ಸಂವಿಧಾನ ದಿನ | ಡಾ. ವರ್ಗೀಸ್ ಕುರಿಯನ್

ಸಂವಿಧಾನ ದಿನ

ಸಾಮಾನ್ಯ ಅಧ್ಯಯನ-2/ ರಾಜಕೀಯ ಮತ್ತು ಆಡಳಿತ

ಇದೀಗ ಸುದ್ದಿಯಲ್ಲಿದೆ: 

  • ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್ 26 ರಂದು ‘ಸಂವಿಧಾನ ದಿನ’ವನ್ನಾಗಿ ಆಚರಿಸಲಾಗುತ್ತದೆ.

ಸಂವಿಧಾನ ದಿನ (ಸಂವಿಧಾನ್ ದಿವಸ್ / ರಾಷ್ಟ್ರೀಯ ಕಾನೂನು ದಿನ) ದ ಬಗ್ಗೆ:

  • ಅಧಿಸೂಚನೆ:- 2015 ರಲ್ಲಿ, ಭಾರತ ಸರ್ಕಾರವು ಪ್ರತಿ ವರ್ಷ ನವೆಂಬರ್ 26 ಅನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸುವ ನಿರ್ಧಾರವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ ಅಧಿಕೃತವಾಗಿ ಪ್ರಕಟಿಸಿತು.
  • ಗೌರವ ಸಲ್ಲಿಕೆ:- ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಐತಿಹಾಸಿಕ ಹಿನ್ನೆಲೆ:

  • 1934ರಲ್ಲಿ ಭಾರತಕ್ಕೆ ಪ್ರತ್ಯೇಕ “ಸಂವಿಧಾನ ರಚನಾ ಸಭೆ”ಯ ಅಗತ್ಯವಿದೆ ಎಂಬ ಬೇಡಿಕೆಯನ್ನು ಮೊದಲ ಬಾರಿಗೆ ಎಂ.ಎನ್. ರಾಯ್ ಅವರು ಮಂಡಿಸಿದರು.
  • 1940ರಲ್ಲಿ ಈ ಬೇಡಿಕೆಯನ್ನು ಬ್ರಿಟಿಷ್ ಸರ್ಕಾರವು ಅಂತಿಮವಾಗಿ ಅಂಗೀಕರಿಸಿತು.
  • ಡಿಸೆಂಬರ್ 9, 1946ರಂದು ಸಂವಿಧಾನದ ಕರಡು ಕುರಿತು ಚರ್ಚಿಸಲು ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ನಡೆಯಿತು.
  • ನವೆಂಬರ್ 26, 1949ರಂದು ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಿತು.
  • ಜನವರಿ 26, 1950ರಂದು ಭಾರತದ ಸಂವಿಧಾನವು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿತು.

ಸಂವಿಧಾನ ರಚನಾ ಸಭೆಯ ಪ್ರಮುಖಾಂಶಗಳು:

  • ಅವಧಿ:- ಭಾರತದ ಸಂವಿಧಾನವನ್ನು ಸಿದ್ಧಪಡಿಸಲು ಸಂವಿಧಾನ ರಚನಾ ಸಭೆಯು ಒಟ್ಟು 2 ವರ್ಷ, 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡಿತು.
  • ಅಧ್ಯಕ್ಷರು:-
    • ಸಂವಿಧಾನ ರಚನಾ ಸಭೆಯ ಮೊದಲ (ತಾತ್ಕಾಲಿಕ) ಅಧ್ಯಕ್ಷರಾಗಿ ಡಾ. ಸಚ್ಚಿದಾನಂದ ಸಿನ್ಹಾ ನೇಮಕಗೊಂಡಿದ್ದರು.
    • ನಂತರ ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನಾ ಸಭೆಯ ಕಾಯಂ ಅಧ್ಯಕ್ಷರಾಗಿ ಆಯ್ಕೆಯಾದರು.
  • ಧ್ಯೇಯೋದ್ದೇಶಗಳ ನಿರ್ಣಯ:- ಪ್ರಧಾನಿ ಜವಾಹರಲಾಲ್ ನೆಹರು ಅವರು ಡಿಸೆಂಬರ್ 13, 1946 ರಂದು ‘ಧ್ಯೇಯೋದ್ದೇಶಗಳ ನಿರ್ಣಯ’ವನ್ನು ಮಂಡಿಸಿದರು. ಇದನ್ನು ನಂತರ ಜನವರಿ 22, 1947 ರಂದು ಸಂವಿಧಾನದ ಪೀಠಿಕೆಯಾಗಿ ಅಂಗೀಕರಿಸಲಾಯಿತು.
  • ತಾತ್ಕಾಲಿಕ ಶಾಸಕಾಂಗ:- ಹೊಸ ಶಾಸಕಾಂಗವು ರಚನೆಯಾಗುವವರೆಗೆ ಸಂವಿಧಾನ ರಚನಾ ಸಭೆಯು ದೇಶದ ತಾತ್ಕಾಲಿಕ ಶಾಸಕಾಂಗವಾಗಿ ಕಾರ್ಯನಿರ್ವಹಿಸಿತು.

ಭಾರತದ ಸಂವಿಧಾನದ ಕಿರು ಪರಿಚಯ:

  • ವಿಶ್ವದ ಅತಿ ಉದ್ದವಾದ ಲಿಖಿತ ಸಂವಿಧಾನ:- ಪ್ರಸ್ತುತ 25 ಭಾಗಗಳು ಮತ್ತು 12 ಅನುಸೂಚಿಗಳನ್ನು ಒಳಗೊಂಡಿದೆ.
  • ಸಂಪೂರ್ಣವಾಗಿ ಕೈಬರಹದ ಮೂಲಕವೇ ಸಿದ್ಧಪಡಿಸಲಾಗಿದೆ:- ಭಾರತದ ಮೂಲ ಸಂವಿಧಾನದ ಪ್ರತಿಯನ್ನು ಸಂಪೂರ್ಣವಾಗಿ ಕೈಬರಹದ ಮೂಲಕವೇ (ಹಸ್ತಪ್ರತಿ) ಸಿದ್ಧಪಡಿಸಲಾಗಿದ್ದು, ಸಂಸತ್ತಿನ ಗ್ರಂಥಾಲಯದಲ್ಲಿರುವ ಹೀಲಿಯಂ ಅನಿಲ ತುಂಬಿದ ವಿಶೇಷ ಪೆಟ್ಟಿಗೆಯಲ್ಲಿ ಈ ಐತಿಹಾಸಿಕ ದಾಖಲೆಯನ್ನು ಇಂದಿಗೂ ಅತ್ಯಂತ ಸುರಕ್ಷಿತವಾಗಿ ಸಂರಕ್ಷಿಸಿಡಲಾಗಿದೆ.
  • ಕಲಾತ್ಮಕವಾಗಿ ವಿನ್ಯಾಸ:- ಆಚಾರ್ಯ ನಂದಲಾಲ್ ಬೋಸ್ ಅವರ ಮಾರ್ಗದರ್ಶನದಲ್ಲಿ ಶಾಂತಿನಿಕೇತನದ ಕಲಾವಿದರು ಸಂವಿಧಾನದ ಪ್ರತಿ ಪುಟಗಳನ್ನು ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಿದ್ದಾರೆ.

ಡಾ. ವರ್ಗೀಸ್ ಕುರಿಯನ್

ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ: 

  • ಪ್ರತಿ ವರ್ಷ ನವೆಂಬರ್ 26 ರಂದು ಡಾ. ವರ್ಗೀಸ್ ಕುರಿಯನ್ ಅವರ ಜನ್ಮದಿನಾಚರಣೆಯನ್ನು ಸ್ಮರಿಸಲಾಗುತ್ತದೆ.

ಡಾ.ವರ್ಗೀಸ್ ಕುರಿಯನ್ (1921-2012) ಅವರ ಬಗ್ಗೆ:

  • ಶ್ವೇತಕ್ರಾಂತಿಯ ಪಿತಾಮಹ:- ಇವರು ಭಾರತದ ಶ್ವೇತಕ್ರಾಂತಿಯ ಮುಖ್ಯ ರೂವಾರಿಯಾಗಿದ್ದು, ಇವರನ್ನು “ಶ್ವೇತಕ್ರಾಂತಿಯ ಪಿತಾಮಹ” ಎಂದು ಗೌರವಿಸಲಾಗುತ್ತದೆ.
  • ಆಪರೇಷನ್ ಫ್ಲಡ್:- ಕೇರಳದ ಕೋಝಿಕ್ಕೋಡ್‌ನಲ್ಲಿ ಜನಿಸಿದ ಇವರು , 1970 ರಲ್ಲಿ ‘ಆಪರೇಷನ್ ಫ್ಲಡ್’ ನ ನೇತೃತ್ವ ವಹಿಸಿದರು. ಇದರ ಯಶಸ್ಸಿನಿಂದಾಗಿ ಹಾಲಿನ ಕೊರತೆ ಎದುರಿಸುತ್ತಿದ್ದ ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿ ಮಾರ್ಪಟ್ಟಿತು.
  • ಆನಂದ್ ಸಹಕಾರಿ ಮಾದರಿ:- ಡಾ. ವರ್ಗೀಸ್ ಕುರಿಯನ್ ಅವರು ಅಮುಲ್ ಮೂಲಕ ಯಶಸ್ವಿಯಾದ ‘ಆನಂದ್ ಸಹಕಾರಿ ಮಾದರಿ’ಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮಾದರಿಯು ದೇಶಾದ್ಯಂತ ಡೈರಿ ಕ್ಷೇತ್ರದ ಅಭಿವೃದ್ಧಿಗೆ ಸಮರ್ಥವಾದ ನೀಲನಕ್ಷೆಯಾಗಿ ಹೊರಹೊಮ್ಮಿತು.
  • ಸಂಸ್ಥೆಗಳ ಸ್ಥಾಪನೆ: ಇವರ ಸಕ್ರಿಯ ಶ್ರಮದಿಂದಾಗಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಮತ್ತು ‘ಆನಂದ್‌’ನಲ್ಲಿರುವ ಗ್ರಾಮೀಣ ನಿರ್ವಹಣಾ ಸಂಸ್ಥೆಯಂತಹ ಪ್ರಮುಖ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು.
  • ಖಾದ್ಯ ತೈಲ ಉದ್ಯಮ:- 1979 ರಲ್ಲಿ ‘ಧಾರಾ’ ಬ್ರ್ಯಾಂಡ್ ಅನ್ನು ಪ್ರಾರಂಭಿಸುವ ಮೂಲಕ ಡಾ. ಕುರಿಯನ್ ಅವರು ಖಾದ್ಯ ತೈಲ ಉದ್ಯಮದಲ್ಲೂ ಕ್ರಾಂತಿಕಾರಿ ಬದಲಾವಣೆ ತಂದರು.
  • ಪ್ರಮುಖ ಪ್ರಶಸ್ತಿಗಳು: ಪದ್ಮವಿಭೂಷಣ, ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು ವಿಶ್ವ ಆಹಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts