ಗೋವಾ ವಿಮೋಚನಾ ದಿನ | ಭದ್ರತಾ ಪತ್ರಗಳ ಮಾರುಕಟ್ಟೆ ಸಂಹಿತೆ ಮಸೂದೆ, 2025 | ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ (RRBs) ಹೊಸ ಲೋಗೋ (ಚಿಹ್ನೆ) | ಆಂಧ್ರಪ್ರದೇಶದ ವಿರಳ ಭೂ ಧಾತುಗಳ ಮಾರ್ಗ (ಕಾರಿಡಾರ್) (Andhra’s Rare Earth Corridor) | ರಾಟ್ಲೆ ಜಲವಿದ್ಯುತ್ ಯೋಜನೆ | ರಿಸ್ಪಾಂಡ್ (RESPOND) ಬಾಸ್ಕೆಟ್, 2025

ಗೋವಾ ವಿಮೋಚನಾ ದಿನ

ಸಾಮಾನ್ಯ ಅಧ್ಯಯನ-1/ ಇತಿಹಾಸ ಮತ್ತು ಸಂಸ್ಕೃತಿ

ಇದೀಗ ಸುದ್ದಿಯಲ್ಲಿದೆ: 

  • 1961ರಲ್ಲಿ ಪೋರ್ಚುಗೀಸರ ಆಳ್ವಿಕೆಯಿಂದ ಗೋವಾ ವಿಮೋಚನೆಗೊಂಡು ಅಧಿಕೃತವಾಗಿ ಭಾರತದೊಂದಿಗೆ ವಿಲೀನಗೊಂಡ ನೆನಪಿಗಾಗಿ ಪ್ರತಿ ವರ್ಷ ಡಿಸೆಂಬರ್ 19 ರಂದು ‘ಗೋವಾ ವಿಮೋಚನಾ ದಿನ’ವನ್ನು ಆಚರಿಸಲಾಗುತ್ತದೆ.

ಐತಿಹಾಸಿಕ ಹಿನ್ನೆಲೆ:

  • ಪೋರ್ಚುಗೀಸರು ಮೊದಲಬಾರಿಗೆ ವಶಪಡಿಸಿಕೊಂಡಿದ್ದು 1510 ರಲ್ಲಿ: ಪೋರ್ಚುಗೀಸರ ನೌಕಾಪಡೆಯ ಮುಖ್ಯಸ್ಥ ಅಲ್ಬುಕರ್ಕ್, ಸ್ಥಳೀಯ ಮುಖ್ಯಸ್ಥ ತಿಮೋಜಿಯ ಸಹಾಯದೊಂದಿಗೆ ಗೋವಾವನ್ನು ವಶಪಡಿಸಿಕೊಂಡನು.
  • ಬಿಜಾಪುರದ “ಆದಿಲ್ ಶಾಹಿಯ” ಪಡೆಗಳು ಗೋವಾವನ್ನು ವಶಪಡಿಸಿಕೊಂಡವು: ಮಳೆಗಾಲದ ಸಮಯದಲ್ಲಿ ಆದಿಲ್ ಶಾಹಿಯ ಪಡೆಗಳು ಗೋವಾವನ್ನು ಪೋರ್ಚುಗೀಸರಿಂದ ಮರುಪಡೆಯುವಲ್ಲಿ ಯಶಸ್ವಿಯಾದವು.
  • ಅಂತಿಮ ವಿಜಯ (ನವೆಂಬರ್ 1510): ಅಲ್ಬುಕರ್ಕ್ ಹೆಚ್ಚಿನ ಸೈನ್ಯದೊಂದಿಗೆ ಮರಳಿ ಬಂದು ಬಿಜಾಪುರ ಪಡೆಗಳನ್ನು ನಿರ್ಣಾಯಕವಾಗಿ ಸೋಲಿಸಿ ಗೋವಾವನ್ನು ಪೂರ್ಣವಾಗಿ ವಶಪಡಿಸಿಕೊಂಡನು.

ಪೋರ್ಚುಗೀಸರ ಯಶಸ್ಸಿಗೆ ಕಾರಣಗಳು:

    • ಅತ್ಯುನ್ನತ ನೌಕಾ ಶಕ್ತಿ ಮತ್ತು ಫಿರಂಗಿ ದಳದ ಬಳಕೆ.
    • ಬಿಜಾಪುರ ಸುಲ್ತಾನರ ದುರ್ಬಲ ಆಂತರಿಕ ನಿಯಂತ್ರಣ.
    • ಅತೃಪ್ತ ಸ್ಥಳೀಯ ಗುಂಪುಗಳಿಂದ ದೊರೆತ ಬೆಂಬಲ.
  • ಅಲ್ಬುಕರ್ಕ್‌ನ ಸಮರ್ಥ ನಾಯಕತ್ವ.

ಪರಿಣಾಮಗಳು:

  • ಗೋವಾ ಭಾರತದಲ್ಲಿರುವ ಪೋರ್ಚುಗೀಸರ ವಸಾಹತುಗಳ (Estado da Índia) ರಾಜಧಾನಿಯಾಯಿತು.
  • ಇದು ಭಾರತದಲ್ಲಿ ಯುರೋಪಿನ ಪ್ರಾದೇಶಿಕ ವಸಾಹತುಶಾಹಿಯ ಆರಂಭಕ್ಕೆ ನಾಂದಿ ಹಾಡಿತು.
  • ಗೋವಾ ವ್ಯಾಪಾರ, ಆಡಳಿತ ಮತ್ತು ಕ್ರಿಶ್ಚಿಯನ್ ಧರ್ಮದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿತು.

ಗಮನಿಸಿ:- ಯುರೋಪಿನ ವಸಾಹತುಶಾಹಿಗಳಿಂದ ವಶಪಡಿಸಿಕೊಳ್ಳಲ್ಪಟ್ಟ ಭಾರತದ ಮೊದಲ ಭೂಪ್ರದೇಶ ಮತ್ತು ಸ್ವಾತಂತ್ರ್ಯ ಪಡೆದ ಕೊನೆಯ ಪ್ರದೇಶವೂ ಇದೇ ಆಗಿತ್ತು.

ವಿಮೋಚನೆಯ ಹಿನ್ನೆಲೆ:

  • 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಗೋವಾ, ಜಮ್ಮು ಮತ್ತು ಕಾಶ್ಮೀರ ಹಾಗೂ ಹೈದರಾಬಾದ್‌ನಂತಹ ಪ್ರದೇಶಗಳ ವಿಲೀನವು ಸರ್ಕಾರದ ಮುಂದಿದ್ದ ಪ್ರಮುಖ ಸವಾಲುಗಳಾಗಿದ್ದವು.
  • ರಾಜತಾಂತ್ರಿಕ ಪ್ರಯತ್ನಗಳು:- ಗೋವಾವನ್ನು ಶಾಂತಿಯುತವಾಗಿ ಹಸ್ತಾಂತರಿಸುವಂತೆ ಪೋರ್ಚುಗಲ್ ದೇಶವನ್ನು ಮನವೊಲಿಸಲು ಭಾರತ ಸರ್ಕಾರವು ಹಲವಾರು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಿತು.
  • ಸುಮಾರು 451 ವರ್ಷಗಳ ಕಾಲ ಗೋವಾವನ್ನು ಆಳಿದ್ದ ಪೋರ್ಚುಗಲ್, ಭಾರತದ ಎಲ್ಲಾ ವಿನಂತಿಗಳನ್ನು ತಿರಸ್ಕರಿಸಿತು.
  • ಇದು ಸ್ಥಳೀಯ ನಾಯಕರು ಮತ್ತು ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ‘ಗೋವಾ ವಿಮೋಚನಾ ಚಳವಳಿ’ಗೆ ಕಾರಣವಾಯಿತು.

ಆಪರೇಷನ್ ವಿಜಯದ ಬಗ್ಗೆ:

  • ಪ್ರಧಾನಿ ಜವಾಹರಲಾಲ್ ನೆಹರು ಅವರ ಅಧಿಕಾರವಧಿಯಲ್ಲಿ ಗೋವಾವನ್ನು ಭಾರತದೊಂದಿಗೆ ವಿಲೀನಗೊಳಿಸಲು ಭಾರತೀಯ ಸಶಸ್ತ್ರ ಪಡೆಗಳು ‘ಆಪರೇಷನ್ ವಿಜಯ್’ ಅನ್ನು ಪ್ರಾರಂಭಿಸಿದವು.
  • ಈ ಕಾರ್ಯಾಚರಣೆಯು 36 ಗಂಟೆಗಳಿಗೂ ಹೆಚ್ಚು ಕಾಲ ನಡೆದಿದ್ದು, ಭೂ, ಜಲ ಮತ್ತು ವಾಯುಪಡೆಗಳ ಸಮನ್ವಯದ ದಾಳಿಗಳನ್ನು ಒಳಗೊಂಡಿತ್ತು.

ಫಲಿತಾಂಶ:-

  • ಪೋರ್ಚುಗೀಸ್ ಪಡೆಗಳು ಡಿಸೆಂಬರ್ 19, 1961 ರಂದು ಶರಣಾದವು, ಇದರಿಂದಾಗಿ ‘ಗೋವಾ’ವು ದಮನ್ ಮತ್ತು ದಿಯು ಜೊತೆಗೆ ವಿಮೋಚನೆಗೊಂಡಿತು.
  • ಮೇ 30, 1987 ರಂದು ಅಂದಿನ ಕೇಂದ್ರಾಡಳಿತ ಪ್ರದೇಶವನ್ನು ವಿಭಜಿಸಿ, ಗೋವಾವನ್ನು ಭಾರತದ 25ನೇ ರಾಜ್ಯವನ್ನಾಗಿ ಮಾಡಲಾಯಿತು.
  • ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳಾಗಿಯೇ ಮುಂದುವರಿದವು.

ಭದ್ರತಾ ಪತ್ರಗಳ ಮಾರುಕಟ್ಟೆ ಸಂಹಿತೆ ಮಸೂದೆ, 2025

ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ: 

  • ಕೇಂದ್ರ ಹಣಕಾಸು ಸಚಿವರು ಲೋಕಸಭೆಯಲ್ಲಿ ‘ಭದ್ರತಾ ಪತ್ರಗಳ ಮಾರುಕಟ್ಟೆ ಸಂಹಿತೆ ಮಸೂದೆ, 2025’ ಅನ್ನು ಮಂಡಿಸಿದ್ದಾರೆ.

ಮಸೂದೆಯ ಉದ್ದೇಶ:

ಈ ಮಸೂದೆಯು ಅಸ್ತಿತ್ವದಲ್ಲಿರುವ ಈ ಕೆಳಗಿನ ಪ್ರಮುಖ ಕಾನೂನುಗಳನ್ನು ಕ್ರೂಢೀಕರಿಸಲು  ಪ್ರಸ್ತಾಪಿಸುತ್ತದೆ:

  • ಭದ್ರತಾ ಪತ್ರಗಳ ಒಪ್ಪಂದಗಳು (ನಿಯಂತ್ರಣ) ಕಾಯ್ದೆ, 1956.
  • ಭಾರತೀಯ ಭದ್ರತಾ ಪತ್ರಗಳ ಮತ್ತು ವಿನಿಮಯ ಮಂಡಳಿ (SEBI) ಕಾಯ್ದೆ, 1992.
  • ಠೇವಣಿ ಕಾಯ್ದೆ, 1996 

ಪ್ರಮುಖ ನಿಬಂಧನೆಗಳು:

  • SEBI ಮಂಡಳಿಯ ರಚನೆಯಲ್ಲಿ ಸುಧಾರಣೆ: SEBI ಮಂಡಳಿಯ ಸದಸ್ಯರ ಸಂಖ್ಯೆಯನ್ನು ಅಧ್ಯಕ್ಷರು ಸೇರಿದಂತೆ ಪ್ರಸ್ತುತ ಇರುವ 9 ರಿಂದ 15ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.
  • ಪರಿಷ್ಕೃತ ಮಂಡಳಿಯ ಸಂಯೋಜನೆ: ಮರುರಚನೆಯಾದ ಮಂಡಳಿಯು ಈ ಕೆಳಗಿನ ಸಂಯೋಜನೆಯನ್ನು ಒಳಗೊಂಡಿರುತ್ತದೆ:
    • ಅಧ್ಯಕ್ಷರು
    • ಕೇಂದ್ರ ಸರ್ಕಾರದಿಂದ ನೇಮಕಗೊಂಡ ಇಬ್ಬರು ಅಧಿಕಾರಿಗಳು.
    • ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಒಬ್ಬರು ಪದನಿಮಿತ್ತ ಸದಸ್ಯರು.
    • ಹನ್ನೊಂದು ಇತರ ಸದಸ್ಯರು; ಇವರಲ್ಲಿ ಕನಿಷ್ಠ ಐವರು ಪೂರ್ಣಾವಧಿ ಸದಸ್ಯರಾಗಿರುತ್ತಾರೆ (ಪ್ರಸ್ತುತ ಕೇವಲ ಮೂವರು ಪೂರ್ಣಾವಧಿ ಸದಸ್ಯರಿದ್ದಾರೆ).

ಭಾರತೀಯ ಭದ್ರತಾ ಪತ್ರಗಳ ಮತ್ತು ವಿನಿಮಯ ಮಂಡಳಿ (SEBI)ಯ ಬಗ್ಗೆ:

  • ಇದು ಭಾರತದ ಭದ್ರತಾ ಪತ್ರಗಳ ಮತ್ತು ಬಂಡವಾಳ ಮಾರುಕಟ್ಟೆಗಳ ಪ್ರಾಥಮಿಕ ನಿಯಂತ್ರಕ ಸಂಸ್ಥೆಯಾಗಿದೆ.
  • ಇದನ್ನು 1992ರಲ್ಲಿ ಶಾಸನಬದ್ಧ ಸಂಸ್ಥೆಯಾಗಿ ಸ್ಥಾಪಿಸಲಾಯಿತು ಮತ್ತು ಇದು ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
  • ಅಧ್ಯಕ್ಷರು: ತುಹಿನ್ ಕಾಂತ ಪಾಂಡೆ (ಪ್ರಸ್ತುತ).
  • ಪ್ರಧಾನ ಕಚೇರಿ:– ಮುಂಬೈ
  • ಪ್ರಾದೇಶಿಕ ಕಚೇರಿಗಳು:- ನವದೆಹಲಿ, ಕೋಲ್ಕತ್ತಾ, ಚೆನ್ನೈ ಮತ್ತು ಅಹಮದಾಬಾದ.
  • ಉದ್ದೇಶ:- ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವುದು, ಮಾರುಕಟ್ಟೆ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಭದ್ರತಾ ಪತ್ರಗಳ ಮಾರುಕಟ್ಟೆಯನ್ನು ನಿಯಂತ್ರಿಸುವುದು.

ಪ್ರಮುಖ ಕಾರ್ಯಗಳು ಮತ್ತು ಅಧಿಕಾರಗಳು:

  • ರಕ್ಷಣಾತ್ಮಕ ಕಾರ್ಯಗಳು: ಆಂತರಿಕ ವ್ಯಾಪಾರ (ಇನ್ಸೈಡರ್ ಟ್ರೇಡಿಂಗ್), ಬೆಲೆ ಅಕ್ರಮಗಳು ಮತ್ತು ವಂಚನೆಯ ಅಭ್ಯಾಸಗಳನ್ನು ತಡೆಗಟ್ಟುವುದು.
  • ಅಭಿವೃದ್ಧಿ ಕಾರ್ಯಗಳು: ಹೂಡಿಕೆದಾರರ ಶಿಕ್ಷಣವನ್ನು ಉತ್ತೇಜಿಸುವುದು ಮತ್ತು ಮಾರುಕಟ್ಟೆ ಪಾರದರ್ಶಕತೆಯನ್ನು ಹೆಚ್ಚಿಸಲು ಮಧ್ಯವರ್ತಿಗಳಿಗೆ ತರಬೇತಿ ನೀಡುವುದು.
  • ನಿಯಂತ್ರಕ ಕಾರ್ಯಗಳು: ನಿಯಮಾವಳಿಗಳನ್ನು ರೂಪಿಸುವುದು, ಲೆಕ್ಕಪರಿಶೋಧನೆ ನಡೆಸುವುದು ಮತ್ತು ಮಧ್ಯವರ್ತಿಗಳು ಹಾಗೂ ಮ್ಯೂಚುವಲ್ ಫಂಡ್‌ಗಳಂತಹ ಮಾರುಕಟ್ಟೆ ಪಾಲುದಾರರನ್ನು ನೋಂದಾಯಿಸುವುದು.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ (RRBs) ಹೊಸ ಲೋಗೋ (ಚಿಹ್ನೆ)

ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ: 

  • ಭಾರತ ಸರ್ಕಾರವು ನಬಾರ್ಡ್ನ ಸಹಯೋಗದೊಂದಿಗೆ, ದೇಶದಾದ್ಯಂತ ಇರುವ ಎಲ್ಲಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಗುರುತನ್ನು ಏಕೀಕರಿಸುವ ಉದ್ದೇಶದಿಂದ “ಒಂದು ಆರ್.ಆರ್.ಬಿ, ಒಂದು ಲೋಗೋ (ಚಿಹ್ನೆ)” ಉಪಕ್ರಮದ ಅಡಿಯಲ್ಲಿ ಸಾಮಾನ್ಯ ಲೋಗೋವನ್ನು ಅನಾವರಣಗೊಳಿಸಿದೆ. ಇದು ದೇಶದಾದ್ಯಂತ RRBಗಳ ಗುರುತನ್ನು ಸಂಘಟಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

“ಒಂದು ಆರ್.ಆರ್.ಬಿ, ಒಂದು ಲೋಗೋ” ಉಪಕ್ರಮದ ಬಗ್ಗೆ:

  • ಗುರಿ:- ಇದು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಏಕೈಕ ಮತ್ತು ಏಕರೂಪದ ದೃಶ್ಯ ಗುರುತನ್ನುಪರಿಚಯಿಸುವ ಸುಧಾರಣಾ ಕ್ರಮವಾಗಿದೆ.
  • ಜಂಟಿ ಅನುಷ್ಠಾನ:- ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ (DFS) ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (NABARD).

ಈ ಉಪಕ್ರಮದ ಉದ್ದೇಶಗಳು:

  • ಏಕೀಕೃತ ಗುರುತು:- ಆರ್.ಆರ್.ಬಿ ಗಳನ್ನು ಪ್ರತ್ಯೇಕ ಪ್ರಾದೇಶಿಕ ಘಟಕಗಳಿಗಿಂತ ಹೆಚ್ಚಾಗಿ ಒಂದು ಸಮಗ್ರ ರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಯ ಭಾಗವಾಗಿ ಬಿಂಬಿಸುವುದು.
  • ಗ್ರಾಹಕರ ವಿಶ್ವಾಸ:- ಸುಲಭ ಗುರುತಿಸುವಿಕೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುವುದು.
  • ಕಾರ್ಯಾಚರಣೆಯ ಏಕೀಕರಣ:- ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಇತ್ತೀಚಿನ ವಿಲೀನ ಮತ್ತು ಕ್ರೂಢೀಕರಣ ಪ್ರಕ್ರಿಯೆಗೆ ಪೂರಕ ಬೆಂಬಲ ನೀಡುವುದು.
  • ಡಿಜಿಟಲ್ ಸಿದ್ಧತೆ:- ಆಧುನಿಕ ಬ್ಯಾಂಕಿಂಗ್ ಮತ್ತು ಡಿಜಿಟಲ್ ಹಣಕಾಸು ಸೇವೆಗಳಿಗೆ ಅನುಗುಣವಾಗಿ ಆರ್.ಆರ್.ಬಿ ಬ್ರ್ಯಾಂಡಿಂಗ್ ಅನ್ನು ಸಜ್ಜುಗೊಳಿಸುವುದು.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRBs) ಬಗ್ಗೆ:

  • ಸ್ಥಾಪನೆ:- ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾಯ್ದೆ, 1976 ರ ಅಡಿಯಲ್ಲಿ ಸ್ಥಾಪಿಸಲಾಗಿದೆ.
  • ಉದ್ದೇಶ:- ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಥಿಕ ಸಾಲವನ್ನು ವಿಸ್ತರಿಸುವುದು ಮತ್ತು ಸಣ್ಣ ರೈತರು, ಸ್ವಸಹಾಯ ಗುಂಪುಗಳು, ಕುಶಲಕರ್ಮಿಗಳು ಹಾಗೂ ಸೂಕ್ಷ್ಮ, ಸಣ್ಣ, ಮತ್ತು ಮಾಧ್ಯಮ ಕೈಗಾರಿಕೆ (MSME) ಗಳಿಗೆ ಬ್ಯಾಂಕಿಂಗ್ ಸೇವೆ ಒದಗಿಸುವುದು.
  • ತ್ರಿಪಕ್ಷೀಯ ಮಾಲೀಕತ್ವದ ಮಾದರಿ:-
    • ಭಾರತ ಸರ್ಕಾರ – 50%
    • ಸಂಬಂಧಿತ ರಾಜ್ಯ ಸರ್ಕಾರ – 15%
    • ಪ್ರಾಯೋಜಕ ಬ್ಯಾಂಕ್ – 35%

ಆಂಧ್ರಪ್ರದೇಶದ ವಿರಳ ಭೂ ಧಾತುಗಳ ಮಾರ್ಗ (ಕಾರಿಡಾರ್) (Andhra’s Rare Earth Corridor)

ಸಾಮಾನ್ಯ ಅಧ್ಯಯನ-3/ ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿದೆ:

  • ಆಂಧ್ರಪ್ರದೇಶದ 974 ಕಿಮೀ ಉದ್ದದ ಕರಾವಳಿಯು ಸಮುದ್ರ ತೀರದ ಮರಳಿನಲ್ಲಿರುವ ವಿರಳ ಭೂ ಧಾತುಗಳ (REEs) ಅಪಾರ ಸಂಗ್ರಹದಿಂದಾಗಿ ಕಾರ್ಯತಂತ್ರದ ಮಹತ್ವವನ್ನು ಪಡೆದುಕೊಂಡಿದೆ.

ಆಂಧ್ರಪ್ರದೇಶದ ವಿರಳ ಭೂ ಧಾತುಗಳ ಕಾರಿಡಾರ್ ನ ಬಗ್ಗೆ:

  • ಸ್ಥಳ:- ಆಂಧ್ರಪ್ರದೇಶದ ಉತ್ತರದ ಶ್ರೀಕಾಕುಳಂನಿಂದ ದಕ್ಷಿಣದ ನೆಲ್ಲೂರು ವರೆಗಿನ ನಿರಂತರ ಖನಿಜಯುಕ್ತ ಕರಾವಳಿ ವಲಯ.
  • ದೊರೆಯುವ ಪ್ರಮುಖ ಖನಿಜಗಳು:-
    • ಮೋನಾಜೈಟ್: ಇದು ವಿರಳ ಭೂ ಧಾತುಗಳ (REEs) ಮತ್ತು ಥೋರಿಯಂನ ಪ್ರಾಥಮಿಕ ಮೂಲವಾಗಿದೆ.
    • ಇಲ್ಮನೈಟ್, ರೂಟೈಲ್, ಜಿರ್ಕಾನ್, ಗಾರ್ನೆಟ್ ಮತ್ತು ಸಿಲಿಮನೈಟ್ ಇತ್ಯಾದಿ.

ಗಮನಿಸಿ:- ಭಾರತದ ಒಟ್ಟು ಮೋನಾಜೈಟ್ ಸಂಗ್ರಹದಲ್ಲಿ ಆಂಧ್ರಪ್ರದೇಶವು 30-35% ರಷ್ಟು ಪಾಲನ್ನು ಹೊಂದಿದೆ.

ವಿರಳ ಭೂ ಧಾತುಗಳ (REEs) ಬಗ್ಗೆ:

  • ಇವು 17 ಮೂಲವಸ್ತುಗಳ ಒಂದು ಗುಂಪಾಗಿದ್ದು, 15 ಲ್ಯಾಂಥನೈಡ್‌ಗಳು + ಸ್ಕ್ಯಾಂಡಿಯಂ + ಯಟ್ರಿಯಂ ಅನ್ನು ಒಳಗೊಂಡಿವೆ.

ಇವುಗಳನ್ನು ವಿರಳ ಭೂ ಧಾತುಗಳು (ಅಪರೂಪದ ಲೋಹಗಳು) ಎಂದು ಏಕೆ ಕರೆಯಲಾಗುತ್ತದೆ? 

ಇವು ಭೂವೈಜ್ಞಾನಿಕವಾಗಿ ಹೇರಳವಾಗಿ ದೊರೆತರೂ, ಈ ಕೆಳಗಿನ ಕಾರಣಗಳಿಗಾಗಿ ಇವುಗಳನ್ನು “ವಿರಳ” ಭೂ ಧಾತುಗಳು ಎಂದು ಪರಿಗಣಿಸಲಾಗುತ್ತದೆ:

  • ಇವು ಅತ್ಯಂತ ಕಡಿಮೆ ಸಾಂದ್ರತೆಯಲ್ಲಿ ಸಿಗುತ್ತವೆ.
  • ಇವುಗಳ ಹೊರತೆಗೆಯುವಿಕೆ ಮತ್ತು ಸಂಸ್ಕರಣೆಯು ಅತ್ಯಂತ ಕಠಿಣವಾಗಿದ್ದು, ಹೆಚ್ಚಿನ ಬಂಡವಾಳ ಮತ್ತು ಸುಧಾರಿತ ತಂತ್ರಜ್ಞಾನದ ಅಗತ್ಯವಿರುತ್ತದೆ.

ವಿರಳ ಭೂ ಧಾತು (REE)ಗಳ ವರ್ಗೀಕರಣ:

  1. ಹಗುರ REEಗಳು: ಲ್ಯಾಂಥನಮ್, ಸಿರಿಯಮ್, ನಿಯೋಡೈಮಿಯಮ್, ಪ್ರಾಸಿಯೊಡೈಮಿಯಮ್, ಸಮೇರಿಯಮ್ ಇತ್ಯಾದಿ.
  2. ಭಾರೀ REEಗಳು: ಡಿಸ್ಪ್ರೋಸಿಯಮ್, ಟೆರ್ಬಿಯಮ್, ಯಟ್ರಿಯo ಇತ್ಯಾದಿ.

ರಾಟ್ಲೆ ಜಲವಿದ್ಯುತ್ ಯೋಜನೆ

ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ:

  • ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ 850 ಮೆಗಾವ್ಯಾಟ್ ಸಾಮರ್ಥ್ಯದ ರಾಟ್ಲೆ ಜಲವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 29 ಕಾರ್ಮಿಕರು ಉಗ್ರಗಾಮಿ ಸಂಪರ್ಕ ಅಥವಾ ಅಪರಾಧ ಹಿನ್ನೆಲೆಯನ್ನು ಹೊಂದಿರುವ ಸಾಧ್ಯತೆಯಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೇಘಾ ಇಂಜಿನಿಯರಿಂಗ್ ಮತ್ತು ಮೂಲಸೌಕರ್ಯ ನಿಯಮಿತ (MEIL) ಕಂಪನಿಗೆ ಮಾಹಿತಿ ನೀಡಿದ್ದಾರೆ.

ರಾಟ್ಲೆ ಜಲವಿದ್ಯುತ್ ಯೋಜನೆ (850 MW) ಯ ಬಗ್ಗೆ:

  • ಸ್ಥಳ:- ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕಿಶ್ತ್ವಾರ್ ಜಿಲ್ಲೆಯ ದ್ರಬ್ಶಾಲಾ ಬಳಿ ಚೆನಾಬ್ ನದಿಯ ಮೇಲೆ ಈ ಯೋಜನೆಯನ್ನು ನಿರ್ಮಿಸಲಾಗುತ್ತಿದೆ.
  • ವಿಧ ಮತ್ತು ಸಾಮರ್ಥ್ಯ:- ಇದು ‘ರನ್-ಆಫ್-ದಿ-ರಿವರ್’ (ನದಿಯ ನೈಸರ್ಗಿಕ ಹರಿವು) ಮಾದರಿಯ ಯೋಜನೆಯಾಗಿದ್ದು, ಒಟ್ಟು 850 ಮೆಗಾವ್ಯಾಟ್ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ.
  • ತಾಂತ್ರಿಕ ವಿವರಗಳು:- ಈ ಯೋಜನೆಯು 133 ಮೀಟರ್ ಎತ್ತರದ ಕಾಂಕ್ರೀಟ್ ಗುರುತ್ವಾಕರ್ಷಣೆಯ ಅಣೆಕಟ್ಟು (ಕಾಂಕ್ರೀಟ್ ಗ್ರಾವಿಟಿ ಡ್ಯಾಮ್) ಮತ್ತು ಸಂಬಂಧಿತ ಭೂಗತ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಒಳಗೊಂಡಿದೆ.

ರಿಸ್ಪಾಂಡ್ (RESPOND) ಬಾಸ್ಕೆಟ್, 2025

ಸಾಮಾನ್ಯ ಅಧ್ಯಯನ-3/ ವಿಜ್ಞಾನ ಮತ್ತು ತಂತ್ರಜ್ಞಾನ)

ಇದೀಗ ಸುದ್ದಿಯಲ್ಲಿದೆ:

  • ಇತ್ತೀಚಿಗೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ‘ರಿಸ್ಪಾಂಡ್ ಬಾಸ್ಕೆಟ್, 2025’ ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ.

ರಿಸ್ಪಾಂಡ್ ಬಾಸ್ಕೆಟ್, 2025 ರ ಬಗ್ಗೆ:

  • ಇದು ‘ಇಸ್ರೋ’ದ ಮುಂಬರುವ ಕಾರ್ಯಾಚರಣೆಗಳು ಮತ್ತು ರಾಷ್ಟ್ರೀಯ ಆದ್ಯತೆಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ವಿವಿಧ ಪ್ರಮುಖ ವಿಶ್ವವಿದ್ಯಾಲಯಗಳು ಮತ್ತು ಇತರ ಮಾನ್ಯತೆ ಪಡೆದ ಶೈಕ್ಷಣಿಕ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿಂದ ಸಂಶೋಧನಾ ಪ್ರಸ್ತಾವನೆಗಳನ್ನು ಸಲ್ಲಿಸಲು ಆಹ್ವಾನಿಸುತ್ತದೆ.
  • ಇದು ಭಾರತೀಯ ಅಂತರಿಕ್ಷ ನಿಲ್ದಾಣ, ಚಂದ್ರಯಾನ-4, ಗಗನಯಾನ ಮಿಷನ್, ಶುಕ್ರ ಕಕ್ಷೆಗಾಮಿ ಮತ್ತು ಮಾನವ ಚಂದ್ರನ ಮೇಲೆ ಇಳಿಯುವಿಕೆ ಸೇರಿದಂತೆ ‘ಇಸ್ರೊ’ದ ಮುಂಬರುವ ಯೋಜನೆಗಳನ್ನು ಬೆಂಬಲಿಸುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts