮಗಳ ಮೂಲಕ ಇಂಗಾಲದ ಹೊರಸೂಸುವಿಕೆಯಲ್ಲಿ ಆಗುವ ಇಳಿಕೆಯನ್ನು ವೈಜ್ಞಾನಿಕವಾಗಿ ಅಳೆಯಲಾಗುತ್ತದೆ.
  • ಅಧಿಕೃತ ‘ಕಾರ್ಬನ್ ಕ್ರೆಡಿಟ್’ಗಳಾಗಿ ನೋಂದಣಿ: ನಂತರ, ಇದನ್ನು ಅಧಿಕೃತವಾಗಿ ‘ಕಾರ್ಬನ್ ಕ್ರೆಡಿಟ್’ಗಳಾಗಿ ನೋಂದಾಯಿಸಲಾಗುತ್ತದೆ.
  • ಮಾರಾಟ ಮತ್ತು ಆದಾಯ:- ಅಂತಿಮವಾಗಿ, ಈ ಕ್ರೆಡಿಟ್‌ಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಬನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮೂಲಕ ಸರ್ಕಾರವು ಆದಾಯವನ್ನು ಗಳಿಸಲಿದೆ.

ಕಾರ್ಬನ್ ಮಾರುಕಟ್ಟೆಗಳ ಬಗ್ಗೆ:

  • ವ್ಯಾಖ್ಯಾನ:- ಕಾರ್ಬನ್ ಮಾರುಕಟ್ಟೆಗಳು ಕಾರ್ಬನ್ ಕ್ರೆಡಿಟ್‌ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯಾಪಾರ ವ್ಯವಸ್ಥೆಗಳಾಗಿವೆ.
  • ಕಾರ್ಯವಿಧಾನ:- ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತೆಗೆದುಹಾಕುವ ಅಥವಾ ಕಡಿಮೆ ಮಾಡುವ ಸಂಸ್ಥೆಗಳಿಂದ ‘ಕಾರ್ಬನ್ ಕ್ರೆಡಿಟ್’ಗಳನ್ನು ಖರೀದಿಸುವ ಮೂಲಕ, ಇತರ ಕಂಪನಿಗಳು ಅಥವಾ ವ್ಯಕ್ತಿಗಳು ತಮ್ಮ ಇಂಗಾಲದ ಹೊರಸೂಸುವಿಕೆಯನ್ನು ಸರಿದೂಗಿಸಿಕೊಳ್ಳಬಹುದು.

ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ (CCTS)ನ ಬಗ್ಗೆ:

  • ಗುರಿ:- ಭಾರತೀಯ ಆರ್ಥಿಕತೆಯನ್ನು ಇಂಗಾಲ ಮುಕ್ತವಾಗಿಸುವ (ಡಿಕಾರ್ಬನೈಸ್) ನಿಟ್ಟಿನಲ್ಲಿ ಶ್ರಮಿಸುತ್ತಿರುವ ವಿವಿಧ ಘಟಕಗಳನ್ನು ಪ್ರೋತ್ಸಾಹಿಸುವುದು ಮತ್ತು ಬೆಂಬಲಿಸುವುದು.
  • ಇದು ಸೂಕ್ತವಾದ ಸಾಂಸ್ಥಿಕ ಚೌಕಟ್ಟನ್ನು ಸ್ಥಾಪಿಸುವ ಮೂಲಕ, CCTS ‘ಭಾರತದ ಕಾರ್ಬನ್ ಮಾರುಕಟ್ಟೆ’ಗೆ ಭದ್ರ ಬುನಾದಿಯನ್ನು ಹಾಕಿದೆ.

ಕಾರ್ಬನ್ ಮಾರುಕಟ್ಟೆಯ ಸನ್ನದ್ಧತೆಯನ್ನು ಬಲಪಡಿಸಲು ಸರ್ಕಾರದ ಕ್ರಮಗಳು:

  • ಅಭಿವೃದ್ಧಿ ಮತ್ತು ಪರಿಸರ ಸಮತೋಲನ:- COP 27 ರಲ್ಲಿ ಪ್ರಸ್ತಾಪಿಸಿದಂತೆ, “ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳ” (CBDR-RC) ತತ್ವಗಳ ಮೂಲಕ, ಭಾರತವು ಕಡಿಮೆ ಇಂಗಾಲದ ಹೊರಸೂಸುವಿಕೆ ಮತ್ತು ತನ್ನ ಅಭಿವೃದ್ಧಿಯ ಅಗತ್ಯಗಳನ್ನು ಸಮತೋಲನಗೊಳಿಸುತ್ತಿದೆ.
  • ಸುಸ್ಥಿರ ಜೀವನಶೈಲಿಗೆ ಹಸಿರು ಉಪಕ್ರಮಗಳು:- ಸರ್ಕಾರವು “ಮಿಷನ್ ಲೈಫ್” ಮತ್ತು “ಹಸಿರು ಕ್ರೆಡಿಟ್ ಉಪಕ್ರಮ”ಗಳನ್ನು ಜಾರಿಗೆ ತಂದಿದೆ.
  • ಸಾಂಸ್ಥಿಕ ನಿರ್ವಹಣೆ:- ಇಂಧನ ಸಚಿವಾಲಯದ ಅಡಿಯಲ್ಲಿ,
  1. “ಭಾರತೀಯ ಕಾರ್ಬನ್ ಮಾರುಕಟ್ಟೆಗಾಗಿ ರಾಷ್ಟ್ರೀಯ ಮಾರ್ಗದರ್ಶನ ಸಮಿತಿ” (NSCICM).
  2. “ಇಂಧನ ದಕ್ಷತಾ ಕಛೇರಿ” (BEE) ಅನ್ನು ಸ್ಥಾಪಿಸಲಾಗಿದೆ.

ಕಾಶಿ-ತಮಿಳು ಸಂಗಮ

ಸಾಮಾನ್ಯ ಅಧ್ಯಯನ-1/ ಸಂಸ್ಕೃತಿ

ಇದೀಗ ಸುದ್ದಿಯಲ್ಲಿದೆ:

  • ಸಾಂಸ್ಕೃತಿಕ ತಿಳುವಳಿಕೆಯನ್ನು ಬಲಪಡಿಸುವಲ್ಲಿ, ಶೈಕ್ಷಣಿಕ ಮತ್ತು ಜನರ ನಡುವಿನ ವಿನಿಮಯವನ್ನು ಉತ್ತೇಜಿಸುವಲ್ಲಿ ಹಾಗೂ ಶಾಶ್ವತ ಬಾಂಧವ್ಯವನ್ನು ಸೃಷ್ಟಿಸುವಲ್ಲಿ ‘ಕಾಶಿ-ತಮಿಳು ಸಂಗಮ’ ವಹಿಸಿರುವ ಪಾತ್ರವನ್ನು ಪ್ರಧಾನಿ ಮೋದಿಯವರು ಶ್ಲಾಘಿಸಿದ್ದಾರೆ.

ಕಾಶಿ-ತಮಿಳು ಸಂಗಮ 4.0 ರ ಬಗ್ಗೆ:

  • ಆಯೋಜಕರು:- ಕೇಂದ್ರ ಶಿಕ್ಷಣ ಸಚಿವಾಲಯವು
  • ಪ್ರಾರಂಭ:- 2022
  • ಪಾಲುದಾರ ವಿಶ್ವವಿದ್ಯಾಲಯಗಳು:- ಐಐಟಿ ಮದ್ರಾಸ್ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯ. 
  • ಉದ್ದೇಶ:- ತಮಿಳುನಾಡು ಮತ್ತು ಕಾಶಿಯ ನಡುವಿನ ಪುರಾತನ ಸಂಬಂಧಗಳನ್ನು ಮರುಶೋಧಿಸುವುದು, ದೃಢೀಕರಿಸುವುದು ಮತ್ತು ಆಚರಿಸುವುದು.
  • ರಾಷ್ಟ್ರೀಯ ಶಿಕ್ಷಣ ನೀತಿ (NEP), 2020:- ಇದು ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ಆಧುನಿಕ ಜ್ಞಾನ ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಕುರಿತು ರಾಷ್ಟ್ರೀಯ ಶಿಕ್ಷಣ ನೀತಿ (NEP), 2020 ನೀಡಿದ ಬೆಂಬಲಕ್ಕೆ ಅನುಗುಣವಾಗಿದೆ.

ಮಹತ್ವ:

  • ಜ್ಞಾನವನ್ನು ಹಂಚಿಕೊಳ್ಳವ ವೇದಿಕೆ:- ಇದು ಎರಡು ಪ್ರದೇಶಗಳ ವಿದ್ವಾಂಸರು, ವಿದ್ಯಾರ್ಥಿಗಳು, ತತ್ವಜ್ಞಾನಿಗಳು ಮತ್ತು ಕಲಾವಿದರಿಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ.
  • ಅರಿವು ಮತ್ತು ಸಾಂಸ್ಕೃತಿಕ ಏಕತೆ:- ಇದು ಯುವಜನರಲ್ಲಿ ಅರಿವು ಮೂಡಿಸಲು ಮತ್ತು ಸಾಂಸ್ಕೃತಿಕ ಏಕತೆಯನ್ನು ಅನುಭವಿಸಲು ಸಹಕಾರಿಯಾಗಿದೆ.

ಗಮನಿಸಿ: 

ಕಾಶಿ/ವಾರಾಣಸಿ/ಬನಾರಸ್ ಮತ್ತು ಚೆನ್ನೈ ಎರಡನ್ನೂ ಯುನೆಸ್ಕೋ ‘ಸಂಗೀತದ ಸೃಜನಾತ್ಮಕ ನಗರಗಳು’ ಎಂದು ಗುರುತಿಸಿದೆ.

ರಫ್ತು ಸಿದ್ಧತೆ ಸೂಚ್ಯಂಕ (EPI), 2024 – ನೀತಿ ಆಯೋಗ

ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ:

  • ಇತ್ತೀಚಿಗೆ, ನೀತಿ ಆಯೋಗವು ರಫ್ತು ಸಿದ್ಧತೆ ಸೂಚ್ಯಂಕ (EPI) 2024 ಅನ್ನು ಬಿಡುಗಡೆ ಮಾಡಿದೆ.

ರಫ್ತು ಸಿದ್ಧತೆ ಸೂಚ್ಯಂಕ (EPI), 2024 ರ ಬಗ್ಗೆ:

  • ರಫ್ತು ಸಿದ್ಧತೆಯ ಸಮಗ್ರ ಮೌಲ್ಯಮಾಪನ:- ಇದು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ರಫ್ತು ಸಿದ್ಧತೆಯ ಸಮಗ್ರ ಮೌಲ್ಯಮಾಪನ ಮಾಡುವ ಉದ್ದೇಶ ಹೊಂದಿದೆ.
  • ಮಹತ್ವ:- ಇದು ರಾಜ್ಯ ಮಟ್ಟದ ರಫ್ತು ಪರಿಸರ ವ್ಯವಸ್ಥೆಗಳ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಒಳಗೊಳ್ಳುವಿಕೆಯನ್ನು ಮೌಲ್ಯಮಾಪನ ಮಾಡಲು ಸಾಕ್ಷ್ಯಾಧಾರಿತ ಚೌಕಟ್ಟನ್ನು ಒದಗಿಸುತ್ತದೆ.

ರಫ್ತು ಸಿದ್ಧತೆ ಸೂಚ್ಯಂಕ (EPI), 2024 ರ ಮುಖ್ಯಾಂಶಗಳು:

ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯಗಳು: 

  • ಅತ್ಯುತ್ತಮ ಪ್ರದರ್ಶನ ನೀಡಿದ ದೊಡ್ಡ ರಾಜ್ಯಗಳು:- ಮಹಾರಾಷ್ಟ್ರ ಮತ್ತು ಅದರ ಜೊತೆಗೆ ತಮಿಳುನಾಡು, ಗುಜರಾತ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶಗಳು 
  • ಅತ್ಯುತ್ತಮ ಪ್ರದರ್ಶನ ನೀಡಿದ ಸಣ್ಣ ರಾಜ್ಯಗಳು:- ಉತ್ತರಾಖಂಡ, ಗೋವಾ
  • ಈಶಾನ್ಯ ರಾಜ್ಯಗಳು:- ನಾಗಾಲ್ಯಾಂಡ್
  • ಕೇಂದ್ರಾಡಳಿತ ಪ್ರದೇಶಗಳು:- ಜಮ್ಮು ಮತ್ತು ಕಾಶ್ಮೀರ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು.

ಜಥಿಯಾ ದೇವಿ

ಸಾಮಾನ್ಯ ಅಧ್ಯಯನ-1/ ಸ್ಥಳಗಳು /ಸಾಮಾನ್ಯ ಅಧ್ಯಯನ-3/ ಮೂಲಸೌಕರ್ಯ

ಇದೀಗ ಸುದ್ದಿಯಲ್ಲಿದೆ:

  • ಹಿಮಾಚಲ ಪ್ರದೇಶ ವಸತಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರವು ಅನುಷ್ಠಾನಗೊಳಿಸಲಿರುವ ಮಹತ್ವಾಕಾಂಕ್ಷೆಯ ನಗರಾಭಿವೃದ್ಧಿ ಯೋಜನೆಗಾಗಿ ಇತ್ತೀಚೆಗೆ ‘ಜಥಿಯಾ ದೇವಿ’ ಸ್ಥಳವನ್ನು ಗುರುತಿಸಲಾಗಿದೆ.

‘ಜಥಿಯಾ ದೇವಿ’ ಸ್ಥಳದ ಬಗ್ಗೆ:

  • ಸ್ಥಳ:- ಈ ಸ್ಥಳವು ಶಿಮ್ಲಾ ನಗರದಿಂದ ಸುಮಾರು 14 ಕಿ.ಮೀ ದೂರದಲ್ಲಿದೆ.
  • ಹೆಸರಿನ ಹಿನ್ನೆಲೆ:- ಈ ಪ್ರದೇಶದಲ್ಲಿರುವ ಪುರಾತನ ಜಥಿಯಾ ದೇವಿ ದೇವಾಲಯದಿಂದಾಗಿ ಈ ಸ್ಥಳಕ್ಕೆ ಈ ಹೆಸರು ಬಂದಿದೆ.
  • ಯೋಜನೆಯ ಸ್ವರೂಪ:- ಶಿಮ್ಲಾ ನಗರದ ಮೇಲಿನ ಒತ್ತಡವನ್ನು ತಗ್ಗಿಸಲು, ಈ ಯೋಜನೆಯನ್ನು ಒಂದು ಯೋಜಿತ ‘ಉಪಗ್ರಹ ಪರ್ವತ ಪಟ್ಟಣ’ವನ್ನಾಗಿ ರೂಪಿಸಲು ಉದ್ದೇಶಿಸಲಾಗಿದೆ.
  • ಪ್ರಯೋಜನಗಳು:- ಇದು ಹೊಸ ಆರ್ಥಿಕ ಕೇಂದ್ರಗಳನ್ನು ಸೃಷ್ಟಿಸುತ್ತದೆ ಮತ್ತು ಸುಸ್ಥಿರ ಹಾಗೂ ವಿಪತ್ತು-ನಿರೋಧಕ ನಗರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
  • ಕಾಳಜಿಗಳು:- ಸಾಮಾಜಿಕ ಪ್ರಭಾವದ ಮೌಲ್ಯಮಾಪನವು, ಯೋಜನೆಯಿಂದ ಸಂಭವಿಸಬಹುದಾದ ಜನರ ಸ್ಥಳಾಂತರ ಮತ್ತು ದೇವಾಲಯಗಳು, ಶಾಲೆಗಳು, ಅಂಗಡಿಗಳು, ಕಾಲುವೆಗಳು ಹಾಗೂ ಮನೆಗಳಂತಹ ಆಸ್ತಿಗಳ ನಷ್ಟವನ್ನು ಗುರುತಿಸಿದೆ.

ಕುಕಿ-ಜೋ ಮಂಡಳಿ ಮತ್ತು ಕೇಂದ್ರಾಡಳಿತ ಪ್ರದೇಶಕ್ಕಾಗಿ ಬೇಡಿಕೆ

ಸಾಮಾನ್ಯ ಅಧ್ಯಯನ-2/ ಆಡಳಿತ; ಸಾಮಾನ್ಯ ಅಧ್ಯಯನ-3/ ಆಂತರಿಕ ಭದ್ರತೆ

ಇದೀಗ ಸುದ್ದಿಯಲ್ಲಿದೆ:

  • ಕುಕಿ-ಜೋ ಬುಡಕಟ್ಟು ಜನಾಂಗದವರನ್ನು ಪ್ರತಿನಿಧಿಸುವ ಸರ್ವೋಚ್ಚ ನಾಗರಿಕ ಸಂಸ್ಥೆಯಾದ “ಕುಕಿ-ಜೋ ಮಂಡಳಿ” (KZC), ಮಣಿಪುರದಲ್ಲಿ ಕುಕಿ-ಜೋ ಬುಡಕಟ್ಟು ಜನಾಂಗದವರಿಗಾಗಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನು ರಚಿಸುವ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.

ಹಿನ್ನೆಲೆ:

  • ಮೇ 2023 ರಲ್ಲಿ, ಜನಾಂಗೀಯ ಸಂಘರ್ಷ: ಇಂಫಾಲ್ ಕಣಿವೆಯಲ್ಲಿ ಪ್ರಧಾನವಾಗಿ ವಾಸಿಸುವ “ಮೈತೈ” ಸಮುದಾಯ ಮತ್ತು ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುವ “ಕುಕಿ-ಜೋ” ಸಮುದಾಯದ ನಡುವೆ ಜನಾಂಗೀಯ ಸಂಘರ್ಷ ಭುಗಿಲೆದ್ದಿತು.
  • ಸಂಘರ್ಷಕ್ಕೆ ಕಾರಣ:- ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಮೈತೈ ಸಮುದಾಯ ಮಂಡಿಸಿದ ಬೇಡಿಕೆಯು ಈ ಸಂಘರ್ಷಕ್ಕೆ ಪ್ರಚೋದನೆ ನೀಡಿತು. ಭೂಮಿಯ ಹಕ್ಕುಗಳು ಮತ್ತು ರಾಜಕೀಯ ಪ್ರಾತಿನಿಧ್ಯದ ಬಗೆಗಿನ ಕಳವಳಗಳಿಂದಾಗಿ ಕುಕಿ-ಜೋ ಗುಂಪುಗಳು ಈ ಬೇಡಿಕೆಯನ್ನು ವಿರೋಧಿಸಿದ್ದವು.
  • ಅಕ್ಟೋಬರ್ 2024 ರಲ್ಲಿ “ಕುಕಿ-ಜೋ ಮಂಡಳಿ” (KZC) ರಚನೆ:- ಸುಮಾರು 18 ತಿಂಗಳುಗಳ ಹಿಂಸಾಚಾರದ (2023–2025) ನಂತರ ಇದನ್ನು ರಚಿಸಲಾಯಿತು. ಈ ಹಿಂಸಾಚಾರದ ಅವಧಿಯಲ್ಲಿ ಕುಕಿ-ಜೋ ಸಮುದಾಯವು ತಮ್ಮ ವಿರುದ್ಧ ಪಕ್ಷಪಾತ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿತ್ತು.

ಕುಕಿ-ಜೋ ಗುಂಪುಗಳ ಬಗ್ಗೆ:

    • ಇದೊಂದು ಜನಾಂಗೀಯ ಸಮುದಾಯ:- ಇವರು ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಅಸ್ಸಾಂ ಮತ್ತು ಮ್ಯಾನ್ಮಾರ್‌ ಪ್ರದೇಶಗಳಾದ್ಯಂತ ಹರಡಿಕೊಂಡಿದ್ದಾರೆ.
    • ಅವರು ಮ್ಯಾನ್ಮಾರ್ ಮತ್ತು ಮಿಜೋರಾಂನ ಇತರ “ಚಿನ್-ಮಿಜೋ” ಗುಂಪುಗಳೊಂದಿಗೆ ನಿಕಟ ಜನಾಂಗೀಯ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಂಡಿದ್ದಾರೆ.
    • 1980-90 ರ ದಶಕದಿಂದೀಚೆಗೆ, ಹಲವಾರು ಕುಕಿ-ಜೋ ಬಂಡಾಯ ಗುಂಪುಗಳು ಹೊರಹೊಮ್ಮಿವೆ. ಇವುಗಳು ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಒತ್ತಾಯಿಸುತ್ತಿವೆ:
  • ಹೆಚ್ಚಿನ ಸ್ವಾಯತ್ತತೆ ಮತ್ತು ಸ್ವ-ನಿರ್ಣಯದ ಹಕ್ಕು.
  • ಬುಡಕಟ್ಟು ಭೂಮಿ ಮತ್ತು ಹಕ್ಕುಗಳ ರಕ್ಷಣೆ.
  • ಕೆಲವು ಸಂದರ್ಭಗಳಲ್ಲಿ, ಪ್ರತ್ಯೇಕ ರಾಜ್ಯದ ಸ್ಥಾನಮಾನ.

ಕುರಿಂಜಿ ರಾಜ್‌ಕುಮಾರ್

ಸಾಮಾನ್ಯ ಅಧ್ಯಯನ-3/ ಪರಿಸರ

ಇದೀಗ ಸುದ್ದಿಯಲ್ಲಿದೆ:

  • ಮಾಜಿ ಬ್ಯಾಂಕ್ ಉದ್ಯೋಗಿ ಮತ್ತು “ಕುರಿಂಜಿ ರಾಜ್‌ಕುಮಾರ್” ಎಂದೇ ಖ್ಯಾತರಾಗಿದ್ದ ಪರಿಸರವಾದಿ ಜಿ. ರಾಜ್‌ಕುಮಾರ್ ಅವರು ಇತ್ತೀಚಿಗೆ ತಿರುವನಂತಪುರದಲ್ಲಿ ನಿಧನರಾದರು.

ನೀಲಕುರಿಂಜಿ ಬಗ್ಗೆ:

  • ಸ್ಥಳೀಯ ಪ್ರಭೇದ:- ಇದು ನೇರಳೆ ಬಣ್ಣದ ಹೂಬಿಡುವ ಕುರುಚಲು ಗಿಡದ ಪ್ರಭೇದವಾಗಿದೆ.
  • 12 ವರ್ಷಗಳಿಗೊಮ್ಮೆ ಹೂಗಳು ಅರಳುತ್ತವೆ:- ಪಶ್ಚಿಮ ಘಟ್ಟಗಳು ಮತ್ತು ಹಿಮಾಲಯದ ಬೆಟ್ಟಗಳಲ್ಲಿ ಈ ಹೂಗಳು ಅರಳುತ್ತವೆ.
  • “ನೀಲಗಿರಿ”ಗೆ ಈ ಹೆಸರು ಬರಲು ಕಾರಣ:- ಈ ಬೆರಗುಗೊಳಿಸುವ ಹೂವುಗಳು ನೀಡುವ ಮಾಂತ್ರಿಕ ನೀಲಿ ಬಣ್ಣದಿಂದಾಗಿ ‘ನೀಲಗಿರಿ’ಗೆ ಆ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
  • ನೈಸರ್ಗಿಕ ಪರ್ವತ ಹುಲ್ಲುಗಾವಲುಗಳಲ್ಲಿ ಮಾತ್ರ ಕಂಡುಬರುತ್ತವೆ:- ಇದು ನೈಋತ್ಯ ಭಾರತದ 1,340 ರಿಂದ 2,600 ಮೀಟರ್ ಎತ್ತರದಲ್ಲಿರುವ ನೈಸರ್ಗಿಕ ಪರ್ವತ ಹುಲ್ಲುಗಾವಲುಗಳಲ್ಲಿ ಮಾತ್ರ ಕಂಡುಬರುತ್ತವೆ.
  • ಇದು ಪ್ರಧಾನವಾಗಿ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಕಣಿವೆ ಮತ್ತು ನೀಲಗಿರಿ ಬೆಟ್ಟಗಳಲ್ಲಿ (ಕರ್ನಾಟಕ, ಕೇರಳ ಮತ್ತು ತಮಿಳುನಾಡು) ಕಂಡುಬರುತ್ತದೆ.
  • IUCN ಕೆಂಪು ಪಟ್ಟಿಯಲ್ಲಿ:- ‘ದುರ್ಬಲ’ (VU).

“ಕುರಿಂಜಿ ರಾಜ್‌ಕುಮಾರ್” ಅವರ ಪ್ರಮುಖ ಕೊಡುಗೆಗಳು:

  • ‘ಕುರಿಂಜಿ ಉಳಿಸಿ ಅಭಿಯಾನ’:- ಕುರಿಂಜಿ ರಾಜ್‌ಕುಮಾರ್ ಈ ಅಭಿಯಾನದ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು. ಈ ಅಭಿಯಾನವು ನೀಲಕುರಿಂಜಿ (ಸ್ಟ್ರೋಬಿಲಾಂಥೆಸ್ ಕುಂತಿಯಾನ) ಮತ್ತು ಅದರ ಸೂಕ್ಷ್ಮ ಹುಲ್ಲುಗಾವಲು ಪರಿಸರ ವ್ಯವಸ್ಥೆಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
  • 1982 ರಲ್ಲಿ ಹೂವುಗಳ ಸಾಮೂಹಿಕ ಅರಳುವಿಕೆಯನ್ನು ವೀಕ್ಷಿಸಿದ ನಂತರ ಅವರ ಈ ಬದ್ಧತೆ ಪ್ರಾರಂಭವಾಯಿತು. ಇದು ಪರ್ವತಯಾತ್ರೆ ಮತ್ತು ಜಾಗೃತಿ ಪ್ರಯತ್ನಗಳಿಗೆ ಕಾರಣವಾಯಿತು ಮತ್ತು ಅಂತಿಮವಾಗಿ ಪ್ರಮುಖ ಪರಿಸರ ಚಳುವಳಿಯಾಗಿ ಬೆಳೆಯಿತು.
  • 2006 ರಲ್ಲಿ ನೀಲಕುರಿಂಜಿ ಅಭಯಾರಣ್ಯ:- ಅವರು ನಂತರ ಮುನ್ನಾರ್ ಪ್ರದೇಶದಲ್ಲಿನ ಅಭಿಯಾನಗಳತ್ತ ಗಮನಹರಿಸಿದರು. ಈ ಹೋರಾಟವು ಅಂತಿಮವಾಗಿ 2006 ರಲ್ಲಿ 32 ಚದರ ಕಿ.ಮೀ ವಿಸ್ತೀರ್ಣದ ‘ನೀಲಕುರಿಂಜಿ ಅಭಯಾರಣ್ಯ’ದ ಸ್ಥಾಪನೆಗೆ ಕಾರಣವಾಯಿತು ಮತ್ತು ಅವರ ಜೀವಮಾನದ ಕನಸನ್ನು ಈಡೇರಿಸಿತು.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts