ಸಹಜೀವನ (ಲಿವ್-ಇನ್) ಸಂಬಂಧಗಳು ಕಾನೂನುಬಾಹಿರವಲ್ಲ: ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ತೀರ್ಪು | ಮಕ್ಕಳ ಕಳ್ಳಸಾಗಣೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಲೈಂಗಿಕ ಶೋಷಣೆ | ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPFs) ಗಳಲ್ಲಿ ಮಾಜಿ ಅಗ್ನಿವೀರರಿಗೆ ಮೀಸಲಾತಿ 50% ಕ್ಕೆ ಹೆಚ್ಚಳ | ‘ಬಡ ಕೈದಿಗಳಿಗೆ ಬೆಂಬಲ’ ಯೋಜನೆ | ಕರ್ನಾಟಕದ ಭೌಗೋಳಿಕ ಸೂಚ್ಯಂಕ (GI) ಮಾನ್ಯತೆ ಪಡೆದ ಇಂಡಿ ನಿಂಬೆ ಒಮನ್ ಮಾರುಕಟ್ಟೆಗೆ ಪ್ರವೇಶ | ಟಂಡ್ರಾ ಜೀವವಲಯ (ಬಯೋಮ್) | ಬ್ಯೂರೋ ಆಫ್ ಪೋರ್ಟ್ ಸೆಕ್ಯುರಿಟಿ (ಬಂದರು ಭದ್ರತಾ ಬ್ಯೂರೋ)

ಸಹಜೀವನ (ಲಿವ್-ಇನ್) ಸಂಬಂಧಗಳು ಕಾನೂನುಬಾಹಿರವಲ್ಲ: ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ತೀರ್ಪು

ಸಾಮಾನ್ಯ ಅಧ್ಯಯನ-2/ ಆರೋಗ್ಯ ಮತ್ತು ಸಮಾಜ

ಇದೀಗ ಸುದ್ದಿಯಲ್ಲಿದೆ:

  • ಲಿವ್-ಇನ್ ಅಥವಾ ಸಹಜೀವನ ಸಂಬಂಧಗಳು ಕಾನೂನುಬಾಹಿರವಲ್ಲ ಎಂದು ಸ್ಪಷ್ಟಪಡಿಸಿರುವ ಅಲಹಾಬಾದ್ ಉಚ್ಚ ನ್ಯಾಯಾಲಯವು, ಪರಸ್ಪರ ಸಮ್ಮತಿಯುಳ್ಳ ವಯಸ್ಕರು ತಮ್ಮ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ ಘನತೆ ಹಾಗೂ ಸುರಕ್ಷತೆಯಿಂದ ಒಟ್ಟಿಗೆ ವಾಸಿಸುವುದು ಅವರ ಸಾಂವಿಧಾನಿಕ ಹಕ್ಕಾಗಿದೆ ಎಂದು ಮಹತ್ವದ ತೀರ್ಪು ನೀಡಿದೆ.

ಅಲಹಾಬಾದ್ ಉಚ್ಚ ನ್ಯಾಯಾಲಯದ ಪ್ರಮುಖ ಅವಲೋಕನಗಳು:

  • ಸಹಜೀವನ ಸಂಬಂಧವು ಅಪರಾಧವಲ್ಲ: ಸಹಜೀವನ ಸಂಬಂಧದಲ್ಲಿರುವ ಇಬ್ಬರೂ ವಯಸ್ಕರಾಗಿದ್ದು, ಮುಕ್ತ ಸಮ್ಮತಿಯಿಂದ ವಿವಾಹವಾಗದೆ ಒಟ್ಟಿಗೆ ವಾಸಿಸುವುದು ಭಾರತದಲ್ಲಿ ಯಾವುದೇ ಕಾನೂನಿನ ಉಲ್ಲಂಘನೆಯಲ್ಲ.
  • ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು: ಭಾರತದ ಸಂವಿಧಾನದ 21ನೇ ವಿಧಿಯು ಸಹಜೀವನ ಸಂಬಂಧದಲ್ಲಿರುವವರು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಜೀವಿಸುವ, ಘನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಭರವಸೆ ನೀಡುತ್ತದೆ ಎಂದು ನ್ಯಾಯಾಲಯ ಒತ್ತಿಹೇಳಿದೆ.
  • ರಕ್ಷಣೆ ನೀಡುವುದು ದೇಶದ/ರಾಜ್ಯದ ಕರ್ತವ್ಯ: ವಯಸ್ಕರು ಸ್ವಯಂ ಇಚ್ಛೆಯಿಂದ ಒಟ್ಟಿಗೆ ಸಹಜೀವನ ನಡೆಸಲು ನಿರ್ಧರಿಸಿದಾಗ, ಕುಟುಂಬ ಅಥವಾ ಸಮಾಜದಿಂದ ಬೆದರಿಕೆ ಎದುರಾದರೆ ಅವರಿಗೆ ರಕ್ಷಣೆ ಒದಗಿಸುವುದು ದೇಶದ/ರಾಜ್ಯದ ಹೊಣೆಯಾಗಿದೆ.
  • ಸಾಂವಿಧಾನಿಕ ನೈತಿಕತೆ v/s ಸಾಮಾಜಿಕ ನೈತಿಕತೆ: ಘನ ನ್ಯಾಯಾಲಯವು ಸಾಮಾಜಿಕ ನೈತಿಕತೆಗಿಂತ ಸಾಂವಿಧಾನಿಕ ನೈತಿಕತೆಗೆ ಹೆಚ್ಚಿನ ಆದ್ಯತೆ ನೀಡಿದೆ.
  • ವಿವಾಹದ ಸಾಕ್ಷ್ಯಾಧಾರಿತ ಪೂರ್ವಾನ್ವಯ: ನ್ಯಾಯಾಲಯವು ಭಾರತೀಯ ಸಾಕ್ಷ್ಯ ಕಾಯ್ದೆ 1872ರ ಸೆಕ್ಷನ್ 114 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023ರ ಸೆಕ್ಷನ್ 119(1) ಅನ್ನು ಉಲ್ಲೇಖಿಸಿದೆ. ಪುರುಷ ಮತ್ತು ಮಹಿಳೆ ದೀರ್ಘಕಾಲದವರೆಗೆ ಪತಿ-ಪತ್ನಿಯಂತೆ ಸಹಬಾಳ್ವೆ ನಡೆಸಿದರೆ, ಕಾನೂನು ಅವರನ್ನು ವಿವಾಹಿತರು ಎಂದು ಊಹಿಸಬಹುದು ಎಂದು ಈ ನಿಬಂಧನೆಗಳು ತಿಳಿಸುತ್ತವೆ.

ಸಹಜೀವನ  ಸಂಬಂಧಗಳ ಕುರಿತು ಸರ್ವೋಚ್ಚ ನ್ಯಾಯಾಲಯದ ಪ್ರಮುಖ ತೀರ್ಪುಗಳು:

  • ತುಳಸಾ ವಿರುದ್ಧ ದುರ್ಘಟಿಯಾ, 2008: ದೀರ್ಘಕಾಲದ ಸಹಜೀವನ ಸಂಬಂಧದಿಂದ ಜನಿಸಿದ ಮಕ್ಕಳನ್ನು ಕಾನೂನುಬಾಹಿರ ಎಂದು ಪರಿಗಣಿಸುವಂತಿಲ್ಲ. ಇದು ಮಕ್ಕಳ ಘನತೆ ಮತ್ತು ಆಸ್ತಿ ಉತ್ತರಾಧಿಕಾರವನ್ನು ಖಚಿತಪಡಿಸುತ್ತದೆ.
  • ಡಿ. ವೇಲುಸಾಮಿ ವಿರುದ್ಧ ಡಿ. ಪಚೈಯಮ್ಮಾಳ್, 2010: ‘ಗೃಹ ಹಿಂಸಾಚಾರ ಕಾಯ್ದೆ’ ಅಡಿಯಲ್ಲಿ “ವಿವಾಹದ ಸ್ವರೂಪದಲ್ಲಿನ ಸಹಜೀವನ ಸಂಬಂಧ” ಎಂಬ ಪರಿಕಲ್ಪನೆಯನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ. ದಂಪತಿಗಳು ಸಮಾಜದ ಮುಂದೆ ಪತಿ-ಪತ್ನಿಯಂತೆ ಇರಬೇಕು, ವಿವಾಹಕ್ಕೆ ಅರ್ಹ ವಯಸ್ಸನ್ನು ಹೊಂದಿರಬೇಕು ಮತ್ತು ಮದುವೆಯಾಗಲು ಇತರೆ ಕಾನೂನುಬದ್ಧ ಅರ್ಹತೆಗಳನ್ನು ಹೊಂದಿರಬೇಕು ಎಂಬ ನಿಬಂಧನೆಗಳನ್ನು ವಿಧಿಸಿದೆ.
  • ಇಂದ್ರ ಶರ್ಮಾ ವಿರುದ್ಧ ವಿ.ಕೆ.ವಿ. ಶರ್ಮಾ,2013: ಸಹಜೀವನ  ಸಂಬಂಧಗಳ ಬಗ್ಗೆ ನೈತಿಕ ಚರ್ಚೆಗಳಿರಬಹುದು, ಆದರೆ ನ್ಯಾಯಾಲಯಗಳು ಸಾಮಾಜಿಕ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸಬೇಕು.
  • ಶಫಿನ್ ಜಹಾನ್ ವಿರುದ್ಧ ಅಶೋಕನ್ ಕೆ.ಎಂ, 2018: ತಮಗೆ ಇಷ್ಟಬಂದ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಸಂವಿಧಾನದ 21ನೇ ವಿಧಿಯ ಅವಿಭಾಜ್ಯ ಅಂಗವಾಗಿದೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.

ಮಕ್ಕಳ ಕಳ್ಳಸಾಗಣೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಲೈಂಗಿಕ ಶೋಷಣೆ

ಸಾಮಾನ್ಯ ಅಧ್ಯಯನ -2/ ರಾಜಕೀಯ ಮತ್ತು ಆಡಳಿತ

ಇದೀಗ ಸುದ್ದಿಯಲ್ಲಿದೆ: 

  • ಸರ್ವೋಚ್ಚ ನ್ಯಾಯಾಲಯವು ಮಾನವ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆಗೆ ಬಲಿಯಾಗಿರುವ ಅಪ್ರಾಪ್ತ ವಯಸ್ಸಿನ ಸಂತ್ರಸ್ತರ ಸಾಕ್ಷ್ಯಗಳನ್ನು ನ್ಯಾಯಾಲಯಗಳು ಎಷ್ಟು ಸೂಕ್ಷ್ಮವಾಗಿ ವಿಶ್ಲೇಷಿಸಬೇಕು ಎಂಬುದರ ಕುರಿತು ಮಹತ್ವದ ಮಾರ್ಗಸೂಚನೆಗಳನ್ನು ಹೊರಡಿಸಿದೆ.

ಭಾರತದಲ್ಲಿನ ಸಾಂವಿಧಾನಿಕ ಉಪಬಂಧಗಳು:

  • ವಿಧಿ 23: ಮಾನವ ಕಳ್ಳಸಾಗಣೆ ಮತ್ತು ಬಲವಂತದ ದುಡಿಮೆಯನ್ನು ನಿಷೇಧಿಸುತ್ತದೆ.
  • ವಿಧಿ 21: ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುನ್ನು ಖಾತರಿಪಡಿಸುತ್ತದೆ; ಇದನ್ನು ಘನತೆಯಿಂದ ಜೀವಿಸುವ ಹಕ್ಕು ಎಂದು ವ್ಯಾಖ್ಯಾನಿಸಲಾಗಿದೆ.
  • ವಿಧಿ 39(e): ರಾಜ್ಯವು ಕಾರ್ಮಿಕರು ಮತ್ತು ಮಕ್ಕಳ ಆರೋಗ್ಯ ಹಾಗೂ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಹಾಗೆಯೇ ನಾಗರಿಕರನ್ನು ಅವರ ವಯಸ್ಸು ಅಥವಾ ಶಕ್ತಿಗೆ ಹೊಂದಿಕೆಯಾಗದ ಉದ್ಯೋಗಗಳನ್ನು ಬಲವಂತವಾಗಿ ತೆಗೆದುಕೊಳ್ಳುವಂತೆ ಮಾಡಬಾರದು.

ಕಳ್ಳಸಾಗಣೆ ವಿರೋಧಿ ಅಪರಾಧಗಳನ್ನು ನಿಯಂತ್ರಿಸುವ ಕಾನೂನುಗಳು:

  • ಅನೈತಿಕ ಕಳ್ಳಸಾಗಣೆ (ತಡೆ) ಕಾಯ್ದೆ, 1956 (ITPA): ಇದು ಅನೈತಿಕ ಕಳ್ಳಸಾಗಣೆ ಮತ್ತು ಲೈಂಗಿಕ ವೃತ್ತಿಯನ್ನು ತಡೆಯುವ ಗುರಿಯನ್ನು ಹೊಂದಿದೆ. ಈ ಕಾಯ್ದೆಯು 1978 ಮತ್ತು 1986ರಲ್ಲಿ ತಿದ್ದುಪಡಿಗಳಿಗೆ ಒಳಪಟ್ಟಿದೆ.
  • ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986: ಇದು ಮಕ್ಕಳು ನಿರ್ದಿಷ್ಟ ಉದ್ಯೋಗಗಳಲ್ಲಿ ಪಾಲ್ಗೊಳ್ಳುವುದನ್ನು ತಡೆಯುತ್ತದೆ ಮತ್ತು ಇತರ ಕ್ಷೇತ್ರಗಳಲ್ಲಿನ ಕೆಲಸದ ಪರಿಸ್ಥಿತಿಗಳನ್ನು ನಿಯಂತ್ರಿಸುತ್ತದೆ.
  • ಬಂಧಿತ ಜೀತ ಪದ್ಧತಿ (ನಿರ್ಮೂಲನೆ) ಕಾಯ್ದೆ, 1976: ಸಾಲ ತೀರಿಸಲು ಮಕ್ಕಳು ಸೇರಿದಂತೆ ವ್ಯಕ್ತಿಗಳು ಗುಲಾಮಗಿರಿಗೆ ಒಳಗಾಗುವುದನ್ನು ಇದು ನಿಷೇಧಿಸುತ್ತದೆ ಮತ್ತು ಬಿಡುಗಡೆಯಾದ ಕಾರ್ಮಿಕರ ಪುನರ್ವಸತಿಗೆ ಚೌಕಟ್ಟನ್ನು ಒದಗಿಸುತ್ತದೆ.
  • ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015: ಕಾನೂನುಭಂಗಕ್ಕೆ ಒಳಪಟ್ಟಿದ್ದಾರೆ ಎಂದು ಆರೋಪಿಸಲ್ಪಟ್ಟ ಹಾಗೂ ಅಂತಹವರಾಗಿ ಕಂಡುಬಂದ ಮಕ್ಕಳ ಆರೈಕೆಗೆ ಸಂಬಂಧಿಸಿದ ಕಾನೂನುಗಳನ್ನು ನಿಯಂತ್ರಿಸುವ ಕಾಯಿದೆ.
  • ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ, 2012: ಇದು ಮಕ್ಕಳ ವಾಣಿಜ್ಯ ಲೈಂಗಿಕ ಶೋಷಣೆಯನ್ನು ತಡೆಯುವ ಉದ್ದೇಶವನ್ನು ಹೊಂದಿದೆ.
  • ಮಾನವ ಕಳ್ಳಸಾಗಣೆ ವಿರೋಧಿ ಘಟಕ: ಮಾನವ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಲು ಭಾರತವು 2007ರಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳನ್ನು ಸ್ಥಾಪಿಸಿತು.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPFs) ಗಳಲ್ಲಿ ಮಾಜಿ ಅಗ್ನಿವೀರರಿಗೆ ಮೀಸಲಾತಿ 50% ಕ್ಕೆ ಹೆಚ್ಚಳ

ರಕ್ಷಣೆ

ಇದೀಗ ಸುದ್ದಿಯಲ್ಲಿದೆ:

  • ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPFs) ಗ್ರೂಪ್ ‘ಸಿ’ ಹುದ್ದೆಗಳಲ್ಲಿ ಮಾಜಿ ಅಗ್ನಿವೀರರಿಗೆ ನೀಡಲಾಗುತ್ತಿದ್ದ ಪ್ರಸ್ತುತ ಇರುವ 10% ಮೀಸಲಾತಿಯನ್ನು 50% ಕ್ಕೆ ಹೆಚ್ಚಿಸಲು ಕೇಂದ್ರ ಗೃಹ ಸಚಿವಾಲಯವು ನಿರ್ಧರಿಸಿದೆ.

ಅಗ್ನಿಪಥ ಯೋಜನೆಯ ಬಗ್ಗೆ:

  • ಉದ್ದೇಶ: ದೇಶಭಕ್ತಿ ಮತ್ತು ಪ್ರೇರಣೆ ಹೊಂದಿರುವ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವುದು.

ಯೋಜನೆಯ ವೈಶಿಷ್ಟ್ಯಗಳು:

  • ಅಗ್ನಿವೀರ: ಈ ಯೋಜನೆಯಡಿ ಸೇನೆಗೆ ಸೇರುವ ಯುವಕರನ್ನು ‘ಅಗ್ನಿವೀರ’ ಎಂದು ಕರೆಯಲಾಗುತ್ತದೆ. ಇವರು ಅಲ್ಪಾವಧಿಗೆ ಸೇನೆಯಲ್ಲಿ ನೇಮಕಗೊಳ್ಳುತ್ತಾರೆ.
  • ಅಲ್ಪಾವಧಿ ನೇಮಕಾತಿ: ಈ ಯೋಜನೆಯಡಿ ವಾರ್ಷಿಕವಾಗಿ ಸುಮಾರು 45,000 ರಿಂದ 50,000 ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತದೆ ಮತ್ತು ಅವರಲ್ಲಿ ಹೆಚ್ಚಿನವರು ನಾಲ್ಕು ವರ್ಷಗಳ ನಂತರ ಸೇವೆಯಿಂದ ಹೊರಬರುತ್ತಾರೆ.
  • ಸ್ಥಿರ ನೇಮಕಾತಿ: ನಾಲ್ಕು ವರ್ಷಗಳ ನಂತರ, ಪ್ರತಿ ಬ್ಯಾಚ್‌ನ ಕೇವಲ 25% ಸಿಬ್ಬಂದಿಯನ್ನು ಮಾತ್ರ ಮುಂದಿನ 15 ವರ್ಷಗಳ ಅವಧಿಗೆ ಆಯಾ ಪಡೆಗಳಿಗೆ ಮರುನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಹತಾ ಮಾನದಂಡಗಳು:

  • ಇದು ಅಧಿಕಾರಿ ಹುದ್ದೆಗಿಂತ ಕೆಳಗಿನ ಸಿಬ್ಬಂದಿಗೆ ಮಾತ್ರ ಅನ್ವಯಿಸುತ್ತದೆ.
  • 17.5 ವರ್ಷದಿಂದ 23 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅಗ್ನಿವೀರರಿಗೆ ದೊರೆಯುವ ಸೌಲಭ್ಯಗಳು:

  • ಸೇವಾ ನಿಧಿ ಪ್ಯಾಕೇಜ್: 4 ವರ್ಷಗಳ ಸೇವೆ ಪೂರ್ಣಗೊಂಡ ನಂತರ, ಅಗ್ನಿವೀರರಿಗೆ 11.71 ಲಕ್ಷ ರೂ. ಗಳ ಒಂದು ಬಾರಿಯ ‘ಸೇವಾ ನಿಧಿ’ ಪ್ಯಾಕೇಜ್ ಪಾವತಿಸಲಾಗುತ್ತದೆ.
  • ಜೀವ ವಿಮೆ: ಸೇವೆಯ 4 ವರ್ಷಗಳ ಅವಧಿಯಲ್ಲಿ ಅವರಿಗೆ 48 ಲಕ್ಷ ರೂ. ಗಳ ಜೀವ ವಿಮಾ ರಕ್ಷಣೆ ಇರುತ್ತದೆ. ಒಂದು ವೇಳೆ ಸಾವನ್ನಪ್ಪಿದರೆ, ಪಾವತಿಸದ ಅವಧಿಯ ವೇತನ ಸೇರಿದಂತೆ ಒಟ್ಟು 1 ಕೋಟಿ ರೂ.ಗೂ ಅಧಿಕ ಮೊತ್ತವನ್ನು ನೀಡಲಾಗುತ್ತದೆ.
  • ಪುನರ್ವಸತಿ: ಸೇವೆಯಿಂದ ಹೊರಬರುವ ಸೈನಿಕರಿಗೆ ಕೌಶಲ್ಯ ಪ್ರಮಾಣಪತ್ರಗಳು ಮತ್ತು ಬ್ರಿಡ್ಜ್ ಕೋರ್ಸ್‌ಗಳ ಮೂಲಕ ಪುನರ್ವಸತಿಗೆ ಸರ್ಕಾರ ನೆರವು ನೀಡುತ್ತದೆ.

ಸಂಬಂಧಿತ ಕಾಳಜಿಗಳು:

  • ಮರು-ಉದ್ಯೋಗದ ಸವಾಲು: ನಾಲ್ಕು ವರ್ಷಗಳ ಅಲ್ಪಾವಧಿ ಒಪ್ಪಂದದ ನಂತರ 75% ಮಂದಿ ಸೇವೆಯಿಂದ ಹೊರಬರುವುದರಿಂದ ಮತ್ತೊಂದು ಉದ್ಯೋಗ ಹುಡುಕುವುದು ಕಷ್ಟವಾಗಬಹುದು ಎಂಬ ಆತಂಕವಿದೆ.
  • ಪಿಂಚಣಿ ಸೌಲಭ್ಯವಿಲ್ಲ: ಅಗ್ನಿಪಥ ಯೋಜನೆಯಡಿ ನೇಮಕಗೊಂಡವರಿಗೆ ಯಾವುದೇ ಪಿಂಚಣಿ ಸೌಲಭ್ಯವಿರುವುದಿಲ್ಲ.
  • ತರಬೇತಿಯ ಸದುಪಯೋಗ: ಅನುಭವಿ ಸೈನಿಕರು ನಾಲ್ಕು ವರ್ಷಗಳಲ್ಲೇ ನಿರ್ಗಮಿಸುವುದರಿಂದ ಪಡೆಗಳಲ್ಲಿ ಶೂನ್ಯತೆ ಸೃಷ್ಟಿಯಾಗಬಹುದು ಮತ್ತು ತರಬೇತಿಯು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದಿರಬಹುದು.

ದೇಶಕ್ಕೆ ಈ ಕ್ರಮದ ಮಹತ್ವ:

  • ಭವಿಷ್ಯದ ಸೈನಿಕರು: ಇದು ತಾಂತ್ರಿಕವಾಗಿ ಸಜ್ಜಾದ ‘ಭವಿಷ್ಯದ ಸೈನಿಕರನ್ನು’ ಸೃಷ್ಟಿಸುತ್ತದೆ.
  • ಹೆಚ್ಚಿನ ಉದ್ಯೋಗಾವಕಾಶ: ಸೇವೆಯ ಅವಧಿಯಲ್ಲಿ ಗಳಿಸಿದ ಕೌಶಲ್ಯ ಮತ್ತು ಅನುಭವದ ಆಧಾರದ ಮೇಲೆ ಸೈನಿಕರು ವಿವಿಧ ಕ್ಷೇತ್ರಗಳಲ್ಲಿ ಸುಲಭವಾಗಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ.

‘ಬಡ ಕೈದಿಗಳಿಗೆ ಬೆಂಬಲ’ ಯೋಜನೆ

ಸಾಮಾನ್ಯ ಅಧ್ಯಯನ -2/ ರಾಜಕೀಯ ಮತ್ತು ಆಡಳಿತ

ಇದೀಗ ಸುದ್ದಿಯಲ್ಲಿದೆ:

  • ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಬಡ ಕೈದಿಗಳಿಗೆ ಬೆಂಬಲ’ ಯೋಜನೆಯ ಅನುಷ್ಠಾನವು ನಿರೀಕ್ಷಿತ ಮಟ್ಟದಲ್ಲಿಲ್ಲದ ಕಾರಣ, ಕೇಂದ್ರ ಗೃಹ ಸಚಿವಾಲಯವು ಈ ಯೋಜನೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.

‘ಬಡ ಕೈದಿಗಳಿಗೆ ಬೆಂಬಲ’ ಯೋಜನೆಯ ಬಗ್ಗೆ:

ಉದ್ದೇಶ:

  • ಹಣಕಾಸಿನ ಸಮಸ್ಯೆಗಳಿಂದಾಗಿ ದಂಡವನ್ನು ಪಾವತಿಸಲು ಸಾಧ್ಯವಾಗದೆ, ಜಾಮೀನು ಪಡೆಯಲು ಅಥವಾ ಜೈಲಿನಿಂದ ಬಿಡುಗಡೆಯಾಗಲು ವಿಫಲರಾದ ಬಡ ಕೈದಿಗಳಿಗೆ ಪರಿಹಾರವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
  • ಅಂತಹ ಕೈದಿಗಳಿಗೆ ಆರ್ಥಿಕ ನೆರವು ನೀಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಯೋಜನೆಯಡಿ ಧನಸಹಾಯವನ್ನು ನೀಡಲಾಗುತ್ತದೆ.

ಕರ್ನಾಟಕದ ಭೌಗೋಳಿಕ ಸೂಚ್ಯಂಕ (GI) ಮಾನ್ಯತೆ ಪಡೆದ ಇಂಡಿ ನಿಂಬೆ ಒಮನ್ ಮಾರುಕಟ್ಟೆಗೆ ಪ್ರವೇಶ

ಸಾಮಾನ್ಯ ಅಧ್ಯಯನ-3/ ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ:

ಕರ್ನಾಟಕದ ವಿಜಯಪುರ ಜಿಲ್ಲೆಯಿಂದ 3 ಮೆಟ್ರಿಕ್ ಟನ್ ಭೌಗೋಳಿಕ ಸೂಚ್ಯಂಕ ಮಾನ್ಯತೆ (ಜಿಐ-ಟ್ಯಾಗ್) ಹೊಂದಿರುವ ಇಂಡಿ ನಿಂಬೆಯನ್ನು ಒಮನ್‌ ದೇಶಕ್ಕೆ ರಫ್ತು ಮಾಡುವ ಮೂಲಕ ಭಾರತವು ಕೃಷಿ ರಫ್ತು ಉತ್ತೇಜನ ಪಡೆದಿದೆ.

ಇಂಡಿ ನಿಂಬೆ (Indi Lime) ಯ ಬಗ್ಗೆ:

  • ವೈಶಿಷ್ಟ್ಯಗಳು:- ಇಂಡಿ ನಿಂಬೆಯು ತನ್ನ ವಿಶಿಷ್ಟ ಸುಗಂಧ, ಹೆಚ್ಚಿನ ರಸದ ಅಂಶ ಮತ್ತು ದೀರ್ಘ ಬಾಳಿಕೆ ಅವಧಿಗೆ ಹೆಸರುವಾಸಿಯಾಗಿದೆ.
  • ಕೃಷಿ ಪರಂಪರೆ:- ಇದು ಉತ್ತರ ಕರ್ನಾಟಕದ ಕೃಷಿ ಪರಂಪರೆಯನ್ನು ಪ್ರತಿನಿಧಿಸುತ್ತದೆ.
  • ಜಿಐ ಮಾನ್ಯತೆಯ ಪಾತ್ರ:- ಇಂಡಿ ನಿಂಬೆಹಣ್ಣಿಗೆ ದೊರೆತಿರುವ ಭೌಗೋಳಿಕ ಸೂಚ್ಯಂಕ (GI) ಮಾನ್ಯತೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಈ ಹಣ್ಣನ್ನು ಸ್ಪರ್ಧಾತ್ಮಕವಾಗಿ ಸ್ಥಾನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಮಹತ್ವ:

  • ಆರ್ಥಿಕ ಒಪ್ಪಂದ: ಈ ರಫ್ತು ಭಾರತ-ಒಮನ್ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) / ಮುಕ್ತ ವ್ಯಾಪಾರ ಒಪ್ಪಂದದ (FTA) ಅಡಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
  • ಮಾರುಕಟ್ಟೆ ವಿಸ್ತರಣೆ: ಈ ಒಪ್ಪಂದವು ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಮತ್ತು ಭಾರತೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

ನಿಮಗಿದು ತಿಳಿದಿದೆಯೇ?

ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA): ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರಾದೇಶಿಕ ಉತ್ಪನ್ನಗಳನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ಗುರುತಿಸಿ, ಜಿಐ-ಟ್ಯಾಗ್ ಪಡೆದ ಕೃಷಿ ಉತ್ಪನ್ನಗಳ ಪ್ರಚಾರ, ಬ್ರ್ಯಾಂಡಿಂಗ್ ಮತ್ತು ರಫ್ತಿಗೆ APEDA ಬೆಂಬಲ ನೀಡುತ್ತದೆ.

ಟಂಡ್ರಾ ಜೀವವಲಯ (ಬಯೋಮ್)

ಸಾಮಾನ್ಯ ಅಧ್ಯಯನ -3/ ಪರಿಸರ

ಇದೀಗ ಸುದ್ದಿಯಲ್ಲಿದೆ:

  • ಆರ್ಕ್ಟಿಕ್ ನ ಅಲಾಸ್ಕಾದಲ್ಲಿ ನಡೆದ ಇತ್ತೀಚಿನ ವೈಜ್ಞಾನಿಕ ಅಧ್ಯಯನವೊಂದರ ಪ್ರಕಾರ, ಕಳೆದ ಶತಮಾನದಲ್ಲಿ ಟಂಡ್ರಾ ಜೀವವಲಯದಲ್ಲಿ ಸಂಭವಿಸಿದ ಕಾಡ್ಗಿಚ್ಚುಗಳ ಪ್ರಮಾಣವು ಕಳೆದ 3,000 ವರ್ಷಗಳ ಇತಿಹಾಸದಲ್ಲೇ ಅತ್ಯಧಿಕವಾಗಿದೆ ಎಂದು ತಿಳಿದುಬಂದಿದೆ.

ಟಂಡ್ರಾ ಜೀವವಲಯ (ಬಯೋಮ್)ದ ಬಗ್ಗೆ:

  • ಟಂಡ್ರಾ ಜೀವವಲಯ ಎಂಬುದು ಉನ್ನತ ಅಕ್ಷಾಂಶದ (ಆರ್ಕ್ಟಿಕ್) ಮತ್ತು ಉನ್ನತ ಎತ್ತರದ (ಆಲ್ಪೈನ್) ಪ್ರದೇಶಗಳಲ್ಲಿ ಕಂಡುಬರುವ ಅತ್ಯಂತ ತಂಪಾದ ಹಾಗೂ ಮರಗಳಿಲ್ಲದ ಜೀವವಲಯವಾಗಿದೆ.
  • “ಟಂಡ್ರಾ” ಎಂಬ ಪದವು ಫಿನ್ನಿಷ್ (ಫಿನ್ ಲ್ಯಾಂಡ್) ಮೂಲದ ಪದದಿಂದ ಬಂದಿದ್ದು, ಇದರರ್ಥ “ಮರಗಳಿಲ್ಲದ ಬಯಲು” ಎಂಬುವುದಾಗಿದೆ.

ಟಂಡ್ರಾದ ವಿಧಗಳು:

  • ಉನ್ನತ ಅಕ್ಷಾಂಶದ (ಆರ್ಕ್ಟಿಕ್) ಟಂಡ್ರಾ:- ಇದು ಉತ್ತರ ಅಲಾಸ್ಕಾ, ಕೆನಡಾ, ಗ್ರೀನ್‌ಲ್ಯಾಂಡ್ ಮತ್ತು ಸೈಬೀರಿಯಾ ಪ್ರದೇಶಗಳಲ್ಲಿ ಕಂಡುಬರುತ್ತದೆ.
  • ಉನ್ನತ ಎತ್ತರದ (ಆಲ್ಪೈನ್) ಟಂಡ್ರಾ:- ಇದು ಹಿಮಾಲಯ, ಆಂಡಿಸ್ ಮತ್ತು ರಾಕಿಸ್‌ನಂತಹ ಪರ್ವತಗಳ ಅತಿ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇಲ್ಲಿ ಶೀತ ಕೆಳಭೂಸ್ತರ (ಪರ್ಮಾಫ್ರಾಸ್ಟ್) ಇರುವುದಿಲ್ಲ, ಆದರೆ ಹವಾಮಾನ ಪರಿಸ್ಥಿತಿಯು ಅತ್ಯಂತ ಶೀತಲವಾಗಿರುತ್ತದೆ.

ಹವಾಮಾನ ಗುಣಲಕ್ಷಣಗಳು:

  • ತಾಪಮಾನ:- ಇಲ್ಲಿ ತಾಪಮಾನವು ಅತ್ಯಂತ ಕಡಿಮೆಯಿರುತ್ತದೆ; ಚಳಿಗಾಲದಲ್ಲಿ ತಾಪಮಾನವು −30°C ನಿಂದ −50°C ವರೆಗೆ ಇರುತ್ತದೆ.
  • ಮಳೆ/ಹಿಮಪಾತ:- ವಾರ್ಷಿಕವಾಗಿ 150–250 ಮಿಮೀ ನಷ್ಟು ಅತ್ಯಂತ ಕಡಿಮೆ ಪ್ರಮಾಣದ ಮಳೆ ಅಥವಾ ಹಿಮಪಾತವಾಗುತ್ತದೆ.

ಬ್ಯೂರೋ ಆಫ್ ಪೋರ್ಟ್ ಸೆಕ್ಯುರಿಟಿ (ಬಂದರು ಭದ್ರತಾ ಬ್ಯೂರೋ)

ಸಾಮಾನ್ಯ ಅಧ್ಯಯನ-3/ ರಕ್ಷಣೆ

ಇದೀಗ ಸುದ್ದಿಯಲ್ಲಿದೆ: 

  • ದೇಶದಾದ್ಯಂತ ಹಡಗುಗಳ ಮತ್ತು ಬಂದರು ಸೌಲಭ್ಯಗಳ ಭದ್ರತೆಯನ್ನು ಹೆಚ್ಚಿಸಲು ಮೀಸಲಾದ ‘ಬ್ಯೂರೋ ಆಫ್ ಪೋರ್ಟ್ ಸೆಕ್ಯುರಿಟಿ’ (BoPS)  ಸ್ಥಾಪನೆಗೆ ಚಾಲನೆ ನೀಡಲು ಇತ್ತೀಚಿಗೆ ಕೇಂದ್ರ ಗೃಹ ಸಚಿವರು ಉನ್ನತ ಮಟ್ಟದ ಸಭೆಯನ್ನು ನಡೆಸಿದರು.
  • ಪರಿಷ್ಕೃತ ಭದ್ರತಾ ಚೌಕಟ್ಟಿನಡಿಯಲ್ಲಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು (CISF) ಬಂದರುಗಳಿಗಾಗಿ ‘ಗುರುತಿಸಲ್ಪಟ್ಟ ಭದ್ರತಾ ಸಂಸ್ಥೆ’ ಎಂದು ನಿಯೋಜಿಸಲಾಗಿದೆ.

ಬ್ಯೂರೋ ಆಫ್ ಪೋರ್ಟ್ ಸೆಕ್ಯುರಿಟಿ (BoPS) ಯ ಬಗ್ಗೆ:

  • ಸ್ಥಾಪನೆ:- ಇದನ್ನು ವ್ಯಾಪಾರಿ ಹಡಗುಸಾಗಣೆ (ಮರ್ಚೆಂಟ್ ಶಿಪ್ಪಿಂಗ್) ಕಾಯ್ದೆ, 2025 ರ ಸೆಕ್ಷನ್ 13ರ ಅಡಿಯಲ್ಲಿ ಒಂದು ಶಾಸನಬದ್ಧವಾದ ಸಂಸ್ಥೆಯಾಗಿ ಸ್ಥಾಪಿಸಲಾಗುವುದು.
  • ಸಚಿವಾಲಯ:- ಇದು ಬಂದರುಗಳು, ಹಡಗು ಮತ್ತು ಜಲಸಾರಿಗೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
  • ನೇತೃತ್ವ:- ಐಪಿಎಸ್ ದರ್ಜೆಯ ಅಧಿಕಾರಿಯು ಮಹಾ ನಿರ್ದೇಶಕರ ರೂಪದಲ್ಲಿ ಇದರ ನೇತೃತ್ವ ವಹಿಸುತ್ತಾರೆ.

ಪ್ರಮುಖ ಕಾರ್ಯಗಳು:-

  • ಹಡಗುಗಳ ಮತ್ತು ಬಂದರು ಮೂಲಸೌಕರ್ಯಗಳ ಭದ್ರತೆಗೆ ಸಂಬಂಧಿಸಿದಂತೆ ನಿಯಂತ್ರಕ ಮೇಲ್ವಿಚಾರಣೆ ಮತ್ತು ಸಮನ್ವಯತೆಯ ಜವಾಬ್ದಾರಿಯನ್ನು ಈ ಬ್ಯೂರೋ ಹೊಂದಿರುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts